Tag: wind

  • ಭಾರೀ ಮಳೆ, ಗಾಳಿಗೆ ಧರೆಗುರುಳಿದ ಮೊಬೈಲ್ ಟವರ್!

    ಭಾರೀ ಮಳೆ, ಗಾಳಿಗೆ ಧರೆಗುರುಳಿದ ಮೊಬೈಲ್ ಟವರ್!

    ಬೆಳಗಾವಿ/ವಿಜಯಪುರ: ಶನಿವಾರ ಸಂಜೆಯಿಂದ ಸುರಿದ ಭಾರೀ ಮಳೆ, ಗಾಳಿಗೆ ಮೊಬೈಲ್ ಟವರೊಂದು ಧರೆಗುರುಳಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದ ಪಂಚಾಯತ್ ಆವರಣದಲ್ಲಿರುವ ಮೊಬೈಲ್ ಟವರ್ ನೆಲ ಕಚ್ಚಿದೆ. ಅಲ್ಲದೇ ಕೆಲ ಮನೆಗಳ ಹಂಚುಗಳು, ತಗಡಿನ ಶೆಡ್ಡುಗಳು ಕೂಡ ಗಾಳಿ ರಭಸಕ್ಕೆ ಹಾರಿಹೋಗಿವೆ. ಕೆಲ ಮರಗಳು ಕೂಡ ಉರುಳಿ ಬಿದ್ದಿವೆ.

    ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಸಂಬಂಧ ದೊಡ್ಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಜನ ತತ್ತರಿಸಿ ಹೋಗಿದ್ದು, ಜಿ. ಸಿಂದಗಿ ತಾ. ಮುಳಸಾವಳಗಿ ಗ್ರಾಮದಲ್ಲಿ ಬಿರುಗಾಳಿಗೆ ಮನೆಯ ಮೇಲಿದ್ದ ತಗಡಿನ ಮೇಲ್ಛಾವಣಿ ಹಾರಿ ಹೋಗಿದೆ. ಸಾಹೇಬಗೌಡ ಈರ್ ಎಂಬವರಿಗೆ ಸೇರಿದ ತಗಡಿನ ಮನೆ ಇದಾಗಿದೆ.

    ಭಾರೀ ಪ್ರಮಾಣದ ಮಳೆ, ಗಾಳಿಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು. ಕಳೆದ ರಾತ್ರಿಯಿಂದ ಜಿಲ್ಲೆಯ ಹಲವೆಡೆ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳು, ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿ ಬಿದ್ದಿವೆ. ಒಟ್ಟಾರೆಯಾಗಿ ಭಾರೀ ಬಿರುಗಾಳಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

  • ಕಲಬುರಗಿಯಲ್ಲಿ ಬಿರುಗಾಳಿಗೆ ಜನ ತತ್ತರ- ಧರೆಗುರುಳಿದ ರೇವಣ ಸಿದ್ದೇಶ್ವರ ಮೂರ್ತಿ

    ಕಲಬುರಗಿಯಲ್ಲಿ ಬಿರುಗಾಳಿಗೆ ಜನ ತತ್ತರ- ಧರೆಗುರುಳಿದ ರೇವಣ ಸಿದ್ದೇಶ್ವರ ಮೂರ್ತಿ

    ಕಲಬುರಗಿ: ನಗರದಲ್ಲಿ ಶನಿವಾರ ಸಂಜೆ ಸುಮಾರಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಬೀಸಿದ ಬಿರುಗಾಳಿಗೆ ಜನ ಭಯಭೀತರಾಗಿದ್ದಾರೆ.

    ಕಲಬುರಗಿಯ ರಟಕಲ್ ದೇವಸ್ಥಾನದಲ್ಲಿರುವ 56 ಅಡಿಯ ರೇವಣ್ಣ ಸಿದ್ದೇಶ್ವರ ಮೂರ್ತಿ ಧರೆಗುಳಿದಿದೆ. ಅದೃಷ್ಟವಶಾತ್ ಮಳೆಯ ಹಿನ್ನೆಲೆಯಿಂದಾಗಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಸಾವು-ನೋವು ಸಂಭವಿಸಿಲ್ಲ.

    ನಗರದ ಸೇಡಂ ರಸ್ತೆಯ ಇಎಸ್ ಐ ಆಸ್ಪತ್ರೆ ಸುತ್ತಮುತ್ತ ಬೀಸಿದ ಭಾರೀ ಬಿರುಗಾಳಿ ಭಯಂಕರ ಧೂಳೆಬ್ಬಿಸಿದ್ದು, ಸ್ಥಳೀಯರು ಈ ಭಯಂಕರ ಬಿರುಗಾಳಿ ಬೀಸುವ ದೃಶ್ಯ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಯೆಮೆನ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದ ಮೆಕ್ನು ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿಗೂ ಹಬ್ಬಿದ್ದು, ಕಡಲತಡಿಯ ನಿವಾಸಿಗಳು ಆತಂಕದಲ್ಲಿದ್ದಾರೆ. 2 ದಿನಗಳಿಂದ ಕಡಲ ಅಲೆಗಳ ಅಬ್ಬರ ಜೋರಾಗಿದೆ. ಕರಾವಳಿಗೆ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • ರಾಜ್ಯಾದ್ಯಂತ ಇಂದು ಕೂಡ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ!

    ರಾಜ್ಯಾದ್ಯಂತ ಇಂದು ಕೂಡ ಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ!

    ಬೆಂಗಳೂರು: ರಾಜ್ಯಾದ್ಯಂತ ಇಂದು ಕೂಡ ವರುಣ ಅಬ್ಬರಿಸಲಿದ್ದು, ಬೆಂಗಳೂರಿನಲ್ಲಿಯೂ ಸಂಜೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ಕಳೆದ ಒಂದು ತಿಂಗಳಿಂದ ಮಳೆಯಾಗುತ್ತಿದ್ದು, ಶುಕ್ರವಾರ ಕೂಡ ಭಾರಿ ಮಳೆಯಾಗಿದೆ. ಇಂದು ಕೂಡ ಗಾಳಿ, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

    ಅರಬ್ಬೀ ಸುಮುದ್ರದಲ್ಲಿ ವಾಯುಭಾರ ಕುಸಿತ, ಹಾಗೂ ಟ್ರಫ್ (ಮೋಡಗಳ ಸಾಲು) ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಸಂಜೆ ಕೂಡ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

  • ಕೆಆರ್​ಎಸ್ ಬಳಿ ವರುಣನ ಅವಾಂತರ – ಮರ ಬಿದ್ದು ಮೂವರು ಪ್ರವಾಸಿಗರ ಸಾವು

    ಕೆಆರ್​ಎಸ್ ಬಳಿ ವರುಣನ ಅವಾಂತರ – ಮರ ಬಿದ್ದು ಮೂವರು ಪ್ರವಾಸಿಗರ ಸಾವು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಬೃಂದಾವನದಲ್ಲಿ ಮಳೆ-ಗಾಳಿಗೆ ಮರ ಉರುಳಿಬಿದ್ದ ಪರಿಣಾಮ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಕೇರಳ ಮೂಲದ ವಿನೋದ್, ಹಿಲರ್ ಮತ್ತು ತಮಿಳುನಾಡು ಮೂಲದ ರಾಜಶೇಖರ್ ಮೃತ ದುರ್ದೈವಿಗಳು. ಬಿರುಗಾಳಿಗೆ ಮೂವತ್ತಕ್ಕೂ ಹೆಚ್ಚು ಮರಗಳು ಉಳಿಬಿದ್ದಿವೆ. ಮಂಗಳವಾರ ರಾತ್ರಿ ಸುಮಾರು ಏಳೂವರೆ ಸುಮಾರಿಗೆ ವಿಶ್ವವಿಖ್ಯಾತ ಕೆಆರ್‍ಎಸ್ ಬೃಂದಾವನ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಬೃಂದಾವನದ ಎಂಡಿಎಫ್ ಮತ್ತು ಬೋಟಿಂಗ್ ಪಾಯಿಂಟ್ ಬಳಿ ಎರಡು ಮರಗಳು ಉರುಳಿಬಿದ್ದಿವೆ.

    ಮರದ ಕೆಳಗೆ ನಾಲ್ವರು ಸಿಲುಕಿಕೊಂಡಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ತಕ್ಷಣ ಮರದಡಿ ಸಿಲುಕಿದವರನ್ನು ರಕ್ಷಿಸುವ ಯತ್ನ ನಡೆದಿದೆ. ಆದ್ರೆ ಅವರಲ್ಲಿ ಮೂವರು ಪ್ರವಾಸಿಗರು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಉಳಿದ ಓರ್ವನಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾಸನ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮೂವರ ಸಾವು

    ಹಾಸನ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮೂವರ ಸಾವು

    ಹಾಸನ: ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿರುವ ಘಟನೆ ಹಾಸನದ ಶಂಕರನಹಳ್ಳಿ ಬಳಿ ನಡೆದಿದೆ.

    ಗೋಪನಹಳ್ಳಿ ಗ್ರಾಮದ ರವಿ(56), ಪ್ರಸಾದ್(23), ಕಿಟ್ಟಿ(59) ಮೃತ ದುರ್ದೈವಿಗಳು. ಈ ಮೂವರು ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ವೇಳೆ
    ಗಾಳಿಗೆ ಕೆಳಗೆ ಬಿದ್ದಿದ್ದ ವಿದ್ಯತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಘಟನೆ ಹಿನ್ನೆಲೆಯಲ್ಲಿ ಸೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸ್ಥಳೀಯರ ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳು ಬರುವವರೆಗೂ ಮೃತರ ಶವಗಳನ್ನ ಸ್ಥಳದಿಂದ ಎತ್ತದಿರಲು ನಿರ್ಧಾರ ಮಾಡಿದ್ದು, ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

     ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ ಬಿರುಗಾಳಿ ಮಳೆ ಹಿನ್ನಲೆಯಲ್ಲಿ ಚಲಿಸುತ್ತಿದ್ದ ಕಾರ್ ಮೇಲೆ ವಿದ್ಯುತ್ ಕಂಬ ಬಿದ್ದಿರುವ ಘಟನೆ ಆನೆಪಾಳ್ಯ ಮುಖ್ಯ ರಸ್ತೆಯ ಎರಡನೇ ಕ್ರಾಸ್ ನಲ್ಲಿ ನಡೆದಿದೆ. ಮಿಲಿಟರಿ ಕಾಂಪೌಂಡ್ ಒಳಗಿದ್ದ ಬೃಹತ್ ಮರವೊಂದು ಕಾಂಪೌಂಡ್ ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದ ಪರಿಣಾಮ ಅದೇ ರಸ್ತೆಯ ಸಾಲಿನಲ್ಲಿದ್ದ ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿದಿದ್ದು, ಕಾರುಗಳು ಜಖಂಗೊಂಡಿವೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರ್ ನಲ್ಲಿ ಡ್ರೈವರ್ ಜೊತೆಗೆ ಮೂವರು ಆಕ್ಸೆಂಚರ್ ಕಂಪೆನಿಯ ನೌಕರರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಪರಿಣಾಮ ಒಂದು ಇಟಿಯೋಸ್ ಮತ್ತು ಹುಂಡೈ ಗೆಟ್ಜ್ ಕಾರು ಜಖಂಗೊಂಡಿದೆ.

  • ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡದಲ್ಲಿ ಭಾರೀ ಗಾಳಿ: ಹಾರಿ ಹೋದ 10 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಧಾರವಾಡ: ಜಿಲ್ಲೆಯ ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದಲ್ಲಿ ಭಾರಿ ಗಾಳಿಗೆ 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣೆಗಳು ಹಾರಿಹೋಗಿವೆ.

    ಇಂದು ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಗಾಳಿ ಬೀಸಿದ್ದರಿಂದ ಮನೆಯ ತಗಡಿನ ಮೇಲ್ಛಾವಣಿಗಳು ಹಾರಿಹೋಗಿವೆ. ವಾಸವಿದ್ದ ಮನೆಗಳ ಮೇಲ್ಛಾವಣೆಯ ತಗಡುಗಳು ಹಾರಿದ್ದರಿಂದ ಗ್ರಾಮದ ಜನರು ಬಯಲಲ್ಲಿ ಕೂರುವಂತಾಗಿದೆ. ಗ್ರಾಮದ ಕೆಲ ಮನೆಗಳ ಹೆಂಚುಗಳು ಸಹ ಭಾರೀ ಗಾಳಿಗೆ ಹಾರಿವೆ.

    ಇನ್ನು ಧಾರವಾಡ ನಗರದ ಮಂಗಳವಾರಪೇಟೆಯಲ್ಲಿ ಯಂಡಿಗೇರಿ ಎಂಬವರ ಮನೆಯ ಆವರಣದಲ್ಲಿಯ ತೆಂಗಿನ ಮರಕ್ಕೆ ಸಿಡಲು ತಾಗಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಅಗ್ನಿಶಾಮಕದಳದ ಸಿಬ್ಬಂದಿ ತೆಂಗಿನ ಮರಕ್ಕೆ ತಗುಲಿದ್ದ ಬೆಂಕಿಯನ್ನು ನಂದಿಸಿದ್ದಾರೆ.

     

  • ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಮಳೆ-ಗಾಳಿಗೆ ಹಾರಿದ 30ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ

    ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಸುಮಾರು 30ಕ್ಕೂ ಹೆಚ್ಚು ಮನೆಯ ಮೇಲ್ಛಾವಣೆಯ ತಗಡುಗಳು ಹಾರಿಹೋಗಿವೆ.

    ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದಲ್ಲಿ ದೇವಪ್ಪ, ಶಂಕ್ರಪ್ಪ ಹೊರಪೇಟೆ ಸೇರಿದಂತೆ ಇತರರ ಮನೆಯ ಮೇಲ್ಛಾವಣಿಗಳು ಹಾರಿಹೋಗಿವೆ. ನಿನ್ನೆ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ತಗಡಿನ ಮೇಲ್ಛಾವಣಿಯುಳ್ಳ ಮನೆಯವರು ಪಕ್ಕದ ಮನೆಗಳಲ್ಲಿ ಮಲಗಿದ್ದರು.

    ಮನೆಗಳ ಮೇಲ್ಛಾವಣೆಗಳು ಹಾರಿ ಹೋಗಿದ್ದರಿಂದ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಇದರಿಂದ ಕುಟುಂಬಸ್ಥರ ಬದುಕು ಬೀದಿಗೆ ಬಂದಂತಾಗಿದೆ. ಘಟನೆ ನಡೆದು ಕೆಲವು ಗಂಟೆಗಳು ಕಳೆದರೂ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

    ಬಳ್ಳಾರಿಯಲ್ಲಿ ತಂಪೆರದ ವರುಣ ದೇವ: ಬಿರುಬಿಸಿಲ ನಾಡು ಬಳ್ಳಾರಿಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮಳೆಯಾಗಿದೆ. ಮಳೆಯ ಆಗಮನದಿಂದ ಬಿಸಿಲಿನಿಂದ ಕಂಗಾಲಾಗಿದ್ದ ಜನರು ಸಂತೋಷಗೊಂಡಿದ್ದಾರೆ.

  • ವೀಡಿಯೋ: ಜೋರಾಗಿ ಬೀಸಿದ ಗಾಳಿಗೆ ಬಾಗಿಲಿನೊಂದಿಗೆ ತೂರಿಕೊಂಡು ಹೋದ 4ರ ಬಾಲಕಿ!

    ವೀಡಿಯೋ: ಜೋರಾಗಿ ಬೀಸಿದ ಗಾಳಿಗೆ ಬಾಗಿಲಿನೊಂದಿಗೆ ತೂರಿಕೊಂಡು ಹೋದ 4ರ ಬಾಲಕಿ!

    ವಾಷಿಂಗ್ಟನ್: 4 ವರ್ಷದ ಬಾಲಕಿಯೊಬ್ಬಳು ಮನೆಯ ಬಾಗಿಲು ತೆರೆಯೋಕೆ ಹೋದಾಗ ಜೋರಾಗಿ ಬೀಸಿದ ಗಾಳಿಗೆ ಬಾಗಿಲನ್ನ ಹಿಡಿದುಕೊಂಡೇ ಪಕ್ಕಕ್ಕೆ ತೂರಿಕೊಂಡು ಹೋದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

    ಕಾರಿನಿಂದ ಇಳಿದ 4 ವರ್ಷದ ಮ್ಯಾಡಿಸನ್ ಗರ್ಡನರ್ ತನ್ನ ತಾಯಿಗಿಂತಲೂ ಮೊದಲೇ ಬಂದು ಮನೆಯ ಬಾಗಿಲನ್ನ ತೆರೆಯುತ್ತಾಳೆ. ಬಾಗಿಲು ತೆರೆದೊಡನೆ ಜೋರಾಗಿ ಗಾಳಿ ಬೀಸಿದ್ದು, ಬಾಗಿಲಿನ ಸಮೇತ ಪಕ್ಕಕ್ಕೆ ತೂರಿಕೊಂಡು ಹೋಗಿದ್ದಾಳೆ. ಆಕೆ ಬಗಿಲಿನ ಚಿಲಕ ಹಿಡಿದುಕೊಂಡಿದ್ದರಿಂದ ಬಾಗಿಲಲ್ಲೇ ನೇತಾಡಿದ್ದು ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಬಳಿಕ ಮ್ಯಾಡಿಸನ್ ತಾಯಿ ಬ್ರಿಟನಿ ಓಡಿಬಂದು ಮಗಳನ್ನ ರಕ್ಷಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಮನೆ ಮುಂದೆ ಹಾಕಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ 9 ಸೆಕೆಂಡ್‍ಗಳ ವೀಡಿಯೋವನ್ನ ಬ್ರಿಟನಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಈವರೆಗೆ 15 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಅಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.

    https://www.facebook.com/brittanygardner11/videos/10211952487671221/