Tag: wind

  • ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ- ಹಾರಿಹೋದ ಮೇಲ್ಛಾವಣಿ, ಧರೆಗೆ ಉರುಳಿದ ವಿದ್ಯುತ್ ಕಂಬಗಳು

    ರಾಜ್ಯದಲ್ಲಿ ಬಿರುಗಾಳಿ ಸಹಿತ ಮಳೆ- ಹಾರಿಹೋದ ಮೇಲ್ಛಾವಣಿ, ಧರೆಗೆ ಉರುಳಿದ ವಿದ್ಯುತ್ ಕಂಬಗಳು

    ಹಾವೇರಿ/ಮಂಡ್ಯ/ಕೋಲಾರ: ರಾಜ್ಯದಲ್ಲಿ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

    ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹಲವೆಡೆ ಬಿರುಗಾಳಿ ಸಮೇತ ಧಾರಾಕಾರ ಮಳೆ ಸುರಿದಿದೆ. ತಾಲೂಕಿನ ಶಿರಬಡಗಿ, ಹತ್ತಿಮತ್ತೂರು, ಜಲ್ಲಾಪುರ, ಕಡಕೋಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿಗೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಕೆಲಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಅಲ್ಲದೆ ಶಿರಬಡಗಿ ಗ್ರಾಮದಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದರಿಂದ 50 ವರ್ಷದ ಶಂಕ್ರಪ್ಪ ಲಮಾಣಿ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ಮಂಡ್ಯದಲ್ಲಿ ಬೀಸಿದ ಬಿರುಗಾಳಿಗೆ ಹಲವೆಡೆ ಅವಾಂತರವಾಗಿದೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮ ಮತ್ತು ಮಂಡ್ಯ ತಾಲೂಕು ದುದ್ದ ಹೋಬಳಿ ಬಿಲ್ಲೇನಹಳ್ಳಿ ಗ್ರಾಮದಲ್ಲಿ ಲೈಟ್ ಕಂಬಗಳು ಧರೆಗುರುಳಿದೆ. ಅಲ್ಲದೆ ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ಭಾನುವಾರ ಸಂಜೆ ಬೀಸಿದ ಬಿರುಗಾಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.

    ಇನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಹಾಗೂ ಮಳೆಗೆ ಬೆಳೆ ನಾಶವಾಗಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ರೈತ ಗವಿಗೌಡರ ಮೂರು ಎಕರೆ ಪಪ್ಪಾಯಿ ಬೆಳೆ ನಾಶವಾಗಿದೆ. ರವಿ ಎಂಬವವರ ಎರಡು ಎಕರೆ ಪಪ್ಪಾಯಿ ಬೆಳೆ ನಾಶವಾಗಿದ್ದು, ರೈತ ಚಲುವೇಗೌಡರ ನಿರ್ಮಾಣ ಹಂತದಲ್ಲಿದ್ದ ಕೋಳಿಫಾರಂ ಧರೆಗುರುಳಿದೆ. ಸುಮಾರು 20 ಲಕ್ಷ ರೂ.ಗೆ ಹೆಚ್ಚು ನಷ್ಟವಾಗಿದೆ. ಬಿರುಗಾಳಿ ಮಳೆಗೆ ರೈತ ಕಂಗಾಲಾಗಿದ್ದಾರೆ.

    ಕೋಲಾರದಲ್ಲೂ ಬೀಸಿದ ಬಿರುಗಾಳಿಗೆ ನೂರು ವರ್ಷಗಳಷ್ಟು ಪುರಾತನ ಅರಳಿ ಮರ ಧರೆಗೆ ಬಿದ್ದಿದೆ. ಕೋಲಾರ ತಾಲೂಕು ಕೆ. ಮಲ್ಲಾಂಡಹಳ್ಳಿ ಗ್ರಾಮದ ಅಶ್ವಥ ಕಟ್ಟೆಯಲ್ಲಿದ್ದ ಅರಳಿಮರ ಕಳೆದ ರಾತ್ರಿ ಇದ್ದಕ್ಕಿದ್ದಂತೆ ಮುರಿದು ಬಿದ್ದಿದೆ. ಮರ ಗ್ರಾಮದ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಗ್ರಾಮದ ಜನರಿಗೆ ರಸ್ತೆ ಸಂಪರ್ಕ ಬಂದ್ ಆಗಿದೆ. ಕೂಡಲೇ ಅರಣ್ಯ ಇಲಾಖೆಯವರು ಮರ ತೆರವುಗೊಳಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

  • ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ..!

    ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿ ಕಂಟ್ರೋಲ್ ರೂಂ ಮೇಲ್ವಿಚಾರಕನ ದರ್ಬಾರ್ ಶುರುವಾಗಿದ್ದು, ಇವರಿಗೆ ಗಾಳಿ ಬೀಸೋದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಅನ್ನೋ ಪ್ರಶ್ನೆಯೊಂದು ಎದ್ದಿದೆ.

    ಬೆಂಗಳೂರು ಮಹಾನಗರ ಪಾಲಿಕೆಯ ಕ್ಲಾಸ್ 4 ನೌಕರ ಸುಬ್ರಮಣ್ಯ ಅಂಧ ದರ್ಬಾರ್ ಮಾಡುತ್ತಿದ್ದು, ಇವರು ಬಿಬಿಎಂಪಿಯ ಕೊಠಡಿಯ ಕಂಟ್ರೋಲ್ ರೂಮಿನ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದಾರೆ. ಮರ ಕಡಿಯುವರು, ಪಾಲಿಕೆ ಕೆಳ ವರ್ಗದ ನೌಕರರನ್ನು ಈಗ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೇಲ್ವಿಚಾರಕ ಗಾಳಿ ಬೀಸಿಕೊಳ್ಳುತ್ತಿರೋ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳೆದ 3- 4 ವರ್ಷಗಳಿಂದ ಕಂಟ್ರೋಲ್ ರೂಂ ಜೊತೆ ಎಲ್ಲ ಕಂಟ್ರೋಲ್ ಇರುವ ನೌಕರನಾಗಿದ್ದು, ಮಾತು ಶುರು ಮಾಡಿದರೆ ಸಾಕು ಕಮೀಷನರ್, ಮಿನಿಸ್ಟರ್ ಹೆಸರು ಹೇಳುತ್ತಾರೆ. ಇವರ ಅಡಿಯಲ್ಲಿ ಬರುವ ಕೆಳ ವರ್ಗದ ನೌಕರರನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಲ್ವಿಚಾರಕ ಚೇರ್ ಮೇಲೆ ಕುಳಿತುಕೊಂಡು ಮೊಬೈಲ್ ಬಳಸುತ್ತಿದ್ದಾರೆ. ಆದರೆ ಅವರ ಪಕ್ಕದ ಎರಡನೇ ಚೇರ್ ಮೇಲೆ ಕೆಳ ನೌಕರ ಕುಳಿತುಕೊಂಡು ಅವರಿಗೆ ಗಾಳಿ ಬೀಸುತ್ತಿದ್ದಾರೆ. ಸರ್ಕಾರಿ ಸಂಬಳ ಕೊಡುವುದು ಕಚೇರಿಯ ಕೆಲಸವನ್ನು ಮಾಡುವುದಕ್ಕೆ, ಆದರೆ ಮೇಲ್ವಿಚಾರಕ ತನಗೆ ಗಾಳಿ ಬೀಸಿಕೊಳ್ಳುವ ಮೂಲಕ ಗಾಳಿ ಬೀಸುವುದಕ್ಕೂ ಸರ್ಕಾರಿ ಸಂಬಳ ಕೊಡಬೇಕಾ ಎಂಬ ಮಾತುಗಳು ಕೇಳಿ ಬರುತ್ತಿದೆ.

    ಮೇಲ್ವಿಚಾರಕನು ಪಾಲಿಕೆ ವರ್ಗಾವಣೆ, ನೇಮಕಾತಿ, ವ್ಯಜ್ಯಗಳನ್ನ ಬರೀ ಅವಾಜ್ ಹಾಕುತ್ತಲೇ ಬಗೆಹರಿಸುವ ಮಾಸ್ಟರ್ ಎಂಬ ಮಾತು ಕೂಡ ಇದೆ. ಆದರೆ ಇವರು ಕೆಳವರ್ಗದ ಜನರಿಂದ ಗಾಳಿ ಬೀಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿರುಗಾಳಿ ಸಹಿತ ರಾತ್ರಿ ಸುರಿದ ಭಾರೀ ಮಳೆಗೆ 6 ಮನೆಗಳಿಗೆ ಹಾನಿ

    ಬಿರುಗಾಳಿ ಸಹಿತ ರಾತ್ರಿ ಸುರಿದ ಭಾರೀ ಮಳೆಗೆ 6 ಮನೆಗಳಿಗೆ ಹಾನಿ

    ಚಿತ್ರದುರ್ಗ: ಬಿರುಗಾಳಿ ಸಹಿತ ರಾತ್ರಿ ಸುರಿದ ಭಾರೀ ಮಳೆಗೆ 6 ಮನೆಗಳು ಹಾನಿಗೀಡಾದ ಘಟನೆ ಚಿತ್ರದುರ್ಗ ತಾಲೂಕಿನ ದೊಡ್ಡಾಲಘಟ್ಟ ಗ್ರಾಮದಲ್ಲಿ ನಡೆದಿದೆ.

    ರಂಗಪ್ಪ ಎಂಬವರ ಮೇಲೆ ಶೀಟ್ ಬಿದ್ದು ಗಾಯವಾಗಿದೆ. ರಾತ್ರಿ ಸುರಿದ ಮಳೆಗೆ ಮನೆಯ ಮೇಲ್ಛಾವಣಿಯ ಶೀಟು ಕುಸಿದಿದೆ. ಅಲ್ಲದೆ ರಂಗಪ್ಪ ಅವರ ಮೇಲೆ ಕಬ್ಬಿಣದ ತುಂಡು ಬಿದ್ದು ಗಾಯಗೊಂಡಿದ್ದಾರೆ. ರಾತ್ರಿ ಬೀಸಿದ ಬಿರುಗಾಳಿಗೆ ನಾಗರಾಜಪ್ಪ, ಗೀತಮ್ಮ, ಗೋವಿಂದಪ್ಪ, ರಂಗಪ್ಪ, ಕರಿಯಮ್ಮ, ರೇಣುಕಮ್ಮ ಎಂಬವರ ಮನೆಗಳಿಗೂ ಹಾನಿ ಆಗಿದೆ.

    ಮನೆಯ ಶೀಟ್‍ಗಳು ಹಾರಿ ಹೋದ ಕಾರಣ ಸಂತ್ರಸ್ತ ಕುಟುಂಬಗಳು ರಾತ್ರಿಯಿಡೀ ಪರದಾಡಿದ್ದಾರೆ. ಅಷ್ಟೇ ಅಲ್ಲದೇ ಬಿರುಗಾಳಿ, ಮಳೆ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಸಂತ್ರಸ್ತರು ಪರದಾಡಿದ್ದಾರೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಕಳೆದು ಎರಡು ದಿನದಿಂದ ವರ್ಷದ ಮಳೆ ಆರಂಭವಾಗಿದ್ದು, ಭಾನುವಾರ ಸಂಜೆ ಮೈಸೂರು ಮತ್ತು ನೆಲಮಂಗಲದಲ್ಲಿ ಬಿರುಗಾಳಿ ಸಹಿತ ವರುಣನ ಆರ್ಭಟವಾಗಿದೆ. ಇತ್ತೀಚೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲೂ ಹದವಾದ ಮಳೆಯಾಗಿತ್ತು. ಈಗ ಮೈಸೂರಿನಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಭೂಮಿಗೆ ವರುಣ ತಂಪೆರೆದಿದ್ದಾನೆ. ಮೊದಲ ಮಳೆಗೆ ಮೈಸೂರಿಗರು ಹರ್ಷಿತರಾಗಿದ್ದಾರೆ. ಆದರೆ ವರ್ಷದ ಮೊದಲ ಮಳೆಗೆ ಮರ ಧರೆಗುರುಳಿದಿದ್ದು, ಕಾರು ಜಖಂ ಆಗಿದೆ.

    ಮಳೆ ಗಾಳಿಯ ಅಬ್ಬರಕ್ಕೆ ಧರೆಗೆ ಶಂಕರ ಮಠದ ಮುಂಭಾಗದ ರಸ್ತೆಯಲ್ಲಿ ಮಾವಿನ ಮರ ಧರೆಗುರುಳಿದ ಪರಿಣಾಮ ಕಾರು ಜಖಂ ಆಗಿದ್ದು, ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು. ಇತ್ತ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಮುದ್ದಲಿಂಗನಹಳ್ಳಿ ಭಾಗದಲ್ಲಿ ಅಕಾಲಿಕ ಮಳೆಯಾಗಿದ್ದು, ಬಿರುಗಾಳಿ ಸಹಿತ ವರುಣನ ಆರ್ಭಟ ಮಾಡಿದ್ದಾನೆ. ಅಕಾಲಿಕ ಮಳೆ ದ್ವಿಚಕ್ರ ವಾಹನ ಸವಾರರ ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಡೆಗೋಡೆ ಸಮೇತ ಕುಸಿದು ಬಿದ್ದ ರಸ್ತೆ: ಮಡಿಕೇರಿ-ಕೇರಳ ಸಂಪರ್ಕ ಕಟ್

    ತಡೆಗೋಡೆ ಸಮೇತ ಕುಸಿದು ಬಿದ್ದ ರಸ್ತೆ: ಮಡಿಕೇರಿ-ಕೇರಳ ಸಂಪರ್ಕ ಕಟ್

    ಮಡಿಕೇರಿ: ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಕೊಡಗು ಅಂತಾರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ 89 ಯನ್ನು ಬಂದ್ ಮಾಡಲಾಗಿದೆ.

    ವಿರಾಜಪೇಟೆ ತಾಲೂಕಿನ ಗೊಣಿಕೊಪ್ಪ, ಶ್ರಿಮಂಗಲ ಕ್ಯಾಲಿಕಟ್ ಸಂಪರ್ಕ ಕಲ್ಪಿಸುವ ರಸ್ತೆಯ ಪೊಕಳತೊಡು ಎಂಬಲ್ಲಿ ತಡೆಗೋಡೆ ಸಮೇತ ರಸ್ತೆ ಕುಸಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇದೀಗ ಸ್ಥಳೀಯ ನಿವಾಸಿಗಳಲ್ಲಿನ ಆತಂಕ ಮತ್ತಷ್ಟು ಹೆಚ್ಚಿದೆ.

    ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳುವ ಬಸ್ ಸಂಚಾರ ಅಸ್ತವ್ಯಸ್ತವಾಗಿದೆ. ಮೊಬೈಲ್ ನೆಟವರ್ಕ್ ಇಲ್ಲದೆ ಗರುವಾರದಿಂದ ಮನೆಯರನ್ನು ಸಂಪರ್ಕಿಸಲು ಸಾಧ್ಯವಾಗದೇ ಜನರ ಪರದಾಡುತ್ತಿದ್ದಾರೆ. ಇದನ್ನೂ ಓದಿ: ಮಹಾಮಳೆಗೆ ಧರೆ ಕುಸಿತ – ಹತ್ತಾರು ಗ್ರಾಮಗಳ ಸಂಪರ್ಕ ಕಟ್

    ಮಹಾಮಳೆಯಿಂದ ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಸೇನಾ ಪಡೆಯ ಎರಡು ತುಕಡಿಯ ಸಹಾಯದಿಂದ ಇಂದು ನಡೆಯುತ್ತಿದೆ. ಈಗಾಗಲೇ ಮಳೆಯಲ್ಲಿ ನಿರಾಶ್ರಿತರಾದವರಿಗೆ 10 ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಗುಡ್ಡದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಪ್ರಯತ್ನಿಸಲಾಗುತ್ತಿದೆ. ಕೊಡಗಿನಲ್ಲಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಕ್ಕೆ ಕಾರಣವಾಗಿರುವ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಯ ಉಪವಿಭಾಗೀಯ ಕಚೇರಿಯನ್ನೇ ಮಡಿಕೇರಿಯಲ್ಲಿ ಇಂದಿನಿಂದ ತೆರೆಯಲಾಗುತ್ತಿದೆ.

    7 ದಿನಗಳಲ್ಲಿ ರಸ್ತೆ ದುರಸ್ತಿ ಕಾರ್ಯಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಂಡು ಈಗಾಗಲೇ ಸಂಪರ್ಕ ಕಳೆದುಕೊಂಡ ರಸ್ತೆಗಳ ದುರಸ್ತಿ ನಡೆಸಲಾಗುವುದು. ಸಂಚಾರಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ಆದ್ಯತೆಯಂತೆ ಕ್ರಮ ಕೈಗೊಳ್ಳಲಾಗುತ್ತದೆ. ಮಳೆ ಕಡಮೆಯಾದ ಕೂಡಲೇ ಹಾಳಾಗಿರುವ ರಸ್ತೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದಿರುವ ಸಮಸ್ಯೆಗಳಿಗೆ ಪರಿಹಾರವಾಗಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

    ಈಗಾಗಲೇ ಸ್ಥಳೀಯರ ನೆರವಿನಿಂದ ಸಂತ್ರಸ್ತರನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ನೀರು ಹರಿವು ಹೆಚ್ಚಾಗಿರುವ ಕಡೆಗಳಿಗೆ ತೆರಳಲು ಅಸಾಧ್ಯವಾಗಿರುವ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬೇಕಿದೆ ಅದರೆ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಅ ಸ್ಥಳಗಳಿಗೆ ತಲುಪಲು ಕಷ್ಟಕರವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 18 ವರ್ಷಗಳಿಂದ ಅನ್ನ ಆಹಾರ ಸೇವಿಸಿಯೇ ಇಲ್ಲ- ಗಾಳಿ ಬೆಳಕಲ್ಲೇ ಜೀವನ

    18 ವರ್ಷಗಳಿಂದ ಅನ್ನ ಆಹಾರ ಸೇವಿಸಿಯೇ ಇಲ್ಲ- ಗಾಳಿ ಬೆಳಕಲ್ಲೇ ಜೀವನ

    ಕಾರವಾರ: ಒಂದು ದಿನ ಉಪವಾಸವಿದ್ದರೇ ಪ್ರಾಣ ಹೋದಂತಹ ಅನುಭವವಾಗುತ್ತದೆ. ಆದರೆ ಇಲ್ಲೊಬ್ಬರು ಅನ್ನ ಆಹಾರ ಸೇವಿಸದೇ ಬರೊಬ್ಬರಿ 18 ವರ್ಷಗಳಿಂದ ಗಾಳಿ ಬೆಳಕು ಸೇವಿಸಿ ಬದುಕಿದ್ದಾರೆ.

    ಎಲಿಟಾಮ್(56) 15 ವರ್ಷದಿಂದ ಆಹಾರ ಸೇವಿಸದೆ ಬದುಕಿರುವ ವ್ಯಕ್ತಿ. ಇವರು ಅಮೆರಿಕಾ ಪ್ರಜೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಅಶ್ವಿನಿಧಾಮದಲ್ಲಿ ಕಾಯಕಲ್ಪ ಚಿಕಿತ್ಸೆ ಪಡೆಯಲು ಬಂದಿದ್ದಾರೆ.

    ಕುಟುಂಬ ನಿರ್ವಹಣೆಗಾಗಿ ತನ್ನ ಹಸಿವನ್ನು ನೀಗಿಸಿಕೊಳ್ಳಲು ಭಾರತೀಯ ಯೋಗ, ಧ್ಯಾನದ ಕಡೆ ವಾಲಿ ಹಂತಹಂತವಾಗಿ ಆಹಾರ ತ್ಯಜಿಸಿ ತಿಂಗಳಿಗೊಮ್ಮೆ ಎರಡು ಲೀಟರ್ ನೀರು ಕುಡಿದು, ಕೇವಲ ಗಾಳಿ, ಸೂರ್ಯನ ಬೆಳಕನ್ನ ತನ್ನ ಶರೀರಕ್ಕೆ ಹೊಂದಿಸಿಕೊಂಡಿದ್ದಾರೆ. ಈ ಮೂಲಕ ದೇಹಕ್ಕೆ ಆಹಾರ ಮುಖ್ಯವಲ್ಲ ಎನ್ನುವುದನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ. ಇದು ನಿಜವಾಗಿಯೂ ಶ್ಲಾಘನೀಯ ಎಂದು ಅಶ್ವಿನಿಧಾಮದ ವೈದ್ಯ ಡಾ.ರವಿರಾಜ್ ಕಡ್ಲೆ ಹೇಳಿದ್ದಾರೆ.

    ನಮ್ಮ ದೇಹವು ಮಿದುಳಿನ ಮಾತನ್ನು ಕೇಳುತ್ತದೆ. ಉಪವಾಸಕ್ಕೂ ಮೊದಲು ಮಿದುಳು ಅದಕ್ಕೆ ಸಿದ್ಧವಾಗುವಂತೆ ಮಾಡಬೇಕು. ಇದು ನನಗೆ ಪ್ರಾಣಾಯಾಮದಿಂದ ಸಾಧ್ಯವಾಗಿದೆ. 18 ವರ್ಷದ ಹಿಂದೆ ಅನಾರೋಗ್ಯ ಕಾಣಿಸಿಕೊಂಡಾಗ ಮಾಂಸಾಹಾರವನ್ನು ಬಿಟ್ಟೆ. ನಂತರ ಸಸ್ಯಹಾರ, ದ್ರವ ಆಹಾರವನ್ನು ತ್ಯಜಿಸಿದೆ. ಮಿದುಳಿನ ನಿಗ್ರಹದಿಂದ ಇದೆಲ್ಲ ಸಾಧ್ಯ. ಧ್ಯಾನದ ಮೂಲಕ ನಾನು ನನ್ನ ಮನಸ್ಸನ್ನು ನಿಯಂತ್ರಿಸಿಕೊಂಡಿದ್ದೇನೆ ಎಂದು ಎಲಿಟಾಮ್ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಗಾಳಿಗೆ ಹಾರಿ ಬಿತ್ತು ಶಾಲೆಯ ಮೇಲ್ಛಾವಣಿ: ತಪ್ಪಿದ ಭಾರೀ ಅನಾಹುತ

    ಮೈಸೂರು: ಭಾರೀ ಗಾಳಿಯಿಂದಾಗಿ ಶಾಲೆಯ ಹೊಸ ಕಟ್ಟಡದ ಮೇಲ್ಛಾವಣಿ ಹಾರಿ ಬಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರತ್ನಾಪುರಿ ಗ್ರಾಮದಲ್ಲಿ ಸಂಭವಿಸಿದೆ.

    ಗ್ರಾಮದ ವಿಶ್ವ ಶಾಂತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರು ಜನರು ಸೇರಿದ್ದರು. ಈ ವೇಳೆ ಗಾಳಿಯ ಬೀಸಿದ ಪರಿಣಾಮ, ಶಾಲೆಯ ಹೊಸ ಕಟ್ಟಡದ ಎಲ್ಲ ಕೊಠಡಿಗಳ ಶೀಟ್‍ಗಳು (ಮೇಲ್ಛಾವಣಿ) ಹಾರಿ ಬಿದ್ದಿದ್ದು, ಕೆಳಗೆ ಸಿಲುಕಿದ ಕೆಲವರಿಗೆ ಗಾಯವಾಗಿದೆ.

    ಕಾರ್ಯಕ್ರಮದಲ್ಲಿ ಬಿಐಓ ರೇವಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಾಳುಗಳನ್ನು ಹುಣಸೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ ತಾಲೂಕಿನಲ್ಲಿ ಸಾಧಾರಣ ಮಳೆ ಕಂಡುಬಂದರೆ, ಚಾರ್ಮಾಡಿ, ಕಳಸ, ಬಾಳೆಹೊನ್ನೂರು ಭಾಗದಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದೆ. ಮಲೆನಾಡು ಭಾಗ ಮಂಜಿನಿಂದ ಮುಚ್ಚಿಕೊಂಡಿದ್ದು, ಭಾರೀ ಮಳೆಯಿಂದಾಗಿ ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ.

    ರಾಜ್ಯದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ಇನ್ನೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದರು.

  • ಗಮನಿಸಿ, ರಾಜ್ಯದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಗಾಳಿ ಸಹಿತ ಭಾರೀ ಮಳೆ!

    ಗಮನಿಸಿ, ರಾಜ್ಯದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಗಾಳಿ ಸಹಿತ ಭಾರೀ ಮಳೆ!

    ಬೆಂಗಳೂರು: ಕೆಲ ದಿನಗಳ ಕಾಲ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟಿಸಲು ಮುಂದಾಗಿದ್ದಾನೆ. ರಾಜ್ಯದಲ್ಲಿ ಇಂದಿನಿಂದ ಒಂದು ವಾರಗಳ ಕಾಲ ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

    ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಂಭವ ಇದೆ. ಇನ್ನೂ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಂಭವ ಇದೆ. ಈಗಾಗಲೇ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈಗಾಗಲೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಬೆಂಗಳೂರು ಸೇರಿದಂತೆ ಇನ್ನು ಕೆಲವು ಜಿಲ್ಲೆಗಳಲ್ಲಿ ನಿರಂತರವಾಗಿ ಗಾಳಿ ಸಮೇತ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಅನೇಕ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬ ಧರೆಗುರುಳಿದ್ದು, ಮನೆಗಳ ಗೋಡೆಗಳು ಕುಸಿದು ಬಿದ್ದವು. ಅಷ್ಟೇ ಅಲ್ಲದೇ ಕೆಲವು ಸೇತುವೆಗಳು ಬಿರುಕು ಕಂಡಿದ್ದು, ಬಂಟ್ವಾಳ ಮತ್ತು ಮಂಗಳೂರು ಸಂಪರ್ಕ ಕಲ್ಪಿಸುವ ಫಲ್ಗುಣಿ ಸೇತುವೆ ಕುಸಿದು ಬಿದ್ದಿತ್ತು.

  • ಗಾಳಿ ಸಹಿತ ಭಾರೀ ಮಳೆ- ಧರೆಗುರುಳಿತು ಕೊಡಗಿನ ಡಿಸಿ ಮನೆ ಮುಂದಿದ್ದ ಮರಗಳು!

    ಗಾಳಿ ಸಹಿತ ಭಾರೀ ಮಳೆ- ಧರೆಗುರುಳಿತು ಕೊಡಗಿನ ಡಿಸಿ ಮನೆ ಮುಂದಿದ್ದ ಮರಗಳು!

    ಮಡಿಕೇರಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ಮಳೆಯ ಅವಾಂತರದ ಬಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರ ಬಂಗಲೆಗೂ ತಟ್ಟಿದೆ.

    ಶನಿವಾರ ಗಾಳಿ ಸಹಿತ ಸುರಿದ ಭಾರೀ ಮಳೆಯಿಂದಾಗಿ ಡಿಸಿ ಬಂಗಲೆಯ ಮುಂದಿದ್ದ ನಾಲ್ಕು ಮರಗಳು ಉರುಳಿ ಬಿದ್ದಿವೆ. ಡಿಸಿ ಮನೆಯ ಕಾವಲು ಸಿಬ್ಬಂದಿಯ ಮನೆ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

    ಮಾಹಿತಿ ದೊರೆತ ಬಳಿಕ ಇಂದು ಬೆಳಗ್ಗೆ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಮರ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

  • ರಾಜ್ಯಾದ್ಯಂತ ಭಾರೀ ಮಳೆ- ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕ ಸಿಡಿಲಿಗೆ ಬಲಿ

    ರಾಜ್ಯಾದ್ಯಂತ ಭಾರೀ ಮಳೆ- ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕ ಸಿಡಿಲಿಗೆ ಬಲಿ

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿದೆ. ಖಾಸಗಿ ಹವಾಮಾನ ಅಧ್ಯಯನ ಸಂಸ್ಥೆ ಸ್ಕೈಮೆಟ್ ಪ್ರಕಾರ ಸೋಮವಾರವೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದೆ. ಆದರೆ ಹವಾಮಾನ ಇಲಾಖೆ ಪ್ರಕಾರ ಇವತ್ತು ಅಧಿಕೃತವಾಗಿ ಮಾನ್ಸೂನ್ ವರ್ಷಧಾರೆ ಶುರುವಾಗಲಿದೆ.

    ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಬೆಳಗಾವಿ ಹಾಗೂ ಮಂಡ್ಯದಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಉಡುಪಿ, ಚಾಮರಾಜನಗರ, ತುಮಕೂರು, ಕಾರವಾರದಲ್ಲೂ ಭಾರೀ ಮಳೆಯಿಂದ ಹಾನಿ ಸಂಭವಿಸಿದೆ.

    ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದ ಹೊರವಲಯದಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಶಾಂತಪ್ಪ ಚುಳಕಿ(18) ಸಾವನ್ನಪ್ಪಿದ ಯುವಕನಾಗಿದ್ದು, ಈತ ಮರದ ಕೆಳಗೆ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಕಿತ್ತೂರ ತಹಶಿಲ್ದಾರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ರೈತ ಮಹಿಳೆ ಗಿರಿಜಮ್ಮ(35) ಬಲಿಯಾಗಿದ್ದಾರೆ. ಸಂಜೆ ಆರು ಗಂಟೆಯಲ್ಲಿ ಈ ಅವಘಡ ನಡೆದಿದೆ. ಮನೆಯ ಹಿಂದಿನ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮಹಿಳೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉಡುಪಿಯಲ್ಲಿಯೂ ವರ್ಷಧಾರೆ ಮತ್ತೆ ಮುಂದುವರಿದಿದೆ. ದಿನವಿಡೀ ಮೋಡ ಕವಿದಿದ್ದ ವಾತಾವರಣವಿದ್ದು, ಸೋಮವಾರ ತಡರಾತ್ರಿ ಗಾಳಿ ಸಹಿತ ಭಾರೀ ಮಳೆಯಾಗಿತ್ತು. ಸಂಜೆಯಾಗುತ್ತಿದ್ದಂತೆಯೇ ಮಳೆ ಸುರಿದಿದ್ದು, 24 ಗಂಟೆ ವಿದ್ಯುತ್ ಸಂಪರ್ಕವಿರಲಿಲ್ಲ. ಉಡುಪಿ, ಕಾಪು ತಾಲೂಕಿನಲ್ಲಿ ಇನ್ನೂ ವಿದ್ಯುತ್ ಪೂರೈಕೆ ಲಭ್ಯವಾಗಿಲ್ಲ. ಸದ್ಯ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಸಂಪರ್ಕ ರಿಪೇರಿಯಲ್ಲಿ ತೊಡಗಿದ್ದಾರೆ. ಮುಂದುವರೆದ ಮಳೆಯಿಂದಾಗಿ ಕರ್ತವ್ಯಕ್ಕೆ ಅಡ್ಡಿಯಾಗಿದ್ದು, ನಾಳೆಯವರೆಗೂ ವಿದ್ಯುತ್ ಪೂರೈಕೆ ಅಲಭ್ಯ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

    ಕಳೆದ ಒಂದು ವಾರದಿಂದ ಚಾಮರಾಜನಗರ ಜಿಲ್ಲೆಯಾದ್ಯಂತ ವರುಣ ಆರ್ಭಟ ಜೋರಾಗಿದೆ. ಮಳೆಯ ಆರ್ಭಟದಿಂದ ಜಿಲ್ಲೆಯ ಪ್ರಕೃತಿ ಸಂಪತ್ತು ಹಸಿರಾಗಿದೆ. ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನೂ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಗಳು ಕೆರೆಯಂತಾಗಿದೆ. ರಸ್ತೆಯಲ್ಲಿ ನೀರು ನಿಂತ ಕಾರಣ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.

    ಬಿಸಿಲ ಧಗೆಯಿಂದ ಬಸವಳಿದಿದ್ದ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕಳೆದ ಎರಡು ದಿನದಿಂದ ವರುಣ ಕೃಪೆ ತೋರಿದ್ದಾನೆ. ಕಾರವಾರ ಜಿಲ್ಲೆಯಾದ್ಯಾಂತ ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಕಾರವಾರ ನಗರದ ನಂದನಗದ್ದಾ ಅಂಬೇಡ್ಕರ್ ಕಾಲೋನಿಯ ದೀಪಕ್ ಗಣಪತಿ ಉಳ್ಸವಾರ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದ್ದು, ಮನೆಯ ಮಾಡಿ ಸಂಪೂರ್ಣ ಜಖಂ ಆಗಿದೆ. ಪರಿಣಾಮ ಒಂದು ಲಕ್ಷ ರುಪಾಯಿಯಷ್ಟು ಹಾನಿಯಾಗಿದೆ. ಇನ್ನೂ ಕಾರವಾರ ಕಡಲತೀರದಲ್ಲಿ ಬಿರುಸಿನ ಗಾಳಿ ಬೀಸುತಿದ್ದು, 5 ಅಡಿಗಳಷ್ಟು ಅಲೆಗಳು ಅಪ್ಪಳಿಸುತ್ತಿದ್ದು, ಪ್ರವಾಸಿಗರಿಗೆ ಹಾಗೂ ಮೀನುಗಾರರಿಗೆ ಸಮುದ್ರದ ಬಳಿ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

    ತುಮಕೂರು ಜಿಲ್ಲೆಯಲ್ಲಿ ಬಿರುಗಾಳಿ ಅವಾಂತರ ಸೃಷ್ಠಿಸಿದ್ದು, ತುರುವೇಕೆರೆ ತಾಲೂಕಿನ ದುಂಡಾ ಗ್ರಾಮದಲ್ಲಿ ಮರ ಮುರಿದು ಓರ್ವ ಸಾವು, ಮತ್ತೊರ್ವನಿಗೆ ಗಾಯ ಹಾಗೂ ಎರಡು ಎಮ್ಮೆಗಳು ಮೃತಪಟ್ಟಿವೆ. ನಡೆದಿದೆ. ಹೇಮಂತ್(38) ಸ್ಥಳದಲ್ಲೇ ಸಾವನ್ನಪ್ಪಿದ ಯುವಕನಾಗಿದ್ದು, ಮರ ಮುರಿದು ತಲೆ ಮೇಲೆ ಬಿದ್ದ ಪರಿಣಾಮ ಹೇಮಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೋಟದಿಂದ ಮನೆಗೆ ನಡೆದುಕೊಂಡು ಬರುವಾಗ ಈ ಅವಘಡ ಸಂಭವಿಸಿದೆ. ಇನ್ನೂ ಚೇಳೂರಿನಲ್ಲಿ ಎರಡು ಗುಡಿಸಲು ಮೇಲೆ ಬೇವಿನ ಮರ ಮುರಿದು ಬಿದ್ದಿದ್ದು, ರಂಗನಾಥ ಎಂಬವರಿಗೆ ಗಾಯ, ಎರಡು ಎಮ್ಮೆ-ಕರುಗಳು ಮೃತಪಟ್ಟಿದೆ. ಸೋಮವಾರ ರಾತ್ರಿ ಬಿಸಿದ ಬಿರುಗಾಳಿಯಲ್ಲಿ ಈ ಅವಘಡ ಸಂಭವಿಸಿದೆ.