Tag: women

  • ನಕಲಿ ದಾಖಲೆ ಸೃಷ್ಟಿಸಿ 17 ಎಕ್ರೆ ಗುಳುಂ – 2 ಕೋಟಿ ರೂ. ಸಾಲ ಮಾಡಿ ವಂಚನೆ

    ನಕಲಿ ದಾಖಲೆ ಸೃಷ್ಟಿಸಿ 17 ಎಕ್ರೆ ಗುಳುಂ – 2 ಕೋಟಿ ರೂ. ಸಾಲ ಮಾಡಿ ವಂಚನೆ

    ಹುಬ್ಬಳ್ಳಿ: ನಕಲಿ ದಾಖಲೆ ಸೃಷ್ಟಿಸಿ ಮಹಿಳೆಯರ ಹೆಸರಿನಲ್ಲಿದ್ದ 17 ಎಕ್ರೆ 19 ಗುಂಟೆ ಜಮೀನನ್ನು ಬೇರೆ ಅವರ ಹೆಸರಿಗೆ ವರ್ಗಾಯಿಸಿ, ಕೋಟ್ಯಂತರ ರೂಪಾಯಿ ಸಾಲ ಮಾಡಿ ವಂಚಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ ವಾಸವಾಗಿರುವ ಶೋಭಾ, ಅನ್ನಪೂರ್ಣ, ಜಯಶ್ರೀ ಎಂಬವರ ಹೆಸರಿನಲ್ಲಿದ್ದ ಜಮೀನನ್ನ ನಕಲಿ ದಾಖಲೆ ಸೃಷ್ಟಿಸಿ ಭೂ ವರ್ಗಾವಣೆ ಮಾಡಿ ವಂಚನೆ ಮಾಡಲಾಗಿದೆ ಎಂದು ಮಹಿಳೆಯರು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೇಶ್ವಾಪುರದ ಬಸವರಾಜ ಕಮತಗಿ, ಆನಂದ ಕಮತಗಿ, ಸುಲೋಚನಾ ಕಮತಗಿ, ವಿಶ್ವನಾಥ ಕಮತಗಿ, ಗಿರಿಜಾ ಪಾವಟೆ ಅವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಆರೋಪಿಗಳು ಹುಬ್ಬಳ್ಳಿ ಉಪ ನೋಂದಣಿ ಕಚೇರಿಯಲ್ಲಿ ಖರೀದಿ ಕಾಗದ ಪತ್ರ ಮಾಡಿಕೊಂಡು ತಮ್ಮ ಹೆಸರಿಗೆ ಜಮೀನನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಕಲಿ ದಾಖಲೆ ಹಾಗೂ ಸಹಿ ಮಾಡಿ ಶೋಭಾ, ಅನ್ನಪೂರ್ಣ, ಜಯಶ್ರೀ ಹೆಸರಿನಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಇದೀಗ ನಕಲಿ ದಾಖಲೆ ಹಾಗೂ ಬ್ಯಾಂಕ್ ಸಾಲದ ವಿವರದ ಮೇಲೆ ತನಿಖೆ ಆರಂಭಿಸಿದ್ದಾರೆ.

  • ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರವನ್ನು ಕಡ್ಡಾಯಗೊಳಿಸಲು ಸಿಎಂಗೆ ಮನವಿ

    ಬೆಂಗಳೂರು: ಸರ್ಕಾರಿ ಕಚೇರಿ, ಶಾಲೆ, ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಕಡ್ಡಾಯಗೊಳಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ.

    ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‍ಗಳನ್ನು ಕಸದೊಂದಿಗೆ ಎಸೆಯುವುದರಿಂದ ಸಾಕಷ್ಟು ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇನ್ನು ಸಾರ್ವಜನಿಕ ಕಟ್ಟಡಗಳಲ್ಲಿ ಶೌಚಾಲಯಕ್ಕೆ ಎಸೆಯುವುದರಿಂದ ತ್ಯಾಜ್ಯ ನೀರು ಹರಿಯುವ ಒಳಚರಂಡಿಗಳು ಕಟ್ಟಿಕೊಳ್ಳುತ್ತವೆ. ಇದರಿಂದಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಸುಡುವ ಇನ್ಸಿನರೇಟರ್ ಯಂತ್ರವನ್ನು ಕಡ್ಡಾಯಗೊಳಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ.

    ಮುಂದಿನ ಬಜೆಟ್‍ನಲ್ಲಿ ಅಗತ್ಯ ಹಣ ತೆಗೆದಿರಿಸುವಂತೆ ಮನವಿ ಮಾಡಿ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವತಿಯಿಂದ ಸಾಮಾಜಿಕ ಕಾರ್ಯಕರ್ತ ಎಸ್. ಅಮರೇಶ್ ಪತ್ರ ಬರೆದಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಇರುವ ಮಹಿಳಾ ಕಾಲೇಜುಗಳು, ಐಟಿಬಿಟಿ ಕಂಪನಿ, ಗಾರ್ಮೆಂಟ್ಸ್, ಪಿಜಿಗಳು ಹಾಗೂ ಕಾರ್ಖಾನೆಗಳಲ್ಲಿ ಇನ್ಸಿನರೇಟರ್ (incinerators) ಯಂತ್ರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕ್ರಮ ಜಾರಿ ಮಾಡಲು ಮನವಿ ಮಾಡಲಾಗಿದೆ.

    ಈ ಯಂತ್ರದೊಳಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಹಾಕಿದಾಗ, ಇವು ಸುಟ್ಟು ಭಸ್ಮವಾಗುತ್ತವೆ. ಇದರಿಂದ ವಾಯು ಮಾಲಿನ್ಯವಾಗುವುದಿಲ್ಲ. ವಾಸನೆಯೂ ಬರುವುದಿಲ್ಲ. ಅತ್ಯಾಧುನಿಕ ಇನ್ಸಿನರೇಟರ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅಮರೇಶ್, ಇತರೆ ಕಸದೊಂದಿಗೆ ಸ್ಯಾನಿಟರಿ ವೇಸ್ಟ್ ಕೂಡ ಮಿಶ್ರವಾಗುತ್ತಿದೆ. ಇದನ್ನು ವಿಂಗಡಿಸಲಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಉದ್ಯೋಗ ಮಾಡುವ ಜಾಗದಲ್ಲಿ, ಶಾಲಾ ಕಾಲೇಜುಗಳಲ್ಲಿ ಪರಿಹಾರ ಕಂಡುಕೊಳ್ಳಲು ಈ ಇನ್ಸಿನೇಟರ್ ಬಳಸುವಂತೆ ಮಾಡಲು ಮನವಿ ಮಾಡಲಾಗಿದೆ ಎಂದರು.

  • ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    – ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ವಿಚಿತ್ರ ಆಚರಣೆ
    – ಕಂಬಿಗೆ ತಲೆಕೆಳಗಾಗಿ ನೇತುಬಿದ್ದ ಮಹಿಳೆ

    ಕಲಬುರಗಿ: ಜಿಲ್ಲೆಯ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಇದೀಗ ಈ ದೇವಸ್ಥಾನದಲ್ಲಿ ದೆವ್ವ-ಪ್ರೇತಾತ್ಮಗಳ ಸಂಖ್ಯೆ ಹೆಚ್ಚಾಗಿದೆಯಂತೆ, ಅಚ್ಚರಿಯಾದರೂ ಇದು ನಿಜವಾಗಿದೆ.

    ಅಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳನ್ನು ನಿತ್ಯ ಇಲ್ಲಿ ಕಾಣಬಹುದು. ಮೈಮೇಲೆ ಪರಿವೇ ಇಲ್ಲದಂತೆ ಚಿತ್ರ ವಿಚಿತ್ರವಾಗಿ ವರ್ತಿಸುವ ಇವರ ಮೇಲೆ ದೆವ್ವ, ಪಿಶಾಚಿ, ಪ್ರಾತಾತ್ಮಗಳು ಆವಾಹಿಸಿಕೊಂಡಿವೆಯಂತೆ. ಇದರಿಂದ ಮುಕ್ತರಾಗಲು ಇವರೆಲ್ಲ ದತ್ತನ ಸನ್ನಿಧಿಗೆ ಬರುತ್ತಾರೆ.

    ಪ್ರತಿನಿತ್ಯ ಮಧ್ಯಾಹ್ನ 1.30ಕ್ಕೆ ದತ್ತನಿಗೆ ಮಹಾ ಮಂಗಳಾರತಿ ನೆರವೇರಿಸುವ ವೇಳೆ ಮಾನಸಿಕ ಅಸ್ವಸ್ಥರು, ಮೈಮೇಲೆ ದೆವ್ವ ಬಂದವರ ರೀತಿ ಆಡುತ್ತಾರೆ. ಕೂದಲು ಕೆದರಿಕೊಂಡು ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ, ಕೇಕೆ ಹಾಕುತ್ತಾರೆ, ಅಳುತ್ತಾರೆ, ದೇವರನ್ನೇ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಕೆಲವರು ಕಂಬಿ ಮೇಲೆ ನಿದ್ದೆ ಹೋಗುತ್ತಾರೆ. ಹೀಗೆ ಬರೋರಲ್ಲಿ ಕರ್ನಾಟಕದವರು ಇದ್ದಾರೆ. ಆಂಧ್ರ, ತೆಲಂಗಾಣದವರು ಇದ್ದಾರೆ. ಆದರೆ ಪ್ರೇತಾತ್ಮಗಳ ಕಾಟಕ್ಕೆ ತುತ್ತಾಗುವವರಲ್ಲಿ ಮಹಾರಾಷ್ಟ್ರ ಮಂದಿಯೇ ಅಧಿಕ. ಇಲ್ಲಿ ಬಂದು ಕೆಲ ದಿನಗಳ ದತ್ತನ ಆರಾಧನೆ ಮಾಡಿದರೆ ದುಷ್ಟ ಶಕ್ತಿಗಳಿಂದ ಜನ ಪಾರಾಗುತ್ತಾರೆ ಎಂದು ಅರ್ಚಕ ಪ್ರಸನ್ನ ಪೂಜಾರಿ ಹೇಳಿದ್ದಾರೆ.

    ಇವರೆಲ್ಲರೂ ಚಿತ್ರ ವಿಚಿತ್ರವಾಗಿ ವರ್ತಿಸಲು ಒಂದು ಕಾರಣ ಇದೆ. ಜೊತೆಗೆ ಪುರಾಣದ ಹಿನ್ನೆಲೆ ಇದೆ. ಇಲ್ಲಿನ ಅಶ್ವಥ್ಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ನೆಲೆಸಿದ್ದನಂತೆ. ಇಲ್ಲಿನ ಜನ ಜಾನುವಾರುಗಳ ನೆಮ್ಮದಿ ಕೆಡಿಸಿದ್ದರು. ಆಗ ದತ್ತಾತ್ರೇಯ ಸ್ವಾಮಿ, ಎರಡನೇ ಅವತಾರ ಎತ್ತಿ ಶ್ರೀಮಾನ್ ನರಸಿಂಹ ಸರಸ್ವತಿ ಮಹಾರಾಜರು ರೂಪದಲ್ಲಿ ರಾಕ್ಷಸನಿಗೆ ಮುಕ್ತಿ ನೀಡಿದ್ದರು ಎನ್ನಲಾಗುತ್ತದೆ. ಅಂದಿನಿಂದ ಇದು ಪ್ರೇತಾತ್ಮಗಳನ್ನು ದೂರ ಮಾಡುವ ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಭಕ್ತೆ ಮಾಲತಿ ರೇಷ್ಮಿ ಹೇಳಿದರು.

    ಅಂದಹಾಗೆ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಅವತಾರವನ್ನೆತ್ತಿರುವ ಗುರುದತ್ತನ ಸನ್ನಿಧಿಯಲ್ಲಿ ಈ ಪವಾಡಗಳು ನಿತ್ಯ ನಡೆಯುತ್ತವೆ. ಯಾಕೆಂದರೆ ಈ ದೇವಾಲಯದ ಆವರಣದಲ್ಲಿರುವ ಅಶ್ವಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ವಾಸಿಸುತ್ತಿದ್ದು, ಇಲ್ಲಿರುವ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದರು. ಆದರೆ ದತ್ತಾತ್ರೇಯ ಸ್ವಾಮಿಗಳ ಎರಡನೇ ಅವತಾರದಲ್ಲಿ ಸಾಕ್ಷತ್ ಶ್ರೀಮನ ನರಸಿಂಹ ಸರಸ್ವತಿ ಮಹಾರಾಜರು ಆ ರಾಕ್ಷಸನಿಗೇ ಮುಕ್ತಿ ನೀಡಿದ್ದಾರೆ. ಹೀಗಾಗಿ ಪ್ರತಿ ದಿನ ನಡೆಯುವ ಮಹಾಮಂಗಳಾರತಿ ವೇಳೆ ಭೂತ-ಪ್ರೇತಗಳು ಇದೆ ಎಂದು ನಂಬಿದ ಜನ, ಇಲ್ಲಿ ಬಂದು ಶ್ರೀ ಗುರು ದತ್ತನ ಪೂಜೆ ಸಲ್ಲಿಸಿದರೆ, ಅವರಲ್ಲಿರುವ ಎಲ್ಲಾ ದುಷ್ಟ ಶಕ್ತಿಗಳು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಭೀಮಾ ಅಮರ್ಜಾ ನದಿ ಸಂಗಮವಿರುವ ಈ ಪುಣ್ಯಕ್ಷೇತ್ರಕ್ಕೆ ನಿತ್ಯವು ಸಾವಿರಾರು ಜನ ಬಂದು ಹೋಗುತ್ತಾರೆ. ಕೆಲವರು ಬರಿ ದರ್ಶನ ಭಾಗ್ಯಕ್ಕೆಂದು ಬಂದು ಶ್ರೀಗುರುದತ್ತನ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದರೆ, ಇನ್ನೂ ಕೆಲವರು ಇನ್ನೂ ಕೆಲವರು ಅವರಿಗೆ ಕಾಡುತ್ತಿರುವ ದುಷ್ಟ ಶಕ್ತಿಗಳು ಸಂಕಟ ದೂರು ಮಾಡಿಕೊಳ್ಳಲು ಬರುತ್ತಾರೆ.

  • ವಿಚಿತ್ರವಾಗಿ ಕೊಲ್ಲಲಾದ ಇಬ್ಬರು ಮಹಿಳೆಯರ ಶವ ಪತ್ತೆ

    ವಿಚಿತ್ರವಾಗಿ ಕೊಲ್ಲಲಾದ ಇಬ್ಬರು ಮಹಿಳೆಯರ ಶವ ಪತ್ತೆ

    – ಒಂದು ಗ್ಯಾಂಗ್ ರೇಪ್, ಇನ್ನೊಂದು ಕೊಲೆ ಶಂಕೆ

    ಲಕ್ನೋ: ಉತ್ತರ ಪ್ರದೇಶದ ಎರಡು ಪ್ರತ್ಯೇಕ ಜಿಲ್ಲೆಯಲ್ಲಿ ವಿಚಿತ್ರವಾಗಿ ಕೊಲೆ ಮಾಡಲಾದ ಇಬ್ಬರು ಮಹಿಳೆಯರ ಶವಗಳು ಸಿಕ್ಕಿವೆ. ಒಂದು ಗ್ಯಾಂಗ್ ರೇಪ್ ಹಾಗೂ ಇನ್ನೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೊದಲ ಮಹಿಳೆಯ ಶವ ಶುಕ್ರವಾರ ರಾತ್ರಿ ಬಿಜ್ನೋರ್ ಜಿಲ್ಲೆಯ ಗಜ್ರೋಲ ಎಂಬ ಹಳ್ಳಿಯಲ್ಲಿ ಸಿಕ್ಕಿದೆ. ಈ ಪ್ರಕರಣದಲ್ಲಿ ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಮಂಚವೊಂದಕ್ಕೆ ಕಟ್ಟಿಹಾಕಲಾಗಿದೆ. ನೋಯ್ಡಾದ ನಿವಾಸಿ ಒಡೆತನದಲ್ಲಿ ಇರುವ ಮಾವಿನ ತೋಟದಲ್ಲಿ ಸಂತ್ರಸ್ತೆಯ ಶವ ಸಿಕ್ಕಿದೆ.

    ಈ ಘಟನೆಯ ಬಗ್ಗೆ ಮಾವಿನ ತೋಟಕ್ಕೆ ವಾಚ್‍ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆಗ ಸ್ಥಳಕ್ಕೆ ಬಂದ ಪೊಲೀಸರಿಗೆ ಶವದ ಬಳಿ ಎರಡು ಗುಂಡುಗಳು ಸಿಕ್ಕಿದ್ದು, ಮಹಿಳೆಯನ್ನು ಮಂಚಕ್ಕೆ ಕಟ್ಟಿ ಅವಳನ್ನು ಗುಂಡಿಕ್ಕಿ ಕೊಂದು. ನಂತರ ಅವಳ ಮೃತ ದೇಹವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಮಹಿಳೆಯ ಶವ ಸಂಪೂರ್ಣ ಸುಟ್ಟು ಹೋಗಿದ್ದು, ಗುರುತಿಸುವುದು ಕಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

    ಆ್ಯಸಿಡ್ ಹಾಕಿ ಸುಟ್ಟಿರುವ ಶಂಕೆ:
    ಎರಡನೇ ಮಹಿಳೆ ಶವ ಬೆತ್ತಲಾದ ಸ್ಥಿತಿಯಲ್ಲಿ ಬಹ್ರೇಚ್ ಜಿಲ್ಲೆಯ ನೌಬಾನಾ ಗ್ರಾಮದ ಬಳಿ ಪತ್ತೆಯಾಗಿದೆ. ಮಹಿಳೆಯನ್ನು ಕೊಂದು ಆಕೆಯ ಮುಖದ ಮೇಲೆ ಆ್ಯಸಿಡ್ ಹಾಕಿ ಮುಖವನ್ನು ಸಂಪೂರ್ಣ ಸುಡಲಾಗಿದೆ. ಶನಿವಾರ ಈ ಶವ ದನಗಾಹಿಗಳ ಕಣ್ಣಿಗೆ ಬಿದ್ದಿದ್ದು, ಅವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

    ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿರುವ ಪೊಲೀಸರು, ಸಂತ್ರಸ್ತೆಯನ್ನು ಯಾರೋ ಕಿಡಿಗೇಡಿಗಳು ಗ್ಯಾಂಗ್ ರೇಪ್ ಮಾಡಿ ಆ್ಯಸಿಡ್ ಹಾಕಿ ಕೊಲೆಮಾಡಿದ್ದಾರೆ ಎಂದು ಶಂಕಿಸಿದ್ದಾರೆ. ಸಾವನ್ನಪ್ಪಿರುವ ಮಹಿಳೆಯ ಶವವನ್ನು ಗುರುತಿಸಬಹುದು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  • ರಸ್ತೆಯಲ್ಲಿ ಸಂಕ್ರಾಂತಿ ಆಚರಿಸಿ ಪ್ರತಿಭಟಿಸಿದ ಕನ್ನಡ ಸಂಘಟನೆಯ ಸದಸ್ಯರು

    ರಸ್ತೆಯಲ್ಲಿ ಸಂಕ್ರಾಂತಿ ಆಚರಿಸಿ ಪ್ರತಿಭಟಿಸಿದ ಕನ್ನಡ ಸಂಘಟನೆಯ ಸದಸ್ಯರು

    ಬೆಂಗಳೂರು: ಸಂಕ್ರಾಂತಿ ಹಬ್ಬ ಅಂದರೆ ಸಡಗರ ಸಂಭ್ರಮ ಜೋರಾಗಿರುತ್ತೆ. ಮನೆಯ ಮುಂದೆ ಬಣ್ಣದ ರಂಗೋಲಿ ಹಾಕಿ, ಎಳ್ಳು ಬೆಲ್ಲ ಬೀರಿ, ಕಬ್ಬು ಸವಿದು ಹಬ್ಬದೂಟ ಮಾಡುವ ಖುಷಿ ಇರುತ್ತೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಕನ್ನಡ ಸಂಘಟನೆ ಕಾರ್ಯಕರ್ತರು, ಮಹಿಳೆಯರು ರಸ್ತೆಯಲ್ಲೇ ಸಂಕ್ರಾಂತಿ ಆಚರಿಸಿದರು.

    ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಮೌರ್ಯ ಸರ್ಕಲ್‍ನಲ್ಲಿ ಸಾಕಷ್ಟು ದಿನದಿಂದ ಕನ್ನಡ ಸಂಘಟನೆಯವರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ರಸ್ತೆಯಲ್ಲಿಯೇ ರಂಗೋಲಿ ಹಾಕಿ, ರಸ್ತೆಯಲ್ಲಿ ಓಡಾಡೋ ಜನರಿಗೆ ಎಳ್ಳು ಬೆಲ್ಲ ಕೊಟ್ಟು, ಹಬ್ಬದ ಖಾದ್ಯವನ್ನು ಅಲ್ಲಿಯೇ ತಯಾರಿಸಿ ಭಿನ್ನವಾಗಿ ಕನ್ನಡ ಸಂಘಟನೆ ಕಾರ್ಯಕರ್ತರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು.

    ರಸ್ತೆಯಲ್ಲಿ ಹಬ್ಬ ಆಚರಿಸಿದ ಬಗ್ಗೆ ಮಾತನಾಡಿದ ಕಾರ್ಯಕರ್ತರು, ಹಬ್ಬ ಅಂದರೆ ಸಂಭ್ರಮವಿರುತ್ತದೆ. ಆದರೆ ನಾವು ಕನ್ನಡಕ್ಕಾಗಿ, ಕನ್ನಡಿಗರ ಅಭಿವೃದ್ಧಿಗಾಗಿ ಸಂಕ್ರಾಂತಿಯನ್ನು ಇಲ್ಲೇ ಆಚರಣೆ ಮಾಡುತ್ತಿದ್ದೇವೆ. ಮುಂದೆ ಸರೋಜಿನಿ ಮಹಿಷಿ ವರದಿ ಜಾರಿಯಾಗದೇ ಇದ್ದರೆ ತಿಥಿನೂ ಇಲ್ಲೇ ಮಾಡುತ್ತೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

  • ಮಹಿಳೆಯ ಜೊತೆ ಅನುಚಿತ ವರ್ತನೆ – ನಿವೃತ್ತ ಪ್ರಾಚಾರ್ಯನಿಗೆ ಚಪ್ಪಲಿ ಸೇವೆ

    ಮಹಿಳೆಯ ಜೊತೆ ಅನುಚಿತ ವರ್ತನೆ – ನಿವೃತ್ತ ಪ್ರಾಚಾರ್ಯನಿಗೆ ಚಪ್ಪಲಿ ಸೇವೆ

    ಕೊಪ್ಪಳ: ಮಹಿಳೆಯ ಜೊತೆ ಅನುಚಿತ ವರ್ತನೆ ತೋರಿದ ನಿವೃತ್ತ ಪ್ರಾಚರ್ಯನೊಬ್ಬ ಸಾರ್ವಜನಿಕವಾಗಿ ಚಪ್ಪಲಿ ಏಟು ತಿಂದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳದ ಬಸ್ ನಿಲ್ದಾಣದ ಮುಂದೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಚರ್ಯ ವಿ.ಬಿ ರಡ್ಡೆರ್ ಗೆ ಮಹಿಳೆಯಿಂದ ಚಪ್ಪಲಿಯ ಏಟು ಬಿದ್ದಿದೆ. ದಾರಿಯಲ್ಲಿ ಹೊಗುತ್ತಿದ್ದ ಮಹಿಳೆ ಜೊತೆ ರಡ್ಡೆರ್ ಅನುಚಿತವಾಗಿ ವರ್ತಿಸಿದ್ದಾನೆ.

    ರಡ್ಡೆರ್ ನಡೆಗೆ ಕೋಪಗೊಂಡ ಮಹಿಳೆಯರಿಬ್ಬರು ಸಾರ್ವಜನಿಕರ ಎದುರೇ ಚಪ್ಪಲಿ ಏಟು ನೀಡಿ ಬುದ್ಧಿ ಕಲಿಸಿದ್ದಾರೆ. ಚಪ್ಪಲಿಯಿಂದ ಹೊಡೆದ ಇಬ್ಬರು ಮಹಿಳೆಯರಲ್ಲಿ ಒಬ್ಬರಿಗೆ ಈ ಹಿಂದೆ ರಡ್ಡೆರ್ ಲೈಂಗಿಕ ಕಿರುಕುಳ ನೀಡಿದ್ದ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.

  • ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೆ- ನೂರಾರು ಮಹಿಳೆಯರಿಂದ ರೊಟ್ಟಿ ತಯಾರಿ

    ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೆ- ನೂರಾರು ಮಹಿಳೆಯರಿಂದ ರೊಟ್ಟಿ ತಯಾರಿ

    ಕೊಪ್ಪಳ: ದಕ್ಷಿಣ ಭಾರತ ಮಹಾ ಕುಂಭಮೇಳವೆಂದೇ ಪ್ರಖ್ಯಾತಿ ಪಡೆದಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗೆ ಕ್ಷಣಗಣನೇ ಆರಂಭವಾಗಿದೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗಾಗಿ ಪ್ರಸಾದದ ವ್ಯವಸ್ಥೆಗಾಗಿ ಜಿಲ್ಲೆಯ ಜನತೆ ರೊಟ್ಟಿ ತಯಾರಿಯಲ್ಲಿ ತೊಡಗಿದ್ದಾರೆ.

    ಮಹಾಕುಂಭ ಮೇಳವೆಂದೇ ಪ್ರಖ್ಯಾತಿ ಪಡೆದಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಗಾಗಿ ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಮಹಿಳೆಯರು ರೊಟ್ಟಿ ತಯಾರಿಸುತ್ತಿದ್ದಾರೆ. ಈ ಜಾತ್ರೆ ಬಂತೆಂದೆರೆ ಸಾಕು ಕೊಪ್ಪಳದ ಮಹಿಳೆಯರಿಗೆ, ಮಕ್ಕಳಿಗೆ, ಎಲ್ಲಾ ಜನರಲ್ಲಿ ಎಲ್ಲಿಲ್ಲದ ಉತ್ಸಾಹ. ಅಜ್ಜನ ಜಾತ್ರೆಗಾಗಿ ಸರ್ವರು ಸೇವೆ ಸಲ್ಲಿಸುವುದು ಇಲ್ಲಿನ ವಿಶೇಷ. ಅದಕ್ಕಾಗಿ ಹಟ್ಟಿ ಗ್ರಾಮದ ಜನತೆ, ಈ ಜಾತ್ರೆಗಾಗಿ 2 ಕ್ವಿಂಟಾಲ್ ರೊಟ್ಟಿ ಮಾಡುತ್ತಿದ್ದಾರೆ.

    ಅಜ್ಜನ ಜಾತ್ರೆಗೆ ರೊಟ್ಟಿ ಮಾಡಬೇಕೆಂದರೆ ಪ್ರತಿಯೊಬ್ಬ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ರೊಟ್ಟಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಪ್ಪಳದ ಹಟ್ಟಿ ಗ್ರಾಮಸ್ಥರು ಇಷ್ಟೊಂದು ಪ್ರಮಾಣದಲ್ಲಿ ರೊಟ್ಟಿ ಮಾಡುತ್ತಿರುವುದನ್ನು ಅರಿತ ಗವಿಸಿದ್ದೇಶ್ವರ ಅಜ್ಜರು ಗ್ರಾಮಕ್ಕೆ ಆಗಮಿಸಿ ಗ್ರಾಮದ ಮಹಿಳೆಯರು ಮತ್ತು ಮಕ್ಕಳ ಸೇವೆಯನ್ನು ನೋಡಿ ಆಶೀರ್ವಾದಿಸಿದರು.

    ಇದೇ ತಿಂಗಳ 12 ರಂದು ಗವಿಸಿದ್ದೇಶ್ವರ ಜಾತ್ರೆ ಇದೆ. ಹೀಗಾಗಿ ಪ್ರತಿವರ್ಷದಂತೆ ಈ ವರ್ಷವು ಕೂಡ ಜಾತ್ರೆಯ ಸಡಗರ ಸಂಭ್ರಮ ಜಿಲ್ಲೆಯಾದ್ಯಂತ ಮನೆ ಮಾಡಿದೆ. ಅಜ್ಜನ ಜಾತ್ರೆಗೆ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ಗ್ರಾಮಸ್ಥರು ತಮ್ಮ ತಮ್ಮ ಕೈಲಾದ ಸೇವೆಯನ್ನು ಚಾಚು ತಪ್ಪದೇ ಮಠಕ್ಕೆ ಅರ್ಪಿಸುತ್ತಿದ್ದಾರೆ.

  • ಗೊಲ್ಲರಹಟ್ಟಿಗಳಲ್ಲಿ ಶಾಸಕಿ ಜಾಗೃತಿ – ಅನಿಷ್ಟ ಪದ್ಧತಿಯ ವಿರುದ್ಧ ಹೋರಾಟಕ್ಕೆ ಕರೆ

    ಗೊಲ್ಲರಹಟ್ಟಿಗಳಲ್ಲಿ ಶಾಸಕಿ ಜಾಗೃತಿ – ಅನಿಷ್ಟ ಪದ್ಧತಿಯ ವಿರುದ್ಧ ಹೋರಾಟಕ್ಕೆ ಕರೆ

    ದಾವಣಗೆರೆ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಗೊಲ್ಲರಹಟ್ಟಿಯಲ್ಲಿನ ಕಂದಾಚಾರ ನಿರ್ಮೂಲನೆಗೆ ಶಾಸಕಿ ಪೂರ್ಣಿಮ ಅವರು ಜಾಗೃತಿ ಮೂಡಿಸಿ, ಈ ಅನಿಷ್ಟ ಪದ್ಧತಿಯ ವಿರುದ್ಧ ನಾವೆಲ್ಲರೂ ಹೋರಾಡೋಣ ಎಂದು ಕರೆ ಕೊಟ್ಟಿದ್ದಾರೆ.

    ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದ ಗೊಲ್ಲರಹಟ್ಟಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕ ಪೂರ್ಣಿಮಾ ಅವರು ಭೇಟಿ ಕೊಟ್ಟಿದ್ದರು. ಚಿಕ್ಕಗಂಗೂರು ಗ್ರಾಮದ ಗೊಲ್ಲರಹಟ್ಟಿಗಳಲ್ಲಿ ಅದರಲ್ಲೂ ಜುಂಜಪ್ಪನ ಪೂಜೆ ಮಾಡುವ ಗೊಲ್ಲರಹಟ್ಟಿಯಲ್ಲಿ ಮುಟ್ಟಾದ ಹಾಗೂ ಹೆರಿಗೆಯಾದ ಮಹಿಳೆಯರನ್ನು ಮನೆಯಿಂದ ಹೊರಗಿಡುವುದು ವಾಡಿಕೆಯಿದೆ. ಹೀಗಾಗಿ ಇಂತಹ ಅನಿಷ್ಟ ಪದ್ಧತಿಯಿಂದ ಹೊರ ಬರಬೇಕು. ಇದರ ವಿರುದ್ಧ ಹೋರಾಟ ನಡೆಸಿ ಅನಿಷ್ಟ ಪದ್ಧತಿಯನ್ನು ತೊಲಗಿಸಬೇಕು ಎಂದು ಮಹಿಳೆಯರಲ್ಲಿ ಶಾಸಕಿ ಜಾಗೃತಿ ಮೂಡಿಸಿದರು.

    ಅಲ್ಲದೇ ಪ್ರಕೃತಿದತ್ತವಾಗಿ ಮಹಿಳೆಯರು ಋತುಮತಿಯಾಗುತ್ತಾರೆ. ಇದನ್ನೇ ಇಂದು ಅನಿಷ್ಟ ಎನ್ನುವಂತೆ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರನ್ನು ಹೊರಗಿಟ್ಟು ಚಿತ್ರಹಿಂಸೆ ಪಡುವಂತೆ ಮಾಡಲಾಗುತ್ತಿದೆ. ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಶೋಷಣೆ ಮಾಡದಂತೆ ಗೊಲ್ಲರಹಟ್ಟಿಯ ನಿವಾಸಿಗಳಿಗೆ ತಾಕೀತು ಮಾಡಿದರು. ಇನ್ನು ಮುಂದೆ ನಿಮ್ಮ ಮನೆಯಲ್ಲಿ ಹಿರಿಯರಿಗೆ ಇದರ ಬಗ್ಗೆ ಜಾಗೃತಿವಹಿಸಿ, ಮತ್ತೊಮ್ಮೆ ಇಂತಹ ಅನಿಷ್ಟ ಪದ್ಧತಿಯನ್ನು ಆಚರಣೆ ಮಾಡದಂತೆ ಗ್ರಾಮದ ಮಹಿಳೆಯರಿಗೆ ಶಾಸಕಿ ಪೂರ್ಣಿಮಾ ತಿಳಿ ಹೇಳಿದರು.

  • ಪೌರತ್ವ ಕಾಯ್ದೆ ವಿರುದ್ಧ ಬೀದಿಗಿಳಿದ ಮುಸ್ಲಿಂ ಮಹಿಳೆಯರು

    ಪೌರತ್ವ ಕಾಯ್ದೆ ವಿರುದ್ಧ ಬೀದಿಗಿಳಿದ ಮುಸ್ಲಿಂ ಮಹಿಳೆಯರು

    ಚಾಮರಾಜನಗರ: ಪೌರತ್ವ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರುದ್ಧ ಚಾಮರಾಜನಗರದಲ್ಲಿ ಸಾವಿರಾರು ಮುಸ್ಲಿಂ ಮಹಿಳೆಯರು ಪ್ರತಿಭಟನೆ ನಡೆಸಿದರು.

    ಚಾಮರಾಜನಗರದಲ್ಲಿ ಪ್ರತಿಭಟನೆ ಪ್ರವಾಸಿ ಮಂದಿರದಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ಲಾರಿ ಸ್ಟ್ಯಾಂಡ್ ಬಳಿ ಸಾವಿರಾರು ಮಹಿಳೆಯರು ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ರಾಷ್ಟ್ರೀಯ ಹೆದ್ದಾರಿಯನ್ನು ಒಂದು ಗಂಟೆಗೂ ಹೆಚ್ಚು ಕಾಲ ತಡೆದು ಧರಣಿ ನಡೆಸಿದರು. ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ಮಹಿಳೆಯರು ಭಾರೀ ಪ್ರತಿಭಟನೆ ನಡೆಸಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದರು.

    ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‍ಆರ್‍ಸಿಯನ್ನು ಹಿಂಪಡೆಯುವವರೆಗೂ ನಿರಂತರವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.

  • ಪ್ರಧಾನಿ ಮೋದಿ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ- 90 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ದೋಚಿ ಪರಾರಿ

    ಪ್ರಧಾನಿ ಮೋದಿ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ- 90 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ದೋಚಿ ಪರಾರಿ

    ಕೊಪ್ಪಳ: ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಮೂವರು ಮಹಿಳೆಯರಿಗೆ ವಂಚಿಸಿ, 90 ಗ್ರಾಂ ಚಿನ್ನಾಭರಣ, 3 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಗಂಗಾವತಿ ತಾಲೂಕಿನ ಹಿರೇಡಕನಕಲ್ ಗ್ರಾಮದಲ್ಲಿ ನಡೆದಿದೆ.

    ಉಮೇಶ್ ಲಿಂಗದಳ್ಳಿ ಮಹಿಳೆಯರಿಗೆ ವಂಚಿಸಿದ ಆರೋಪಿ. ಭಾರತ ಪ್ರತಿಯೊಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಣ ಜಮಾ ಆಗುತ್ತದೆ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಅದರಂತೆ ಈಗಾಗಲೇ ಕೆಲವರ ಖಾತೆಗೆ ಹಣ ಜಮಾ ಆಗಿದೆ. ನಿಮ್ಮ ಖಾತೆಗೂ ಹಣ ಜಮಾ ಆಗಲು ನೀವು ಸ್ವಲ್ಪ ಹಣ ಖರ್ಚು ಮಾಡಬೇಕು ಎಂದು ಉಮೇಶ್ ಲಿಂಗದಳ್ಳಿ, ಹಿರೇಡಕನಕಲ್ ಗ್ರಾಮದ ಮೂವರು ಮಹಿಳೆಯರನ್ನು ನಂಬಿಸಿದ್ದ.

    ಉಮೇಶ್ ಲಿಂಗದಳ್ಳಿ ಮಾತು ನಂಬಿದ್ದ ಮೂವರು ಮಹಿಳೆಯರು ತಲಾ 10 ಗ್ರಾಂ ಚಿನ್ನಾಭರಣ ಹಾಗೂ ಒಂದೊಂದು ಲಕ್ಷ ರೂ. ನೀಡಿದ್ದರು. ಆದರೆ ಹಣ ಬರುತ್ತೆ ಎಂದು ಕಾಯುತ್ತಿದ್ದ ಮಹಿಳೆಯರಿಗೆ ಉಮೇಶ್‍ನ ಗೊತ್ತಾಗಿತ್ತು. ಹೀಗಾಗಿ ಹಣ ವಾಪಸ್ ನೀಡುವಂತೆ ಮಹಿಳೆಯರು ಎಂದು ದುಂಬಾಲು ಬಿದ್ದಿದ್ದರ. ಆದರೆ ಆರೋಪಿಯು ಬೌನ್ಸ್ ಆಗಿದ್ದ ಚೆಕ್‍ಗಳನ್ನು ನೀಡಿ ತಲೆಮರೆಸಿಕೊಂಡಿದ್ದಾನೆ.

    ಹಣ ಮತ್ತು ಚಿನ್ನಾಭರಣ ಕಳೆದುಕೊಂಡ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಜೀವನ ಪೂರ್ತಿ ದುಡಿದು ಕುಟುಂಬಕ್ಕಾಗಿ, ಮಕ್ಕಳಿಗಾಗಿ ಜೋಡಿಸಿದ್ದ ಬಂಗಾರ ಹಣ ಹೋಯಿತಲ್ಲ ಎಂದು ಉಮೇಶ್ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ನಮಗೆ ಬರಬೇಕಾದ ಹಣ ಮತ್ತು ಬಂಗಾರ ವಾಪಸ್ ಕೊಡಿಸುವಂತೆ ಬೇಡಿಕೊಳ್ಳುತ್ತಿದ್ದಾರೆ.