Tag: Window Glass

  • ಶಾಲೆಯೊಳಗೆ ಬಿಯರ್ ಬಾಟ್ಲಿ ತೂರಿದ ಕಿಡಿಗೇಡಿಗಳು – ವಿದ್ಯಾಮಂದಿರಕ್ಕೆ ಅಪಮಾನ

    ಶಾಲೆಯೊಳಗೆ ಬಿಯರ್ ಬಾಟ್ಲಿ ತೂರಿದ ಕಿಡಿಗೇಡಿಗಳು – ವಿದ್ಯಾಮಂದಿರಕ್ಕೆ ಅಪಮಾನ

    ಚಿಕ್ಕಬಳ್ಳಾಪುರ: ತಡರಾತ್ರಿ ಮದ್ಯಪಾನ ಮಾಡಿ ಕಿಡಿಗೇಡಿಗಳು ಖಾಸಗಿ ಶಾಲೆಯೊಳಗೆ ಬಿಯರ್ ಬಾಟಲಿ ತೂರಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ನಗರದ ಕೋಟೆ ವೃತ್ತದಲ್ಲಿರುವ ಆಕಾಶ್ ಗ್ಲೋಬಲ್ ಶಾಲೆಯ ಕಿಟಕಿಗೆ ಬಿಯರ್ ಬಾಟಲಿಯನ್ನು ತೂರಿದ್ದು, ಕಿಟಕಿ ಗಾಜು ಪುಡಿ, ಪುಡಿಯಾಗಿದೆ. ಈ ಪರಿಣಾಮ ಶಾಲೆಯ ಪ್ರವೇಶ ದ್ವಾರದ ಮುಂಭಾಗ ಹಾಗೂ ಆಡಳಿತ ಕಚೇರಿ ತುಂಬಾ ಬಿಯರ್ ಬಾಟಲಿಯ ಚೂರು ಹಾಗೂ ಕಿಟಕಿ ಗಾಜಿನ ಚೂರುಗಳು ತುಂಬಿಕೊಂಡಿವೆ. ಅಂದಹಾಗೇ ಮಧ್ಯರಾತ್ರಿ ಕುಡಿದ ಅಮಲಿನಲ್ಲಿ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದು, ಈ ಹಿಂದೆ ಸಹ ಇದೇ ಶಾಲೆಯ ಮತ್ತೊಂದು ಕಿಟಕಿ ಗಾಜಿಗೆ ಕಲ್ಲು ತೂರಾಟ ಮಾಡಿ ಹೊಡೆದು ಹಾಕಿದ್ದಾರೆ. ಹೀಗೆ ಪದೇ ಪದೇ ಶಾಲೆಯ ಕಿಟಿಕಿಗಳನ್ನು ಕಲ್ಲು ಹಾಗೂ ಮದ್ಯದ ಬಾಟಲಿಯಿಂದ ಹೊಡೆದು ಹಾಕುತ್ತಿರುವುದು ಶಾಲೆಯ ಶಿಕ್ಷಕರಲ್ಲಿ ಆತಂಕ ಮೂಡಿಸಿದೆ. ಇದನ್ನೂ ಓದಿ:ದರೋಡೆ ಮಾಡಲು ಹೋಗಿ ಏನೂ ಸಿಗದಿದ್ದಾಗ ಯುವತಿಯ ಅತ್ಯಾಚಾರವೆಸಗಿದ ಕಾಮುಕರು!

    ಈ ವಿಚಾರವಾಗಿ ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರರವರು, ಶಾಲೆ ಮುಖ್ಯ ರಸ್ತೆಯಲ್ಲಿದ್ದು, ಶಾಲೆಯ ಮುಂಭಾಗ, ಅಕ್ಕ-ಪಕ್ಕ ರಾತ್ರಿ ವೇಳೆ ಕೆಲ ಪುಂಡ ಪೋಕರಿಗಳು ಕೂರುತ್ತಾರೆ. ಸಿಗರೇಟ್ ಹಾಗೂ ಮದ್ಯ ಸೇವನೆ ಮಾಡಿ ಬಾಟಲಿ ಬಿಸಾಡುವುದನ್ನು ಮಾಡುತ್ತಿದ್ದರು. ಆಗ ನಾವೇ ಕ್ಲೀನ್ ಮಾಡಿಕೊಂಡು ಸುಮ್ಮನಾಗುತ್ತಿದ್ವಿ. ಈ ಹಿಂದೆ ಸಹ ಶಾಲೆಯ ಮತ್ತೊಂದು ಕಿಟಕಿಯ ಗಾಜಿಗೆ ಕಲ್ಲು ತೂರಿ ಪುಡಿ ಪುಡಿ ಮಾಡಿದ್ದರು. ಆಗಲೂ ಸುಮ್ಮನಿದ್ವಿ. ಈಗ ತಡರಾತ್ರಿ ಶಾಲೆಯ ಮುಂಭಾಗದ ಕಿಟಕಿಗೆ ಬಿಯರ್ ಸಮೇತ ಬಾಟಲಿ ತೂರಿದ್ದು, ಕಿಟಕಿ ಗಾಜು ಹೊಡೆದು ಬಿಯರ್ ಬಾಟಲಿ ಒಳಗೆ ಬಂದಿದೆ. ಚೂರುಗಳೆಲ್ಲವೂ ಶಾಲೆ ಹಾಗೂ ಆಡಳಿತ ಕಚೇರಿಯಲ್ಲಿ ಹರಡಿವೆ. ಶಾಲೆ ಅಂದರೆ ದೇವಾಲಯ ಅಂತಾರೆ. ಅವರ ಮನೆ ಮಕ್ಕಳು ಸಹ ಯಾವುದೋ ಶಾಲೆಯಲ್ಲಿ ಓದುತ್ತಿರುತ್ತಾರೆ. ಆ ಶಾಲೆಯಲ್ಲಿ ಇಂತಹ ಘಟನೆ ಆದರೆ ಅವರಿಗೆಷ್ಟು ನೋವಾಗುತ್ತೆ? ಇದು ಶಾಲೆ ಅಲ್ವಾ. ಇಲ್ಲಿಗೂ ಮಕ್ಕಳು ಬರುತ್ತಾರೆ ಅಲ್ವಾ. ಯಾಕೆ ಹೀಗೆ ಮಾಡಿದ್ರು ಅಂತ ತಮ್ಮ ಆಕ್ರೋಶ ಮತ್ತು ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ:ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    ಕೋಟೆ ಪ್ರಮುಖ ವೃತ್ತವಾಗಿದ್ದು, ನಗರದ ಮುಖ್ಯ ಭಾಗದಲ್ಲಿ ಈ ಶಾಲೆಯಿದೆ. ಇಂತಹ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಚಿಕ್ಕಬಳ್ಳಾಪುರ ನಗರ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ. ಬೀಟ್ ವ್ಯವಸ್ಥೆ ಹೆಚ್ಚು ಮಾಡಬೇಕಿದೆ ಅಂತ ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಇದೀಗ ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪೇದೆಗಳು ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಶಾಲೆಯ 3ನೇ ಮಹಡಿಯಿಂದ ಕಿಟಕಿ ಗಾಜು ಬಿದ್ದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ- ಪೋಷಕರ ಪ್ರತಿಭಟನೆ

    ಬೆಂಗಳೂರು: ಶಾಲೆಯ ಮೂರನೇ ಮಹಡಿಯಿಂದ ಕಿಟಕಿಯ ಗಾಜು ಬಿದ್ದು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲ್ಯಾಣ ನಗರದ ರಾಯಲ್ ಕಾನ್‍ಕಾರ್ಡ್ ಶಾಲೆಯಲ್ಲಿ ನಡೆದಿದೆ.

    ಮಾಜಿ ಶಾಸಕ ಶಿವರಾಮೇಗೌಡರಿಗೆ ಸೇರಿದ ಶಾಲೆ ಇದಾಗಿದೆ. ಬುಧವಾರ ಮಧ್ಯಾಹ್ನ  3.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೆಳಗೆ ಆಟವಾಡ್ತಿದ್ದ ಮಕ್ಕಳ ಮೇಲೆ ಅಲಂಕಾರಿಕ ಗ್ಲಾಸ್ ಬಿದ್ದು ತಲೆಗೆ ಗಾಯವಾಗಿದೆ. ವಾಟ್ಸಪ್ ಮೂಲಕ ಮಕ್ಕಳ ಪೋಷಕರ ಗಮನಕ್ಕೆ ಈ ಬಗ್ಗೆ ಮಾಹಿತಿ ತಿಳಿದುಬಂದ ನಂತರ ಪೋಷಕರು ಇಂದು ಶಾಲೆಗೆ ಮಕ್ಕಳನ್ನು ಕಳಿಸಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಗಾಜು ಬಿದ್ದ ಪ್ರಕರಣ ಮಾತ್ರವಲ್ಲದೆ ಶಾಲೆಯಲ್ಲಿ ಇತರೆ ಸಮಸ್ಯೆಗಳೂ ಇದೆ ಎಂದು ಪೋಷಕರು ಆರೋಪಿಸಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ. ಮಕ್ಕಳಿಗೆ ಈ ಶಾಲೆಯಲ್ಲಿ ರಕ್ಷಣೆ ಇಲ್ಲ. ಮಕ್ಕಳನ್ನು ಶಾಲೆಗೆ ಕಳಿಸೋಕೆ ನಮಗೆ ಭಯವಾಗುತ್ತಿದೆ. ಈ ಹಿಂದೆಯೂ ಕೂಡ ಇಂಥದ್ದೇ ಅನಾಹುತಗಳು ನಡೆದಿದ್ದರೂ ಶಾಲೆ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಶಾಲೆಯ ಆಡಳಿತ ಮಂಡಳಿಗೆ ಇ-ಮೇಲ್ ಕಳಿಸಿ ನಂತರ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಪೋಷಕರು ಶಾಲೆಯ ಆವರಣದಲ್ಲಿ ಸೇರಿದ್ದಾರೆ. ಅಷ್ಟೇ ಅಲ್ಲದೇ ಶಾಲೆಯ ವಿರುದ್ಧ ಪೊಲೀಸರ ಮೊರೆ ಹೋಗಲು ಪೋಷಕರು ಚಿಂತನೆ ಮಾಡಿದ್ದಾರೆ.

    ಪ್ರತಿಭಟನೆ ನಡೆಸುತ್ತಿರುವ ಪೋಷಕರ ಜೊತೆಗೆ ರಾಯಲ್ ಕಾನ್‍ಕಾರ್ಡ್ ಚೇರ್ಮನ್ ಎಲ್.ಆರ್ ಶಿವರಾಮೇಗೌಡ ಮಾತುಕತೆ ನಡೆಸಿದ್ದು, ಶಾಲೆಗೆ ಇಂದಿನಿಂದ ಮೂರು ದಿನಗಳ ಕಾಲ ರಜೆಯನ್ನು ಘೋಷಿಸಿದ್ದಾರೆ. ಅಲ್ಲದೇ ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

    ಒಟ್ಟು ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿತ್ತು. ಗಾಯಗೊಂಡಿರುವರಲ್ಲಿ ಇಬ್ಬರು ಮಕ್ಕಳು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.