Tag: women

  • ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡ ಮಹಿಳೆಯರು

    ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಪರಸ್ಪರ ಜುಟ್ಟು ಹಿಡಿದು ಬಡಿದಾಡಿಕೊಂಡ ಮಹಿಳೆಯರು

    – ಸಿಸಿಟಿವಿಯಲ್ಲಿ ಸೆರೆಯಾಯ್ತು ಹೊಡೆದಾಟದ ದೃಶ್ಯ

    ಬೆಂಗಳೂರು: ಚಪ್ಪಲಿ ಸ್ಟ್ಯಾಂಡ್ ವಿಚಾರಕ್ಕೆ ಮಹಿಳೆಯರಿಬ್ಬರು ಮಾರಮಾರಿ ಬಡಿದಾಡಿಕೊಂಡಿರುವ ಘಟನೆ ಜೆಪಿ ನಗರದ ಎಸ್.ವಿ ಇನ್‍ಫ್ರಾ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.

    ಒಂದೇ ಅಪಾರ್ಟ್‍ಮೆಂಟ್‍ನಲ್ಲಿ ಬೇರೆ ಬೇರೆ ಫ್ಲಾಟ್‍ಗಳಲ್ಲಿ ವಾಸವಿರೋ ಕುಮಾರಿ ಹಾಗೂ ವರಲಕ್ಷ್ಮಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಕಳೆದ 14ರಂದು ಚಪ್ಪಲಿ ಸ್ಟಾಂಡ್ ವಿಚಾರಕ್ಕೆ ವರಲಕ್ಷ್ಮಿ ಹಾಗೂ ಕುಮಾರಿ ನಡುವೆ ಗಲಾಟೆ ಶುರುವಾಗಿತ್ತು. ಕುಮಾರಿ ಅವರ ಚಪ್ಪಲಿ ಸ್ಟ್ಯಾಂಡ್ ಅನ್ನು ವರಲಕ್ಷ್ಮಿ ಡ್ಯಾಮೇಜ್ ಮಾಡಿದ್ದರು.

    ಹೂವಿನ ಫಾಟ್‍ನಿಂದ ಚಪ್ಪಲಿ ಸ್ಟ್ಯಾಂಡ್‍ಗೆ ಹೊಡೆದು ವರಲಕ್ಷ್ಮಿ ಸ್ಟ್ಯಾಂಡ್ ಅನ್ನು ಡ್ಯಾಮೇಜ್ ಮಾಡಿದ್ದರು. ಇದನ್ನು ಪಕ್ಕದ ಫ್ಲಾಟ್‍ನ ನಿವಾಸಿ ಕುಮಾರಿ ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ, ಗಲಾಟೆ ಜೋರಾಗಿ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಮಹಿಳಾಮಣಿಯರು ಪರಸ್ಪರ ಜುಟ್ಟು ಹಿಡಿದುಕೊಂಡು ಬಡಿದಾಡಿಕೊಂಡಿದ್ದಾರೆ. ಈ ದೃಶ್ಯ ಅಪಾರ್ಟ್‍ಮೆಂಟ್‍ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಗಲಾಟೆ ಸಂಬಂಧ ಮಹಿಳೆಯರಿಬ್ಬರು ಒಬ್ಬರ ಮೇಲೊಬ್ಬರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಓರ್ವನ ಜೊತೆ ಮೂವರು ಮಹಿಳೆಯರನ್ನ ಬೆತ್ತಲೆ ಮಾಡಿ ಮೆರವಣಿಗೆ

    ಓರ್ವನ ಜೊತೆ ಮೂವರು ಮಹಿಳೆಯರನ್ನ ಬೆತ್ತಲೆ ಮಾಡಿ ಮೆರವಣಿಗೆ

    – 50 ಜನ ಸಮೂಹದಿಂದ ಹಲ್ಲೆ, ಮೆರವಣಿಗೆ

    ರಾಂಚಿ: ವಾಮಾಚಾರವನ್ನು ಅಭ್ಯಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಮಾರು 50 ಜನರ ಗುಂಪೊಂದು ಮೂವರು ಮಹಿಳೆಯರು ಮತ್ತು ಓರ್ವ ವ್ಯಕ್ತಿಯನ್ನು ಥಳಿಸಿದ್ದಾರೆ. ಅಲ್ಲದೇ ಬೆತ್ತಲು ಮಾಡಿ ಅವರನ್ನು ಹಳ್ಳಿಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ನಾಲ್ವರನ್ನು ಬಟ್ಟೆ ಇಲ್ಲದೆ ಮೆರವಣಿಗೆ ನಡೆಸಲಾಗಿದೆ. ನಾರಾಯಣಪುರ ಗ್ರಾಮದಲ್ಲಿ ಗುರುವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರನ್ನು ಬಂಧಿಸಲು ಶೋಧಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ನಮಗೆ ಮಾಹಿತಿ ಬಂದ ಕೂಡಲೇ ಪೊಲೀಸರ ಒಂದು ತಂಡವನ್ನು ಗ್ರಾಮಕ್ಕೆ ಕಳುಹಿಸಲಾಯಿತು. ಈ ವೇಳೆ ಸುಮಾರು 50 ಜನರು ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. ಇಬ್ಬರನ್ನು ಬಂಧಿಸಲಾಗಿದ್ದು, ಇತರರು ಓಡಿಹೋಗಿದ್ದಾರೆ. ಮೊದಲಿಗೆ ಪೊಲೀಸರು ಮಹಿಳೆಯರಿಗೆ ಮತ್ತು ಪುರುಷನಿಗೆ ಬಟ್ಟೆಗಳನ್ನು ನೀಡಿದ್ದಾರೆ. ನಂತರ ಇಬ್ಬರು ಆರೋಪಿಗಳಾದ ರವಿ ಕುಮಾರ್ ಮತ್ತು ವಾಸುದೇವ್‍ನನ್ನು ಸದರ್ ಪೊಲೀಸ್ ಠಾಣೆಗೆ ಕರೆ ತರಲಾಗಿದೆ ಎಂದು ಪೊಲೀಸ್ ಅಧಿಕಾರಿ ಬ್ರಾಹ್ಮಣ ತುಟ್ಟಿ ತಿಳಿಸಿದರು.

    ಗ್ರಾಮದ ನಿವಾಸಿ ಬಾಲಿ ರಾಜ್ವಾರ್ ಅವರ ಇಬ್ಬರು ಹೆಣ್ಣುಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಹಿನ್ನೆಲೆ​ಯಲ್ಲಿ ಮಹಿಳೆಯರು ಮತ್ತು ಪುರುಷನನ್ನು ವಾಮಾಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮನೆಯಿಂದ ಹೊರಗೆ ಕರೆದುಕೊಂಡು ಬಂದು ಥಳಿಸಿದ್ದಾರೆ. ರಾಜ್ವಾರ್ ಕುಟುಂಬದ ವಿಕಾಸ್ ಕುಮಾರ್ ಸಾ, ಬಬ್ಲು ರಾಮ್, ರಜಾದ್ ಪಾಸ್ವಾನ್, ರವಿ ಕುಮಾರ್ ರಾಮ್ ಮತ್ತು ರಾಜು ರಾಮ್ ಸೇರಿದಂತೆ ಮೂವರು ಮಹಿಳೆಯರಿಗೆ ಥಳಿಸಿದ್ದಾರೆ. ನಂತರ ಗ್ರಾಮದಲ್ಲಿ ಬೆತ್ತಲಾಗಿದೆ ಮೆರವಣಿಗೆ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಕೆಲವು ಗ್ರಾಮಸ್ಥರು ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಅವರಿಗೆ ಬೆದರಿಕೆ ಹಾಕಿ ವಾಪಸ್ ಕಳುಹಿಸಿದ್ದಾರೆ. ಅಲ್ಲದೇ ನಾರಾಯಣಪುರದ ವಾರ್ಡ್ ಕೌನ್ಸಿಲರ್ ಬಂದು ಜನಸಮೂಹವನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾರೂ ಅವರ ಮಾತನ್ನು ಕೇಳಲಿಲ್ಲ.

    ಈ ಘಟನೆಯಲ್ಲಿ ಸುಮಾರು 50 ಜನರು ಭಾಗಿಯಾಗಿದ್ದಾರೆ ಎಂಬ ಮಾಹಿತಿಯಿದೆ. ಸದ್ಯಕ್ಕೆ ಅವರಿಗಾಗಿ ಶೋಧ ನಡೆಯುತ್ತಿದೆ. ಯಾವುದೇ ಸಂದರ್ಭದಲ್ಲೂ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ಪರಾರಿಯಾಗಿದ್ದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಜೊತೆಗೆ ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸದರ್ ಪೊಲೀಸ್ ಠಾಣೆಯ ಉಸ್ತುವಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

  • ನನಗೆ ಅಮ್ಮನಾಗಲು ಇಷ್ಟವಿಲ್ಲ: ಪಾರುಲ್ ಯಾದವ್

    ನನಗೆ ಅಮ್ಮನಾಗಲು ಇಷ್ಟವಿಲ್ಲ: ಪಾರುಲ್ ಯಾದವ್

    ಬೆಂಗಳೂರು: ಪ್ರತಿಯೊಬ್ಬ ಹೆಣ್ಣು ಕೂಡ ತಾನೂ ತಾಯಿ ಆಗಬೇಕೆಂದು ಬಯಸುತ್ತಾಳೆ. ಆದರೆ ಸ್ಯಾಂಡಲ್‍ವುಡ್ ನಟಿ ಪಾರುಲ್ ಯಾದವ್ ‘ನಾನು ತಾಯಿಯಾಗಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ

    ಹೌದು, ಇತ್ತೀಚೆಗೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರಪ್ರದೇಶ ಹತ್ರಾಸ್ ಗ್ರಾಮದ ಯುವತಿಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಅಲ್ಲದೇ ಪೋಷಕರಿಗೂ ಮಗಳ ಮುಖವನ್ನು ತೋರಿಸಿದ ರಾತ್ರೋರಾತ್ರಿ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಬಗ್ಗೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಘಟನೆಯ ಕುರಿತು ನಟ-ನಟಿಯರು ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ

    ಇದೀಗ ಗ್ಯಾಂಗ್‍ರೇಪ್ ಸಂತ್ರಸ್ತೆಯ ಸಾವಿನಿಂದ ನೊಂದ ನಟಿ ಪಾರುಲ್ ಯಾದವ್ ತಾಯಿಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ, “ತಾಯಿಯಾಗುವುದು ಹೆಣ್ತನದ ಸಾರಾಂಶ. ಆದರೆ ಇಂದು ನಾನು ಅಮ್ಮನಾಗಲು ಬಯಸುವುದಿಲ್ಲ. ಒಬ್ಬ ಹೆಣ್ಣಾಗಿ ಈ ರೀತಿ ಹೇಳುವುದು ತುಂಬಾ ಕಷ್ಟವಾಗಿದೆ. ಆದರೆ ನನ್ನ ಮಾತೃತ್ವವನ್ನು ತ್ಯಜಿಸುತ್ತಿದ್ದೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ” ಎಂದಿದ್ದಾರೆ.

    ಅಲ್ಲದೇ, “ಒಂದು ವೇಳೆ ನನ್ನ ಮಗು ಹೆಣ್ಣಾದರೆ ಏನು ಮಾಡುವುದು? ಈ ದೇಶ ಎಲ್ಲ ಕಡೆಯಲ್ಲೂ ಹೆಣ್ಣಿಗೆ ಕೆಟ್ಟದಾಗಿಯೇ ಇದೆ” ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    “ಹತ್ರಾಸ್‍ನಲ್ಲಿ ನಡೆದ ಭಯಾನಕ ಘಟನೆಯೇ ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ಕಾರಣಗಳು ಬೇರೆಯಾಗಿರಬಹುದು. ಆದರೆ ಯಾವಾಗಲೂ ಮಹಿಳೆಯರಿಗೆ ತೊಂದರೆ ಆಗುತ್ತದೆ. ಅದರಿಂದ ಆಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ನಟಿ ಪಾರುಲ್ ಯಾದವ್ ಹೇಳಿದ್ದಾರೆ.

    ಹತ್ರಾಸ್ ಪ್ರಕರಣ?
    ಇದೇ ತಿಂಗಳ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮ ಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದಾರೆ. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ಮೃತಪಟ್ಟಿದ್ದಳು.

    ಯುವತಿ ಸಾವನ್ನಪ್ಪಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಆಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದಾರೆ. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಮಗೆ ಗೊತ್ತಾಗಂದೆ ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಕೂಡ ಸಹೋದರ ದೂರಿದ್ದರು.

  • ಕಣ್ಣಿಗೆ ಖಾರದ ಪುಡಿ ಎರಚಿ, 5 ತಿಂಗ್ಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

    ಕಣ್ಣಿಗೆ ಖಾರದ ಪುಡಿ ಎರಚಿ, 5 ತಿಂಗ್ಳ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

    – ವಾಕಿಂಗ್ ಬಂದವರ ಕತ್ತುಕೊಯ್ದು ಬೀಕರ ಹತ್ಯೆ

    ಬೆಳಗಾವಿ: ಕಣ್ಣಿಗೆ ಖಾರದ ಪುಡಿ ಎರಚಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಮಚ್ಛೆಯ ಲಕ್ಷ್ಮೀನಗರದಲ್ಲಿ ನಡೆದಿದೆ.

    ಕೊಲೆಯಾದ ಮಹಿಳೆಯರನ್ನು ಕಾಳೇವಾಡಿ ಗ್ರಾಮದ ರಾಜಶ್ರೀ ರವಿ ಬನ್ನೂರ್ (21), ರೋಹಿಣಿ ಗಂಗಪ್ಪ ಹುಲಿಮನಿ (21) ಎಂದು ಗುರುತಿಸಲಾಗಿದೆ. ಇದರಲ್ಲಿ ಓರ್ವ ಮಹಿಳೆ ಐದು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.

    ರಾಜಶ್ರೀ ಮತ್ತು ರೋಹಿಣಿ ಸಂಜೆ ವೇಳೆ ವಾಕ್ ಮಾಡಲು ಗ್ರಾಮದ ಬ್ರಹ್ಮದೇವರ ದೇವಸ್ಥಾನಕ್ಕೆ ಬಂದಿದ್ದಾರೆ. ಈ ವೇಳೆ ಬೈಕಿನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಕೊಲೆಗಾರರು, ಮೊದಲು ಮಹಿಳೆಯರ ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಆ ನಂತರ ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ನಂತರ ಬಂದ ದಾರಿಯಲ್ಲೇ ಬೈಕ್ ತಿರುಗಿಸಿಕೊಂಡು ವಾಪಸ್ ಹೋಗಿದ್ದಾರೆ.

    ಈ ಕೊಲೆಗಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜೋಡಿಗಳೇ ಟಾರ್ಗೆಟ್ – 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ

    ಜೋಡಿಗಳೇ ಟಾರ್ಗೆಟ್ – 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ

    – ಪೊಲೀಸ್ ರೀತಿ ಪೋಸ್ ಕೊಡುತ್ತಿದ್ದ ಲಾರಿ ಮಾಲೀಕ
    – ಮೊಬೈಲಿನಲ್ಲಿ ಅನೇಕ ಮಹಿಳೆಯರ ಫೋಟೋ, ವಿಡಿಯೋ

    ಚೆನ್ನೈ: 35 ವರ್ಷದ ಲಾರಿ ಮಾಲೀಕನೊಬ್ಬ ಪೊಲೀಸ್ ಅಧಿಕಾರಿ ರೀತಿ ಪೋಸ್ ನೀಡುತ್ತಾ ಸುಮಾರು 40ಕ್ಕೂ ಹೆಚ್ಚು ಮಹಿಳೆಯರನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಇತ್ತೀಚೆಗೆ ಮಹಿಳೆಯೊಬ್ಬರ ವಿಡಿಯೋ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಪಿಚೈಮಾನಿ ಎಂದು ಗುರುತಿಸಲಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ಪಿಚೈಮಾನಿ ಬ್ಲ್ಯಾಕ್‍ಮೇಲ್ ಮೂಲಕವೇ 40ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅದರಲ್ಲೂ ಪುಜ್ಹಲ್ ಮತ್ತು ರೆಡ್ ಹಿಲ್ಸ್ ಪ್ರದೇಶ ಮಹಿಳೆಯರನ್ನೇ ಆರೋಪಿ ಟಾರ್ಗೆಟ್ ಮಾಡುತ್ತಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಬಂಧಿತ ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಹಲವಾರು ವಿಡಿಯೋಗಳು ಮತ್ತು ಮಹಿಳೆಯರ ಫೋಟೋಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ.

    ಇತ್ತೀಚೆಗೆ ಮಹಿಳೆಯೊಬ್ಬರು ಪುಜ್ಹಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನನ್ನ ಗೆಳೆಯನೊಂದಿಗೆ ಇರುವಾಗ ನನ್ನ ಮೊಬೈಲ್ ಫೋನ್ ಮತ್ತು 15 ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಈ ಕುರಿತು ದೂರು ದಾಖಲಿಸಿ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ತನಿಖೆ ವೇಳೆ ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

    ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆಯ ಗೆಳೆಯನನ್ನು ಗುರುತಿಸಲಾಗಿದ್ದು, ಆತ ಮಹಿಳೆಯನ್ನು ಸ್ಥಳದಲ್ಲೇ ಬಿಟ್ಟು ವೇಗವಾಗಿ ಹೋಗುವುದು ಸೆರೆಯಾಗಿದೆ. ಆಗ ಪೊಲೀಸರು ಅನುಮಾನದ ಮೇರೆಗೆ ಮಹಿಳೆಯನ್ನು ವಿಚಾರಿಸಿದ್ದಾರೆ. ಆಗ ಮಹಿಳೆ ನಡೆದ ವಿಚಾರವನ್ನು ಪೊಲೀಸರ ಮುಂದೆ ಹೇಳಿದ್ದಾರೆ. ಆರೋಪಿ ಗೆಳೆಯನೊಂದಿಗಿರುವ ಖಾಸಗಿ ಫೋಟೋಗಳನ್ನು ತೋರಿಸಿ ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದನು. ಅಲ್ಲಿ ಆರೋಪಿ ನನ್ನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಅದಕ್ಕೂ ಮೊದಲು ಆರೋಪಿ ನನ್ನ ಫೋನ್ ಮತ್ತು ವಸ್ತುಗಳನ್ನು ಕಸಿದುಕೊಂಡಿದ್ದಾನೆ ಎಂದು ಮಹಿಳೆ ಪೊಲೀಸರು ಮುಂದೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾರೆ.

    ಎರಡು ದಿನಗಳ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅನೇಕ ಮಹಿಳೆಯರ ಫೋಟೋವನ್ನು ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ನಾನು ಖಾಕಿ ಶರ್ಟ್ ಮತ್ತು ಪ್ಯಾಂಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

    ಆರೋಪಿ ರೆಡ್ ಹಿಲ್ಸ್ ಪ್ರದೇಶಗಳಲ್ಲಿ ವಾಕಿಂಗ್ ಬರುವ ಜೋಡಿಗಳನ್ನೇ ಗುರಿಸಿಯಾಗಿಸಿಕೊಂಡಿದ್ದನು. ಜೋಡಿ ಒಟ್ಟಿಗಿರುವ ಫೋಟೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ನಂತರ ಅವರನ್ನು ಬ್ಲ್ಯಾಕ್‍ಮೇಲ್ ಮಾಡಿ ಅತ್ಯಾಚಾರ ಎಸಗುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

  • ಭಾರತದಲ್ಲಿ ಫಸ್ಟ್ ಟೈಂ- ಯುದ್ಧನೌಕೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಮಹಿಳೆಯರು

    ಭಾರತದಲ್ಲಿ ಫಸ್ಟ್ ಟೈಂ- ಯುದ್ಧನೌಕೆಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಮಹಿಳೆಯರು

    ನವದೆಹಲಿ: ಭಾರತೀಯ ನೌಕಾದಳದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳು ಯುದ್ಧನೌಕೆಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶ ಪಡೆದಿದ್ದಾರೆ. ಈ ಮೂಲಕ ನೌಕಾದಳದಲ್ಲಿಯೂ ಮಹಿಳೆಯರು ತಮ್ಮದೇ ಛಾಪು ಮೂಡಿಸಲು ಆರಂಭಿಸಿದ್ದಾರೆ.

    ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರು ಹೆಲಿಕಾಪ್ಟರ್ ವಿಭಾಗದಲ್ಲಿ ವೀಕ್ಷಕರು ಅಥವಾ ವಾಯುಗಾಮಿ ತಂತ್ರಜ್ಞರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಇಬ್ಬರು ಛಲಗಾರ್ತಿಯರು ಭಾರತೀಯ ನೌಕಾಪಡೆಯ ಯುದ್ಧ ಹೆಲಿಕಾಪ್ಟರ್‍ಗಳನ್ನು ಆನ್‍ಬೋರ್ಡ್ ಯುದ್ಧನೌಕೆಗಳ ಮೂಲಕ ನಿರ್ವಹಿಸಲಿದ್ದಾರೆ.

    ಇವರು ಹಡಗಿನ ಸಿಬ್ಬಂದಿ ಭಾಗವಾಗಿ ನೌಕಾಪಡೆಯ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗಿರುವ ಮೊದಲ ಮಹಿಳಾ ಅಧಿಕಾರಿಗಳಾಗಲಿದ್ದಾರೆ. ಈ ಹಿಂದೆ ಮಹಿಳೆಯರನ್ನು ಫಿಕ್ಸೆಡ್ -ವಿಂಗ್ ಏರ್‍ಕ್ರಾಫ್ಟ್ ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯುದ್ಧನೌಕೆಗಳ ಮೂಲಕ ಹೆಲಿಕಾಪ್ಟರ್ ಗಳ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿದೆ.


    ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಭಾರತೀಯ ಸೇನೆಯ 17 ಅಧಿಕಾರಿಗಳ ಗುಂಪಿನ ಸದಸ್ಯೆಯರಾಗಿದ್ದಾರೆ. ಇದರಲ್ಲಿ ಕೊಚ್ಚಿಯ ಐಎನ್‍ಎಸ್ ಗರುಡಾದಲ್ಲಿ ಸೋಮವಾರ ಭಾರತೀಯ ನೌಕಾಪಡೆಯ ಅಬ್ಸರ್ವರ್ ಕೋರ್ಸ್‍ನಿಂದ ಪಾಸ್ ಔಟ್ ಆಗಿರುವ ಇಂಡಿಯನ್ ಕೋಸ್ಟ್ ಗಾರ್ಡ್‍ನ ನಾಲ್ವರು ಮಹಿಳಾ ಹಾಗೂ ಮೂವರು ಪುರುಷ ಅಧಿಕಾರಿಗಳು ಸಹ ಇದ್ದಾರೆ.

    ಎನ್‍ಎಂ, ವಿಎಸ್‍ಎಂ, ತರಬೇತಿಯ ಮುಖ್ಯ ಅಧಿಕಾರಿ ರಿಯರ್ ಅಡ್ಮಿರಲ್ ಆಂಟೋನಿ ಜಾರ್ಜ್ ಅವರು ಪದವಿಯನ್ನು ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಆಂಟೋನಿ ಜಾರ್ಜ್, ಹೆಲಿಕಾಪ್ಟರ್ ಕಾರ್ಯಾಚರಣೆಗಳಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ತರಬೇತಿ ನೀಡಿರುವುದು ಗಮನಾರ್ಹ ವಿಚಾರ. ಈ ಮೂಲಕ ಅಂತಿಮವಾಗಿ ಭಾರತೀಯ ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳಲ್ಲಿ ಮಹಿಳೆಯರನ್ನು ನಿಯೋಜಿಸಲು ದಾರಿ ಮಾಡಿಕೊಟ್ಟಿದೆ ಎಂದು ತಿಳಿಸಿದರು.

  • ಮದ್ವೆಗೂ ಮುನ್ನ ಡೇಟಿಂಗ್ ಮಾಡೋದು ಸರಿ, ಆದ್ರೆ ಮಂಚಕ್ಕೆ ಹೋಗೋದು ಸರಿಯಿಲ್ಲ: ರಾಧಾರಮಣ ಖ್ಯಾತಿಯ ನಟಿ

    ಮದ್ವೆಗೂ ಮುನ್ನ ಡೇಟಿಂಗ್ ಮಾಡೋದು ಸರಿ, ಆದ್ರೆ ಮಂಚಕ್ಕೆ ಹೋಗೋದು ಸರಿಯಿಲ್ಲ: ರಾಧಾರಮಣ ಖ್ಯಾತಿಯ ನಟಿ

    – ನಿಮ್ಮ ಪ್ರೀತಿಯನ್ನ ಸಾಬೀತು ಪಡಿಸಲು ನೀವು ಬಟ್ಟೆ ಬಿಚ್ಚಬೇಕಿಲ್ಲ

    ಬೆಂಗಳೂರು: ನಿಮಗಾಗಿ ಸೇಫ್ಟಿ ಪ್ಯಾಡ್ ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಆದರೆ ಕಾಂಡೋಮ್ ಕೊಳ್ಳುವವನಲ್ಲ ಎಂದು ‘ರಾಧಾರಮಣ’ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ಹೇಳಿದ್ದಾರೆ.

    ನಟಿ ಕಾವ್ಯ ಗೌಡ ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. “ಆತ್ಮೀಯ ಹುಡುಗಿಯರೇ, ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನಿಮ್ಮ ಬಟ್ಟೆಗಳನ್ನು ಎಂದಿಗೂ ಬಿಚ್ಚಬೇಕಾಗಿಲ್ಲ. ಅದೇ ರೀತಿ ಮದುವೆಗೂ ಮುನ್ನ ಡೇಟಿಂಗ್ ಹೋಗುವುದು ಸರಿ. ಆದರೆ ಮಂಚಕ್ಕೆ ಹೋಗುವುದು ಸರಿಯಿಲ್ಲ. ನಿಮಗಾಗಿ ಸೇಫ್ಟಿ ಪ್ಯಾಡ್‍ಗಳನ್ನು ಖರೀದಿಸಬಹುದಾದ ಹುಡುಗನನ್ನು ಪಡೆಯಿರಿ, ಕಾಂಡೋಮ್ ಕೊಳ್ಳುವವನಲ್ಲ” ಎಂದು ಕಾವ್ಯಗೌಡ ಹೇಳಿದ್ದಾರೆ.

    ಅಷ್ಟೇ ಅಲ್ಲದೇ “ನಿಮ್ಮನ್ನು ಹೋಟೆಲ್‍ಗಳಿಗೆ ಕರೆದುಕೊಂಡು ಹೋಗದೆ ತನ್ನ ಮನೆಗೆ ಕರೆದುಕೊಂಡು ಹೋಗುವ ಹುಡುಗನನ್ನು ಪಡೆಯಿರಿ. ನಿಮ್ಮ ಮುಟ್ಟಿನ ನೋವಿನ ಬಗ್ಗೆ ಕೇಳುವ ಹುಡುಗನನ್ನು ಪಡೆಯಿರಿ. ನಿಮ್ಮ ಬೆತ್ತಲೆಯನ್ನು ಕೇಳುವವನಲ್ಲ. ನಿಮ್ಮ ಮನಸ್ಸು ಮತ್ತು ಹೃದಯವನ್ನು ಅರ್ಥ ಮಾಡಿಕೊಳ್ಳುವ ಹುಡುಗನನ್ನು ಪಡೆಯಿರಿ. ನಿಮ್ಮ ದೇಹವನ್ನು ಬಯಸುವವನಲ್ಲ” ಎಂದು ಕಾವ್ಯ ಬರೆದುಕೊಂಡಿದ್ದಾರೆ.

    “ಗೌರವವು ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಒಬ್ಬ ನಿಜವಾದ ವ್ಯಕ್ತಿ ಎಂದಿಗೂ ಮಹಿಳೆಯನ್ನು ನೋಯಿಸುವುದಿಲ್ಲ. ಮಹಿಳೆ ಎಂದರೆ ಕೇವಲ ನಿಮಗೆ ಅಡುಗೆ ಮಾಡುವ, ನಿಮ್ಮ ಬಟ್ಟೆ ತೊಳೆಯುವ ಗೃಹಿಣಿ ಮಾತ್ರವಲ್ಲ. ಅವಳು ಗೃಹಿಣಿಯಾಗಿದ್ದು, ನಿಮ್ಮ ಮನೆಗೆ ಬಂದಮೇಲೆ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಾ, ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಅಂತಹ ಮಹಿಳೆಯರಿಗೆ ಗೌರವ ತೋರಿಸುವುದು ದೊಡ್ಡ ಉಡುಗೊರೆಗಳಲ್ಲಿ ಒಂದಾಗಿದೆ” ಎಂದು ನಟಿ ಕಾವ್ಯ ಗೌಡ ಮಹಿಳೆಯರ ಬಗ್ಗೆ ಹೇಳಿದ್ದಾರೆ.

    ನಟಿ ಕಾವ್ಯ ಗೌಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾರಮಣ’ ಸೀರಿಯಲ್‍ನಲ್ಲಿ ರಾಧಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಧಾರಾವಾಹಿಯಲ್ಲಿ ಕಾವ್ಯ ಗೌಡ ರಾಧಾ ಮಿಸ್ ಎಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಕಾವ್ಯಗೌಡ ಸೀರಿಯಲ್ ಮಾತ್ರವಲ್ಲದೇ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.

    https://www.instagram.com/p/CE8KB0snzdp/?utm_source=ig_embed

  • ಕೊರೊನಾ ಎಫೆಕ್ಟ್ ಪೌಷ್ಟಿಕ ಆಹಾರದತ್ತ ಮಹಿಳೆಯರ ಒಲವು- ಮಾತೃಪೂರ್ಣ ಆಹಾರಕ್ಕೆ ಹೆಚ್ಚಿದ ಬೇಡಿಕೆ

    ಕೊರೊನಾ ಎಫೆಕ್ಟ್ ಪೌಷ್ಟಿಕ ಆಹಾರದತ್ತ ಮಹಿಳೆಯರ ಒಲವು- ಮಾತೃಪೂರ್ಣ ಆಹಾರಕ್ಕೆ ಹೆಚ್ಚಿದ ಬೇಡಿಕೆ

    – ಕೊಡಗಿನಲ್ಲಿ ಯಶಸ್ಸು ಕಾಣುತ್ತಿದೆ ಮಾತೃಪೂರ್ಣ ಯೋಜನೆ

    ಮಡಿಕೇರಿ: ಅಪೌಷ್ಟಿಕತೆ ನೀಗಿಸಲು ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ಕಾಡದಂತೆ ತಡೆಯಲು ಮಾತೃಪೂರ್ಣ ಯೋಜನೆ ಜಾರಿಯಲ್ಲಿದೆ. ಆದರೆ ಇಷ್ಟು ದಿನ ಬಹುತೇಕ ಮಹಿಳೆಯರು ಇದರ ಉಪಯೋಗ ಪಡೆಯುತ್ತಿರಲಿಲ್ಲ. ಆದರೆ ಇದೀಗ ಕೊರೊನಾ ಬಳಿಕ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ.

    ಸರ್ಕಾರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಪೌಷ್ಟಿಕತೆ ನೀಗಿಸಲು ಜಾರಿಗೆ ತಂದ ಮಾತೃಪೂರ್ಣ ಯೋಜನೆಗೆ ಈ ವರೆಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ದೊರೆತಿರಲಿಲ್ಲ. ಗರ್ಭಿಣಿ ಹಾಗೂ ಬಾಣಂತಿಯರು ಮಧ್ಯಾಹ್ನ ಅನ್ನ, ಸಾಂಬಾರ್, 200 ಮಿ.ಲೀಟರ್ ಹಾಲು, ಮೊಟ್ಟೆ ಹಾಗೂ ಕಬ್ಬಿಣ ಅಂಶವಿರುವ ಕಡಲೆ ಚಿಕ್ಕಿ ಇವುಗಳನ್ನು ಸೇವಿಸಲು ಅಂಗನವಾಡಿ ಕೇಂದ್ರಗಳಿಗೆ ಬರಬೇಕಿತ್ತು. ಬೆಟ್ಟ, ಗುಡ್ಡ ಹಾಗೂ ಕಡಿದಾದ ದಾರಿಗಳು ಇದ್ದುದ್ದರಿಂದ ಹೆಚ್ಚು ಮಹಿಳೆಯರು ಕೇಂದ್ರಗಳಿಗೆ ಬರುತ್ತಿರಲಿಲ್ಲ. ಆದರೆ ಕೊರೊನಾ ಹಾಗೂ ಲಾಕ್‍ಡೌನ್ ಬಳಿಕ ತಿಂಗಳಿಗಾಗುವಷ್ಟು ಆಹಾರ ಕಿಟ್‍ನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಲಾಗುತ್ತಿದೆ. ಮಹಿಳೆಯರ ಕುಟುಂಬಸ್ಥರು ಆಹಾರ ಕಿಟ್ಟ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಕೇವಲ ಶೇ.15 ರಷ್ಟಿದ್ದ ಯೋಜನೆಯ ಗುರಿ, ಪ್ರಸ್ತುತ ಶೇ.100ಕ್ಕೆ ತಪುಪಿದೆ ಎಂದು ಅಂಗನವಾಡಿ ಸಿಬ್ಬಂದಿ ತಿಳಿಸಿದ್ದಾರೆ.

    ಪೋಷಣ್ ಅಭಿಯಾನದಡಿ ಅಪೌಷ್ಟಿಕತೆ ನಿವಾರಣೆ ಕುರಿತು ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಕಳೆದ ಎರಡು ತಿಂಗಳಿಂದ ಸರ್ಕಾರದ ಆದೇಶದಂತೆ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶವಿರುವ 4 ಕೆ.ಜಿ.ಅಕ್ಕಿ, 25 ಮೊಟ್ಟೆಗಳು, ಶೇಂಗಾ ಬೀಜ, ಹಾಲಿನಪುಡಿ, ಹೆಸರುಕಾಳು, ಸಕ್ಕರೆ ಹಾಗೂ ಸೋಡಿಯಂ ಉಪ್ಪು ಒಳಗೊಂಡ ಆಹಾರ ಕಿಟ್ ಕೊಡುತ್ತಿದ್ದೇವೆ. ಈ ಹಿಂದೆ ಪ್ರತಿನಿತ್ಯ ಯಾರೂ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿರಲಿಲ್ಲ. 10 ಜನರಲ್ಲಿ ಒಬ್ಬಿಬ್ಬರು ಮಾತ್ರ ಬರುತ್ತಿದ್ದರು. ಆದರೆ ಕೊರೊನಾ ಹಾಗೂ ಲಾಕ್‍ಡೌನ್ ಬಳಿಕ ಅಂಗನವಾಡಿ ಕೇಂದ್ರಗಳಲ್ಲಿನ ಕಿಟ್‍ಗಳನ್ನು ಮಹಿಳೆಯರ ಕುಟುಂಬಸ್ಥರು ಕೊಂಡೊಯ್ಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.

    ಕಷ್ಟಪಟ್ಟು ಅಂಗನವಾಡಿ ಕೇಂದ್ರಗಳಿಗೆ ಹೋಗಿ ಊಟ ಮಾಡಬೇಕಿದ್ದವರಿಗೆ ಕಳೆದೆರಡು ತಿಂಗಳಿಂದ ಸರ್ಕಾರ ರೂಪಿಸಿರುವ ಟೇಕ್ ಹೋಮ್ ಫುಡ್ ವ್ಯವಸ್ಥೆ ಸಾಕಷ್ಟು ಅನುಕೂಲ ಮಾಡಿದೆ.

  • ನಮ್ಮವರು ನಿರ್ದೋಷಿಗಳು, ಅರೆಸ್ಟ್ ಮಾಡಿದ್ರೆ ಮನೆ ನಡೆಯುವುದಾದ್ರೂ ಹೇಗೆ?

    ನಮ್ಮವರು ನಿರ್ದೋಷಿಗಳು, ಅರೆಸ್ಟ್ ಮಾಡಿದ್ರೆ ಮನೆ ನಡೆಯುವುದಾದ್ರೂ ಹೇಗೆ?

    – ಮನೆಗೆ ನುಗ್ಗಿ ಬೆಡ್‍ರೂಮ್ ಪರಿಶೀಲನೆ ನಡೆಸಿದ್ರು
    – ಪೊಲೀಸರ ಮಿಡ್‍ನೈಟ್ ಆಪರೇಷನ್‍ಗೆ ವಿರೋಧ
    – ಗಲಾಟೆಯ ಅರ್ಥವೂ ತಿಳಿಯದ ಇಬ್ಬರು ಮೌಲ್ವಿಗಳನ್ನ ಕರ್ಕೊಂಡು ಹೋದ್ರು

    ಬೆಂಗಳೂರು: ಪೊಲೀಸರು ಮಿಡ್‍ನೈಟ್ ಆಪರೇಷನ್ ಮೂಲಕ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಇದೀಗ ಪೊಲೀಸರ ಮಿಡ್‍ನೈಟ್ ಆಪರೇಷನ್‍ಗೆ ಡಿಜೆ ಹಳ್ಳಿ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

    ಗಲಾಟೆ ನಡೆದ ದಿನದಿಂದ ಪೊಲೀಸರು ಡಿಜೆ ಹಳ್ಳಿಯಲ್ಲಿ ಗಲಭೆಯಲ್ಲಿ ಪಾಲ್ಗೊಂಡ ಪುಂಡರ ಹಿಡಿಯಲು ಮಿಡ್‍ನೈಟ್ ಆಪರೇಷನ್ ನಡೆಸುತ್ತಿದ್ದಾರೆ. ಆದರೆ ಡಿಜೆ ಹಳ್ಳಿಯಲ್ಲಿ ಖಾಕಿಗಳು ಲಾಠಿ ಹಿಡಿದುಕೊಂಡು ಮನೆಯ ಗಾಜುಗಳನ್ನು ಪುಡಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ನಮ್ಮ ಮನೆಯಲ್ಲಿ ಯಾರು ಪಾಲ್ಗೊಂಡಿಲ್ಲ. ಇದಕ್ಕೂ ನಮಗೂ ಸಂಬಂಧ ಇಲ್ಲ ಅಂದರು ಕೇಳದೇ ಪೊಲೀಸರು ಮನೆ ಒಡೆದಿದ್ದಾರೆ ಎಂದು ಸ್ಥಳೀಯ ಜನರು ವಿಡಿಯೋ ಹರಿಬಿಡುತ್ತಿದ್ದಾರೆ. ಕಿಟಕಿ ಗಾಜು ಮನೆಯ ಬಾಗಿಲು ಒಡೆದು ಹೋಗಿರುವ ದೃಶ್ಯಗಳ ಸಮೇತ ಸ್ಥಳೀಯರು ಆರೋಪಿಸುತ್ತಿದ್ದಾರೆ.

    ಬೆಳಗಿನ ಜಾವ 4-30ಕ್ಕೆ ಮನೆಗೆ ನುಗ್ಗಿ ಬಂದು ಬೆಡ್‍ರೂಮ್ ಹಾಗೂ ಬಾತ್‍ರೂಮ್ ಎಲ್ಲಾ ಪರಿಶೀಲನೆ ಮಾಡಿದರು. ನಮ್ಮ ಮನೆಯವರು ರಾತ್ರಿ 8 ಗಂಟೆಗೆ ಬಂದು ಮಲಗಿದ್ದರು. ಯಾಕೆ ಅಂತ ಕೇಳಿದರೆ ಪೊಲೀಸ್ ಠಾಣೆ ಬಳಿ ಬಂದು ಗಲಾಟೆ ಮಾಡಿದ್ದಾರೆ. ಅವರಿಗೆ ಬುದ್ಧಿ ಹೇಳಲು ಆಗುವುದಿಲ್ಲಾ ನಿಮಗೆ ಎಂದರು. ನಮಗೂ ಮರ್ಯಾದೆ ನೀಡಲಿಲ್ಲ. ಅವರೇ ನಮ್ಮ ಮನೆ ನಡೆಸುವುದು. ಈವರೆಗೂ ಕಳಿಸಿಲ್ಲ ನಾವು ಏನೋ ಮಾಡಬೇಕು ಎಂದು ಡಿಜಿ ಹಳ್ಳಿ ಮಹಿಳೆ ಆರೋಪಿಸಿದ್ದಾರೆ.

    ಬೆಳಗಿನ ಜಾವ 4 ಗಂಟೆಗೆ ಬಂದು ಬಾಗಿಲು ತೆಗೆಯಿರಿ ಎಂದರು. ನಾವು ಬಾಗಿಲು ತೆಗೆಯದಿದ್ದಾಗ ಗೇಟ್ ಮುರಿದು ನಮ್ಮವರನ್ನು ಕರೆದುಕೊಂಡು ಹೋದರು. ಅವರು ಯಾರ ವಿಷಯಕ್ಕೂ ಹೋಗುವುದಿಲ್ಲ ಅವರನ್ನು ಯಾಕೆ ಕರೆದುಕೊಂಡು ಹೋದರು ತಿಳಿಯಲಿಲ್ಲ ಎಂದು ಡಿಜೆ ಹಳ್ಳಿ ನಿವಾಸಿ ಹೇಳಿದ್ದಾರೆ.

    ಗಲಾಟೆ ನಡೆದಿರುವುದು ಡಿಜೆ ಹಳ್ಳಿಯಲ್ಲಿ. ನಾವು ವಾಸ ಮಾಡುವುದು 3 ಕಿಲೋಮೀಟರ್ ದೂರದಲ್ಲಿ. ನಮಗೆ ರಕ್ಷಣೆ ಮಾಡಬೇಕಾದ ಪೊಲೀಸರು ರಾತ್ರೋರಾತ್ರಿ ಬಾಗಿಲು ಮುರಿದು ನಮ್ಮ ಸಹೋದರರು ಹಾಗೂ ನಮ್ಮ ಮನೆ ಮೇಲೆ ವಾಸ ಮಾಡುವ ಇಬ್ಬರು ಮೌಲ್ವಿಗಳನ್ನು ಕರೆದುಕೊಂಡು ಹೋದರು. ಗಲಾಟೆ-ದಂಗೆಗಳ ಬಗ್ಗೆ ಅರ್ಥವೂ ತಿಳಿಯದ ಆ ಇಬ್ಬರು ಮೌಲ್ವಿಗಳನ್ನು ಕರೆದುಕೊಂಡು ಹೋದರು. ರಕ್ಷಣೆ ಮಾಡುವ ಪೊಲೀಸರು ತಾರತ್ಯಮ ನೀತಿ ಅನುಸರಿಸಿದರೆ ಹೇಗೆ? ಮನೆಗಳು ನಡೆಯುದಾದರೂ ಹೇಗೆ? ನಮ್ಮವರು ನಿರ್ದೋಷಿಗಳು. ತಕ್ಷಣವೇ ಅವರನ್ನು ಪೊಲೀಸರು ಬಿಡುಗಡೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದಿದ್ದಾರೆ.

    ಪ್ರವಾದಿ ಅವರ ಬಗ್ಗೆ ಅವಹೇಳನ ಮಾಡಿದ್ದು ತಪ್ಪು. ನಮ್ಮ ಜನರು ಪೊಲೀಸ್ ಠಾಣೆ ಬೆಂಕಿ ಹಾಕಿರುವುದೂ ತಪ್ಪು. ಘಟನೆ ಸಂಭವಿಸಿದ ವೇಳೆ ಕ್ರಮ ತೆಗೆದುಕೊಂಡಿದ್ದರೆ ಈ ಅನಾಹುತ ಆಗುತ್ತಿರಲಿಲ್ಲ. ಇದು ಪೊಲೀಸರ ವೈಫಲ್ಯ. ಆದರೂ ನಮ್ಮ ರಾಜಕೀಯ ನಾಯಕರು, ಧರ್ಮಗುರುಗಳು ನಮ್ಮ ಜನರನ್ನು ಉಳಿಸಲು ಮುಂದಾಗಲಿಲ್ಲ. ಶಾಸಕರ ಮನೆಗೆ ಹೋಗಿ ನಮ್ಮ ಧರ್ಮಗುರುಗಳು ಸಂತಾಪ ಹೇಳಿದರು. ಆದರೆ ನಮ್ಮ ಅಮಾಯಕ ಜನರನ್ನು ಉಳಿಸಲು ಮುಂದಾಗದೆ ಇರುವುದು ಹೇಡಿತನ. ಪ್ರಚಾರ ಪಡೆದುಕೊಳ್ಳಲು ಮಾತ್ರ ಮುಂದೆ ಬರುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

  • ಹನುಮನಿಗಾಗಿ ಏಳು ಅಡಿ ಎತ್ತರದ ಶ್ರೀರಾಮನ ರಾಖಿ ಸಿದ್ಧ

    ಹನುಮನಿಗಾಗಿ ಏಳು ಅಡಿ ಎತ್ತರದ ಶ್ರೀರಾಮನ ರಾಖಿ ಸಿದ್ಧ

    ಚಂಡೀಗಢ: ರಕ್ಷಾ ಬಂಧನ ಹಿನ್ನೆಲೆಯಲ್ಲಿ ಚಂಡೀಗಢದಲ್ಲಿ ಮಹಿಳೆಯರ ಗುಂಪೊಂದು ಏಳು ಅಡಿ ಎತ್ತರದ ಪರಿಸರ ಸ್ನೇಹಿ ಶ್ರೀರಾಮನ ರಾಖಿ ತಯಾರಿಸಿದ್ದು, ಇದನ್ನು ಇಲ್ಲಿಯ ಹನುಮಾನ ಮಂದಿರಕ್ಕೆ ನೀಡಲು ನಿರ್ಧರಿಸಿದ್ದಾರೆ.

    ಸ್ಥಳೀಯ ನಿವಾಸಿ ಮೀನಾ ತಿವಾರಿ ನೇತೃತ್ವದಲ್ಲಿ ಮಹಿಳೆಯರ ಗುಂಪು ಕಳೆದ ಹದಿನೈದು ದಿನಗಳಿಂದ ಈ ಏಳು ಅಡಿ ಉದ್ದದ ರಾಖಿ ತಯಾರಿಸಿದ್ದಾರೆ. ಪ್ರತಿ ನಿತ್ಯ ಎರಡ್ಮೂರು ಗಂಟೆ ಕಾಲ ರಾಖಿ ತಯಾರಿಸುತ್ತಿದ್ದರು.

    ಈ ವಿಶೇಷ ರಾಖಿಯಲ್ಲಿ ರಾಮನ ದೊಡ್ಡ ಭಾವಚಿತ್ರವಿದ್ದು, ಇದಕ್ಕೆ ರುದ್ರಾಕ್ಷಿಗಳು, ಕೃತಕ ಹೂಗಳು ಮತ್ತು ರಿಬ್ಬನ್ ಗಳಿಂದ ಅಲಂಕಾರ ಮಾಡಲಾಗಿದೆ. ಈ ವರ್ಷ ಆಗಸ್ಟ್ 3 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.

    ಚಂಡೀಗಢದಲ್ಲಿರುವ 32 ಅಡಿ ಉದ್ದದ ಹನುಮಾನ್ ಮೂರ್ತಿಯ ಬಲಗೈ ಈ ರಾಖಿಯನ್ನು ಕಟ್ಟಲಾಗುವುದು. ನಾವು ಪ್ರತಿವರ್ಷ ರಾಖಿಯನ್ನು ತಯಾರಿಸುತ್ತೇವೆ. ಆದರೆ ಈ ಬಾರಿ ವಿಶೇಷವಾಗಿ ಈ ರಾಖಿಯನ್ನು ತಯಾರಿಸಿದ್ದೇವೆ ಎಂದು ಮೀನಾ ತಿವಾರಿ ತಿಳಿಸಿದ್ದಾರೆ.