Tag: women

  • ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರನ್ನ ಕದ್ದು ಕದ್ದು ನೋಡ್ತಿದ್ದ ಕಾಮುಕನಿಗೆ ಧರ್ಮದೇಟು

    ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರನ್ನ ಕದ್ದು ಕದ್ದು ನೋಡ್ತಿದ್ದ ಕಾಮುಕನಿಗೆ ಧರ್ಮದೇಟು

    ವಿಜಯಪುರ: ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರ ಮೇಲೆ ಕಾಮುಕ ಕಣ್ಣು ಹಾಕಿದ್ದಕ್ಕೆ ಹಿಗ್ಗಾಮುಗ್ಗಾ ಧರ್ಮದೇಟು ತಿಂದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಶಿನಾಥ ಧರ್ಮದೇಟು ತಿಂದ ಕಾಮುಕ. ಈತ ಗಿಡದ ಮೇಲೆ ಕುಳಿತು ಕದ್ದು ಕದ್ದು ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರನ್ನ ನೋಡುತ್ತಿದ್ದನು.

    ಎಂದಿನಿಂತೆ ಭಾನುವಾರ ಕೂಡ ಕಾಮುಕ ಕಾಶಿನಾಥ ಬಹಿರ್ದೆಸೆಗೆ ತೆರಳಿದ್ದ ಮಹಿಳೆಯರನ್ನ ನೋಡುತ್ತಿದ್ದನು. ಆದರೆ ಈ ವೇಳೆ ಸಾರ್ವಜನಿಕರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾನೆ. ಆಗ ಕಾಶಿನಾಥನನ್ನು ರಸ್ತೆಯಲ್ಲಿ ಎಳೆದಾಡಿ, ಬಟ್ಟೆ ಬಿಚ್ಚಿ ಚಪ್ಪಲಿ ಸೇವೆ ಮಾಡಿದ್ದಾರೆ. ಜೊತೆಗೆ ಜನರು ಬಡಿಗೆಯಿಂದ ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ. ನಂತರ ತಾಳಿಕೊಟಿ ಪೊಲೀಸರಿಗೆ ಕಾಶಿನಾಥನನ್ನ ಸಾರ್ವಜನಿಕರು ಒಪ್ಪಿಸಿದ್ದಾರೆ.

    ಇದಕ್ಕೂ ಮುಂಚೆ ಕೂಡ ಕಾಶಿನಾಥ ಅನೇಕ ಕಾಮಚೇಷ್ಟೆ ಮಾಡಿ ಗ್ರಾಮದಲ್ಲಿ ಧರ್ಮದೇಟು ತಿಂದಿದ್ದಾನೆ. ಆದರೆ ಥಳಿಸಿದ ಸಾರ್ವಜನಿಕರ ಮೇಲೆ ಕಾಶಿನಾಥ ದೂರು ದಾಖಲಿಸಿದ್ದನಂತೆ. ಹೀಗಾಗಿ ಗ್ರಾಮಕ್ಕೆ ಎಸ್‍ಪಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಆದರೆ ಎಸ್‍ಪಿ ಮುಂದೆ ಕಾಶಿನಾಥ ತಪ್ಪೊಪ್ಪಿಕೊಂಡು ದೂರು ವಾಪಸ್ ಪಡೆಯುವುದಾಗಿ ಹೇಳಿದ್ದಾನೆಂಬ ಮಾಹಿತಿ ದೊರೆತಿದೆ.

  • ಚೀನಿ ರಾಖಿಗಳಿಗೆ ಕೊಕ್- ಮಹಿಳಾ ಸ್ವ ಸಹಾಯ ಸಂಘಗಳಿಂದ ತಯಾರಾಗುತ್ತಿವೆ ರಾಖಿಗಳು

    ಚೀನಿ ರಾಖಿಗಳಿಗೆ ಕೊಕ್- ಮಹಿಳಾ ಸ್ವ ಸಹಾಯ ಸಂಘಗಳಿಂದ ತಯಾರಾಗುತ್ತಿವೆ ರಾಖಿಗಳು

    – 5 ಲಕ್ಷ ರಾಖಿಗಳ ತಯಾರಿ ಗುರಿ
    – ರಕ್ಷಾ ಬಂಧನಕ್ಕೆ ಮಾರಾಟ ಮಾಡಲು ಭರ್ಜರಿ ಸಿದ್ಧತೆ

    ಲಕ್ನೊ: ಗಾಲ್ವಾನಾ ವ್ಯಾಲಿಯಲ್ಲಿ ಚೀನಾ ಪುಂಡಾಟಿಕೆ ಮೆರೆದ ನಂತರ ಜನ ಚೀನಾ ವಸ್ತುಗಳನ್ನು ಬಹಿಷ್ಕರಿಸಲಾರಂಭಿಸಲಾಗುತ್ತಿದೆ. ನಂತರ ಭದ್ರತೆ ಉದ್ದೇಶದಿಂದ ಕೇಂದ್ರ ಸರ್ಕಾರ ಚೀನಿ ಮೂಲದ 59 ಆ್ಯಪ್‍ಗಳನ್ನು ಸಹ ಬ್ಯಾನ್ ಮಾಡಿ ಆದೇಶಿಸಿತು. ಇದೀಗ ಚೀನಾದಿಂದ ಬರುತ್ತಿದ್ದ ವಿವಿಧ ಶೈಲಿಗಳ ರಾಖಿಗಳ ರೀತಿಯಲ್ಲೇ ಭಾರತದ ಮಹಿಳೆ ತಮ್ಮದೇ ಮಹಿಳೆಯರ ಸಂಘ ಕಟ್ಟಿಕೊಂಡು ವಿವಿಧ ರೀತಿಯ ಬಣ್ಣ ಬಣ್ಣದ ಆಕರ್ಷಕ ರಾಖಿಗಳನ್ನು ತಯಾರಿಸುತ್ತಿದ್ದಾರೆ.

    ಇನ್ನೇನು ರಕ್ಷಾ ಬಂಧನ ಸಮೀಪಿಸುತ್ತಿದ್ದು, ಆಗಲೇ ಬಣ್ಣ ಬಣ್ಣದ ರಾಖಿಗಳು ಸಿದ್ಧವಾಗುತ್ತಿವೆ. ಆಗಸ್ಟ್ 3 ರಂದು ರಕ್ಷಾ ಬಂಧನ ಹಿನ್ನೆಲೆ ಉತ್ತರ ಪ್ರದೇಶದ ಮಹಿಳೆ ತಮ್ಮದೇಯಾದ ಸಂಘದ ಮೂಲಕ ಚೀನಾ ರಾಖಿಗಳನ್ನು ನಾಚಿಸುವಂತೆ ಬಣ್ಣ ಬಣ್ಣ ಹಾಗೂ ವಿವಿಧ ಶೈಲಿಯ ರಾಖಿಗಳನ್ನು ತಯಾರಿಸುತ್ತಿದ್ದಾರೆ. ಆತ್ಮನಿರ್ಭರತೆಯ ಭಾಗವಾಗಿ ಮಹಿಳಾ ಸ್ವ ಸಹಾಯ ಸಂಘ ಈ ಕೆಲಸ ಮಾಡುತ್ತಿದ್ದು, ಉತ್ತರ ಪ್ರದೇಶದ ಸಂಗಮ್ ನಗರದ ಪ್ರಯಾಗ್‍ರಾಜ್‍ನಲ್ಲಿ ಸಂಘದಿಂದ ಬರೋಬ್ಬರಿ 5 ಲಕ್ಷ ರಾಖಿಗಳನ್ನು ತಯಾರಿಸಲಾಗುತ್ತಿದೆ.

    ಆಗಸ್ಟ್ 3ರ ರಕ್ಷಾ ಬಂಧನದ ದಿನದಂದು ಮಾರಾಟ ಮಾಡಲು ಈ ರಾಖಿಗಳನ್ನು ತಯಾರಿಸಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದ ಸುಮಾರು 1,500 ಮಹಿಳೆಯರು ರಾಖಿ ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರೇಷ್ಮೆ ಎಳೆಗಳು, ಮೆಟಲ್, ಲೋಹ, ಶ್ರೀಗಂಧದ ಕಟ್ಟಿಗೆ, ಗಾಜಿನ ಹಾಗೂ ಪ್ಲಾಸ್ಟಿಕ್ ಮಣಿಗಳು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಿ ರಾಖಿಗಳನ್ನು ತಯಾರಿಸಲಾಗುತ್ತಿದೆ. ರಾಖಿಗಳನ್ನು ಹಬ್ಬದ ಮುನ್ನಾದಿನಗಳಲ್ಲಿ ಅಂಗಡಿಗಳಿಗೆ ಹಾಗೂ ನಗರದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ.

    ಈ ಕುರಿತು ಪ್ರಯಾಗ್ ವ್ಯಾಪಾರ ಮಂಡಳಿ(ಪಿವಿಎಂ)ಯ ವ್ಯಾಪಾರಸ್ಥರು ಸಹ ನಿರ್ಧಾರ ಕೈಗೊಂಡಿದ್ದು, ಈ ಬಾರಿ ಸ್ಥಳೀಯರು ತಯಾರಿಸಿದ ರಾಖಿಗಳನ್ನು ಮಾತ್ರ ನಾವು ಮಾರಾಟ ಮಾಡುತ್ತೇವೆ. ಇದಕ್ಕಾಗಿ ಈಗಾಗಲೇ ಮಹಿಳಾ ಸ್ವ ಸಹಾಯ ಸಂಘಗಳಿಗೆ ಆರ್ಡರ್ ಕೊಟ್ಟಿದ್ದೇವೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

    ಈ ಕುರಿತು ಪಿವಿಎಂ ಅಧ್ಯಕ್ಷ ವಿಜಯ್ ಅರೋರಾ ಮಾಹಿತಿ ನೀಡಿ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ. ಭಾರತೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಲು ತೀರ್ಮಾನ ಮಾಡಿದ್ದೇವೆ. ಈ ಬಾರಿಯ ಹಬ್ಬದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರು ತಯಾರಿಸಿದ ರಾಖಿಗಳನ್ನು ಮಾರುತ್ತೇವೆ. ಅದೇ ರೀತಿ ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಎಲ್ಲ ಹಬ್ಬಗಳಿಗೆ ಅಲಂಕಾರಿಕ ವಸ್ತುಗಳನ್ನು ಸ್ಥಳೀಯರಿಂದಲೇ ಕೊಂಡು ಮಾರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಹಾಗೂ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿ ಸುಮಾರು 200ಕ್ಕೂ ಹೆಚ್ಚು ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಗೆ ರಾಖಿ ತಯಾರಿಸುವ ಕುರಿತು ತರಬೇತಿ ನೀಡಲಾಗುತ್ತಿದೆ. ಜಿಲ್ಲಾ ಮಿಷನ್ ವ್ಯವಸ್ಥಾಪಕ ಶರದ್ ಕುಮಾರ್ ಸಿಂಗ್ ಈ ಕುರಿತು ಮಾಹಿತಿ ನೀಡಿ, ಪ್ರಸ್ತುತ ಬಹಾರಿಯಾ ಹಾಗೂ ಕರ್ಚನಾ ಪ್ರದೇಶಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಸೋಮವಾರದಿಂದ ಇತರ ಬ್ಲಾಕ್‍ಗಳಲ್ಲಿ ಸಹ ತರಬೇತಿ ಆರಂಭಿಸಲಾಗಿದೆ ಎಂದರು.

    ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಗ್ರಾಮೀಣ ಪ್ರದೇಶದ ಬಡ ಜನರಿಗೆ ಸ್ವಯಂ ಉದ್ಯೋಗ ಒದಗಿಸುವುದು ಇದರ ಉದ್ದೇಶವಾಗಿದೆ.

  • ಹಾವೇರಿಯಲ್ಲಿ ಐದು ತಿಂಗಳ ಗರ್ಭಿಣಿ, ಬಾಣಂತಿ ಸೇರಿ ನಾಲ್ವರಿಗೆ ಕೊರೊನಾ

    ಹಾವೇರಿಯಲ್ಲಿ ಐದು ತಿಂಗಳ ಗರ್ಭಿಣಿ, ಬಾಣಂತಿ ಸೇರಿ ನಾಲ್ವರಿಗೆ ಕೊರೊನಾ

    – 122ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಹಾವೇರಿ: ಜಿಲ್ಲೆಯಲ್ಲಿ ಐದು ತಿಂಗಳ ಗರ್ಭಿಣಿ, ಬಾಣಂತಿ ಸೇರಿದಂತೆ ನಾಲ್ಕು ಜನ ಮಹಿಳೆಯರಿಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದೆ. 8 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

    ಹಾವೇರಿ ತಾಲೂಕು ಕನವಳ್ಳಿ ಗ್ರಾಮದ 25 ವರ್ಷದ ಐದು ತಿಂಗಳ ಗರ್ಭಿಣಿ ರೋಗಿ ನಂ.16598 ಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಹಾನಗಲ್ ತಾಲೂಕಿನ ಅಕ್ಕಿಆಲೂರಿನ 30 ವರ್ಷದ ಬಾಣಂತಿ ರೋಗಿ ನಂ.16599 ಗೆ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದರು. ಹರಿಗೆ ಅದ ಮರುದಿನವೇ ಸೋಂಕು ಧೃಡಪಟ್ಟಿದೆ. ಅಲ್ಲದೆ ಯಳ್ಳೂರಿನ 45 ವರ್ಷದ ಮಹಿಳೆ ರೋಗಿ ನಂ.16600 ಗೆ ಸೋಂಕು ತಗುಲಿದೆ.

    ಹಿರೇಕೆರೂರು ತಾಲೂಕಿನ ಮೇದೂರಿನ 40 ವರ್ಷದ ಮಹಿಳೆ ರೋಗಿ ನಂ.16601 ಗೆ ಖಾಸಗಿ ಆಸ್ಪತ್ರೆ ಕಣ್ಣಿನ ತಪಾಸಣೆಗೆ ಹೋದಾಗ ಕೊರೊನಾ ಪರೀಕ್ಷೆ ಮಾಡಿಸಿದ್ದು, ಈ ವೇಳೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತರು ವಾಸವಾಗಿದ್ದ ಪ್ರದೇಶವನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದೆ. ಸೋಂಕಿತರ ಸಂಪರ್ಕವನ್ನು ಪತ್ತೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 122ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 33 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 87 ಪ್ರಕರಣಗಳು ಸಕ್ರಿಯವಾಗಿವೆ. ಇಬ್ಬರು ಮೃತಪಟ್ಟಿದ್ದಾರೆ.

  • ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಯುವಕನಿಗೆ ಬಿದ್ವು ಗೂಸಾ

    ಮಹಿಳೆಯರ ಬಟ್ಟೆ ಕದಿಯುತ್ತಿದ್ದ ಯುವಕನಿಗೆ ಬಿದ್ವು ಗೂಸಾ

    ಹುಬ್ಬಳ್ಳಿ: ಮಹಿಳೆಯರ ಬಟ್ಟೆ ಕದಿಯುತ್ತಿದ್ದ ವಿಕೃತ ಮನಸ್ಸಿನ ಯುವಕನೊಬ್ಬನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಯುವಕನು ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯ ಈಶ್ವರ ನಗರ, ನೇಕಾರನಗರದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರ ಬಟ್ಟೆ ಕಳ್ಳತನ ಮಾಡುತ್ತಿದ್ದ. ಇದರಿಂದಾಗಿ ಕಳ್ಳನನ್ನು ಹಿಡಿಯಲು ಸಾರ್ವಜನಿಕರು ಕಾಯುತ್ತಿದ್ದರು.

    ಯುವಕ ಇಂದು ಕೂಡ ಬಟ್ಟೆ ಕದಿಯಲು ನೇಕಾರನಗರದ ಬಡಾವಣೆಗೆ ಬಂದಿದ್ದ. ಬಟ್ಟೆ ಕದ್ದು ಇನ್ನೇನು ಪರಾರಿಯಾಗುತ್ತಿದ್ದಂತೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ಕಂಬಕ್ಕೆ ಕಟ್ಟಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.

  • ಮಳೆಯಲ್ಲಿ ನೆನೆಯುತ್ತಾ ಮಹಿಳೆ ಧರಣಿ, ಪೊಲೀಸರ ಕರ್ತವ್ಯ ಲೋಪವಿಲ್ಲ: ಎಸ್ಪಿ ಸ್ಪಷ್ಟನೆ

    ಮಳೆಯಲ್ಲಿ ನೆನೆಯುತ್ತಾ ಮಹಿಳೆ ಧರಣಿ, ಪೊಲೀಸರ ಕರ್ತವ್ಯ ಲೋಪವಿಲ್ಲ: ಎಸ್ಪಿ ಸ್ಪಷ್ಟನೆ

    ಚಾಮರಾಜನಗರ: ಮಹಿಳೆಯೊಬ್ಬರು ಪೊಲೀಸ್ ಠಾಣೆಯ ಮುಂದೆ ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸಿರುವ ಬಗ್ಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಸುದ್ದಿಗೋಷ್ಠಿ ನಡೆಸಿ ಹಲವು ಸ್ಪಷ್ಪನೆ ಕೊಟ್ಟಿದ್ದಾರೆ.

    ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಜಮೀನನ್ನು ಪಕ್ಕದ ಜಮೀನು ಮಾಲೀಕ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸುಶೀಲ ಅವರು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಎದುರು ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ನಡೆಸಿದ್ದರು.

    ಪ್ರತಿಭಟನೆಗೂ ಮುನ್ನ ಮೊದಲೇ ನಮ್ಮ ಪೊಲೀಸರು ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಯಾರ ಮಾತಿಗೂ ಒಪ್ಪದೆ ಮಳೆಯಲ್ಲೇ ಧರಣಿ ನಡೆಸಿದ್ದಾರೆ. ಆಕೆ ಹೇಳುವ ಜಮೀನು ಒತ್ತುವರಿಯಾಗಿಲ್ಲ, ಇದು ಸಂಪೂರ್ಣ ಸಿವಿಲ್ ವ್ಯಾಜ್ಯವಾಗಿದ್ದು ಜಿಲ್ಲಾಧಿಕಾರಿಗಳು ಈಗಾಗಲೇ ಈ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಆದರೂ ಆಕೆ ಸರ್ವೆ ನಂಬರ್ 1/134 ರಲ್ಲಿ ಇರುವ ಜಮೀನು ತನ್ನದು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ.

    ಕಾನೂನು ಪ್ರಕಾರ ಈ ಜಮೀನು ಬಿಡಿಸಿಕೊಡಲು ಸಾಧ್ಯವಿಲ್ಲ. ಆದರೂ ಆಕೆ ಈ ಜಮೀನಿನಲ್ಲಿ ಉಳುಮೆ ಮಾಡಲು ರಕ್ಷಣೆ ಬೇಕು ಎಂದು ಠಾಣೆಗೆ ಬಂದು ಮಳೆಯಲ್ಲೇ ನೆನೆಯುತ್ತಾ ಧರಣಿ ನಡೆಸಿದ್ದಾರೆ. ಧರಣಿ ಪ್ರಕರಣದ ಬಗ್ಗೆ ವರದಿ ತರಿಸಿಕೊಂಡು ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ನಿರ್ಧಾಕ್ಷಿಣ್ಯ ಕ್ರಮ ವಹಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ತಿಳಿಸಿದ್ದಾರೆ.

  • ವಿದ್ಯಾರ್ಥಿನಿಯರಿಗೆ ಬುಲ್ ಬುಲ್ ಎನ್ನುತ್ತಾನಂತೆ ಪಂಚಾಯತಿ ಅಧ್ಯಕ್ಷೆಯ ಪತಿ

    ವಿದ್ಯಾರ್ಥಿನಿಯರಿಗೆ ಬುಲ್ ಬುಲ್ ಎನ್ನುತ್ತಾನಂತೆ ಪಂಚಾಯತಿ ಅಧ್ಯಕ್ಷೆಯ ಪತಿ

    ತುಮಕೂರು: ತಾಲೂಕಿನ ಪಾಲಸಂದ್ರ ಪಂಚಾಯತಿ ಅಧ್ಯಕ್ಷೆಯ ರುಕ್ಮಿಣಿ ಅವರ ಪತಿರಾಯ ವೆಂಕಟೇಶ್ ವಿದ್ಯಾರ್ಥಿನಿಯರನ್ನು ಅಶ್ಲೀಲವಾಗಿ ಚುಡಾಯಿಸುತ್ತಾನೆ ಎನ್ನುವ ಆರೋಪ ಕೇಳಿ ಬಂದಿದೆ.

    ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು, ಮಹಿಳೆಯರು ತನ್ನ ಮುಂದೆ ಹೋಗುತ್ತಿದ್ದರೆ ‘ಹೇ ಬುಲ್ ಬುಲ್’ ಮಾತಾಡಕ್ಕಿಲ್ವಾ ಎಂದು ವೆಂಕೆಟೇಶ್ ಚುಡಾಯಿಸುತ್ತಾನೆ. ಆತನ ವರ್ತನೆಯಿಂದ ಬೇಸತ್ತು ಹೋಗಿದ್ದೇವೆ ಎಂದು ಹೊನ್ನೆನಳ್ಳಿ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.

    ಸುಂದರ ಹುಡಿಗಿಯರನ್ನು ಕಂಡರೆ ಜೊಲ್ಲು ಸುರಿಸುವ ವೆಂಕಟೇಶ್ “ಕೆಳಗಿಂದ ಮೇಲ್ ತನಕ ನೋಡಪ್ಪಾ… ಒಂದೇ ಸೈಜ್‍ನಲ್ಲಿ ಇದ್ದಾಳೆ” ಎಂದು ಅಶ್ಲೀಲವಾಗಿ ಮಾತನಾಡುತ್ತಾನೆ. ಅಸಭ್ಯವಾಗಿ ಮಾತನಾಡು ವೆಂಕಟೇಶ್ ವಿರುದ್ಧ ಕ್ರಮಕೈಕೊಳ್ಳಬೇಕು ಎಂದು ಹೊನ್ನೆನಹಳ್ಳಿ ಗ್ರಾಮಸ್ಥರು ಪೊಲೀಸರಿಗೆ ದೂರಿದ್ದಾರೆ. ಈ ಸಂಬಂಧ ವೆಂಕಟೇಶ್ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮತ್ತಷ್ಟು ನೊಂದ ಮಹಿಳೆಯರು ಶಾಸಕ ಗೌರಿಶಂಕರ್ ಅವರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಮಾಜಿ ಶಾಸಕ ಸುರೇಶ್ ಗೌಡ ಅವರ ಬೆಂಬಲಿಗರಾಗಿರುವ ವೆಂಕಟೇಶ್‍ಗೆ ಸರ್ಕಾರದ ಬೆಂಬಲ ಇದೆ. ಹಾಗಾಗಿ ಅವನು ಆಡಿದ್ದೇ ಆಡವಾಗಿದೆ. ಪೊಲೀಸರು ಅವರನ್ನು ಬಂಧಿಸುತ್ತಿಲ್ಲ ಎಂದು ಶಾಸಕ ಗೌರಿಶಂಕರ್ ಆರೋಪಿಸಿದ್ದಾರೆ. ಆಡಳಿತ ಪಕ್ಷದ ಕೈಗೊಂಬೆಯಾಗಿರುವ ಪೊಲೀಸರ ವಿರುದ್ಧ ಎಸ್‍ಪಿ ಕಚೇರಿ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.

  • ಮಹಿಳಾ ಸಂಘದಲ್ಲಿ ಎರಡು ಗುಂಪುಗಳ ನಡುವೆ ಜಡೆ ಜಗಳ

    ಮಹಿಳಾ ಸಂಘದಲ್ಲಿ ಎರಡು ಗುಂಪುಗಳ ನಡುವೆ ಜಡೆ ಜಗಳ

    – ಬೀದಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು

    ಬೆಂಗಳೂರು: ಕೊರೊನಾ ವೈರಸ್ ನಡುವೆ ಯಾವುದೇ ಮಾಸ್ಕ್ ಇಲ್ಲದೆ, ಮಹಿಳಾ ಸಂಘದಲ್ಲಿನ ಎರಡು ಗುಂಪುಗಳ ನಡುವೆ ಜಡೆ ಜಗಳ ನಡೆದಿದ್ದು, ಮಹಿಳೆಯರು ಬೀದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಘದ ಅಧ್ಯಕ್ಷೆಯಿಂದ ಸದಸ್ಯ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಸಂಘದ ಸಭೆ ಮಾಡುವ ವಿಚಾರದಲ್ಲಿ ಇಬ್ಬರೂ ಜಗಳಾಡಿಕೊಂಡಿದ್ದು, ಬೀದಿ ರಂಪಾಟ ಮಾಡಿದ್ದಾರೆ. ಗಲಾಟೆಯಲ್ಲಿ ಬೈರಮ್ಮ ಗಾಯಗೊಂಡಿದ್ದು, ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದಾರೆ.

    ಮಹಿಳೆಯರು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ನಾಲ್ಕು ಮದುವೆ, ಲವ್ ನೆಪದಲ್ಲಿ 20ಕ್ಕೂ ಹೆಚ್ಚು ಯುವತಿಯರಿಗೆ ವಂಚನೆ- ಹೆಣ್ಣು ಬಾಕನ ಬಂಧನ

    ನಾಲ್ಕು ಮದುವೆ, ಲವ್ ನೆಪದಲ್ಲಿ 20ಕ್ಕೂ ಹೆಚ್ಚು ಯುವತಿಯರಿಗೆ ವಂಚನೆ- ಹೆಣ್ಣು ಬಾಕನ ಬಂಧನ

    ಬೆಂಗಳೂರು: ನಾಲ್ಕು ವಿವಾಹ ಹಾಗೂ ಪ್ರೀತಿ ಹೆಸರಲ್ಲಿ 20ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ನಗರದ ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸುರೇಶ್ ಅಲಿಯಾಸ್ ಮೈಸೂರು ಸುರೇಶಾ ಬಂಧಿತ ಆರೋಪಿ. ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದ. ವಿಧವೆ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಕೀಚಕ ಹಣ ಪಡೆದು ನಂತರ ವಂಚಿಸುತ್ತಿದ್ದ. ಈಗಾಗಲೇ ನಾಲ್ವರನ್ನು ಮದುವೆ ಆಗಿರುವ ಆರೋಪಿ ಸುರೇಶ್, 20ಕ್ಕೂ ಹೆಚ್ಚು ಯುವತಿಯೊಂದಿಗೆ ಪ್ರೀತಿಯಲ್ಲಿದ್ದ ಎಂಬ ಭಯಾನಕ ಸತ್ಯವನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

    ಮಹಿಳೆಯೊಬ್ಬರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಂತರ ವಿಚಾರಣೆ ನಡೆಸಿದಾಗ ಸುರೇಶನ ಪ್ರಕರಣಗಳು ಬೆಳಕಿಗೆ ಬಂದಿವೆ. ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.

    ಆರೋಪಿ ಸುರೇಶ್ ಮೂಲತಃ ಮೈಸೂರಿನವನು, 2013ರಲ್ಲಿ ಶ್ವೇತಾ ಆಚಾರ್ಯ ಅವರ ಜೊತೆ ವಿವಾಹವಾಗಿ ವಿಚ್ಛೇದನ ಆಗಿದೆ. ಹೆಂಡತಿ ದೂರವಾದ ಮೇಲೆ ವಿಚ್ಛೇದನ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬಲೆಗೆ ಹಾಕಿಕೊಳ್ಳುತ್ತಿದ್ದ. ಹೀಗೆ ಮಾಡಿ ಐದಾರು ವರ್ಷಗಳಲ್ಲಿ ಬರೋಬ್ಬರಿ ನಾಲ್ವರನ್ನು ಮದುವೆ ಆಗಿದ್ದಾನೆ. ಅಷ್ಟೇ ಅಲ್ಲದೆ ಮತ್ತಷ್ಟು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ.

    ವಿಚ್ಛೇದಿತ ಹಣವಂತ ಮಹಿಳೆಯರು ಪರಿಚಯವಾಗುತ್ತಿದ್ದಂತೆ ನಿವೇಶನ ಖರೀದಿಸುವ ನೆಪದಲ್ಲಿ ಅವರಿಂದ ಹಣ ಪಡೆಯುತ್ತಿದ್ದ. ನಂತರ ಹಣ ವಾಪಸ್ ನೀಡದೆ ಪರಾರಿಯಾಗುತ್ತಿದ್ದ. ಇದೇ ರೀತಿ ಮ್ಯಾಟ್ರಿಮೋನಿಯಲ್ಲಿ ಹಲವು ವಿಚ್ಛೇಧಿತ ಮಹಿಳೆಯ ಪರಿಚಯ ಮಾಡಿಕೊಂಡಿದ್ದ. ಆರೋಪಿ ಮಾತಿಗೆ ಮರುಳಾಗಿ ಹಣ ನೀಡುತ್ತಿದ್ದ ಮಹಿಳೆಯರು, ಹಣ ಕಳೆದುಕೊಂಡು ಮೋಸ ಹೋಗುತ್ತಿದ್ದರು.

    ಇದೇ ರೀತಿ ಆರೋಪಿ ಮಾತಿಗೆ ಮರುಳಾಗಿದ್ದ ಮಹಿಳೆ ಮಾಂಗಲ್ಯ ಸರ ಸೇರಿ 80 ಗ್ರಾಂ. ಒಡವೆ ಹಾಗೂ ಹಣ ಕೊಟ್ಟು ಮೊಸ ಹೋಗಿದ್ದಳು. ನಂತರ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ತನಿಖೆ ಪ್ರಾರಂಭಿಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ನಂತರ ವಿಚಾರಣೆ ನಡೆಸಿದ್ದು, ಈ ವೇಳೆ ಆರೋಪಿ ಬಣ್ಣ ಬಯಲಾಗಿದೆ. ಆರೋಪಿ ಮೈಸೂರು, ಬೆಂಗಳೂರು, ರಾಮನಗರ ಸೇರಿದಂತೆ ಹಲವಡೆಯ ಮಹಿಳೆಯರಿಗೆ ಮೋಸ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.

  • ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಆಗ್ರಹ- ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯರು

    ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಆಗ್ರಹ- ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯರು

    – ನಮ್ಮ ಗಂಡಂದಿರು ನಿತ್ಯ ಕುಡಿದು ಗಲಾಟೆ ಮಾಡ್ತಿದ್ದಾರೆ

    ರಾಯಚೂರು: ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ನಮ್ಮ ಕುಟುಂಬಗಳು ಹಾಳಾಗುತ್ತಿವೆ ಎಂದು ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಜಿಲ್ಲೆಯ ದೇವದುರ್ಗ ತಾಲೂಕಿನ ಬಾಗೂರು ಗ್ರಾಮದ ಮಹಿಳೆಯರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ದೂರು ನೀಡಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ಮದ್ಯ ಮಾರಾಟ ನಿಂತಿತ್ತು. ಆದರೆ ಕಳೆದ ಆರು ತಿಂಗಳಿಂದ ಮತ್ತೆ ಅಕ್ರಮವಾಗಿ ಮದ್ಯ ಮಾರಾಟ ಶುರುವಾಗಿದೆ. ಇದರಿಂದ ನಮ್ಮ ಗಂಡಂದಿರು ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದಾರೆ. ಯಾವುದೇ ದುಡಿಮೆಯಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ.

    ಅಕ್ರಮ ಮದ್ಯ ಮಾರಾಟ ಮಾಡುವ ಮಹಿಳೆಗೆ ಎಷ್ಟೇ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ದೇವದುರ್ಗ ಶಾಸಕ ಶಿವನಗೌಡ ನಾಯಕ್ ಮದ್ಯ ಮಾರಾಟ ಮಾಡಲು ಹೇಳಿದ್ದಾರೆ ಅಂತ ಹೇಳುತ್ತಿದ್ದಾಳೆ. ಶಾಸಕರ ಕುಮ್ಮಕ್ಕಿದೆ ಅಂತ ಮಹಿಳೆಯರು ಆರೋಪಿಸಿದ್ದಾರೆ.

    ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಸಂಬಂಧಿಕರಿಗೆ ಸೇರಿದ ವೈನ್ ಶಾಪ್‍ಗಳಿಂದಲೇ ಗ್ರಾಮದಲ್ಲಿ ಮದ್ಯ ಸಾಗಣೆ ಮಾಡಲಾಗುತ್ತಿದೆ. ತಕ್ಷಣವೇ ಅಕ್ರಮ ಮದ್ಯ ಮಾರಾಟ ಮಾಡುವ ವ್ಯಕ್ತಿಗಳನ್ನು ಗ್ರಾಮದಿಂದ ಗಡಿ ಪಾರು ಮಾಡಬೇಕೆಂದು ಒತ್ತಾಯಿಸಿದ್ದಾರೆ.

  • ಮದ್ಯ ನಿಷೇಧಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಹಣ ಕಳಿಸಿದ ಮಹಿಳೆಯರು

    ಮದ್ಯ ನಿಷೇಧಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಹಣ ಕಳಿಸಿದ ಮಹಿಳೆಯರು

    – ಸರ್ಕಾರದ ಬೊಕ್ಕಸಕ್ಕೆ ನಷ್ಟವಾದರೆ ನಾವು ಹಣ ಕೊಡ್ತೇವೆ
    – 1,020ರೂ. ಮನಿ ಆರ್ಡರ್ ಮಾಡಿ ಆಕ್ರೋಶ

    ಧಾರವಾಡ: ಸರ್ಕಾರಕ್ಕೆ ಮಹಿಳೆಯರು ಹಣ ಕಳುಹಿಸುವ ಮೂಲಕ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.

    ನಗರದ ಮುರುಘಾಮಠ ಆವರಣದ ಅಂಚೆ ಕಚೇರಿ ಎದುರು ಪ್ರತಿಭಟನೆ ಮಾಡಿದ ಮಹಿಳೆಯರು, ಮನಿ ಆರ್ಡರ್ ಮೂಲಕ ಸರ್ಕಾರಕ್ಕೆ ಹಣ ಕಳುಹಿಸಿ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಈ ಮೂಲಕ ಮಹಿಳೆಯರು ವಿನೂತನ ಪ್ರತಿಭಟನೆ ಮಾಡಿದ್ದಾರೆ.

    ಈ ಮೊದಲು ಮಹಿಳೆಯರು ಮನಿ ಆರ್ಡರ್ ಅಭಿಯಾನ ಮಾಡಿದ್ದರು. ಈ ವೇಳೆ ನೂರಾರು ಮಹಿಳೆಯರಿಂದ 1,020ರೂಪಾಯಿ ಜಮೆಯಾಗಿತ್ತು. ಈ ಹಣವನ್ನು ಇದೀಗ ರಾಜ್ಯ ಸರ್ಕಾರಕ್ಕೆ ಮನಿ ಆರ್ಡರ್ ಮಾಡಿದ್ದಾರೆ. ನಂತರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ಖಜಾನೆಗೆ ನಾವು ದುಡಿದ ಹಣ ಕೊಡುತ್ತೇವೆ, ಆದರೆ ಮದ್ಯ ಮಾರಾಟ ನಿಷೇಧಿಸಬೇಕು ಎಂದು ಪ್ರತಿಭಟನಾಕಾರ ಮಹಿಳೆಯರು ಆಗ್ರಹಿಸಿದರು.