Tag: women

  • ಚಿಕಿತ್ಸೆ ಸಂದರ್ಭದಲ್ಲಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪದಡಿ ಪ್ರತಿಭಟನೆ

    ಚಿಕಿತ್ಸೆ ಸಂದರ್ಭದಲ್ಲಿ ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪದಡಿ ಪ್ರತಿಭಟನೆ

    ಕೊಪ್ಪಳ: ಕಾಯಿಲೆಯೊಂದಕ್ಕೆ ಚಿಕಿತ್ಸೆ ಪಡೆಯಲು ಆಗಮಿಸಿದ್ದ ಮಹಿಳೆ ವೈದ್ಯರು ನೀಡಿದ ರಾಂಗ್ ಡೋಸ್‍ನಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳದ ಗಂಗಾವತಿ ನಗರದಲ್ಲಿ ನಡೆದಿದೆ.

    ಮೃತ ಮಹಿಳೆ ಕಂಪ್ಲಿ ನಗರದ ಚಪ್ಪರದಳ್ಳಿಯ ನಿವಾಸಿ ಚಾಂದ್‍ಬೀ (49) ಎಂದು ಗುರುತಿಸಲಾಗಿದೆ. ದೇಹದಲ್ಲಿ ಕುರುವಿನ ಆಕಾರದಲ್ಲಿ ಗಡ್ಡೆ ಇತ್ತು. ಅದನ್ನು ನಿವಾರಿಸುವ ಉದ್ದೇಶಕ್ಕೆ ಮಹಿಳೆ ಇಲ್ಲಿನ ಲಕ್ಷ್ಮಿ ನರ್ಸಿಂಗ್ ಹೊಂ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದ ವೈದ್ಯರು, ರೋಗಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಿ ಚುಚ್ಚುಮದ್ದನ್ನು ನೀಡಿದ್ದಾರೆ. ಚುಚ್ಚುಮದ್ದು ನೀಡಿದ ನಂತರ ಮಹಿಳೆಯ ದೇಹದ ಬಣ್ಣ ಬದಲಾಗಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತಳ ಸಂಬಂಧಿಕರು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿ ಕುಳಿತವರನ್ನು ಸಮಾಧಾನ ಪಡಿಸಿದ್ದಾರೆ.

    ಈ ಸಂಬಂಧ ಮೃತಳ ಸಂಬಂಧಿಕರು ನಗರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

  • ಗ್ರಾಮಪಂಚಾಯ್ತಿ ಕಾರ್ಯದರ್ಶಿಯ ಪ್ರೇಮಪಲ್ಲಂಗಕ್ಕೆ ಅಮಾಯಕ ಮಹಿಳೆ ಆತ್ಮಹತ್ಯೆ

    ಗ್ರಾಮಪಂಚಾಯ್ತಿ ಕಾರ್ಯದರ್ಶಿಯ ಪ್ರೇಮಪಲ್ಲಂಗಕ್ಕೆ ಅಮಾಯಕ ಮಹಿಳೆ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಮನೆಯಲ್ಲೇ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದಿಮ್ಮಘಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ರಾಧಾ(27) ಆತ್ಮಹತ್ಯೆಗೆ ಶರಣಾದ ಮಹಿಳೆ. 2010ರಲ್ಲೇ ರಾಧಾಳಿಗೆ ಮದುವೆಯಾಗಿತ್ತು. ಮದುವೆಯಾದ ಹೊಸದರಲ್ಲೇ ಪತಿ ತೀರಿಕೊಂಡ ಹಿನ್ನೆಲೆಯಲ್ಲಿ ರಾಧಾ ತನ್ನ ತಾಯಿ ಮನೆಯಲ್ಲಿ ಉಳಿದುಕೊಂಡಿದ್ದಳು. ಆದರೆ ಕಳೆದ 3-4 ವರ್ಷಗಳಿಂದ ಇಡಗೂರು ಗ್ರಾಮ ಪಂಚಾಯಯ್ತಿಯ ಕಾರ್ಯದರ್ಶಿ ಕಾರ್ತಿಕ್ ಜೊತೆ ಪ್ರೀತಿ-ಪ್ರೇಮ ಸಂಬಂಧ ಬೆಳೆಸಿದ್ದಳು.

    ಜಮೀನು ಅಳತೆ ದಾಖಲೆ ವಿಚಾರವಾಗಿ ಗ್ರಾಮಕ್ಕೆ ಬಂದಿದ್ದ ಕಾರ್ತಿಕ್, ರಾಧಾಳಿಗೆ ಪತಿಯಿಲ್ಲ ಎನ್ನುವ ಅಸಹಾಯಕತೆಯನ್ನಿ ಬಂಡವಾಳ ಮಾಡಿಕೊಂಡು ಆಕೆಯ ಜೊತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದನು. ಹೀಗಾಗಿ ತನ್ನನ್ನು ಕಾರ್ತಿಕ್ ಮದುವೆಯಾಗ್ತಾನೆ ಎಂದು ರಾಧಾ ನಂಬಿದ್ದಳು. ಆದರೆ ಕಳೆದ ಒಂದು ವರ್ಷದ ಹಿಂದೆಯೇ ಕಾರ್ತಿಕ್ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ.

    ಆ ವಿಷಯ ಸಹ ಇತ್ತೀಚೆಗೆ ರಾಧಾಳಿಗೆ ಗೊತ್ತಾಗಿದೆ. ಜೋರಾಗಿ ದಬಾಯಿಸಿ ಕೇಳಿದ್ದಕ್ಕೆ ನಾನು ನಿನ್ನನ್ನು ಮದುವೆ ಆಗುವುದಿಲ್ಲ ಏನ್ ಮಾಡ್ಕೋತಿಯಾ ಮಾಡ್ಕೋ ಹೋಗು ಎಂದು ಆವಾಜ್ ಹಾಕಿದ್ದನು. ಈ ನಡುವೆ ಕಾರ್ತಿಕ್‍ನ ಸಂಬಂಧದ ಬಗ್ಗೆ ಪತ್ನಿಗೂ ಸಹ ಗೊತ್ತಾಗಿ ಎರಡು ಮನೆಯವರು ಸೇರಿ ರಾಜೀ ಪಂಚಾಯತಿ ಸಹ ಮಾಡಿದ್ದರು. ಕೊನೆಗೆ ಒಂದಷ್ಟು ಹಣ ಕೊಟ್ಟು ರಾಧಾಳ ಸಂಬಂಧ ಕಡಿದುಕೊಳ್ಳೋಕೆ ಕಾರ್ತಿಕ್ ಮುಂದಾಗಿದ್ದನು. ಇದೇ ನೋವಿನಲ್ಲಿದ್ದ ರಾಧಾ ತನ್ನ ಬಾಳು ಹಿಂಗಾಯತಲ್ಲಾ ಎಂದು ಇಂದು ಬೆಳಗ್ಗೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ರಾಧಾ ಆತ್ಮಹತ್ಯೆ ಸುದ್ದಿ ತಿಳಿದ ಕಾರ್ತಿಕ್ ನಾಪತ್ತೆಯಾಗಿದ್ದು, ಗೌರಿಬಿದನೂರು ಪೊಲೀಸರು ಹುಟುಕಾಟ ನಡೆಸಿದ್ದಾರೆ. ಸದ್ಯ ಮಗಳ ಸಾವಿನಿಂದ ಕಂಗಲಾಗಿರುವ ತಾಯಿ ನಾಗಮ್ಮ ಕಾರ್ತಿಕ್ ವಿರುದ್ಧ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

  • ಬಂದೂಕು ತರಬೇತಿಯಲ್ಲಿ ಕೊಡಗಿನ ಮಹಿಳೆಯರ ಉತ್ಸಾಹ

    ಬಂದೂಕು ತರಬೇತಿಯಲ್ಲಿ ಕೊಡಗಿನ ಮಹಿಳೆಯರ ಉತ್ಸಾಹ

    ಮಡಿಕೇರಿ: ಕೊಡಗು ಜಿಲ್ಲೆ ಪೊಲೀಸ್ ಇಲಾಖಾ ವತಿಯಿಂದ ನಾಗರಿಕರಿಗೆ ಬಂದೂಕು ಉಪಯೋಗದ ಬಗ್ಗೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೋಪ್ಪದಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.

    ಈ ತರಬೇತಿಯನ್ನು ಮುಖ್ಯವಾಗಿ ಬಂದೂಕನ್ನು ಅಪಾಯವಿಲ್ಲದೆ ಬಳಸುವ ಬಗ್ಗೆ ಹಾಗೂ ಅದರ ನಿರ್ವಹಣೆಯ ಬಗ್ಗೆ, ನಾಗರಿಕರು ಮತ್ತು ಪೊಲೀಸರ ನಡುವೆ ಬಾಂಧವ್ಯ ಹೆಚ್ಚಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಬಂದೂಕಿನಿಂದ ಸಂಭವಿಸಬಹುದಾದ ಅನಾಹುತಗಳು ಮತ್ತು ಅಪರಾಧಗಳು ನಡೆಯದಂತೆ ಮುಂಜಾಗೃತಾ ಕ್ರಮಗಳ ಬಗ್ಗೆ ತರಬೇತಿಯಲ್ಲಿ ತಿಳಿಸಲಾಗುತ್ತಿದೆ.

    ತುರ್ತು ಪರಿಸ್ಥಿತಿಯಲ್ಲಿ ಸದರಿ ತರಬೇತಿ ಪಡೆದ ನಾಗರಿಕರನ್ನು ಪೊಲೀಸರೊಂದಿಗೆ ಸಹಾಯಕರಾಗಿ ಬಳಸಲು ಸಹಾಯಕಾರಿಯಾಗಿದೆ. ಹೊಸದಾದ ಬಂದೂಕು ಪರವಾನಗಿಯನ್ನು ಪಡೆಯಲು ಈ ತರಬೇತಿಯ ಅವಶ್ಯಕತೆ ಇರುತ್ತದೆ. ಈ ತರಬೇತಿಯಲ್ಲಿ ಒಟ್ಟು 59 ಜನ ಗೋಣಿಕೊಪ್ಪದ ಸುತ್ತಮುತ್ತಲಿನ ನಾಗರಿಕರು ಭಾಗವಹಿಸಿದ್ದು, ಅವರ ಪೈಕಿ 8 ಮಂದಿ ಮಹಿಳೆಯರಾಗಿದ್ದಾರೆ. ಹೀಗಾಗಿ ಮಹಿಳೆಯರು ಬಂದೂಕು ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದೆ.

    ಈ ಬಂದೂಕು ತರಬೇತಿ ಶಿಬಿರ ಅನುಕೂಲವಾಗಿದೆ. ತೋಟದ ಮನೆಯಲ್ಲಿ ಒಂಟಿಯಾಗಿ ಮಹಿಳೆಯರು ಇದ್ದ ಸಂದರ್ಭ ಅಪಾಯ ಎದುರಾದಲ್ಲಿ ಮನೆಯಲ್ಲಿರುವ ಬಂದೂಕನ್ನು ಬಳಸುವ ಅವಕಾಶ ಈ ತರಬೇತಿಯಲ್ಲಿ ಲಭ್ಯವಾಗಿದೆ ಎಂದು ಮಹಿಳೆಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

    ಶಿಬಿರದಲ್ಲಿ ಪುರುಷರು ಸೇರಿದಂತೆ ಒಟ್ಟು 59 ಜನರು ಭಾಗವಹಿಸಿದ್ದಾರೆ. ಈ ತರಬೇತಿಯನ್ನು ಡಿ.ಎ.ಆರ್. ಘಟಕದ ಆಯುಧಗಾರದ ನಿರ್ವಾಹಕರಾದ ಎಸ್.ಕೆ. ವೆಂಕಪ್ಪ,ಅವರ ನೇತೃತ್ವದಲ್ಲಿ ಬಂದೂಕು ಶಿಬಿರ ನಡೆಸಲಾಗುತ್ತಿದೆ.

  • ನಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ?

    ನಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ?

    – ದೆಹಲಿ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ
    – ನ್ಯಾಯಾಲಯದಲ್ಲಿ ಅವನಲ್ಲ, ಅವಳು ವಾದ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ ನಡೆದಿದೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಕೋರ್ಟ್ ಮುಂದೆ ತಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ ಎಂದು ಸಮರ್ಥಿಸಿಕೊಂಡಿದ್ದಾನೆ.

    ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತಿತ್ತು. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದ ಆರೋಪಿ ಮಹಿಳೆಯರ ಬಟ್ಟೆ ಧರಿಸಿ ಮೇಕಪ್ ಹಾಗೂ ಹೇರ್ ಸ್ಟೈಲ್ ಮಾಡಿಕೊಂಡು ವಿಚಾರಣೆ ಆಗಮಿಸಿದ್ದನ್ನು ನೋಡಿ ನ್ಯಾಯಧೀಶರು ಕೆಲಕಾಲ ಗೊಂದಲಕ್ಕೆ ಒಳಗಾದರು.

    ನ್ಯಾಯಧೀಶರ ಮುಂದೆ ವಾದ ಮಂಡಿಸಿದ ಆರೋಪಿ, ತನಗೆ ಎಂದಿಗೂ ಮಹಿಳೆಯರ ಬಗ್ಗೆ ಯಾವುದೇ ಆಕರ್ಷಣೆ ಇಲ್ಲ. ಅಲ್ಲದೆ ಸ್ವತಃ ಮಹಿಳೆಯಾಗುವ ಪ್ರಕ್ರಿಯೆಯಲ್ಲಿದ್ದೇನೆ. ಬಾಲ್ಯದಿಂದಲೂ ಲೈಂಗಿಕ ಡಿಸ್ಫೊರಿಯಾದಿಂದ (sexual dysphoria) ಬಳಲುತ್ತಿದ್ದೇನೆ. ಲೈಂಗಿಕ ಡಿಸ್ಫೊರಿಯಾ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೈವಿಕ ಲಿಂಗಕ್ಕೆ ವಿರುದ್ಧವಾಗಿ ಸ್ತ್ರೀ ಅಥವಾ ಪುರುಷ ಎಂದು ತನ್ನ ಗುರುತನ್ನು ಅನುಭವಿಸಲು ಪ್ರಾರಂಭಿಸುವ ಸಮಸ್ಯೆಯಾಗಿದೆ ಎಂದು ಕೋರ್ಟ್ ಮುಂದೆ ಆರೋಪಿ ವಿವರಿಸಿದ್ದಾನೆ. ತನ್ನನ್ನು ತಾನು ಒಬ್ಬ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾನೆ. ಲೈಂಗಿಕ ಕಿರುಕುಳ ನೀಡಿರುವ ಮಹಿಳೆ ನನಗೆ ಸಹೋದರಿ ಸಮ. ಹೀಗಿರುವಾಗ ಹೇಗೆ ಲೈಂಗಿಕ ಕಿರುಕುಳ ನೀಡಲು ಸಾಧ್ಯ ಎಂದು ಕೋರ್ಟ್ ಮುಂದೆ ಪ್ರಶ್ನಿಸಿದ್ದಾನೆ. ಹೀಗಾಗಿ ಈ ಆರೋಪದಲ್ಲಿ ಹುರುಳಿಲ್ಲ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಆರೋಪದ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಆದರೆ ಆರೋಪಿಯ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

    ಕೋರ್ಟ್ ಮುಂದೆ ಹಾಜರಾಗಿದ್ದ ದೂರುದಾರ ಮಹಿಳೆ ಆರೋಪಿಯ ಈ ವಾದವನ್ನು ಒಪ್ಪಿಕೊಂಡಿಲ್ಲ. ಕೋರ್ಟ್ ಈ ಪ್ರಕರಣವನ್ನು ಇತ್ಯರ್ಥ ಪಡಿಸುವ ಮನಸ್ಸು ಮಾಡಿದ್ದರೂ ಮಹಿಳೆಯ ಪರ ವಕೀಲರು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡಲು ಕೋರ್ಟ್ ನಿರಾಕರಿಸಿತು.

    ಪ್ರಕರಣದ ಹಿನ್ನೆಲೆ:
    2014ರಿಂದ ದೂರುದಾರ ಮಹಿಳೆ ಮತ್ತು ಆರೋಪಿ ಇಬ್ಬರು ನೊಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2016ರ ಅಕ್ಟೋಬರ್‍ನಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ, ದೆಹಲಿಯ ಕೇನ್ನಾಟ್ ಪ್ಲೇಸ್‍ನಲ್ಲಿರುವ ಪಬ್‍ವೊಂದರಲ್ಲಿ ಪಾರ್ಟಿ ವೇಳೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತಾವು ಕೆಲಸ ಮಾಡುತ್ತಿದ್ದ ಕಂಪನಿಗೆ ಹಲವಾರು ಬಾರಿ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆರೋಪಿಗಳ ಪರವಾಗಿ ತೀರ್ಮಾನ ತೆಗದುಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಕಳೆದ ಆಗಸ್ಟ್ ನಲ್ಲಿ ಕೆಳ ನ್ಯಾಯಾಲಯವು ಆರೋಪಿಯ ವಿರುದ್ಧ ವಿಚಾರಣೆ ನಡೆಯುತಿತ್ತು. ಈ ಪ್ರಕರಣ ರದ್ದು ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಆರೋಪಿ ಅರ್ಜಿ ಸಲ್ಲಿಸಿದ್ದನು.

  • ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ವಾಮಾಚಾರಕ್ಕೆ ಮಹಿಳೆ ತತ್ತರ – ಬಾಯಿಂದ ಬೀಳುತ್ತಿವೆ ಕೂದಲು, ಮಣ್ಣಿನ ಗೊಂಬೆ, ಅನ್ನದ ಬುತ್ತಿ

    ಹಾವೇರಿ: ಕಳೆದ ನಾಲ್ಕು ತಿಂಗಳಿನಿಂದ ಮಹಿಳೆಯೊಬ್ಬಳು ವಾಮಾಚಾರಕ್ಕೆ ತತ್ತರಿಸಿ ಹೋಗಿದ್ದಾರೆ. ಮಹಿಳೆ ಬಾಯಿಂದ ಕೂದಲು, ಮಣ್ಣಿನ ಗೊಂಬೆಗಳು ಹಾಗೂ ಅನ್ನದ ಬುತ್ತಿ ಬೀಳುತ್ತಿರುವ ವಿಚಿತ್ರ ಘಟನೆ ಹಾವೇರಿ ಜಿಲ್ಲೆ ತಿಳುವಳ್ಳಿ ಗ್ರಾಮದಲ್ಲಿ ನಡೆದಿದೆ.

    ಸುನಂದಾ ಗೋಂದ್ಕರ (45) ತೊಂದರೆ ಅನುಭವಿಸುತ್ತಿರುವ ಮಹಿಳೆ. ಸುನಂದಾ ಬಾಯಿಂದ ಪ್ರತಿನಿತ್ಯ ವಸ್ತುಗಳು ಬರುತ್ತಿವೆ. ಸುನಂದಾ, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದ ನಿವಾಸಿವಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ಈ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯಲ್ಲಿದ್ದಾಗ ಬಾಯಿಯಿಂದ ನಿಂಬೆಹಣ್ಣು, ಕಬ್ಬಿಣದ ಮೊಳೆ, ಕೂದಲು, ಮಣ್ಣಿನ ಗೊಂಬೆಗಳು ಪ್ರತಿನಿತ್ಯ ಬೀಳುತ್ತಿದ್ದವು. ಆಗ ಜಿಲ್ಲೆಯ ಎಲ್ಲಾ ಆಸ್ಪತ್ರೆಗೆ ತೋರಿಸಿದ್ದಾರೆ.

    ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ನಾರ್ಮಲ್ ಎಂದು ಬಂದಿತ್ತು. ಏನೋ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದರು. ಮತ್ತೆ ಮನೆಗೆ ಹೋದ ಮೇಲೆ ಬಾಯಿಯಿಂದ ವಸ್ತುಗಳು ಬರುತ್ತೆವೆ. ಇದರಿಂದ ಮಹಿಳೆ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೊನೆಗೆ ತೊಂದರೆ ನಿವಾರಣೆಗಾಗಿ ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಿವಾಲಿಬಸವೇಶ್ವರ ಮಠದ ಮೂಕಪ್ಪ ಸ್ವಾಮೀಜಿಗಳ ಮೊರೆ ಬಂದಿದ್ದಾರೆ.

    ಕಳೆದ ಏಳು ದಿನಗಳಿಂದ ಮಠದಲ್ಲಿ ಆಶ್ರಯ ಪಡೆದ ಮೇಲೆ ಮಹಿಳೆಗೆ ತೊಂದರೆ ಕಡಿಮೆಯಾಗುತ್ತಿದೆ. ಸದ್ಯ ಪ್ರತಿದಿನ ಮಠದಲ್ಲಿ ಒಂದು ಅಥವಾ ಎರಡು ಬಾರಿ ಬಾಯಿಯಿಂದ ಕೂದಲು ಬರುತ್ತಿವೆ. ಮಹಿಳೆ ಬಾಯಿಯಿಂದ ಬರುತ್ತಿರುವ ವಸ್ತುಗಳನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮಹಿಳೆ ಯಾರೋ ವಾಮಾಚಾರ ಅಥವಾ ಬಾನಾಮತಿ ಮಾಡಿಸಿದ್ದಾರೆ. ಪತಿಯ ಮನೆಯವರು ವರದಕ್ಷಿಣೆಗಾಗಿ ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.

  • ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಹೆಗಲ ಮೇಲೆ 4 ಕಿ.ಮೀ ಹೊತ್ತುಕೊಂಡು ಹೋದ ಪೇದೆ

    ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಹೆಗಲ ಮೇಲೆ 4 ಕಿ.ಮೀ ಹೊತ್ತುಕೊಂಡು ಹೋದ ಪೇದೆ

    ಹೈದರಾಬಾದ್: ಆಂಧ್ರ ಪ್ರದೇಶದ ಕಡಪದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಪೇದೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಮಾನವೀಯತೆ ತೋರಿಸಿದ್ದಾರೆ.

    ಮಾಜಿ ಶಾಸಕ ಅಕಪತಿ ಅಮರನಾಥ ರೆಡ್ಡಿ ಜೊತೆ ಹಲವು ಮಂದಿ ತಿರುಪತಿಗೆ ಹೋಗಿದ್ದರು. ಇದರಲ್ಲಿ ಒಬ್ಬ ಮಹಿಳೆ ಕೂಡ ಭಾಗಿಯಾಗಿದ್ದು, ನಡೆದುಕೊಂಡು ಹೋಗುವಾಗ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಯಾತ್ರಿಗಳಿಗೆ ಇಲ್ಲಿ ಯಾವುದೇ ವಾಹನ ಕೂಡ ಇರಲಿಲ್ಲ. ಹಾಗಾಗಿ ಎಲ್ಲರೂ ನಡೆದುಕೊಂಡು ಹೋಗುತ್ತಿದ್ದರು.

    ಮಹಿಳೆಯ ಸ್ಥಿತಿ ನೋಡಿದ ಮಾಜಿ ಶಾಸಕರ ಭದ್ರತಾ ಸಿಬ್ಬಂದಿ ಕುಲ್ಲಯಪ್ಪ ಮಹಿಳೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು 4 ಕಿ.ಮೀ ನಡೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಸದ್ಯ ಮಹಿಳೆ ತಿರುಮಲದ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ.

    ಪೇದೆ ಅವರ ಈ ಕರ್ತವ್ಯಕ್ಕೆ ಎಸ್‍ಪಿ ಕೆಕೆಎನ್ ಅನ್ಬುರಾಜನ್ ಶ್ಲಾಘಿಸಿದ್ದಾರೆ. ಅಲ್ಲದೆ ಕುಲ್ಲಯಪ್ಪ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು ಎಲ್ಲರಿಗೂ ಸಹಾಯ ಮಾಡಬೇಕು ಎಂದು ತಮ್ಮ ಪೊಲೀಸ್ ಸಿಬ್ಬಂದಿಗೆ ಸಲಹೆ ನೀಡಿದ್ದರು.

    ಪೇದೆ ಮಹಿಳೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಪೇದೆಯನ್ನು ಹೊಗಳುತ್ತಿದ್ದಾರೆ.

  • ಮೈಕ್ರೋ ಫೈನಾನ್ಸ್ ಕಾಟ – ಕಿರುಕುಳಕ್ಕೆ ಬೇಸತ್ತ ಮಹಿಳೆಯರಿಂದ ಪ್ರತಿಭಟನೆ

    ಮೈಕ್ರೋ ಫೈನಾನ್ಸ್ ಕಾಟ – ಕಿರುಕುಳಕ್ಕೆ ಬೇಸತ್ತ ಮಹಿಳೆಯರಿಂದ ಪ್ರತಿಭಟನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ನವರ ಕಾಟ ಹೆಚ್ಚಾಗಿದ್ದು, ಈ ಕೂಡಲೇ ಸಂತ್ರಸ್ತ ಮಹಿಳೆಯರ ಸಾಲ ಮನ್ನಾ ಮಾಡುವಂತೆ ಹಾಗೂ ಮೈಕ್ರೋ ಫೈನಾನ್ಸ್‌ಗಳನ್ನು ಮುಚ್ಚುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ನೂರಾರು ಮಹಿಳೆಯರು ಈ ಕೂಡಲೇ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದುಕೊಂಡವರ ಸಾಲವನ್ನು ಋಣಮುಕ್ತ ಕಾಯ್ದೆಯಡಿ ಜಾರಿಗೆ ತಂದು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದಲ್ಲಿ ರೈತ ಮತ್ತು ಕೂಲಿ ಕಾರ್ಮಿಕ ಮಹಿಳೆಯರ ಗುಂಪುಗಳನ್ನಾಗಿ ಮಾಡಿ ಮೈಕ್ರೋ ಫೈನಾನ್ಸ್‌ನವರು ಸಾಲ ನೀಡಿ ನಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ನೊಂದ ಮಹಿಳೆಯರು ಆರೋಪಿಸಿದರು.

    ಗುಂಪಿನ ಆಧಾರದ ಮೇಲೆ ಸಾಲ ನೀಡಿರುವ ಫೈನಾನ್ಸ್‌ನ ಪ್ರತಿನಿಧಿಗಳು ನಿತ್ಯ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಈಗಾಗಲೇ ಅತಿವೃಷ್ಟಿಯಿಂದಾಗಿ ಕೂಲಿ ಕೆಲಸವೂ ಇಲ್ಲದಂತಾಗಿದ್ದು, ರಾಷ್ಟ್ರೀಯ ಬ್ಯಾಂಕುಗಳಲ್ಲಿ ಬಡಜನತೆಗೆ ಸಾಲ ಸೌಲಭ್ಯ ನೀಡಲಾಗುತ್ತಿಲ್ಲ. ಹೀಗಾಗಿ ಮೈಕ್ರೋ ಫೈನಾನ್ಸ್ ಮೂಲಕ ಹಣ ಪಡೆದುಕೊಳ್ಳಲಾಗುತ್ತಿತ್ತು. ಇದೀಗ ಕಾನೂನುಗಳನ್ನು ಉಲ್ಲಂಘಿಸಿ ವಿಪರೀತ ಬಡ್ಡಿ ವಿಧಿಸಿ ನಮಗೆ ವಿನಾಕಾರಣ ಮೈಕ್ರೋ ಫೈನಾನ್ಸ್ ತೊಂದರೆ ನೀಡುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ.

    ಶೇ. 25ರಿಂದ 40ರವರೆಗೆ ಬಡ್ಡಿ ವಿಧಿಸಿರುವುದು ಅಲ್ಲದೇ, ಸಾಲ ಪಡೆದಿರುವ ಮಹಿಳೆಯರ ಮನೆಗೆ ನಿರಂತರವಾಗಿ ಬಂದು ಕಿರುಕುಳ ನೀಡಲಾಗುತ್ತಿದೆ. ಈ ಕೂಡಲೇ ಜಿಲ್ಲಾಧಿಕಾರಿಗಳು ನೂರಾರು ಮಹಿಳೆಯರ ಸಮಸ್ಯೆ ಮನಗಂಡು ಮೈಕ್ರೋ ಫೈನಾನ್ಸ್‌ನವರ ವ್ಯವಹಾರಕ್ಕೆ ಕಡಿವಾಣ ಹಾಕಬೇಕಿದೆ. ಜೊತೆಗೆ ಋಣಮುಕ್ತ ಕಾಯ್ದೆ ಜಾರಿಗೆ ತಂದು ನಮ್ಮ ಸಾಲ ಮನ್ನಾ ಮಾಡಬೇಕೆಂದು ಮಹಿಳೆಯರು ಆಗ್ರಹಿಸಿದರು.

  • ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    – ನೇಣಿಗೆ ಮೊದಲ ಆದ್ಯತೆ, ವಿಷಕ್ಕೆ ಎರಡನೇ ಆದ್ಯತೆ
    – ಚಿಕ್ಕಬಳ್ಳಾಪುರದಲ್ಲಿ ಮೂರು ವರ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಹೆಸರಿಗೆ ಮಾತ್ರ ಚಿಕ್ಕದಾದ್ರೂ ಆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

    ಹೌದು ಕಳೆದ ಮೂರು ವರ್ಷದಿಂದ ಹೆಚ್ಚಿನ ಮಂದಿ ಆತ್ಮಹತ್ಯೆ ಮಾಡಿಕೊಳ್ತಿದ್ದು, ಇದು ಸ್ವತಃ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಗಂಡಸರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ, ಅತಿವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದು. ಸಿಲ್ಕ್ ಮಿಲ್ಕ್ ಹೂ ಹಣ್ಣು ತರಕಾರಿ ಬೆಳೆಗೆ ಖ್ಯಾತಿಯಾಗಿರು ಚಿಕ್ಕಬಳ್ಳಾಪುರದಲ್ಲಿ ಈಗ ಆತ್ಮಹತ್ಯೆ ವಿಚಾರಗಳಿಗೆ ಕುಖ್ಯಾತಿಯಾಗುತ್ತಿದೆ.

    ಕೇವಲ ಮೂರು ವರ್ಷಗಳಲ್ಲಿ ನೇಣು ಹಾಕಿಕೊಂಡು 287 ಮಂದಿ, ವಿಷ ಸೇವಿಸಿ 146 ಮಂದಿ, ನೀರಿನಲ್ಲಿ ಮುಳುಗಿ 19 ಮಂದಿ, ಬೆಂಕಿ ಹಚ್ಚಿಕೊಂಡು 27 ಮಂದಿ ಸೇರಿದಂತೆ ಒಟ್ಟು 489 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 489 ಮಂದಿಯಲ್ಲಿ 159 ಮಹಿಳೆಯರಾದರೆ 330 ಮಂದಿ ಪುರುಷರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ವತಃ ಪೊಲೀಸ್ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

    ಆತ್ಮಹತ್ಯಗೆ ಹಲವು ಕಾರಣಗಳು!
    ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಸ್ವತಃ ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಇದರಿಂದ ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಉತ್ತಮ ಸಂಸ್ಕೃತಿಯನ್ನು ರೂಡಿಸುವಂತೆ ಸ್ವತಃ ಚಿಕ್ಕಬಳ್ಳಾಪುರ ಎಸ್ಪಿ ಅಭಿನವ್ ಖರೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗಿ ಯುವ ಸಮುದಾಯದ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿನ್ನಲೆ ಆತಂಕ ವ್ಯಕ್ತಪಡಿಸಿರುವ ಚಿಕ್ಕಬಳ್ಳಾಪುರದ ಖ್ಯಾತ ಮನೋರೋಗ ತಜ್ಞ ಹಾಗೂ ಸರ್ಕಾರಿ ವೈದ್ಯ ಕೀಶೋರ್ ಕುಮಾರ್, ಮಾನಸಿಕ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದ್ರೆ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಲ್ಲ ಅಂತಾರೆ. ಆತ್ಮಹತ್ಯೆಗೆ ಶಿಕ್ಷಣದ ಕೊರತೆ, ಬಡತನ, ಹಣಕಾಸಿನ ತೊಂದರೆ, ಮಾದಕ ವಸ್ತುಗಳ ಚಟ, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಹಲವು ಕಾರಣಗಳು ಕಂಡು ಬರುತ್ತಿದ್ದು ಆರಂಭದಲ್ಲೆ ಖಿನ್ನತೆಗೆ ಒಳಗಾದವರಿಗೆ ಕೌನ್ಸಿಲಿಂಗ್ ನೀಡಿದರೆ ಆತ್ಮಹತ್ಯೆ ಪ್ರಯತ್ನಗಳಿಂದ ದೂರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

  • ನಮ್ಮ ಮೆಟ್ರೋದಲ್ಲಿ ಪೆಪ್ಪರ್ ಸ್ಪ್ರೇ, ವೆಪನ್ ಬ್ಯಾನ್ – ಗುಡುಗಿದ ಸಿಲಿಕಾನ್ ಸಿಟಿ ಮಹಿಳೆಯರು

    ನಮ್ಮ ಮೆಟ್ರೋದಲ್ಲಿ ಪೆಪ್ಪರ್ ಸ್ಪ್ರೇ, ವೆಪನ್ ಬ್ಯಾನ್ – ಗುಡುಗಿದ ಸಿಲಿಕಾನ್ ಸಿಟಿ ಮಹಿಳೆಯರು

    ಬೆಂಗಳೂರು: ಪಶುವೈದ್ಯೆ ಪ್ರಿಯಾಂಕ ರೆಡ್ಡಿ ಅತ್ಯಾಚಾರದ ಬಳಿಕ ಸಿಲಿಕಾನ್ ಸಿಟಿಯಲ್ಲಿ ಮಹಿಳಾ ಮಣಿಗಳು ಫುಲ್ ಅಲರ್ಟ್ ಆಗಿದ್ದಾರೆ. ತಮ್ಮ ಆತ್ಮ ರಕ್ಷಣೆಗಾಗಿ ಬ್ಯಾಗ್‍ಗಳಲ್ಲಿ ಪೆಪ್ಪರ್ ಸ್ಪ್ರೇ ಮತ್ತು ಅಪಾಯಕಾರಿ ವೆಪನ್‍ಗಳನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ. ಆದರೆ ಮೆಟ್ರೋ ಒಳಗೆ ಈ ಪೆಪ್ಪರ್ ಸ್ಪ್ರೇ, ವೆಪನ್‍ಗಳನ್ನು ತೆಗೆದುಕೊಂಡು ಹೋಗಲು ಬಿಡುತ್ತಿಲ್ಲ ಎಂದು ಮೆಟ್ರೋ ವಿರುದ್ಧ ಮಹಿಳೆಯರು ಗರಂ ಆಗಿದ್ದಾರೆ.

    ಪಶುವೈದ್ಯ ದಿಶಾ ಅತ್ಯಾಚಾರ ಘಟನೆಯ ಬಳಿಕ ಸಿಲಿಕಾನ್ ಸಿಟಿ ಮಹಿಳೆಯರು ಫುಲ್ ಅಲರ್ಟ್ ಆಗಿದ್ದಾರೆ. ಸಿಟಿಯಲ್ಲಿ ಮಹಿಳೆಯರು ಎಷ್ಟು ಸೇಫ್ ಎನ್ನುತ್ತಿದ್ದು, ಸ್ವಯಂ ರಕ್ಷಣಾ ತಂತ್ರಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಪೆಪ್ಪರ್ ಸ್ಪ್ರೇ ಹಾಗೂ ಆತ್ಮರಕ್ಷಣೆಗೆ ಬೇಕಾದ ಕೆಲವು ಹರಿತವಾದ ವಸ್ತುಗಳನ್ನು ಬ್ಯಾಗಿನಲ್ಲಿ ಕ್ಯಾರಿ ಮಾಡಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಮೆಟ್ರೋ ಸಿಬ್ಬಂದಿ ಅನುಮತಿಸುತ್ತಿಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಸಿಬ್ಬಂದಿ ಮಹಿಳೆಯರಿಗೆ ಪೆಪ್ಪರ್ ಸ್ಪ್ರೇ ತಗೆದುಕೊಂಡು ಹೋಗಲು ಅನುಮತಿ ನೀಡುತ್ತಿಲ್ಲ. ಹೀಗಾಗಿ ಯುವತಿಯರು ಆತ್ಮರಕ್ಷಣಾ ದೃಷ್ಟಿಯಿಂದ ಅವಕಾಶ ಮಾಡಿಕೊಡಿ ಎಂದು ಹೇಳುತ್ತಿದ್ದಾರೆ. ಮಹಿಳೆಯರು ನಮ್ಮ ರಕ್ಷಣೆ ನಾವು ಮಾಡಿಕೊಳ್ಳುವುದು ಅಪರಾಧನಾ ಎಂದು ಮೆಟ್ರೋ ವಿರುದ್ಧ ಗರಂ ಆಗಿದ್ದಾರೆ.

    ವೆಪನ್, ಪೆಪ್ಪರ್ ಸ್ಪ್ರೇ ಅನ್ನು ಒಳಗಡೆ ಬಿಡಿ ಎಂದು ಮೆಟ್ರೋ ಸಿಬ್ಬಂದಿಯನ್ನು ಕೇಳಿದರೆ, ಇಲ್ಲಿ ಬೋರ್ಡ್ ಹಾಕಿದ್ದೆವೆ ನೋಡಿಕೊಳ್ಳಿ. ಯಾವ್ಯಾವ ವಸ್ತು ಒಳಗಡೆ ತಗೊಂಡು ಹೋಗಬೇಕು, ಯಾವ್ಯಾವ ವಸ್ತು ಒಳಗಡೆ ತಗೊಂಡು ಹೋಗಬಾರದು ಎಂದು ಕ್ಲಿಯರ್ ಆಗಿ ನೋಡಿ ಎಂದು ದಬಾಯಿಸುತ್ತಾರೆ. ನಮಗೆ ಏನಾದರೂ ಹೆಚ್ಚು ಕಡಿಮೆ ಆದರೆ ನೀವು ಜವಾಬ್ದಾರಿ ಆಗ್ತೀರಾ ಎಂದು ಪ್ರಶ್ನಿಸಿದರೆ, ಉತ್ತರ ಕೊಡದೇ ಬಿಎಂಆರ್ ಸಿಎಲ್ ಏನು ರೂಲ್ಸ್ ಮಾಡಿದೆಯೋ ಅದನ್ನು ಫಾಲೋ ಮಾಡುತ್ತೇವೆ ಎಂದು ಹೇಳುತ್ತಾರೆ. ಈ ಬಗ್ಗೆ ಮಹಿಳೆಯರು ಮೆಟ್ರೋ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.

    ಮಧ್ಯ ರಾತ್ರಿ 11. 30ರವರೆಗೂ ಕೂಡ ಮೆಟ್ರೋ ಓಡಾಡುತ್ತಿರುತ್ತೆ. ಈ ಸಮಯದಲ್ಲಿ ಮೆಟ್ರೋದಲ್ಲಿ ಮನೆಗೆ ತೆರಳುವ ಮಹಿಳೆಯರು ಇರುತ್ತಾರೆ. ಈ ರೀತಿ ಇರಬೇಕಾದರೆ ಸಿಲಿಕಾನ್ ಸಿಟಿಯಲ್ಲಿ ಅಪಾಯಕಾರಿ ಮೆಟ್ರೋ ಸ್ಟೇಷನ್ ಕೂಡ ಇದಾವೆ. ರಾತ್ರಿ 11. 30ರಲ್ಲಿ ಮೆಟ್ರೋ ಸ್ಟೇಷನ್‍ನಿಂದ ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಏನಾದರೂ ಹೆಚ್ಚು ಕಡಿಮೆ ಆಗುವ ಸಂಭವ ಹೆಚ್ಚಿರುತ್ತವೆ. ಈ ರೀತಿ ಅಪಾಯಕಾರಿ ನಮ್ಮ ಬಳಿ ಅನುಕೂಲ. ಮೆಟ್ರೋ ಒಳಗಡೆಯಿಂದ ಬರಬೇಕಾದರೆ ಪೆಪ್ಪರ್ ಸ್ಪ್ರೇ, ಹರಿತವಾದ ಇಟ್ಟಿಕೊಳ್ಳುವುದಕ್ಕೆ ಬಿಡಲ್ಲ ಎಂದರೆ ಅಪಾಯ ಗ್ಯಾರಂಟಿ ಎಂದು ಮಹಿಳೆಯರು ಆತಂಕ ವ್ಯಕ್ತಪಡಿಸಿದ್ದಾರೆ.

  • ದೇಶದಲ್ಲಿನ ಎಲ್ಲ ಪುರುಷರು ಅತ್ಯಾಚಾರಿಗಳೇ – ರಾಹುಲ್‍ಗೆ ಸ್ಮೃತಿ ಇರಾನಿ ಪ್ರಶ್ನೆ

    ದೇಶದಲ್ಲಿನ ಎಲ್ಲ ಪುರುಷರು ಅತ್ಯಾಚಾರಿಗಳೇ – ರಾಹುಲ್‍ಗೆ ಸ್ಮೃತಿ ಇರಾನಿ ಪ್ರಶ್ನೆ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ “ರೇಪ್ ಇನ್ ಇಂಡಿಯಾ” ಎಂಬ ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಯವರು ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಸುದ್ದಿಗಾರರೊ0ದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರೇಪ್ ಇನ್ ಇಂಡಿಯಾ ಎಂದು ಯಾವಾಗ ಹೇಳಿದರೋ ಅಂದೇ ದೇಶದ ಎಲ್ಲ ಪುರುಷರು ಅತ್ಯಾಚಾರಿಗಳು ಎಂದು ತಿಳಿಯಿತು. ಕಾಂಗ್ರೆಸ್ ಸಂಸದರು ಭಾರತದ ಮೇಲೆ ಅತ್ಯಾಚಾರ ಎಸಗಲು ಪುರುಷರನ್ನು ಯಾವಾಗ ಕರೆಸಿದರು ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮಹಿಳೆಯರ ಮೇಲಿನ ದೌರ್ಜನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಆಕ್ಷೇಪಾರ್ಹ. ಮಹಿಳೆಯರು ಇದಕ್ಕೆ ಪ್ರತ್ಯುತ್ತರ ನೀಡಬೇಕು. ಆದರೆ ನಾನೀಗ ಪ್ರಶ್ನಿಸುತ್ತೇನೆ. ರಾಹುಲ್ ಗಾಂಧಿಯವರ ಪ್ರಕಾರ ಭಾರತದಲ್ಲಿನ ಪ್ರತಿಯೊಬ್ಬ ಪುರುಷ ಅತ್ಯಾಚಾರಿಯೇ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು.

    ಈ ಕುರಿತು ಸೋನಿಯಾ ಗಾಂಧಿಯವರೂ ಸಹ ವಿವರಿಸಬೇಕು, ಇಲ್ಲವಾದಲ್ಲಿ ಮಹಿಳೆಯರು ಇಂತಹ ಆಕ್ಷೇಪಾರ್ಹ ಹೇಳಿಕೆಯನ್ನು ಒಪ್ಪುವುದಿಲ್ಲ. ಈ ಕುರಿತು ರಾಹುಲ್ ಗಾಂಧಿ ಅವರು ಎಚ್ಚರಿಕೆಯಿಂದ ಕೇಳಬೇಕು. ಬನ್ನಿ ಭಾರತದಲ್ಲಿ ಅತ್ಯಾಚಾರ ಮಾಡಿ, ಭಾರತದ ಕುಟುಂಬಗಳು ನಿಮಗೆ ಆಹ್ವಾನ ನೀಡಿವೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಕರೆ ನೀಡಿದ್ದಾರೆ. ದೇಶದ ಜನತೆಗೆ ರಾಹುಲ್ ಗಾಂಧಿಯವರು ನೀಡುವ ಸಂದೇಶ ಇದೇನಾ? ಇವರನ್ನು ಶಿಕ್ಷಿಸಬೇಕಿದೆ, ರಾಹುಲ್ ಗಾಂಧಿ ಭಾರತದ ಮಹಿಳೆಯರು ಹಾಗೂ ಜನತೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

    ಜಾರ್ಖಂಡ್‍ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ರಾಹುಲ್ ಗಾಂಧಿಯವರ ಅತ್ಯಾಚಾರದ ಹೇಳಿಕೆ ಕುರಿತು ಮೇಲ್ಮನೆ ಹಾಗೂ ಕೆಳಮನೆ ಎರಡರಲ್ಲೂ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಈ ಕುರಿತು ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಎಂದು ಆಡಳಿತಾರೂಢ ಪಕ್ಷಗಳು ಪಟ್ಟು ಹಿಡಿದಿವೆ.