Tag: women

  • ಕೂಲಿ ಕೆಲ್ಸಕ್ಕೆ ಅಸ್ಸಾಂನಿಂದ ಬಂದ ಅಮ್ಮ ಮಗಳು – ಕರೆಂಟ್ ಶಾಕ್‍ನಿಂದ ಸಾವು

    ಕೂಲಿ ಕೆಲ್ಸಕ್ಕೆ ಅಸ್ಸಾಂನಿಂದ ಬಂದ ಅಮ್ಮ ಮಗಳು – ಕರೆಂಟ್ ಶಾಕ್‍ನಿಂದ ಸಾವು

    ಮಡಿಕೇರಿ: ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಬಂದ ಅಮ್ಮ ಮಗಳು ಕಾಳು ಮೆಣಸು ಕೊಯ್ಯಲು ಹೋಗಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಂದಾ ಗ್ರಾಮದ ಈಚೂರು ಎಂಬಲ್ಲಿ ನಡೆದಿದೆ.

    ಮೃತ ಮಹಿಳೆಯರನ್ನು 45 ವಷ೯ದ ಸ್ವರೂಪ ಖಾತುನ್ ಮತ್ತು 20 ವಷ೯ದ ಹಸೀನಾ ಎಂದು ಗುರುತಿಸಲಾಗಿದೆ. ಈಚೂರು ಗ್ರಾಮದ ರಮೇಶ್ ಅವರ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾಳು ಕೊಯ್ಯಲು ಅಲ್ಯೂಮಿನಿಯಂ ಏಣಿಯನ್ನು ಬಳಸಿದ್ದೆ ಈ ಘಟನೆ ಕಾರಣ ಎನ್ನಲಾಗಿದೆ.

    ಕರಿಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿ ಬಳಕೆ ಮಾಡಬೇಡಿ ಎಂದು ಕಾರ್ಮಿಕ ಇಲಾಖೆಯ ಆದೇಶ ಹೋರಾಡಿಸಿದ್ದರೂ ಕೊಡಗಿನ ಬಹುತೇಕ ಕಾಫಿ ತೋಟದಲ್ಲಿ ಆದೇಶ ಪಾಲನೆ ಆಗುತ್ತಿಲ್ಲ. ಇದರಿಂದಾಗಿ ಇಂದು ಕೂಲಿ ಹುಡುಕಿ ಬಂದ ಎರಡು ಜೀವಗಳು ಬಲಿಯಾಗಿವೆ. ಕಾಳು ಕೊಯ್ಯಲು ಹೋದ ಖಾತುನ್ ಮತ್ತು ಹಸೀನಾ ಅಲ್ಯೂಮಿನಿಯಂ ಏಣಿ ಮೇಲೆ ಹತ್ತಿದ್ದಾರೆ. ಈ ವೇಳೆ ತೋಟದ ಮೇಲೆ ಹಾದುಹೋಗಿದ್ದ 11 ಕೆವಿ ವಿದ್ಯುತ್ ತಂತಿಯಿಂದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮಹಿಳೆಯರಿಗೂ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ವಿದ್ಯುತ್ ಸ್ಪರ್ಶದ ತೀವ್ರತೆ ಇಬ್ಬರು ಮಹಿಳೆಯರ ಕಾಲು ಸುಟ್ಟು ಕರಕಲಾಗಿದೆ. ಮೃತದೇಹಗಳನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸೀರೆಯುಟ್ಟು ಝುಂಬಾ ಡಾನ್ಸ್ ಮಾಡಿ, ಓಡಿದ ನೀರೆಯರು

    ಸೀರೆಯುಟ್ಟು ಝುಂಬಾ ಡಾನ್ಸ್ ಮಾಡಿ, ಓಡಿದ ನೀರೆಯರು

    ಧಾರವಾಡ: ಸೀರೆ ಅನ್ನೋದು ಭಾರತೀಯ ಮಹಿಳೆಯರಿಗೆ ಅಚ್ಚುಮೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಸೀರೆ ಕೇವಲ ಕೆಲವೇ ಸಂದರ್ಭಗಳಲ್ಲಿ ಉಟ್ಟುಕೊಳ್ತಾರೆ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರೋ ಹಿನ್ನೆಲೆಯಲ್ಲಿ ಈ ಭಾರತೀಯ ದಿರಿಸು ಸೀರೆಯನ್ನೇ ಮುಖ್ಯವಾಗಿಟ್ಟುಕೊಂಡು ಧಾರವಾಡದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.

    ಬೆಳ್ಳಂಬೆಳಗ್ಗೆ ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಧಾರವಾಡದ ಕರ್ನಾಟಕ ಕಾಲೇಜು ಆವರಣ. ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರೋ ಹಿನ್ನೆಲೆಯಲ್ಲಿ ಭಾರತೀಯ ಪುರಾತನ ಸಂಪ್ರದಾಯದ ಪ್ರಮುಖ ದಿರಿಸು ಸೀರೆಯನ್ನೇ ಕೇಂದ್ರವಾಗಿಟ್ಟುಕೊಂಡು ನಗರದ ಖಾಸಗಿ ಸಂಸ್ಥೆಯೊಂದು ಮಹಿಳೆಯರಿಗಾಗಿ ಓಟ ಹಾಗೂ ನಡಿಗೆಯ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಒಂದೆಡೆ ನಾ ಮುಂದು ತಾ ಮುಂದು ಅಂತಾ ಓಡುತ್ತಿರೋ ನೀರೆಯರು, ಮತ್ತೊಂದು ಕಡೆ ಸಂಗೀತಕ್ಕೆ ಡ್ಯಾನ್ಸ್ ಮಾಡುತ್ತಿರೋ ಮಹಿಳೆಯರು. ಖುಷಿಯಿಂದ ಬಣ್ಣ ಬಣ್ಣದ ಸೀರೆಯನ್ನುಟ್ಟು ಸಂಭ್ರಮಿಸುತ್ತಿರೋ ಮಹಿಳೆಯರ ಗುಂಪು ಕಾರ್ಯಕ್ರದಲ್ಲಿ ನೆರೆದವರ ಗಮನ ಸೆಳೆಯಿತು.

    ಸ್ಪರ್ಧೆಯಲ್ಲಿ ಭಾಗವಹಿಸೋರು ಸೀರೆಯುಟ್ಟುಕೊಳ್ಳೋದು ಕಡ್ಡಾಯ. ಹೀಗೆ ಸೀರೆಯುಟ್ಟುಕೊಂಡು ನಗರದ ಕೆಸಿಡಿ ವೃತ್ತದಿಂದ ಕಲಾಭವನದವರೆಗೆ ಓಡಬೇಕು. ಓಡಲು ಸಾಧ್ಯವಾಗದವರು ನಡೆಯಬೇಕು. ಬೆಳ್ಳಂಬೆಳಗ್ಗೆಯೇ ಈ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.

    ಮೊದಲಿಗೆ ಕಾಲೇಜು ಆವರಣದಲ್ಲಿ ಅರ್ಧ ಗಂಟೆ ಝುಂಬಾ ವ್ಯಾಯಾಮ ಡಾನ್ಸ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ನಿಂತಲ್ಲಿಯೇ ಸಂಗೀತಕ್ಕೆ ಮೈಮುರಿದು ನೃತ್ಯ ಮಾಡಿದರು. ಅದಾದ ಬಳಿಕವೇ ನಡೆಯೋ ಹಾಗೂ ಓಡೋ ಸ್ಪರ್ಧೆ. ಯುವತಿಯರು, ಮಹಿಳೆಯರು, ವೃದ್ಧೆಯರು ನಾ ಮುಂದು ತಾ ಮುಂದು ಅಂತ ಕಾಲೇಜು ರಸ್ತೆಯಲ್ಲಿ ಓಡಿ ಕಲಾಭವನ ತಲುಪಿದರು. ಸೀರೆಯನ್ನುಟ್ಟುಕೊಂಡು ಕೂಡ ಓಡಬಹುದು ಅನ್ನೋದನ್ನು ಮಹಿಳೆಯರು ನಿರೂಪಿಸಿದರು. ಆಯೋಜಕರು ನೂರು ಮಹಿಳೆಯರು ಭಾಗವಹಿಸಬಹುದು ಅಂದುಕೊಂಡಿದ್ದರು. ಆದರೆ ಅದಕ್ಕಿಂತ ಹೆಚ್ಚಿಗೆ ಮಹಿಳೆಯರು ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿ, ಆಯೋಜಕರಿಗೆ ಅಚ್ಚರಿ ಮೂಡಿಸಿದರು.

    ಇತ್ತೀಚಿನ ದಿನಗಳಲ್ಲಿ ಸೀರೆಯುಟ್ಟುಕೊಳ್ಳೋದು ಹಳೆಯ ಸಂಪ್ರದಾಯ ಅನ್ನೋ ಭಾವನೆ ಬಂದು ಬಿಟ್ಟಿದೆ. ಸೀರೆಗಿಂತ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಚೂಡಿದಾರ್ ಸಾಕಷ್ಟು ಕಂಫರ್ಟ್ ಕೊಡುತ್ತೆ ಅನ್ನೋ ಭಾವನೆಯಲ್ಲಿ ಯುವತಿಯರಿದ್ದಾರೆ. ಆದರೆ ಭಾರತೀಯ ಸಂಪ್ರದಾಯದ ಪ್ರಮುಖ ದಿರಿಸು ಸೀರೆಯನ್ನುಕೊಂಡರೆ ನಡೆದಾಡೋದೇನು ಓಡಲು ಕೂಡ ಸಾಧ್ಯ ಅನ್ನೋದನ್ನು ಇವತ್ತು ನಡೆದ ಸ್ಪರ್ಧೆ ಎತ್ತಿ ತೋರಿಸಿದ್ದಂತೂ ಸತ್ಯ.

  • ದೇವಸ್ಥಾನದಲ್ಲಿ ಮಾತೆಯರಿಗೆ ಮಾರ್ಷಲ್ ಆರ್ಟ್ಸ್

    ದೇವಸ್ಥಾನದಲ್ಲಿ ಮಾತೆಯರಿಗೆ ಮಾರ್ಷಲ್ ಆರ್ಟ್ಸ್

    ಬೆಂಗಳೂರು: ಮುಜರಾಯಿ ಇಲಾಖೆ ಮಾತೆಯರಿಗೆ ಮಾರ್ಷಲ್ ಆರ್ಟ್ಸ್ ಅನ್ನೋ ಹೊಸ ಯೋಜನೆಯ ಜಾರಿಗೆ ಚಿಂತನೆ ನಡೆಸಿದೆ.

    ರಾಜ್ಯ ಮುಜರಾಯಿ ಇಲಾಖೆಯ ವ್ಯಾಪ್ತಿಯ ಆಯ್ದ ಪ್ರಮುಖ 10 ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಸ್ವ ರಕ್ಷಣೆಗೆ ಮಾರ್ಷಲ್ ಆರ್ಟ್ಸ್ ಕಲಿಸುವ ಯೋಜನೆ ಜಾರಿಗೆ ಚಿಂತಿಸಲಾಗುತ್ತಿದೆ. ದೇವಸ್ಥಾನದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಸೆಲ್ಫ್ ಡಿಫೆನ್ಸ್ ಹೇಳಿ ಕೊಡುವ ಬಗ್ಗೆ ಕಾರ್ಯ ಯೋಜನೆ ರೂಪಿಸುವ ಸಂಬಂಧ ಮುಜರಾಯಿ ಸಚಿವರು ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಗೆ ಸಿಕ್ಕ ಮಾಹಿತಿ ಪ್ರಕಾರ, ಹಿಂದೂ ಮಹಿಳೆಯರ ರಕ್ಷಣೆಗೆ ದೇವಸ್ಥಾನಗಳಲ್ಲೇ ಆತ್ಮ ರಕ್ಷಣಾ ಕಲೆ ಕಲಿಸಬೇಕು, ಅದಕ್ಕೆ ರಾಜ್ಯದ ಆಯ್ದ 10 ದೇವಸ್ಥಾನಗಳಲ್ಲಿ ಆತ್ಮರಕ್ಷಣಾ ಕಲೆಯ ಅಭ್ಯಾಸ ಆರಂಭಿಸುವ ಬಗ್ಗೆ ಕಾರ್ಯಸೂಚಿ ಸಿದ್ಧಪಡಿಸುವಂತೆ ಮುಜರಾಯಿ ಸಚಿವರು ತಮ್ಮ ಇಲಾಖಾ ಸಿಬ್ಬಂಧಿಗೆ ಸೂಚಿಸಿದ್ದಾರೆ.

    ಸಂಘಟನೆಯೊಂದರ ಮನವಿ ಮೇರೆಗೆ ಸಚಿವರು ಈ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಜರಾಯಿ ಇಲಾಖೆಗೂ ಮಾರ್ಷಲ್ ಆರ್ಟ್ಸ್‌ಗೂ  ಏನು ಸಂಬಂಧವಿದೆ ಗೊತ್ತಿಲ್ಲ. ಆದರೆ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಇಂತದೊಂದು ಯೋಜನೆ ಜಾರಿಗೆ ಚಿಂತನೆ ನಡೆದಿದೆ.

  • 108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    108 ಅಂಬುಲೆನ್ಸ್‌ನಲ್ಲಿ ಒಂದೇ ದಿನ ಎರಡು ಹೆರಿಗೆ: ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು

    ರಾಯಚೂರು: ಜಿಲ್ಲೆಯಲ್ಲಿ ಒಂದೇ ದಿನ ಎರಡು ಕಡೆ 108 ಆರೋಗ್ಯ ಕವಚ ವಾಹನದಲ್ಲಿ ಗರ್ಭಿಣಿಯರು ಮಗುವಿಗೆ ಜನ್ಮ ನೀಡಿದ್ದಾರೆ.

    ದೇವದುರ್ಗ ತಾಲೂಕಿನ ಕೊತ್ತದೊಡ್ಡಿಯ ಮಾನಸಮ್ಮ ಹಾಗೂ ಸಿರವಾರ ತಾಲೂಕಿನ ಮಾಡಗಿರಿಯ ಪದ್ದಮ್ಮ ಅವರಿಗೆ 108 ವಾಹನದಲ್ಲೇ ಹೆರಿಗೆಯಾಗಿದೆ. ವಿಶೇಷವೆಂದರೆ ಗರ್ಭಿಣಿಯರಿಬ್ಬರೂ ಸಹ ಗಂಡು ಮಗುವಿಗೆ ಜನ್ಮನೀಡಿದ್ದಾರೆ.

    ಇಬ್ಬರನ್ನೂ ಪ್ರತ್ಯೇಕವಾಗಿ 108ರಲ್ಲಿ ರಾಯಚೂರಿನ ರಿಮ್ಸ್‌ಗೆ ಕರೆತರುವಾಗ ಹೆರಿಗೆಯಾಗಿವೆ. 108 ಆರೋಗ್ಯ ಕವಚ ವಾಹನದ ಸಿಬ್ಬಂದಿ ಇಬ್ಬರಿಗೂ ಸುರಕ್ಷಿತ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಂದಿರು ರಾಯಚೂರಿನ ರಿಮ್ಸ್‌ಗೆ ದಾಖಲಾಗಿದ್ದಾರೆ. ಶಿಶುಗಳು ಹಾಗೂ ಬಾಣಂತಿಯರು ಆರೋಗ್ಯದಿಂದಿದ್ದಾರೆ.

    108 ವಾಹನದಲ್ಲಿ ಹೆರಿಗೆಯಾಗುವುದು ಜಿಲ್ಲೆಯಲ್ಲಿ ಹೊಸದೇನಲ್ಲವಾದರೂ ಒಂದೇ ದಿನ ಎರಡು ಕಡೆಗಳಲ್ಲಿ ಹೆರಿಗೆಯಾಗಿರುವುದು ವಿಶೇಷವಾಗಿದೆ. ಹಾಳಾದ ರಸ್ತೆಗಳಿಂದಾಗಿ ಗರ್ಭಿಣಿಯರು ಆಸ್ಪತ್ರೆ ಮಾರ್ಗಮಧ್ಯೆ ಮಗುವಿಗೆ ಜನ್ಮ ನೀಡಿದ ಉದಾಹರಣೆಗಳು ಸಹ ಇದೆ. ಆದರೆ ಈ ಎರಡು ಪ್ರಕರಣಗಳಲ್ಲಿ ಗರ್ಭಿಣಿಯರು ಹೆರಿಗೆ ನೋವು ಕಾಣಿಸಿಕೊಂಡು ಸಹಜವಾಗಿ ಮಗುವಿಗೆ ಜನ್ಮ ನೀಡಿದ್ದಾರೆ.

  • ನಿವೇಶನ ವಿವಾದ ಮಹಿಳೆಯರ ನಡುವೆ ಮಾರಾಮಾರಿ

    ನಿವೇಶನ ವಿವಾದ ಮಹಿಳೆಯರ ನಡುವೆ ಮಾರಾಮಾರಿ

    ಚಿಕ್ಕಬಳ್ಳಾಪುರ: ನಿವೇಶನ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮಾರಾಮಾರಿ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮುತ್ತೂರು ಗ್ರಾಮದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಫೆಬ್ರವರಿ 07ರಂದು ಈ ಘಟನೆ ನಡೆದಿದ್ದು, ಗ್ರಾಮದ ಮಂಜುಳಾ ಹಾಗೂ ಅನುಪಮಾ ಎಂಬವರು ನಾನಾ ನೀನಾ ಎಂದು ಕಿತ್ತಾಡಿಕೊಂಡಿದ್ದಾರೆ. ಅಸಲಿಗೆ ಹಳೆಯ ಮನೆಯ ಜಾಗವನ್ನು ಖರೀದಿ ಮಾಡಿದ್ದ ಅನುಪಮಾ ಕುಟುಂಬಸ್ಥರು ಕೆಡವಿ ಅಲ್ಲಿ ಹೊಸ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಇನೂ ಸ್ವಲ್ಪ ಜಾಗ ಉಳಿದಿದ್ದು, ಆ ಜಾಗದಲ್ಲಿ ಶೀಟ್‍ಗಳನ್ನು ಹಾಕಿಕೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.

    ಮೊದಲಿನಿಂದಲೂ ಈ ಜಾಗ ತನಗೆ ಸೇರಬೇಕು ಎಂದು ಮಂಜುಳಾ, ಅನುಪಮಾ ಕುಟುಂಬಸ್ಥರ ಜೊತೆ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ. ಇನ್ನೂ ಫೆಬ್ರವರಿ 07ರಂದು ಸಹ ಖಾಲಿ ಜಾಗದಲ್ಲಿ ಹಸು ಕಟ್ಟಿ ಹಾಕೋಕೆ ಬಂದ ಮಂಜುಳಾ ಹಾಗೂ ಅನುಪಮಾ ನಡುವೆ ಜಗಳ ನಡೆದಿದೆ. ಈ ಜಗಳದ ವಿಡಿಯೋವನ್ನು ಮಂಜುಳಾ ಮಗ ತನ್ನ ಮೊಬೈಲ್ ಸೆರೆ ಹಿಡಿದ್ದಾನೆ ಎನ್ನಲಾಗಿದೆ.

    ಈ ಘಟನೆಯಲ್ಲಿ ಮಂಜುಳಾ ಹಾಗೂ ಅನುಪಮಾ ಸೇರಿ ಅವರ ಮಾವ ಭಾವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ಈ ನಿವೇಶನ ವಿವಾದ ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

  • ಮಧ್ಯರಾತ್ರಿ ನೆರೆಮನೆ ಮೇಲೆ ದಾಳಿ – ಕಿಟಕಿ ಬಾಗಿಲು ಒಡೆದ ಮಹಿಳೆಯರು

    ಮಧ್ಯರಾತ್ರಿ ನೆರೆಮನೆ ಮೇಲೆ ದಾಳಿ – ಕಿಟಕಿ ಬಾಗಿಲು ಒಡೆದ ಮಹಿಳೆಯರು

    – ಮಲಗಿದ್ದವರ ಮನೆಯ ಮೇಲೆ ನೆರೆ ಮನೆಯವ್ರಿಂದ ಅಟ್ಯಾಕ್

    ಚಿಕ್ಕಬಳ್ಳಾಪುರ: ಮಧ್ಯರಾತ್ರಿ ದಂಪತಿ ಮನೆಯ ಮೇಲೆ ಸೈಜುಗಲ್ಲು ದೊಣ್ಣೆಗಳಿಂದ ದಾಳಿ ನಡೆಸಿರುವ ಪಕ್ಕದ ಮನೆಯವರು ಕಿಟಕಿ ಬಾಗಿಲು ಬಡಿದು ಒಡೆದು ಹಾಕಲು aಯತ್ನಿಸಿರುವ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

    ಬಾಗೇಪಲ್ಲಿ ಪಟ್ಟಣದ 9 ನೇ ವಾರ್ಡಿನಲ್ಲಿ ಈ ಘಟನೆ ನಡೆದಿದ್ದು, ಗಾರೆ ಮೇಸ್ತ್ರಿ ಲಕ್ಷ್ಮಿಪತಿಯವರ ಮನೆಯ ಮೇಲೆ ಪಕ್ಕದ ಮನೆಯ ಗಂಗಪ್ಪ ಹಾಗೂ ಅವರ ಕುಟುಂಬಸ್ಥರು ಅದರಲ್ಲೂ ಮಹಿಳೆಯರು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಲಕ್ಷ್ಮಿಪತಿಗೆ ಮನೆಯ ಬಾಗಿಲು ತೆರೆಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಮನಸ್ಸೋ ಇಚ್ಛೆ ಬೈದಿದ್ದಾರೆ.

    ನೆರೆಮನೆಯವರ ಕೃತ್ಯಕ್ಕೆ ಬೆದರಿದ ಲಕ್ಷ್ಮಿಪತಿ ಹಾಗೂ ಅವರ ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಮನೆಯಲ್ಲೇ ಚಿಲಕ ಹಾಕಿಕೊಂಡು ಒಳಗಡೆಯೇ ಇದ್ದು ಹೊರಗೆ ಬಂದಿಲ್ಲ. ಈ ವೇಳೆ ದೊಡ್ಡ ದೊಡ್ಡ ಸೈಜುಗಲ್ಲು, ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಕಿಟಕಿ ಬಾಗಿಲು ಹೊಡೆದಿದ್ದು, ಮನೆಯ ಹೊರಭಾಗದಲ್ಲಿದ್ದ ಬೈಕ್ ಹಾಗೂ ಗೃಹೋಪಯೋಗಿ ವಸ್ತುಗಳನ್ನ ಧ್ವಂಸಗೊಳಿಸಿದ್ದಾರೆ.

    ಮೊದಲಿನಿಂದಲೂ ಈ ಲಕ್ಷ್ಮಿಪತಿ ಹಾಗೂ ಗಂಗಪ್ಪ ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಪರಸ್ಪರ ವೈಮನಸ್ಸಿದೆ. ಹೀಗಾಗಿ ಕೆಲ ದಿನಗಳ ಹಿಂದೆ ಲಕ್ಷ್ಮಿಪತಿಯ ಮಗಳು ಶಾಲೆಯಿಂದ ಸ್ನೇಹಿತೆ ಜೊತೆ ಬರುವಾಗ ಗಂಗಪ್ಪ ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದನಂತೆ. ಇದರಿಂದ ಲಕ್ಷ್ಮಿಪತಿಯ ಪತ್ನಿ ಯಾಕೆ ನನ್ನ ಮಗಳನ್ನ ಬೈತೀಯಾ ಎಂದು ಗಂಗಪ್ಪನ ಕುಟುಂಬಸ್ಥರ ಜೊತೆ ಗಲಾಟೆ ಮಾಡಿಕೊಂಡಿದ್ದರಂತೆ.

    ಈ ವಿಚಾರಕ್ಕೆ ಜಿದ್ದು ಇಟ್ಟುಕೊಂಡಿದ್ದ ಗಂಗಪ್ಪ ಹಾಗೂ ಅವರ ಕುಟುಂಬಸ್ಥರು ಮಧ್ಯರಾತ್ರಿ ಲಕ್ಷ್ಮಿಪತಿ ಮನೆಯವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ದಾಳಿ ವೇಳೆಯೇ ಪೊಲೀಸರಿಗೆ ಕರೆ ಮಾಡಿ ತಮ್ಮನ್ನ ರಕ್ಷಣೆ ಮಾಡಿ ಎಂದು ಲಕ್ಷ್ಮಿಪತಿ ಕುಟುಂಬದವರು ಕೇಳಿಕೊಂಡಿದ್ದಾರೆ. ಸಾಕಷ್ಟು ಸಮಯದ ನಂತರ ಸ್ಥಳಕ್ಕೆ ಬಂದ ಪೊಲೀಸರು, ಗಂಗಪ್ಪ ಕುಟುಂಬಸ್ಥರಿಗೆ ಬುದ್ಧಿವಾದ ಹೇಳಿ ಹೋಗಿದ್ದಾರೆ. ಆದರೆ ಪೊಲೀಸರು ಹೋದ ಮೇಲೆ ಮತ್ತೆ ಅದೇ ರೀತಿ ದಾಳಿ ನಡೆಸಿದ್ದಾರೆ. ಹೀಗಾಗಿ ಗಂಗಪ್ಪ ಹಾಗೂ ಕುಟುಂಬಸ್ಥರ ದಾಳಿಗೆ ಬೆದರಿರುವ ಲಕ್ಷ್ಮಿಪತಿ ದಂಪತಿ ಹಾಗೂ ಮಕ್ಕಳು ಸದ್ಯ ತಮ್ಮ ಸ್ವಂತ ಮನೆಯನ್ನ ತೊರೆದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

  • ಈ ಬಾರಿನಲ್ಲಿ ಲೇಡೀಸ್‍ಗೆ ಮಾತ್ರ ಪ್ರವೇಶ, ಪುರುಷರಿಗಿಲ್ಲ ಎಂಟ್ರಿ

    ಈ ಬಾರಿನಲ್ಲಿ ಲೇಡೀಸ್‍ಗೆ ಮಾತ್ರ ಪ್ರವೇಶ, ಪುರುಷರಿಗಿಲ್ಲ ಎಂಟ್ರಿ

    – 22 ವರ್ಷದ ಯುವತಿಯಿಂದ 80 ವರ್ಷದ ವೃದ್ಧೆಯರಿಗೆ ಪ್ರವೇಶ

    ಬೆಂಗಳೂರು: ಸಿಲಿಕಾನ್ ಸಿಟಿ ಜನ ಮೊದಲೇ ಕ್ಲಬ್, ಪಬ್ ಪ್ರಿಯರು. ರಾಜಧಾನಿಯಲ್ಲಿ ಕತ್ತಲಾದರೆ ಸಾಕು ರಂಗಿನ ಲೋಕ ತೆರೆದುಕೊಳ್ಳುತ್ತೆ. ಪಬ್, ಕ್ಲಬ್‍ಗೆ ಹೋಗಬೇಕೆಂಬ ಆಸೆ ಹುಡುಗಿಯರಿಗೆ ಇರುತ್ತೆ. ಆದರೆ ಇಲ್ಲಿ ಸ್ಥಳಗಳಲ್ಲಿ ರಕ್ಷಣೆ ಇಲ್ಲ ಎಂಬ ಕಾರಣಕ್ಕಾಗಿ ಬಹುತೇಕ ಹುಡುಗಿಯರು ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ. ಈ ಚಿಂತೆ ಹೋಗಲಾಡಿಸೋಕೆ ಬೆಂಗಳೂರಲ್ಲಿ ಲೇಡಿಸ್ ಬಾರ್‌ವೊಂದು ಓಪನ್ ಆಗಲಿದೆ.

    ಮಹಿಳೆಯರಿಂದ, ಮಹಿಳೆಯರಿಗಾಗಿ ಬೆಂಗಳೂರಿನಲ್ಲಿ ಬಾರ್‌ವೊಂದು ತಲೆಯೆತ್ತಲಿದೆ. ನಗರದ ಬ್ರಿಗೇಡ್ ರಸ್ತೆಯಲ್ಲಿ ‘ಮಿಸ್ ಆ್ಯಂಡ್ ಮಿಸೆಸ್ ರೆಸ್ಟೋರೆಂಟ್ ಮತ್ತು ಲಾಂಜ್ ಬಾರ್’ ಹೆಸರಿನ ಬಾರ್ ಆರಂಭಗೊಳ್ಳಲಿದೆ. ಇಲ್ಲಿ ಮಾಲೀಕರಿಂದ ಬೌನ್ಸರ್‌ವರೆಗೆ, ವ್ಯಾಲೆಟ್ ಪಾರ್ಕಿಂಗ್, ಕ್ಯಾಷಿಯರ್, ಬಾಣಸಿಗರು, ಸಫ್ಲೈಯರ್‌ವರೆಗೆ ಎಲ್ಲರೂ ಮಹಿಳೆಯರೇ. ಇಲ್ಲಿ ಒಬ್ಬನೇ ಒಬ್ಬ ಪುರುಷನಿಗೂ ಎಂಟ್ರಿಯಿಲ್ಲ. ಇದು ಮಹಿಳಾ ದಿನಾಚರಣೆಗಿಂತ ಮೊದಲು ಅಂದರೆ ಮಾರ್ಚ್ 6 ಅಥವಾ 7 ರಂದು ಉದ್ಘಾಟನೆಗೊಳ್ಳಲಿದೆ.

    ಪಂಜೂರಿ ವಿ.ಶಂಕರ್, ಅಂಕಿತಾ ಶೆಟ್ಟಿ, ಅರುಣಾ ಶ್ರೀಧರ್, ಸಹನಾ ಸಂಪತ್, ಆಶಾ ಹೆಗಡೆ ಹಾಗೂ ಸೌಮ್ಯಾ ಶ್ರೀನಿವಾಸ್ ಸೇರಿದ ಮಹಿಳಾ ತಂಡ ಈ ಹೋಟೆಲ್‍ನ ಪರಿಕಲ್ಪನೆಯನ್ನು ಹೊರತಂದಿದೆ. ಇನ್ನೂ ಈ ಬಾರ್‌ಗೆ 22 ವರ್ಷದ ಯುವತಿಯಿಂದ ಹಿಡಿದು 80 ವರ್ಷದವರೆಗಿನ ವೃದ್ಧೆಯರಿಗೆ ಪ್ರವೇಶವಿದೆ. ಇಲ್ಲಿ ಕುಡಿಯುವುದರ ಜೊತೆಗೆ ಸ್ಪಾ, ನೇಲ್ ಆರ್ಟ್, ಪೆಡಿಕ್ಯೂರ್, ಲೆಗ್ ಮಸಾಜ್ ಸೇರಿದಂತೆ ಹಲವು ಸೇವೆಗಳಿವೆ.

    ಪ್ರತಿ ದಿನ ಮಧ್ಯಾಹ್ನ 12ರಿಂದ ತಡರಾತ್ರಿ 1ರವರೆಗೂ ಕಾರ್ಯ ನಿರ್ವಹಿಸಲಿದೆ. ಮಹಿಳೆಯರ ರಕ್ಷಣೆಗಾಗಿ ತಡರಾತ್ರಿ ಕ್ಯಾಬ್ ಬುಕ್ ಮಾಡಿ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಯಾರಾದರೂ ಪುರುಷರು ತೊಂದರೆ ಕೊಟ್ಟರೇ ಬೌನ್ಸರ್‌ಗಳಿಂದ ಹೊಡೆತ ತಿನ್ನಬೇಕಾಗುತ್ತದೆ. ಈ ಬಾರಿನಲ್ಲಿ ಲೇಡಿಸ್ ಹುಡುಗರ ಮುಜುಗರವಿಲ್ಲದೇ ಆರಾಮಾಗಿ ಏಂಜಾಯ್ ಮಾಡಬಹುದಾಗಿದೆ.

  • ದಳಪತಿಗಳ ಕೋಟೆಯಲ್ಲಿ ಮಹಿಳೆಯರಿಗೆ ಇನ್ಮುಂದೆ ಪ್ರಬಲ ಆದ್ಯತೆ

    ದಳಪತಿಗಳ ಕೋಟೆಯಲ್ಲಿ ಮಹಿಳೆಯರಿಗೆ ಇನ್ಮುಂದೆ ಪ್ರಬಲ ಆದ್ಯತೆ

    ಬೆಂಗಳೂರು : ಲೋಕಸಭೆ, ಉಪ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆಗಳಿಂದ ಕಂಗೆಟ್ಟಿರೋ ಜೆಡಿಎಸ್ ಈಗ ಮಹಿಳಾ ಮತದಾರರ ಮೇಲೆ ಕಣ್ಣಿಟ್ಟಿದೆ. ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆಯಾದ್ರು ಆದ್ಯತೆ ಮಾತ್ರ ಪುರುಷರಿಗೆ ನೀಡಲಾಗ್ತಿದೆ. ಇದರಿಂದ ಮಹಿಳಾ ಮತಗಳು ಜೆಡಿಎಸ್ ಗೆ ಬರುತ್ತಿಲ್ಲ ಅನ್ನೋದು ಪಕ್ಷದ ಲೆಕ್ಕಾಚಾರ. ಹೀಗಾಗಿ ಮಹಿಳೆಯರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಿ ಮುಂಬರುವ ಚುನಾವಣೆ ಎದುರಿಸೋಕೆ ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ.

    ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ 33% ಮಹಿಳಾ ಮೀಸಲಾತಿಗಾಗಿ ಬಿಲ್ ಜಾರಿಗೆ ತಂದಿದ್ದರು. ರಾಜ್ಯಸಭೆಯಲ್ಲಿ ಕಾಯ್ದೆ ಆಂಗೀಕಾರವೂ ಆಗಿದೆ. ಲೋಕಸಭೆಯಲ್ಲಿ ಮಾತ್ರ ಕಾಯ್ದೆ ಅಂಗೀಕಾರ ಆಗಬೇಕು. ಇದಕ್ಕಾಗಿ ಹೋರಾಟ ಮಾಡಲು ಜೆಡಿಎಸ್ ನಿರ್ಧಾರ ಮಾಡಿದೆ. ಇತ್ತೀಚೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ 33% ಮೀಸಲಾತಿ ನೀಡಬೇಕು ಅಂತ ನಿರ್ಣಯ ಅಂಗೀಕಾರ ಮಾಡಿದೆ. ಮಹಿಳೆಯರಿಗೂ ರಾಜಕೀಯ ಮೀಸಲಾತಿ ಕೊಡಬೇಕು ಅನ್ನೋದು ಜೆಡಿಎಸ್ ವಾದ. ಹೀಗಾಗಿ ದೆಹಲಿ ಮಟ್ಟದಲ್ಲಿ ಹೋರಾಟಕ್ಕೂ ಚಿಂತನೆ ನಡೆಸಿದೆ.

    ಹೋರಾಟ ಒಂದು ಕಡೆಯಾದ್ರೆ ಅವಕಾಶಗಳ ಬಗ್ಗೆ ಜೆಡಿಎಸ್ ನಲ್ಲಿ ಚಿಂತನೆ ನಡೆದಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 33% ಮಹಿಳೆಯರಿಗೆ ಟಿಕೆಟ್ ನೀಡುವ ಕುರಿತು ದೇವೇಗೌಡರು ಆಸಕ್ತಿ ತೋರಿಸಿದ್ದಾರೆ. ಅಲ್ಲದೆ ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲೂ ಹೆಚ್ಚಿನ ಸ್ಥಾನ ಮಹಿಳೆಯರಿಗೆ ಕೊಡಲು ಚಿಂತನೆ ಮಾಡಿದ್ದಾರೆ. ಯಾರೇ ಪಕ್ಷ ಸಂಘಟನೆ ಮಾಡಿದ್ರು ಟಿಕೆಟ್ ಕೊಡ್ತೀವಿ. ಮಹಿಳೆಯರೇ ಸ್ಪರ್ಧೆ ಮಾಡಬಹುದು ಅನ್ನೋ ಸಂದೇಶ ರವಾನೆ ಮಾಡಿದ್ದಾರೆ. ಇದೆಲ್ಲದರ ಮಧ್ಯೆ ಮುಂದಿನ ತಿಂಗಳು ಅರಮನೆ ಮೈದಾನದಲ್ಲಿ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಅಂದಿನ ಸಮಾವೇಶದಂದು ಮಹಿಳೆಯರಿಗೆ ಟಿಕೆಟ್ ನೀಡುವ ಘೋಷಣೆ ಮಾಡೋ ಸಾಧ್ಯತೆ ಇದೆ. ದೇವೇಗೌಡರ ಈ ಮಹಿಳಾ ಮೀಸಲಾತಿ ಅಸ್ತ್ರ ಮುಂದಿನ ಚುನಾವಣೆಯಲ್ಲಿ ಯಶಸ್ವಿ ಆಗುತ್ತಾ ಕಾದು ನೋಡಬೇಕು.

  • ಕ್ಯಾಮೆರಾ ಅಳವಡಿಸಿ ಲೈಂಗಿಕ ಕ್ರಿಯೆ ನಡೆಸೋ 182 ವಿಡಿಯೋ ಚಿತ್ರೀಕರಿಸಿದ್ರು!

    ಕ್ಯಾಮೆರಾ ಅಳವಡಿಸಿ ಲೈಂಗಿಕ ಕ್ರಿಯೆ ನಡೆಸೋ 182 ವಿಡಿಯೋ ಚಿತ್ರೀಕರಿಸಿದ್ರು!

    – ಪ್ರೀತಿ ಹೆಸರಲ್ಲಿ ಹಣಕ್ಕಾಗಿ ಬ್ಲ್ಯಾಕ್ ಮೇಲ್

    ಕೋಲ್ಕತ್ತಾ: ಯುವತಿಯರಿಗೆ ನಂಬಿಸಿ ಮೋಸ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಉದ್ಯಮಿಗಳನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳಕ್ಕೆ ಸೇರಿದ ಆದಿತ್ಯ ಅಗರ್ವಾಲ್, ಅನೀಶ್ ಬಂಧಿತ ಆರೋಪಿಗಳು. ಇಬ್ಬರು ಸ್ನೇಹಿತರಾಗಿದ್ದು, ಯುವತಿಯರನ್ನು ನಂಬಿಸಿ ತಮ್ಮೊಂದಿಗೆ ಅವರನ್ನು ರಹಸ್ಯ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರೀತಿ ಹೆಸರಿನಲ್ಲಿ ನಂಬಿಸಿ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ವೇಳೆ ರಹಸ್ಯ ಸ್ಥಳಗಳಲ್ಲಿ ಮೊದಲೇ ಕ್ಯಾಮೆರಾ ಅಳವಡಿಸಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆ ಬಳಿಕ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದರು.

    2013ರಿಂದಲೇ ಇಂತಹ ಕೃತ್ಯ ನಡೆಸುತ್ತಿದ್ದ ಆರೋಪಿಗಳು 2018 ರಿಂದ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದರು. ಈ ವಿಡಿಯೋಗಳನ್ನು ತೋರಿಸಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಆರೋಪಿಗಳಿಂದ ಬ್ಲ್ಯಾಕ್ ಮೇಲ್ ಗೆ ಒಳಗಾದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಬಳಿ ಮೊದಲು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಆಕೆ ಹಣವನ್ನು ನೀಡುತ್ತಿದಂತೆ ಮತ್ತೆ 10 ಲಕ್ಷ ರೂ. ನೀಡುವಂತೆ ಒತ್ತಾಯ ಮಾಡಿದ್ದರು.

    ಮಹಿಳೆಯ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಮೊದಲು ಅನೀಶ್‍ನನ್ನು ಬಂಧಿಸಿದ್ದ ಪೊಲೀಸರಿಗೆ ವಿಚಾರಣೆ ವೇಳೆ ಆದಿತ್ಯ ಬಗ್ಗೆ ಮಾಹಿತಿ ಲಭಿಸಿತ್ತು. ಇಬ್ಬರನ್ನು ಬಂಧಿಸಿದ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿ ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. ಪೊಲೀಸರು ಬಂಧನದ ವೇಳೆ ಆರೋಪಿಗಳಿಂದ ಲ್ಯಾಪ್‍ಟಾಪ್ ವಶಕ್ಕೆ ಪಡೆದಿದ್ದು, ಇದರಲ್ಲಿ 180ಕ್ಕೂ ಹೆಚ್ಚು ಸೆಕ್ಸ್ ವಿಡಿಯೋಗಳು ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 2019 ನವೆಂಬರ್ ನಿಂದ ಆರೋಪಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಸದ್ಯ ಆರೋಪಿಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದನ್ನು ಓದಿ: ಹಳೆ ಗೆಳೆಯನನ್ನು ಮರೆಯಲು 2ನೇ ಲವ್- ಮೋಸ ಹೋಗಿ ವಿಷ ಸೇವಿಸಿದ ಯುವತಿ

  • ಹೆಣ್ಮಕ್ಳನ್ನ ಕೆಣಕಿದ್ರೆ ಹುಷಾರ್ – ತುಮಕೂರಿನಲ್ಲಿ ಹೆಣ್ಮಕ್ಳ ರಕ್ಷಣೆಗೆ ಕಲ್ಪತರು ಪಡೆ ಸಜ್ಜು

    ಹೆಣ್ಮಕ್ಳನ್ನ ಕೆಣಕಿದ್ರೆ ಹುಷಾರ್ – ತುಮಕೂರಿನಲ್ಲಿ ಹೆಣ್ಮಕ್ಳ ರಕ್ಷಣೆಗೆ ಕಲ್ಪತರು ಪಡೆ ಸಜ್ಜು

    ತುಮಕೂರು: ಹೆಣ್ಣು ಮಕ್ಕಳನ್ನು ಚುಡಾಯಿಸುವ ಬೀದಿ ಕಾಮಣ್ಣರಿಗೆ, ಕಾಲೇಜು ಬಳಿ ನಿಂತು ವಿದ್ಯಾರ್ಥಿಯರನ್ನ ಕಾಡುವ ಕಾಮುಕರಿಗೆ ಬುದ್ಧಿ ಕಲಿಸಲು ತುಮಕೂರಿನಲ್ಲಿ ಹೊಸ ಪಡೆ ಸಜ್ಜಾಗಿದೆ. ಹುಡುಗಿಯರನ್ನು ಕೆಣಕಿದರೆ ಕೇಳೋರು ಯಾರು ಅಂತ ಕಾಲರ್ ಮೇಲೇರಿಸಿ ಓಡಾಡಿದರೆ ಜೈಲೂಟ ಗ್ಯಾರೆಂಟಿ. ಯಾಕೆಂದರೆ ಬೀದಿ ಕಾಮಣ್ಣರಿಗೆ, ಸ್ತ್ರೀ ಪೀಡಕರಿಗೆ ಬುದ್ಧಿ ಕಲಿಸಲು ತುಮಕೂರಿನಲ್ಲಿ ಕಲ್ಪತರು ಪಡೆ ಎಂಬ ಮಹಿಳಾ ಪೊಲೀಸ್ ಪಡೆ ಸನ್ನದ್ಧವಾಗಿದೆ. ರಾಜ್ಯದಲ್ಲೇ ಮೊದಲನೆ ಬಾರಿಗೆ ತುಮಕೂರು ಪೊಲೀಸರು ಕಲ್ಪತರು ಪಡೆ ಹೆಸರಿನ ಮಹಿಳಾ ಪೊಲೀಸರ ತಂಡ ರೆಡಿಮಾಡಿದ್ದಾರೆ.

    ಮಹಿಳೆಯರು, ಬಾಲಕಿಯರು, ಯುವತಿಯರ ರಕ್ಷಣೆಗೆ ಶಾಲಾ-ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಹಿಳಾ ಹಾಸ್ಟೇಲ್ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಕಾಡುವ ಪೋಲಿಗಳಿಗೆ ಬುದ್ಧಿ ಕಲಿಸಲು ಈ ತಂಡ ಸಜ್ಜಾಗಿದೆ. ಅಬಲೆಯರಿಗೆ ರಕ್ಷಣೆ ನೀಡುವ ಜವಬ್ದಾರಿ ಹೊತ್ತಿರುವ ಈ ತಂಡಕ್ಕೆ ಕಳೆದ 6 ತಿಂಗಳಿಂದ ನಿರಂತರವಾಗಿ ತರಬೇತಿ ನೀಡಲಾಗಿದೆ. ಈ ತಂಡ ಪ್ರತಿದಿನ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಸ್ವಯಂ ರಕ್ಷಣೆ ಬಗ್ಗೆ ಹೆಣ್ಣು ಮಕ್ಕಳಿಗೆ ತರಬೇತಿ ನೀಡುತ್ತಿದೆ. ಜೊತೆಗೆ ಅಪತ್ಕಾಲದಲ್ಲಿ ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುವುದು ಹೇಗೆ? ಎದುರಾಳಿಗಳ ದಾಳಿಗೆ ಪ್ರತಿದಾಳಿ ತೋರುವ ಕಲೆಯನ್ನು ಹೇಳಿ ಕೊಡಲಾಗುತ್ತಿದೆ. ಇದರ ಜೊತೆಗೆ ಬಾಲಕಿಯರಿಗೆ ತಮ್ಮನ್ನು ತಾವು ಕಾಪಾಡುವುದು ಹೇಗೆ? ಕಾಮುಕರ ವರ್ತನೆಗಳು ಹೇಗಿರುತ್ತೇವೆ? ಸಾರ್ವಜನಿಕ ಸ್ಥಳದಲ್ಲಿ ಹೇಗೆಲ್ಲಾ ಎಚ್ಚರವಾಗಿರಬೇಕು? ಎನ್ನುವುದನ್ನ ಮನದಟ್ಟು ಮಾಡಿಕೊಡಲಾಗುತ್ತಿದೆ.

    ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುವ ಈ ಪಡೆಗೆ ನಾಲ್ಕು ವಿಭಾಗಗಳಿಂದ 80 ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ತುಮಕೂರು ನಗರ, ಶಿರಾ, ತಿಪಟೂರು, ಕುಣಿಗಲ್ ವಿಭಾಗಕ್ಕೆ ಪ್ರತ್ಯೇಕವಾಗಿ 8 ಮಹಿಳಾ ಪೊಲೀಸ್ ಪೇದೆಗಳ ತಂಡವಿದ್ದು, ಪ್ರತಿ ತಂಡಕ್ಕೆ ಓರ್ವ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಅನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ತಂಡಕ್ಕೆ ಪ್ರತ್ಯೇಕವಾದ ವಾಹನ, ಸಮವಸ್ತ್ರ ಕೂಡ ನೀಡಲಾಗಿದೆ.

    ಎಸ್‍ಪಿ ಡಾ. ಕೋನ ವಂಶಿ ಕೃಷ್ಣ ಈ ಯೋಜನೆಯ ರೂವಾರಿಯಾಗಿದ್ದು, ಈ ಕಲ್ಪತರು ಪಡೆ ಮಹಿಳಾ ರಕ್ಷಣೆಯ ಜವಬ್ದಾರಿಯನ್ನು ಮಾತ್ರ ಗಮನಿಸುವಂತೆ ಸೂಚನೆ ನೀಡಲಾಗಿದೆ. ಪ್ರತಿದಿನ ಶಾಲಾ-ಕಾಲೇಜು ಸೇರಿದ್ದಂತೆ ಮಹಿಳೆಯರಿಗೆ ಅಸುರಕ್ಷತೆ ಅನ್ನಿಸುವ ಸ್ಥಳಗಳಿಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

    ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೈಹಿಕ, ಮಾನಸಿಕ ಹಿಂಸೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಈ ರೀತಿ ವಿಭಿನ್ನವಾದ ತಂಡ ರಚನೆಯಾಗಿದೆ. ಕಾಮುಕರಿಂದ ತೊಂದರೆಗೊಳಗಾದ ಮಹಿಳೆಯರು ಕೂಡಲೇ ಈ ಕಲ್ಪತರು ಪಡೆಗೆ ಮಾಹಿತಿ ನೀಡಬಹುದಾಗಿದೆ. ಅದಕ್ಕಾಗಿ ಕಲ್ಪತರು ಪಡೆ ಸಿಬ್ಬಂದಿಗಳ ನಂಬರ್ ಗಳನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಮಹಿಳೆಯರ ಸುರಕ್ಷತೆಗೆ ತುಮಕೂರು ಪೊಲೀಸರು ತೆಗೆದುಕೊಂಡಿರುವ ಈ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.