Tag: Women Techie

  • ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    ಕೆಲಸ ಕಳ್ಕೊಂಡು ತರಕಾರಿ ಮಾರಾಟ ಮಾಡ್ತಿದ್ದ ಟೆಕ್ಕಿಗೆ ಸೋನು ಸೂದ್ ಸಹಾಯ

    – ಉದ್ಯೋಗಕ್ಕೆ ಸೇರಿದ ಮೂರು ತಿಂಗಳಿಗೆ ಕೆಲಸದಿಂದ ವಜಾ

    ಹೈದರಾಬಾದ್: ಕೊರೊನಾ ಲಾಕ್‍ಡೌನ್ ಶುರುವಾದಗಿನಿಂದ ಬಾಲಿವುಡ್ ನಟ ಸೋನು ಸೂದ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಕೋವಿಡ್‍ನಿಂದ ಕೆಲಸ ಕಳೆದುಕೊಂಡು ತರಕಾರಿ ಮಾರಾಟ ಮಾಡುತ್ತಿದ್ದ ಮಹಿಳಾ ಟೆಕ್ಕಿ ನೆರವಿಗೆ ಸೋನು ಸೂದ್ ಧಾವಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಅಜ್ಜಿಯ ಅಡ್ರೆಸ್ ಹೇಳಿ- ಸೋನು ಸೂದ್

    ಹೈದರಾಬಾದ್‍ನ ಟೆಕ್ಕಿ ಉಂಡಾಡಿ ಶಾರದಾ ಕೊರೊನಾದಿಂದ ಕೆಲಸ ಕಳೆದುಕೊಂಡು ಶ್ರೀನಗರ ಕಾಲೋನಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದರು. ಈ ಬಗ್ಗೆ ತಿಳಿದು ಸೋನು ಸೂದ್ ಮಹಿಳಾ ಟೆಕ್ಕಿಗೆ ಉದ್ಯೋಗವನ್ನು ಕೊಡಿಸಿದ್ದಾರೆ. ಇದನ್ನೂ ಓದಿ: ನೇಗಿಲು ಹಿಡಿದು ಉಳುಮೆ ಮಾಡಿದ ಯುವತಿಯರು- ಕೊಟ್ಟ ಮಾತಿನಂತೆ ಟ್ರ್ಯಾಕ್ಟರ್ ನೀಡಿದ ಸೋನು ಸೂದ್

    ಟೆಕ್ಕಿ ಶಾರದಾ ಬಗ್ಗೆ ರಿಚ್ಚಿ ಶೆಲ್ಸನ್ ಎಂಬವರು ಸೋನ್ ಸೂದ್ ಗಮನಕ್ಕೆ ತಂದಿದ್ದರು. “ಇವರು ಟೆಕ್ಕಿ ಶಾರದಾ, ಇತ್ತೀಚೆಗೆ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದಾರೆ. ನಂತರ ಅವರು ತರಕಾರಿ ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದ ನೀವು ಇವರಿಗೆ ಮತ್ತು ಕುಟುಂಬದವರಿಗೆ ಸಹಾಯ ಮಾಡಬೇಕು” ಎಂದು ಟ್ವೀಟ್ ಮಾಡುವ ಮೂಲಕ ಮನವಿ ಮಾಡಿಕೊಂಡಿದ್ದರು.

    ಇವರ ಮನವಿಗೆ ಸ್ಪಂದಿಸಿದ ನಟ, “ನನ್ನ ಅಧಿಕಾರಿಗಳು ಅವರನ್ನು ಭೇಟಿಯಾಗಿದ್ದಾರೆ. ಟೆಕ್ಕಿಯ ಸಂದರ್ಶನ ಮುಗಿದಿದ್ದು, ಈಗಾಗಲೇ ಉದ್ಯೋಗದ ಪತ್ರವನ್ನು ಕಳುಹಿಸಲಾಗಿದೆ. ಜೈ ಹಿಂದ್” ಎಂದು ಟ್ವಿಟ್ಟರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    “ಸೋನು ಸೂದ್ ಅವರು ತುಂಬಾ ದಿನಗಳಿಂದ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಅವರ ಬಗ್ಗೆ ನನಗೆ ತಿಳಿದಿತ್ತು. ಆದರೆ ನನಗೆ ಅವರು ಫೋನ್ ಮಾಡಿದಾಗ ಆಶ್ಚರ್ಯ ಮತ್ತು ಸಂತೋಷವಾಯಿತು. ನಾನು ತರಕಾರಿ ಮಾರಾಟ ಮಾಡುತ್ತಿರುವುದಕ್ಕೆ ನಾಚಿಕೆ ಇಲ್ಲ. ಈ ಸಂದರ್ಭದಲ್ಲಿ ನಾವು ಬದುಕುಳಿಯುವುದು ಮುಖ್ಯವಾಗಿದೆ. ಹೀಗಾಗಿ ನಾವು ಯಾವುದೇ ಕೆಲಸ ಮಾಡಿದರೂ ನಾಚಿಕೆಪಡಬೇಕಿಲ್ಲ” ಎಂದು ಶಾರದಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

    ಶಾರದಾ ಹೈದರಾಬಾದ್‍ನಲ್ಲಿ ಎಂಎನ್‍ಸಿ ಕಂಪನಿಗೆ ಸೇರಿದ್ದರು. ಆದರೆ ಕೆಲಸಕ್ಕೆ ಸೇರಿದ ಮೂರು ತಿಂಗಳ ನಂತರ ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಕಂಪನಿಯ ಶಾರದಾರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಕೆಲಸ ಕಳೆದುಕೊಂಡ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ತನ್ನ ಕುಟುಂಬವನ್ನು ಪೋಷಿಸಲು ಪ್ರಾರಂಭಿಸಿದ್ದರು.

    ಶಾರದಾ ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು, ತರಕಾರಿಗಳನ್ನು ಪಡೆಯಲು ಸಗಟು ಮಾರುಕಟ್ಟೆಗೆ ಹೋಗುತ್ತಾರೆ. ಅಲ್ಲಿಂದ ತರಕಾರಿ ಖರೀದಿಸಿಕೊಂಡು ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

    ಸೋನು ಸೂದ್ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರೆಗೂ 47,000ಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. ಅಲ್ಲದೇ 6,700ಕ್ಕೂ ಹೆಚ್ಚು ನೆಟ್ಟಿಗರು ನಟನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೆಟ್ಟಿಗರೊಬ್ಬರು “ಈ ಕೊರೊನಾ ಸವಾಲಿನ ಕಾಲದಲ್ಲಿ ನೀವು ನಿಜವಾಗಿಯೂ ಸ್ಪೂರ್ತಿದಾಯಕರಾಗಿದ್ದೀರಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಠಾಣೆಯಲ್ಲೇ ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ

    ಠಾಣೆಯಲ್ಲೇ ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ

    – ಬೀದಿಯಲ್ಲಿ ಬಿದ್ದವಳನ್ನು ಕರೆತಂದಿದ್ದಕ್ಕೆ ಗರಂ
    – ನಶೆಯಲ್ಲಿ ರೊಚ್ಚಿಗೆದ್ದು ಹಲ್ಲೆ

    ಹೈದರಾಬಾದ್: ವೀಕ್ ಎಂಡ್ ಎಂದು ಮಾದಕವಸ್ತು ಸೇವಿಸಿ ನಶೆಯಲ್ಲಿ ತೂರಾಡಿ ಬೀದಿಯಲ್ಲಿ ಬಿದ್ದಿದ್ದ ಮಹಿಳಾ ಟೆಕ್ಕಿಯನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ರೊಚ್ಚಿಗೆದ್ದ ಟೆಕ್ಕಿ ಪೊಲೀಸ್ ಠಾಣೆಯಲ್ಲಿಯೇ ಮಹಿಳಾ ಪೇದೆಗಳನ್ನು ಕಚ್ಚಿ, ಹೊಡೆದು ಹಲ್ಲೆ ನಡೆಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಶನಿವಾರ ರಾತ್ರಿ ಈ ಘಟನೆ ನಡೆದಿದೆ. ನಾಗಾಲ್ಯಾಂಡ್ ಮೂಲದ ಮಹಿಳಾ ಟೆಕ್ಕಿ ಹೈದರಾಬಾದ್‍ನ ಮಾಧಾಪುರ್‌ನಲ್ಲಿರುವ ಸಾಫ್ಟ್‌ವೇರ್ ಕಂಪನಿಯ ಸಿಬ್ಬಂದಿ. ಆಕೆ ಶನಿವಾರ ಮಾದಕವಸ್ತು ಸೇವಿಸಿ ಮೈಮೇಲೆ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಜಹೀರಾನಗರದ ರಸ್ತೆಯಲ್ಲಿ ಬಿದ್ದಿದ್ದಳು. ಆಕೆಯನ್ನು ಕಂಡ ಪೊಲೀಸರು ಠಾಣೆಗೆ ಕರೆತಂದಿದ್ದರು. ಟೆಕ್ಕಿಗೆ ಪ್ರಜ್ಞೆ ಬಂದ ಬಳಿಕ ಆಕೆಯನ್ನು ಸಂಬಾಳಿಸಲು ಪೊಲೀಸರು ಹರಸಾಹಸವನ್ನೇ ಪಡಬೇಕಾಯಿತು. ಇದನ್ನೂ ಓದಿ:ಇಷ್ಟಪಟ್ಟ ಹುಡುಗಿಯ ಮನೆ ಮುಂದೆ ಧರಣಿ ಕುಳಿತ ಟೆಕ್ಕಿ – ಇದು ಸಿಡ್ನಿ ಟು ಹುಬ್ಬಳ್ಳಿ ಲವ್ ಸ್ಟೋರಿ

    ಮೊದಲೇ ನಶೆಯಲ್ಲಿದ್ದ ಟೆಕ್ಕಿ ಪೊಲೀಸರ ಮೇಲೆ ರೊಚ್ಚಿಗೆದ್ದು ಹಲ್ಲೆ ಮಾಡಲು ಆರಂಭಿಸಿದಳು. ಆಕೆಯನ್ನು ಹಿಡಿಯಲು ಹೋದ ಮಹಿಳಾ ಪೇದೆಗಳು ಹಾಗೂ ಮಹಿಳಾ ಎಸ್‍ಪಿ ಮೇಲೆಯೂ ಹಲ್ಲೆ ನಡೆಸಿದಳು. ಅವರನ್ನು ಹೊಡೆದು, ಕಚ್ಚಿ ಹಲ್ಲೆ ಮಾಡಿದ್ದಲ್ಲದೇ ಕೆಲ ಪೇದೆಯನ್ನು ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಳು. ಈ ವೇಳೆ ತಡೆಯಲು ಬಂದ ಪುರುಷ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದಳು. ಇದನ್ನೂ ಓದಿ:ಪ್ರೀತಿ ಮೇಲೆ ಅನುಮಾನ – ಪ್ರೇಯಸಿ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

    ಅಷ್ಟೇ ಅಲ್ಲದೆ ಠಾಣೆಯಿಂದ ಓಡಿಹೋಗಲು ಯತ್ನಿಸಿದಾಗ ಪೊಲೀಸರು ಆಕೆಯನ್ನು ಅಡ್ಡಗಟ್ಟಿ, ಆಕೆಗೆ ಕೋಳ ಹಾಕಿ ಮೂಲೆಗೆ ಕೂರಿಸಿದರು. ಈ ದೃಶ್ಯಾವಳಿಗಳನ್ನು ಕೆಲ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಆನ್‍ಲೈನಿನಲ್ಲಿ ದುಬಾರಿ ಮದ್ಯ ಆರ್ಡರ್ – 51 ಸಾವಿರ ಕಳೆದುಕೊಂಡ ಮಹಿಳಾ ಟೆಕ್ಕಿ!

    ಈ ಸಂಬಂಧ ಮಾತನಾಡಿದ ಪೊಲೀಸರು, ಟೆಕ್ಕಿ ಮದ್ಯ ಅಥವಾ ಡ್ರಗ್ಸ್ ಸೇವಿಸಿದ್ದಳು. ಸದ್ಯ ಆಕೆಯ ರಕ್ತದ ಸ್ಯಾಂಪಲ್‍ನನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಆಕೆ ನಮ್ಮ ವಶದಲ್ಲಿಯೇ ಇದ್ದಾಳೆ ಎಂದು ತಿಳಿಸಿದ್ದಾರೆ.

  • ಆಟೋ ಚಾಲಕನಿಂದ ಮಹಿಳಾ ಟೆಕ್ಕಿಗೆ ಕಿರುಕುಳ

    ಆಟೋ ಚಾಲಕನಿಂದ ಮಹಿಳಾ ಟೆಕ್ಕಿಗೆ ಕಿರುಕುಳ

    ಹೈದರಾಬಾದ್: ಆಟೋ ಚಾಲಕನೋರ್ವ ಮಹಿಳಾ ಟೆಕ್ಕಿಗೆ ಕಿರುಕುಳ ನೀಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಬೆಳಗಿನ ಜಾವ ಆಟೋ ಹತ್ತಿದ್ದ ಮಹಿಳೆಯನ್ನು ಆಕೆಯ ಹಾಸ್ಟೆಲ್ ಬದಲಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಿರುಕುಳ ನೀಡಿದ್ದಾನೆ.

    ಶಿವರಾಜ್ (30) ಕಿರುಕುಳ ನೀಡಿದ್ದ ಆಟೋ ಚಾಲಕ. ಟೆಕ್ಕಿ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ನಿವಾಸಿಯಾಗಿದ್ದು, ಮಂಗಳವಾರ ಬೆಳಗ್ಗೆ ಹೈದರಾಬಾದಿಗೆ ಬಂದಿದ್ದಾರೆ. ಬೆಳಗಿನ ಜಾವ ಸುಮಾರು 4.15ಕ್ಕೆ ಮೆದಪಲ್ಲಿ ಪೊಲೀಸ್ ಲಿಮಿಟ್‍ನಲ್ಲಿರುವ ತಮ್ಮ ಹಾಸ್ಟೆಲ್‍ಗೆ ಹೋಗಲು ಆಟೋ ಹತ್ತಿದ್ದಾರೆ. ಚಾಲಕ ಹಾಸ್ಟೆಲ್ ಬದಲಾಗಿ ಮಹಿಳೆಯನ್ನು ಪೀರ್ಜಾಡಿಗುಡಾದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಚಾಲಕ ಮಾರ್ಗ ಬದಲಿಸಿ ಕೂಡಲೇ ಮಹಿಳೆ ಆತನನ್ನು ಪ್ರಶ್ನೆ ಮಾಡಿದ್ದಾರೆ. ಪ್ರಶ್ನಿಸುತ್ತಿದ್ದಂತೆ ಟೆಕ್ಕಿಯ ಬ್ಯಾಗ್ ಕಸಿದುಕೊಂಡಿದ್ದಾನೆ.

                                                                                                               ಸಾಂದರ್ಭಿಕ ಚಿತ್ರ

    ಮನೆ ಬಳಿ ತೆರಳುತ್ತಿದ್ದಂತೆ ಶಿವರಾಜ್ ಮಹಿಳೆಯನ್ನು ಒಳ ಬರುವಂತೆ ಬಲವಂತ ಮಾಡಿದ್ದಾನೆ. ಟೆಕ್ಕಿ ಭಯಗೊಂಡು ಕಿರುಚಾಡಿದ್ದರಿಂದ ಪೀರ್ಜಾಡಿಗುಡಾ ಮುಖ್ಯರಸ್ತೆಯಲ್ಲಿ ಮಹಿಳೆಯನ್ನು ಬಿಟ್ಟು ಹೋಗಿದ್ದಾನೆ. ಈ ವೇಳೆ ಬಂದ ಬಸ್ ಹತ್ತಿ ಮಹಿಳೆ ಹಾಸ್ಟೆಲ್ ಬಳಿ ಬಂದಿದ್ದಾರೆ. ಬಸ್ ಫಾಲೋ ಮಾಡಿದ್ದ ಚಾಲಕ, ಮಹಿಳೆಯನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ.

    ಹಾಸ್ಟೆಲ್ ಸೇರಿದ ಟೆಕ್ಕಿ ನಡೆದ ವಿಷಯವನ್ನು ತನ್ನ ಗೆಳತಿ ಮತ್ತು ಅಲ್ಲಿಯ ಮಾಲೀಕ ತೇಜಸ್ವರ್ ರೆಡ್ಡಿಗೆ ತಿಳಿಸಿದ್ದಾರೆ. ನಂತರ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಅನ್ವಯ ಐಪಿಸಿ ಸೆಕ್ಷನ್ 354ಸಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಿಳಾ ಟೆಕ್ಕಿಗೆ ಕ್ಯಾಬ್ ಚಾಲಕನಿಂದ ಕಿರುಕುಳ- 7 ಕಿ.ಮೀ ದೂರ ಹಿಂಬಾಲಿಸಿ ಕಾಟಕೊಟ್ಟ!

    ಮಹಿಳಾ ಟೆಕ್ಕಿಗೆ ಕ್ಯಾಬ್ ಚಾಲಕನಿಂದ ಕಿರುಕುಳ- 7 ಕಿ.ಮೀ ದೂರ ಹಿಂಬಾಲಿಸಿ ಕಾಟಕೊಟ್ಟ!

    – ಸಮ್ ಒನ್ ಪ್ಲೀಸ್ ಹೆಲ್ಪ್ ಮಿ ಹೆಲ್ಪ್ ಮಿ ಗೋಗರೆದ ಯುವತಿ
    – ಬೆಂಗಳೂರು ಪೊಲೀಸರಿಗೆ ಫೇಸ್‍ಬುಕ್‍ನಲ್ಲಿ ದೂರು

    ಬೆಂಗಳೂರು: ಕ್ಯಾಬ್ ಚಾಲಕನೊಬ್ಬ ಕಿರುಕುಳ ನೀಡಿ 7 ಕಿ.ಮೀ ದೂರ ಹಿಂಬಾಲಿಸಿ ಮಹಿಳಾ ಟೆಕ್ಕಿಗೆ ಕಿರುಕುಳ ಕೊಟ್ಟ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

    ಮಹಿಳಾ ಟೆಕ್ಕಿ ಕಳೆದ 4ರಂದು ಎಲೆಕ್ಟ್ರಾನಿಕ್ ಸಿಟಿಯ ತನ್ನ ಕಚೇರಿಗೆ ತೆರಳುತ್ತಿದರು. ಈ ವೇಳೆ ಮಹಿಳಾ ಟೆಕ್ಕಿ ಕಾರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಕ್ಯಾಬ್ ಡ್ರೈವರ್ ದುಂಡಾವರ್ತನೆ ತೋರಿದ್ದಾನೆ. ಸಿಲ್ಕ್ ಬೊರ್ಡ್ ಜಂಕ್ಷನ್ ನಲ್ಲಿ ಯುವತಿಯ ಕಾರು ಕ್ಯಾಬ್ ಗೆ ತಾಗಿದೆ. ಘಟನೆಯಲ್ಲಿ ಕ್ಯಾಬ್ ಡ್ರೈವರ್ ಹಾಗೂ ಯುವತಿಯ ಕಾರಿಗೆ ಯಾವುದೇ ಹಾನಿಯಾಗಿಲ್ಲ.

    ಕಾರು ತಾಗಿದ ನಂತರ ಐ ಯಾಮ್ ಸಾರಿ ಸರ್ ಅಂತ ಮಹಿಳಾ ಟೆಕ್ಕಿ ಕ್ಷಮೆ ಕೋರಿದರು. ಯುವತಿ ಕ್ಷಮೆ ಕೇಳಿದರೂ ಸುಮ್ಮನಾಗದ ಕ್ಯಾಬ್ ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕ್ಯಾಬ್ ಡ್ರೈವರ್ ವರ್ತನೆಯಿಂದ ಗಾಬರಿಗೊಂಡ ಯುವತಿ ಕಾರಿನಿಂದ ಕೆಳಗಡೆ ಇಳಿದಿಲ್ಲ. ಯುವತಿ ಸಿಗ್ನಲ್ ಬಿಟ್ಟ ನಂತರ ತನ್ನ ಕಾರನ್ನು ಸಿಲ್ಕ್ ಬೊರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ನತ್ತ ಚಲಾಯಿಸಿದ್ದಾರೆ.

    ಕ್ಯಾಬ್ ಡ್ರೈವರ್ ಹಿಂಬದಿಯಿಂದ ಯುವತಿಯ ಕಾರನ್ನು ಹಿಂಬಾಲಿಸಿಕೊಂಡು ಬಂದು ರ‍್ಯಾಶ್ ಡ್ರೈವ್ ಮಾಡಿ ಸಿಲ್ಕ್ ಬೋರ್ಡ್ ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‍ವರೆಗೂ ಕಾಟ ಕೊಟ್ಟಿದ್ದಾನೆ. ಚಾಲಕ ರಸ್ತೆಯಲ್ಲಿ ಮೂರು ಬಾರಿ ಯುವತಿಯ ಕಾರನ್ನು ಅಡ್ಡಗಟ್ಟಿ ವಿಕೃತಿ ಮೆರೆದಿದ್ದಾನೆ.

    ಕ್ಯಾಬ್ ಡ್ರೈವರ್ ನ ಕಾಟಕ್ಕೆ ಯುವತಿ ಕಾರನ್ನು ನಿಲ್ಲಿಸದೇ, ಡ್ರೈವ್ ಮಾಡುತ್ತಲೇ ವಾಹನ ಸವಾರರ ಸಹಾಯ ಚಾಚಿದ್ದಾರೆ. ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ವರೆಗೂ ಯುವತಿ ಕಣ್ಣಿರಿಡುತ್ತಾ ಸಮ್ ಒನ್ ಪ್ಲೀಸ್ ಹೆಲ್ಪ್ ಮಿ ಹೆಲ್ಪ್ ಮಿ ಗೋಗರೆದಿದ್ದಾರೆ.

    ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಸಮಿಪಿಸುತ್ತಿದ್ದಂತೆ ಕಿರಾತಕ ಕ್ಯಾಬ್ ಡ್ರೈವರ್ ಪರಾರಿಯಾಗಿದ್ದಾನೆ. ನೊಂದ ಯುವತಿ ಈ ಬಗ್ಗೆ ಬೆಂಗಳೂರು ಸಿಟಿ ಪೊಲೀಸ್ ಪೇಜ್ ನಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಕೆಎ-01-ಎಜಿ 6553 ಸಂಖ್ಯೆಯ ಕಂದು ಬಣ್ಣದ ಕ್ಯಾಬ್ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಆರೋಪಿ ಕ್ಯಾಬ್ ಡ್ರೈವರ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಟೆಕ್ಕಿ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv