Tag: women marriage age

  • 31 ಸದಸ್ಯರಲ್ಲಿ ಒಬ್ಬರೇ ಮಹಿಳೆ: ವಿವಾಹ ಮಸೂದೆ ಸಮಿತಿ ಬಗ್ಗೆ ಸಂಸದೆ ಪ್ರಿಯಾಂಕ ಕಳವಳ

    31 ಸದಸ್ಯರಲ್ಲಿ ಒಬ್ಬರೇ ಮಹಿಳೆ: ವಿವಾಹ ಮಸೂದೆ ಸಮಿತಿ ಬಗ್ಗೆ ಸಂಸದೆ ಪ್ರಿಯಾಂಕ ಕಳವಳ

    ನವದೆಹಲಿ: ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಮಸೂದೆಯನ್ನು ಪರಿಶೀಲಿಸುತ್ತಿರುವ ಸಮಿತಿ ಬಗ್ಗೆ ಮಹಾರಾಷ್ಟ್ರ ಸಂಸದೆ ಪ್ರಿಯಾಂಕಾ ಚತುರ್ವೇದಿ ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಸಂಸದೆ ಪತ್ರ ಬರೆದಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ಮಹತ್ವದ ಮಸೂದೆಯನ್ನು ಚರ್ಚಿಸುತ್ತಿರುವ 31 ಸಂಸದರ ಸಮಿತಿಯಲ್ಲಿ ಒಬ್ಬ ಮಹಿಳಾ ಸದಸ್ಯೆ ಮಾತ್ರ ಇದ್ದಾರೆ. ನಿಜಕ್ಕೂ ಇದು ವಿಷಾದನೀಯ ಸಂಗತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಸುಳ್ಳಿನ ದೆವ್ವ ಮೆಟ್ಟಿಕೊಂಡಿದೆ: ಸಿ.ಟಿ ರವಿ ವ್ಯಂಗ್ಯ

    ಪತ್ರದಲ್ಲೇನಿದೆ?
    ಸಂಸತ್ತಿನ ಸದಸ್ಯೆಯಾಗಿ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ದೇಶದ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರುವಂತಹ ನಿರ್ಣಾಯಕ ಮಸೂದೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಯಿತು. ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಕರು ಮತ್ತು ಕ್ರೀಡಾ ಇಲಾಖೆಯವರನ್ನು ಒಳಗೊಂಡ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ಆದರೆ ಈ ಸಮಿತಿಯಲ್ಲಿ ಒಬ್ಬ ಮಹಿಳಾ ಸದಸ್ಯೆ ಮಾತ್ರ ಇದ್ದಾರೆ.

    ಮಹಿಳೆಯರು ಮತ್ತು ಭಾರತೀಯ ಸಮಾಜಕ್ಕೆ ಸಂಬಂಧಿಸಿದ ಮಸೂದೆ ಇದಾಗಿದೆ. ಆದರೆ ಸಮಿತಿಯಲ್ಲಿ ಒಬ್ಬರೇ ಮಹಿಳಾ ಸದಸ್ಯೆ ಇರುವುದು ನಿರಾಶಾದಾಯಕವಾಗಿದೆ. ಈ ಸಮಿತಿಯಲ್ಲಿ ಹೆಚ್ಚಿನ ಮಹಿಳಾ ಸದಸ್ಯರು ಇರಬೇಕು. ಆಗ ಮಾತ್ರ ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಸೂದೆ ಸುತ್ತ ಗಂಭೀರ ಚರ್ಚೆಯಾಗುತ್ತದೆ. ಸಮಿತಿಯಲ್ಲಿ ಮಹಿಳೆಯರ ಧ್ವನಿ ಪ್ರತಿಧ್ವನಿಸಿ ಅರ್ಥಪೂರ್ಣವಾಗುತ್ತದೆ. ಇದನ್ನು ತಾವು ಗಣನೆಗೆ ತೆಗೆದುಕೊಳ್ಳಬೇಕು ಎಂದು ಪತ್ರದಲ್ಲಿ ಸಂಸದೆ ಚತುರ್ವೇದಿ ತಿಳಿಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್ – ಪ್ರಜಾಪ್ರಭುತ್ವದ ಕೊಲೆ ಎಂದ ಜೆ.ಪಿ.ನಡ್ಡಾ

    ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಬರೆದಿರುವ ಬಗ್ಗೆ ಎಎನ್‌ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ನಾನೊಬ್ಬಳೇ ಏಕೈಕ ಮಹಿಳಾ ಸದಸ್ಯೆ ಎಂದು ತಿಳಿದು ಆಶ್ಚರ್ಯವಾಯಿತು. ಅಲ್ಲಿ ಲಿಂಗ ಅಸಮತೋಲನವಿದೆ. ಮಸೂದೆಗೆ ಅಭಿಪ್ರಾಯಗಳು ಮುಖ್ಯ. ಈ ಹಿನ್ನೆಲೆಯಲ್ಲಿ ಮಹಿಳಾ ಮುಖಂಡರು, ಮಹಿಳಾ ಸಂಸದರು ತಮ್ಮ ಸಲಹೆ, ಅಭಿಪ್ರಾಯಗಳನ್ನು ಸಮಿತಿಯ ಅಧ್ಯಕ್ಷರಿಗೆ ನೀಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

  • ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ

    ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ

    ಲಕ್ನೋ: ಮಹಿಳೆಯರ ಮದುವೆ ವಯಸ್ಸನ್ನು ಏರಿಸಿರುವುದು ಮುಂದೆ ಅವರು ಹೆಚ್ಚಿನ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪ್ರಯಾಗ್‌ರಾಜ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ನಿರ್ಧಾರವನ್ನು ವಿರೋಧಿಸುತ್ತಿರುವವರು ಮತ್ತು ಹೆಣ್ಣು ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸವನ್ನು ತಡೆಯುವ ಜನರು ಯಾರೆಂದು ಎಲ್ಲರಿಗೂ ತಿಳಿದಿದೆ. ಆದರೆ ಮಹಿಳೆಯರ ಕಲ್ಯಾಣಕ್ಕಾಗಿ ಅವರ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಲಾಗಿದೆ. ಸರ್ಕಾರದ ಈ ನಿಲುವಿಗೆ ಮಹಿಳೆಯರು ಸಂತೋಷಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಉತ್ತರ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಸುಮಾರು 25 ರಿಂದ 30 ಲಕ್ಷ ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ವಿತರಣೆ ಮಾಡಲಾಗಿದೆ. ಈಗ ಮಹಿಳೆಯರ ಮದುವೆ ವಯಸ್ಸನ್ನು ಹೆಚ್ಚಿಸಿರುವುದು ಅವರು ಹೆಚ್ಚು ಶಿಕ್ಷಣ ಪಡೆಯಲು ಸಾಧ್ಯವಾಗಲಾಗುತ್ತದೆ. ಮನೆಯ ಮಗಳಿಗಾಗಿ ದೇಶ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಕೆಲ ವರ್ಷಗಳ ಹಿಂದೆ ಉತ್ತರ ಪ್ರದೇಶದ ರಸ್ತೆಗಳಲ್ಲಿ ಮಾಫಿಯಾಗಳು ನಡೆಯುತ್ತಿದ್ದವು. ಇದರಿಂದಾಗಿ ಹೆಣ್ಣುಮಕ್ಕಳು, ಸಹೋದರಿಯರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ಇಂತಹ ರಸ್ತೆಗಳಲ್ಲಿ ನಡೆದು ಶಾಲಾ-ಕಾಲೇಜುಗಳಿಗೆ ಹೋಗುವುದು ಕಷ್ಟಕರವಾಗಿತ್ತು. ಮಾಫಿಯಾ ನಡೆಸುತ್ತಿದ್ದ ಗೂಂಡಾಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಈಗ ಸರಿಯಾದ ಜಾಗದಲ್ಲಿ ಇರಿಸಿದ್ದಾರೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

    ಈಗ ಮಹಿಳೆಯರಿಗೆ ರಕ್ಷಣೆ, ಹಕ್ಕುಗಳು, ಅವಕಾಶಗಳಿವೆ. ನಮ್ಮ ತಾಯಂದಿರು, ಸಹೋದರಿಯರ ಆಶೀರ್ವಾದ ಇದ್ದು, ರಾಜ್ಯ ಮತ್ತೆ ಕತ್ತಲೆಯೆಡೆಗೆ ನೂಕಿಸಿಕೊಳ್ಳುವುದಿಲ್ಲ ಎಂಬ ಭರವಸೆ ನನಗಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಮಹಿಳೆಯರ ಮದುವೆ ವಯಸ್ಸನ್ನು ಹೆಚ್ಚಿಸಿರುವುದನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದರು ವಿರೋಧಿಸಿದ್ದರು.

  • 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

    18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

    ನವದೆಹಲಿ: 18ನೇ ವಯಸ್ಸಿಗೆ ಹೆಣ್ಣುಮಕ್ಕಳು ಪ್ರಧಾನಿಯನ್ನು ಆಯ್ಕೆ ಮಾಡುವ ಹಕ್ಕಿದೆ ಎಂದ ಮೇಲೆ, ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಯಾಕಿಲ್ಲ ಎಂದು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಹಿಳೆಯರ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 20ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಬುಧವಾರ ಒಪ್ಪಿಗೆ ಸೂಚಿಸಿದೆ. ಈ ಕುರಿತು ಮಾತನಾಡಿದ ಓವೈಸಿ, ಮದುವೆ ವಯಸ್ಸನ್ನು ಹೆಚ್ಚಿಸಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಲುವು ಪುರುಷ ಪ್ರಧಾನ ವ್ಯವಸ್ಥೆ ಬಗ್ಗೆ ಒಲವು ಹೊಂದಿದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಭಾರತೀಯ ನಾಗರಿಕ ತನಗೆ 18 ವರ್ಷ ತುಂಬಿದ ಮೇಲೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಬಹುದು, ಉದ್ಯಮ ನಡೆಸಬಹುದು, ಪ್ರಧಾನಿ ಹಾಗೂ ಸಂಸದರು, ಶಾಸಕರನ್ನೂ ಆಯ್ಕೆ ಮಾಡಬಹುದು. ಆದ್ದರಿಂದ ಕಾನೂನಿನಲ್ಲಿ ಈಗ ಇರುವ ಪುರುಷರ ಮದುವೆಯ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಬಾಲ್ಯ ವಿವಾಹಗಳು ಕಡಿಮೆಯಾಗಿರುವುದು ಕ್ರಿಮಿನಲ್ ಕಾನೂನಿನಿಂದಲ್ಲ, ಶಿಕ್ಷಣ ಮತ್ತು ಆರ್ಥಿಕ ಪ್ರಗತಿಯಿಂದಾಗಿ. ಹೀಗಿದ್ದೂ ಸುಮಾರು 1.2 ಕೋಟಿ ಮಕ್ಕಳ ಬಾಲ್ಯ ವಿವಾಹಗಳು ನಡೆದಿವೆ. ಈ ಸರ್ಕಾರ ಮಹಿಳೆಯರ ಏಳಿಗೆಗಾಗಿ ಏನನ್ನೂ ಮಾಡಿಲ್ಲ. 2005ರ ಹೊತ್ತಿಗೆ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ.26ರಷ್ಟು ಇದ್ದದ್ದು, 2020ರ ವೇಳೆಗೆ ಶೇ.16ಕ್ಕೆ ಕುಸಿದಿದೆ ಎಂದು ಟೀಕಿಸಿದ್ದಾರೆ.

    ವೈಯಕ್ತಿಕ ಮಾಹಿತಿ ರಕ್ಷಣಾ ಮಸೂದೆಯಲ್ಲಿ, ಮಾಹಿತಿಯನ್ನು ಹಂಚಿಕೊಳ್ಳಬಹುದಾದ ನಾಗರಿಕರಿಗೆ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳುವ ಹಕ್ಕಿಲ್ಲ. ಇದೆಂತಹ ಲಾಜಿಕ್? ಕೇಂದ್ರ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ ಎಂಬುದು ನನ್ನ ಭಾವನೆ. 21 ವರ್ಷ ದಾಟಿದ್ದರೆ ಅಂತಹವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಯಾರನ್ನು ಮದುವೆಯಾಗಬೇಕು, ಯಾವಾಗ ಮಗುವನ್ನು ಪಡೆಯಬೇಕು ಎಂಬುದು ಸಹ ಆಯ್ಕೆಯ ವಿಚಾರವಾಗಿದೆ. ಹೀಗಿದ್ದರೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಕಾಲಿಗೆ ನಮಸ್ಕರಿಸಿದ ಮೋದಿ

    ಅಮೆರಿಕದಲ್ಲಿ 14 ವಯಸ್ಸಿನವರೂ ಮದುವೆಯಾಗಲು ಅವಕಾಶ ಇದೆ. ಬ್ರಿಟನ್, ಕೆನಡಾ ದೇಶಗಳು ಮದುವೆ ಕನಿಷ್ಠ ವಯಸ್ಸನ್ನು 16 ವರ್ಷಕ್ಕೆ ನಿಗದಿಪಡಿಸಿವೆ ಎಂದು ಓವೈಸಿ ಉದಾಹರಣೆ ಸಹಿತ ವಿವರಿಸಿದ್ದಾರೆ.

  • ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ನವದೆಹಲಿ: ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ 74ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಂದರೆ 2020ರ ಆಗಸ್ಟ್‌ 15ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುವಾಗ ಈ ವಿಚಾರವನ್ನು ಪ್ರಸ್ತಾಪಸಿದ್ದರು. ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

    ಹೆಣ್ಣುಮಕ್ಕಳ ಆರೋಗ್ಯದ ವಿಚಾರವಾಗಿ ಸರ್ಕಾರ ಬದ್ಧವಾಗಿದೆ. ಅಪೌಷ್ಟಿಕತೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದು ಸರ್ಕಾರದ ಉದ್ದೇಶ. ಅವರು ಸರಿಯಾದ ವಯಸ್ಸಿನಲ್ಲಿ ವಿವಾಹವಾಗುವುದು ಸೂಕ್ತ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.

    ಸದ್ಯ ಇರುವ ಕಾನೂನಿನ ಪ್ರಕಾರ, ನಿಗದಿಪಡಿಸಲಾಗಿರುವ ವಿವಾಹದ ವಯಸ್ಸು ಗಂಡುಮಕ್ಕಳಿಗೆ 21 ಹಾಗೂ ಹೆಣ್ಣುಮಕ್ಕಳಿಗೆ 18 ವರ್ಷ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಾಲ್ಯವಿವಾಹ ನಿಷೇಧ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ತಂದೆ ಸಾವಿನಿಂದ ಮನನೊಂದು 4 ತಿಂಗಳ ಬಳಿಕ ಮಗಳು ಆತ್ಮಹತ್ಯೆ

    ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ವರ್ಷದ ಜುಲೈನಲ್ಲಿ ವಿ.ಕೆ.ಪೌಲ್‌, ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಸದಸ್ಯರನ್ನೊಳಗೊಂಡ ಟಾಸ್ಕ್‌ ಫೋರ್ಸ್‌ ಅನ್ನು ಕೇಂದ್ರ ಸರ್ಕಾರ ರಚಿಸಿತ್ತು.

    ಮೊದಲ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ಟಾಸ್ಕ್‌ ಫೋರ್ಸ್‌ ಪ್ರತಿಪಾದಿಸಿದ್ದ ಪ್ರಸ್ತಾವನೆಯ ಶಿಫಾರಸುಗಳನ್ನು ಡಿಸೆಂಬರ್‌ನಲ್ಲಿ ಸಲ್ಲಿಸಲಾಯಿತು.