Tag: wistron

  • ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ತೈವಾನ್‌ ಕಂಪನಿ ಖರೀದಿ – ಶೀಘ್ರವೇ ಟಾಟಾದಿಂದ ಐಫೋನ್‌ ಉತ್ಪಾದನೆ

    ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಆಪಲ್ (Apple) ಕಂಪನಿಯ ಐಫೋನ್ (iPhone) ಉತ್ಪಾದನೆ ಭಾರತದಲ್ಲಿ (India) ಹೊಸ ಬದಲಾವಣೆಗಳನ್ನು ತಂದಿದೆ. ಈಗಾಗಲೇ ಐಫೋನ್ 14, ಐಫೋನ್ 13 ಹಾಗೂ ಇತರ ಹೊಸ ಫೋನ್‌ಗಳನ್ನು ಭಾರತದಲ್ಲಿ ತಯಾರಿಸಿದೆ. ಭಾರತದಲ್ಲಿ ಐಫೋನ್ ತಯಾರಿಸುವ ಪ್ರಮುಖ ಕಂಪನಿಗಳಲ್ಲಿ ಫಾಕ್ಸ್ಕಾನ್ (Foxconn) ಹಾಗೂ ವಿಸ್ಟ್ರಾನ್ (Wistron) ಸೇರಿದೆ. ಆದರೆ ಇದೀಗ ಭಾರತದಲ್ಲಿ ಆಪಲ್‌ನ ಐಫೋನ್ ತಯಾರಿಸುವ ಜವಾಬ್ದಾರಿಯನ್ನು ಟಾಟಾ ಎಲೆಕ್ಟ್ರಾನಿಕ್ಸ್ (Tata Electronics) ವಹಿಸಿಕೊಳ್ಳಲು ಸಜ್ಜಾಗುತ್ತಿದೆ.

    ಆಪಲ್ ಕಂಪನಿಗೆ ಐಫೋನ್ ತಯಾರಿಸಿಕೊಡುವ ವಿಸ್ಟ್ರಾನ್ ಭಾರತದಲ್ಲಿ ತನ್ನ ಕಾರ್ಯಗಳನ್ನು ಸ್ಥಗಿತಗೊಳಿಸಲು ಮುಂದಾಗುತ್ತದೆ. ಇದೀಗ ತೈವಾನ್‌ನ ಎಲೆಕ್ಟ್ರಾನಿಕ್ಸ್ ಕಂಪನಿಯನ್ನು ಶೀಘ್ರದಲ್ಲೇ ಟಾಟಾ ಎಲೆಕ್ಟ್ರಾನಿಕ್ಸ್ ಸ್ವಾಧೀನಪಡಿಸಿಕೊಳ್ಳಲಿದ್ದು, ಐಫೋನ್ ತಯಾರಿಕೆಯ ಜವಾಬ್ದಾರಿಯನ್ನೂ ಕೈಗೆತ್ತಿಕೊಳ್ಳಲಿದೆ.

    ಭಾರತದಲ್ಲಿ ವಿಸ್ಟ್ರಾನ್‌ನ ಘಟಕ ಕರ್ನಾಟಕದ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದೆ. ಸುಮಾರು 4,000 ರಿಂದ 5,000 ಕೋಟಿ ರೂ. ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ ತಯಾರಿಸುವ ದೇಶದ 3 ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ಸುಮಾರು 5 ವರ್ಷಗಳ ಹಿಂದೆ ವಿಸ್ಟ್ರಾನ್ ಐಫೋನ್ ಎಸ್‌ಸಿ 2 ನೊಂದಿಗೆ ಐಫೋನ್ ತಯಾರಿಸಲು ಪ್ರಾರಂಭಿಸಿತ್ತು. ಪ್ರಸ್ತುತ ಕಂಪನಿ ಭಾರತದಲ್ಲಿ ಐಫೋನ್ ಎಸ್‌ಸಿ, ಐಫೋನ್ 12, ಐಫೋನ್ 13 ಹಾಗೂ ಐಫೋನ್ 14 ಅನ್ನು ತಯಾರಿಸುತ್ತಿದೆ.

    ಆಪಲ್ ಭಾರತಕ್ಕೆ 20 ವರ್ಷಗಳ ಹಿಂದೆ ಲಗ್ಗೆಯಿಟ್ಟಿದ್ದು, ಸುದೀರ್ಘ ಇತಿಹಾಸವನ್ನು ಹೊಂದಿದೆ. 2020ರ ಸೆಪ್ಟೆಂಬರ್‌ನಲ್ಲಿ ಆಪಲ್ ದೇಶದಲ್ಲಿ ತನ್ನ ಆನ್‌ಲೈನ್ ಸ್ಟೋರ್ ಅನ್ನು ಪ್ರಾರಂಭಿಸಿತು. ಇತ್ತೀಚೆಗಷ್ಟೇ ಭಾರತದ ಮೊದಲ ಆಪಲ್ ಸ್ಟೋರ್ ಮುಂಬೈ ಹಾಗೂ ದೆಹಲಿಯಲ್ಲಿ ಉದ್ಘಾಟನೆಗೊಂಡಿದೆ. ಇದನ್ನೂ ಓದಿ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ – ಗ್ರಾಹಕರಿಗೆ ಅನುಕೂಲಗಳೇನಿದೆ?

  • ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ?

    ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ?

    ನವದೆಹಲಿ: ಅಟೋಮೊಬೈಲ್‌, ಸಾಫ್ಟ್‌ವೇರ್‌ ಸೇರಿದಂತೆ ಹಲವು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಟಾಟಾ ಸಮೂಹ (Tata Group) ಸ್ಮಾರ್ಟ್‌ಫೋನ್‌ ಉದ್ಯಮಕ್ಕೆ ಕೈ ಹಾಕುವ ಸಾಧ್ಯತೆಯಿದೆ.

    ಆಪಲ್(Apple) ಕಂಪನಿಯ ಐಫೋನ್‌ಗಳನ್ನು(iPhone) ಉತ್ಪಾದನೆ ಮಾಡಲು ಟಾಟಾ ಕಂಪನಿ ಚಿಂತನೆ ನಡೆಸಿದ್ದು, ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂಬ ವರದಿ ಪ್ರಕಟವಾಗಿದೆ.

    ಪ್ರಸ್ತುತ ಐಫೋನ್‌ಗಳನ್ನು ತೈವಾನ್‌ ಮೂಲದ ಫಾಕ್ಸ್‌ಕಾನ್‌ (Foxconn) ಮತ್ತು ವಿಸ್ಟ್ರಾನ್‌(Wistron ) ಕಂಪನಿ ತಯಾರಿಸುತ್ತಿದೆ. ಬಹುತೇಕ ಐಫೋನ್‌ಗಳ ಉತ್ಪಾದನೆ ಚೀನಾ ಮತ್ತು ತೈವಾನ್‌ನಲ್ಲಿ ಆಗುತ್ತಿದೆ. ಪ್ರಸ್ತುತ ಬಹುತೇಕ ದೇಶಗಳು ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗುತ್ತಿದೆ. ಈ ಸಂದರ್ಭದಲ್ಲೇ ಟಾಟಾ ಭಾರತದಲ್ಲೇ ಐಫೋನ್ ಉತ್ಪಾದನೆ ಮಾಡುವ ಕುರಿತು ಮಾತುಕತೆ ಆರಂಭಿಸಿದೆ.

     

    ಈಗಾಗಲೇ ಫಾಕ್ಸ್‌ಕಾನ್‌ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್‌ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. ಈಗ ವಿಸ್ಟ್ರಾನ್‌ ಕಂಪನಿಯ ಜೊತೆ ಟಾಟಾ ಮಾತುಕತೆ ನಡೆಸುತ್ತಿದೆ. ಈ ಮಾತುಕತೆ ಯಶಸ್ವಿಯಾದರೆ ಜಂಟಿ ಪಾಲುದಾರಿಕೆಯಲ್ಲಿ ಐಫೋನ್‌ ಉತ್ಪಾದನೆಯಾಗಲಿದೆ. ಅಷ್ಟೇ ಅಲ್ಲದೇ ಐಫೋನ್‌ ಉತ್ಪಾದಿಸಿದ ಮೊದಲ ದೇಶೀಯ ಕಂಪನಿ ಎಂಬ ಹೆಗ್ಗಳಿಗೆ ಟಾಟಾ ಪಾತ್ರವಾಗಲಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    2008ರಲ್ಲಿ ಐಫೋನ್‌ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್‌ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್‌ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್‌ ಭಾರತದಲ್ಲೇ ಹೆಚ್ಚು ಐಫೋನ್‌ ಉತ್ಪಾದನೆಗೆ ಮುಂದಾಗಿದೆ.

    2021ರಲ್ಲಿ ಆಪಲ್‌ ಕಂಪನಿ ಭಾರತದಲ್ಲಿ 75 ಲಕ್ಷ ಐಫೋನ್‌ ಉತ್ಪಾದನೆ ಮಾಡಿತ್ತು. 2022ರಲ್ಲಿ 1-2 ಕೋಟಿ ಫೋನ್‌ ಉತ್ಪಾದನೆ ಮಾಡಲು ಮುಂದಾಗಿದೆ.

    ವಿಶ್ವದ ಐಫೋನ್‌ ಮಾರಾಟದಲ್ಲಿ ಕಳೆದ ವರ್ಷ ಭಾರತದ ಘಟಕದ ಪಾಲು ಶೇ.3 ಇದ್ದರೆ 2022ರಲ್ಲಿ ಶೇ.5-7ಕ್ಕೆ ಏರಿಕೆಯಾಗಿದೆ. 2022ರಲ್ಲಿ ಭಾರತದಲ್ಲಿ ಮಾರಾಟವಾದ ಐಫೋನ್‌ ಪೈಕಿ ಶೇ.85 ರಷ್ಟು ಫೋನುಗಳು ಮೇಡ್‌ ಇನ್‌ ಇಂಡಿಯಾ ಫೋನ್‌ ಆಗಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ವಿಸ್ಟ್ರಾನ್ ಕಂಪನಿಯಲ್ಲಿ ಮರು ನೇಮಕಾತಿ ಶುರು- ಕೆಲಸ ಪಡೆಯಲು ಏನೆಲ್ಲ ಮಾಡಬೇಕು?

    ವಿಸ್ಟ್ರಾನ್ ಕಂಪನಿಯಲ್ಲಿ ಮರು ನೇಮಕಾತಿ ಶುರು- ಕೆಲಸ ಪಡೆಯಲು ಏನೆಲ್ಲ ಮಾಡಬೇಕು?

    ಕೋಲಾರ: ದಾಂದಲೆ ಬಳಿಕ ಪ್ರತಿಷ್ಠಿತ ಐಫೋನ್ ತಯಾರಿಕಾ ವಿಸ್ಟ್ರಾನ್ ಕಂಪನಿಯಲ್ಲಿ ಹೊಸದೊಂದು ಬೆಳೆವಣಿಗೆ ಆರಂಭವಾಗಿದೆ. ಕಾರ್ಮಿಕರಿಗೆ ಬಾಕಿ ಇದ್ದ ವೇತನ ಪಾವತಿ ಮಾಡಿರುವ ಕಂಪನಿ, ಮರು ನೇಮಕಾತಿ ಪ್ರಕ್ರಿಯೆಯನ್ನು ಸಹ ಶುರುಮಾಡಿದೆ. ಆದರೆ ಇಲ್ಲಿ ಕೆಲಸ ಮಾಡುವವರಿಗೆ ಕೆಲ ಮಾನದಂಡಗಳನ್ನ ವಿಧಿಸಿದೆ.

    ಡಿಸೆಂಬರ್ 12 ರಂದು ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐಫೋನ್ ತಯಾರಿಕಾ ಬಹುರಾಷ್ಟ್ರೀಯ ಕಂಪನಿ ವಿಸ್ಟ್ರಾನ್ ನಲ್ಲಿ ಕಾರ್ಮಿಕರು ದಾಂದಲೆ ನಡೆಸಿ, ಪೀಠೋಪಕರಣಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಪುಡಿ ಪುಡಿ ಮಾಡಿದ್ದರು. ವೇತನ ಸರಿಯಾಗಿ ನೀಡಿಲ್ಲ ಎಂಬ ಕಾರಣಕ್ಕೆ ಕಾರ್ಮಿಕರ ಆಕ್ರೋಶಕ್ಕೆ ಸಿಕ್ಕ ಕಂಪನಿ ಅಸ್ತಿ ಪಂಜರದಂತಾಗಿತ್ತು. ಇದಾದ ನಂತರ ಹಲವು ತನಿಖೆ, ಪರಿಶೀಲನೆ ಬಳಿಕ ಕಂಪನಿ ಕಾರ್ಮಿಕರ ಕ್ಷಮೆ ಕೇಳಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿತ್ತು. ಇದೇ ವೇಳೆ ವಿಸ್ಟ್ರಾನ್ ಕಂಪನಿ ಮತ್ತೆ ಇಲ್ಲಿ ಕಾರ್ಯಾರಂಭ ಮಾಡೋದು ಅನುಮಾನ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಇದೆಲ್ಲದಕ್ಕೂ ತೆರೆ ಎಳೆದಿರುವ ಕಂಪನಿ, ಈಗಾಗಲೇ ಕಾರ್ಮಿಕರ ಬಾಕಿ ಇದ್ದ ವೇತನ ಪಾವತಿ ಮಾಡಿದೆ. ಜೊತೆಗೆ ದಾಂದಲೆಯಲ್ಲಿ ಬಾಗಿಯಾಗದ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದೆ. ಆದರೆ ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಪಡೆಯಬೇಕೆಂದರೆ ಪೊಲೀಸ್ ಇಲಾಖೆಯ ಅನುಮತಿ ಖಡ್ಡಾಯವಾಗಿದೆ.

    ಈ ಬಾರಿ ಕಂಪನಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಅದೇ ರೀತಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೂ ಪಶ್ಚಾತ್ತಾಪವಾಗಿದೆ. ಕೆಲಸ ನೀಡಲು ಬಂದ ಕಂಪನಿ ಮೇಲೆ ದಾಂದಲೆ ಮಾಡಿದ್ದು ತಪ್ಪು ಅನ್ನೋದು ಅರಿವಾಗಿದೆ. ಹೀಗಾಗಿ ವಿಸ್ಟ್ರಾನ್ ಕಂಪನಿ ಈಗ ಮತ್ತೆ ದಾಂದಲೆಯಲ್ಲಿ ಬಾಗಿಯಾಗದ ಕಾರ್ಮಿಕರಿಗೆ ಮೊಬೈಲ್ ಮೆಸೇಜ್ ಮಾಡಿ ಕೆಲವು ನಿಗದಿತ ದಾಖಲಾತಿಗಳನ್ನು ನೀಡಿ ಕೆಲಸಕ್ಕೆ ಸೇರಿಕೊಳ್ಳಲು ಸೂಚನೆ ನೀಡಿದೆ.

    ಕಂಪನಿಯಿಂದ ಕಾರ್ಮಿಕರಿಗೆ ಸಂದೇಶ ಕಳುಹಿಸಲಾಗಿದ್ದು, ಗುರುತಿನ ದಾಖಲೆ ಸಹಿತ ಅಭ್ಯರ್ಥಿ ವಾಸಿಸುವ ಗ್ರಾಮದ ಇಬ್ಬರು ಸಾಕ್ಷಿಗಳು, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿದ್ಯಾರ್ಹತೆ ದಾಖಲಾತಿಗಳು ಹಾಗೂ ಮೂರು ಫೋಟೋ. ಸೇವಾಸಿಂಧು ಅಥವಾ ಕಂಪನಿಯ ಆಪ್‍ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಇಷ್ಟು ದಾಖಲಾತಿಗಳೊಂದಿಗೆ ಪೊಲೀಸ್ ಠಾಣೆಯಲ್ಲಿ ಪಡೆಯುವ ನಿರಪೇಕ್ಷಣಾ ಪತ್ರ ಪಡೆದವರಿಗೆ ಮಾತ್ರ ಕಂಪನಿಯಲ್ಲಿ ಉದ್ಯೋಗ ಸಿಗಲಿದೆ. ಇಂದಿನಿಂದ ಈ ಪ್ರಕ್ರಿಯೆ ಆರಂಭವಾಗಿದ್ದು, ದಾಖಲಾತಿ ಪರಿಶೀಲನಾ ಪ್ರಕ್ರಿಯೆ ಶುರುವಾಗಿದೆ. ಮತ್ತೆ ವಿಸ್ಟ್ರಾನ್ ಕಂಪನಿ ಆರಂಭದ ಆಸೆ ಚಿಗುರಿದೆ.

    ಕೆಲಸ ಕಳೆದುಕೊಂಡಿದ್ದ ಸಾವಿರಾರು ಉದ್ಯೋಗಿಗಳು ತಿಂಗಳಿಂದ ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದರು. ಈಗ ಮತ್ತೆ ಕಂಪನಿ ಆರಂಭವಾಗುತ್ತಿದ್ದು, ಮತ್ತೆ ಕೆಲಸ ಸಿಗುತ್ತದೆ ಎಂದು ಸಾವಿರಾರು ಕಾರ್ಮಿಕರಲ್ಲಿ ಸಂತೋಷ ಮೂಡಿದೆ.

  • ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿ ಉಪಾಧ್ಯಕ್ಷನ ತಲೆದಂಡ

    ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿ ಉಪಾಧ್ಯಕ್ಷನ ತಲೆದಂಡ

    – ಸಂಬಳದಲ್ಲಿ ವ್ಯತ್ಯಯವಾಗಿರುವುದನ್ನು ಒಪ್ಪಿದ ಕಂಪನಿ

    ನವದೆಹಲಿ: ಕೋಲಾರದ ನರಸಾಪುರದ ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿಸ್ಟ್ರಾನ್ ಕಂಪನಿಯ ಉಪಾಧ್ಯಕ್ಷ ಲೀ ವಿನ್ಸೆಂಟ್ ತಲೆದಂಡವಾಗಿದೆ. ಅಷ್ಟೇ ಅಲ್ಲದೇ ಉದ್ಯೋಗಿಗಳಿಗೆ ಸಂಬಳ ನೀಡುವುದರಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಕಂಪನಿ ಒಪ್ಪಿಕೊಂಡಿದೆ.

    ಕೋಲಾರದ ನರಸಾಪುರ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯ ಉದ್ಯೋಗಿಗಳು ಸಂಬಳ ನೀಡದ್ದಕ್ಕೆ ಫ್ಯಾಕ್ಟರಿಯನ್ನು ಧ್ವಂಸಗೊಳಿಸಿದ್ದರು. ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ನರಸಾಪುರದ ಘಟಕದಲ್ಲಿ ದುರದೃಷ್ಟಕರ ಘಟನೆ ನಡೆದ ಬಳಿಕ ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈ ವೇಳೆ ಕೆಲ ನೌಕರರಿಗೆ ಸಂಬಳ ನೀಡದಿರುವುದು ಕಂಡುಬಂದಿದೆ. ಈ ಕುರಿತು ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಅಲ್ಲದೆ ನಮ್ಮೆಲ್ಲ ಉದ್ಯೋಗಿಗಳ ಕ್ಷಮೆಯಾಚಿಸುತ್ತೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ನಮ್ಮಿಂದ ತಪ್ಪಾಗಿರುವುದನ್ನು ಅರಿತಿದ್ದೇವೆ. ಕಾರ್ಮಿಕ ಏಜೆನ್ಸಿಗಳು ಹಾಗೂ ಪಾವತಿಗಳನ್ನು ನಿರ್ವಹಿಸಲು ಕೆಲ ಪ್ರಕ್ರಿಯೆಗಳನ್ನು ಬಲಪಡಿಸಬೇಕಿದೆ ಹಾಗೂ ನವೀಕರಿಸಬೇಕಿದೆ. ಶಿಸ್ತು ಕ್ರಮ ಸೇರಿದಂತೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಇದರ ಭಾಗವಾಗಿ ಕಂಪನಿಯ ಭಾರತದ ಉಪಾಧ್ಯಕ್ಷರನ್ನು ಹುದ್ದೆಯಿಂದ ತೆಗೆಯಲಾಗಿದೆ. ಇಂತಹ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ನಮ್ಮ ತಂಡಗಳನ್ನು ಪುನರ್‍ರಚಿಸುತ್ತೇವೆ ಎಂದು ಶನಿವಾರ ವಿಸ್ಟ್ರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಉಪಾಧ್ಯಕ್ಷ ಹುದ್ದೆಯಲ್ಲಿದ್ದ ವಿನ್ಸೆಂಟ್ ಲೀಯವರನ್ನು ತೆಗೆದು ಹಾಕಲಾಗಿದ್ದು, ವಿಸ್ಟ್ರಾನ್ ಸ್ಮಾರ್ಟ್ ಡಿವೈಸಸ್‍ನ ಭಾರತದ ಎಂಡಿಯಾಗಿ ಸುಧಿತೋ ಗುಪ್ತಾ ಸದ್ಯಕ್ಕೆ ಮುಂದುವರಿಯಲಿದ್ದಾರೆ. ಎಲ್ಲ ಕಾರ್ಮಿಕರಿಗೆ ತಕ್ಷಣವೇ ಪರಿಹಾರ ನೀಡಿ, ಈ ಕುರಿತು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ. ಕಾರ್ಮಿಕರಿಗಾಗಿ ನೌಕರರ ನೆರವು ಕಾರ್ಯಕ್ರಮವನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

    ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸಲು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 24 ಗಂಟೆಗಳ ಸಹಾಯವಾಣಿಯನ್ನು ತೆರೆಯುತ್ತೇವೆ. ನಮ್ಮ ವ್ಯವಹಾರ ಹಾಗೂ ಉದ್ಯೋಗಿಗಳಿಗೆ ಸಹಾಯ ಮಾಡಲು ನಾವು ಬದ್ಧರಾಗಿದ್ದೇವೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

    ಕರ್ನಾಟಕದ ಕಾರ್ಮಿಕ ಇಲಾಖೆ ಕಂಪನಿಯ ಅವ್ಯವಸ್ಥೆ ಕುರಿತು ಎಚ್ಚರಿಸಿದ ಬಳಿಕ ವಿಸ್ಟ್ರನ್ ಹೇಳಿಕೆ ಬಿಡುಗಡೆ ಮಾಡಿದೆ. ಕಂಪನಿಯೂ ತನ್ನ ಉದ್ಯೋಗಿಗಳ ಸಂಬಳ ಹಾಗೂ ಹಾಜರಾತಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಅಲ್ಲದೆ ಉದ್ಯೋಗಿಗಳ ಕುರಿತು ಯಾವುದೇ ವಿವರಣೆ ಇರಲಿಲ್ಲ. ಅಲ್ಲದೆ 12 ಗಂಟೆಗಳ ಕಾಲ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಒತ್ತಡ ಹೇರಲಾಗಿತ್ತು. ಉದ್ಯೋಗಿಗಳ ಎಷ್ಟು ಗಂಟೆ ಕೆಲಸ ನಿರ್ವಹಣೆ ಮಾಡಿದ್ದಾರೆ ಎಂಬುದನ್ನು ಸಂಗ್ರಹಿಸುವ ವ್ಯವಸ್ಥೆ ಸರಿಯಿಲ್ಲ. ಸರಿಯಾದ ಸಮಯಕ್ಕೆ ಸಂಬಳ ಪಾವತಿ ಆಗುತ್ತಿರಲಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

    ವಿಸ್ಟ್ರಾನ್ 2,850 ಕೋಟಿ ರೂ.ಗಳನ್ನು ಕೋಲಾರದ ಪ್ಲಾಂಟ್‍ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೆ ಇದರ ಒಟ್ಟು ಮೊತ್ತವನ್ನು 18,000 ಕೋಟಿ ರೂ.ಗೆ ಕ್ಕೆ ಹೆಚ್ಚಿಸಲು ಬದ್ಧವಾಗಿತ್ತು. ಇದು ಪ್ರಸ್ತುತ 10 ಸಾವಿರಕ್ಕೂ ಅಧಿಕ ಜನರನ್ನು ನೇಮಿಸಿಕೊಂಡಿದೆ. ಸ್ಮಾರ್ಟ್‍ಫೋನ್‍ನಿಂದ ಐಒಟಿ ವಸ್ತುಗಳವರೆಗೆ ಹಾಗೂ ಬಯೋಟೆಕ್ ಡಿವೈಸ್‍ಗಳನ್ನು ಉತ್ಪಾದಿಸುವುದಾಗಿ ಸಂಸ್ಥೆ ಹೂಡಿಕೆ ಮಾಡಿದೆ.

    ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ್ದ ಆಪಲ್ ಕಂಪನಿ ತನಿಖೆ ನಡೆಸಲು ತನ್ನ ಭಾರತದ ಅಧಿಕಾರಿಗಳನ್ನು ಘಟಕಕ್ಕೆ ಕಳುಹಿಸಿಕೊಟ್ಟಿತ್ತು.

  • ಕೋಲಾರದ ಐಫೋನ್‌ ಘಟಕದಲ್ಲಿ ದಾಂಧಲೆ – ತನಿಖೆ ಆರಂಭಿಸಿದ ಆಪಲ್‌

    ಕೋಲಾರದ ಐಫೋನ್‌ ಘಟಕದಲ್ಲಿ ದಾಂಧಲೆ – ತನಿಖೆ ಆರಂಭಿಸಿದ ಆಪಲ್‌

    ನವದೆಹಲಿ: ಕೋಲಾರದ ನರಸಾಪುರ ಘಟಕದಲ್ಲಿರುವ ವಿಸ್ಟ್ರಾನ್‌ ಕಂಪನಿಯಲ್ಲಿ ನಡೆದ ಕಾರ್ಮಿಕರ ದಾಂಧಲೆ ಸಂಬಂಧ ಈಗ ಐಫೋನ್‌ ತಯಾರಕ ಆಪಲ್‌ ಕಂಪನಿ ತನಿಖೆ ನಡೆಸಲು ಮುಂದಾಗಿದೆ.

    ತನ್ನ ಪೂರೈಕೆದಾರರಿಗೂ ಹಲವು ಮಾರ್ಗಸೂಚಿಗಳನ್ನು ವಿಧಿಸಿ ಆಪಲ್‌ ಗುತ್ತಿಗೆ ನೀಡುತ್ತದೆ. ಈ ಮಾರ್ಗಸೂಚಿಯನ್ನು ತೈವಾನ್‌ ಮೂಲದ ವಿಸ್ಟ್ರಾನ್‌ ಕಂಪನಿ ಮುರಿದಿದ್ಯಾ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಅಮೆರಿಕದ ಆಪಲ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಓದಿದ ವಿದ್ಯಾರ್ಹತೆಗೂ ನೀಡುತ್ತಿರುವ ಸಂಬಳಕ್ಕೆ ಹೊಂದಿಕೆ ಆಗುತ್ತಿಲ್ಲ. ನಿಗದಿಯಾಗಿದ್ದ ಸಂಬಳಕ್ಕಿಂತ ಕಡಿಮೆ ಸಂಬಳ ನೀಡಿದ್ದು ಅಲ್ಲದೇ ಬೇಕಾಬಿಟ್ಟಿ ಕಡಿತಗೊಳಿಸಿದ್ದಾರೆ ಎಂದು ನೌಕರರು ಆರೋಪಿಸಿ ಡಿ.10 ರಂದು ದಾಂಧಲೆ ನಡೆಸಿದ್ದರು.

    ಕಾರ್ಮಿಕರ ಆರೋಪದ ಹಿನ್ನೆಲೆಯಲ್ಲಿ ಒಪ್ಪಿಕೊಂಡಿದ್ದಕ್ಕಿಂತ ಕಡಿಮೆ ವೇತನ ನೀಡಲಾಗಿತ್ತಾ ಹಾಗೂ ಹೆಚ್ಚುವರಿ ಅವಧಿಯ ಕೆಲಸವನ್ನು ಲೆಕ್ಕ ಹಾಕಿ ಸಂಬಳ ನೀಡಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

    ಈ ಘಟನೆ ನಮಗೆ ಆಘಾತ ತಂದಿದೆ. ನಾವು ನಮ್ಮ ತಂಡದ ಮೂಲಕ ನರಸಾಪುರದಲ್ಲಿರುವ ವಿಸ್ಟ್ರಾನ್‌ನ ಘಟಕದ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದು, ಹೆಚ್ಚುವರಿ ಆಪಲ್ ತಂಡದ ಸದಸ್ಯರನ್ನು ಮತ್ತು ಲೆಕ್ಕ ಪರಿಶೋಧಕರನ್ನು ಘಟಕಕ್ಕೆ ರವಾನಿಸುತ್ತಿದ್ದೇವೆ. ನಮ್ಮ ತಂಡಗಳು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿವೆ ಎಂದು ಆಪಲ್‌ ತಿಳಿಸಿದೆ. ಇದನ್ನೂ ಓದಿ: ವಿಸ್ಟ್ರಾನ್ ಐಫೋನ್‌ ಘಟಕದಲ್ಲಿ ದಾಂಧಲೆ -‌ 7 ಸಾವಿರ ಕಾರ್ಮಿಕರ ವಿರುದ್ಧ ದೂರು, 149 ಮಂದಿ ಅರೆಸ್ಟ್‌

    ಭಾರತದಲ್ಲಿ ಫೋನ್‌ ತಯಾರಿಸುವುದರ ಜೊತೆಗೆ ವಿದೇಶಕ್ಕೆ ಫೋನ್‌ ರಫ್ತು ಮಾಡಲು ಐಫೋನ್‌ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿಸ್ಟ್ರಾನ್‌ ಕಂಪನಿ ಮೇಕ್‌ ಇನ್‌ ಇಂಡಿಯಾದ ಅಡಿ ಮತ್ತಷ್ಟು ಹಣವನ್ನು ಹೂಡಿಕೆ ಮಾಡಲು ಮುಂದಾಗಿದೆ.

    ಈ ಘಟನೆಯಿಂದ ವಿದೇಶಿ ಹೂಡಿಕೆಯ ಮೇಲೆ ಪೆಟ್ಟು ಬೀಳುವ ಸಾಧ್ಯತೆ ಇರುವ ಕಾರಣ ಕರ್ನಾಟಕ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದೆ.

  • ಹೊಸಕೋಟೆ ಬಳಿ ದೊಡ್ಡ ಗೋದಾಮು ತೆರೆಯಲಿದೆ ಐಫೋನ್‌ ತಯಾರಕ ವಿಸ್ಟರ್ನ್‌ ಕಂಪನಿ

    ಹೊಸಕೋಟೆ ಬಳಿ ದೊಡ್ಡ ಗೋದಾಮು ತೆರೆಯಲಿದೆ ಐಫೋನ್‌ ತಯಾರಕ ವಿಸ್ಟರ್ನ್‌ ಕಂಪನಿ

    ಬೆಂಗಳೂರು: ಆಪಲ್ ಐಫೋನ್ ತಯಾರಿಸುವ ತೈವಾನಿನ ವಿಸ್ಟರ್ನ್ ಕಂಪನಿ ಬೆಂಗಳೂರಿನ ಹೊಸಕೋಟೆ ಸಮೀಪ ದೊಡ್ಡ ಗೋದಾಮು ಸ್ಥಾಪಿಸಲು ಮುಂದಾಗಿದೆ.

    ವಿಸ್ಟರ್ನ್ ಕಂಪನಿ ಈಗಾಗಲೇ ಬೆಂಗಳೂರಿನ ಪೀಣ್ಯ ಮತ್ತು ಕೋಲಾರದ ನರಸಾಪುರದಲ್ಲಿ ಐಫೋನ್ ಜೋಡಣಾ ಘಟಕವನ್ನು ಸ್ಥಾಪಿಸಿದೆ. ಈಗ ತನ್ನ ಉತ್ಪನ್ನವನ್ನು ಸಂಗ್ರಹಿಸಲು ಹೊಸಕೋಟೆ ಬಳಿ ದೊಡ್ಡ ಗೋದಾಮು ಸ್ಥಾಪನೆಗೆ ಮುಂದಾಗಿದೆ.

    ಈ ಗೋದಾಮಿನಲ್ಲಿ 3 ಸಾವಿರ ಮಂದಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಗೋದಾಮು, ಜೋಡಣಾ ಘಟಕ ಸೇರಿ ಒಟ್ಟು 10 ಸಾವಿರ ಮಂದಿಗೆ ಉದ್ಯೋಗ ನೀಡಲು ವಿಸ್ಟರ್ನ್ ಕಂಪನಿ ಮುಂದಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ವರದಿ ಮಾಡಿದೆ. ವಿಸ್ಟರ್ನ್ ಮತ್ತು ಆಪಲ್ ಕಂಪನಿ ಗೋದಾಮು ತೆರೆಯುವ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ದೊಡ್ಡ ಕಚೇರಿ ತೆರೆಯಲಿದೆ ಆಪಲ್‌

    ನರಾಸಪುರದಲ್ಲಿ 43 ಎಕ್ರೆ ಜಾಗದಲ್ಲಿ ಘಟಕ ತೆರೆದಿರುವ ವಿಸ್ಟರ್ನ್ 3 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಈಗಾಗಲೇ ಕಂಪನಿ 1 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದೆ.

    ಕೋವಿಡ್‌ 19 ಬಳಿಕ ಚೀನಾ ಅವಲಂಬನೆ ಕಡಿಮೆ ಮಾಡಿ ಬೇರೆ ದೇಶಗಳಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಕಂಪನಿಗಳು ಮುಂದಾಗುತ್ತಿವೆ. ಭಾರತ ಈಗ ವಿಶ್ವದ ಕಂಪನಿಗಳನ್ನು ಆಕರ್ಷಿಸುತ್ತಿವೆ. ಸರ್ಕಾರಗಳು ಮೂಲಸೌಕರ್ಯ ಅಭಿವೃದ್ಧಿ ಪಡಿಸಿ ಘಟಕ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದರೆ ಸಾವಿರಾರು ಮಂದಿಗೆ ಉದ್ಯೋಗ ಸಿಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಇದನ್ನೂ ಓದಿ: ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    ಆಪಲ್‌ ಕಂಪನಿ ಗುತ್ತಿಗೆ ನೀಡುತ್ತಿರುವ ಫಾಕ್ಸ್‌ಕನ್‌, ಪೆಗಟ್ರಾನ್‌ ಮತ್ತು ವಿಸ್ಟರ್ನ್‌ ಭಾರತದಲ್ಲಿ ಭಾರೀ ಹೂಡಿಕೆ ಮಾಡಲು ಮಂದಾಗಿದೆ. ಫಾಕ್ಸ್‌ಕನ್‌ ಕಂಪನಿ ಐಫೋನ್‌ ಎಕ್ಸ್‌ ಆರ್‌ ತಯಾರಿಸುವ ಶ್ರೀಪೆರಂಬದೂರು ಘಟಕ್ಕೆ 1 ಶತ ಕೋಟಿ ಡಾಲರ್‌ ಹ ಣವನ್ನುಹೂಡಿಕೆ ಮಾಡಲಿದ್ದರೆ , ಪೆಗಾಟ್ರನ್‌ ಕಂಪನಿ 150 ದಶಲಕ್ಷ ಡಾಲರ್‌ ಹಣವನ್ನು ಭಾರತದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗುತ್ತಿದ್ದೇವೆ ಎಂದು ಹೇಳಿದೆ.

    ಆಪಲ್‌ ಕಂಪನಿಗೆ ಚಾರ್ಜರ್‌ ಪೊರೈಕೆ ಮಾಡುವ ಸಲ್‌ಕಾಂಪ್‌ ಕಂಪನಿ ಚೆನ್ನೈ ಎಸ್‌ಇಝಡ್‌ನಲ್ಲಿ ಮುಚ್ಚಲ್ಪಟ್ಟಿರುವ ನೋಕಿಯಾ ಘಟಕವನ್ನು ಖರೀದಿಸಿದ್ದು ಮುಂದಿನ 5 ವರ್ಷದಲ್ಲಿ 2 ಸಾವಿರ ಕೋಟಿ ರೂ. ಹಣವನ್ನು ಹೂಡಿಕೆ ಮಾಡಲಿದೆ.

    ಇತ್ತೀಚಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌, ಮುಂದಿನ 5 ವರ್ಷದಲ್ಲಿ 11 ಲಕ್ಷ ಕೋಟಿ ಹಣವನ್ನು ಭಾರತ ಮತ್ತು ವಿದೇಶದ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲಿವೆ ಎಂದು ತಿಳಿಸಿದ್ದರು.

    ಭಾರತವನ್ನು ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ.  ಇದನ್ನೂ ಓದಿ: ದೇಶೀಯ ಫೋನ್‌ ತಯಾರಿಕಾ ಕಂಪನಿ ಖರೀದಿಗೆ ಮುಂದಾದ ಜಿಯೋ