Tag: women

  • ಬೆಣ್ಣೆ ನಗರಿ ಮಹಿಳೆಯರ ರಕ್ಷಣೆಗೆ ಸಜ್ಜಾಗಿದೆ ಖಾಕಿ ಪಡೆ

    ಬೆಣ್ಣೆ ನಗರಿ ಮಹಿಳೆಯರ ರಕ್ಷಣೆಗೆ ಸಜ್ಜಾಗಿದೆ ಖಾಕಿ ಪಡೆ

    ದಾವಣಗೆರೆ: ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪೊಲೀಸ್ ಇಲಾಖೆಯು ಹಲವು ಯೋಜನೆಗಳಡಿ 24×7 ಕಾರ್ಯನಿರ್ವಹಿಸಲಿದೆ ಎಂದು ದಾವಣಗೆರೆಯ ಎಸ್.ಪಿ ಹನುಮಂತರಾಯ ತಿಳಿಸಿದರು.

    ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದ ನಗರ ಹಾಗೂ ತಾಲೂಕುಗಳಲ್ಲಿ ಪೊಲೀಸ್ ಗಸ್ತು ವಾಹನ ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವ 4 ಗಂಟೆಯವೆರೆಗೆ ಸಂಚರಿಸುತ್ತದೆ. ನಗರದಲ್ಲಿ 7 ಪಿಸಿಆರ್ ವಾಹನಗಳು, 14 ಚೀತಾ ವಾಹನಗಳು (ಮೋಟಾರ್ ಸೈಕಲ್) ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ 7 ಗಸ್ತುವಾಹನಗಳು ಕಾರ್ಯನಿರ್ವಹಿಸಲಿವೆ. ಈ ವಾಹನಗಳು ಜಿಪಿಎಸ್ ವ್ಯವಸ್ಥೆ ಹೊಂದಿದ್ದು, ತೊಂದರೆಯಲ್ಲಿರುವ ಮಹಿಳೆಯರನ್ನು ರಕ್ಷಿಸಲು ಅನುಕೂಲವಾಗಲಿದೆ ಎಂದರು.

    ರಾತ್ರಿ ಸಮಯದಲ್ಲಿ ಮಹಿಳೆಯರು ತೊಂದರೆಯಲ್ಲಿದ್ದಾಗ, ಮನೆಗೆ ತಲುಪಲು ಸಮಸ್ಯೆಯಾದಾಗ ತಕ್ಷಣ ಜಿಲ್ಲಾ ಪೊಲೀಸ್ ಸಹಾಯವಾಣಿ ಮೊ.ನಂ:9480803200, ಸ್ಥಿರ ದೂರವಾಣಿ 08192-253100, 08192-262699 ಹಾಗೂ ಎಮರ್ಜೆನ್ಸಿ ರಿಜಿಸ್ಟ್ರೇಷನ್ ಸಿಸ್ಟಮ್ ನಂ. 112/100 ಗೆ ಕರೆ ಮಾಡಿ ಜಿಲ್ಲಾ ಪೊಲೀಸರ ಸಹಾಯ ಪಡೆಯಬಹುದು. ಈಗಾಗಲೇ ಜಿಲ್ಲಾ ನಿಸ್ತಂತು ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊಬೈಲ್ ನಂಬರ್‍ಗಳು, ಸ್ಥಿರ ದೂರವಾಣಿ ಸಂಖ್ಯೆಗಳೂ ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಚುರುಕಾಗಿ ಕಾರ್ಯನಿರ್ವಹಿಸಲು ಒತ್ತು ನೀಡಲಾಗುವುದು ಎಂದರು.

    ಸಹಾಯವಾಣಿಗೆ ಬರುವ ಕರೆಗಳನ್ನು ಸ್ವೀಕರಿಸುವ ಕಂಟ್ರೋಲ್ ರೂಮ್ ಸಿಬ್ಬಂದಿಯವರು ತಕ್ಷಣವೇ ಆ ಮಾಹಿತಿಯನ್ನು ರಾತ್ರಿ ಕರ್ತವ್ಯದಲ್ಲಿರುವ ಪೊಲೀಸರಿಗೆ ರವಾನಿಸುತ್ತಾರೆ. ತಕ್ಷಣ ಪೊಲೀಸರು ವಾಹನದೊಂದಿಗೆ ನಿರ್ದಿಷ್ಟ ಸ್ಥಳ ತಲುಪಿ ಕಾರ್ಯ ಪ್ರವೃತ್ತರಾಗುತ್ತಾರೆ. ನಗರದಲ್ಲಿ ಗಸ್ತು ಮಾಡುವ ಪೊಲೀಸರು ನಗರದ ಯಾವುದೇ ಪ್ರದೇಶದಿಂದ ನೆರವು ಕೋರಿ ಬಂದರೂ ಕೆಲವೇ ನಿಮಿಷಗಳಲ್ಲಿ ಆ ಸ್ಥಳ ತಲುಪಿ ಸಹಾಯ ಮಾಡುವರು ಎಂದರು.

    ಆ್ಯಪ್ ಸೌಲಭ್ಯ:
    ಪೊಲೀಸ್ ಇಲಾಖೆಯು ಮಹಿಳೆಯರ ರಕ್ಷಣೆಗಾಗಿ ಕೆಎಸ್‍ಪಿ ಎಂಬ ಆ್ಯಪ್ ಪರಿಚಯಿಸಿದ್ದು, ಈ ಆ್ಯಪನ್ನು ಇನ್‍ಸ್ಟಾಲ್ ಮಾಡಿಕೊಂಡು ತ್ವರಿತ ನೆರವು ಪಡೆಯಬಹುದು. ಇದರಲ್ಲಿ ನಿಮಗೆ ಹತ್ತಿರವಿರುವ ಪೊಲೀಸ್ ಠಾಣೆ ಹಾಗೂ ಅಗತ್ಯ ದೂರವಾಣಿ ಸಂಖ್ಯೆಗಳು ಲಭ್ಯವಿರುತ್ತವೆ. ಇದರಲ್ಲಿ ಜಿಪಿಎಸ್ ಸೌಲಭ್ಯವಿದ್ದು, ನಿಮಗೆ ಸೂಕ್ತವೆನಿಸಿದ 5 ಜನರ ನಂಬರನ್ನು ಸೇವ್ ಮಾಡಿಕೊಳ್ಳಬೇಕು. ಹೀಗೆ ಮಾಡಿದ್ದಲ್ಲಿ ನೀವು ಒಮ್ಮೆ ಕರೆ ಅಥವಾ ಮೆಸೇಜ್ ಮಾಡಿದರೆ ಆ 5 ಜನರಿಗೂ ಮಾಹಿತಿ ತಿಳಿಯುತ್ತದೆ. ಇದು ಮಹಿಳೆಯರ ರಕ್ಷಣೆಗೆ ಉತ್ತಮವಾದ ಆ್ಯಪ್ ಆಗಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

    ಬೆಳಗ್ಗಿನ ಜಾವದಲ್ಲಿ ಗುಡ್ ಮಾರ್ನಿಂಗ್ ಬೀಟ್ ಎಂಬ ತಂಡ ಅಪರಾಧ ತಡೆ ಮತ್ತು ಮಹಿಳೆಯರ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸಲಿದೆ. ಚೈನ್ ಸ್ನಾಚಿಂಗ್ ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ. ನಗರದಲ್ಲಿ ಮಹಿಳೆಯರ ರಕ್ಷಣೆಗಾಗಿ ದುರ್ಗಪಡೆ ರಚಿಸಿದ್ದು, ಈ ಪಡೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಕಾಲೇಜ್, ಬಸ್‍ಸ್ಟ್ಯಾಂಡ್, ಶಾಪಿಂಗ್ ಮಾಲ್, ಚಿತ್ರಮಂದಿರಗಳು ಹಾಗೂ ಲೇಡಿಸ್ ಹಾಸ್ಟೆಲ್‍ನಂತಹ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.

    ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಆತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ಈ ಎಲ್ಲಾ ಯೋಜನೆಗಳ ಮೂಲಕ ಮಹಿಳೆಯರಿಗೆ ರಕ್ಷಣೆ ಒದಗಿಸುವ ಕೆಲಸ ಮಾಡಲಿದೆ. ಈ ಎಲ್ಲಾ ಸಹಾಯವಾಣಿಗಳು 24×7  ಕಾರ್ಯನಿರ್ವಹಿಸಲಿದ್ದು, ಮಹಿಳೆಯರು ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕೆಂದು ಎಸ್ ಪಿ ಹನುಮಂತರಾಯ ವಿವರಿಸಿದರು.

  • ಹಣದಾಸೆಗೆ ಸುಳ್ಳು ಗ್ಯಾಂಗ್ ರೇಪ್ ಕಥೆ ಕಟ್ಟಿದ ಇಬ್ಬರು ಮಹಿಳೆಯರು ಅರೆಸ್ಟ್

    ಹಣದಾಸೆಗೆ ಸುಳ್ಳು ಗ್ಯಾಂಗ್ ರೇಪ್ ಕಥೆ ಕಟ್ಟಿದ ಇಬ್ಬರು ಮಹಿಳೆಯರು ಅರೆಸ್ಟ್

    – ಸರ್ಕಾರದಿಂದ ಧನಸಹಾಯ ಪಡೆಯಲು ಖತರ್ನಾಕ್ ಪ್ಲಾನ್

    ಲಕ್ನೋ: ಒಂದೆಡೆ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಅತ್ಯಾಚಾರದ ಪ್ರಕರಣಗಳು ಹೆಚ್ಚು ನಡೆಯುತ್ತಿದೆ. ಇನ್ನೊಂದೆಡೆ ಗಾಜಿಯಾಬಾದ್‍ನಲ್ಲಿ ನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಣ ದೋಚಲು ಮಹಿಳೆಯರಿಬ್ಬರು ಸುಳ್ಳು ಆರೋಪ ಮಾಡಿ ಕಂಬಿ ಎಣೆಸುತ್ತಿದ್ದಾರೆ.

    ಗಾಜಿಯಾಬಾದ್‍ನ ಮುಸ್ಸೂರಿ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಈ ಘಟನೆ ನಡೆದಿದೆ. ರೇಪ್ ಸಂತ್ರಸ್ತೆಯರು ಎಂದು ಸುಳ್ಳು ಹೇಳಿ ಇಬ್ಬರು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಮಾಡಿದ್ದ ಪ್ಲಾನ್ ಈಗ ಮಕಾಡೆ ಮಲಗಿದೆ. ತಡರಾತ್ರಿ 11 ಗಂಟೆ ವೇಳೆಗೆ ಮಹಿಳೆ ಪೊಲೀಸ್ ಠಾಣೆಗೆ ಕರೆ ಮಾಡಿ, ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾಳೆ.

    ಈ ಬಗ್ಗೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಮಹಿಳೆ ರಸ್ತೆ ಮೇಲೆ ಪ್ರಜ್ಞೆ ತಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತಕ್ಷಣ ಆಕೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ವಿಚಾರಣೆ ವೇಳೆ, ರಾತ್ರಿ ಲಿಫ್ಟ್ ನೀಡುವ ನೆಪದಲ್ಲಿ ಗುಂಪೊಂದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದೆ ಎಂದು ಮಹಿಳೆ ಹೇಳಿದ್ದಳು. ಅಲ್ಲದೆ ವೈದ್ಯಕೀಯ ಪರೀಕ್ಷೆಯನ್ನು ನಿರಾಕರಿಸಿದ್ದಳು. ಆಗ ಪೊಲೀಸರಿಗೆ ಅನುಮಾನ ಮೂಡಿ ಈ ಬಗ್ಗೆ ತನಿಖೆ ಕೈಗೊಂಡಾಗ ಮಹಿಳೆಯ ನಿಜಬಣ್ಣ ಬಯಲಾಗಿದೆ.

    ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸುಳ್ಳು ದೂರು ಕೊಟ್ಟು ನಾಟಕವಾಡಿರುವುದು ಬಯಲಾಗಿದೆ. ಸರ್ಕಾರದಿಂದ ಅತ್ಯಾಚಾರ ಸಂತ್ರಸ್ತೆಗೆ ಸಿಗುವ ಧನ ಸಹಾಯವನ್ನು ಪಡೆಯೋದಕ್ಕೆ ಮಹಿಳೆ ಈ ಖತರ್ನಾಕ್ ಪ್ಲಾನ್ ಮಾಡಿರುವುದು ಬಯಲಾಗಿದೆ.

    ಮಹಿಳೆಯ ಅಸಲಿಯತ್ತು ತಿಳಿಯುತ್ತಿದ್ದಂತೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಹಾಗೆಯೇ ಆರೋಪಿ ಜೊತೆಗೆ ಕೈಜೋಡಿಸಿದ್ದ ಇನ್ನೋರ್ವ ಮಹಿಳೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳನ್ನು ತಡೆಯಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಮುಂದಾಗಿದೆ. ಆದರೆ ಹೀಗೆ ಮಹಿಳೆಯರೇ ಸುಳ್ಳು ಆರೋಪ ಮಾಡಿ ಹಣ ದೋಚಲು ಮುಂದಾಗಿದ್ದು ವಿಪರ್ಯಾಸವಾಗಿದೆ.

  • ಕಳ್ಳಿಯೆಂದು ಚಿಂದಿ ಆಯುವ ಗರ್ಭಿಣಿಗೆ ಹಿಗ್ಗಾಮುಗ್ಗ ಥಳಿಸಿದ ಕ್ರೂರಿಗಳು

    ಕಳ್ಳಿಯೆಂದು ಚಿಂದಿ ಆಯುವ ಗರ್ಭಿಣಿಗೆ ಹಿಗ್ಗಾಮುಗ್ಗ ಥಳಿಸಿದ ಕ್ರೂರಿಗಳು

    ಬಾಗಲಕೋಟೆ: ಕಳ್ಳತನ ಮಾಡೋದಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಚಿಂದಿ ಆಯುವ ಇಬ್ಬರು ಮಹಿಳೆಯರಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅವರಲ್ಲಿ ಓರ್ವ ಗರ್ಭಿಣಿ ಇದ್ದರೂ ಕರುಣೆ ತೋರದೆ ಮನಬಂದಂತೆ ಕ್ರೂರಿಗಳು ಹಲ್ಲೆ ನಡೆಸಿದ್ದಾರೆ.

    ಜಿಲ್ಲೆಯ ಜಮಖಂಡಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಚಿಂದಿ ಆಯುವ ಮಹಿಳೆಯರ ಮೇಲೆ ದುಷ್ಕರ್ಮಿಗಳು ಪ್ರತಾಪ ತೋರಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಿಂದಿ ಆಯ್ದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಕೆಲ ಯುವಕರು ಮನಬಂದಂತೆ ಥಳಿಸಿದ್ದಾರೆ. ಕಳ್ಳತನ ಮಾಡೋದಕ್ಕೆ ಇಲ್ಲಿಗೆ ಬಂದಿದ್ದೀರಾ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ.

    ಗರ್ಭಿಣಿಯಿದ್ದಾಳೆ ದಯವಿಟ್ಟು ಹೊಡಿಬೇಡಿ ಎಂದು ಮಹಿಳೆ ಕೈ ಮುಗಿದು ಕೇಳಿದರೂ ಪಾಪಿಗಳು ಕರುಣೆ ತೋರದೆ ಥಳಿಸಿದ್ದಾರೆ. ಮಹಿಳೆಯರ ಕೂದಲು ಹಿಡಿದು ಹೊಡೆದಿದ್ದಲ್ಲದೆ, ಕಾಲಿನಿಂದ ಒದ್ದು, ಹಗ್ಗದಿಂದಲೂ ಹೊಡೆದು ಕ್ರೂರಿಗಳು ಹಲ್ಲೆ ಮಾಡಿದ್ದಾರೆ. ಹೊಟ್ಟೆಪಾಡಿಗೆ ಹೀಗೆ ಮಾಡಿದೆವು ತಪ್ಪಾಯ್ತು ಬಿಟ್ಟುಬಿಡಿ ಎಂದು ಬೇಡಿಕೊಂಡರೂ ದುಷ್ಕರ್ಮಿಗಳು ಥಳಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

  • ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ತಲೆ ಎತ್ತಿದೆ ಓಬವ್ವ ಪಡೆ

    ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ತಲೆ ಎತ್ತಿದೆ ಓಬವ್ವ ಪಡೆ

    – ವಿಶೇಷ ಪಿಂಕ್ ವಾಹನದಲ್ಲಿ ಗಸ್ತು ತಿರುಗಲಿದೆ 10 ಜನರ ತಂಡ
    – ನಗರ ಹಾಗೂ ಹೊರವಲಯದಲ್ಲಿ ಮಹಿಳೆಯರ ರಕ್ಷಣೆಗೆ ಖಾಕಿ ಕ್ರಮ

    ರಾಯಚೂರು: ನಗರದಲ್ಲೀಗ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ಎಲ್ಲೇ ದೌರ್ಜನ್ಯ ನಡೆಯುತ್ತೆ ಅಂತ ತಿಳಿದರೂ ಈ ವಿಶೇಷ ಸಿಬ್ಬಂದಿ ಅಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಪ್ರತ್ಯಕ್ಷವಾಗುತ್ತೆ. ಮಹಿಳಾ ಪೊಲೀಸರ ಓಬವ್ವ ಪಡೆ ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ಸಿದ್ಧವಾಗಿದೆ.

    ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ. 10 ಮಹಿಳಾ ಸಿಬ್ಬಂದಿಗೆ ಕರಾಟೆ ಸೇರಿ ಇತರೆ ತರಬೇತಿ ಹಾಗೂ ಮಹಿಳೆಯರ ರಕ್ಷಣೆ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾರ್ಯಗಾರಗಳ ಮೂಲಕ ತಿಳುವಳಿಕೆ ನೀಡಲಾಗಿದೆ. ಎರಡು ತಂಡಗಳಾಗಿ ನಗರದ ಕಾಲೇಜು, ಹಾಸ್ಟೆಲ್ ಗಳು ಸೇರಿದಂತೆ ಎಲ್ಲಡೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಓಬವ್ವ ಪಡೆ ವಿಶೇಷ ಪಿಂಕ್ ವಾಹನದಲ್ಲಿ ಸಂಚರಿಸಿ ಮಹಿಳೆಯರಿಗೆ ರಕ್ಷಣೆ ನೀಡಲಿದ್ದಾರೆ. ಸಹಾಯ ವಾಣಿ ಸಂಖ್ಯೆ 94808 03800 ಕ್ಕೆ ಕರೆ ಮಾಡಿದರೆ ಓಬವ್ವ ಪಡೆ ಪ್ರತ್ಯಕ್ಷ ವಾಗುತ್ತೆ.

    ಕಳೆದ ಐದು ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ 72 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 2018 ರಲ್ಲಿ 22 ಪ್ರಕರಣ, 2019ರಲ್ಲಿ 9 ಪ್ರಕರಣ ದಾಖಲಾಗಿವೆ. ಅಲ್ಲದೆ ಕಳೆದ ಐದು ವರ್ಷದಲ್ಲಿ 173 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 2019ರಲ್ಲೇ 31 ಪ್ರಕರಣ ದಾಖಲಾಗಿವೆ. ಆದರೆ ಇಷ್ಟು ಪ್ರಕರಣಗಳಲ್ಲಿ ಇದುವರೆಗೆ ಕೇವಲ 3 ಪ್ರಕರಗಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಜಾಗೊಂಡಿವೆ. ಇದಕ್ಕೆ ಪ್ರತಿಕೂಲ ಸಾಕ್ಷಿಯೇ ಕಾರಣವಾಗಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಹೀಗಾಗಿ ಓಬವ್ವ ಪಡೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಹೇಳಿದ್ದಾರೆ.

    ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾ ಪೊಲೀಸರು ಹೊಸದೊಂದು ಹೆಜ್ಜೆಯನ್ನಿಟ್ಟಿದ್ದಾರೆ. ಆಸಕ್ತ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕರಾಟೆ ಸೇರಿದಂತೆ ಆತ್ಮರಕ್ಷಣೆ ವಿದ್ಯೆ ಕಲಿಸಲು ಇಲಾಖೆ ಮುಂದಾಗಿದೆ. ಖಾರದ ಪುಡಿ, ಮೆಣಸಿನ ಪುಡಿ ಸದಾ ಜೊತೆಗಿಟ್ಟುಕೊಳ್ಳಿ ಅಂತ ಸಲಹೆ ನೀಡುವ ಪೊಲೀಸರು ಓಬವ್ವ ಪಡೆಯ ಮೂಲಕ ಮಹಿಳಾ ರಕ್ಷಣೆಗೆ ಮುಂದಾಗಿರುವುದಕ್ಕೆ ರಾಯಚೂರಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ- ತೆಲಂಗಾಣ ಪೊಲೀಸ್ರಿಗೆ ಹೆಚ್ಚಾಯ್ತು ಡಿಮ್ಯಾಂಡ್

    ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ- ತೆಲಂಗಾಣ ಪೊಲೀಸ್ರಿಗೆ ಹೆಚ್ಚಾಯ್ತು ಡಿಮ್ಯಾಂಡ್

    ಹೈದರಾಬಾದ್: ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಕಾಮುಕರನ್ನು ಪೊಲೀಸರು ಎನ್‍ಕೌಂಟರ್ ಮಾಡಿ ಹುಟ್ಟಡಗಿಸಿದ ಬೆನ್ನಲ್ಲೇ ತೆಲಂಗಾಣ ಪೊಲೀಸರಿಗೆ ಬೇಡಿಕೆ ಹೆಚ್ಚಾಗಿದೆ. ಅತ್ಯಾಚಾರಿಗಳಿಗೆ ಶಿಕ್ಷೆ ನೀಡಲು ಹೀಗೆ ಮತ್ತಷ್ಟು ಎನ್‌ಕೌಂಟರ್‌ಗಳನ್ನು ಮಾಡಿ ಎಂದು ಪೊಲೀಸರ ಮುಂದೆ ತೆಲಂಗಾಣದ ಜನರು ಬೇಡಿಕೆ ಇಟ್ಟಿದ್ದಾರೆ.

    ದಿಶಾ ಪ್ರಕರಣದಲ್ಲಿ ಸೈಬರಾಬಾದ್ ಪೊಲೀಸರು ಕೈಗೊಂಡ ಕ್ರಮಕ್ಕೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದ್ದು, ತೆಲಂಗಾಣದಲ್ಲಿ ಇತ್ತೀಚೆಗೆ ಘಟಿಸಿದ್ದ ಇನ್ನೂ ಮೂರು ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್‍ಕೌಂಟರ್ ಮಾಡಲು ಪೊಲೀಸರು ಮುಂದಾಗಬೇಕು. ಈ ಮೂಲಕ ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹೈದ್ರಾಬಾದ್ ರೇಪಿಸ್ಟ್‌ಗಳನ್ನು ಎನ್‍ಕೌಂಟರ್ ಮಾಡಿದಂತೆ ಆರೋಪಿಗಳಿಗೆ ಶಿಕ್ಷೆಯಾಗಲಿ: ಉನ್ನಾವೋ ಸಂತ್ರಸ್ತೆಯ ತಂದೆ

    ವಾರಂಗಲ್ ಜಿಲ್ಲೆಯ ಹನಮಕೊಂಡ ಗ್ರಾಮದಲ್ಲಿನ ಯುವತಿ, ಯಾದಾದ್ರಿ ಜಿಲ್ಲೆಯ ಹಾಜಿಪುರದ ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕುಮುರಾಮ್ ಭೀಮ್ ಜಿಲ್ಲೆಯ ಅಸಿಫಾಬಾದ್‍ನಲ್ಲಿ ನಡೆದ ದಲಿತ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು. ಈ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವ ಕಾಮಾಂಧರನ್ನು ಪೊಲೀಸರು ಎನ್‍ಕೌಂಟರ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದನ್ನೂ ಓದಿ: ಕಾಮುಕರಿಗೆ ಗುಂಡೇಟು – ಇಂದು ಬೆಳಗ್ಗೆ ಎನ್‍ಕೌಂಟರ್ ನಡೆದಿದ್ದು ಹೇಗೆ?

    ಈ ಮೇಲಿನ ಮೂರು ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ದಿಶಾ ಪ್ರಕರಣದಂತೆ ಈ ಮೂರು ಪ್ರಕರಣದ ಆರೋಪಿಗಳ ಮೇಲೂ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದರೆ ಪೊಲೀಸರು ಸಂತ್ರಸ್ತೆಯರ ಆರ್ಥಿಕ ಪರಿಸ್ಥಿತಿ ಹಾಗೂ ಜಾತಿ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬರುತ್ತಿದೆ. ದಯವಿಟ್ಟು ಪೊಲೀಸರು ಯಾವುದೇ ಭೇದಭಾವ ತೋರದೆ ಈ ಮೂರು ಪ್ರಕರಣದ ಆರೋಪಿಗಳನ್ನು ಗುಂಡಿಟ್ಟು ಹತ್ಯೆ ಮಾಡಿ ಎಂದು ಜನರು ಆಗ್ರಹಿಸಿದ್ದಾರೆ.

  • ಮಹಿಳೆಯರ ಮೇಲೆ ವಾಟರ್ ಮೆನ್ ಪೌರುಷ

    ಮಹಿಳೆಯರ ಮೇಲೆ ವಾಟರ್ ಮೆನ್ ಪೌರುಷ

    ತುಮಕೂರು: ನೀರಿನ ಟ್ಯಾಂಕ್ ಶುಚಿಗೊಳಿಸಿ ಎಂದಿದ್ದಕ್ಕೆ ವಾಟರ್ ಮೆನ್ ಒಬ್ಬ ಮಹಿಳೆಯರ ಮೇಲೆ ಪೌರುಷ ತೋರಿಸಿದ್ದಾನೆ. ಏಕಾಏಕಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಏಡೆಯೂರು ಗ್ರಾಮದ ತಟ್ಟೆಕೆರೆಯಲ್ಲಿ ಈ ಘಟನೆ ನಡೆದಿದೆ.

    ತಟ್ಟೆಕೆರೆಯಲ್ಲಿರುವ ವಾಟರ್ ಟ್ಯಾಂಕ್ ಕಲುಷಿತವಾಗಿದ್ದು ಅದನ್ನು ಶುಚಿಗೊಳಿಸಿ ನೀರು ಬಿಡಿ ಎಂದು ಏಡೆಯೂರು ಗ್ರಾಮ ಪಂಚಾಯ್ತಿ ವಾಟರ್ ಮೆನ್ ಹರೀಶ್ ಗೆ ಗ್ರಾಮಸ್ಥರು ತಾಕೀತು ಮಾಡಿದ್ದಾರೆ. ಈ ದ್ವೇಷವನ್ನೇ ಮನಸ್ಸಿನಲಿಟ್ಟುಕೊಂಡ ಹರೀಶ್, ಮಗದೊಂದು ದಿನ ಬಂದು ಮಹಿಳೆಯರ ಮೇಲೆ ಪರಾಕ್ರಮ ತೋರಿದ್ದಾನೆ. ಪರಿಣಾಮ ಘಟನೆಯಲ್ಲಿ ಕಲಾವತಿ ಮತ್ತು ಸವಿತಾ ಸೇರಿದಂತೆ ಹಲವು ಮಹಿಳೆಯರಿಗೆ ಗಾಯವಾಗಿದೆ. ಈ ಸಂಬಂಧ ಅಮೃತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹರೀಶ್ ವಾಟರ್ ಮೆನ್ ಆಗಿದ್ದರೂ ಗ್ರಾಮಸ್ಥರನ್ನ ಹೆದರಿಸಿ ದೌರ್ಜನ್ಯ ಮಾಡುತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಈ ಕೂಡಲೇ ಹರೀಶ್ ನನ್ನ ಗ್ರಾಮ ಪಂಚಾಯ್ತಿ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಪ್ಲಾಸ್ಟಿಕ್ ಬ್ಯಾಗ್ ನಿಷೇಧ ತಂತು ಮಹಿಳಾ ಸಂಘಗಳಿಗೆ ಅದೃಷ್ಟ!

    ಪ್ಲಾಸ್ಟಿಕ್ ಬ್ಯಾಗ್ ನಿಷೇಧ ತಂತು ಮಹಿಳಾ ಸಂಘಗಳಿಗೆ ಅದೃಷ್ಟ!

    – ದಿನಕ್ಕೆ 1,200 ರೂ. ದುಡಿಯುತ್ತಿದ್ದಾರೆ ಬಡ ಮಹಿಳೆಯರು

    ಕಾರವಾರ: ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧವನ್ನು ಕಠಿಣವಾಗಿ ಜಾರಿಗೆ ತಂದಿದೆ. ಪರಿಣಾಮ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿ ಬಟ್ಟೆ ಹಾಗೂ ಪೇಪರ್ ಬ್ಯಾಗ್‍ಗಳಿಗೆ ಈಗ ಬೇಡಿಕೆ ಹೆಚ್ಚಾಗಿದೆ. ಆದರೆ ಈ ಬ್ಯಾಗುಗಳು ಅಂಗಡಿಗಳಿಂದ ಕೊಂಡುಕೊಳ್ಳುವ ಗ್ರಾಹಕರಿಗೆ ಹಾಗೂ ಅಂಗಡಿಯವರಿಗೆ ತುಟ್ಟಿಯಾಗುತಿತ್ತು. ಇದರಿಂದಾಗಿ ಕದ್ದುಮುಚ್ಚಿ ಪ್ಲಾಸ್ಟಿಕ್ ಬ್ಯಾಗ್‍ಗಳು ಬಿಕರಿಯಾಗುತಿತ್ತು. ಇದನ್ನು ಮನಗಂಡ ಕಾರವಾರ ನಗರಸಭೆ ಆಡಳಿತ ಪ್ರತಿ ದಿನ ಅಂಗಡಿಗಳಿಗೆ ದಾಳಿ ನಡೆಸಿ ಈ ವರೆಗೆ ಎರಡು ಕ್ವಿಂಟಾಲ್ ಪ್ಲಾಸ್ಟಿಕ್ ಬ್ಯಾಗ್ ವಶಪಡಿಸಿಕೊಂಡರೆ, ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಸಂಗ್ರಹಿಸಿ ಈಗಾಗಲೇ 40 ಟನ್ ಪ್ಲಾಸ್ಟಿಕ್ ಅನ್ನು ರೀ ಸೈಕ್ಲಿಂಗ್ ಮಾಡಿ ದಾಲ್ಮಿಯ ಸಿಮೆಂಟ್ ಕಾರ್ಖಾನೆಗೆ ಕಳುಹಿಸಿದೆ.

    ಪ್ರತಿ ದಿನ ಏಳು ಕ್ವಿಂಟಾಲ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಕೇವಲ ಕಾರವಾರ ನಗರದಿಂದ ಉತ್ಪತ್ತಿಯಾಗುತ್ತದೆ. ಹೀಗಾಗಿ ಕಾರವಾರ ನಗರಸಭೆ ಆಯುಕ್ತ ಯೋಗೀಶ್ವರ್ ರವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೂ ಹೋಟೆಲ್, ಬೀದಿ ಬದಿಯ ಅಂಗಡಿಗಳು ಕದ್ದುಮುಚ್ಚಿ ಪ್ಲಾಸ್ಟಿಕ್ ಮಾರಾಟವನ್ನು ಮಾಡಿ ಪ್ರತಿ ಬಾರಿ ಸಿಕ್ಕಿಕೊಂಡು ದಂಡ ತೆತ್ತುತಿದ್ದುದನ್ನು ಹಾಗೂ ಅವರ ಅನಿವಾರ್ಯತೆಯನ್ನು ಮನಗಂಡು ಬಟ್ಟೆ ಬ್ಯಾಗ್‍ಗಳನ್ನು ಅವರಿಗೆ ನೀಡುವ ನಿರ್ಧಾರ ತೆಗೆದುಕೊಂಡರು. ಇದರ ಪ್ರತಿಫಲವಾಗಿ ಹಾಗೂ ಬಡ ಮಹಿಳೆಯರಿಗೆ ಸಹಾಯ ಆಗುವಂತೆ ಕಾರವಾರ ನಗರದ ಮಹಿಳಾ ಸಹಕಾರ ಸಂಘ ಸಂಸ್ಥೆಯನ್ನು ಬ್ಯಾಗ್ ತಯಾರಿಕೆಗೆ ಪ್ರೇರೇಪಿಸಿದ್ದಲ್ಲದೇ ಅವರ ಮೂಲಕ ಬಟ್ಟೆ ಬ್ಯಾಗ್ ತಯಾರಿಸಿ ನೇರವಾಗಿ ನಗರಸಭೆಯೇ ಹೋಟೆಲ್ ಗಳಿಗೆ ಸೇರಿದಂತೆ ಅಂಗಡಿ ಮುಂಗಟ್ಟುಗಳಿಗೆ ಪ್ರತಿ ಬ್ಯಾಗಿಗೆ 3 ರೂ. ನಂತೆ ಕೊಂಡುಕೊಳ್ಳುವ ವೇದಿಕೆ ಒದಗಿಸಿಕೊಟ್ಟಿತು.

    ಇದರ ಪ್ರತಿಫಲವಾಗಿ ಕಾರವಾರದ ಜೈ ಸಂತೋಷಿನಿ ಮಾತಾ ಮಹಿಳಾ ಸಹಕಾರ ಸಂಘದ ಮಹಿಳೆಯರು ಬ್ಯಾಗ್‍ಗಳನ್ನು ಹೊಲಿಯುವ ಕಾರ್ಯ ಆರಂಭಿಸಿದ್ದಾರೆ. ಒಂಬತ್ತು ಜನರಿರುವ ಈ ಚಿಕ್ಕ ಸಂಘದಲ್ಲಿ ಏಳು ಜನ ಮಹಿಳೆಯರು ಹೊಲಿಗೆ ಯಂತ್ರ ಹೊಂದಿದ್ದು ಮನೆಯಲ್ಲಿ ಬಿಡುವಿನ ಸಮಯದಲ್ಲಿ ಬಟ್ಟೆ ಚೀಲವನ್ನು ಹೋಲಿದು ಕೊಡುತ್ತಿದ್ದಾರೆ.

    ಸದ್ಯ ಹೋಟಲ್ ಹಾಗೂ ಅಂಗಡಿಗೆ ಬಟ್ಟೆ ಬ್ಯಾಗ್‍ಗಳನ್ನು ತಯಾರಿಸಿ ನೀಡುತ್ತಿದ್ದು, ಪ್ರತಿ ದಿನ ನೂರು ಬಟ್ಟೆಯ ಒಂದು ಬಂಡಲ್‍ನಂತೆ ನಾಲ್ಕು ಬಂಡಲ್ ಬಟ್ಟೆಯನ್ನು ಒಬ್ಬರು ತಯಾರಿಸಿ ದಿನಕ್ಕೆ 1,200 ರೂ.ಗಳಿಗೂ ಹೆಚ್ಚು ಹಣ ಗಳಿಸುತ್ತಿದ್ದಾರೆ. ಬ್ಯಾಗ್ ತಯಾರಿಸುತ್ತಿರುವ ಸಂಘದ ಪೂಜಾ ಸಂಜೀವ್ ಅರ್ಗೆಕರ್ ಹೇಳುವಂತೆ, ಗೃಹಿಣಿಯಾಗಿ ಮನೆಯ ಕೆಲಸ ಮುಗಿಸಿ ಸಂಜೆ ವೇಳೆ ಬಟ್ಟೆ ಚೀಲವನ್ನು ಹೊಲಿಯುತ್ತೇನೆ. ಇದರಿಂದ ನನ್ನ ಗಳಿಕೆ ಹೆಚ್ಚಾಗಿದ್ದು ಕುಟುಂಬಕ್ಕೆ ಸಹಕಾರವಾಗುತ್ತಿದೆ. ನಗರಸಭೆಯೇ ನೇರವಾಗಿ ಹೋಟಲ್ ಮತ್ತು ಅಂಗಡಿಗಳ ನಡುವೆ ನಮ್ಮ ಬಟ್ಟೆ ಬ್ಯಾಗ್ ತೆಗೆದುಕೊಳ್ಳುವಂತೆ ಒಪ್ಪಂದ ಮಾಡಿಸಿದೆ. ಇದರಿಂದಾಗಿ ನಾವು ಗ್ರಾಹಕರನ್ನು ಹುಡುಕಿ ಅಲೆಯುವುದು ತಪ್ಪಿದೆ, ಬ್ಯಾಗ್‍ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎನ್ನುತ್ತಾರೆ.

    ಎನಿಟೈಮ್ ಬ್ಯಾಗ್ ಮಿಷನ್‍ಗಳು: ಕೆಲವೇ ದಿನದಲ್ಲಿ ಈ ಮಹಿಳೆಯರು ತಯಾರಿಸಿದ ಬಟ್ಟೆ ಬ್ಯಾಗ್‍ಗಳನ್ನು ನೇರವಾಗಿ ನಗರಸಭೆ ಖರೀದಿಸಿ ಎಟಿಎಮ್ ಗಳು ಹೇಗಿವೆಯೋ ಅದೇ ಮಾದರಿಯಲ್ಲಿ ಎನಿಟೈಮ್ ಬ್ಯಾಗ್ ಮಿಷನ್‍ಗಳನ್ನು ನಗರದಲ್ಲಿ ಅಳವಡಿಸಲು ಸಿದ್ಧತೆ ನಡೆಸಿದೆ. ಈ ಮಿಷನ್‍ನಲ್ಲಿ ಐದು ರೂ. ನಾಣ್ಯ ಹಾಕಿದರೆ ಒಂದು ಬಟ್ಟೆ ಬ್ಯಾಗ್ ಬರುವಂತೆ ವ್ಯವಸ್ಥೆ ರೂಪಿಸಿದ್ದು, ಸಿದ್ಧತೆ ನಡೆದಿದೆ ಎಂದು ನಗರಸಭಾ ಆಯುಕ್ತ ಯೋಗೀಶ್ವರ್ ತಿಳಿಸಿದ್ದಾರೆ.

    ಹೀಗಾಗಿ ಈಗಾಗಲೇ ಹಲವು ಮಹಿಳೆಯರು ಬಟ್ಟೆ ಬ್ಯಾಗ್ ತಯಾರಿಸುವಲ್ಲಿ ನಿರತರಾಗಿದ್ದು, ತಮ್ಮ ಬಿಡುವಿನ ಸಮಯದಲ್ಲಿ ಬಟ್ಟೆ ಬ್ಯಾಗ್ ಹೊಲಿಯುವ ಮೂಲಕ ಕೈತುಂಬ ಹಣ ಗಳಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿಷೇಧ ಈ ಬಡ ಮಹಿಳೆಯರ ಬಾಳಲ್ಲಿ ಬೆಳಕಾಗುತ್ತಿದೆ.

  • ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ಗುಂಡು ಹಾರಿಸಿದ ವ್ಯಕ್ತಿ

    ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ಗುಂಡು ಹಾರಿಸಿದ ವ್ಯಕ್ತಿ

    ಲಕ್ನೋ: ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಿದ ಮಹಿಳೆ ಮೇಲೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ಡಿಸೆಂಬರ್ 1ರಂದು ಉತ್ತರ ಪ್ರದೇಶದ ಚಿತ್ರಕೂಟ್‍ನಲ್ಲಿ ನಡದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಈ ಘಟನೆಯ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಒಂದು ನಿಮಿಷದ ವಿಡಿಯೋದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆ ಡ್ಯಾನ್ಸ್ ಮಾಡಿ ನಿಲ್ಲಿಸಿದ ತಕ್ಷಣ ಗುಂಡು ಹಾರಿಸುತ್ತೇನೆ ಎಂದು ಹೇಳಿದ್ದಾನೆ.

    ಈ ಸಂದರ್ಭದಲ್ಲಿ ಆರೋಪಿ ಜೊತೆ ಮತ್ತೊಬ್ಬ ವ್ಯಕ್ತಿ, ಅಣ್ಣ ನೀನು ಈಗ ಗುಂಡು ಹಾರಿಸಲೇ ಬೇಕು ಎಂದು ಹೇಳಿದ್ದಾನೆ. ಈ ವೇಳೆ ಗುಂಡು ಹಾರಿ ಮಹಿಳೆಯ ಮುಖಕ್ಕೆ ತಾಗಿದೆ. ತಕ್ಷಣ ಎಲ್ಲರೂ ಆಘಾತಕ್ಕೆ ಒಳಗಾದರು. ಮಹಿಳೆಯ ಮುಖಕ್ಕೆ ಗುಂಡು ಬಿದ್ದಿದೆ.

    ಡಿಸೆಂಬರ್ 1ರಂದು ಈ ವಿಡಿಯೋ ಸೆರೆ ಹಿಡಿಯಲಾಗಿದ್ದು, ಮಹಿಳೆ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಳು. ಗ್ರಾಮದ ಮುಖ್ಯಸ್ಥರ ಕುಟುಂಬದ ಸದಸ್ಯರೊಬ್ಬರು ಮಹಿಳೆಗೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಅಪರಿಚಿತ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಅಂಕಿತ್ ಮಿಥಲ್, ನಾವು ಆರೋಪಿಯನ್ನು ಬಂಧಿಸಲು ಪ್ರಯತ್ನ ಮಾಡುತ್ತಿದ್ದೇವೆ. ಆರೋಪಿಯನ್ನು ನ್ಯಾಯಾಲಯಕ್ಕೆ ತರಲು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಕಾನ್ಪುರ ಆಸ್ಪತ್ರೆಯಲ್ಲಿ ಮಹಿಳೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ತಿಳಿಸಿದರು.

  • ಸಂಪೂರ್ಣ ಅಪರಾಧ ಮುಕ್ತ ರಾಜ್ಯವನ್ನಾಗಿಸಲು ರಾಮನೂ ಭರವಸೆ ನೀಡುತ್ತಿರಲಿಲ್ಲ – ಯುಪಿ ಮಂತ್ರಿ

    ಸಂಪೂರ್ಣ ಅಪರಾಧ ಮುಕ್ತ ರಾಜ್ಯವನ್ನಾಗಿಸಲು ರಾಮನೂ ಭರವಸೆ ನೀಡುತ್ತಿರಲಿಲ್ಲ – ಯುಪಿ ಮಂತ್ರಿ

    ಲಕ್ನೋ: ಪ್ರಸ್ತುತ ಸನ್ನಿವೇಶದಲ್ಲಿ ಶ್ರೀರಾಮನೂ ಸಹ ಸಂಪೂರ್ಣ ಅಪರಾಧ ಮುಕ್ತ ರಾಜ್ಯವನ್ನಾಗಿಸುವ ಭರವಸೆ ನೀಡುತ್ತಿರಲಿಲ್ಲ ಎಂಬ ಉತ್ತರ ಪ್ರದೇಶ ಸರ್ಕಾರದ ಸಚಿವರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ತೆಲಂಗಾಣದ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ನಡೆದ ಬೆನ್ನಲ್ಲೇ ಉತ್ತರ ಪ್ರದೇಶದ ಉನ್ನಾವ್‍ನಲ್ಲಿ ಅದೇ ರೀತಿಯ ಪ್ರಕರಣ ಜರುಗಿತ್ತು. ಅತ್ಯಾಚಾರಗೈದಿದ್ದಲ್ಲದೆ ಮಹಿಳೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.

    ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ರಣವೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಅಪರಾಧಿಗಳು ಯಾರೇ ಆಗಿದ್ದರೂ ಶಿಕ್ಷೆ ವಿಧಿಸಬೇಕು. ಈ ಕುರಿತು ರಾಜಕೀಯ ಮಾಡಬಾರದು. ಉನ್ನಾವ್ ಪ್ರಕರಣಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಈ ಸಂದರ್ಭದಲ್ಲಿ ಶ್ರೀ ರಾಮನಿದ್ದಿದ್ದರೂ ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸುವ ಕುರಿತು ಶೇ.100ರಷ್ಟು ಭರವಸೆ ನೀಡುತ್ತಿರಲಿಲ್ಲ. ಅಪರಾಧಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಾರೆ. ಇದೀಗ ಉತ್ತರ ಪ್ರದೇಶದಲ್ಲಿ ಯಾವುದೇ ರೀತಿಯ ಭಯದ ವಾತಾವರಣವಿಲ್ಲ ಎಂದು ಹೇಳಿದ್ದಾರೆ.

    ಕೋರ್ಟಿಗೆ ಹೋಗುತ್ತಿದ್ದ 23 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸಂತ್ರಸ್ತೆಗೆ ಬೆಂಕಿ ಹಚ್ಚಿ, ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶ ಉನ್ನಾವೋದಲ್ಲಿ ನಡೆದಿದೆ. ಇದನ್ನೂ ಓದಿ: ಅತ್ಯಾಚಾರಿಗಳನ್ನು ಗಲ್ಲಿಗೇರಿಸುವುದಕ್ಕೆ ನನ್ನ ಸಹಮತವಿಲ್ಲ – ಪವನ್ ಕಲ್ಯಾಣ್

    ಸಂತ್ರಸ್ತೆಯ ದೇಹ ಶೇ.90ರಷ್ಟು ಸುಟ್ಟ ನಂತರವೂ ಸಹಾಯಕ್ಕಾಗಿ ಸುಮಾರು ಒಂದು ಕಿಲೋಮೀಟರ್ ಓಡಿ, ಸ್ವತಃ ಅವಳೇ ಪೊಲೀಸರಿಗೆ ಕರೆ ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಈ ಅಮಾನವೀಯ ಘಟನೆಯ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಮಹಿಳೆಯು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

    ಈ ಪ್ರಕರಣದ ಪ್ರತ್ಯಕ್ಷದರ್ಶಿ ರವೀಂದ್ರ ಪ್ರಕಾಶ್ ಪ್ರಮುಖ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದ ಸಂತ್ರಸ್ತೆಯು ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಳು. ಆದರೆ ಬೆಂಕಿಯನ್ನು ಕಂಡು ನಾವು ಭಯಭೀತರಾಗಿದ್ದೇವು. ಯಾರೊಬ್ಬರೂ ರಕ್ಷಣೆಗೆ ನಿಲ್ಲದ ಪರಿಣಾಮ ಸಂತ್ರಸ್ತೆಯು ಸಂಪೂರ್ಣವಾಗಿ ಸುಟ್ಟುಹೋದಳು ಎಂದು ತಿಳಿಸಿದರು. ಇದನ್ನೂ ಓದಿ: ಶೇ.90ರಷ್ಟು ದೇಹ ಸುಟ್ಟ ನಂತರವೂ 1 ಕಿ.ಮೀ ಓಡಿ ಅತ್ಯಾಚಾರ ಸಂತ್ರಸ್ತೆಯಿಂದ 100ಕ್ಕೆ ಕರೆ

    ಮಹಿಳೆಯನ್ನು ಕೆಲ ತಿಂಗಳ ಹಿಂದೆ ಅತ್ಯಾಚಾರ ಮಾಡಲಾಗಿತ್ತು. ಮಾರ್ಚ್‍ನಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ನಂತರ ಕುಟುಂಬದವರ ಒತ್ತಾಯದ ಮೇರೆಗೆ ಮಹಿಳೆಯು ಪ್ರಮುಖ ಆರೋಪಿಯನ್ನೇ ವಿವಾಹವಾಗಿದ್ದಳು. ಮದುವೆ ನಂತರ ಒಬ್ಬರೂ ಬೇರೆ ಮನೆ ಮಾಡಿದ್ದು, ಈ ವೇಳೆ ಆರೋಪಿಯು ಈಕೆಯನ್ನು ಪತ್ನಿಯಾಗಿ ಸ್ವೀಕರಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣ ಇಡಿ ಉತ್ತರ ಪ್ರದೇಶದಲ್ಲಿ ತೀವ್ರಸಂಚಲನವನ್ನೇ ಮೂಡಿಸಿದ್ದು, ಮುಖ್ಯಮಂತ್ರಿ ಆದಿತ್ಯನಾಥ್ ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ ಮಹಿಳೆ ಸಜೀವ ದಹನ

    ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲೆ ಮಹಿಳೆ ಸಜೀವ ದಹನ

    ಬೀದರ್: ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲಿಯೇ ಮಹಿಳೆ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ನಿರ್ಣಾ ಕ್ರಾಸ್ ಬಳಿ ನಡೆದಿದೆ.

    ಕಲ್ಯಾಣಿ (42) ಸಜೀವ ದಹನವಾದ ಮಹಿಳೆ. ಇಂದು ಬೆಳಗ್ಗಿನ ಜಾವ ಒಂದೇ ಕುಟುಂಬದ ನಾಲ್ವರು ಹುಂಡೈ ಕಾರಿನಲ್ಲಿ ಮಹಾರಾಷ್ಟ್ರ ಉದಗೀರ್ ನಿಂದ ಹೈದರಾಬಾದ್‍ಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಕಾರಿನ ಹಿಂಬದಿಯ ಎಸಿ ಬಿಸಿಯಾಗಿ ಸ್ಫೋಟಗೊಂಡಿದೆ. ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮಹಿಳೆ ಸಜೀವ ದಹನವಾಗಿದ್ದಾರೆ.

    ಕಾರಿಗೆ ಬೆಂಕಿ ತಗುಲಿದ ಗಲಿಬಿಲಿಯಲ್ಲಿ ಸೀಟ್ ಬೆಲ್ಟ್ ತೆಗೆಯಲಾಗದೆ ಕಲ್ಯಾಣಿ ಸೀಟ್‍ನಲ್ಲಿಯೇ ಸಜೀವ ದಹನವಾಗಿರುವ ದೃಶ್ಯ ಎಲ್ಲರ ಕರಳು ಕಿತ್ತು ಬರುವಂತ್ತಿದೆ. ಈ ಘಟನೆಯಲ್ಲಿ ಪತಿ ಉದಯಕುಮಾರ್ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

    ಸದ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮನ್ನಾಏಖೇಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.