Tag: women

  • ಠಾಣೆಯಲ್ಲೇ ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ

    ಠಾಣೆಯಲ್ಲೇ ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ

    – ಬೀದಿಯಲ್ಲಿ ಬಿದ್ದವಳನ್ನು ಕರೆತಂದಿದ್ದಕ್ಕೆ ಗರಂ
    – ನಶೆಯಲ್ಲಿ ರೊಚ್ಚಿಗೆದ್ದು ಹಲ್ಲೆ

    ಹೈದರಾಬಾದ್: ವೀಕ್ ಎಂಡ್ ಎಂದು ಮಾದಕವಸ್ತು ಸೇವಿಸಿ ನಶೆಯಲ್ಲಿ ತೂರಾಡಿ ಬೀದಿಯಲ್ಲಿ ಬಿದ್ದಿದ್ದ ಮಹಿಳಾ ಟೆಕ್ಕಿಯನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ರೊಚ್ಚಿಗೆದ್ದ ಟೆಕ್ಕಿ ಪೊಲೀಸ್ ಠಾಣೆಯಲ್ಲಿಯೇ ಮಹಿಳಾ ಪೇದೆಗಳನ್ನು ಕಚ್ಚಿ, ಹೊಡೆದು ಹಲ್ಲೆ ನಡೆಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಶನಿವಾರ ರಾತ್ರಿ ಈ ಘಟನೆ ನಡೆದಿದೆ. ನಾಗಾಲ್ಯಾಂಡ್ ಮೂಲದ ಮಹಿಳಾ ಟೆಕ್ಕಿ ಹೈದರಾಬಾದ್‍ನ ಮಾಧಾಪುರ್‌ನಲ್ಲಿರುವ ಸಾಫ್ಟ್‌ವೇರ್ ಕಂಪನಿಯ ಸಿಬ್ಬಂದಿ. ಆಕೆ ಶನಿವಾರ ಮಾದಕವಸ್ತು ಸೇವಿಸಿ ಮೈಮೇಲೆ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಜಹೀರಾನಗರದ ರಸ್ತೆಯಲ್ಲಿ ಬಿದ್ದಿದ್ದಳು. ಆಕೆಯನ್ನು ಕಂಡ ಪೊಲೀಸರು ಠಾಣೆಗೆ ಕರೆತಂದಿದ್ದರು. ಟೆಕ್ಕಿಗೆ ಪ್ರಜ್ಞೆ ಬಂದ ಬಳಿಕ ಆಕೆಯನ್ನು ಸಂಬಾಳಿಸಲು ಪೊಲೀಸರು ಹರಸಾಹಸವನ್ನೇ ಪಡಬೇಕಾಯಿತು. ಇದನ್ನೂ ಓದಿ:ಇಷ್ಟಪಟ್ಟ ಹುಡುಗಿಯ ಮನೆ ಮುಂದೆ ಧರಣಿ ಕುಳಿತ ಟೆಕ್ಕಿ – ಇದು ಸಿಡ್ನಿ ಟು ಹುಬ್ಬಳ್ಳಿ ಲವ್ ಸ್ಟೋರಿ

    ಮೊದಲೇ ನಶೆಯಲ್ಲಿದ್ದ ಟೆಕ್ಕಿ ಪೊಲೀಸರ ಮೇಲೆ ರೊಚ್ಚಿಗೆದ್ದು ಹಲ್ಲೆ ಮಾಡಲು ಆರಂಭಿಸಿದಳು. ಆಕೆಯನ್ನು ಹಿಡಿಯಲು ಹೋದ ಮಹಿಳಾ ಪೇದೆಗಳು ಹಾಗೂ ಮಹಿಳಾ ಎಸ್‍ಪಿ ಮೇಲೆಯೂ ಹಲ್ಲೆ ನಡೆಸಿದಳು. ಅವರನ್ನು ಹೊಡೆದು, ಕಚ್ಚಿ ಹಲ್ಲೆ ಮಾಡಿದ್ದಲ್ಲದೇ ಕೆಲ ಪೇದೆಯನ್ನು ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಳು. ಈ ವೇಳೆ ತಡೆಯಲು ಬಂದ ಪುರುಷ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದಳು. ಇದನ್ನೂ ಓದಿ:ಪ್ರೀತಿ ಮೇಲೆ ಅನುಮಾನ – ಪ್ರೇಯಸಿ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

    ಅಷ್ಟೇ ಅಲ್ಲದೆ ಠಾಣೆಯಿಂದ ಓಡಿಹೋಗಲು ಯತ್ನಿಸಿದಾಗ ಪೊಲೀಸರು ಆಕೆಯನ್ನು ಅಡ್ಡಗಟ್ಟಿ, ಆಕೆಗೆ ಕೋಳ ಹಾಕಿ ಮೂಲೆಗೆ ಕೂರಿಸಿದರು. ಈ ದೃಶ್ಯಾವಳಿಗಳನ್ನು ಕೆಲ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಆನ್‍ಲೈನಿನಲ್ಲಿ ದುಬಾರಿ ಮದ್ಯ ಆರ್ಡರ್ – 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ!

    ಈ ಸಂಬಂಧ ಮಾತನಾಡಿದ ಪೊಲೀಸರು, ಟೆಕ್ಕಿ ಮದ್ಯ ಅಥವಾ ಡ್ರಗ್ಸ್ ಸೇವಿಸಿದ್ದಳು. ಸದ್ಯ ಆಕೆಯ ರಕ್ತದ ಸ್ಯಾಂಪಲ್‍ನನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಆಕೆ ನಮ್ಮ ವಶದಲ್ಲಿಯೇ ಇದ್ದಾಳೆ ಎಂದು ತಿಳಿಸಿದ್ದಾರೆ.

  • ಕೋಟಿ ಕೊಟ್ರೂ ಲೇಡಿಸ್‍ಗೆ ಸೀಟ್ ಕೊಡಲ್ಲ – ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು

    ಕೋಟಿ ಕೊಟ್ರೂ ಲೇಡಿಸ್‍ಗೆ ಸೀಟ್ ಕೊಡಲ್ಲ – ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು

    ಬೆಂಗಳೂರು: ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ ಎಂದು ಬೆಂಗಳೂರಿನ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದ್ದಾರೆ.

    ಹೌದು. ಬರುವ ಡಿಸೆಂಬರ್ ತಿಂಗಳಿನಲ್ಲಿ ಮಣಿಕಂಠನ ದರ್ಶನ ಮಾಡಲು ಶಬರಿಮಲೆಗೆ ಹೋಗುವ ಭಕ್ತರ ಸಂಖ್ಯೆ ಜಾಸ್ತಿ ಇದೆ. ಆದರೆ ಅಲ್ಲಿಗೆ ಹೋಗಲು ಕೋಟಿ ಕೊಟ್ಟರೂ ಮಹಿಳೆಯರಿಗೆ ಸೀಟ್ ಕೊಡಲ್ಲ. ನಮ್ಮ ಬಸ್ ಹತ್ತಿಸಲ್ಲ ಎಂದು ಕೆಲ ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಹೇಳುತ್ತಿದ್ದಾರೆ.

    ಈಗಾಗಲೇ ಸುಪ್ರೀಂಕೋರ್ಟ್ ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶ ಕುರಿತಾದ ವಿಚಾರ ವಿಸ್ತ್ರತಪೀಠಕ್ಕೆ ವರ್ಗಾಯಿಸಿದೆ. ಇದರ ಬೆನ್ನಲ್ಲೇ ಒಂದಿಷ್ಟು ಉತ್ಸಾಯಿ ಯುವತಿಯರು ಶಬರಿಮಲೆಗೆ ಹೋಗುವ ಉತ್ಸಾಹ ತೋರಿದ್ರೂ ಟಿಕೆಟ್ ಮಾತ್ರ ಬುಕ್ ಮಾಡೋಕೆ ಟ್ರಾವೆಲ್ ಏಜೆನ್ಸಿಯವರು ಒಲ್ಲೆ ಅಂತಿದ್ದಾರೆ. ಕೋಟಿ ಕೋಟಿ ದುಡ್ಡನ್ನು ತಂದು ಸುರಿಯಿರಿ ಆದರೆ ಬಸ್ಸಿನಲ್ಲಿ ಮಹಿಳೆಯರಿಗೆ ಮಾತ್ರ ಸೀಟ್ ಕೊಡಲ್ಲ. ಹೆಣ್ಣು ಮಕ್ಕಳನ್ನು ನಾವು ಬಸ್ ಕೂಡ ಹತ್ತಿಸಲ್ಲ. ಮಹಿಳೆಯರಿಗೆ ಸೀಟ್ ಕೂಡ ಬುಕ್ ಮಾಡಲ್ಲ ಎಂದು ಟ್ರಾವೆಲ್ಸ್ ಏಜೆನ್ಸಿ ಮಾಲೀಕರು ಪಟ್ಟು ಹಿಡಿದಿದ್ದಾರೆ.

    ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳು, 50 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಶಬರಿಮಲೆಗೆ ಹೋಗಲು ಟಿಕೆಟ್ ಬುಕ್ ಮಾಡಲಾಗುತ್ತದೆ. ಆದರೆ ಈಗ ಅವರ ಐಡಿಗಳನ್ನು ಚೆಕ್ ಮಾಡಿ ವಯಸ್ಸು ಲೆಕ್ಕ ಹಾಕಿ ಟಿಕೆಟ್ ಬುಕ್ ಮಾಡಿಕೊಡುತ್ತೇವೆ ಎಂದು ಕೆಲ ಏಜೆನ್ಸಿ ಅವರು ಹೇಳಿದರೆ, ಇನ್ನೂ ಕೆಲವು ಟ್ರಾವೆಲ್ಸ್ ನವರು ಶಬರಿಮಲೆಯ ಆಸು-ಪಾಸು ಕೂಡ ಹೋಗದೇ ದೂರದ ಸ್ಟಾಪ್‍ಗಳಲ್ಲಿ ಮಹಿಳೆಯರನ್ನು ಬಿಡುತ್ತೇವೆ ನಾವು ರಿಸ್ಕ್ ತೆಗೆದುಕೊಳ್ಳಲ್ಲ ಎಂದಿದ್ದಾರೆ.

    ನವೆಂಬರ್ ತಿಂಗಳಲ್ಲಿ ಅಯ್ಯಪ್ಪ ದೇಗುಲಕ್ಕೆ ತೆರಳುವ ಭಕ್ತಾದಿಗಳ ಸಂಖ್ಯೆ ಹೆಚ್ಚು. ಈಗ ಬಸ್ಸಿನವರು ಕೊಟ್ಟ ಶಾಕ್‍ಗೆ ಶಬರಿಮಲೆಗೆ ಹೋಗಬೇಕು ಅಂದುಕೊಂಡಿದ್ದ ಮಹಿಳೆಯರು ಥಂಡಾ ಹೊಡೆದಿದ್ದಾರೆ.

  • ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

    ಸರ್ಕಾರ ರಕ್ಷಣೆ ನೀಡದಿದ್ರೂ ಶಬರಿಮಲೆಗೆ ಭೇಟಿ ನೀಡ್ತೇವೆ- ತೃಪ್ತಿ ದೇಸಾಯಿ

    ಮುಂಬೈ: ಕೇರಳ ಸರ್ಕಾರದಿಂದ ರಕ್ಷಣೆ ನೀಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನವೆಂಬರ್ 20ರ ನಂತರ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಬಲಪಂಥೀಯ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.

    ನವೆಂಬರ್ 20ರ ನಂತರ ನಾನು ಶಬರಿಮಲೆಗೆ ಹೋಗುತ್ತೇನೆ. ನಾವು ಕೇರಳ ಸರ್ಕಾರದಿಂದ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೇವೆ. ನಮಗೆ ರಕ್ಷಣೆ ನೀಡುವುದು ಬಿಡುವುದು ಅವರಿಗೆ ಬಿಟ್ಟದ್ದು. ರಕ್ಷಣೆ ಒದಗಿಸದಿದ್ದರೂ ನಾನು ದರ್ಶನಕ್ಕಾಗಿ ಶಬರಿಮಲೆಗೆ ಭೇಟಿಯೇ ನೀಡುತ್ತೇನೆ ಎಂದು ತೃಪ್ತಿ ಹೇಳಿದ್ದಾರೆ.

    ಶಬರಿಮಲೆ ದೇವಸ್ಥಾನವನ್ನು ತೆರೆಯುವ ಮುನ್ನ ಕೇರಳ ದೇವಸ್ವಂ ಮಂಡಳಿ ಸಚಿವ ಕೆ.ಸುರೇಂದ್ರನ್ ಈ ಕುರಿತು ಪ್ರತಿಕ್ರಿಯಿಸಿ, ದೇವಾಲಯಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಾಜ್ಯ ಸರ್ಕಾರ ರಕ್ಷಣೆ ನೀಡುವುದಿಲ್ಲ. ರಕ್ಷಣೆ ಅಗತ್ಯವಿರುವವರು ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ತಿಳಿಸಿದರು.

    ತೃಪ್ತಿ ದೇಸಾಯಿ ಅವರಂಥ ಕಾರ್ಯಕರ್ತರು ತಮ್ಮ ಬಲ ತೋರಿಸುವ ಸ್ಥಳವನ್ನಾಗಿ ದೇವಸ್ಥಾನವನ್ನು ನೋಡಬಾರದು. ರಾಜ್ಯ ಸರ್ಕಾರವು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾವುದೇ ಮಹಿಳೆಗೆ ರಕ್ಷಣೆ ನೀಡುವುದಿಲ್ಲ. ಅವರಿಗೆ ಪೊಲೀಸ್ ರಕ್ಷಣೆ ಬೇಕಾದರೆ ಸುಪ್ರೀಂ ಕೋರ್ಟಿನಿಂದ ಆದೇಶ ಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ.

    ತನ್ನ ಆದೇಶವನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತು ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠವು ನ.14ರಂದು ತೀರ್ಪು ನೀಡಿದೆ. ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬೇಕೇ ಬೇಡವೇ ಎಂಬುದರ ಕುರಿತು 3:2 ಅನುಪಾತದಲ್ಲಿ ತೀರ್ಪು ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಏಳು ಸದಸ್ಯರಿರುವ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಎಲ್ಲದರ ಮಧ್ಯೆ ಸಚಿವರು ಈ ಹೇಳಿಕೆ ನೀಡಿದ್ದಾರೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಾಂವಿಧಾನಿಕ ಪೀಠವು ಸೆಪ್ಟೆಂಬರ್ 2018ರಂದು ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ನಂತರ ತೀರ್ಪನ್ನು ಮರು ಪರಿಶೀಲಿಸುವಂತೆ ಹಲವು ಅರ್ಜಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ 7 ಸದಸ್ಯರ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.

    ಮರು ಪರಿಶೀಲನಾ ಅರ್ಜಿಯಲ್ಲಿ ಜನರ ನಂಬಿಕೆಯಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿರುವ ಅಧಿಕಾರದ ಕುರಿತು ಪ್ರಶ್ನಿಸಲಾಗಿದೆ. ಅಲ್ಲದೆ ದೇವಾಲಯದ ದೇವತೆ ಬ್ರಹ್ಮಚಾರಿ ಹಾಗೂ ಮುಟ್ಟಾದ ಮಹಿಳಾ ಆರಾಧಕರ ಪ್ರವೇಶದಿಂದ ಶತಮಾನಗಳಷ್ಟು ಹಳೆಯ ನಂಬಿಕೆಗೆ ಧಕ್ಕೆಯಾಗಲಿದೆ ಎಂದು ವಾದಿಸಲಾಗಿದೆ.

  • ಅಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಅಂಬುಲೆನ್ಸ್‌ನಲ್ಲೇ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಬಾಗಲಕೋಟೆ: ಅಂಬುಲೆನ್ಸ್ ನಲ್ಲಿ ಸಾಗಿಸುವ ವೇಳೆ ಗರ್ಭಿಣಿಯೊಬ್ಬರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಘಟನೆ ಬಾಗಲಕೋಟೆ ತಾಲೂಕಿನ ಚೌಡಾಪುರ ಗ್ರಾಮದ ಬಳಿ ನಡೆದಿದೆ.

    ಮಹಾರಾಷ್ಟ್ರ ಮೂಲದ 24 ವರ್ಷದ ಮನಿಷಾ ಸುಧೀರ್ ಚೌಹಾನ್ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಕಬ್ಬು ಕಟಾವು ಮಾಡುವುದಕ್ಕಾಗಿ ಪತಿ ಸುಧೀರ್ ಹಾಗೂ ಕುಟುಂಬ ಸಮೇತ ಚೌಡಾಪುರಕ್ಕೆ ಮನಿಷಾ ಬಂದಿದ್ದರು. ಹೀಗಾಗಿ ಸುಧೀರ್ ದಂಪತಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ಗುಡಿಸಲು ಹಾಕಿಕೊಂಡು ವಾಸವಿದ್ದರು. ಇದನ್ನೂ ಓದಿ: 3 ಗಂಡು 1 ಹೆಣ್ಣು ಸೇರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

    ಮನಿಷಾ ಅವರಿಗೆ ಇಂದು ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹಾಗಾಗಿ ಅಂಬುಲೆನ್ಸ್ ಮೂಲಕ ಮನಿಷಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಮನಿಷಾ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ಅಂಬುಲೆನ್ಸ್ ಸಿಬ್ಬಂದಿ ಮನಿಷಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮನಿಷಾ ಚೌಹಾಣ್ ಅವರಿಗೆ ಇದು ಮೊದಲ ಹೆರಿಗೆಯಾಗಿದ್ದು, ತಾಯಿ ಮಕ್ಕಳು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

  • ದೇವಾಲಯದ ಚಪ್ಪರಕ್ಕೆ ನೇಣು ಬಿಗಿದುಕೊಂಡು ವಿಧಾನಸೌಧದ ಉದ್ಯೋಗಿ ಆತ್ಮಹತ್ಯೆ

    ದೇವಾಲಯದ ಚಪ್ಪರಕ್ಕೆ ನೇಣು ಬಿಗಿದುಕೊಂಡು ವಿಧಾನಸೌಧದ ಉದ್ಯೋಗಿ ಆತ್ಮಹತ್ಯೆ

    ರಾಮನಗರ: ದೇವಾಲಯಕ್ಕೆ ಬಂದ ಉದ್ಯೋಗಿಯೊಬ್ಬರು ದೇವಸ್ಥಾನದ ಚಪ್ಪರಕ್ಕೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಲನಕುಪ್ಪೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ವಿಧಾನಸೌಧದ ಸಹಕಾರಿ ಇಲಾಖೆಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಹೇಮಾವತಿ ಆತ್ಮಹತ್ಯೆಗೆ ಶರಣಾದ ಉದ್ಯೋಗಿ.

    ಆತ್ಮಹತ್ಯೆಗೆ ಶರಣಾದ ಹೇಮಾವತಿ ಕಲ್ಲನಕಪ್ಪೆ ಗ್ರಾಮದ ಮಹಾದೇಶ್ವರ ದೇವಾಲಯದಲ್ಲಿ ಕಳೆದ ಎರಡು ವರ್ಷಗಳಿಂದ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ ದೇವಾಲಯಕ್ಕೆ ಬಂದಾಗ ದೇವಾಲಯದ ಮುಂಭಾಗ ಹಾಕಿದ್ದ ಚಪ್ಪರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

    ಘಟನೆ ಸಂಬಂಧ ಹಾರೋಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

  • ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

    ಫೇಸ್‍ಬುಕ್‍ನಲ್ಲಿ ಪರಿಚಯ- ನಂತ್ರ ಚಾಟಿಂಗ್, ಮೀಟಿಂಗ್, ಚೀಟಿಂಗ್

    -ಖಾಸಗಿ ಫೋಟೋ ತೋರ್ಸಿ ಬ್ಲ್ಯಾಕ್‍ಮೇಲ್
    -ಲವ್, ಸೆಕ್ಸ್, ದೋಖಾ ಪ್ರಕರಣ
    -ದೂರವಾದ್ರೆ ಕೊರಿಯರ್‌ನಲ್ಲಿ ಕಾಂಡೋಮ್ ಕಳಿಸ್ತಾನೆ

    ಬೆಂಗಳೂರು: ಫೇಸ್‍ಬುಕ್‍ನಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕವಾಡಿ ಮೋಸ ಮಾಡುತ್ತಿದ್ದ ಕಾಮುಕನ ವಿರುದ್ಧ ನಗರದ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಸಂತ್ರಸ್ತೆ ಯುವತಿ ಈ ಸಂಬಂಧ ಮಾನವ ಹಕ್ಕು ಆಯೋಗ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ದೇವನಹಳ್ಳಿ ಬಳಿಯ ವಿಜಯಪುರದ ನಿವಾಸಿ ಕೇಶವ್ ಫೇಸ್‍ಬುಕ್ ಮೂಲಕ ವಂಚನೆ ಮಾಡಿದ ಕಾಮುಕ. ಆರೋಪಿ ಕೇಶವ್ ಫೇಸ್‍ಬುಕ್‍ನಲ್ಲಿ ಪರಿಚಯವಾದ ಯುವತಿಯರಿಗೆ ಪ್ರೀತಿಸುವ ನಾಟಕವಾಡಿ, ವಂಚನೆ ಮಾಡುತ್ತಿದ್ದ. ಇದೇ ರೀತಿ 20 ಯುವತಿಯರಿಗೆ ದೋಖಾ ಮಾಡಿದ್ದಾನೆ ಎಂಬ  ಆರೋಪ ಕೇಳಿಬಂದಿದೆ.

    ಕೇಶವ್ ತನ್ನ ಫೇಸ್‍ಬುಕ್ ಖಾತೆಯ ಮೂಲಕ ಸುಂದರ  ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಈತನ ಫೋಟೋ ನೋಡಿದ ಯುವತಿಯರು ಮರು ಕ್ಷಣವೇ ರಿಕ್ವೆಸ್ಟ್ ಸ್ವೀಕರಿಸುತ್ತಿದ್ದರು. ನಂತರ ಕೇಶವ್, ಯುವತಿಯನ್ನು ಚಿನ್ನ, ರನ್ನ ಅಂದೆಲ್ಲಾ ವರ್ಣಿಸುತ್ತಿದ್ದ. ಬಳಿಕ ಫೋನ್ ನಂಬರ್ ಪಡೆದು ಚಾಟಿಂಗ್ ಆರಂಭಿಸುತ್ತಿದ್ದ.

    ಕೇಶವ್ ಪರಿಚಯವಾದ ಯುವತಿಯ ಜೊತೆಗೆ ಕೆಲ ದಿನ ಫೋನ್‍ನಲ್ಲೇ ಚಾಟಿಂಗ್, ಕಾಲ್ ಮಾಡಿ ಹತ್ತಿರವಾಗುತ್ತಿದ್ದ. ಬಳಿಕ ಭೇಟಿಯಾಗಲು ಕರೆದು ದೈಹಿಕ ಸಂಪರ್ಕ ಕೂಡ ಬೆಳೆಸುತ್ತಿದ್ದ. ಈ ವೇಳೆಯೇ ಖಾಸಗಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದ ಭೂಪ, ಅಮಾಯಕ ಯುವತಿಯರಿಗೆ ಮದುವೆ ಆಗುತ್ತೇನೆ ಅಂತ ಹೇಳಿ ನಂಬಿಸುತ್ತಿದ್ದ.

    ಆರೋಪಿ ಕೇಶವ್ ಯುವತಿಯರ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಹಣ ಕೊಡುವಂತೆ ಯುವತಿಯರಿಗೆ ಬೇಡಿಕೆ ಇಡುತ್ತಿದ್ದ. ಒಂದು ವೇಳೆ ಯುವತಿಯರು ಹಣ ನೀಡದಿದ್ದಾಗ ಆಕೆಯ ಸಂಬಂಧಿಕರಿಗೆ, ಗಂಡನಿಗೆ ಫೋಟೋ ಕಳುಹಿಸುತ್ತಿದ್ದ. ಇದಕ್ಕೂ ಒಪ್ಪದಿದ್ದಾಗ ಯುವತಿಯ ಮನೆಗೆ ಫೋಟೋ ಕೊರಿಯರ್ ಮಾಡುತ್ತಿದ್ದ. ಇದೇ ರೀತಿ ಫೇಸ್‍ಬುಕ್‍ನಲ್ಲಿ ಪರಿಚಯವಾದ 20 ಯುವತಿಯರಿಗೆ ದೋಖಾ ಮಾಡಿದ್ದಾನೆ.

    ಮದುವೆಯಾದ ಮಹಿಳೆಯರೇ ಟಾರ್ಗೆಟ್:
    ಕಾಮುಕ ಕೇಶವ್ ಓರ್ವ ಯುವತಿಯನ್ನು ಮೂರು ವರ್ಷದಿಂದ ಪ್ರೀತಿಸುವ ಡ್ರಾಮಾ ಮಾಡಿದ್ದ. ಬಳಿಕ ಆತನ ಚಪಲ ಚನ್ನಿಗರಾಯನ ಆಟ ಯುವತಿಗೆ ಗೊತ್ತಾಗಿತ್ತು. ಕೇಶವ್ ನಿಂದ ದೂರ ಉಳಿದಿದ್ದ ಆಕೆಯು ಬೇರೆ ವ್ಯಕ್ತಿಯ ಜೊತೆಗೆ ಮದುವೆಯಾಗಿದ್ದಳು. ಆದರೆ ಕಾಮುಕ ಕೇಶವ್ ಭೇಟಿಯಾಗುವಂತೆ ಕಾಡಿಸುತ್ತಿದ್ದ. ಕೊನೆಗೆ ಯುವತಿ ಬರಲು ಒಪ್ಪದಿದ್ದಾಗ ಆಕೆಯ ಮನೆಗೆ ಕೊರಿಯರ್ ಮೂಲಕ ಕಾಂಡೋಮ್ ಕಳುಹಿಸಿದ್ದ. ಕಾಮುಕನ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಮಹಿಳೆಯು ಮಾನವ ಹಕ್ಕು ಆಯೋಗ ಹಾಗೂ ಬಾಗಲೂರು ಠಾಣೆಗೆ ದೂರು ನೀಡಿದ್ದಾಳೆ.

    ಕೇಶವ್ ನನಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ. ನವೆಂಬರ್ 2016ರಿಂದ ಏಪ್ರಿಲ್ 2017ರವರೆಗೆ ಇಬ್ಬರು ಪರಸ್ಪರ ಪ್ರೀತಿಸಿದ್ದೇವು. ಆದರೆ ಕೇಶವ್ ಮನೆ ಬಿಟ್ಟು ಬರುವಂತೆ ನನ್ನನ್ನು ಒತ್ತಾಯಿಸಿದ್ದ. ಅಷ್ಟೇ ಅಲ್ಲದೆ ಮನೆಯಲ್ಲಿದ್ದ ಚಿನ್ನಾಭರಣ, ಹಣ ತೆಗೆದುಕೊಂಡು ಬರುವಂತೆ ಪೀಡಿಸಿದ್ದ. ಮಾನಸಿಕ ವ್ಯಕ್ತಿಯಂತೆ ವರ್ತಿಸಲು ಶುರು ಮಾಡಿದ್ದ ಕೇಶವ್ ನಿಂದ ದೂರವಾಗಲು ಯತ್ನಿಸಿದೆ. ಆದರೆ ಅವನು ಗೆಳೆಯರ ಜೊತೆಗೆ ಬಂದು ಮನೆ ಮುಂದೆ ನಿಂತು ನನ್ನ ಹೆಸರನ್ನು ಕೂಗಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಸುಮಾರು ಒಂದು ವರ್ಷ ದೂರ ಉಳಿದಿದ್ದ ಕೇಶವ್ ಮತ್ತೆ ಕಿರುಕುಳ ಕೊಡಲು ಆರಂಭಿಸಿದ್ದಾನೆ. ನನ್ನ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮನೆಗೆ, ಸಂಬಂಧಿಕರಿಗೆ ಹಾಗೂ ನನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಫೋನ್ ನಂಬರ್ ಕೂಡ ಹಂಚಿಕೊಂಡಿದ್ದಾನೆ. ಕೇಶವ್ ತನ್ನ ಗೆಳೆಯರಾದ ಸೈಯದ್ ಫಯಾಸ್ ಸೈಫಿ ಅಲಿಯಾ ಆ್ಯಸಿಡ್ ಫೈಯಾಸ್, ಸೈಯದ್ ರಫೀಕ್ ಅಲಿಯಾಸ್ ಚಾಕು ರಫೀಕ್, ಗಣೇಶ್ ಅಲಿಯಾಸ್ ಗನ್ ಗಣೇಶ್, ಮೆಂಟಲ್ ಮೋನಿ, ಬ್ಲೇಡ್ ಪುರುಷೋತ್ತಮ್, ಪದ್ಮನಾಭ್ ಜಿಆರ್, ಮಂಜು, ಸಂತೋಷ್ ಸೇರಿದಂತೆ ಅನೇಕರಿಂದ ನನಗೆ ಬೆದರಿಕೆ ಒಡ್ಡುತ್ತಿದ್ದಾನೆ. ನನ್ನ ಮಗನ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿಕೊಂಡಿದ್ದಾಳೆ.

    ಕಾಮುಕ ಕೇಶವ್ ಫ್ಲಿಪ್‍ಕಾರ್ಟ್ ಸೇರಿದಂತೆ ವಿವಿಧ ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್ ಮೂಲಕ ಮನೆಗೆ ಕಾಂಡೋಮ್ ಪ್ಯಾಕ್ ಕಳಿಸಿದ್ದಾನೆ. ನಾನು ಒಬ್ಬಳೆ ಮನೆಯಲ್ಲಿದ್ದಾಗ ಗುಂಡಾಗಳನ್ನು ಕಳಿಸಿ, ದೈಹಿಕವಾಗಿ ಹಲ್ಲೆ ಮಾಡಿಸಿದ್ದಾನೆ. ಆರೋಪಿಗೆ ಅನೇಕ ಕೆಟ್ಟ ಚಟಗಳಿದ್ದು, ಅನೇಕ ಯುವತಿಯರಿಗೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಆರೋಪಿ ಕೇಶವ್ ಅಣ್ಣ ಕೂಡ ರೌಡಿಶೀಟರ್ ಆಗಿದ್ದು, ಕೊಲೆ ಮಾಡಿ ಜೈಲು ಸೇರಿದ್ದಾನೆ. ಯಾವುದೇ ಕೆಲಸವಿಲ್ಲದೆ ತಿರುಗಾಡುತ್ತಿದ್ದ ಕಾಮುಕ ಕೇಶವ್, ತಾನು ಟಿಂಬರ್ ಬ್ಯುಸಿನೆಸ್ ಮಾಡುತ್ತಿದ್ದೇನೆ ಅಂತ ಹೇಳಿಕೊಂಡು ಯುವತಿಯರನ್ನು ಪಟಾಯಿಸುತ್ತಿದ್ದ. ಮದುವೆಯಾಗಿ ಹೆಂಡತಿ, ಮಕ್ಕಳಿದ್ದರೂ ನೀಚ ಕೃತ್ಯಕ್ಕೆ ಎಸಗುತ್ತಿದ್ದ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದರು. ಆದರೆ ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

  • ಅಕ್ರಮವಾಗಿ ವಾಸವಿದ್ದು ವೇಶ್ಯಾವಾಟಿಕೆ ನಡೆಸಿದ್ದ ಬಾಂಗ್ಲಾ ಮಹಿಳೆಯರು ಅರೆಸ್ಟ್

    ಅಕ್ರಮವಾಗಿ ವಾಸವಿದ್ದು ವೇಶ್ಯಾವಾಟಿಕೆ ನಡೆಸಿದ್ದ ಬಾಂಗ್ಲಾ ಮಹಿಳೆಯರು ಅರೆಸ್ಟ್

    ಕೋಲಾರ: ಅಕ್ರಮವಾಗಿ ವಾಸವಾಗಿದಿದ್ದು ಅಷ್ಟೇ ಅಲ್ಲದೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಬಾಂಗ್ಲಾದೇಶದ ವಲಸಿಗ ಮಹಿಳೆಯರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.

    ಶಿಲ್ಪಿ ಅಕ್ತಾರ್ ಪಾಕಿಯಾ ಹಾಗೂ ರುಬೀಯಾ ಬಂಧಿತ ಬಾಂಗ್ಲಾ ಮೂಲದ ಮಹಿಳೆಯರು. ಈ ಇಬ್ಬರು ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಲ್ಲಿ ಅಕ್ರಮವಾಗಿ ವಾಸವಿದ್ದು, ಅಲ್ಲಿಯೇ ವೇಶ್ಯಾವಾಟಿಕೆ ನಡೆಸಿದ್ದರು.

    ಬಂಗಾರಪೇಟೆಯ ಕೆಲ ವ್ಯಕ್ತಿಗಳು ಶಿಲ್ಪಿ ಹಾಗೂ ರುಬೀಯಾಳನ್ನು ಕರೆತಂದಿದ್ದರು. ಸುಮಾರು ಒಂದು ವರ್ಷದಿಂದ ಪಟ್ಟಣದಲ್ಲಿ ವಾಸವಿದ್ದ ಮಹಿಳೆಯರಿಂದ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಇದಕ್ಕೆ ಕೆಲ ಪೊಲೀಸರು ಸಹಾಯ ನೀಡುತ್ತಿದ್ದರು. ಹೀಗಾಗಿ ಎಗ್ಗಿಲ್ಲದೆ ದಂಧೆ ನಡೆಯುತ್ತಿತ್ತು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ಶನಿವಾರ ಮಹಿಳೆಯರು ವಾಸವಿದ್ದ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಪಾಸ್‌ಪೋರ್ಟ್‌‌‌‌ ಹಾಗೂ ಯಾವುದೇ ದಾಖಲಾತಿ ಇಲ್ಲದ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

  • ಹೂತಿದ್ದ ಮಹಿಳೆ ಶವವನ್ನು ಹೊರ ತೆಗೆದು ಅತ್ಯಾಚಾರಗೈದ ದುಷ್ಕರ್ಮಿಗಳು

    ಹೂತಿದ್ದ ಮಹಿಳೆ ಶವವನ್ನು ಹೊರ ತೆಗೆದು ಅತ್ಯಾಚಾರಗೈದ ದುಷ್ಕರ್ಮಿಗಳು

    ಇಸ್ಲಾಮಾಬಾದ್: ಸ್ಮಶಾನದಲ್ಲಿ ಹೂತಿಟ್ಟಿದ್ದ ಮಹಿಳೆಯ ಶವವನ್ನು ಹೊರ ತೆಗೆದು ದುಷ್ಕರ್ಮಿಗಳು ಅತ್ಯಾಚಾರಗೈದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

    ಮಹಿಳೆಯ ಶವವನ್ನು ಕುಟುಂಬಸ್ಥರು ಶನಿವಾರ ರಾತ್ರಿ ಇಸ್ಮಾಯಿಲ್ ಗೋಥ್ ಸ್ಮಶಾನದಲ್ಲಿ ಸಮಾಧಿ ಮಾಡಿದ್ದರು. ಸಮಾಧಿ ಮಾಡಿದ ಮರುದಿನವೇ ದುಷ್ಕರ್ಮಿಗಳು ಮಹಿಳೆಯ ಶವವನ್ನು ಹೊರತೆಗೆದು ಅತ್ಯಾಚಾರ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಮೃತ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಹಿಳೆ ಮೃತದೇಹ ಸಮಾಧಿಯಿಂದ ಹೊರಗೆ ತೆಗೆಯಲಾಗಿತ್ತು.

    ಕುಟುಂಬಸ್ಥರು ಈ ಬಗ್ಗೆ ಸ್ಮಶಾನದ ಉಸ್ತುವಾರಿಯನ್ನು ಪ್ರಶ್ನಿಸಿದಾಗ, ನಾಯಿಯೊಂದು ಸಮಾಧಿ ಮೇಲಿದ್ದ ಚಪ್ಪಡಿಯನ್ನು ತೆಗೆದಿದೆ ಎಂದು ಹೇಳಿದ್ದಾನೆ. ಆದರೆ ನಾಯಿ ತೆಗೆಯುವಷ್ಟು ಆ ಚಪ್ಪಡಿ ಹಗುರವಾಗಿ ಇರಲಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ವಾದ ಮಾಡಿದ್ದಾರೆ.

    ಸ್ಮಶಾನ ಉಸ್ತುವಾರಿಯ ಮಾತು ಕೇಳಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಮೃತಪಟ್ಟ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಈ ವಿಷಯ ಸಾಬೀತು ಆಗುತ್ತಿದ್ದಂತೆ ಸ್ಮಶಾನದಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.

    ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದರು ಎಂಬುದರ ಬಗ್ಗೆ ಪೊಲೀಸರು ಇನ್ನು ಪತ್ತೆ ಹಚ್ಚಿಲ್ಲ. ಆದರೆ ಈ ಬಗ್ಗೆ ದೂರು ನೀಡಲು ಮೃತ ಮಹಿಳೆಯ ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ.

  • ಜಾಮೀನಿನ ಮೇಲೆ ಬಂದು ಸರಗಳ್ಳತನಕ್ಕಾಗಿ ಬೈಕ್ ಕದ್ದರು-ಚೈನ್ ಕದ್ದು ಬಂದ ಜಾಗ ಸೇರಿದ್ರು

    ಜಾಮೀನಿನ ಮೇಲೆ ಬಂದು ಸರಗಳ್ಳತನಕ್ಕಾಗಿ ಬೈಕ್ ಕದ್ದರು-ಚೈನ್ ಕದ್ದು ಬಂದ ಜಾಗ ಸೇರಿದ್ರು

    -ಒಂಟೆ ಮಹಿಳೆಯರೇ ಇವರ ಟಾರ್ಗೆಟ್

    ರಾಮನಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೈಕ್‌ನಲ್ಲಿ ಬಂದು ಸರ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ದುಬಾಯ್ ನಗರದ ನಿವಾಸಿ ಯತೀಶ್, ಬೆಂಗಳೂರಿನ ಬಾಪೂಜಿ ನಗರದ ನಿವಾಸಿ ಅರ್ಜುನ ಬಂಧಿತ ಸರಗಳ್ಳರು. ಮನೆಯಲ್ಲಿನ ಒಂಟಿ ಮಹಿಳೆಯರು, ಸಾಯಂಕಾಲ ಹಾಗೂ ಮುಂಜಾನೆಯ ವೇಳೆ ವಾಕಿಂಗ್ ಮಾಡುವ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಇವರಿಬ್ಬರು ಬೈಕ್‌ನಲ್ಲಿ ತೆರಳಿ ಸರಗಳ್ಳತನ ಮಾಡುತ್ತಿದ್ದರು.

    ಬಂಧಿತರಿಂದ 235 ಗ್ರಾಂ ಚಿನ್ನಾಭರಣ ಹಾಗೂ 4 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಡರಹಳ್ಳಿ, ಬಿಡದಿ, ಕಗ್ಗಲೀಪುರ, ಹಾರೋಹಳ್ಳಿ, ಆನೇಕಲ್‌ನ ಅತ್ತಿಬೆಲೆ, ಸರ್ಜಾಪುರ, ಬೆಂಗಳೂರಿನ ಜ್ಙಾನಭಾರತಿ, ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದಿದ್ದ 10 ಸರಗಳ್ಳತನ ಹಾಗೂ ನಾಲ್ಕು ಬೈಕ್ ಕಳ್ಳತನ ಪ್ರಕರಣಗಳನ್ನು ಭೇಧಿಸುವಲ್ಲಿ ರಾಮನಗರ ಜಿಲ್ಲೆಯ ಬ್ಯಾಡರಹಳ್ಳಿ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.

    ಅಂದಹಾಗೇ ಬಂಧಿತ ಆರೋಪಿಗಳು ಹೆಚ್ಚಿನದಾಗಿ ಬೈಕ್‌ಗಳಲ್ಲಿ ಹೋಗುತ್ತಿದ್ದ ಹಾಗೂ ಒಂಟಿಯಾಗಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡ್ತಿದ್ರು. ಸರಗಳ್ಳತನಕ್ಕಾಗಿ ಈ ಖದೀಮರು ನಾಲ್ಕು ಬೈಕ್‌ಗಳನ್ನು ಕಳ್ಳತನ ಮಾಡಿದ್ದರು. ಕಳ್ಳತನ ಮಾಡಿದ್ದ ಬೈಕ್‌ಗಳಲ್ಲೇ ತೆರಳಿ ಬೈಕ್‌ನಲ್ಲಿ ಹಿಂಬದಿ ಕುಳಿತು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರ, ಮಾಂಗಲ್ಯ ಸರವನ್ನು ಕ್ಷಣ ಮಾತ್ರದಲ್ಲಿ ಕಿತ್ತುಕೊಂಡು ಪರಾರಿಯಾಗುತ್ತಿದ್ರು.

    ಬಂಧಿತ ಯತೀಶ್ ಈ ಸರಗಳ್ಳರ ಟೀಮ್‌ನಲ್ಲಿ ಪ್ರಮುಖನಾಗಿದ್ದು ಈ ಹಿಂದೆ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳವು ಮಾಡಿ ಜೈಲು ಸೇರಿದ್ದ. ಆದರೆ ಜಾಮೀನಿನ ಮೇಲೆ ಹೊರಬಂದಿದ್ದ ಯತೀಶ್ ತನ್ನ ಹಳೇ ಚಾಳಿಯನ್ನೇ ಮುಂದುವರಿಸಿ ಇದೀಗ ಮತ್ತೆ ಪೊಲೀಸ್‌ರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸರಗಳ್ಳತನ ಮಾಡುವುದನ್ನೇ ಕಾಯಂ ಕಸುಬನ್ನಾಗಿ ಮಾಡಿಕೊಂಡಿದ್ದ ಈ ಗ್ಯಾಂಗ್‌ನ ಚಂದ್ರಶೇಖರ್ ಅಲಿಯಾಸ್ ಮಾಟ ಕೋಲಾರ ಜೈಲಿನಲ್ಲಿದ್ರೆ, ಕಾರ್ತಿಕ್ ಎಂಬಾತ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇದೀಗ ಬಂಧಿತವಾಗಿರೋ ಇಬ್ಬರು ಸರಗಳ್ಳರು ತಮ್ಮ ಜೊತೆಗಾರರ ಜೊತೆ ಜೈಲಿನಲ್ಲಿ ಮುದ್ದೆ ಮುರಿಯೋಕೆ ರೆಡಿಯಾಗಿದ್ದಾರೆ.

  • ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಗೆ ಚಾಕು ಇರಿತ

    ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಗೆ ಚಾಕು ಇರಿತ

    ತುಮಕೂರು: ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಯೋರ್ವಳು ನಿಗೂಢವಾಗಿ ಕೊಲೆಯಾದ ಘಟನೆ ತುಮಕೂರು ತಾಲೂಕಿನ ಊರ್ಡಿಗೆರೆ ಗ್ರಾಮದ ದೊಡ್ಡ ತಿಮ್ಮಯ್ಯನ ಪಾಳ್ಯದಲ್ಲಿ ನಡೆದಿದೆ.

    ಮೃತ ಪಟ್ಟ ಮಹಿಳೆಯನ್ನು 33 ವರ್ಷದ ಸೌಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸೌದೆ ತರಲು ಕಾಡಿಗೆ ಹೋದ ಸೌಭಾಗ್ಯಮ್ಮಳ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಕಾಡಿಗೆ ಹೋಗಿ ಸೌದೆ ತೆಗೆದುಕೊಂಡು ವಾಪಾಸ್ ಬರುತ್ತಿರುವಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ಕೊಲೆ ಯಾವ ಕಾರಣಕ್ಕೆ ಆಗಿದೆ ಮತ್ತು ಯಾರಿಂದ ನಡೆದಿದೆ ಎಂಬುದರ ಬಗ್ಗೆ ಶೋಧ ನಡೆಸುತ್ತಿದ್ದಾರೆ.