ಆಕ್ಲೆಂಡ್: ಕಾಲಿನ್ ಮನ್ರೊ, ಕೇನ್ ವಿಲಿಯಮ್ಸನ್ ಅರ್ಧಶತಕ ಹಾಗೂ ಕೊನೆಯಲ್ಲಿ ರಾಸ್ ಟೇಲರ್ ಅವರ ಸ್ಫೋಟಕ ಆಟದಿಂದಾಗಿ ನ್ಯೂಜಿಲೆಂಡ್ ತಂಡವು ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 204 ರನ್‍ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರು ಪಂದ್ಯದಲ್ಲಿ ಕಾಲಿನ್ ಮನ್ರೊ 59 ರನ್ (42 ಎಸೆತ, 6ಬೌಂಡರಿ, 2 ಸಿಕ್ಸರ್), ಕೇನ್ ವಿಲಿಯಮ್ಸನ್ 51 ರನ್ (26 ಎಸೆತ, 4 ಬೌಂಡರಿ, 4 ಸಿಕ್ಸರ್), ರಾಸ್ ಟೇಲರ್ 54 ರನ್ (27 ಎಸೆತ, 3 ಬೌಂಡರಿ, 3 ಸಿಕ್ಸರ್) ಹಾಗೂ ಮಾರ್ಟಿನ್ ಗಪ್ಟಿಲ್ 30 ರನ್ (19 ಎಸೆತ, 4 ಬೌಂಡರಿ, ಸಿಕ್ಸ್) ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 203 ರನ್ ಪೇರಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನ್ಯೂಜಿಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕಾಲಿನ್ ಮನ್ರೊ ಹಾಗೂ ಮಾರ್ಟಿನ್ ಗಪ್ಟಿಲ್ ಅವರನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಆರಂಭದಲ್ಲೇ ಸಿಕ್ಸ್, ಬೌಂಡರಿ ಸುರಿಮಳೆ ಸುರಿಸಿದ ಈ ಜೋಡಿ ಮೊದಲ ವಿಕೆಟ್‍ಗೆ 80 ರನ್‍ಗಳ ಜೊತೆಯಾಟವಾಡಿತು.
ಇನ್ನಿಂಗ್ಸ್ ನ 8ನೇ ಓವರ್ ಬೌಲಿಂಗ್ ಮಾಡಿದ ಶಿವಂ ದುಬೆ ಮಾರ್ಟಿನ್ ಗಪ್ಟಿಲ್ ವಿಕೆಟ್ ಪಡೆದು ಆರಂಭಿಕ ಜೋಡಿಯನ್ನು ಮುರಿದರು. ಮಾರ್ಟಿನ್ ಗಪ್ಟಿಲ್ 30 ರನ್ (19 ಎಸೆತ, 4 ಬೌಂಡರಿ, ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾಕ್ಕಿಳಿದ ನಾಯಕ ಕೇನ್ ವಿಲಿಯಮ್ಸನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಮಧ್ಯೆ ಅರ್ಧಶತಕ ಪೂರೈಸಿದ್ದ ಆರಂಭಿಕ ಬ್ಯಾಟ್ಸ್‌ಮನ್ ಮನ್ರೊ ಅವರ ವಿಕೆಟ್ ಅನ್ನು ಶಾರ್ದೂಲ್ ಠಾಕೂರ್ ಕಿತ್ತರು. ಕಾಲಿನ್ ಮನ್ರೊ 59 ರನ್ (42 ಎಸೆತ, 6ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಆಸರೆಯಾದರು.
ಬಿರುಸಿನ ಹೊಡೆತ ತೋರಿದ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಬಹುಬೇಗ ಅರ್ಧಶತಕ ಪೂರೈಸಿದರು. ವಿಲಿಯಮ್ಸನ್ 26 ಎಸೆತಗಳಲ್ಲಿ 51 ರನ್ ಪೂರೈಸಿದರೆ, ರಾಸ್ ಟೇಲರ್ ಔಟಾಗದೆ 54 ರನ್ ಬಾರಿಸಿದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಒಟ್ಟು 10 ಸಿಕ್ಸರ್ ಹಾಗೂ 17 ಬೌಂಡರಿ ಸಿಡಿಸಿದ್ದಾರೆ.
ಆಕ್ಲೆಂಡ್ ಮೈದಾನ ಬಹಳ ಸಣ್ಣಾಗಿದ್ದು ಈ ಸ್ಟೇಡಿಯಂನಲ್ಲಿ ರಗ್ಬಿ ಆಡಲು ಬಳಕೆ ಮಾಡುತ್ತಾರೆ. ಪಿಚ್ ನಿಂದ ಬೌಂಡರಿಗೆ 55 ಮೀಟರ್ ದೂರವಿದೆ. ಹೀಗಾಗಿ ಈ ಪಿಚ್ ನಲ್ಲಿ ಬ್ಯಾಟ್ಸ್ ಮನ್ ಗಳು ಬೌಂಡರಿ, ಸಿಕ್ಸರ್ ಗಳನ್ನು ಸುಲಭವಾಗಿ ಹೊಡೆಯುತ್ತಾರೆ.
ಕೀವಿಸ್ ರನ್ ಏರಿದ್ದು ಹೇಗೆ?:
50 ರನ್ – 27 ಎಸೆತ
100 ರನ್ – 65 ಎಸೆತ
150 ರನ್ – 93 ಎಸೆತ
200 ರನ್ – 118 ಎಸೆತ
ಟೀಂ ಇಂಡಿಯಾ ಯುವ ವೇಗ ಬೌಲರ್ ಶಾರ್ದೂಲ್ ಠಾಲೂರ್, ಶಿವಂ ದುಬೆ, ಜಸ್‍ಪ್ರೀತ್ ಬುಮ್ರಾ, ಸ್ಪಿನ್ನರ್ ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದರು. ಅತಿ ಹೆಚ್ಚು ರನ್ ನೀಡಿದ ಮೊಹಮ್ಮದ್ ಶಮಿ ಯಾವುದೇ ವಿಕೆಟ್ ಪಡೆಯಲಿಲ್ಲ.