Tag: Women s Unit

  • ಯಾವ ಒತ್ತಡಕ್ಕೆ ಮಣಿಯುವ ಜಾಯಮಾನದ ಹೆಣ್ಣು ಮಗಳಲ್ಲ – ಗುಡುಗಿದ ಲಕ್ಷ್ಮಿ ಹೆಬ್ಬಾಳ್ಕರ್

    ಯಾವ ಒತ್ತಡಕ್ಕೆ ಮಣಿಯುವ ಜಾಯಮಾನದ ಹೆಣ್ಣು ಮಗಳಲ್ಲ – ಗುಡುಗಿದ ಲಕ್ಷ್ಮಿ ಹೆಬ್ಬಾಳ್ಕರ್

    ಬಾಗಲಕೋಟೆ: ನಾನು ಶಾಸಕಿಯಾದ ತಕ್ಷಣ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನವನ್ನ ಬೇರೆಯವರಿಗೆ ಕೊಡಿ ಎಂದು ಪತ್ರ ಬರೆದಿದ್ದೆ ಎಂದು ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

    ಜಿಲ್ಲೆಯ ಮುಧೋಳ ನಗರದಲ್ಲಿ ಮಾತನಾಡಿದ ಅವರು, ಲಕ್ಷ್ಮೀ ಹೆಬಾಳ್ಕರ್ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡುತ್ತಾಳೆ. ಯಾವುದೇ ಪ್ರಭಾವ ಅಥವಾ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಮಣಿಯುವಂತಹ ಹೆಣ್ಣು ಮಗಳಲ್ಲ. ನಾನು ಪಕ್ಷದ ಮಹಿಳಾ ಘಟಕದ ಜವಾಬ್ದಾರಿ ವಹಿಸಿದ ವೇಳೆ ರಾಜ್ಯದಲ್ಲಿ ಹೈಕಮಾಂಡ್‍ಗೆ 3 ಮಹಿಳೆಯರ ಹೆಸರು ಕಳಿಸಲು ಕಷ್ಟದ ಪರಿಸ್ಥಿತಿ ಇತ್ತು. ಆದರೆ ನನ್ನ ಮೊದಲ ಭಾಷಣದಲ್ಲಿ ಪಕ್ಷದ ಸ್ಥಾನದಿಂದ ಕೆಳಗಿಳಿಯುವ ವೇಳೆಗೆ ನನ್ನಂತ 20 ಮಂದಿ ಮಹಿಳೆಯನ್ನು ತಯಾರು ಮಾಡುವುದಾಗಿ ಹೇಳಿದ್ದೆ. ಅದರಂತೆ ತಯಾರು ಮಾಡಿ ಅವರನ್ನು ಹೈಕಮಾಂಡ್ ಬಳಿ ಸಂದರ್ಶನಕ್ಕೂ ಕಳುಹಿಸಿಕೊಟ್ಟಿದ್ದೆ. ಆದರೆ ಮಾಧ್ಯಮಗಳು ಲಕ್ಷ್ಮೀ ಹೆಬಾಳ್ಕರ್ ವಿರುದ್ಧ ದೂರು ನೀಡಲು ತೆರಳಿದ್ದಾರೆ ಎಂದು ವರದಿ ಮಾಡಿದ್ದವು. ಇದೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದರು.

    ಪಕ್ಷದಲ್ಲಿ ನಡೆಯುವ ಯಾವುದೇ ಬೆಳಣಿಗೆಗೆ ನನ್ನ ಹಾಗೂ ಜಾರಕಿಹೊಳಿ ಅವರ ಹೆಸರನ್ನು ಪ್ರಸ್ತಾಪ ಮಾಡಬೇಡಿ. ಏಕೆಂದರೆ ಇಬ್ಬರ ನಡುವೆ ಇದ್ದ ಅಸಮಾಧಾನ ಸದ್ಯ ಮುಗಿದ ಅಧ್ಯಾಯ. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯಾಗಿ 3 ತಿಂಗಳು ಕಳೆದರೆ 4 ವರ್ಷ ಪೂರ್ಣಗೊಳ್ಳುತ್ತದೆ. ಅದ್ದರಿಂದ ನಾನು ಕಳುಹಿಸಿದ 20 ಮಹಿಳೆಯಲ್ಲಿ 5 ಮಂದಿ ಆಯ್ಕೆಯ ರೇಸ್‍ನಲ್ಲಿದ್ದಾರೆ. ಇದರಲ್ಲಿ ಇರುವ 5 ಜನರಲ್ಲಿ ಒಬ್ಬರು ಆಯ್ಕೆ ಆಗುತ್ತಾರೆ ಅಥವಾ ಬೇರೆಯವರು ಕೂಡ ಆಯ್ಕೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು.

    ಜಮಖಂಡಿ ಉಪಚುನಾವಣಾ ಪ್ರಚಾರ ಹಾಗೂ ಕಾರ್ಯತಂತ್ರ ಕುರಿತು ಇಂದು ಸಭೆ ನಡೆಯಿತು. ಚುನಾವಣೆಯ ದಿನ ಯಾರು ಯಾವ ಕರ್ತವ್ಯ ಮಾಡಬೇಕು ಎಂದು ಚರ್ಚೆ ನಡೆಸಲಾಯಿತು. ಪಕ್ಷದ ಪ್ರಮುಖ ಸಭೆ ಅದ್ದರಿಂದ ಇಲ್ಲಿ ಭಾಗವಹಿಸಲಾಯಿತು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೇಡಿ ರೌಡಿಶೀಟರ್ ಶ್ರೀರಾಮಸೇನೆಯ ಮಹಿಳಾ ಘಟಕದ ಅಧ್ಯಕ್ಷೆ!

    ಲೇಡಿ ರೌಡಿಶೀಟರ್ ಶ್ರೀರಾಮಸೇನೆಯ ಮಹಿಳಾ ಘಟಕದ ಅಧ್ಯಕ್ಷೆ!

    ಬೆಂಗಳೂರು: ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳಾ ರೌಡಿಶೀಟರೊಬ್ಬರನ್ನು ಶ್ರೀರಾಮಸೇನೆ ಬೆಂಗಳೂರು ಮಹಿಳಾ ಘಟಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದ್ದು, ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

    ಶಿಸ್ತು ಸಂಸ್ಕೃತಿ ಎನ್ನುವ ಶ್ರೀರಾಮಸೇನೆ, ಇದೀಗ ಬೆಂಗಳೂರು ಮಹಿಳಾ ಅಧ್ಯಕ್ಷೆಯಾಗಿ ರೌಡಿ ಶೀಟರ್ ಹೊಂದಿರುವ ಯಶಸ್ವಿನಿ ಗೌಡ ಅವರನ್ನು ನೇಮಕ ಮಾಡಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿಯೇ ಹಾರ ಹಾಕಿಸಿಕೊಳ್ಳುವ ಮೂಲಕ ಯಶಸ್ವಿನಿ ಗೌಡಾಗೆ ಅಧ್ಯಕ್ಷ ಪಟ್ಟ ನೀಡಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುತಾಲಿಕ್ ಹಾಗೂ ಸಂಘಟನೆ ಮುಖಂಡರ ಸಮ್ಮುಖದಲ್ಲಿ ಯಶಸ್ವಿನಿ ಗೌಡ ಅವರಿಗೆ ಅಧಿಕಾರ ನೀಡಲಾಗಿದೆ.

    ಈ ಕುರಿತು ಪಬ್ಲಿಕ್ ಟಿವಿ, ಮುತಾಲಿಕ್ ಅವರನ್ನು ಸಂಪರ್ಕಿಸಿದ ಸಂದರ್ಭದಲ್ಲಿ ಯಶಸ್ವಿನಿ ಗೌಡ ಅವರ ವಿರುದ್ಧ ರೌಡಿಶೀಟರ್ ಇರುವ ಕುರಿತು ತಮಗೇ ಮಾಹಿತಿ ಇಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ.

    ಅಂದಹಾಗೇ ಸದ್ಯ ಶ್ರೀರಾಮ ಸೇನೆಯ ಬೆಂಗಳೂರು ನಗರ ಘಟಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಯಶಸ್ವಿನಿ ಗೌಡ ಸ್ವತಃ ಪತಿಯನ್ನೇ ಹತ್ಯೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅಲ್ಲದೇ ನಗರದಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದರು ಎಂಬ ಮಾಹಿತಿ ಕೂಡ ಲಭಿಸಿದೆ. ನಗರದ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಗೌಡ ವಿರುದ್ಧ ರೌಡಿಶೀಟರ್ ದಾಖಲಾಗಿದೆ.

    ಶ್ರೀರಾಮಸೇನೆ ಬೆಂಗಳೂರು ಘಟಕದ ಮಹಿಳಾ ಅಧಕ್ಷ ಸ್ಥಾನ ರೌಡಿ ಶೀಟರ್ ಗೆ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೌಡಿಶೀಟರ್ ಹೊಂದಿರುವ ಮಹಿಳೆಯೊಬ್ಬರು ಯಾವ ರೀತಿಯ ಸಮಾಜಸೇವೆ ಮಾಡುತ್ತಾರೆ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv