Tag: wicket keeper

  • ಆಫ್ರಿಕಾ ವಿರುದ್ಧದ ಏಕದಿನ ಸರಣಿ ಟೀಂ ಇಂಡಿಯಾ ಪ್ರಕಟ- ಯಾರಾಗ್ತಾರೆ ಕೀಪರ್?

    ಆಫ್ರಿಕಾ ವಿರುದ್ಧದ ಏಕದಿನ ಸರಣಿ ಟೀಂ ಇಂಡಿಯಾ ಪ್ರಕಟ- ಯಾರಾಗ್ತಾರೆ ಕೀಪರ್?

    – ವಿರಾಟ್‍ಗೆ ಇಲ್ಲ ವಿಶ್ರಾಂತಿ, ಹಾರ್ದಿಕ್, ಭುಮಿ ಕಮ್‍ಬ್ಯಾಕ್
    – ರಾಹುಲ್, ರಿಷಬ್ ಇಬ್ಬರಿಗೆ ಅವಕಾಶ

    ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡಿಗರಾದ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆದುಕೊಂಡಿದ್ದಾರೆ.

    ಗಾಯದಿಂದ ಚೇತರಿಸಿಕೊಂಡ ಅನುಭವಿ ಆಟಗಾರ, ಓಪನರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದಾರೆ. ಆದರೆ, ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳದೆ ಇರುವುದರಿಂದ ಅವರನ್ನು ಕೈಬಿಡಲಾಗಿದೆ.

    ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಭುವಿ ಕೂಡ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭುವನೇಶ್ವರ್ ಕುಮಾರ್ ಅವರು ಹಾರ್ದಿಕ್ ಪಾಂಡ್ಯ ಮತ್ತು ಜಸ್‍ಪ್ರೀತ್ ಬುಮ್ರಾ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಏಕದಿನ ಸರಣಿಯ ತಂಡದಲ್ಲಿ ಯುವ ಆಟಗಾರ ಶುಭ್‍ಮನ್ ಗಿಲ್ ಅವರನ್ನು ಉಳಿಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

    ಮೂವರು ವೇಗದ ಬೌಲರ್‌ಗಳು:
    ದಕ್ಷಿಣ ಆಫ್ರಿಕಾ ಸರಣಿಯಲ್ಲಿ ವೇಗದ ಬೌಲರ್ ಗಳಾದ ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ ಹಾಗೂ ಭುವನೇಶ್ವರ್ ಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ. ಅನುಭವಿ ಆಟಗಾರ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿಸುವ ಸಾಧ್ಯತೆ ಇದೆ.

    ಭಾರತದ ಸ್ಪಿನ್ ಪಡೆಯಲ್ಲಿ ಆಲ್‍ರೌಂಡರ್ ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್ ಸ್ಥಾನ ಪಡೆದಿದ್ದಾರೆ. ಆದರೆ ಕುಲದೀಪ್ ಯಾದವ್ ಅವರನ್ನು ಇತರೆ ಆಟಗಾರರ ಪಟ್ಟಿಯಲ್ಲಿ ಇರಿಸಲಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ಬಲವಾಗಿ ಕಾಣುತ್ತಿದೆ.

    ವಿಕೆಟ್ ಕೀಪರ್ ಯಾರು?
    ಟೀಂ ಇಂಡಿಯಾ ಕ್ರಿಕೆಟ್ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಯಾರು ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ನ್ಯೂಜಿಲೆಂಡ್ ಪ್ರಸಾದ ವೇಳೆ 3 ಏಕದಿನ ಪಂದ್ಯ ಹಾಗೂ 5 ಟಿ20 ಪಂದ್ಯಗಳಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಕೀಪಿಂಗ್ ಜವಾಬ್ದಾರಿ ಹಾಗೂ ಎರಡನ್ನೂ ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದರು. ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರ ಹೆಗಲಿಗೆ ಬೀಳುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ.

     

    ವೇಳಾಪಟ್ಟಿ:
    ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೊದಲ ಪಂದ್ಯ ಧರ್ಮಶಾಲದಲ್ಲಿ ಮಾರ್ಚ್ 12ರಂದು ಮಧ್ಯಾಹ್ನ 1.30 ರಿಂದ ಆರಂಭವಾಗಲಿದೆ. ಎರಡನೇ ಪಂದ್ಯವು ಲಕ್ನೋದಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ. ಕೊನೆಯ ಹಾಗೂ ಮೂರನೇ ಪಂದ್ಯ ಕೋಲ್ಕತ್ತಾದಲ್ಲಿ ಮಾರ್ಚ್ 18ರಂದು ಮಧ್ಯಾಹ್ನ 1.30 ರಿಂದ ನಡೆಯಲಿದೆ.

    ಭಾರತ ತಂಡ:
    ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಲ್, ಜಸ್‍ಪ್ರೀತ್ ಬುಮ್ರಾ ಇದ್ದಾರೆ. ಇತರೆ ಆಟಗಾರರ ಪಟ್ಟಿಯಲ್ಲಿ ನವದೀಪ್ ಸೈನಿ, ಕುಲದೀಪ್ ಯಾದವ್, ಶುಭ್‍ಮನ್ ಗಿಲ್.

  • ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್

    ಧೋನಿಯನ್ನು ಟೆಸ್ಟ್ ಕ್ರಿಕೆಟ್‍ನಲ್ಲಿ ಹಿಂದಿಕ್ಕಿದ ಪಂತ್

    ನವದೆಹಲಿ: ಭಾರತದ ಮಾಜಿ ನಾಯಕ ಎಂ.ಎಸ್ ಧೋನಿಯನ್ನು ಯುವ ಆಟಗಾರ ರಿಷಬ್ ಪಂತ್ ಟೆಸ್ಟ್ ವಿಕೆಟ್ ಕೀಪಿಂಗ್‍ನಲ್ಲಿ ಹಿಂದಿಕ್ಕಿದ್ದಾರೆ.

    ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ರಿಷಬ್ ಪಂತ್ ಆಡುತ್ತಿದ್ದಾರೆ. ಭಾರತದ ವಿಕೆಟ್ ಕೀಪರ್‍ ಗಳಲ್ಲಿ ಟೆಸ್ಟ್ ಪಂದ್ಯದಲ್ಲಿ ಅತಿ ಬೇಗ 50 ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಮುರಿದು ಹಾಕಿದ್ದಾರೆ.

    ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಲ್ಲಿ ವಿಂಡೀಸ್ ಆಟಗಾರ ಕ್ರೈಗ್ ಬ್ರಾಥ್‍ವೈಟ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ ಎಂ.ಎಸ್ ಧೋನಿ 15 ಟೆಸ್ಟ್ ಪಂದ್ಯಗಳಲ್ಲಿ 50 ಬ್ಯಾಟ್ಸ್ ಮನ್‍ಗಳನ್ನು ಔಟ್ ಮಾಡಿದ್ದರು. ಆದರೆ ಆಡಿದ 11 ಪಂದ್ಯಗಳಲ್ಲೇ 50 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದಿರುವ ಪಂತ್, ಧೋನಿ ಅವರ ಸಾಧನೆಯನ್ನು ಹಿಂದಿಕ್ಕಿದ್ದಾರೆ.

    ಈ ಸಾಧನೆ ಮಾಡಿದ ವಿಶ್ವದ ಟಾಪ್ ವಿಕೆಟ್ ಕೀಪರ್‍ ಗಳಲ್ಲಿ ಪಂತ್ ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಅವರ ಜೊತೆ ಎರಡನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ 10 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಮಾಜಿ ಕೀಪರ್ ಮಾರ್ಕ್ ಬೌಚರ್, ಇಂಗ್ಲೆಂಡ್‍ನ ಜೋಸ್ ಬಟ್ಲರ್ ಮತ್ತು ಆಸ್ಟ್ರೇಲಿಯಾದ ಟಿಮ್ ಪೈನ್ ಮೊದಲ ಸ್ಥಾನದಲ್ಲಿ ಇದ್ದಾರೆ.

    ದೆಹಲಿಯ ರಿಷಬ್ ಪಂತ್ ಅವರನ್ನು ಎಂ.ಎಸ್ ಧೋನಿಯ ನಂತರ ಭಾರತದ ಭವಿಷ್ಯದ ವಿಕೆಟ್ ಕೀಪರ್ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಮುಂದಿನ ಟೂರ್ನಿಗೆ ಸಿದ್ಧ ಮಾಡಲು ಈಗ ಅವರಿಗೆ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ ಹೆಚ್ಚು ಅವಕಾಶ ನೀಡುತ್ತಿದ್ದೇವೆ ಎಂದು ಭಾರತದ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದರು.

    ಎಡಗೈ ಬ್ಯಾಟ್ಸ್ ಮನ್ ಆಗಿರುವ ಈ ಯುವ ಪ್ರತಿಭೆಗೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಬೆಂಬಲ ನೀಡಿದ್ದು, ರಿಷಬ್ ಪಂತ್ ಅವರಲ್ಲಿ ನಾವು ಭವಿಷ್ಯವನ್ನು ನೋಡುತ್ತಿದ್ದೇವೆ. ಖಂಡಿತವಾಗಿಯೂ ಅವರು ಒಬ್ಬ ಒಳ್ಳೆಯ ಪ್ರತಿಭೆ ಇರುವಂತ ಆಟಗಾರ ಎಂದು ಹೇಳಿದ್ದರು.

  • ರನೌಟ್ ವೇಳೆ ತಪ್ಪಾಗಿ ಬಾಲ್ ಎಸೆದ ಕೀಪರ್ – ಪಿಚ್ ಬಿಟ್ಟು ಓಡಿದ ಬೌಲರ್

    ರನೌಟ್ ವೇಳೆ ತಪ್ಪಾಗಿ ಬಾಲ್ ಎಸೆದ ಕೀಪರ್ – ಪಿಚ್ ಬಿಟ್ಟು ಓಡಿದ ಬೌಲರ್

    ಲಂಡನ್: ರನೌಟ್ ಮಾಡುವ ಸಂದರ್ಭದಲ್ಲಿ ವಿಕೆಟ್ ಕೀಪರ್ ವಿಕೆಟ್‍ಗೆ ಬಾಲನ್ನು ಎಸೆಯುವ ಬದಲು ತಪ್ಪಾಗಿ ಬೌಲರಿಗೆ ಎಸೆಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

    ಡರ್ಹಾಮ್ ಮತ್ತು ಯಾರ್ಕ್ ಶೈರ್ ನಡುವಿನ ಟಿ20 ಪಂದ್ಯ ರಿವರ್ಸೈಡ್ ಮೈದಾನದಲ್ಲಿ ನಡೆಯುತಿತ್ತು. ಯಾರ್ಕ್‍ಶೈರ್ ಸ್ಪಿನ್ ಬೌಲರ್ ಕೇಶವ್ ಮಹಾರಾಜ್ ಎಸೆದ ಬಾಲ್ ಬ್ಯಾಟ್ಸ್ ಮನ್ ಪ್ಯಾಡಿಗೆ ಬಡಿದಿತ್ತು. ಈ ವೇಳೆ ಕೇಶವ್ ಮಹಾರಾಜ್ ಅಂಪೈರ್ ಬಳಿ ಮನವಿ ಸಲ್ಲಿಸುತ್ತಿದ್ದಾಗ ಇಬ್ಬರು ಬ್ಯಾಟ್ಸ್ ಮನ್ ರನ್ ಗಳಿಸಲು ಓಡಿದ್ದಾರೆ.

    ಇಬ್ಬರು ಓಡಲು ಆರಂಭಿಸಿದ್ದನ್ನು ನೋಡಿದ ಕೀಪರ್ ಮುಂದುಗಡೆ ಬಂದು ನಾನ್ ಸ್ಟ್ರೈಕ್ ನಲ್ಲಿರುವ ವಿಕೆಟಿಗೆ ಎಸೆಯುವ ಬದಲು ತಪ್ಪಾಗಿ ಅಲ್ಲಿದ್ದ ಬೌಲರ್ ಗೆ ಹಿಂಭಾಗಕ್ಕೆ ಎಸೆದಿದ್ದಾರೆ. ವೇಗವಾಗಿ ಬಾಲ್ ಬಿದ್ದ ರಭಸಕ್ಕೆ ಕೇಶವ್ ಮಹಾರಾಜ್ ಎಡಗಾಲಿಗೆ ಬಲವಾದ ಪೆಟ್ಟು ಬಿದ್ದಿದೆ. ಬಾಲ್ ಬಿದ್ದ ಕೂಡಲೇ ಅವರು ತೊಡೆಯನ್ನು ಉಜ್ಜಿಕೊಳ್ಳುತ್ತಾ ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    ಇದಾದ ನಂತರವೂ ಕೇಶವ್ ಅವರು 4 ಓವರ್ ಕೋಟಾವನ್ನು ಪೂರ್ಣಗೊಳಿಸಿದ್ದಾರೆ. ಆದರೆ ಯಾವುದೇ ವಿಕೆಟ್ ಪಡೆಯಲು ಯಶಸ್ವಿಯಾಗಲಿಲ್ಲ.

  • ಒಂದೇ ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸಿದ ಧೋನಿ!

    ಲಂಡನ್: ಭಾನುವಾರ ನಡೆದ ಇಂಗ್ಲೆಂಡ್ ತಂಡದ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರು 4 ದಾಖಲೆಗಳನ್ನು ಬರೆದು ಇತಿಹಾಸ ನಿರ್ಮಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ 6 ಮಂದಿಯನ್ನು ಧೋನಿ ಔಟ್ ಮಾಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಟಿ-20ಯ ಒಂದೇ ಪಂದ್ಯದಲ್ಲಿಯೇ 6 ಮಂದಿಯನ್ನು ಔಟ್ ಮಾಡಿದ ಮೊದಲ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಅಷ್ಟೇ ಅಲ್ಲದೇ ಅಂತರಾಷ್ಟ್ರೀಯ ಟಿ20 ಪಂದ್ಯವೊಂದರಲ್ಲಿ 5 ಕ್ಯಾಚ್ ಹಿಡಿದ ಮೊದಲ ಕೀಪರ್ ಎನ್ನುವ ದಾಖಲೆಯನ್ನು ಧೋನಿ ನಿರ್ಮಿಸಿದರು.

    ಇದಲ್ಲದೇ ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 50 ಕ್ಯಾಚ್ ಹಿಡಿದ ಮೊದಲ ಕೀಪರ್ ಹಾಗೂ ಟಿ-20ಯಲ್ಲಿ 150 ಕ್ಯಾಚ್ ಪೂರೈಸಿದ ವಿಶ್ವದ ಮೊದಲನೇ ವಿಕೆಟ್ ಕೀಪರ್ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ಒಂದೇ ಟಿ-20 ಪಂದ್ಯದಲ್ಲಿ ನಾಲ್ಕು ದಾಖಲೆಗಳನ್ನು ನಿರ್ಮಿಸುವ ಮೂಲಕ ಧೋನಿ ಇತಿಹಾಸ ನಿರ್ಮಿಸಿದ್ದಾರೆ.

  • ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಧೋನಿ ಇಂದು ಸ್ಪಿನ್ ಬೌಲಿಂಗ್ ಮಾಡ್ತಾರಾ?

    ಇಂದೋರ್: ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲು ಟೀಂ ಇಂಡಿಯಾ ಭರ್ಜರಿ ಸಿದ್ಧತೆ ನಡೆಸಿದೆ. ಭಾನುವಾರ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ನಡೆದ ನೆಟ್ ಪ್ರ್ಯಾಕ್ಟೀಸ್ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸ್ಪಿನ್ ಬೌಲ್ ಮಾಡಿದರು.

    ಈಗಾಗಲೇ ಕಳೆದ ಎರಡು ಪಂದ್ಯಗಳಲ್ಲಿ ಆಸೀಸ್ ತಂಡ ಭಾರತದ ಸ್ಪಿನ್ನರ್ ಗಳ ದಾಳಿ ಎದುರಿಸುವಲ್ಲಿ ವಿಫಲವಾಗಿತ್ತು. ಆದರಲ್ಲೂ 2ನೇ ಪಂದ್ಯದಲ್ಲಿ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು.

    ಹೋಳ್ಕರ್ ಕ್ರೀಡಾಂಗಣದಲ್ಲಿ ಅಭ್ಯಾಸದ ವೇಳೆ ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಚಾಹಲ್ ಜೊತೆ ಧೋನಿ ಕೂಡಾ ಸ್ಪಿನ್ ಬೌಲಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ. ಆಫ್ ಸ್ಪಿನ್ ಹಾಗೂ ಲೆಗ್ ಸ್ಪಿನ್ ದಾಳಿ ನಡೆಸಿ ಧೋನಿ ಎಂಜಾಯ್ ಮಾಡಿದ್ದಾರೆ.

    ಇದರ ವೀಡಿಯೋವನ್ನು ಬಿಸಿಸಿಐ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತದ ಸ್ಪಿನ್ ದಾಳಿಗೆ ಸೇರ್ಪಡೆಯಾಗಿದ್ದು ಯಾರೆಂದು ನೋಡಿ ಎಂದು ಕ್ಯಾಪ್ಷನ್ ಕೊಟ್ಟಿದೆ. ಜೊತೆಗೆ ಇನ್ನೊಂದು ಟ್ವೀಟ್ ನಲ್ಲಿ ಧೋನಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಧೋನಿ ಸ್ಮೈಲ್ ಫೋಟೋ ಹಾಕಲಾಗಿದೆ.

    ಇಂದಿನ ಪಂದ್ಯವನ್ನು ಭಾರತ ಗೆದ್ದರೆ ಭಾರತ 5 ಮ್ಯಾಚ್ ಗಳ ಸರಣಿಯನ್ನು ಗೆದ್ದಂತಾಗುತ್ತದೆ. ಆದರೆ ಇಂದಿನ ಪಂದ್ಯದಲ್ಲಾದರೂ ಆಸೀಸ್ ತಂಡ ಸ್ಪಿನ್ನರ್ ಗಳನ್ನು ದಿಟ್ಟವಾಗಿ ಎದುರಿಸುತ್ತಾ ಎನ್ನುವುದೇ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆ. ಯಾಕೆಂದರೆ ಈ ಪಂದ್ಯವನ್ನೂ ಸೋತರೆ ಆಸೀಸ್ ಸರಣಿಯನ್ನು ಗೆಲ್ಲುವ ಆಸೆಯನ್ನು ಕೈ ಬಿಡಬೇಕಾಗುತ್ತದೆ.