Tag: WhatsApp Pay

  • whatsappನಲ್ಲಿ ಹಣ ಕಳುಹಿಸುವಾಗ ಇರಲಿ ಎಚ್ಚರ!

    ವಾಷಿಂಗ್ಟನ್: ವಾಟ್ಸಪ್ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಬಳಕೆದಾರರ ಸುರಕ್ಷತೆಗಾಗಿ ಕಂಪನಿ ಆಗಾಗ ಗೌಪ್ಯತೆಯ ಕ್ರಮಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ.

    ಹೀಗಿರುವಾಗಲೂ ಹ್ಯಾಕರ್‌ಗಳು ಜನರ ಖಾತೆಗಳನ್ನು ಹ್ಯಾಕ್ ಮಾಡಲು ಒಂದಲ್ಲಾ ಒಂದು ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸೈಬರ್ ಕ್ರಿಮಿನಲ್‍ಗಳು ಆಪ್‍ನಲ್ಲಿ ಲಭ್ಯವಿರುವ ವಾಟ್ಸಪ್ ಪೇ ಫೀಚರ್ ಮೂಲಕ ಜನರಿಂದ ಹಣ ಲೂಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ರೋಹಿತ್ ಟೀಂ ಇಂಡಿಯಾದ ನಾಯಕರಾದ ಬಳಿಕ ಸಿಗುತ್ತಿರುವ ವೇತನ ಎಷ್ಟು ಗೊತ್ತಾ?

    ಇತ್ತೀಚೆಗೆ ವಾಟ್ಸಪ್ ಹಣದ ವಹಿವಾಟಿಗಾಗಿ ಹೊಸ ಫೀಚರ್ `ವಾಟ್ಸಪ್ ಪೇ’ ಅನ್ನು ಪರಿಚಯಿಸಿತ್ತು. ಆ ಮೂಲಕ ಬಳಕೆದಾರರು ನೇರವಾಗಿ ಮತ್ತೊಬ್ಬ ಬಳಕೆದಾರರಿಗೆ ಹಣವನ್ನು ವರ್ಗಾಯಿಸುವಂತಹ ಅನುಕೂಲವನ್ನು ವಾಟ್ಸಪ್ ನೀಡಿತ್ತು.

    ಇದೀಗ ಯುಕೆ ಮೂಲದ ಹ್ಯಾಕರ್‌ಗಳ ಗುಂಪೊಂದು ವಾಟ್ಸಪ್‍ನ ಫೀಚರ್ ಅನ್ನು ಬಳಸಿಕೊಂಡು ಜನರನ್ನು ವಂಚಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.

    whatsapp

    ವಾಟ್ಸಪ್ ಬಳಕೆದಾರರಿಗೆ ಅವರ ಮಗ ಅಥವಾ ಮಗಳಂತೆ ಮೆಸೇಜ್ ಮಾಡಿ ಹಣ ಪಡೆದು ವಂಚಿಸುವ ಕೆಲಸವನ್ನು ಈ ಹ್ಯಾಕರ್‌ಗಳು ಮಾಡುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಬಳಕೆದಾರರ ಮಕ್ಕಳ ಹೆಸರಿನಲ್ಲೇ ಮೆಸೇಜ್ ಮಾಡಿ, ಫೋನ್ ಕಳೆದುಕೊಂಡಿರುವಂತೆ ನಟಿಸಿ ತುರ್ತಾಗಿ ಹಣವನ್ನು ವರ್ಗಾಯಿಸುವಂತೆ ಕೇಳುತ್ತಾರೆ. ಹಲವು ಪೋಷಕರು ಹ್ಯಾಕರ್‌ಗಳ ಮೇಲೆ ಸಂದೇಹ ಪಡದೇ ಅವರನ್ನು ತಮ್ಮ ಮಕ್ಕಳೇ ಎಂದು ತಿಳಿದು ಹಣವನ್ನು ವರ್ಗಾಯಿಸಿ ಮೋಸ ಹೋಗುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್

    ಇಂತಹ ವಂಚನೆ ಪ್ರಕರಣಗಳು ಯುಕೆಗೆ ಮಾತ್ರ ಸೀಮಿತವಾಗದೇ ಭಾರತದಲ್ಲೂ ನಡೆದಿರುವ ಬಗ್ಗೆ ವರದಿಯಾಗಿದೆ. ಇಂತಹ ಸ್ಯಾಮ್‍ಗಳನ್ನು ತಪ್ಪಿಸಲು ವಾಟ್ಸಪ್ ಬಳಕೆದಾರರು ಎಚ್ಚರವಾಗಿರುವುದು ಅಗತ್ಯವಾಗಿದೆ.

  • ವಾಟ್ಸಪ್‌ನಲ್ಲಿ ಹಣ ಸೆಂಡ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

    ವಾಟ್ಸಪ್‌ನಲ್ಲಿ ಹಣ ಸೆಂಡ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

    ನವದೆಹಲಿ: ಇನ್ನು ಮುಂದೆ ವಾಟ್ಸಪ್‌ನಲ್ಲೂ ಹಣವನ್ನು ಕಳುಹಿಸಬಹುದು. ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ(ಎನ್‌ಪಿಸಿಐ) ಅನುಮತಿ ನೀಡಿದ ಹಿನ್ನೆಲೆಯಲ್ಲಿ ವಾಟ್ಸಪ್‌ ಈಗ ಬಳಕೆದಾರರಿಗೆ ಈ ಸೇವೆ ನೀಡಲು ಮುಂದಾಗಿದೆ.

    ಈ ಸಂಬಂಧ ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಜಿಯೋ ಪೇಮೆಂಟ್ಸ್‌ ಬ್ಯಾಂಕ್‌ ಜೊತೆ ಕೆಲಸ ಮಾಡುತ್ತಿದ್ದೇವೆ. ಬಳಕೆದಾರರು ಯಪಿಐ ಬೆಂಬಲಿತ ಆಪ್‌ ಬಳಸಿಕೊಂಡು ಹಣವನ್ನು ಕಳುಹಿಸಬಹುದು ಎಂದು ವಾಟ್ಸಪ್‌ ಹೇಳಿದೆ.

    ಸದ್ಯಕ್ಕೆ ಈ ವಿಶೇಷತೆ ಎಲ್ಲ ವಾಟ್ಸಪ್‌ ಬಳಕೆದಾರರಿಗೆ ಸಿಗುವುದಿಲ್ಲ. 2 ಕೋಟಿ ಮಂದಿಗೆ ಮಾತ್ರ ಬಳಕೆ ಮಾಡಲು ಸಿಗುತ್ತದೆ. ಪ್ರಸ್ತುತ ಭಾರತದಲ್ಲಿ 40 ಕೋಟಿ ಜನ ವಾಟ್ಸಪ್‌ ಬಳಕೆ ಮಾಡುತ್ತಿದ್ದಾರೆ.

     

     

    ಹಣ ಕಳುಹಿಸುವುದು ಹೇಗೆ?
    ವಾಟ್ಸಪ್‌ನಲ್ಲಿ ಹಣ ಕಳುಹಿಸುವ ಮೊದಲು ನೀವು ಯಾರಿಗೆ ಹಣ ಕಳುಹಿಸಬೇಕು ಅಂತ ಉದ್ದೇಶಿಸಿದ್ದೀರೋ ಅವರ ಚಾಟ್‌ ಓಪನ್‌ ಮಾಡಿ ಕ್ಯಾಮೆರಾ ಬಳಿ ಇರುವ ಅಟ್ಯಾಚ್‌ಮೆಂಟ್‌ ಕ್ಲಿಕ್‌ ಮಾಡಿ. ಇದಾದ ಬಳಿಕ ಪೇಮೆಂಟ್‌ ಆಯ್ಕೆಯಲ್ಲಿ ನಿಮ್ಮ ಬ್ಯಾಂಕ್‌ ಖಾತೆಯನ್ನು ಆರಿಸಿಕೊಳ್ಳಿ.

    ನಂತರ ನಿಮ್ಮ ವಾಟ್ಸಪ್‌ ಮೊಬೈಲ್‌ ನಂಬರ್‌ ಬ್ಯಾಂಕ್‌ ಖಾತೆಗೆ ನೀಡಿದ ಮೊಬೈಲ್‌ ಸಂಖ್ಯೆ ಸರಿ ಇದ್ಯಾ ಎಂದು ಖಚಿತಪಡಿಸಿ. ಇದಾದ ಬಳಿಕ ವಾಟ್ಸಪ್‌ ಪೇಮೆಂಟ್‌ ಮೂಲಕ ಹಣವನ್ನು ಕಳುಹಿಸಬಹುದು. ಗಮನಿಸಬೇಕಾದ ಅಂಶ ನೀವು ಹಣವನ್ನು ಯಾರಿಗೆ ಕಳುಹಿಸುತ್ತಿರೋ ಅವರು ಸಹ ನಿಮ್ಮ ರೀತಿಯಲ್ಲೇ ವಾಟ್ಸಪ್‌ ಸೆಟಪ್‌ ಮಾಡಿರಬೇಕಾಗುತ್ತದೆ.

    ವಿಳಂಬ ಆಗಿದ್ದು ಯಾಕೆ?
    ಗೂಗಲ್‌ ಪೇ, ಫೋನ್‌ ಪೇಯಂತೆ ವಾಟ್ಸಪ್‌ನಲ್ಲೂ ಈ ಸೇವೆ ಈ ಮೊದಲೇ ಜಾರಿಯಾಗಬೇಕಿತ್ತು. 2018ರಲ್ಲೇ ಪ್ರಾಯೋಗಿಕವಾಗಿ ಈ ಸೇವೆ ಆರಂಭಗೊಂಡಿತ್ತು. ಆದರೆ ವಾಟ್ಸಪ್‌ ಭಾರತೀಯ ಬಳಕೆದಾರರ ಪೇಮೆಂಟ್ಸ್‌ ಡೇಟಾ ಸಂಗ್ರಹಣೆ ವಿಚಾರದಲ್ಲಿ ಸ್ಥಳೀಯ ಮಾನದಂಡಗಳನ್ನು ಅನುಸರಿಸದ ಕಾರಣ ವಾಟ್ಸಪ್‌ ಪೇಮೆಂಟ್ಸ್‌ಗೆ ಅನುಮತಿ ನೀಡುವುದಿಲ್ಲ ಎಂದು ಆರ್‌ಬಿಐ 2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

    ಬಳಕೆದಾರರ ಟ್ರಾನ್ಸಕ್ಷನ್‌ ಐಡಿ, ರೆಫೆರೆನ್ಸ್‌ ನಂಬರ್‌ ಇತ್ಯಾದಿಗಳನ್ನು ವಾಟ್ಸಪ್‌ ಭಾರತದ ಹೊರಗಡೆ ಸಂಗ್ರಹ ಮಾಡುತ್ತಿರುವ ಕಾರಣ ಅನುಮತಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ಗೆ ಆರ್‌ಬಿಐ ಮಾಹಿತಿ ನೀಡಿತ್ತು. ಈ ವಿಚಾರದ ಬಗ್ಗೆ ಇದ್ದ ಎಲ್ಲ ಗೊಂದಲಗಳು ಈಗ ನಿವಾರಣೆಯಾದ ಎನ್‌ಪಿಸಿಐ ವಾಟ್ಸಪ್‌ ಪೇಮೆಂಟ್ಸ್‌ಗೆ ಅನುಮತಿ ನೀಡಿದೆ.

    ವಾಟ್ಸಪ್ 8ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿದ್ದರು. ಈ ವೇಳೆ ಈ ವೇಳೆ ಬುಸಿನೆಸ್ ಕ್ಷೇತ್ರವನ್ನು ಹೇಗೆ ವಿಸ್ತರಿಸುತ್ತೀರಿ ಎನ್ನುವ ಪ್ರಶ್ನೆಗೆ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು. 2017ರ ಫೆಬ್ರವರಿ 24ರಂದು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಬ್ರಿಯಾನ್ ಆಕ್ಟನ್ ಭೇಟಿ ಮಾಡಿ ‘ಡಿಜಿಟಲ್ ಇಂಡಿಯಾ’ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದರು.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 40 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ.