Tag: Wind Power

  • ಅಧಿಕ ಪವನ ವಿದ್ಯುತ್‌ ಸಾಮರ್ಥ್ಯ – ಗುಜರಾತ್‌ ಹಿಂದಿಕ್ಕಿ ಕರ್ನಾಟಕಕ್ಕೆ ಪ್ರಥಮ ಸ್ಥಾನ

    ಅಧಿಕ ಪವನ ವಿದ್ಯುತ್‌ ಸಾಮರ್ಥ್ಯ – ಗುಜರಾತ್‌ ಹಿಂದಿಕ್ಕಿ ಕರ್ನಾಟಕಕ್ಕೆ ಪ್ರಥಮ ಸ್ಥಾನ

    – ಪವನ ವಿದ್ಯುತ್‌ ವಲಯಕ್ಕೆ ವರ್ಷದಲ್ಲಿ 1331.48 ಮೆ.ವ್ಯಾ. ಸಾಮರ್ಥ್ಯದ ಸೇರ್ಪಡೆ
    – ಹನುಮನ ನಾಡಿನಲ್ಲಿ ಪವನ ಶಕ್ತಿಯ ಸಾಧನೆ: ಜೋಶಿ ಶ್ಲಾಘನೆ

    ಬೆಂಗಳೂರು: ಕರ್ನಾಟಕ (Karnatraka) 2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ಕ್ಷೇತ್ರಕ್ಕೆ (Wind Power Capacity) 1331.48 ಮೆ.ವ್ಯಾ. ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

    ಬೆಂಗಳೂರಿನಲ್ಲಿ ಭಾನುವಾರ ಆಯೋಜಿಸಿದ್ದ ʼಗ್ಲೋಬಲ್ ವಿಂಡ್ ಡೇ 2025 ಪವನ್-ಉರ್ಜಾ ಪವರಿಂಗ್‌ ದಿ ಫ್ಯೂಚರ್ ಆಫ್ ಇಂಡಿಯಾ” ಸಮಾರಂಭದಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಅವರಿಂದ ಇಂಧನ ಸಚಿವ ಕೆ.ಜೆ.ಜಾರ್ಜ್‌ (KJ George) ಅವರು ಪ್ರಶಸ್ತಿ ಸ್ವೀಕರಿಸಿದರು.

    2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ವಲಯಕ್ಕೆ 1331.48 ಮೆ.ವ್ಯಾ. ಸಾಮರ್ಥ್ಯ ಸೇಪರ್ಡೆಗೊಳಿಸಿರುವ ರಾಜ್ಯ ಪ್ರಥಮ ಸ್ಥಾನದಲ್ಲಿದ್ದರೆ, 1136.37 ಮೆ.ವ್ಯಾ. ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. 954.74 ಮೆ.ವ್ಯಾ ಸೇರ್ಪಡೆಗೊಳಿಸಿರುವ ಗುಜರಾತ್‌ ಮೂರನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಇರಾನ್‌ನಲ್ಲಿ ಸಿಲುಕಿದ್ದಾರೆ ಕರ್ನಾಟಕದ 9 ವಿದ್ಯಾರ್ಥಿಗಳು – ಭಾರತಕ್ಕೆ ಕರೆತರುವಂತೆ ಮನವಿ

    ಕಳೆದ ಸಾಲಿನಲ್ಲಿ ಗುಜರಾತ್‌ ಮೊದಲ ಸ್ಥಾನ, ಕರ್ನಾಟಕ ಎರಡನೇ ಸ್ಥಾನ ಹಾಗೂ ತಮಿಳುನಾಡು ಮೂರನೇ ಸ್ಥಾನದಲ್ಲಿತ್ತು. ಪ್ರಸಕ್ತ ಸಾಲಿನಲ್ಲಿ ಈ ಎರಡೂ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.

    ವಿಶ್ವ ಪವನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಂಧನ ಸಚಿವ ಕೆ.ಜೆ.ಜಾರ್ಜ್‌,”2025ರ ಮೇ ವೇಳೆಗೆ ಪವನ ವಿದ್ಯುತ್ತಿನ ಸ್ಥಾಪಿತ ಸಾಮರ್ಥ್ಯ 7,351 ಮೆಗಾವ್ಯಾಟ್‌ನಷ್ಟಿತ್ತು. ಕಳೆದ ಆರ್ಥಿಕ ಸಾಲಿನಲ್ಲಿ 1,331 ಮೆಗಾವ್ಯಾಟ್‌ಗಳನ್ನು ಸೇರ್ಪಡೆಗೊಳಿಸಿ ದೇಶದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿದ್ದೇವೆ,” ಎಂದು ತಿಳಿಸಿದರು.

    ಇದು ಕೇವಲ ಅಂಕಿ-ಅಂಶವಲ್ಲ. ನಮ್ಮ ಬದ್ಧತೆ, ಯೋಜನೆಗಳನ್ನು ಕಾರ್ಯಗತಗೊಳಿಸುವ ನಮ್ಮ ಸಾಮರ್ಥ್ಯದ ಪ್ರತೀಕ. ರಾಜ್ಯದ ಕೈಗಾರಿಕೆಗಳಿಗೆ, ನಮ್ಮ ರೈತರಿಗೆ, ಮನೆಗಳಿಗೆ ಶುದ್ಧ ಇಂಧನ ಒದಗಿಸುವ ಇಚ್ಛಾ ಶಕ್ತಿಯಾಗಿದೆಎಂದು ಹೇಳಿದರು. ಇದನ್ನೂ ಓದಿ: ಹೆದರಿ ಬಂಕರ್‌ನಲ್ಲಿ ಕುಳಿತಿದ್ದೆವು, ರಸ್ತೆಗೆ ಇಳಿಯಲ್ಲ – ಇರಾನ್ ದಾಳಿಯ ಭೀಕರತೆ ಬಿಚ್ಚಿಟ್ಟ ಕರ್ನಾಟಕದ ಮಹಿಳೆ

     

     

    ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕದ ಹೆಜ್ಜೆಗಳು ಹೊಸತೇನಲ್ಲ. 2009ರಲ್ಲಿ ನವೀಕರಿಸಬಹುದಾದ ಇಂಧನ ನೀತಿಯನ್ನು ಪ್ರಕಟಿಸಿದ ದೇಶದ ಮೊದಲ ರಾಜ್ಯ ನಮ್ಮದು. ನಾವು ಇಂದು ಈ ಎತ್ತರಕ್ಕೆ ಏರಲು ಅಂದೇ ಅಡಿಪಾಯ ಹಾಕಲಾಗಿತ್ತು. ನವೀಕರಿಸಬಹುದಾದ ಇಂಧನ ನೀತಿ 2022–2027 ನಮ್ಮ ದೂರದೃಷ್ಟಿಯ ಪ್ರತೀಕ. ಕೇವಲ ಸಾಮರ್ಥ್ಯ ಸೇರ್ಪಡೆ ಮಾತ್ರವಲ್ಲದೇ, ನಾವೀನ್ಯತೆ, ಹೂಡಿಕೆ ಮತ್ತು ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೂಪಿಸಲಾದ ನೀತಿ ಇದು. ಐಎಸ್‌ಟಿಎಸ್‌ ಮತ್ತು ಐಎನ್‌ಎಸ್‌ಟಿಎಸ್‌ ಯೋಜನೆಗಳು, ಹೈಬ್ರಿಡ್ ಮಾದರಿಗಳು, ಹಳೆಯ ಟರ್ಬೈನ್‌ಗಳಿಗೆ ಮರುಶಕ್ತಿ ತುಂಬುವುದು ಸೇರಿದಂತೆ ಡಿಜಿಟಲೀಕರಣ ಮತ್ತು ಜಿಯೋ-ಟ್ಯಾಗಿಂಗ್ ಮೂಲಕ ಸುಲಲಿತ ವ್ಯವಹಾರವನ್ನು ಬೆಂಬಲಿಸುತ್ತಿದೆ ಎಂದು ವಿವರಿಸಿದರು.

    ಪ್ರಹ್ಲಾದ್‌ ಜೋಶಿ ಮಾತನಾಡಿ,ಕರ್ನಾಟಕದವನಾಗಿ ರಾಜ್ಯ ಪವನ ವಿದ್ಯುತ್‌ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಇದು ಹನುಮನ ಜನ್ಮ ಭೂಮಿ. ಇಲ್ಲಿ ವಿಶ್ವ ಪವನ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

    “ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಭಾರತ ಜಾಗತಿಕವಾಗಿ 4ನೇ ಸ್ಥಾನದಲ್ಲಿದ್ದು, 51.5 ಗಿಗಾವ್ಯಾಟ್‌ ಸಾಮರ್ಥ್ಯವನ್ನು ಈಗಾಗಲೇ ಸ್ಥಾಪಿಸಲಾಗಿದೆ. 2030ರ ವೇಳೆಗೆ ಒಟ್ಟಾರೆ ವಿದ್ಯುತ್‌ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಶೇ. 50ಕ್ಕೆ ಏರಿಸುವ ಜತೆಗೆ 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆ ನಿವ್ವಳ ಶೂನ್ಯದ ಗುರಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಪವನ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂಧು ತಿಳಿಸಿದರು.

    2030ರ ವೇಳೆಗೆ 500 ಗಿಗಾ ವ್ಯಾಟ್‌ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದು. ಈ ಪೈಕಿ 30 ಗಿಗಾವ್ಯಾಟ್‌ ಕಡಲಾಚೆಯ ಪವನ ಶಕ್ತಿಯೂ ಸೇರಿ ಒಟ್ಟು 100 ಗಿಗಾವ್ಯಾಟ್‌ ಪವನ ವಿದ್ಯುತ್‌ ಕ್ಷೇತ್ರದ್ದಾಗಿರಲಿದೆ. ದೇಶೀಯ ನಿಯೋಜನೆ ಮಾತ್ರವಲ್ಲದೇ ಜಾಗತಿಕ ಶುದ್ಧ ಇಂಧನ ಪೂರೈಕೆ ಸರಪಳಿಗಳ ಭಾಗವಾಗಿಯೂ ದೇಶ ದೃಢ ಹೆಜ್ಜೆ ಇರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು 3.5 ರಿಂದ 4 ಗಿ.ವ್ಯಾ. ಪವನ ಟರ್ಬೈನ್‌ಗಳು ಮತ್ತು ಘಟಕಗಳನ್ನು ರಫ್ತು ಮಾಡಿದೆ ಎಂದು ಹೇಳಿದರು.

  • ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ, ಲೋಡ್ ಶೆಡ್ಡಿಂಗ್ ಮಾಡಲ್ಲ: ಸುನೀಲ್ ಕುಮಾರ್

    ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ, ಲೋಡ್ ಶೆಡ್ಡಿಂಗ್ ಮಾಡಲ್ಲ: ಸುನೀಲ್ ಕುಮಾರ್

    ಬೆಂಗಳೂರು: ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆಯುಂಟಾಗಿದೆ, ವಿದ್ಯುತ್ ಕ್ಷಾಮವಿದೆ ಎಂದು ಕಾಂಗ್ರೆಸ್ ವಿನಾಕಾರಣ ಹುಯಿಲೆಬ್ಬಿಸುತ್ತಿದ್ದು, ವಾಸ್ತವ ವಿಚಾರವನ್ನು ಮರೆಮಾಚುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶದಿಂದಲೇ ಎಚ್ಚರಿಕೆ ವಹಿಸಿ ಕಲ್ಲಿದ್ದಲು ದಾಸ್ತಾನಿಗೆ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ರಾಜ್ಯದ ಸರಾಸರಿ ಬೇಡಿಕೆಯ ಅರ್ಧದಷ್ಟು ಭಾಗ ಈಗ ಸೋಲಾರ್ ಹಾಗೂ ಪವನಶಕ್ತಿ ಮೂಲದಿಂದ ಲಭಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಆರೋಪಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ ಬುಲ್ಡೋಜರ್ ಕಾರ್ಯಾಚರಣೆಗೆ ಹೆಚ್ಚಿದ ಒತ್ತಡ: ಬಿಜೆಪಿಯಲ್ಲಿ ಭಿನ್ನ ನಿಲುವು

    sunil kumar

    ಕೇಂದ್ರದಿಂದ ರಾಜ್ಯಕ್ಕೆ ಪ್ರತಿನಿತ್ಯ ಸರಾಸರಿ 13,500 ರಿಂದ 14,500 ರೇಕ್ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಎಲ್ಲ ವಿದ್ಯುತ್ ಸ್ಥಾವರಗಳ ಬೇಡಿಕೆಗೆ ಅಗತ್ಯವಾದ ಕಲ್ಲಿದ್ದಲು ಇದರಿಂದ ಲಭ್ಯವಾಗುತ್ತಿದೆ. ರಾಜ್ಯದಲ್ಲಿಂದು ಪ್ರತಿ ದಿನಕ್ಕೆ 10,400 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ರಾಜ್ಯದ ಇತಿಹಾಸದಲ್ಲೇ ಅತಿ ಹೆಚ್ಚು ಎನ್ನಬಹುದಾದ 14,800 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಕಳೆದ ಮಾರ್ಚ್ 21ರಂದು ಎದುರಾಗಿತ್ತು. ಆಗಲೂ ನಮಗೆ ಕಲ್ಲಿದ್ದಲು ಕೊರತೆ ಉಂಟಾಗಿರಲಿಲ್ಲ. ಹೀಗಿರುವಾಗ ಸಾಮಾನ್ಯ ಬೇಡಿಕೆಯ ದಿನಗಳಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

    BLACKSTONE

    ಎಂತಹ ಸ್ಥಿತಿ ನಿರ್ಮಾಣವಾದರೂ ಮೂರು ದಿನಗಳವರೆಗೆ ಕೊರತೆ ನೀಗಿಸುವಷ್ಟು ಕಲ್ಲಿದ್ದಲು ದಾಸ್ತಾನಿದೆ. ಕಾಂಗ್ರೆಸ್ ನಾಯಕರು ಸೃಷ್ಟಿಸಿರುವ ಈ ಅಪಪ್ರಚಾರದಿಂದ ರಾಜ್ಯದ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ಯಾವುದೇ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯವಾದರೆ ಅದು ಸರಬರಾಜಿನಲ್ಲಿ ಆದ ಸಮಸ್ಯೆಯೇ ವಿನಃ ಕಲ್ಲಿದ್ದಲು ಕೊರತೆಯಿಂದ ಆಗಿದ್ದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಜಾಮೀನು ನಿರಾಕರಿಸಿದ ಕೋರ್ಟ್

    SUNIL

    ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಇರದು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಕೃಷಿ ಪಂಪ್‌ಸೆಟ್ ಗಳಿಗೆ ಅಗತ್ಯವಾದ ವಿದ್ಯುತ್ ಬೇಡಿಕೆ ಪ್ರಮಾಣ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಬಳ್ಳಾರಿ ಹಾಗೂ ರಾಯಚೂರು ಶಾಖೋತ್ಪನ್ನ ಘಟಕದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆಯೇ ಹೊರತು ಕಲ್ಲಿದ್ದಲು ಕೊರತೆಗಾಗಿ ಅಲ್ಲ. ರಾಜ್ಯದಲ್ಲಿ ಪ್ರತಿನಿತ್ಯ 7,000 ಮೆಗಾ ವ್ಯಾಟ್ ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಬೇಸಿಗೆಯಲ್ಲಿ ವಿದ್ಯುತ್ ಕೊರತೆಯ ಪ್ರಶ್ನೆಯೇ ಉದ್ಭವಿಸದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಬಸವಣ್ಣನಂತೆ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ: ದೇಶಿಕೇಂದ್ರ ಮಹಾಸ್ವಾಮಿಜೀ 

    SOLAR

    ಕತ್ತಲುಭಾಗ್ಯದ ದುರ್ದಿನಗಳನ್ನು ಮರೆತಿಲ್ಲ: ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2004-2014ರ ಅವಧಿಯಲ್ಲಿ 725 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ರಾಜ್ಯಕ್ಕೆ ಪೂರೈಕೆಯಾಗಿತ್ತು. ಆದರೆ 2015 – 2022ರ ಅವಧಿಯಲ್ಲಿ 792 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ಕಲ್ಲಿದ್ದಲು ಪೂರೈಕೆ ಹಾಗೂ ವಿದ್ಯುತ್‌ಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿಯೂ ಕೇಂದ್ರ ಸರ್ಕಾರ ಹಿಂದುಳಿದಿಲ್ಲ. ಅಧಿಕಾರದ `ಅಭಾವ ವೈರಾಗ್ಯ’ ದಿಂದ ರೋಸಿ ಹೋಗಿರುವ ಕಾಂಗ್ರೆಸ್ ಕರ್ನಾಟಕದಲ್ಲಿ ವಿದ್ಯುತ್ ಅಭಾವ ಇದೆ ಎಂಬ ಪ್ರಹಸನ ಸ್ರಷ್ಟಿಸಿದರೆ ಜನರು `ಶಾಕ್ ಟ್ರೀಟ್ ಮೆಂಟ್’ ನೀಡುತ್ತಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿದ್ದಾಗ ರಾಜ್ಯಕ್ಕೆ ನೀಡಿದ್ದ `ಕತ್ತಲು ಭಾಗ್ಯದ’ ದುರ್ದಿನಗಳನ್ನು ಸಾರ್ವಜನಿಕರು ಇನ್ನೂ ಮರೆತಿಲ್ಲ. ಅಪಪ್ರಚಾರ ನಡೆಸುವಾಗ ಹತ್ತು ಬಾರಿ ಯೋಚಿಸಿ ಅಡಿ ಇಡಲಿ ಎಂದು ವ್ಯಂಗ್ಯವಾಡಿದ್ದಾರೆ.