Tag: wheeling

  • ಯುವಕನ ವೀಲಿಂಗ್ ಹುಚ್ಚಾಟಕ್ಕೆ ಡ್ರ್ಯಾಗರ್ ಹಿಡಿದು ಸಾಥ್ ಕೊಟ್ಟ ಯುವತಿ

    ಯುವಕನ ವೀಲಿಂಗ್ ಹುಚ್ಚಾಟಕ್ಕೆ ಡ್ರ್ಯಾಗರ್ ಹಿಡಿದು ಸಾಥ್ ಕೊಟ್ಟ ಯುವತಿ

    ಬೆಂಗಳೂರು: ಕತ್ತಲಾದ ಮೇಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಡ ಪೋಕರಿಗಳ ವರ್ತನೆ ನೋಡಿದರೆ ಸಾಮಾನ್ಯ ಜನರಿಗೆ ಭಯವಾಗುತ್ತದೆ. ಆದರೆ ಇಲ್ಲೊಬ್ಬ ಯುವಕ ಯುವತಿಯ ವರ್ತನೆ ನೋಡಿ ನೆಟ್ಟಗರು ಶಾಕ್ ಆಗಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವೀಲಿಂಗ್ ಮಾಡುವುದು ಅಪರಾಧವಾದರೂ ಯುವಕರು ಶೋಕಿಗಾಗಿ ವೀಲಿಂಗ್ ಮಾಡುತ್ತಿರುತ್ತಾರೆ. ಆದರೆ ಯುವಕ ವೀಲಿಂಗ್ ಮಾಡುವಾಗ ಬೈಕ್ ಹಿಂಬದಿ ಕುಳಿತಿದ್ದ ಯುವತಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಭಯ ಹುಟ್ಟಿಸುವಂತೆ ಪೋಸ್ ನೀಡಿದ್ದಾಳೆ. ಯುವತಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.facebook.com/100011448424143/videos/1379779235747011/?extid=IDHNaMLZjbwg9lQE

    ಬೈಕ್ ಹಿಂಬದಿಯಲ್ಲಿ ಡ್ರ್ಯಾಗರ್ ಹಿಡಿದು ಯುವತಿ ಪೋಸ್ ಕೊಟ್ಟ ವಿಡಿಯೋ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಬೈಕ್ ವೀಲಿಂಗ್‍ನಲ್ಲಿ ತೊಡಗಿರುವ ಯುವಕನ ವರ್ತನೆ ಕೂಡ ಭಯಾನಕವಾಗಿದೆ. ವಿಡಿಯೋದಲ್ಲಿ ಮಾಸ್ಕ್ ಧರಿಸಿ ಕುಳಿತಿರುವ ಯುವತಿ ಕೈಯಲ್ಲಿ ಡ್ರ್ಯಾಗರ್ ಹಿಡಿದು ಬಿಂದಾಸ್ ಆಗಿ ಪೋಸ್ ನೀಡಿದ್ದಾಳೆ.

    ಕೂಡಲೇ ಸಂಬಂಧ ಪಟ್ಟ ಪೊಲೀಸರು ಬೈಕ್ ಅನ್ನು ಪತ್ತೆಹಚ್ಚಿ ಆ ಯುವಕ ಹಾಗೂ ಯುವತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇತ್ತ ರಾತ್ರಿ ವೇಳೆ ನಡೆಯುವ ಈ ಭಯಾನಕ ಬೈಕ್ ರೈಡ್‍ಗೆ ಕಡಿವಾಣವನ್ನು ಪೊಲೀಸರು ಹಾಕಬೇಕಿದೆ.

  • ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಹಾಕಲು ಹಗಲು, ರಾತ್ರಿ ಎನ್ನದೆ ವ್ಹೀಲಿಂಗ್- ಯುವಕ ಅರೆಸ್ಟ್

    ಇನ್‍ಸ್ಟಾಗ್ರಾಮ್‍ನಲ್ಲಿ ವಿಡಿಯೋ ಹಾಕಲು ಹಗಲು, ರಾತ್ರಿ ಎನ್ನದೆ ವ್ಹೀಲಿಂಗ್- ಯುವಕ ಅರೆಸ್ಟ್

    ಬೆಂಗಳೂರು: ವ್ಹೀಲಿಂಗ್ ಮಾಡಿ, ವಿಡಿಯೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕುತ್ತಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

    ಹಗಲು, ರಾತ್ರಿ ಎನ್ನದೆ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತಿಕೆರೆ ನಿವಾಸಿ ಶೇಖ್ ಸಮೀರ್ ಬಂಧಿತ ಆರೋಪಿ, ಕೊಡಿಗೇಹಳ್ಳಿ ಜಂಕ್ಷನ್ ಹತ್ತಿರ ವ್ಹೀಲಿಂಗ್ ಮಾಡುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ.

    ಘಟನೆ ಸಂಬಂಧ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹೆಬ್ಬಾಳ ಸಂಚಾರಿ ಠಾಣಾ ಇನ್ಸ್‍ಪೆಕ್ಟರ್ ಫೈರೋಜ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ವ್ಹೀಲಿಂಗ್ ಮಾಡಿದ ವಿಡಿಯೋಗಳನ್ನು ಆರೋಪಿ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿ ಮೆಚ್ಚುಗೆ ಗಳಿಸುತ್ತಿದ್ದ. ಜೀವದ ಹಂಗು ತೊರೆದು ಕಾನೂನು ನಾಹಿರವಾಗಿ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ. ಹೀಗಾಗಿ ಈತನ ವಿರುದ್ಧ ದೂರು ದಾಖಲಾಗಿತ್ತು.

  • ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರು ಅರೆಸ್ಟ್

    ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರು ಅರೆಸ್ಟ್

    ಬೆಂಗಳೂರು: ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಚಂದನ್, ಸುಮಂತ್, ಲಿಖಿತ್ ಮತ್ತು ವಿನಯ್ ಎಂದು ಗುರುತಿಸಲಾಗಿದೆ. ಈ ಯುವಕರನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಈ ನಾಲ್ವರು ಯುವಕರು ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದರು.

    ಅಲ್ಲದೇ ಒಬ್ಬ ಬೈಕ್ ಓಡಿಸುತ್ತಿದ್ದರೆ ಹಿಂದೆ ಕುಳಿತಿದ್ದವ ವ್ಹೀಲಿಂಗ್ ಮಾಡುತ್ತಿರುವುದನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ಇದೀಗ ಪೊಲೀಸರು ಯುವಕರು ವ್ಹೀಲಿಂಗ್ ಮಾಡಲು ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಂಧಿತ ಆರೋಪಿಗಳ ವಿರುದ್ಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ.

  • ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು – 27 ಮಂದಿ ಅರೆಸ್ಟ್

    ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡ್ತಿದ್ದವರಿಗೆ ಬಿಸಿ ಮುಟ್ಟಿಸಿದ ಸಂಚಾರಿ ಪೊಲೀಸರು – 27 ಮಂದಿ ಅರೆಸ್ಟ್

    ಬೆಂಗಳೂರು: ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡಿಕೊಂಡು ಜನರಿಗೆ ತೊಂದರೆ ಕೊಟ್ಟು, ಹಾವಳಿ ಇಡುತ್ತಿದ್ದವರಿಗೆ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

    ವೀಲಿಂಗ್ ಮಾಡಿಕೊಂಡು ತೊಂದರೆ ಕೊಡುತ್ತಿದ್ದ ಒಟ್ಟು 27 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ವೀರೇಶ್ ಆರ್, ಕುಶಾಲ್ ಆರ್, ದೀಕ್ಷಿತ್ ಆಚಾರ್ಯ, ಶಶಾಂಕ್ ಡಿ, ಸಾಗರ್ ಎಲ್ ದೀಪು, ಅಭಿಷೇಕ್ ಎಚ್.ಆರ್, ನರೇಂದ್ರ ಎನ್, ವಿಜಯ್ ಕುಮಾರ್ ಎನ್.ಎಸ್, ಸಂಜಯ್ ಸೇರಿದಂತೆ 27 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ ವೀಲಿಂಗ್ ಮಾಡಲು ಬಳಸುತ್ತಿದ್ದ ಒಟ್ಟು 27 ಬೈಕ್‍ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಸೋಂಪುರ ಟೋಲ್ ಕಡೆಯಿಂದ ಹೊಸಕೆರೆಹಳ್ಳಿ ರಿಂಗ್ ರೋಡ್ ಕಡೆ ದಿನನಿತ್ಯ ವೀಲಿಂಗ್ ಮಾಡಿ ಬಂಧಿತರು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಆರೋಪಿಗಳ ವೀಲಿಂಗ್ ಹಾವಳಿಯಿಂದ ಬೇಸತ್ತ ಜನರು ಪೊಲೀಸರಿಗೆ ದೂರು ನೀಡಿದ್ದರು. ಸಾರ್ವಜನಿಕ ದೂರನ್ನ ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿ ವೀಲಿಂಗ್ ಹಾವಳಿಕೊರರನ್ನ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ 189 ಐಎಂವಿ ಕಾಯ್ದೆಯಡಿಯಲ್ಲಿ ಬನಶಂಕರಿ ಬ್ಯಾಟರಾಯನಪುರ, ಬಸವನಗುಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

  • ‘ವೀಲಿಂಗ್ ಮಾಡೋದಕ್ಕೆ ಡಿಸ್ಟರ್ಬ್ ಮಾಡ್ತೀಯಾ’ – KSRTC ಬಸ್ ಹತ್ತಿ ಚಾಲಕನಿಗೆ ವಿದ್ಯಾರ್ಥಿ ಅವಾಜ್

    ‘ವೀಲಿಂಗ್ ಮಾಡೋದಕ್ಕೆ ಡಿಸ್ಟರ್ಬ್ ಮಾಡ್ತೀಯಾ’ – KSRTC ಬಸ್ ಹತ್ತಿ ಚಾಲಕನಿಗೆ ವಿದ್ಯಾರ್ಥಿ ಅವಾಜ್

    ಬೆಂಗಳೂರು: ವೀಲಿಂಗ್ ಮಾಡೋದಕ್ಕೆ ಡಿಸ್ಟರ್ಬ್ ಮಾಡ್ತೀಯಾ ಎಂದು ಕೆಎಸ್ಆರ್‌ಟಿಸಿ ಬಸ್ ಅಡ್ಡಗಟ್ಟಿ ವಿದ್ಯಾರ್ಥಿಯೋರ್ವ ಚಾಲಕನಿಗೆ ಅವಾಜ್ ಹಾಕಿ, ಚಾಲಕನ ಸೀಟಿನ ಮೇಲೆ ಹತ್ತಿ ಹಲ್ಲೆಗೆ ಮುಂದಾದ ಘಟನೆ ಕನಕಪುರದಲ್ಲಿ ನಡೆದಿದೆ.

    ವೀಲಿಂಗ್ ಮಾಡಿ ಕೀಟಲೆ ಕೊಡ್ತಿದ್ದ ವಿದ್ಯಾರ್ಥಿಯ ಬೈಕ್ ಅನ್ನು ಕೆಎಸ್ಆರ್‌ಟಿಸಿ ಬಸ್ ಓವರ್ ಟೇಕ್ ಮಾಡಿ ಮುಂದಕ್ಕೆ ಸಾಗಿತ್ತು. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿ ಬಸ್ ಅಡ್ಡಗಟ್ಟಿ, ಬಸ್ ಹತ್ತಿ ಚಾಲಕನ ಜೊತೆಗೆ ಜಗಳ ಮಾಡಿದ್ದಲ್ಲದೆ ಆತನ ಮೇಲೆ ಹಲ್ಲೆ ನಡೆಸೋದಕ್ಕೆ ಮುಂದಾಗಿದ್ದಾನೆ.

    ಈ ವೇಳೆ ಬಾ ಪೊಲೀಸರ ಬಳಿ ಮಾತನಾಡು ನೀನು ಎಂದು ಚಾಲಕ ಬಸ್ ಚಲಾಯಿಸಿದ್ದು, ಚಾಲಕನ ಸೀಟ್ ಬಳಿಯ ಕಿಟಕಿ ತೆಗೆದು ವಿದ್ಯಾರ್ಥಿ ಬಸ್‍ನಿಂದ ಜಿಗಿದಿದ್ದಾನೆ. ಬಳಿಕ ಬಸ್ಸಿನ ಫೋಟೋ, ವಿಡಿಯೋ ತೆಗೆದುಕೊಂಡು ಬಸ್ ಗಾಜು ಒಡೆಯಲು ಮುಂದಾಗಿದ್ದಾನೆ. ವಿದ್ಯಾರ್ಥಿಯ ರಂಪಾಟಕ್ಕೆ ರಸ್ತೆಯ ಮಧ್ಯೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು, ಪ್ರಯಾಣಿಕರು ಹಾಗೂ ಇತರೆ ವಾಹನ ಸವಾರರು ವಿದ್ಯಾರ್ಥಿಯನ್ನು ಎಷ್ಟೇ ಸಮಾಧಾನ ಮಾಡಿದರೂ ಆತ ಮಾತ್ರ ಯಾರ ಮಾತನ್ನು ಕೇಳದೆ ಗಲಾಟೆ ಮಾಡಿದ್ದಾನೆ.

    ಕೇವಲ ಬಸ್ ಚಾಲಕನಿಗೆ ಮಾತ್ರವಲ್ಲದೆ ಸಿಕ್ಕ ಸಿಕ್ಕವರಿಗೆ ಅವಾಜ್ ಹಾಕಿ ಹೊಡೆಯೋದಕ್ಕೆ ಮುಂದಾಗಿದ್ದಾನೆ. ಕಿರಿಕ್ ವಿದ್ಯಾರ್ಥಿ ರಂಪಾಟ ನೋಡಲು ಆಗದೇ ಕೊನೆಗೆ ಬೇರೆ ದಾರಿ ಕಾಣದ ಬಸ್ ಚಾಲಕ ಪೊಲೀಸರಿಗೆ ಈತನ ವಿರುದ್ಧ ದೂರು ಕೊಡಲು ಮುಂದಾಗಿದ್ದಾರೆ. ಈ ದೃಶ್ಯವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ.

  • ಹೈವೇಯಲ್ಲಿ ಯುವಕನ ಬೈಕ್ ವ್ಹೀಲಿಂಗ್- ಸಾರ್ವಜನಿಕರ ಆಕ್ರೋಶ

    ಹೈವೇಯಲ್ಲಿ ಯುವಕನ ಬೈಕ್ ವ್ಹೀಲಿಂಗ್- ಸಾರ್ವಜನಿಕರ ಆಕ್ರೋಶ

    ನೆಲಮಂಗಲ: ಯುವಕರ ವ್ಹೀಲಿಂಗ್ ಪುಂಡಾಟಿಕೆಗೆ ಬ್ರೇಕ್ ಹಾಕಲು ಪೊಲೀಸರು ವಿಫಲರಾಗುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ನೆಲಮಂಗಲ ಟೌನ್ ಮತ್ತು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವ ಮೂಲಕ ಯುವಕರು ಪುಂಡಾಟಿಕೆ ಮೆರೆದಿರುವುದು ಇದಕ್ಕೆ ಸಾಕ್ಷಿ.

    ಹೌದು. ಹೈವೇಯಲ್ಲಿ ವೀಲ್ಹಿಂಗ್ ಭರಾಟೆ ಜೋರಾಗಿದ್ದು, ತುಮಕೂರು-ಬೆಂಗಳೂರು ರಸ್ತೆಯ ನವಯುಗ ಟೋಲ್‍ನಲ್ಲಿ ವ್ಹೀಲಿಂಗ್ ಮಾಡುತ್ತಿರುವ ಯುವಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವಕನ ದುಸ್ಸಾಹಸವನ್ನು ಹಿಂದಿನ ವಾಹನದವರು ರೆಕಾರ್ಡ್ ಮಾಡಿದ್ದಾರೆ.

    ರಾ.ಹೆ.ಯಲ್ಲಿ ಮೈಝಮ್ ಎನಿಸೋ ಯುವಕನ ಬೈಕ್ ವ್ಹೀಲಿಂಗ್ ಇತರ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಪೊಲೀಸರಿಗೂ ಕ್ಯಾರೇ ಎನ್ನದೆ, ಹಗಲು- ರಾತ್ರಿ ಪುಂಡರ ಬೈಕ್ ಗಳು ಹೆದ್ದಾರಿಗಿಳಿಯುತ್ತವೆ. ಬೈಕ್ ವ್ಹೀಲಿಂಗ್ ತಡೆಯುವುದರಲ್ಲಿ ಪೋಲಿಸರು ವಿಫಲ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ವೀಲ್ಹಿಂಗ್ ಮಾಡ್ತಿದ್ದ 12 ಮಂದಿ ಬೈಕ್ ಸವಾರರ ಬಂಧನ

    ವೀಲ್ಹಿಂಗ್ ಮಾಡ್ತಿದ್ದ 12 ಮಂದಿ ಬೈಕ್ ಸವಾರರ ಬಂಧನ

    ಬೆಂಗಳೂರು: ರೋಡ್‍ಗಳಲ್ಲಿ ವೀಲ್ಹಿಂಗ್ ಮಾಡಬೇಡಿ ಎಂದು ಪೊಲೀಸ್ ಇಲಾಖೆ ಸಾರಿ ಸಾರಿ ಹೇಳಿದರೂ ಯುವ ಪೀಳಿಗೆ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಹೀಗೆ ಸೋಮವಾರ ಸಿಲಿಕಾನ್ ಸಿಟಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ 12 ಮಂದಿ ಬೈಕ್ ಸವಾರರನ್ನು ಬೆಂಗಳೂರು ಗ್ರಾಮಾಂತರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

    ಹೆಬ್ಬಾಳ, ಆರ್.ಟಿ.ನಗರ, ಯಲಹಂಕ, ನೆಲಮಂಗಲ, ಹೆರಘಟ್ಟ, ರಸ್ತೆಯಲ್ಲಿ ತಡರಾತ್ರಿ ಮಫ್ತಿಯಲ್ಲಿ ಪೊಲೀಸರ ತಂಡ ರೋಡಿಗಿಳಿದಿತ್ತು. ಈ ವೇಳೆ ರಾತ್ರಿ ರೋಡಿನಲ್ಲಿ 15ಕ್ಕೂ ಹೆಚ್ಚು ಬೈಕ್ ಸವಾರರು ವೀಲ್ಹಿಂಗ್ ಮಾಡುತ್ತಿರುವುದು ಖಾಕಿ ಕಣ್ಣಿಗೆ ಬಿದ್ದಿದೆ. ಆಗ ಪೊಲೀಸರು ವೀಲ್ಹಿಂಗ್ ಮಾಡುತ್ತಿದ್ದ ಯುವಕರನ್ನು ಬೆನ್ನತ್ತಿ ಹೋಗಿ ಸೆರೆಹಿಡಿದ್ದಾರೆ. ಈ ಸಂಬಂಧ ಬೆಂಗಳೂರು ಗ್ರಾಮಾಂತರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನ ಬಂಧನ

    ಈ ಹಿಂದೆ ವೀಲ್ಹಿಂಗ್ ಮಾಡುತ್ತಿದ್ದ ನಾಲ್ವರು ಯುವಕರಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಕೆಂಗೇರಿಯ ಹೆಮ್ಮಿಗೆಪುರ ಗ್ರಾಮದಲ್ಲಿ ನಡೆದಿತ್ತು. ಸ್ಕೂಟಿಗಳಲ್ಲಿ ಯುವಕರು ಆಗಸ್ಟ್ 4ರಂದು ಮಧ್ಯಾಹ್ನ ನೈಸ್ ರಸ್ತೆಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದರು. ಇದನ್ನು ನೋಡಿದ ಹೆಮ್ಮಿಗೆಪುರದ ಗ್ರಾಮಸ್ಥರು ಯುವಕರನ್ನು ತಡೆದು, ಹಿಗ್ಗಾಮುಗ್ಗ ಥಳಿಸಿದ್ದರು. ಅಷ್ಟೇ ಅಲ್ಲದೆ ಮತ್ತೊಮ್ಮೆ ವೀಲ್ಹಿಂಗ್ ಮಾಡದಂತೆ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದರು.

    https://www.youtube.com/watch?v=mrzf9pynAio

  • ಕೈ ನಾಯಕನ ಮಗನ ವ್ಹೀಲಿಂಗ್ ಹುಚ್ಚಾಟ- ರಸ್ತೆ ಮಧ್ಯೆ ಭಯಾನಕ ಸ್ಟಂಟ್

    ಕೈ ನಾಯಕನ ಮಗನ ವ್ಹೀಲಿಂಗ್ ಹುಚ್ಚಾಟ- ರಸ್ತೆ ಮಧ್ಯೆ ಭಯಾನಕ ಸ್ಟಂಟ್

    ಬಳ್ಳಾರಿ: ಕಾಂಗ್ರೆಸ್ ನಾಯಕ ಹಾಗೂ ಮಾಜಿ ಶಾಸಕರೊಬ್ಬರ ಮಗನ ಕಾರು-ಬಾರು ಬಲು ಜೋರಾಗಿದ್ದು, ನಡು ರಸ್ತೆಯಲ್ಲೇ ವ್ಹೀಲಿಂಗ್ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾನೆ.

    ಸಂಡೂರು, ಹಗರಿಬೊಮ್ಮನಹಳ್ಳಿಯಲ್ಲಿ ವ್ಹೀಲಿಂಗ್ ಕ್ರೇಜ್ ಮಿತಿಮೀರಿದ್ದು, ರಾಜ್ಯದ ಹಲವೆಡೆಯೂ ಕಾರು-ಬೈಕ್ ವ್ಹೀಲಿಂಗ್ ಮಾಡುವುದನ್ನು ಕೈ ನಾಯಕನ ಮಗ ಹಫೀಜ್ ಶೇಖ್ ಹವ್ಯಾಸವಾಗಿಸಿಕೊಂಡಿದ್ದಾನೆ. ನಡು ರಸ್ತೆಯಲ್ಲಿಯೇ ಮನಬಂದಂತೆ ಗಾಡಿ ಚಲಾಯಿಸಿ, ವ್ಹೀಲಿಂಗ್ ಮಾಡಿದರೂ ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತಾಗಿದೆ. ವ್ಹೀಲಿಂಗ್ ಮಾಡುವುದು ಕಾನೂನು ಬಾಹಿರವಾಗಿದ್ದರೂ ಈ ಕುರಿತು ಪೊಲೀಸರು ಈವರೆಗೆ ಕ್ರಮ ಕೈಗೊಂಡಿಲ್ಲ.

    ಅಪಾಯವನ್ನು ಲೆಕ್ಕಿಸದೆ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ, ಈ ಬಾರಿ ವಿಜಯನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಸಿರಾಜ್ ಶೇಖ್ ಮಗ ಹಫೀಜ್ ಶೇಖ್, ವ್ಹೀಲಿಂಗ್ ಮಾಡಿದ್ದಾನೆ. ಹಫೀಜ್ ಶೇಖ್ ಸಹ ಸಂಡೂರು ಪುರಸಭೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದನು. ಆದರೆ ಇದೀಗ ಸಾರ್ವಜನಿಕ ಸ್ಥಳದಲ್ಲಿಯೇ ಅಪಾಯಕಾರಿಯಾಗಿ ಬೈಕ್-ಕಾರ್ ವ್ಹೀಲಿಂಗ್ ಮಾಡುತ್ತಿದ್ದು, ಇವರು ರೋಡಿಗಿಳಿದಾಗ ವಾಹನ ಸವಾರರು ಭಯದಿಂದಲೇ ಸಂಚರಿಸುವ ವಾತಾವರಣ ನಿರ್ಮಾಣವಾಗಿದೆ.

    ಹಫೀಜ್ ಶೇಖ್ ಮಿತಿ ಮೀರಿದ ವೇಗದಲ್ಲಿ ಬೈಕ್, ಕಾರು ಚಲಾಯಿಸುತ್ತಾನೆ. ಅಲ್ಲದೆ ರಾತ್ರಿ ವೇಳೆ ಡಿವೈಡರ್ ಮೇಲೆ ಕಾರು ಹತ್ತಿಸಿ, ಒನ್ ಸೈಡ್ ಕಾರ್ ವ್ಹೀಲಿಂಗ್ ಮಾಡುತ್ತಾನೆ. ಯಾವ ಕಾಂಪಿಟೇಷನ್‍ಗೂ ಕಮ್ಮಿಯಿಲ್ಲದಂತೆ ಕಾರನ್ನು ಹಾರಿಸುತ್ತಾನೆ. ವ್ಹೀಲಿಂಗ್ ಮಾಡಿದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಇದನ್ನು ಕಂಡ ಇತರೆ ಯುವಕರು ಕೂಡ ವ್ಹೀಲಿಂಗ್ ಚಟಕ್ಕೆ ಮುಂದಾಗುತ್ತಿದ್ದಾರೆ.

    ವ್ಹೀಲಿಂಗ್ ಮಾತ್ರವಲ್ಲದೆ ಗನ್ ಪ್ರದರ್ಶನ ಮಾಡಿ ಫೋಟೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇಷ್ಟೆಲ್ಲ ನಡೆದಿದ್ದರು ಸಹ ಬಳ್ಳಾರಿ ಪೊಲೀಸರು ಎಚ್ಚೆತ್ತುಕೊಳ್ಳದಿರುವುದು ಸರ್ವಾಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ವೀಲ್ಹಿಂಗ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್- ಮನೆಯಿಂದ್ಲೇ ಯುವಕ ಅರೆಸ್ಟ್

    ವೀಲ್ಹಿಂಗ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್- ಮನೆಯಿಂದ್ಲೇ ಯುವಕ ಅರೆಸ್ಟ್

    ಬೆಂಗಳೂರು: ಅದೆಷ್ಟು ಬಾರಿ ವೀಲ್ಹಿಂಗ್ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟರೂ ಸಿಲಿಕಾನ್ ಸಿಟಿಯಲ್ಲಿ ಯುವಕರು ತಮ್ಮ ಹುಚ್ಚಾಟವನ್ನು ಮಾತ್ರ ಬಿಟ್ಟಿಲ್ಲ.

    ಬೆಂಗಳೂರಿನ ದೇವನಹಳ್ಳಿ ವ್ಯಾಪ್ತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಗರ್ ಬಂಧಿತ ಯುವಕನಾಗಿದ್ದು, ಆತ ವೀಲ್ಹಿಂಗ್ ಮಾಡಿ, ಆ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದನು.

    ವಿಡಿಯೋ ಆಧರಿಸಿ ನಂಬರ್ ಟ್ರೇಸ್ ಮಾಡಿದ್ದ ಪೊಲೀಸರು ಸಾಗರ್ ಮನೆಗೆ ಬಂದಿದ್ದಾರೆ. ಅಲ್ಲದೆ ಮನೆಯಿಂದಲೇ ಬಂಧಿಸಿ, ವೀಲ್ಹಿಂಗ್‍ಗೆ ಬಳಸಿದ್ದ ಬೈಕ್ ಕೂಡ ಜಪ್ತಿ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ಸತೀಶ್ ಕುಮಾರ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

  • ಯುವಕರ ವೀಲಿಂಗ್‍ಗೆ ಸಹೋದರರಿಬ್ಬರ ದುರ್ಮರಣ

    ಯುವಕರ ವೀಲಿಂಗ್‍ಗೆ ಸಹೋದರರಿಬ್ಬರ ದುರ್ಮರಣ

    ಕೋಲಾರ: ಬೈಕ್ ವೀಲಿಂಗ್ ಮಾಡಿಕೊಂಡು ಬಂದ ಯುವಕರ ಬೈಕ್ ಮತ್ತೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ದಿಂಬ ಗೇಟ್ ಬಳಿ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಬಂಗಾರಪೇಟೆ ತಾಲೂಕು ಮರಗಲ್ ಮೂಲದ ಅಣ್ಣ- ತಮ್ಮಂದಿರಾದ ನೂರ್ ಖಾನ್(60) ಮತ್ತು ಜಮೀಲ್‍ಖಾನ್(58) ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

    ಯುವಕರು ವೀಲಿಂಗ್ ಮಾಡಿಕೊಂಡು ಬಂದು ಅಣ್ಣ-ತಮ್ಮ ಇದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಇಬ್ಬರು ಸಹೋದರರು ಮೃತಪಟ್ಟಿದ್ದಾರೆ. ಮೃತರ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.

    ವೀಲಿಂಗ್ ಮಾಡಿಕೊಂಡು ಬಂದ ಯುವಕರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.