ತುಮಕೂರು: ಚಿಕ್ಕಮಕ್ಕಳ ಶೌಚವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟು ಶೌಚಾಲಯ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ತುಮಕೂರಿನ ಶಿರಾ ತಾಲೂಕು ಪಟ್ಟನಾಯಕನಹಳ್ಳಿಯ ದೊಡ್ಡಬಾಣಗೆರೆ ಗ್ರಾಮದ ದಲಿತ ಕಾಲೋನಿಯಲ್ಲಿ ಈ ಪ್ರತಿಭಟನೆ ಮಾಡಲಾಗಿದೆ. ಕಾಲೋನಿಯಲ್ಲಿ ಶೌಚಾಲಯ ಇಲ್ಲದೆ ಸುಮಾರು 120 ಕುಟುಂಬ ತೊಂದರೆ ಅನುಭವಿಸುತ್ತಿವೆ. ಆದ್ದರಿಂದ ಮಹಿಳೆಯರು ರಾತ್ರಿ ಹೊತ್ತು ಮಾತ್ರ ಬಯಲಿಗೆ ಹೋಗುವ ಅನಿವಾರ್ಯತೆ ಇದ್ದು, ಶೌಚಾಲಯ ನಿರ್ಮಾಣಕ್ಕಾಗಿ ಆಗ್ರಹಿಸಿ ಚಿಕ್ಕಮಕ್ಕಳ ಶೌಚವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಿನ ಜಾವ ಚಿಕ್ಕಮಕ್ಕಳು ಮಾಡಿದ ಶೌಚವನ್ನ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಟ್ಟು ರಾತ್ರಿ ವೇಳೆ ಅದನ್ನು ವಿಲೇವಾರಿ ಮಾಡುವ ಪರಿಸ್ಥಿತಿಯನ್ನು ಈ ಭಾಗದ ಜನ ಎದುರಿಸುತ್ತಿದ್ದಾರೆ. ದೊಡ್ಡಬಾಣಗೆರೆ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯಕ್ಕೆ ಈ ಕಾಲೋನಿಗೆ ಈ ದುರ್ಗತಿ ಬಂದಿದೆ ಎಂದು ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ರಾತ್ರಿ ಪ್ರತಿಭಟನೆ ಮಾಡಿ ಗ್ರಾಮ ಪಂಚಾಯ್ತಿ ವಿರುದ್ಧ ಹರಿಹಾಯ್ದರು.
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ, ಆದಷ್ಟು ಬೇಗ ಈ ಕಾಲೋನಿ ಜನರಿಗೆ ಶೌಚಾಲಯ ನಿರ್ಮಿಸಿ ಕೊಡಬೇಕು. ಜೊತೆಗೆ ನಿರ್ಲಕ್ಷ್ಯ ತೋರಿದ ಗ್ರಾಮ ಪಂಚಾಯ್ತಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಚಂಢೀಗಡ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಈ ನಡುವೆ ಪಂಜಾಬ್‍ನ ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಶುರು ಮಾಡಿದ್ದಾರೆ.
ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆಯನ್ನು ಶುರು ಮಾಡಿದ್ದಾರೆ. ಇದರಿಂದ ತಡರಾತ್ರಿ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಮನೆಗೆ ಹೋಗಲು ಯಾವುದೇ ವಾಹನ ಸಿಗದಿದ್ದರೆ, ಅವರು ನೇರವಾಗಿ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಕ್ಯಾಬ್‍ಗಾಗಿ ಅವರು ಪೊಲೀಸರನ್ನು ಕೇಳಬಹುದು.
ಭಾನುವಾರ ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಅವರು ಮಾತನಾಡಿ, ಮಹಿಳೆಯರು ಎಲ್ಲಿಂದ ಕರೆ ಮಾಡುತ್ತಾರೋ, ಅಲ್ಲಿ ಹತ್ತಿರದ ಪೊಲೀಸರ ನಿಯಂತ್ರಣ ಕೊಠಡಿ ಅಥವಾ ಮಹಿಳೆಯರು ಹೋಗಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು ಪೊಲೀಸರ ಜವಾಬ್ದಾರಿ. ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಈ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯರಿಗಾಗಿ 1091 ಹಾಗೂ 78370 18555 ಸಹಾಯವಾಣಿ ಸಂಖ್ಯೆ ಲಭ್ಯವಿರುತ್ತದೆ. ಈ ನಂಬರ್ 24 ಗಂಟೆ ಚಾಲ್ತಿಯಲ್ಲಿರುತ್ತದೆ. ಮಹಿಳೆಯರು ಯಾವುದೇ ತೊಂದರೆ ಅನುಭವಿಸಬಾರದು ಎಂದು ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಈ ಯೋಜನೆಯನ್ನು ಶುರು ಮಾಡಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಒಂದು ಜೊತೆ ಬಂಗಾರದ ಕಿವಿಯೋಲೆಗಾಗಿ ನೆರೆಮನೆಯ ಇಬ್ಬರು ಮಹಿಳೆಯರು 4 ವರ್ಷದ ಬಾಲಕಿ ಜೀವವನ್ನೇ ತೆಗೆದಿದ್ದಾರೆ.
ಮುರ್ಷಿದಾಬಾದ್ ಜಿಲ್ಲೆಯ ಖಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 4 ವರ್ಷದ ಬಾಲಕಿ ತನ್ನ ಕುಟುಂಬಸ್ಥರೊಂದಿಗೆ ಖಾರ್‍ಗ್ರಾಮದಲ್ಲಿ ವಾಸಿಸುತ್ತಿದ್ದಳು. ಬಾಲಕಿಯ ನೆರೆಮನೆಯಲ್ಲಿದ್ದ ಇಬ್ಬರು ಮಹಿಳೆಯರು ಆಕೆಯ ಮನೆಯವರು ಜೊತೆ ಒಳ್ಳೆಯ ಸ್ನೇಹ ಬೆಳೆಸಿದ್ದರು. ಆದರೆ ಬಾಲಕಿ ಕಿವಿಯಲ್ಲಿದ್ದ ಬಂಗಾರ ಓಲೆ ಮೇಲೆ ಮಹಿಳೆಯರಿಗೆ ಕಣ್ಣಿತ್ತು. ಹೀಗಾಗಿ ಬಂಗಾರದ ಆಸೆ ಪುಟ್ಟ ಜೀವವನ್ನೇ ಮಹಿಳೆಯರು ಬಲಿ ಪಡೆದಿದ್ದಾರೆ.
ಮಂಗಳವಾರ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಈ ಬಗ್ಗೆ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಆದರೆ ಬುಧವಾರ ರಕ್ತದ ಮಡುವಿನಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಮಹಿಳೆಯರು ಸಿಕ್ಕಿಬಿದ್ದಾರೆ. ಮಹಿಳೆಯರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಬಾಲಕಿ ಕಿವಿಯಲ್ಲಿದ್ದ ಬಂಗಾರದ ಓಲೆಗಾಗಿ ಆಕೆಯನ್ನು ಕೊಲೆ ಮಾಡಿದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ಬೇರೆ ಯಾರು ಭಾಗಿಯಾಗಿಲ್ಲ, ಕೇವಲ ಕಿವಿಯೋಲೆಗಾಗಿ ನಾವು ಕೊಲೆ ಮಾಡಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ.
ಸದ್ಯ ಈ ಸಂಬಂಧ ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದು, ಬುಧವಾರವೇ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ರಾಯಚೂರು: 20 ಜನ ಕೂಲಿಕಾರ್ಮಿಕರಿದ್ದ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಲಿಂಗಸುಗೂರಿನ ಗುರಗುಂಟಾ ಬಳಿಯ ಗೋನಾಳ ಕ್ರಾಸ್‍ನಲ್ಲಿ ನಡೆದಿದೆ.
ರಾಯದುರ್ಗ ಗ್ರಾಮದ ಕೂಲಿಕಾರ್ಮಿಕರಾದ ಚನ್ನಮ್ಮ (16) ಹನುಮಮ್ಮ (50) ಮೃತ ದುರ್ದೈವಿಗಳು. ಈ ಘಟನೆ 12 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಲಾರಿ ಹಾಗೂ ಕೂಲಿಕಾರ್ಮಿಕರದ್ದ ಬುಲೆರೋ ಚಾಲಕರು ವೇಗವಾಗಿ ಚಾಲನೆ ಮಾಡಿದ್ದೆ ದುರಂತಕ್ಕೆ ಕಾರಣ ಎನ್ನಲಾಗಿದೆ.
ಯಾದಗಿರಿಯ ಸುರಪುರದಿಂದ ನಿತ್ಯವೂ ಕೃಷಿ ಕೂಲಿಕಾರ್ಮಿಕರು ಕೆಲಸಕ್ಕಾಗಿ ಲಿಂಗಸುಗೂರಿಗೆ ಹೋಗುತ್ತಾರೆ. ಎಂದಿನಂತೆ ಬುಧವಾರವು ಕೂಡ 20 ಜನ ಕೂಲಿಕಾರ್ಮಿಕರು ಕೆಎ 36 ಬಿ 6600 ನಂಬರ್‍ನ ಬುಲೆರೋದಲ್ಲಿ ಕೆಲಸಕ್ಕಾಗಿ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಚಾಲಕ ವೇಗವಾಗಿ ಚಾಲನೆ ಮಾಡುತ್ತಿದ್ದ. ಈ ವೇಳೆ ಸುರಪುದಿಂದ ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬುಲೆರೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಲೆರೋದ ಹಿಂಭಾಗದಲ್ಲಿ ಕುಳಿತಿದ್ದವರ ಪೈಕಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಈ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 12 ಜನರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಪುಟ್ಟ ಗಾಯವಾಗಿರುವ 6 ಜನರಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಲಾರಿ ಹಾಗೂ ಬುಲೆರೋ ಚಾಲಕರಿಬ್ಬರೂ ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿ ಚಾಲಕರನ್ನು ಬಂಧಿಸಿದ್ದಾರೆ.
ಗೋನಾಳ ಕ್ರಾಸ್‍ನಲ್ಲಿ ಹಲವು ತಿರುವುಗಳಿದ್ದು, ಯಾವುದೇ ಎಚ್ಚರಿಕೆಯ ಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಘಟನೆಯ ಸಂಬಂಧ ಎರಡೂ ವಾಹನಗಳ ಚಾಲಕರ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಿವಮೊಗ್ಗ: ಒಂದು ಕೆಜಿ ಪ್ಲಾಸ್ಟಿಕ್ ಕೊಟ್ಟು, ಒಂದು ಕೆಜಿ ಅಕ್ಕಿ ತೆಗೆದುಕೊಳ್ಳಿ ಎಂದು ಶಿವಮೊಗ್ಗದಲ್ಲಿ ಇಂದು ವಾಸವಿ ಮಹಿಳಾ ಸಂಘದ ಸದಸ್ಯರು ಪ್ಲಾಸ್ಟಿಕ್ ಬಳಸದಂತೆ ಅಭಿಯಾನ ನಡೆಸಿದ್ದಾರೆ.
ಇಂದು ಎಲ್ಲೆಡೆ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ಕವರ್ ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ಅವುಗಳನ್ನು ಹಸುಗಳು ಆಹಾರ ಎಂದು ಸೇವಿಸುತ್ತಿವೆ. ಪ್ಲಾಸ್ಟಿಕ್ ಹಸುಗಳ ಹೊಟ್ಟೆ ಸೇರಿದ ಪರಿಣಾಮ ಎಷ್ಟೋ ಮೂಕ ಪ್ರಾಣಿಗಳು ಬಲಿಯಾಗಿವೆ. ಆದ್ದರಿಂದ ಶಿವಮೊಗ್ಗದಲ್ಲಿ ವಾಸವಿ ಮಹಿಳಾ ಸಂಘದ ಸದಸ್ಯರು ವಿನೂತನವಾಗಿ ಒಂದು ಕೆಜಿ ಪ್ಲಾಸ್ಟಿಕ್ ಕೊಡಿ, ಅದಕ್ಕೆ ಪ್ರತಿಯಾಗಿ ಒಂದು ಕೆಜಿ ಅಕ್ಕಿ ಪಡೆದುಕೊಳ್ಳಿ ಎಂಬ ಕಾರ್ಯಕ್ರಮ ನಡೆಸಿದರು.
ಈ ಮೂಲಕ ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ಬಳಸದಂತೆ ಹಾಗು ಪ್ಲಾಸ್ಟಿಕ್ ಬಳಸುವುದರಿಂದ ಯಾವ ರೀತಿ ದುಷ್ಪರಿಣಾಮ ಉಂಟಾಗುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸಿದರು. ಈ ಅಭಿಯಾನದಿಂದ ಒಂದೇ ದಿನಕ್ಕೆ ಬರೋಬ್ಬರಿ 150 ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗಿದ್ದು, ಅದಕ್ಕೆ ಪ್ರತಿಯಾಗಿ ಮಹಿಳಾ ಸದಸ್ಯರು 150 ಕೆಜಿ ಅಕ್ಕಿ ನೀಡಿದ್ದಾರೆ. ಹಾಗೆಯೇ ತಮ್ಮ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿರುವುದಕ್ಕೆ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ತಿರುವನಂತಪುರಂ: ಶಬರಿಮಲೆಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ವ್ಯಕ್ತಿಯೊಬ್ಬ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಘಟನೆ ಕೇರಳದ ಕೊಚ್ಚಿ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಡೆದಿದೆ. ಇದೀಗ ಮಹಿಳೆಯರ ಮೇಲೆ ಪೆಪ್ಪರ್ ಸ್ಪ್ರೇ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಹೋರಾಟಗಾರ್ತಿ ಬಿಂದು ಅಮ್ಮಿಣಿ ತಮ್ಮ ಮುಖವನ್ನು ಮುಚ್ಚಿಕೊಂಡು ಹಲ್ಲೆ ಮಾಡಿದ ವ್ಯಕ್ತಿಯಿಂದ ದೂರ ಓಡಿ ಹೋಗುತ್ತಿದ್ದಾರೆ. ಹಲ್ಲೆಯಿಂದ ಅಮ್ಮಿಣಿಗೆ ಗಾಯವಾಗುತ್ತಿದ್ದಂತೆ ವ್ಯಕ್ತಿ ಕಾಂಪೌಂಡ್ ಹಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಅಮ್ಮಿಣಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹೋರಾಟಗಾರ್ತಿ ತೃಪ್ತಿ ದೇಸಾಯಿ ಸೇರಿದಂತೆ ಐವರು ಮಹಿಳೆಯರು ಇಂದು ಶಬರಿಮಲೆಗೆ ಪ್ರವೇಶ ಮಾಡಲು ನಿರ್ಧರಿಸಿದ್ದರು.
Kerala: Bindu Ammini, one of the two women who first entered the #Sabarimala temple in January this year, says, "a man sprayed chilli and pepper at my face,"outside Ernakulam city police commissioner's office today morning. pic.twitter.com/lt2M58264k
ಇಂದು ಬೆಳಗ್ಗೆ ತೃಪ್ತಿ ದೇಸಾಯಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಅವರು, “ಇಂದು ಸಂವಿಧಾನದ ದಿನವಾಗಿದ್ದು, ಇಂದೇ ನಾವು ಶಬರಿಮಲೆ ಪ್ರವೇಶಿಸುತ್ತೇವೆ. ನಾವು ದೇವಾಲಯ ಪ್ರವೇಶಿಸುವುದನ್ನು ರಾಜ್ಯ ಸರ್ಕಾರದಿಂದ ಅಥವಾ ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ. ನಮಗೆ ಭದ್ರತೆ ಸಿಕ್ಕರೂ ಸಿಗದಿದ್ದರೂ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ಬಳಿಕವೇ ನಾನು ಕೇರಳವನ್ನು ಬಿಟ್ಟು ಹೋಗುತ್ತೇನೆ” ಎಂದು ಪ್ರತಿಕ್ರಿಯಿಸಿದರು.
Women's rights activist Trupti Desai at Kochi, early morning today: We'll visit #Sabarimala temple today on Constitution Day. Neither state government nor police can stop us from visiting the temple. Whether we get security or not we will visit the temple today. pic.twitter.com/7f4WMK6opI
ನನ್ನ ಚಲನವಲನದ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ನನ್ನ ಮೇಲೆ ಹಲ್ಲೆ ನಡೆಸುವವರು ನನ್ನ ಕಾರಿನ ನಂಬರ್ ಗಮನಿಸಿದ್ದಾರೆ ಎಂದು ತೃಪ್ತಿ ಆರೋಪಿಸಿದ್ದಾರೆ. ಪುಣೆ ಮೂಲದ ಹೋರಾಟಗಾರ್ತಿ ತೃಪ್ತಿ ಕಳೆದ ವರ್ಷ ಕೂಡ ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದರು. ಆದರೆ ಆಗ ಹೋರಾಟಗಾರರು ಅವರನ್ನು ತಡೆದಿದ್ದರು.
This is so shocking. Pepper/ chilly spray was used against Bindu Ammini by a protestor near Cochin Commissioner office as she wanted to go to #SabarimalaTemple along with activist Trupti Desai and others.
ಶನಿವಾರ ಪಂಜಾಬ್‍ನ ಮಾನ್ಸಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಸ್ಪ್ರೀತ್ ಸಿಂಗ್(16) ಮೃತ ದುರ್ದೈವಿ. ಆರೋಪಿಗಳನ್ನು ಜಶನ್ ಸಿಂಗ್, ಗುರ್ಜಿತ್ ಸಿಂಗ್ ಹಾಗೂ ರಾಜು ಸಿಂಗ್ ಎಂದು ಗುರುತಿಸಲಾಗಿದೆ. ಜಸ್ಪ್ರೀತ್ ಅಣ್ಣ ಕುಲ್ವಿಂದರ್ ಸಿಂಗ್ ಹಾಗೂ ಆರೋಪಿ ಜಶನ್ ತಂಗಿ ರಾಜೋ ಕೌರ್ ಪ್ರೀತಿಸುತ್ತಿದ್ದರು. ಇಬ್ಬರೂ ಕೂಡ ದಲಿತ ಸಮುದಾಯದವರಾಗಿದ್ದರೂ ರಾಜೋ ಮನೆಯವರಿಗೆ ಕುಲ್ವಿಂದರ್ ಇಷ್ಟವಿರಲಿಲ್ಲ. ಹೀಗಾಗಿ ಎರಡು ವರ್ಷದ ಹಿಂದೆ ಕುಲ್ವಿಂದರ್ ಮತ್ತು ರಾಜೋ ಓಡಿ ಹೋಗಿ ಮದುವೆಯಾಗಿದ್ದರು. ಆದರೆ ಅವರಿಬ್ಬರನ್ನು ಗ್ರಾಮಕ್ಕೆ ಬರಲು ಮನೆಯವರು ಬಿಡುತ್ತಿರಲಿಲ್ಲ. ಇದನ್ನೂ ಓದಿ:ದಲಿತ ಯುವಕನನ್ನು ಪ್ರೀತಿಸಿದ ಮಗಳನ್ನು ಜೀವಂತ ಸುಟ್ಟ ತಾಯಿ
ಅಲ್ಲದೆ ಈ ವಿಷಯಕ್ಕೆ ರಾಜೋ ಕುಟುಂಬ ಗ್ರಾಮದಲ್ಲಿ ತಲೆತಗ್ಗಿಸುವಂತಾಗಿತ್ತು. ಇದರ ನಡುವೆ ಜಸ್ಪ್ರೀತ್ ಪದೇ ಪದೇ ರಾಜೋ ಕುಟುಂಬಕ್ಕೆ ಇದೇ ವಿಚಾರಕ್ಕೆ ಹಿಯಾಳಿಸುತ್ತಿದ್ದನು. ಈ ಬಗ್ಗೆ ತಿಳಿದು ಬೇರೆ ಊರಿನಲ್ಲಿ ಪತ್ನಿ, ಮಗುವಿನೊಂದಿಗೆ ವಾಸಿಸುತ್ತಿದ್ದ ಜಶನ್ ಗ್ರಾಮಕ್ಕೆ ಮರುಳಿದ್ದನು. ಮೊದಲೇ ಅಣ್ಣ ಮರ್ಯಾದೆ ಹಾಳು ಮಾಡಿದ್ದಾನೆ, ಈಗ ತಮ್ಮ ಹೀಯಾಳಿಸುತ್ತಿದ್ದಾನೆ ಎಂದು ಜಶನ್ ಕೋಪಕೊಂಡಿದ್ದನು.
ಇದೇ ಸಿಟ್ಟಲ್ಲಿ ಶನಿವಾರ ರಾತ್ರಿ ಜಸ್ಪ್ರೀತ್ ಒಬ್ಬನೇ ಸಿಕ್ಕಾಗ ಆತನನ್ನು ಜಶನ್ ಹಾಗೂ ಆತನ ಸ್ನೇಹಿತರು ಎಳೆದುಕೊಂಡು ಹೋಗಿದ್ದರು. ಮುಚ್ಚಿದ್ದ ರೈಸ್ ಮಿಲ್‍ನೊಳಗೆ ಜಸ್ಪ್ರೀತ್‍ನನ್ನು ಕರೆದೊಯ್ದು, ಕಂಬಕ್ಕೆ ಆತನನ್ನು ಕಟ್ಟಿ ಬೆಂಕಿ ಹಚ್ಚಿದ್ದರು. ಪರಿಣಾಮ ಜಸ್ಪ್ರೀತ್ ಸ್ಥಳದಲ್ಲೇ ಸಾವನ್ನಪ್ಪಿದ್ದನು. ಇದನ್ನೂ ಓದಿ:22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ
ಇತ್ತ ಜಸ್ಪ್ರೀತ್ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಪೊಲೀಸರಿಗೆ ದೂರು ಕೊಟ್ಟಿದ್ದರು. ಜಸ್ಪ್ರೀತ್ ಹುಡುಕಾಟದಲ್ಲಿದ್ದ ಪೊಲೀಸರು ಭಾನುವಾರ ಆತನ ಮೃತದೇಹ ರೈಸ್ ಮಿಲ್‍ನಲ್ಲಿ ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದು, ಮೂವರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪುಣೆ: ಲೈಂಗಿಕ ಕಿರುಕುಳ ನೀಡುತ್ತಿದ್ದ ದುಷ್ಕರ್ಮಿಗಳಿಂದ ಯುವತಿಯೋರ್ವಳನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ತಂಡ(ಆರ್‌ಪಿಎಫ್) ರಕ್ಷಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯಿಂದ 21 ಕಿ.ಮಿ ದೂರದಲ್ಲಿರುವ ಅಲಂದ್ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಯುವತಿ ಕೆಲ ಸ್ನೇಹಿತರೊಂದಿಗೆ ಕಾರಿನಲ್ಲಿ ರೈಲ್ವೇ ನಿಲ್ದಾಣದ ಬಳಿ ಬಂದಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ದುಷ್ಕರ್ಮಿಗಳು ಹಾಗೂ ಯುವತಿ ಸ್ನೇಹಿತರ ನಡುವೆ ಜಗಳ ನಡೆದಿದೆ. ಆಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೆದರಿಸಿದಾಗ, ತಕ್ಷಣ ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ನೇಹಿತರು ಓಡಿ ಹೋಗಿದ್ದಾರೆ.
ಯುವತಿ ಮಾತ್ರ ದುಷ್ಕರ್ಮಿಗಳ ಕೈಗೆ ಸಿಕ್ಕಿಹಾಕಿಕೊಂಡಿದ್ದು, ಆಕೆಯನ್ನು ದುಷ್ಕರ್ಮಿಗಳು ರೈಲ್ವೆ ನಿಲ್ದಾಣದ ಬಳಿ ಪಾಳು ಬಿದ್ದ ಪ್ರದೇಶದಲ್ಲಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದರು. ಈ ವೇಳೆ ಯುವತಿಯ ಕಿರುಚಾಟ ಕೇಳಿ ಆರ್‌ಪಿಎಫ್ ಪೊಲೀಸರು ಸ್ಥಳಕ್ಕೆ ಹೋಗಿದ್ದು, ಪೊಲೀಸರನ್ನು ಕಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಯುವತಿಯನ್ನು ಪೊಲೀಸರು ರಕ್ಷಿಸಿ ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ.
ಬೆಳಗಾವಿ: ಗೋಕಾಕ್ ಕ್ಷೇತ್ರದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರಕ್ಕೆ ತೆರೆಳಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಅಂಕಲಗಿ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಯ್ತು. ಅದರಲ್ಲೂ ಸತೀಶ್ ಅವರಿಗೆ ಮಹಿಳೆಯರು ಆರತಿ ಬೆಳಗಿ, ಕಾಲಿಗೆ ಬಿದ್ದಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಬೆಳಗಾವಿಯ ಅಂಕಲಗಿ ಗ್ರಾಮದಲ್ಲಿ ತಮ್ಮ ಲಖನ್ ಪರ ಉಪಚುನಾವಣಾ ಪ್ರಚಾರಕ್ಕೆ ಸತೀಶ್ ಜಾರಕಿಹೊಳಿ ತೆರೆಳಿದ್ದರು. ಈ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಸತೀಶ್ ಜಾರಕಿಹೊಳಿಗೆ ಹೂಮಳೆಗೈದು ಜನರು ಸ್ವಾಗತ ಕೋರಿದರು. ಬಳಿಕ ಗ್ರಾಮದ ಮಹಿಳೆಯರು ಸತೀಶ್ ಜಾರಕಿಹೊಳಿ ಅವರಿಗೆ ಆರತಿ ಬೆಳಗಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಖತ್ ವೈರಲ್ ಆಗಿದೆ.
ಡಿಸೆಂಬರ್ 5ರಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಬಹಿರಂಗ ಪ್ರಚಾರಕ್ಕೆ ಕೇವಲ 10 ದಿನ ಬಾಕಿ ಇದೆ. ಅದರಲ್ಲೂ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರ ನಡುವೆಯೇ ಸ್ಪರ್ಧೆ ನಡೆಯುತ್ತಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರು: ಅನರ್ಹರ ರಾಜೀನಾಮೆಯಿಂದ 15 ಕ್ಷೇತ್ರದಲ್ಲಿ ಉಪಚುನಾವಣೆ ಕಾವು ಏರುತ್ತಿದೆ. ಮತದಾರ ಪ್ರಭುಗಳ ಗಮನ ಸೆಳೆಯಲು ಖೆಡ್ಡಾ ರೆಡಿಯಾಗಿದೆ. ಅದರಲ್ಲೂ ಮಂಗಳಾರಾತಿ ಎತ್ತದಂತೆ ಮಹಿಳಾಮಣಿಗಳಿಗೆ ಒಲೈಸಲು ಭರ್ಜರಿ ಕಸರತ್ತು ಶುರುವಾಗಿದೆ. ಈ ಎಲೆಕ್ಷನ್ ಸೀರೆ ಆಫರ್ ಏನು ಅಂತ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಬಟಾಬಯಲು ಮಾಡಿದೆ.
ಚಿಕ್ಕಪೇಟೆಗೂ ಮಹಿಳೆಯರಿಗೂ ಅದೇನ್ ನಂಟು ಅಂತಾ ಭಗವಂತನಿಗೆ ಗೊತ್ತಿರೋದಕ್ಕೆ ಸಾಧ್ಯವಿಲ್ಲ. ಹಬ್ಬ, ಹರಿದಿನ, ವೀಕೆಂಡ್ ಹೀಗೆ ಯಾವಾಗ ಹೋದರೂ ಚಿಕ್ಕಪೇಟೆ ಮಹಿಳೆಯರಿಂದ ಫುಲ್ ಬ್ಯುಸಿ ಇರುತ್ತೆ. ಈಗಂತೂ ಎಲೆಕ್ಷನ್ ಸಮಯ ಬೇರೆ, ಸೀರೆ ವ್ಯಾಪಾರವಂತೂ ಇನ್ನೂ ಸಖತ್ ಆಗಿ ನಡೀತಿದೆ. ವೋಟಿಗೊಂದು ಕಲರ್‌ಫುಲ್ ಸೀರೆ ಎನ್ನುವಂತೆ ಮಹಿಳೆಯರಿಗೆ ಎಲೆಕ್ಷನ್ ಗಿಫ್ಟ್‌ಗಾಗಿ ಅಂಗಡಿ ಮಾಲೀಕರು ಭರ್ಜರಿ ಆಫರ್ ಬಿಟ್ಟಿದ್ದಾರೆ.
ನಮ್ಮಲ್ಲಿ ಹಾಫ್ ರೇಟ್, ಚೀಫ್ ರೇಟ್ ಸೀರೆ. ಸಿಲ್ಕ್ ಸೀರೆ, ಸಿಂಥೆಟಿಕ್, ಕಾಟನ್ ಯಾವುದ್ ಬೇಕು ಹೇಳಿ ಎಂದು ಚಿಕ್ಕಪೇಟೆಯಲ್ಲಿ ಮಾಮೂಲಿ ಕೇಳಿಬರುವ ಧ್ವನಿ. ಆದರೆ ಈಗ ಎಲೆಕ್ಷನ್ ವ್ಯಾಪಾರದ ಸಮಯವಾಗಿದ್ದು, ಹಾಫ್ ರೇಟ್, ಚೀಪ್ ರೇಟ್ ಎಲೆಕ್ಷನ್ ಸೀರೆಗಳ ಜೊತೆ ವ್ಯಾಪಾರಿಗಳು ಮೈಕೊಡವಿಕೊಂಡು ಜೈ ಎಂದು ಸೀರೆ ವ್ಯಾಪಾರಕ್ಕೆ ಪಟ್ಟಾಗಿ ಕುಂತುಬಿಟ್ಟಿದ್ದಾರೆ. ಥೇಟು ರಾಜಕೀಯ ನಾಯಕರಂತೆ ಇಲ್ಲಿನ ವ್ಯಾಪಾರಿಗಳು ಎಲೆಕ್ಷನ್ ಸೀರೆ ಸೇಲ್ ಮಾಡೋಕೆ ಸಿಕ್ಕಾಪಟ್ಟೆ ಸುಳ್ಳು, ಪೂಸಿ ಹೊಡೆಯುತ್ತಾರೆ. ಇದಕ್ಕೆ ಕಳ್ಳಬಿಲ್ ಲೆಕ್ಕಾನೂ ತೋರಿಸುತ್ತಾರೆ.
ಎಲೆಕ್ಷನ್‍ಗೆ ಸೀರೆ ಬೇಕು ಅಂದ್ರೆ ಸಾಕು ವ್ಯಾಪಾರಿಗಳ ಕಣ್ಣರಳುತ್ತೆ. ಅಯ್ಯೋ ಬಿಡಿ ಸಾಬ್ ಎಲ್ಲಾ ಆರೇಂಜ್‍ಮೆಂಟ್ ನಮ್ಮದೇ, ನಿಮಗೆ ಎಷ್ಟು ಅಗ್ಗದ ಸೀರೆ ಬೇಕು ಅಷ್ಟು ಸಿಗುತ್ತೆ. ಕಲರ್ ಗಿಲರ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪಟ್ಟಾಗಿ ಕುಂತು ಉಳಿದ ಕಸ್ಟಮರ್ ನತ್ತ ಕಣ್ಣುಹಾಯಿಸದೇ ವ್ಯಾಪಾರಕ್ಕೆ ನಿಂತುಬಿಡುತ್ತಾರೆ. ಕಳೆದ ವಾರವಷ್ಟೇ ಎಲೆಕ್ಷನ್ ಸೀರೆ ಸಖತ್ ವ್ಯಾಪಾರ ಆಗಿದೆ ಎಂದು ಸ್ವತಃ ಅಂಗಡಿ ಅವರೇ ಹೇಳುತ್ತಾರೆ. ಇನ್ನೂ ಕೆಲವು ಅಂಗಡಿಗಳಲ್ಲಿ, ನೀವು ಹೇಳಿದಷ್ಟು ಬಿಲ್ ಹಾಕಿಕೊಡ್ತೀವಿ ತಲೆಕೆಡಿಸಿಕೊಳ್ಳಬೇಡಿ, ನೀವು ಸೀರೆ ಕೊಡುವಾಗ ಎಷ್ಟು ಬೇಕಾದರೂ ದುಡ್ಡು ತಗೊಳ್ಳಿ ಎಂದು ಸ್ಪೆಷಲ್ ಐಡಿಯಾ ಕೂಡ ಕೊಡುತ್ತಾರೆ.
ಪ್ರಚಾರ ಮಾಡುವಾಗ ರಾಜಕಾರಣಿಗಳು ಎಷ್ಟು ಹಣ ಬೇಕಾದರೂ ಸುರಿಯಲು ಸಿದ್ಧರಾಗುತ್ತಾರೆ. ಇದನ್ನೆ ಲಾಭ ಮಾಡಿಕೊಳ್ಳುವ ಮಧ್ಯವರ್ತಿಗಳು 200 ರೂ. ಬೆಲೆಯ ಸೀರೆಯನ್ನ 350 ಬೇಕಾದರೂ ಹ್ಯಾಂಡ್ ಬಿಲ್ ಮಾಡಿಸಿಕೊಳ್ಳುತ್ತಾರೆ. ಇದರಿಂದ ಮಳಿಗೆಗಳು ಜಿಎಸ್‍ಟಿ ಬೀಳಲ್ಲ. ಇತ್ತ ತಗೊಳ್ಳೊ ಮಧ್ಯವರ್ತಿಗಳು ದುಪ್ಪಟ್ಟು ಲೆಕ್ಕ ತೋರಿಸಿ ಹಣ ಪೀಕಬಹುದು ಎಂಬ ಪ್ಲಾನ್ ಮಾಡಲಾಗುತ್ತೆ.
ಎಷ್ಟು ಸೀರೆ ಕೊಡಿಸಿದರೂ ಮಹಿಳೆಯರ ಬಾಯಲ್ಲಿ ಸಾಕು ಅನ್ನೋ ಮಾತೇ ಬರಲ್ಲ. ಇದನ್ನು ಅಭ್ಯರ್ಥಿಗಳು ಕೂಡ ಬಂಡವಾಳ ಮಾಡ್ಕೊಂಡಿದ್ದಾರೆ. ಎಲೆಕ್ಷನ್ ಸೀರೆ ಮಾರಾಟ ಮಾಡಲು ಎಲ್ಲದಕ್ಕೂ ವ್ಯಾಪಾರಿಗಳು ಸಿದ್ಧರಾಗಿದ್ದಾರೆ. ಹಲವು ಮಳಿಗೆಗಳು ಭರ್ಜರಿ ಸೀರೆ ಸೇಲ್‍ಗಾಗಿ ಖೆಡ್ಡಾ ಸಿದ್ಧಪಡಿಸಿದೆ. ಮತದಾರರ ಅಮೂಲ್ಯ ಮತ ಸೆಳೆಯಲು ಏನೆಲ್ಲಾ ಮಾಡುತ್ತಾರೆ. ಇಂತಹ ಆಮಿಷಕ್ಕೆ ಬಲಿಯಾಗದೇ ನೀವು ನಿಮ್ಮ ಕ್ಷೇತ್ರ ಅಭಿವೃದ್ಧಿ ಮಾಡುವ ಅಭ್ಯರ್ಥಿಗೆ ಮತದಾನ ಮಾಡಿ ಎನ್ನುವುದೇ ನಮ್ಮ ಆಶಯವಾಗಿದೆ.