Tag: women

  • ಸಾವಿರಾರು ಮಾಸ್ಕ್ ತಯಾರಿಸ್ತಿದ್ದಾರೆ ಧಾರವಾಡ ಮಹಿಳೆಯರು

    ಸಾವಿರಾರು ಮಾಸ್ಕ್ ತಯಾರಿಸ್ತಿದ್ದಾರೆ ಧಾರವಾಡ ಮಹಿಳೆಯರು

    ಹುಬ್ಬಳ್ಳಿ: ಕೊರೊನಾ ಹಾವಳಿಯಿಂದ ಮಾಸ್ಕ್ ಕೊರತೆ ಉಂಟಾಗದಂತೆ ತಡೆಯಲು ಮತ್ತು ಅಗತ್ಯವಿರುವ ಪ್ರತಿಯೊಬ್ಬರಿಗೂ ಉಚಿತ ಮಾಸ್ಕ್ ದೊರೆಯುವಂತೆ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಕ್ಷೇತ್ರದ ಬಡ ಮಹಿಳೆಯರಿಗೆ ಸಂಸದರ ಅನುದಾನದಡಿ ವಿತರಿಸಿದ್ದ ಹೊಲಿಗೆ ಯಂತ್ರದ ಸಹಾಯದಿಂದ ಈಗಾಗಲೇ ಸಾವಿರಾರು ಮಾಸ್ಕ್ ಸಿದ್ಧಪಡಿಸಲಾಗಿದೆ. ಈಗ ವಿತರಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಕೊರೊನಾ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೋರಾಟಕ್ಕೆ ಕೈಜೋಡಿಸಿರುವ ಧಾರವಾಡದ ಲೋಕಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಮಹಿಳೆಯರು ತಮಗೆ ನೀಡಿದ ಯಂತ್ರದಿಂದ ಉಚಿತವಾಗಿ ಮಾಸ್ಕ್ ಹೊಲಿದುಕೊಡುವ ಮೂಲಕ ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ.

    ಕೇಂದ್ರ ಸಚಿವ ಜೋಶಿ ಅವರು ತಮ್ಮ ಕ್ಷೇತ್ರದಲ್ಲಿ 544 ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡಿದ್ದಾರೆ. ಅದರಲ್ಲಿ ಸಂಸದರ ಆದರ್ಶ ಗ್ರಾಮವಾದ ಹಾರೋಬೆಳವಡಿ, ಕಬ್ಬೇನೂರು ಗ್ರಾಮ ಸೇರಿದಂತೆ ಕ್ಷೇತ್ರದ 200ಕ್ಕೂ ಹೆಚ್ಚು ಮಹಿಳೆಯರು ಈಗಾಗಲೇ ಮಾಸ್ಕ್ ತಯಾರಿಕೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

    ತಲಾ ಒಬ್ಬರು ದಿನಕ್ಕೆ 100 ರಿಂದ 150 ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. ಸಚಿವ ಜೋಶಿ ಅವರು ತಮ್ಮದೇ ಪೋಷಕತ್ವದಲ್ಲಿರುವ ಕ್ಷಮತಾ ಸೇವಾ ಸಂಸ್ಥೆಯನ್ನು ಈ ಜನೋಪಕಾರಿ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಾಸ್ಕ್ ತಯಾರಿಕೆಗೆ ಅಗತ್ಯವಿರುವ ಬಟ್ಟೆ ಮತ್ತು ದಾರವನ್ನು ಸಂಸ್ಥೆಯಿಂದ ಉಚಿತವಾಗಿ ವಿತರಣೆ ಮಾಡಿಸಿದ್ದಾರೆ. ಸಚಿವರ ಈ ಮಹತ್ವದ ಸೇವಾ ಕಾರ್ಯಕ್ಕೆ ಗ್ರಾಮೀಣ ಪ್ರದೇಶದ ಮಹಿಳೆಯರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು.

    ಕ್ಷಮತಾ ಸೇವಾ ಸಂಸ್ಥೆಯೂ 3 ಲಕ್ಷ ಮಾಸ್ಕ್ ವಿತರಿಸುವ ಗುರಿಯನ್ನು ಇಟ್ಟುಕೊಂಡಿದ್ದು, ಲೋಕಸಭಾ ಕ್ಷೇತ್ರದಲ್ಲಿ ಬರುವ ಸಾವಿರಾರು ಬಡ ಮಹಿಳೆಯರಿಗೆ ‘ಸುವರ್ಣ ಎಜುಕೇಶನ್ ಟ್ರಸ್ಟ್’ ಉಚಿತ ಹೊಲಿಗೆ ತರಬೇತಿ ನೀಡಿದೆ. ತರಬೇತಿ ಹೊಂದಿದ ಮಹಿಳೆಯರನ್ನು ಬಳಸಿಕೊಂಡು ಈಗಾಗಲೇ ಉತ್ತಮ ಗುಣಮಟ್ಟದ 40 ಸಾವಿರಕ್ಕೂ ಹೆಚ್ಚು ಮಾಸ್ಕ್‍ಗಳನ್ನು ತಯಾರಿದಿದೆ.

    ಬಡ ಮಹಿಳೆಯರ ನಿಶ್ವಾರ್ಥ ಸೇವೆ
    ಸಂಸದರ ಅನುದಾನದಡಿ ಈ ಹಿಂದೆ ವಿತರಣೆ ಮಾಡಿದ ಯಂತ್ರಗಳು ಇಂದು ಬಹಳಷ್ಟು ಸಹಕಾರಿಯಾಗಿದ್ದು, ಮಹಿಳೆಯರು ಸ್ವಯಂ ಪ್ರೇರಣೆಯಿಂದ ಉಚಿತ ಮಾಸ್ಕ್ ತಯಾರಿಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂದಿನ ಕಠಿಣ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಮಹಿಳೆಯರು ಮಾಸ್ಕ್ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಮಾಸ್ಕ್ ತಯಾರಿಸುವ ಕುಶರಿ ಕೆಲಸಕ್ಕೆ ಸಂಭಾವನೆ ನೀಡಲು ಮುಂದಾದರೂ ಅದನ್ನು ಈ ಮಹಿಳೆಯರು ನಿರಾಕರಿಸುತ್ತಿದ್ದಾರೆ.

  • ಟೆಕ್ಕಿಗಳ ಪ್ಲಾನ್‍ನಿಂದ ತಯಾರಾಯ್ತು 10 ಸಾವಿರ ಸಾಫ್ಟ್ ಮಾಸ್ಕ್

    ಟೆಕ್ಕಿಗಳ ಪ್ಲಾನ್‍ನಿಂದ ತಯಾರಾಯ್ತು 10 ಸಾವಿರ ಸಾಫ್ಟ್ ಮಾಸ್ಕ್

    ಹಾಸನ: ಟೆಕ್ಕಿಗಳ ಮಾಸ್ಟರ್ ಪ್ಲಾನ್‍ನಿಂದಾಗಿ 15 ಜನ ಬಡ ಮಹಿಳೆಯರಿಗೆ ಕೆಲಸ ಸಿಕ್ಕಿರುವುದರ ಜೊತೆಗೆ, ಅರಸೀಕೆರೆ ನಗರಸಭೆಗೆ ಸುಮಾರು ಹತ್ತು ಸಾವಿರದಷ್ಟು ಮಾಸ್ಕ್ ಪೂರೈಕೆಯಾಗಿದೆ.

    ಅರಸೀಕೆರೆ ಮೂಲದ ಕಿರಣ್, ಶಶಿಧರ್, ಪ್ರದೀಪ್, ಪವಿತ್ರ, ಕಾವ್ಯ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಎಫೆಕ್ಟ್ ಹಿನ್ನೆಲೆ ವರ್ಕ್ ಫ್ರಮ್ ಹೋಂ ಸೂಚನೆಯಂತೆ ಐವರು ಊರಿಗೆ ವಾಪಸ್ಸಾಗಿದ್ದರು. ಈ ವೇಳೆ ಅವರು ಸ್ಥಳೀಯವಾಗಿ ಮಾಸ್ಕ್ ಗೆ ಸಮಸ್ಯೆ ಇರುವುದು ಮತ್ತು ಹೊಲಿಗೆ ಕೆಲಸ ಮಾಡುತ್ತಿದ್ದ ಮಹಿಳೆಯರ ಆರ್ಥಿಕ ಸಮಸ್ಯೆಯನ್ನು ಗಮನಿಸಿದ್ದಾರೆ. ತಾವು ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಂಪಾದನೆ ಮಾಡುವಂತೆ ನಮ್ಮ ಊರಿನ ಮಹಿಳೆಯರಿಗೂ ಸಹಾಯವಾಗಲಿ ಎಂದು ನಿರ್ಧರಿಸಿದ ಐದೂ ಜನರು ವಿಂಗ್ಸ್ ಎನ್‍ಜಿಓ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ.

    ನಂತರ ಅರಸೀಕೆರೆ ನಗರಸಭೆ ಅಧಿಕಾರಿಗಳನ್ನು ಭೇಟಿ ಮಾಡಿ 8 ರೂಪಾಯಿಗೆ ಮಾಸ್ಕ್ ಹೊಲಿಸಿ ಕೊಡುತ್ತೇವೆ. ಇದರಿಂದ ಸ್ಥಳೀಯ ಮಹಿಳೆಯರಿಗೆ ಸಹಾಯವಾಗುವುದರ ಜೊತೆಗೆ ಮಾಸ್ಕ್ ಸಮಸ್ಯೆ ಕೂಡ ಒಂದಷ್ಟು ಪರಿಹಾರವಾಗಲಿದೆ ಎಂದು ಮಾತುಕತೆಯಾಡಿ ಕೆಲಸ ಮಾಡಲು ಒಪ್ಪಿಗೆ ಪಡೆದುಕೊಂಡಿದ್ದಾರೆ. ನಂತರ ಹೊಲಿಗೆ ಕೆಲಸ ಕಲಿತ ಮಹಿಳೆಯರ ಮನೆಗಳಿಗೆ ತಾವೇ ಸ್ವತಃ ಕಚ್ಚಾ ವಸ್ತು ಪೂರೈಕೆ ಮಾಡಿ ಮಾಸ್ಕ್ ಹೊಲಿಸಿದ್ದಾರೆ.

    ಪ್ರತಿ ಒಂದು ಮಾಸ್ಕ್ ತಯಾರಿಸಲು 8 ರೂಪಾಯಿ ವೆಚ್ಚ ತಗಲುತ್ತಿದ್ದು, ಯಾವುದೇ ಲಾಭ ಪಡೆಯದೇ 8 ರೂಪಾಯಿಗೇ ಅರಸೀಕೆರೆ ನಗರಸಭೆಗೆ ಮಾಸ್ಕ್ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಹಿಳೆಯರು ತಮ್ಮ ಮನೆಯಲ್ಲೇ ಕುಳಿತು ದಿನವೊಂದಕ್ಕೆ ಸುಮಾರು 800 ರಿಂದ 1 ಸಾವಿರ ಸಂಪಾದನೆ ಮಾಡುವಂತಾಗಿದೆ. ಆಫೀಸ್ ಕೆಲಸದ ಜೊತೆಗೆ ಮಾಸ್ಕ್ ಸಮಸ್ಯೆ ಬಗೆಹರಿಸಲು ಮತ್ತು ಮಹಿಳೆಯರ ಆರ್ಥಿಕ ಸಮಸ್ಯೆಗೆ ನೆರವಾಗಲು ಮುಂದಾದ ಟೆಕ್ಕಿಗಳ ಪ್ಲಾನ್ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ.

  • ಲಾಕ್‍ಡೌನ್ ನಡುವೆ ಜನ್‍ಧನ್ ಹಣಕ್ಕಾಗಿ ಮುಗಿಬಿದ್ದ ನೂರಾರು ಮಹಿಳೆಯರು

    ಲಾಕ್‍ಡೌನ್ ನಡುವೆ ಜನ್‍ಧನ್ ಹಣಕ್ಕಾಗಿ ಮುಗಿಬಿದ್ದ ನೂರಾರು ಮಹಿಳೆಯರು

    – ಎಸ್‍ಪಿ ಮನವಿಗೂ ಡೋಂಟ್ ಕೇರ್

    ಬೀದರ್: ಜನರಿಗೆ ಎಷ್ಟೇ ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಅಕೌಂಟ್‍ಗೆ ಜಮೆಯಾಗಿರುವ ಹಣವನ್ನು ತೆಗೆದುಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಬೀದರ್ ನಲ್ಲಿ ನೂಕು ನುಗ್ಗಲು ಉಂಟಾಗಿದೆ.

    ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನುಕೂಲವಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಮಹಿಳೆಯರ ಜನ್‍ಧನ್ ಅಕೌಂಟ್‍ಗೆ ಹಣ ಹಾಕಿದ್ದಾರೆ. ಆದರೆ ಗಡಿ ಜಿಲ್ಲೆ ಬೀದರ್ ನಲ್ಲಿ ಈ ಹಣವನ್ನು ತೆಗೆದುಕೊಳ್ಳಲು ವೇಳೆ ನೂರಾರು ಮಹಿಳೆಯರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಎಲ್ಲಾ ಮಹಿಳೆಯರು ಗುಂಪು ಗುಂಪಾಗಿ ಬ್ಯಾಂಕ್ ಮುಂದೆ ಜಮಾಯಿಸಿದ್ದರು.

    ಬೀದರ್‍ನ ಬ್ರೀಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿರುವ ಎಸ್.ಬಿ.ಐ ಬ್ಯಾಂಕ್‍ನ ಗ್ರಾಹಕರ ಸೇವಾ ಕೇಂದ್ರದಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಸ್ವತಃ ಎಸ್ಪಿ ನಾಗೇಶ್ ಸ್ಥಳಕ್ಕೆ ಬಂದು ಮಹಿಳೆಯರಲ್ಲಿ ಮನವಿ ಮಾಡಿದರೂ ಮಹಿಳೆಯರು ಮಾತ್ರ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಿಲ್ಲ.

    ಬೀದರ್ ನಲ್ಲಿ ಈಗಾಗಲೇ 10 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಹತ್ತು ಪ್ರಕರಣಗಳ ಪೈಕಿ ಓಲ್ಡ್ ಸಿಟಿಯಲ್ಲಿ ಬರೋಬ್ಬರಿ 8 ಪ್ರಕರಣಗಳು ಪತ್ತೆಯಾಗಿವೆ. ಜನ್‍ಧನ್ ಹಣ ತೆಗೆದುಕೊಳ್ಳಲು ಬಂದಿರುವ ಮಹಿಳೆಯರು ಬಹುತೇಕ ಓಲ್ಡ್ ಸಿಟಿಯ ನಿವಾಸಿಗಳಾಗಿದ್ದಾರೆ.

  • ಅಜ್ಜಿ ಮಾತು ಕೇಳಿ ನೈವೇದ್ಯವಾಗಿ ಮೊಸರನ್ನ ತಂದ ನೂರಾರು ಮಹಿಳೆಯರು

    ಅಜ್ಜಿ ಮಾತು ಕೇಳಿ ನೈವೇದ್ಯವಾಗಿ ಮೊಸರನ್ನ ತಂದ ನೂರಾರು ಮಹಿಳೆಯರು

    -ಭಕ್ತರನ್ನ ಮನೆಗೆ ಕಳುಹಿಸಲು ಪೊಲೀಸರ ಹರಸಾಹಸ

    ರಾಯಚೂರು: ಅನಾಮಿಕ ಅಜ್ಜಿಯ ಮಾತು ನಂಬಿದ ನೂರಾರು ಮಹಿಳೆಯರು ನೈವೇದ್ಯವಾಗಿ ಮೊಸರನ್ನ ತಂದಿದ್ದನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಕೊರೊನಾ ಲಾಕ್‍ಡೌನ್ ನಡುವೆ ದೇವಸ್ಥಾನಕ್ಕೆ ಆಗಮಿಸಿದ ಮಹಿಳೆಯರನ್ನು ಮನೆಗೆ ಕಳುಹಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.

    ಕೊರಾನಾ ವೈರಸ್ ಗೆ ಶಾಂತಿ ಆಗಬೇಕೆಂದರೆ ಮಾರೆಮ್ಮ ದೇವಿಗೆ ಮೊಸರನ್ನ ನೀಡಬೇಕಂತೆ. ಹೀಗಂತ ರಾಯಚೂರಿನಲ್ಲಿ ಅನಾಮಿಕ ಅಜ್ಜಿಯೊಬ್ಬಳು ಹೇಳಿದ ಮಾತನ್ನ ಕೇಳಿ ನೂರಾರು ಜನ ಮಹಿಳೆಯರು ನಗರದ ಕಂದಗಡ್ಡೆ ಮಾರೆಮ್ಮ ದೇವಾಲಯಕ್ಕೆ ಮೊಸರನ್ನ ನೈವೇದ್ಯ ನೀಡಿದ್ದಾರೆ. ಲಾಕ್ ಡೌನ್ ಇದ್ದರೂ ಲೆಕ್ಕಿಸದೇ ನೂರಾರು ಜನ ದೇವಾಲಯಕ್ಕೆ ಬಂದು ಮುಗಿಬಿದ್ದು ನೈವೇದ್ಯ ಕೊಟ್ಟಿದ್ದಾರೆ.

    ಮೈಯಲ್ಲಿ ದೇವರು ಬಂದು ಹೇಳಿದೆ ಅಂತ ಹೇಳಿದ್ದ ಅಜ್ಜಿ ಮಾತನ್ನ ಕೇಳಿ ಜನ ನೈವೇದ್ಯ ನೀಡಲು ಬಂದಿದ್ದಾರೆ. ಕೊರೊನಾ ಗಂಭೀರತೆಯನ್ನ ಅರ್ಥಮಾಡಿಕೊಳ್ಳದೆ, ಯಾವುದೇ ಸಾಮಾಜಿಕ ಅಂತರ ಕಾಪಾಡದೆ ಜನ ಯಾವುದೋ ಅಜ್ಜಿ ಮಾತು ಕೇಳಿ ಗುಂಪುಗುಂಪಾಗಿ ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಜನ ಗುಂಪು ಸೇರುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿದ್ದವರನ್ನ ಚದುರಿಸಿ ಕಳುಹಿಸಿದ್ದಾರೆ.

    ಇದೇ ರೀತಿ ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನಂದಾದೀಪ ಆರಿದೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ವಾಟ್ಸಪ್ ಗಳಲ್ಲಿ ಸುದ್ದಿ ನೋಡಿದ ಜನರು ರಾತ್ರೋರಾತ್ರಿ ಮನೆಯನ್ನು ಶುಚಿಗೊಳಿಸಿ ಮನೆಯ ಮುಂದೆ ದೀಪ ಬೆಳಗಿದ್ದರು. ನಂತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗಡೆ ಅವರು ಸ್ಪಷ್ಟನೆ ನೀಡಿ ಜನರ ಆತಂಕವನ್ನು ದೂರು ಮಾಡಿದ್ದರು.

  • ಲಾಕ್‍ಡೌನ್ ಎಫೆಕ್ಟ್: ಊಟಕ್ಕಾಗಿ ತಹಶೀಲ್ದಾರ್ ಕಚೇರಿಗೆ ನುಗ್ಗಿದ ಮಹಿಳೆಯರು

    ಲಾಕ್‍ಡೌನ್ ಎಫೆಕ್ಟ್: ಊಟಕ್ಕಾಗಿ ತಹಶೀಲ್ದಾರ್ ಕಚೇರಿಗೆ ನುಗ್ಗಿದ ಮಹಿಳೆಯರು

    ರಾಯಚೂರು: ಐದು ದಿನಗಳಿಂದ ಊಟವಿಲ್ಲದೆ ಪರದಾಡಿದ ಬೀದಿಬದಿಯ ಅಲೆಮಾರಿ ವ್ಯಾಪಾರಿಗಳು ಊಟಕ್ಕಾಗಿ ತಹಶೀಲ್ದಾರ್ ಕಚೇರಿಗೆ ನುಗ್ಗಿರುವ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.

    ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಹೊಟ್ಟೆಪಾಡಿಗೆ ದುಡಿಯಲು ಬಂದ ಅಲೆಮಾರಿಗಳಿಗೆ ಕೆಲಸವಿಲ್ಲದೆ ಊಟವೂ ಇಲ್ಲದಂತಾಗಿದೆ.

    ಊಟ ನೀಡುವಂತೆ ಕೇಳಿಕೊಂಡು ತಹಶೀಲ್ದಾರ್ ಕಚೇರಿಗೆ ಮಹಿಳೆಯರು ನುಗ್ಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಐದಾರು ದಿನಗಳಿಂದ ವ್ಯಾಪಾರವೇ ಇಲ್ಲದಾಗಿ ಊಟವೂ ಸಿಕ್ಕಿಲ್ಲ. ದೆಹಲಿಯಿಂದ ವ್ಯಾಪಾರಕ್ಕಾಗಿ ಸಿಂಧನೂರಿಗೆ ಆಗಮಿಸಿದ 10 ಕುಟುಂಬಗಳು ಕಳೆದ 5 ದಿನಗಳಿಂದ ಊಟ ಇಲ್ಲದೇ ಪರದಾಡಿವೆ.

    ಹಸಿವು ತಾಳಲಾರದೆ ಸಿಂಧನೂರು ತಹಶೀಲ್ದಾರ್ ಕಛೇರಿಗೆ ನುಗ್ಗಿ ದಿನಸಿ ಅಥವಾ ಊಟದ ವ್ಯವಸ್ಥೆಗೆ ಒತ್ತಾಯಿಸಿದ್ದಾರೆ. ಊಟದ ವ್ಯವಸ್ಥೆ ಮಾಡುವವರೆಗೆ ಕಚೇರಿ ಬಿಟ್ಟು ಕದಲುವುದಿಲ್ಲ ಅಂತ ಮಹಿಳೆಯರು ಪಟ್ಟು ಹಿಡಿದಿದ್ದಾರೆ. ಕೊನೆಗೆ ಸಿಂಧನೂರು ತಹಶೀಲ್ದಾರ್ ಮಂಜುನಾಥ್ 50 ಕೆ.ಜಿ ಅಕ್ಕಿ ನೀಡಿದ್ದು ಊಟದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

  • ಉಪ್ಪಿನಕಾಯಿ- ಹಪ್ಪಳ ಸಂಡಿಗೆ ಮಾಡಿ ಜನತಾ ಕರ್ಫ್ಯೂ ವಿಧಿಸಿಕೊಂಡ ಉಡುಪಿ ಜನ

    ಉಪ್ಪಿನಕಾಯಿ- ಹಪ್ಪಳ ಸಂಡಿಗೆ ಮಾಡಿ ಜನತಾ ಕರ್ಫ್ಯೂ ವಿಧಿಸಿಕೊಂಡ ಉಡುಪಿ ಜನ

    ಉಡುಪಿ: ಕೊರೊನಾ ವಿರುದ್ಧ ಹೋರಾಡುವ ಉದ್ದೇಶದಿಂದ ಜನರೇ ಭಾರತವನ್ನು ಬಂದ್ ಮಾಡಿದ್ದಾರೆ. ಮನೆಯಿಂದ ಹೊರಗೆ ಬಾರದ ಜನ ಏನು ಮಾಡುತ್ತಿದ್ದಾರೆ ಎನ್ನುವುದು ಕುತೂಹಲ ಎಲ್ಲರಲ್ಲೂ ಇದೆ. ಸದಾ ಓಡಾಡುವ ಪುರುಷರು ಮನೆಯಲ್ಲಿದ್ದೇನೆ ಮಾಡ್ತಾರೆ ಎನ್ನುವ ಒಂದು ಯಕ್ಷ ಪ್ರಶ್ನೆಯೂ ಇದೆ. ಮನೆಯಿಂದ ಹೊರಬಾರದ ಜನ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

    ಉಡುಪಿ ನಗರದ ಲಾಲಾ ಲಜಪತ್ರಾಯ್ ರೆಸಿಡೆನ್ಷಿಯಲ್ ರಸ್ತೆಯ ಅಶ್ವಿನಿ ಕಾಮತ್ ಎಂಬವರ ಮನೆ ಮನೆಯಲ್ಲಿ ಇಡೀ ಕುಟುಂಬವೇ ಇತ್ತು. ಗಂಡ-ಹೆಂಡತಿ ಮತ್ತು ಇಬ್ಬರು ಮಕ್ಕಳು ದಿನಪೂರ್ತಿ ಹೊರಗೆ ಬಾರದೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಜನತಾ ಕರ್ಫ್ಯೂ ಎಂದು ಮನೆಯೊಳಗೆ ಇದ್ದ ಕುಟುಂಬ ಉಪ್ಪಿನಕಾಯಿ ಹಾಕುವುದರಲ್ಲಿ ಬಿಸಿಯಾಗಿತ್ತು. ಕಫ್ರ್ಯೂ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಾವಿನಕಾಯಿ ನಿಂಬೆಹುಳಿ ಮತ್ತಿತರ ವಸ್ತುಗಳನ್ನು ಜೋಡಿಸಿತ್ತು. ಕುಟುಂಬದ ನಾಲ್ವರು ಸದಸ್ಯರು ಮನೆಯಲ್ಲಿದ್ದುಕೊಂಡು ಉಪ್ಪಿನಕಾಯಿ ಹಾಕಿದ್ದಾರೆ. ಅಶ್ವಿನಿ ಕಾಮತ್ ಅವರ ಮಗ ಬೆಂಗಳೂರಿನಲ್ಲಿ ಎಂಬಿಎ ಪದವಿ ಮಾಡುತ್ತಿದ್ದು, ಸದ್ಯ ರಜೆ ಘೋಷಿಸಿರುವುದರಿಂದ ಉಡುಪಿಗೆ ಬಂದಿದ್ದಾರೆ. ರಜೆ ಮುಗಿಸಿ ಬೆಂಗಳೂರಿಗೆ ಹೋಗುವಾಗ ಮಗನಿಗೆ ಚಟ್ನಿಪುಡಿ ಉಪ್ಪಿನಕಾಯಿ ಗೊಜ್ಜು, ಸಾಂಬಾರು ಹುಡಿ ಸಾರು ಹುಡಿ ತಯಾರು ಮಾಡುವುದರಲ್ಲಿ ತಂಗಿ, ತಂದೆ ಮತ್ತು ತಾಯಿ ತೊಡಗಿಸಿಕೊಂಡಿದ್ದರು. ಜನತಾ ಕರ್ಫ್ಯೂ ನಿಂದ ಕೊರೊನಾ ವಿರುದ್ಧ ಒಂದು ಕಡೆಯಿಂದ ಜನ ಜಾಗೃತಿಯಾದರೆ ಇಡೀ ಕುಟುಂಬ ಮನೆಯಲ್ಲಿ ಇದ್ದು ಒಂದು ದಿನ ಕಳೆಯುವುದಕ್ಕೆ ಈ ಭಾನುವಾರ ಅವಕಾಶ ಆಯಿತು.

    ಪಣಿಯಾಡಿ ನಾಗರತ್ನ ಅವರ ಮನೆಯಲ್ಲಿ ನಾಲ್ಕೈದು ಗೃಹಿಣಿಯರು ಸೇರಿ ಹಪ್ಪಳ ಮತ್ತು ಸಂಡಿಗೆಯನ್ನ ತಯಾರು ಮಾಡುತ್ತಿದ್ದರು. ಸಂಬಂಧಿಕರೇ ಆಗಿರುವ ಮೂರ್ನಾಲ್ಕು ಮಂದಿ ಜೊತೆ ಸೇರಿಕೊಂಡು ಮುಂದಿನ ಮಳೆಗಾಲಕ್ಕೆ ಬೇಕಾದ ಹಪ್ಪಳ ಮತ್ತು ಸಂಡಿಗೆಯನ್ನು ಸಿದ್ಧಪಡಿಸುವ ಪ್ಲಾನ್ ಅನ್ನು ಶನಿವಾರ ಮಾಡಿಕೊಂಡಿದ್ದರು. ಬೆಳಗ್ಗೆದ್ದು ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಮಾಡಿದ್ದರು. ಬಿಸಿಲು ಏರುತ್ತಿದ್ದಂತೆ ತಮ್ಮ ಟೆರೇಸ್ ಮೇಲೆ ಹಪ್ಪಳ ಸೆಂಡಿಗೆ ಇಟ್ಟರು. ಮನೆಯ ಮಕ್ಕಳು ಕೂಡ ತಂದೆ ತಾಯಿಗೆ ಸಹಕಾರ ನೀಡಿದರು.

    ಪ್ರಧಾನಿ ಮೋದಿ ಘೋಷಿಸಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಜನ ಹೊರಗೆ ಬರಲಿಲ್ಲ. ಹಾಗಂತ ದಿನವನ್ನು ಸಂಪೂರ್ಣ ಸುಖಾಸುಮ್ಮನೆ ಕಳೆಯದೆ, ಕುಟುಂಬದ ಜೊತೆ ದಿನಪೂರ್ತಿ ಬೆರೆಯಲು ಉಪಯೋಗ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟರೆ ಏನೆಲ್ಲ ಕ್ರಮಗಳನ್ನು ಮಾಡಬಹುದು ಎಂಬುದಕ್ಕೆ ಈ ಭಾನುವಾರ ಸಾಕಷ್ಟು ಮಂದಿಗೆ ಪರೋಕ್ಷವಾಗಿ ಪಾಠ ಕಲಿಸಿದೆ. ಎಂತಹ ವಿಷಮ ಸ್ಥಿತಿ ಬಂದರೂ ಹತಾಶರಾಗದೆ ತಮ್ಮ ಕುಟುಂಬವನ್ನು ಸಮಸ್ಯೆಗಳಿಂದ, ಕರೋನಾ ವೈರಸ್ ನಿಂದ ಹೇಗೆ ದೂರ ಇಡಬಹುದು ಎಂಬ ಬಗ್ಗೆಯೂ ಹಲವಷ್ಟು ಕುಟುಂಬ ಸದಸ್ಯರು ಕೂತು ಚರ್ಚೆ ಮಾಡಿದ್ದಾರೆ.

  • ಮಾಸ್ಕ್ ಕೊರತೆ ನೀಗಿಸಲು ಮುಂದಾದ ಮಹಿಳಾ ಸ್ವಸಹಾಯ ಸಂಘ

    ಮಾಸ್ಕ್ ಕೊರತೆ ನೀಗಿಸಲು ಮುಂದಾದ ಮಹಿಳಾ ಸ್ವಸಹಾಯ ಸಂಘ

    ಚಾಮರಾಜನಗರ: ಕೊರೊನಾ ಭೀತಿ ಶುರುವಾದ ನಂತರ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಸ್ಕ್‌ಗಳ ಕೊರತೆ ಎದುರಾಗಿದೆ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲಿ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಾದಂತೆ ಮಾಸ್ಕ್‌ಗಳ ದರವೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಮಾಸ್ಕ್‌ಗಳ ಅವಶ್ಯಕತೆಯನ್ನರಿತ ಚಾಮರಾಜನಗರ ಜಿಲ್ಲೆಯ ಮಹಿಳಾ ಸ್ವಸಹಾಯ ಸಂಘವೊಂದು ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಆರಂಭಿಸಿದೆ.

    ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ಭೀತಿಯಿಂದ ಜನರು ಮಾಸ್ಕ್‌ಗಳ ಮೊರೆ ಹೋಗುತ್ತಿದ್ದಾರೆ. ಆದರೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಮಾಸ್ಕ್‌ಗಳ ಕೊರತೆ ಹೆಚ್ಚಾಗಿದೆ. ಜಿಲ್ಲೆಯ ಮೆಡಿಕಲ್ ಸ್ಟೋರ್ ಗಳಲ್ಲಿ ಬೇಡಿಕೆಗೆ ತಕ್ಕಂತೆ ಮಾಸ್ಕ್‌ಗಳು ಲಭ್ಯವಾಗುತ್ತಿಲ್ಲ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಮಾಸ್ಕ್‌ಗಳ ದರವೂ ದುಪ್ಪಾಟ್ಟಾಗುತ್ತಿದೆ. ಈ ಹಿನ್ನೆಲೆ ಮಾಸ್ಕ್‌ಗಳ ಅವಶ್ಯಕತೆಯನ್ನು ಅರಿತ ಚಾಮರಾಜನಗರ ತಾಲೂಕಿನ ಬೂದಂಬಳ್ಳಿ ಮಹಿಳಾ ಸ್ವಸಹಾಯ ಸಂಘವೊಂದು ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸಿ, ಕಡಿಮೆ ದರದಲ್ಲಿ ಗ್ರಾಹಕರಿಗೆ ಪೂರೈಸಲು ಆರಂಭಿಸಿದೆ.

    ಜಿಲ್ಲಾ ಪಂಚಾಯ್ತಿಯ ಎನ್‌ಆರ್‌ಎಲ್‌ಎಂ ಯೋಜನೆಯಡಿ ಭುವನೇಶ್ವರಿ ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು ಸಾಲ ಸೌಲಭ್ಯ ಪಡೆದು, ಹೊಲಿಗೆ ಯಂತ್ರ ಖರೀದಿಸಿ ಸ್ವ ಉದ್ಯೋಗ ಕೈಗೊಂಡಿದ್ದಾರೆ. ಮಾಸ್ಕ್‌ಗಳ ಅವಶ್ಯಕತೆ ಅರಿತು ಕಡಿಮೆ ದರದಲ್ಲಿ ಗುಣಮಟ್ಟದ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.

    ಸಾಮಾನ್ಯರಿಗೂ ಮಾಸ್ಕ್ ದೊರೆಯುವಂತೆ ಮಾಡುವ ಉದ್ದೇಶದಿಂದ ಈ ಮಹಿಳೆಯರು ಮಾಸ್ಕ್ ತಯಾರಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದ ಉತ್ತಮ ಗುಣಮಟ್ಟದ ಹತ್ತಿ ಬಟ್ಟೆ ಉಪಯೋಗಿಸಿ, ಬಳಸಲು ಸುಲಭವಾಗುವ ರೀತಿಯ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ.

    ಈ ಮಾಸ್ಕ್‌ಗಳು ಪುನರ್ ಬಳಸಬಹುದಾಗಿದ್ದು, ಬೆಲೆಯು ಕೂಡ ಕಡಿಮೆ ಇದೆ. ಇಲ್ಲಿ ಮಾಸ್ಕ್‌ಗಳು ಕಡಿಮೆ ಬೆಲೆಗೆ ದೊರೆಯುವುದನ್ನು ಮನಗಂಡು ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಮೆಡಿಕಲ್ ಶಾಪ್‍ಗಳಿಂದಲೂ ಬೇಡಿಕೆ ಬಂದಿದ್ದು, ಬೇಡಿಕೆಗೆ ಅನುಗುಣವಾಗಿ ಮಾಸ್ಕ್‌ಗಳನ್ನು ಪೂರೈಸಲು ಮಹಿಳೆಯರು ಹಗಲಿರುಳು ಶ್ರಮಿಸುತ್ತಿದ್ದಾರೆ.

  • ವಿಷಾಹಾರ ಸೇವಿಸಿ ಆತ್ಮಹತ್ಯೆಗೆ ಶರಣಾದ ಮೂವರು

    ವಿಷಾಹಾರ ಸೇವಿಸಿ ಆತ್ಮಹತ್ಯೆಗೆ ಶರಣಾದ ಮೂವರು

    – ಊಟ ಮಾಡದ ಮಕ್ಕಳು ಸೇಫ್

    ಚಿಕ್ಕಬಳ್ಳಾಪುರ: ಊಟದಲ್ಲಿ ವಿಷ ಬೆರೆಸಿಕೊಂಡು ಸೇವಿಸಿ ಇಬ್ಬರು ಮಹಿಳೆಯರು, ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕಾಶಾಪುರ ಗ್ರಾಮದ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

    ಚಿಕ್ಕಬಳ್ಳಾಪುರ ತಾಲೂಕು ದೊಡ್ಡಕಿರಗಂಬಿ ಗ್ರಾಮದ ಗಂಗರಾಜು (35), ಅಂದಾರ್ಲಹಳ್ಳಿ ಗ್ರಾಮದ ಶಿವಮ್ಮ (30) ಮತ್ತು ಗುಡಿಬಂಡೆ ತಾಲೂಕು ಧೂಮಕುಂಟಹಳ್ಳಿ ಗ್ರಾಮದ ಗಾಯತ್ರಿ (30) ಮೃತರು. ಮೃತರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಇಂದು ಬೆಳಗ್ಗೆ ಊಟದಲ್ಲಿ ಮೆಕ್ಕೆಜೋಳಕ್ಕೆ ಬಳಸುವ ಕ್ರಿಮಿನಾಶಕ ಔಷಧಿ ಬೆರೆಸಿಕೊಂಡು ಮೂವರು ಸೇವಿಸಿದ್ದು ಸಾವನ್ನಪ್ಪಿದ್ದಾರೆ.

    ಇದೇ ಸ್ಥಳದಲ್ಲಿದ್ದ ಗಾಯತ್ರಿಯ ಇಬ್ಬರು ಮಕ್ಕಳು ಊಟ ಮಾಡದೆ ಸಾವಿನಿಂದ ಪಾರಾಗಿದ್ದಾರೆ. ಮೃತ ಮಹಿಳೆಯರು ಸಹೋದರಿಯರಾಗಿದ್ದು, ಅವಿವಾಹಿತ ಗಂಗರಾಜು ಜೊತೆ ಸಂಬಂಧ ಇಟ್ಟುಕೊಂಡಿರಬಹುದು, ಹೀಗಾಗಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

    ಬಾಗೇಪಲ್ಲಿ ಪೊಲೀಸರು ಹಾಗೂ ಪ್ರಭಾರ ಎಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯ ನಂತರ ಆಸಲಿ ಸತ್ಯ ಗೊತ್ತಾಗಬೇಕಿದೆ.

  • ಗ್ರಾಮವನ್ನು ಮದ್ಯಮುಕ್ತ ಮಾಡಿದ ಪೊಲೀಸರು

    ಗ್ರಾಮವನ್ನು ಮದ್ಯಮುಕ್ತ ಮಾಡಿದ ಪೊಲೀಸರು

    ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮವನ್ನು ಪೊಲೀಸರು ಮದ್ಯಪಾನ ಮುಕ್ತ ಗ್ರಾಮವನ್ನು ಮಾಡಲು ಮುಂದಾಗಿದ್ದಾರೆ.

    ಗ್ರಾಮದಲ್ಲಿ ಸರಿ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಟ ಮಾಡಲಾಗ್ತಿತ್ತು. ಇದರಿಂದ ಗ್ರಾಮದಲ್ಲಿ ರಾತ್ರಿ ವೇಳೆ ಮಹಿಳೆಯರು, ಮಕ್ಕಳು ಹೊರಗಡೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೆಸತ್ತ ಗ್ರಾಮದ ಗುರುಹಿರಿಯರು, ಮಹಿಳಾ ಸಂಘಗಳು, ಯುವಕ ಮಂಡಳಿಗಳು, ಸಮೀಪದ ಕಾರಟಗಿ ಪೊಲೀಸ್ ಠಾಣೆಗೆ ಅಕ್ರಮ ಮದ್ಯ ಮಾರಾಟದ ವಿರುದ್ಧ ದೂರ ಕೊಟ್ಟಿದ್ದರು. ಅನಧಿಕೃತವಾಗಿ ಗ್ರಾಮದಲ್ಲಿ ಎಲ್ಲಂದರಲ್ಲಿ ಕಿರಾಣಿ ಅಂಗಡಿ, ಪಾನ್ ಶಾಪ್, ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಇದರಿಂದ ಗ್ರಾಮದಲ್ಲಿ ಅಶಾಂತಿಯುತ ವಾತವರಣ ಸೃಷ್ಟಿ ಆಗಿದ್ದು, ದಯವಿಟ್ಟು ನಮ್ಮ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಿ ಎಂದು ಗ್ರಾಮಸ್ಥರು ಮನವಿ ಮಾಡಿ ದೂರು ದಾಖಲಿಸಿದ್ದಾರೆ.

    ದೂರನ್ನು ತ್ವರಿತವಾಗಿ ಸ್ವಿಕರಿಸಿದ ಗಂಗಾವತಿ ಠಾಣೆಯ ಸಿಪಿಐ ಸುರೇಶ್ ತಳವಾರ್ ಕೂಡಲೇ ಗ್ರಾಮಕ್ಕೆ ಬಂದು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವವರಿಗೆ ವಾರ್ನ್ ಮಾಡಿ, ಕಾಲಾವಕಾಶ ಕೊಟ್ಟು ಹೋಗಿದ್ದರು. ಆದರೂ ಅಕ್ರಮ ಮದ್ಯ ಮಾರಾಟ ಮುಂದುವರೆದ ಹಿನ್ನೆಲೆ ಗ್ರಾಮದ ಮಹಿಳೆಯರು ನೀಡಿದ ದೂರಿನನ್ವಯ ಗ್ರಾಮವನ್ನು ಸಂಪೂರ್ಣ ಸಾರಾಯಿ, ಮದ್ಯ ಮುಕ್ತ ಗ್ರಾಮ ಮಾಡಲು ಪೊಲೀಸರು ಪಣ ತೊಟ್ಟು, ಗ್ರಾಮಕ್ಕೆ ಆಗಮಿಸಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ನಂತರ ಗ್ರಾಮದಲ್ಲಿ ಸಾರಾಯಿ ಮುಕ್ತ ಗ್ರಾಮ ಎಂದು ಬೊರ್ಡ್ ಹಾಕಿಸಿದ್ದಾರೆ. ಇಂದಿನಿಂದ ಇದು ಸಾರಾಯಿ ಮುಕ್ತ ಗ್ರಾಮ ಇನ್ನುಮುಂದೆ ಯಾರಾದರೂ ಸಾರಾಯಿಯನ್ನು ಮಾರಾಟ ಮಾಡಿದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

    ಪೊಲೀಸರು ತಮ್ಮ ವ್ಯಾಪ್ತಿಯ ಗ್ರಾಮಗಳನ್ನು ಸಾರಾಯಿ ಮುಕ್ತಗೊಳಿಸಲು ಹೊರಟಿರುವುದು ಶ್ಲಾಘನೆಗೆ ಕಾರಣವಾಗಿದೆ. ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮ ಮುನ್ನುಡಿ ಮಾತ್ರ. ಇನ್ನೂ ಹಲವಾರು ಗ್ರಾಮಗಳು ಈ ಗ್ರಾಮದಿಂದ ಪ್ರೇರೆಪಿತಗೊಂಡು ಸ್ವಯಂ ಪ್ರೇರಿತ ಮದ್ಯಮುಕ್ತ ಗ್ರಾಮ ಮಾಡಿಕೊಂಡರೆ ಒಳ್ಳೆದು. ಇಲ್ಲಾವಾದರೆ ಮುಂದಿನ ದಿನಗಳಲ್ಲಿ ನಮ್ಮ ಪೊಲೀಸ್ ಠಾಣೆಗೆ ಒಳಪಡುವ ಎಲ್ಲಾ ಗ್ರಾಮಗಳನ್ನು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಲು ಪಣ ತೊಡುವುದಾಗಿ ಹೇಳಿದರು.

    ಈ ಕಾರ್ಯಕ್ಕೆ ಗ್ರಾಮದ ಮಹಿಳೆಯರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ಹಗಲಲ್ಲೆ ಒಡಾಡದಂತ ಪರಿಸ್ಥಿತಿ ಇತ್ತು. ಮನೆಯಲ್ಲಿ ಗಂಡ, ಮಕ್ಕಳು ಎಲ್ಲಾರು ಈ ಸಾರಾಯಿಗೆ ದಾಸರಾಗಿದ್ದರು. ಇದೀಗ ಸಾರಾಯಿ ಬಂದ್ ಮಾಡಿದ್ದರಿಂದ ನಮಗೆ ತುಂಬಾ ಖುಷಿ ಆಗ್ತಿದೆ ಎಂದರು. ಪೊಲೀಸರ ಈ ನಿರ್ಧಾದದಿಂದ ಗ್ರಾಮದ ಮಹಿಳೆಯರು ನಿಟ್ಟುಸಿರು ಬಿಡುತ್ತಿದ್ದಾರೆ.

  • ಏಕಾಏಕಿ ಗಣೇಶ ದೇವಸ್ಥಾನ ಧ್ವಂಸ – ಪಾರ್ಕ್ ನಿರ್ಮಿಸಿರುವ ಮಹಿಳೆಯರ ಕಣ್ಣೀರು

    ಏಕಾಏಕಿ ಗಣೇಶ ದೇವಸ್ಥಾನ ಧ್ವಂಸ – ಪಾರ್ಕ್ ನಿರ್ಮಿಸಿರುವ ಮಹಿಳೆಯರ ಕಣ್ಣೀರು

    ರಾಯಚೂರು: ಸಾರ್ವಜನಿಕರೆಲ್ಲಾ ಕೈಯಿಂದ ದುಡ್ಡು ಹಾಕಿ ನಿರ್ಮಿಸಿದ್ದ ಉದ್ಯಾನವನವನ್ನು ಪುರಸಭೆ ಮುಖ್ಯಾಧಿಕಾರಿಯೇ ಹಾಳು ಮಾಡಲು ಮುಂದಾಗಿರುವುದಕ್ಕೆ ಮಹಿಳೆಯರೆಲ್ಲ ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿರುವ ಘಟನೆ ರಾಯಚೂರಿನ ಮಸ್ಕಿಯಲ್ಲಿ ನಡೆದಿದೆ.

    ಸಾರ್ವಜನಿಕ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ತೆರವುಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ ಮಸ್ಕಿ ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ರಾತ್ರೋ ರಾತ್ರಿ ಮಸ್ಕಿಯ ಬಸವೇಶ್ವರ ನಗರದಲ್ಲಿನ ಬಲಮೂರಿ ಗಣೇಶ ದೇವಸ್ಥಾನವನ್ನು ಹೊಡೆದು ಹಾಕುವ ಮೂಲಕ ಸ್ಥಳೀಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

    ಪುರಸಭೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಉದ್ಯಾನವನವನ್ನು ಸಾರ್ವಜನಿಕರೇ ಲಕ್ಷಾಂತರ ರೂಪಾಯಿ ದುಡ್ಡು ಹಾಕಿ ಇಡೀ ಜಿಲ್ಲೆಗೆ ಮಾದರಿ ಉದ್ಯಾನವನವನ್ನಾಗಿ ನಿರ್ಮಿಸಿದ್ದರು. ಕಿಡಿಗೇಡಿಗಳು, ಪುಂಡರು ಉದ್ಯಾನವನ ಹಾಳು ಮಾಡಬಾರದು ಎಂದು ಗಣೇಶನ ಪುಟ್ಟ ದೇವಾಲಯ ನಿರ್ಮಿಸಿ ಸಾರ್ವಜನಿಕರು ಪೂಜಿಸುತ್ತಿದ್ದರು. ಆದರೆ ಏಕಾಏಕಿ ದೇವಸ್ಥಾನ ತೆರವುಗೊಳಿಸಿರುವುದಲ್ಲದೆ ಜೆಸಿಬಿಯನ್ನು ಉದ್ಯಾನವನದಲ್ಲಿ ಓಡಾಡಿಸಿ ಗಿಡಮರಗಳು, ಲಾನ್, ಕಾಂಪೌಂಡ್ ಹಾಳು ಮಾಡಲಾಗಿದೆ. ದೇವಸ್ಥಾನದ ವಿಗ್ರಹವನ್ನು ಸ್ವತಃ ತೆರುವುಮಾಡಿಕೊಳ್ಳುವುದಾಗಿ ಸಾರ್ವಜನಿಕರು ಹೇಳಿದ್ದರೂ ರಾತ್ರೋರಾತ್ರಿ ಧ್ವಂಸಮಾಡಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಇಲ್ಲಿನ ಮಹಿಳೆಯರು ಕಣ್ಣೀರು ಹಾಕುತ್ತಲೇ ಹೋರಾಟಕ್ಕೆ ಮುಂದಾಗಿದ್ದಾರೆ.

    ದೇವಸ್ಥಾನಗಳನ್ನು ತೆರವುಗೊಳಿಸುವುದಕ್ಕಿಂತ ಮುಂಚೆ ಅನಧಿಕೃತ ಕಟ್ಟಡಗಳ ಸಮೀಕ್ಷೆ ಮಾಡಬೇಕು. ಅದನ್ನು ಮಾಧ್ಯಮಗಳಲ್ಲಿ ಪ್ರಕಟಿಸಿ ಸಂಬಂಧ ಪಟ್ಟವರಿಗೆ ಒಂದು ವಾರಗಳ ಕಾಲವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸೂಚಿಸಿದ್ದರೂ ಸಹ ಮುಖ್ಯಾಧಿಕಾರಿಗಳು ಸುಪ್ರೀಂ ಆದೇಶವನ್ನೇ ಉಲ್ಲಂಘನೆ ಮಾಡಿದ್ದಾರೆ. ದೇವಸ್ಥಾನದ ಒಳಗಿನ ಮೂರ್ತಿಗಳನ್ನು ಎಲ್ಲೆಂದರಲ್ಲಿ ಬಿಸಾಕಿ ದೇವಸ್ಥಾನ ದ್ವಂಸಗೊಳಸಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶಕ್ಕೆ ನಾವು ತಲೆಬಾಗುತ್ತೇವೆ. ಸುಪ್ರೀಂ ಆದೇಶದಂತೆ ದೇವಸ್ಥಾನ ತೆರವುಗೊಳಿಸಲು ನಾವು ಸಿದ್ಧರಿದ್ದೇವು. ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ರಾತ್ರೋ ರಾತ್ರಿ ದೇವಸ್ಥಾನ ದ್ವಂಸಗೊಳಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದಾರೆ.