Tag: Wesley Bridge

  • ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ

    ಚಾಮರಾಜನಗರ: ಕೇರಳದ ವಯನಾಡಿನಲ್ಲಿ ವರುಣನ ಅಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

    ಕಳೆದ ಎರಡು ದಿನಗಳಿಂದ ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎರಡು ದಿನಗಳಿಂದ ರಸ್ತೆಯಲ್ಲಿಯೇ ವಾಹನಗಳು ಸಾಲುಗಟ್ಟಿ ನಿಂತುಕೊಂಡಿದ್ದವು. ಆದರೆ ಈಗ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಇದೀಗ ಮಳೆ ಅಬ್ಬರ ಕೊಂಚ ತಗ್ಗಿರುವ ಕಾರಣಕ್ಕೆ ಭಾರೀ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಅವುಗಳನ್ನು ಬಿಟ್ಟು ಇತರೆ ಕಾರು, ಬೈಕ್‍ಗಳ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಇತ್ತ ಕಾವೇರಿ ನದಿಯಲ್ಲಿ ಪ್ರವಾಹದ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ವೆಸ್ಲಿ ಸೇತುವೆ ಮತ್ತಷ್ಟು ಕುಸಿಯುವ ಹಂತಕ್ಕೆ ಬಂದಿದೆ. ಬ್ರಿಟಿಷರ ಕಾಲದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಕಳೆದ ವರ್ಷದ ಪ್ರವಾಹಕ್ಕೆ ಸಿಲುಕಿ ಈ ಸೇತುವೆ ಕುಸಿದು ಹೋಗಿತ್ತು. ಉಕ್ಕಿ ಹರಿಯುವ ನದಿ ನೀರಿನ ಹೊಡೆತಕ್ಕೆ ಸೇತುವೆ ಮತ್ತಷ್ಟೂ ಕುಸಿಯುವ ಸಾಧ್ಯತೆ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ನೀರಿನ ಅಬ್ಬರಕ್ಕೆ ಸೇತುವೆ ಕುಸಿದು ಇತಿಹಾಸದ ಪುಟ ಸೇರುತ್ತಾ ಎಂಬ ಆತಂಕ ಜನರಲ್ಲಿ ಮನೆಮಾಡಿದೆ.

  • ಕೆಆರ್‌ಎಸ್‌ ನೀರಿನ ರಭಸಕ್ಕೆ ಕೊಚ್ಚಿ ಹೋಯ್ತು 210 ವರ್ಷ ಹಳೆಯ ವೆಸ್ಲೀ  ಸೇತುವೆ

    ಕೆಆರ್‌ಎಸ್‌ ನೀರಿನ ರಭಸಕ್ಕೆ ಕೊಚ್ಚಿ ಹೋಯ್ತು 210 ವರ್ಷ ಹಳೆಯ ವೆಸ್ಲೀ ಸೇತುವೆ

    ಚಾಮರಾಜನಗರ: ಕೃಷ್ಣರಾಜಸಾಗರ  (ಕೆಆರ್‌ಎಸ್‌) ಅಣೆಕಟ್ಟಿನಿಂದ ಅಧಿಕ ನೀರು ಹೊರಗೆ ಹರಿಸಿರುವ ಹಿನ್ನೆಲೆಯಲ್ಲಿ ಪುರಾತನ ಕಾಲದ ವೆಸ್ಲೀ ಸೇತುವೆ ಕೊಚ್ಚಿ ಹೋಗಿದೆ.

    ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿರುವ ವೆಸ್ಲೀ ಸೇತುವೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈ ಸೇತುವೆ ಒಂದು ಭಾಗ ಇದೀಗ ಸಂಪೂರ್ಣವಾಗಿ ಕೊಚ್ಚಿಹೋಗಿದೆ.

    ಸೇತುವೆ ಹಿನ್ನೆಲೆ: 1799 ರಲ್ಲಿ ಬ್ರಿಟಿಷರ ವಿರುದ್ಧ ನಡೆದ 4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣಹೊಂದಿದ್ದು, ಈ ವೇಳೆ ಮೈಸೂರು ಸಂಸ್ಥಾನಕ್ಕೆ ಪೂರ್ಣಯ್ಯ ಅವರು ದಿವಾನರಾಗಿದ್ದರು. ಈ ವೇಳೆ ಪೂರ್ಣಯ್ಯ ಅವರ ಮುಂದಾಳತ್ವದಲ್ಲಿ ಕಪಿಲ ಹಾಗೂ ಕಾವೇರಿ ನದಿಗಳು ಸೇರುವ ಸ್ಥಳದಲ್ಲಿ 1808 ರಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷ್ ರಾಯಬಾರಿ ವೆಸ್ಲೀ ಮೈಸೂರು ಆಸ್ಥಾನಕ್ಕೆ ಭೇಟಿ ನೀಡಿ ಆಳ್ವಿಕೆ ಮರುಸ್ಥಾಪಿಸಲು ನೆರವು ನೀಡಿದ ಕಾರಣ ಈ ಸೇತುವೆಗೆ ವೆಸ್ಲಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

    ಹಲವು ವರ್ಷಗಳಿಂದ ಶಿಥಿಲಾವಸ್ಥೆಯಿಂದ ಕೂಡಿದ್ದ ಈ ಸೇತುವೆ ಸದ್ಯ ಕೆಆರ್ ಎಸ್ ಅಣೆಕಟ್ಟಿನಿಂದ ಅಧಿಕ ಪ್ರಮಾಣದ ನೀರು ಹರಿಸಿದ ಕಾರಣ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದೀಗ ಆ ಸೇತುವೆ ನೀರಿನಲ್ಲಿ ಕೊಚ್ಚಿಹೋಗಿರುವ ಕಾರಣ, ಇನ್ನೂ ಮುಂದೆ ವೆಸ್ಲೀ ಸೇತುವೆ ನೆನಪು ಮಾತ್ರ.