Tag: wife-husband

  • ಸ್ಕ್ರೂಡ್ರೈವರ್‌ನಲ್ಲಿ ಪತ್ನಿಯ ಕತ್ತು, ಎದೆಗೆ ಚುಚ್ಚಿ ಕೊಲೆಗೆ ಮುಂದಾದ ಪತಿ!

    ಸ್ಕ್ರೂಡ್ರೈವರ್‌ನಲ್ಲಿ ಪತ್ನಿಯ ಕತ್ತು, ಎದೆಗೆ ಚುಚ್ಚಿ ಕೊಲೆಗೆ ಮುಂದಾದ ಪತಿ!

    ಚಿಕ್ಕಬಳ್ಳಾಪುರ: ಸ್ಕ್ರೂಡ್ರೈವರ್ ಮೂಲಕ ಪತ್ನಿಯ ಕತ್ತು, ಎದೆಗೆ ಚುಚ್ಚಿ ಪತಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ದಲ್ಲಿ ನಡೆದಿದೆ. ಗಾಯಗೊಂಡಾಕೆಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ಈಕೆಯನ್ನು ಗಂಡ ರಾಜೇಶ್ ಕೊಲೆ ಮಾಡಲು ಯತ್ನಿಸಿದ್ದಾನೆ.

    ಏಮಿದು ಘಟನೆ..?: ಪ್ರೀತಿಸಿ ಮದುವೆ (Nirmala- Rajesh Love Marriage) ಯಾದ ನಿರ್ಮಲಾ, ಪತಿ ರಾಜೇಶ್‍ನನ್ನು ಬಿಟ್ಟು ತಿಂಗಳಿಂದ ನಾಪತ್ತೆಯಾಗಿದ್ದಳು. ಹೆಂಡತಿ ಎಲ್ಲೋ ಹೊದ್ಲು ಅಂತ ಹುಡುಕಾಡ್ತಿದ್ದ ಗಂಡನ ಕಣ್ಣಿಗೆ ಕಂಡಿದ್ದೇ ತಡ, ಹೆಂಡತಿನಾ ಜೊತೆ ಬರುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಆದರೆ ಹೆಂಡತಿ ನಾನು ಬರಲ್ಲ ಅಂದಿದ್ದಾಳೆ. ಇದರಿಂದ ರೊಚ್ಚಿಗೆದ್ದ ಗಂಡ ಆಕೆಯ ಮುಖಮೂತಿ ನೋಡದೆ ಸ್ಕ್ರೂಡ್ರೈವರ್‍ನಿಂದ ಕುತ್ತಿಗೆಗೆ ಚುಚ್ಚಿ ಹಾಗೂ ಚಾಕುವಿನಿಂದ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಾನೆ. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆ ಸೇರಿದ್ದಾಳೆ. ಇತ್ತ ಗಂಡ, ಹೆಂಡತಿ ಸತ್ತೇ ಹೋದಳು ಅನ್ನೋ ಭಯದಿಂದ ಬಾರ್‍ಗೆ ಹೋಗಿ ಎಣ್ಣೆ ಕುಡಿದು ನಶೆಯಲ್ಲಿ ಧೈರ್ಯದಿಂದ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಇದನ್ನೂ ಓದಿ: ಅಂಕೋಲಾ ಬಸ್ ನಿಲ್ದಾಣದಲ್ಲಿ ಕಸ ಸ್ವಚ್ಛ ಮಾಡಿದ ಹಾಲಕ್ಕಿ ಮಹಿಳೆಯನ್ನು ಹೊಗಳಿದ ಆನಂದ್ ಮಹೇಂದ್ರ

    ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಿಮ್ಮಲಕುಂಟೆ ನಿವಾಸಿಯಾಗಿರುವ ರಾಜೇಶ್, ವೃತ್ತಿಯಲ್ಲಿ ಬೋರ್ ಮೋಟಾರ್ ರಿಪೇರಿ ಮಾಡುತ್ತಿದ್ದಾನೆ. ಈತ ಬೆಂಗಳೂರಿನ ಕೆ.ಆರ್ ಪುರಂನ ಲೀಲಾ ಜೊತೆ ಮೊದಲ ಮದುವೆಯಾಗಿದ್ದ. ಆದರೆ ಲೀಲಾ ಬಾಣಂತಿಗೆ ತವರು ಮನೆ ಸೇರಿದಾಗ ಆಕೆಯ ಅಕ್ಕ ನಿರ್ಮಲಾಳನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ನಂತರ ಕೂಲಿ ಅರಸಿ ಊರೂರು ಅಲೆದು ಸಂಸಾರ ನಡೆಸುತ್ತಿದ್ದರು. ಆದರೆ ಕಳೆದ 1 ತಿಂಗಳ ಹಿಂದೆ ದಿಬ್ಬೂರಹಳ್ಳಿಯಲ್ಲಿ ವಾಸವಿದ್ದಾಗ ನಿರ್ಮಲಾ, ರಾಜೇಶ್ ಗೆ ಏನೂ ಹೇಳದೆ ಹೊರಟು ಹೋಗಿದ್ದಳು. ಹೀಗಾಗಿ ಹೆಂಡತಿ ಹುಡುಕಾಟ ನಡೆಸುತ್ತಿದ್ದ ರಾಜೇಶ್ ಗೆ ನಿನ್ನೆ ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿ ಬಳಿ ನಿರ್ಮಲಾ ಕಂಡಿದ್ದಾಳೆ.

    ಸ್ನೇಹಿತೆ ಸುನೀತಾ ಮನೆಯಲ್ಲಿದ್ದ ನಿರ್ಮಲಾಳನ್ನ ಪರಿಪರಿಯಾಗಿ ತನ್ನ ಜೊತೆ ವಾಪಸ್ ಬರುವಂತೆ ಕೇಳಿಕೊಂಡಿದ್ದಾನೆ. ಆದರೆ ನಾನು ನಿನ್ನ ಜೊತೆ ಬರಲ್ಲ ನನ್ನ ಮರ್ಯಾದೆ ತೆಗೀಬೇಡಿ ಅಂತ ಗಲಾಟೆ ಮಾಡಿದ್ದಾಳೆ. ಇದರಿಂದ ರೋಸಿ ಹೋದ ರಾಜೇಶ್, ಸುನೀತಾ ಮನೆಯಲ್ಲಿಯೇ ಇದ್ದ ಸ್ಕ್ರೂಡ್ರೈವರ್ ತಗೊಂಡು ನಿರ್ಮಲಾ ಕುತ್ತಿಗೆಗೆ ಇರಿದಿದ್ದಾನೆ. ತನ್ನ ಬಳಿಯೇ ಇದ್ದ ಚಿಕ್ಕ ಚಾಕುವಿನಿಂದ ಎದೆ ಹಾಗೂ ಕುತ್ತಿಗೆ ಮುಖದ ಮೇಲೆ ಕೊಯ್ದಿದ್ದಾನೆ.

    ನಿರ್ಮಲಾ ಹೇಳೋ ಪ್ರಕಾರ, ಎಡಗೈ ಮೂಳೆ ಸಮಸ್ಯೆಗೆ ಗಂಡ ಚಿಕಿತ್ಸೆ ಕೊಡಿಸ್ತಿಲ್ಲ ಅಂತ ತವರು ಮನೆ ಸೇರಿದ್ದೆ. ಚಿಕಿತ್ಸೆ ಪಡೆಯೋಕೆ ದುಡ್ಡು ಇಲ್ಲ ಅಂತ ಮುದ್ದೇನಹಳ್ಳಿಯ ಪ್ರೀ ಹಾಸ್ಪಿಟಲ್ ಗೆ ಟ್ರೀಟ್ ಮೆಂಟ್ ಗೆ ಅಂತ ಬಂದಿದ್ದೆ. ಈ ವೇಳೆ ಸ್ನೇಹಿತೆ ಸುನೀತಾ ಸಿಕ್ಕಿದರು. ಅವರ ಮನೆಗೆ ಹೋಗಿದ್ದೆ. ಆದರೆ ಅಲ್ಲಿಗೆ ನನ್ನ ಗಂಡ ಬಂದು ಏಕಾಏಕಿ ಗಲಾಟೆ ಮಾಡಿ ಮರ್ಡರ್ ಮಾಡೋಕೆ ಮುಂದಾದನು. ಈ ವೇಳೆ ಸುನೀತಾ ಸಹ ನಿರ್ಮಲಾ ರಕ್ಷಣೆಗೆ ಮುಂದಾಗಿದ್ದು, ಆಕೆಯ ಕೈಗೆ ಗಾಯವಾಗಿದೆ ಎಂದು ತಿಳಿಸಿದ್ದಾಳೆ.

    ಸದ್ಯ ಗಾಯಾಳು ನಿರ್ಮಲಾಳಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

  • 2ನೇ ಮದ್ವೆ ಮಾಡಿಕೊಂಡ ಪತಿ- ಇಬ್ಬರು ಹೆಂಡ್ತಿಯರ ಜಗಳ ಬಿಡಿಸಲು ಹೋದವನಿಗೆ ಬಿತ್ತು ಗೂಸಾ

    2ನೇ ಮದ್ವೆ ಮಾಡಿಕೊಂಡ ಪತಿ- ಇಬ್ಬರು ಹೆಂಡ್ತಿಯರ ಜಗಳ ಬಿಡಿಸಲು ಹೋದವನಿಗೆ ಬಿತ್ತು ಗೂಸಾ

    ಧಾರವಾಡ: ಪತಿ ಎರಡನೇ ಮದುವೆ ಮಾಡಿಕೊಂಡಿದ್ದಾನೆ ಎಂದು ತಿಳಿದ ಮೊದಲನೇ ಪತ್ನಿ, ಪತಿ ಹಾಗೂ ಎರಡನೇ ಪತ್ನಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಣೇಶನಗರದ ಅಲಾವುದ್ದೀನ್ ಬಳೆಗಾರ ಹಲ್ಲೆಗೆ ಒಳಗಾದ ಪತಿರಾಯ. ಈತ 7 ವರ್ಷಗಳ ಹಿಂದೆ ಧಾರವಾಡ ನಗರದ ಮನಕಿಲ್ಲಾ ಬಡಾವಣೆಯ ಜಾಹಿದಾ ಅವರನ್ನು ಮದುವೆಯಾಗಿದ್ದನು. ಅಲಾವುದ್ದೀನ್ ಕಂಪ್ಯೂಟರ್ ಕ್ಲಾಸನ್ನು ನಡೆಸುತ್ತಿದ್ದನು. ಈ ದಂಪತಿಗೆ ಒಂದು ಮಗು ಕೂಡಾ ಇದ್ದು, ಇವರಿಬ್ಬರ ನಡುವೆ ಸಂಸಾರ ಚೆನ್ನಾಗಿ ನಡೆಯದ ಕಾರಣ ಇಬ್ಬರು ಬೇರೆಯಾಗಿದ್ದರು.

    ಒಂದು ವಾರದ ಹಿಂದೆ ಅಲಾವುದ್ದೀನ್ ಮುಬಿನ್ ಎಂಬವಳನ್ನ ಎರಡನೇ ಮದುವೆ ಮಾಡಿಕೊಂಡಿದ್ದನು. ಇದನ್ನು ತಿಳಿದ ಮೊದಲ ಪತ್ನಿ ಜಾಹಿದಾ, ತನ್ನ ಕುಟುಂಬದವರನ್ನು ಕರೆ ತಂದು ಪತಿ ಹಾಗೂ ಎರಡನೇ ಪತ್ನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಇಬ್ಬರು ಪತ್ನಿಯರೂ ಹೊಡೆದಾಡಿಕೊಳ್ಳುವಾಗ ಅಲಾವುದ್ದೀನ್ ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಹೋಗಿದ್ದಾನೆ. ಆಗ ಅಲಾವುದ್ದೀನ್ ಹೊಡಸಿಕೊಂಡ ದೃಶ್ಯ ಆತ ನಡೆಸುತ್ತಿದ್ದ ಕಂಪ್ಯೂಟರ್ ಕ್ಲಾಸಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ನನಗೆ ಜೀವ ಭಯವಿದೆ ಎಂದು ಅಲಾವುದ್ದೀನ್ ಹೇಳಿದ್ದಾನೆ. ಮತ್ತೊಂದು ಕಡೆ ಎರಡನೇ ಪತ್ನಿಯ ಮನೆಯವರು ಕೂಡಾ ಅಲಾವುದ್ದೀನ್ ತಮ್ಮ ಮಗಳನ್ನ ಕಿಡ್ನಾಪ್ ಮಾಡಿದ್ದಾನೆ ಎಂದು ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಮನೆಯಿಂದ ತನ್ನ ಎರಡನೇ ಪತ್ನಿ ಜೊತೆ ಹೊರಗಡೆ ಅಲೆದಾಡುತ್ತಿರುವ ಅಲಾವುದ್ದೀನ್ ಅಜ್ಞಾತ ಸ್ಥಳಕ್ಕೆ ಹೋಗಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾವಿನಲ್ಲೂ ಒಂದಾದ ದಂಪತಿ- 4 ಗಂಟೆಗೆ ಪತಿ, 8 ಗಂಟೆ ಹೊತ್ತಿಗೆ ಪತ್ನಿ ಸಾವು

    ಸಾವಿನಲ್ಲೂ ಒಂದಾದ ದಂಪತಿ- 4 ಗಂಟೆಗೆ ಪತಿ, 8 ಗಂಟೆ ಹೊತ್ತಿಗೆ ಪತ್ನಿ ಸಾವು

    ಕೊಪ್ಪಳ: ಜಿಲ್ಲೆಯ ಗಂಗಾವತಿಯ ಜಯನಗರದಲ್ಲಿ ಗಂಡ-ಹೆಂಡತಿ ಸಾವಿನಲ್ಲೂ ಒಂದಾಗಿರೋ ಘಟನೆ ನಡೆದಿದೆ.

    ಇಂದು ಬೆಳಗ್ಗಿನ ಜಾವ 4 ಗಂಟೆಗೆ ವಯೋಸಹಜವಾಗಿ 65 ವರ್ಷದ ದುರ್ಗಪ್ಪ ನಾಯಕ ಮೃತಪಟ್ಟಿದ್ದಾರೆ. ಪತಿಯ ಸಾವಿನ ಬಳಿಕ ಅಂದರೆ ಬೆಳಗ್ಗೆ 8 ಗಂಟೆ ಸುಮಾರಿಗೆ ಪತ್ನಿ ಹುಲಿಗೆಮ್ಮ(55) ಮೃತಪಟ್ಟಿದ್ದಾರೆ.

    ಪತಿ ತೀರಿಕೊಂಡ ಬಳಿಕ ಅವರ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದ ಪತ್ನಿ ಇಂದು 8 ಗಂಟೆ ಸುಮಾರಿಗೆ ದುಃಖದಿಂದ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಗಂಡ-ಹೆಂಡತಿ ಇಬ್ಬರೂ ಒಂದೇ ದಿನ ಸಾವನ್ನಪ್ಪಿರುವುದು ಕುಟುಂಬಸ್ಥರ ದುಃಖವನ್ನ ಮತ್ತಷ್ಟು ಹೆಚ್ಚಿಸಿದೆ.

    ಎಲ್ಲೋ ಅಪರೂಪಕ್ಕೆ ಕಡೆ ಗಂಡ-ಹೆಂಡತಿ ಇಬ್ಬರೂ ಒಟ್ಟಾಗಿ ಸಾವನ್ನಪ್ಪುತ್ತಾರೆ. ಇದೀಗ ಇವರ ಸಾವು ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟ ಆಗಿದೆ ಅಂತ ಮೃತರ ಸಂಬಂಧಿಗಳು ಹೇಳಿದ್ದಾರೆ.

    ಸದ್ಯ ಇಬ್ಬರನ್ನೂ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • ಪತಿ ಮೃತಪಟ್ಟ 1 ಗಂಟೆಯಲ್ಲೇ ಪತ್ನಿಯೂ ಸಾವು- ಸಾವಿನಲ್ಲೂ ಒಂದಾದ ಉಡುಪಿ ದಂಪತಿ

    ಪತಿ ಮೃತಪಟ್ಟ 1 ಗಂಟೆಯಲ್ಲೇ ಪತ್ನಿಯೂ ಸಾವು- ಸಾವಿನಲ್ಲೂ ಒಂದಾದ ಉಡುಪಿ ದಂಪತಿ

    ಉಡುಪಿ: ತಾಳಿ ಕಟ್ಟುವಾಗ ಜೀವನದುದ್ದಕ್ಕೂ ಜೊತೆಗಿರುತ್ತೇವೆ ಎಂದು ಸಂಕಲ್ಪ ಮಾಡಿದ್ದ ದಂಪತಿಗಳು ಸಾವಿನಲ್ಲೂ ಜೊತೆಯಾಗಿ ಕೊನೆಯುಸಿರೆಳೆದ ಘಟನೆ ಉಡುಪಿಯಲ್ಲಿ ನಡೆದಿದೆ.

    ಇಲ್ಲಿನ ಅಂಬಲಪಾಡಿ ಕಪ್ಪೆಟ್ಟು ರಾಮಮಂದಿರದ ಬಳಿ ಇಂತದ್ದೊಂದು ಸಾವು ಸಂಭವಿಸಿದೆ. ಸೋಮಯ್ಯ ಶೆಟ್ಟಿಗಾರ್(85) ಹಾಗೂ ನೇತ್ರಾವತಿ ಶೆಟ್ಟಿಗಾರ್(76) ಸಾವಿನಲ್ಲೂ ಒಂದಾದ ದಂಪತಿ.

    ಮೂವರು ಹೆಣ್ಣುಮಕ್ಕಳು ಹಾಗೂ ಓರ್ವ ಮಗನನ್ನು ದಂಪತಿ ಅಗಲಿದ್ದಾರೆ. ಈ ಇಬ್ಬರೂ ಜೀವನದುದ್ದಕ್ಕೂ ಅನ್ಯೋನ್ಯ ದಾಂಪತ್ಯವನ್ನು ಕಳೆದು ವೃದ್ಧಾಪ್ಯದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮಯ್ಯ ಅಸ್ತಮಾ ಕಾಯಿಲೆ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಾಗ ಹೆಂಡತಿ ನೇತ್ರಾವತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮನೆಗೆ ಬಂದ ಪತಿಗೆ ಆರೋಗ್ಯ ಮತ್ತೆ ಗಂಭೀರ ಸ್ಥಿತಿಗೆ ತಲುಪಿ ಮೃತಪಟ್ಟಿದ್ದಾರೆ.

    ಒಂದು ಗಂಟೆಯ ಬಳಿಕ ಆಸ್ಪತ್ರೆಯಲ್ಲಿದ್ದ ಪತ್ನಿ ನೇತ್ರಾವತಿ ಆರೋಗ್ಯ ಏಕಾಏಕಿ ಗಂಭೀರವಾಗಿ ಅಸುನೀಗಿದ್ದಾರೆ. ಜೀವನದ ಕೊನೆಗಾಲದವರೆಗೂ ಅನ್ಯೋನ್ಯತೆ ಮೆರೆದ ದಂಪತಿಯನ್ನು ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ

    ಒಂದು ದಿನವೂ ಜಗಳವಾಡಿಕೊಂಡಿಲ್ಲ, ಮುನಿಸಿಕೊಂಡಿಲ್ಲ. ಕೊನೆಗೆ ಸಾವಿನಲ್ಲೂ ಒಬ್ಬರನ್ನೊಬ್ಬರು ಬಿಟ್ಟು ಕೊಡಲಿಲ್ಲ ಎಂದು ಮೃತ ದಂಪತಿಯ ಮಕ್ಕಳು ಹಾಗೂ ಸಂಬಂಧಿಕರು ಕಣ್ಣೀರಿಟ್ಟರು.