Tag: wenlock hospital

  • ಆಸ್ಪತ್ರೆಯಲ್ಲೇ ಮಂಗಳೂರಿನ ವೈದ್ಯಾಧಿಕಾರಿಯ ರಂಗಿನಾಟ – ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

    ಆಸ್ಪತ್ರೆಯಲ್ಲೇ ಮಂಗಳೂರಿನ ವೈದ್ಯಾಧಿಕಾರಿಯ ರಂಗಿನಾಟ – ಮಹಿಳಾ ಸಿಬ್ಬಂದಿ ಜೊತೆ ಚೆಲ್ಲಾಟ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬನ ಕಾಮಪುರಾಣ ಬಯಲಾಗಿದೆ.

    ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ ಚೆಲ್ಲಾಟ ಆಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ಆಸ್ಪತ್ರೆಯ 9 ಮಂದಿ ಮಹಿಳಾ ಸಿಬ್ಬಂದಿ ಜೊತೆಗೆ ರತ್ನಾಕರ್ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ತೊಡೆಯ ಓರ್ವ ಮಹಿಳೆಯನ್ನು ಕೂರಿಸಿದ್ದಾನೆ. ಮಹಿಳಾ ಸಿಬ್ಬಂದಿ ಮೂಲಕ ರತ್ನಾಕರ್ ಪಾದ ಸೇವೆ ಮಾಡಿದ್ದಾನೆ. ಇಬ್ಬಿಬ್ಬರು ಮಹಿಳಾ ಸಿಬ್ಬಂದಿಯನ್ನು ಕೂರಿಸಿಕೊಂಡು ರತ್ನಾಕರ್ ಆಸ್ಪತ್ರೆಯಲ್ಲಿಯೇ ರಂಗಿನಾಟ ಆಡಿದ್ದಾನೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

    ಸರ್ಕಾರಿ ವೈದ್ಯನಾಗಿರುವ ರತ್ನಾಕರ್ ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿದ್ದಾನೆ. ಒಂದು ವೇಳೆ ರತ್ನಾಕರ್ ಜೊತೆಗೆ ಸಹಕರಿಸದ ಸಿಬ್ಬಂದಿಯನ್ನು ಕೆಲಸದಿಂದ ತೆಗೆಸುವ ಅಥವಾ ಟ್ರಾನ್ಸ್‍ಫರ್ ಮಾಡಿಸುವ ಹೀಗೆ ಹಲವಾರು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ. ಈ ಭಯಕ್ಕೆ ಮಹಿಳಾ ಸಿಬ್ಬಂದಿ ಆತ ಹೇಳಿದಂತೆ ಕೇಳುತ್ತಿದ್ದರು.

    ರತ್ನಾಕರ್ ಮಹಿಳಾ ಸಿಬ್ಬಂದಿ ಜೊತೆ ಆಗಾಗ ಟ್ರಿಪ್ ಹೋಗುತ್ತಿದ್ದ. ಈ ಸಂದರ್ಭದಲ್ಲೂ ಆತ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ರತ್ನಾಕರ ಕಿರುಕುಳದಿಂದ ನೊಂದ ಮಹಿಳೆಯರು ಆರೋಪಿ ವಿರುದ್ಧ ಕಠಿಣವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ದಕ್ಷಿಣ ಕನ್ನಡದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಡಾ.ಕೆ.ವಿ.ರಾಜೇಂದ್ರ ಸೂಚನೆ

    ದಕ್ಷಿಣ ಕನ್ನಡದಲ್ಲಿ ಕೋವಿಡ್ ಪರಿಸ್ಥಿತಿ ಎದುರಿಸಲು ಡಾ.ಕೆ.ವಿ.ರಾಜೇಂದ್ರ ಸೂಚನೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಮುಂಬರುವ ದಿನಗಳಲ್ಲಿ ಕೋವಿಡ್ ಸೋಂಕಿತರು ಹೆಚ್ಚು ಚಿಕಿತ್ಸೆಗೆ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಅವರುಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು. ಉತ್ತಮ ಚಿಕಿತ್ಸೆ ನೀಡಲು ಮುಂದಾಗಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ವೆನ್ ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

    ನಗರದ ವೆನ್‍ಲಾಕ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಚಿಕಿತ್ಸೆಗೆ ಹೆಚ್ಚುವರಿ ಬೆಡ್‍ಗಳ ವ್ಯವಸ್ಥೆ ಮಾಡುವ ಕುರಿತು ಪರಿಶೀಲಿಸಿ ನಂತರ ಆರೋಗ್ಯ ವೈದ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರುಗಳು, ತಜ್ಞ ವೈದ್ಯರುಗಳು ಹಾಗೂ ಶುಶ್ರೂಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ರೋಗಿಗಳಿಗೆ ಚಿಕಿತ್ಸೆ ನೀಡಲು ಕೊರತೆ ಉಂಟಾಗಬಾರದು. ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಸೇವೆಗೆ ನಿಯೋಜಿಸುವುದರಿಂದ ಅಗತ್ಯ ಚಿಕಿತ್ಸೆಗಳನ್ನು ನೀಡಲು ಸಹಕಾರಿಯಾಗುತ್ತದೆ ಎಂದರು.

    ಸಾಮಾನ್ಯ ರೋಗ ಲಕ್ಷಣಗಳಿರುವ ವ್ಯಕ್ತಿಗಳನ್ನು ನಗರದ ಕದ್ರಿಯಲ್ಲಿರುವ ಇ.ಎಸ್.ಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ವೈರಾಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಕಯಂತ್ರದ ಸಿಬ್ಬಂದಿಯನ್ನ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ ಕೋವಿಡ್ ಪರೀಕ್ಷೆಯ ವರದಿಗಳನ್ನು ವಿಳಂಬವಿಲ್ಲದೇ ನೀಡಬೇಕು ಎಂದು ಕೂಡ ತಿಳಿಸಿದರು.

    ಆಸ್ಪತ್ರೆಯಲ್ಲಿ ಕೋವಿಡ್ ಪ್ರಕರಣಗಳಿಗೆ ಕಾಯ್ದಿರಿಸಿದ ಹಾಸಿಗೆಗಳು, ಐಸಿಯು, ವೆಂಟಿಲೇಟರ್ ಹಾಗೂ ಔಷಧಿಗಳನ್ನು ವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳಬೇಕು. ಕೋವಿಡ್ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಪೂರಕವಾಗುವ ಔಷಧಿಗಳ ದಾಸ್ತಾನುಗಳು ಸೇರಿದಂತೆ ಮತ್ತಿತರ ಸುರಕ್ಷಾ ಸಾಧನಗಳು ಹಾಗೂ ಪರಿಕರಗಳನ್ನು ಮುಂದಿನ 15 ರಿಂದ 20 ದಿನಗಳಿಗೆ ಆಗುವಂತೆ ದಾಸ್ತಾನು ಇಟ್ಟಕೊಳ್ಳಬೇಕು ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್, ಸರ್ವೇಕ್ಷಣಾಧೀಕಾರಿ ಡಾ. ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸದಾಶಿವ ಶಾನುಭೋಗ್, ಕೆಎಂಸಿ ಹಾಗೂ ವೆನ್‍ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

  • ಮೃತನ ಅಂತ್ಯಸಂಸ್ಕಾರದ ಬಳಿಕ ಆಸ್ಪತ್ರೆಯಲ್ಲಿ ಅದೇ ಹೆಸರಿನ ಮತ್ತೊಂದು ಮೃತದೇಹ ಪ್ರತ್ಯಕ್ಷ!

    ಮೃತನ ಅಂತ್ಯಸಂಸ್ಕಾರದ ಬಳಿಕ ಆಸ್ಪತ್ರೆಯಲ್ಲಿ ಅದೇ ಹೆಸರಿನ ಮತ್ತೊಂದು ಮೃತದೇಹ ಪ್ರತ್ಯಕ್ಷ!

    – ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಎಡವಟ್ಟು
    – ಖಾಲಿ ಹಾಳೆಯಲ್ಲಿ ಬಿಲ್ ಬರೆದು ಹಣಕ್ಕೆ ಡಿಮ್ಯಾಂಡ್

    ಮಂಗಳೂರು: ಅಂತ್ಯಸಂಸ್ಕಾರವೂ ಆಯ್ತು, ಶವ ಬೂದಿಯೂ ಆಗೋಯ್ತು. ಆದರೆ ಅಂತ್ಯಕ್ರಿಯೆ ಬೆನ್ನಲ್ಲೇ ಹಣಕಟ್ಟಿ ಹೆಣ ತೆಗೆದುಕೊಂಡು ಹೋಗಿ ಅಂತ ಕುಟುಂಬಸ್ಥರಿಗೆ ಸಿಬ್ಬಂದಿ ಕರೆ ಮಾಡಿದ ಘಟನೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ.

    ಹೌದು. ಮೃತನ ಅಂತ್ಯಸಂಸ್ಕಾರದ ಬಳಿಕ ಆಸ್ಪತ್ರೆಯಲ್ಲಿ ಅದೇ ಹೆಸರಿನ ಮತ್ತೊಂದು ಮೃತದೇಹ ಪ್ರತ್ಯಕ್ಷವಾಗಿದೆ. ಈ ಮೂಲಕ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ. ಮೃತದೇಹ ಸುಟ್ಟು ಬೂದಿಯಾದ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಈ ವೇಳೆ ನಿಮ್ಮವರ ಮೃತದೇಹ ತೆಗೆದುಕೊಂಡು ಹೋಗಿ ಎಂದು ಪದೇ ಪದೇ ಕಾಲ್ ಮಾಡಿದ್ದಾರೆ.

    ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ವಿನೋದ್ ಎಂಬಾತ ಆ.19ರಂದು ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಉಳಾಯಿಬೆಟ್ಟು ನಿವಾಸಿ ವಿನೋದ್ ಅನಾಥರಾಗಿರುವ ಕಾರಣ ಆ.19 ರಂದೇ ಸ್ಥಳೀಯರು ಅಂತ್ಯಕ್ರಿಯೆ ನೆರವೇರಿಸಿದ್ದರು. ಅಂತ್ಯಕ್ರಿಯೆ ಬೆನ್ನಲ್ಲೇ ಹಣ ಕಟ್ಟಿ ಹೆಣ ತೆಗೆದುಕೊಂಡು ಹೋಗಿ ಅಂತ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ. ಅಲ್ಲದೆ ಅ.20 ಮತ್ತು 21ಕ್ಕೆ ಮತ್ತೆ ಫೋನ್ ಕರೆ ಮಾಡಿ ಕಿರಿಕ್ ಮಾಡಿದ್ದಾರೆ.

    4 ಸಾವಿರ ಕಟ್ಟಿ ಹೆಣ ತೆಗೆದುಕೊಂಡು ಹೋಗಿ ಅಂತ ವೆನ್ ಲಾಕ್ ಆಸ್ಪತ್ರೆ ಸಿಬ್ಬಂದಿ ಪದೇ ಪದೇ ಕರೆ ಮಾಡಿದ್ದಾರೆ. ಈ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ ಕೊಡಲು ಸಿಬ್ಬಂದಿ ಹಣ ಕೇಳಿರುವುದು ಬಯಲಾಗಿದೆ. ಖಾಲಿ ಹಾಳೆಯಲ್ಲಿ ಬಿಲ್ ಬರೆದು ಹೆಣ ಕೊಡಲು ಹಣಕ್ಕೆ ಬೇಡಿಕೆ ಇಡುವ ಮೂಲಕ ಅಂತ್ಯಸಂಸ್ಕಾರ ನಡೆದರೂ ಮತ್ತೆ ಅದೇ ಹೆಸರಿನಲ್ಲಿ ಹೆಣ ತೆಗೆದುಕೊಂಡು ಹೋಗಲು ದುಂಬಾಲು ಬಿದ್ದ ಪ್ರಸಂಗ ನಡೆದಿದೆ.

  • ಕೊರೊನಾ ವಿರುದ್ಧ ಹೋರಾಡಿ ಸಾವನ್ನ ಗೆದ್ದ ಅಸ್ತಮಾ, ಬಿಪಿಯಿಂದ ಬಳಲುತ್ತಿದ್ದ 68ರ ವೃದ್ಧೆ

    ಕೊರೊನಾ ವಿರುದ್ಧ ಹೋರಾಡಿ ಸಾವನ್ನ ಗೆದ್ದ ಅಸ್ತಮಾ, ಬಿಪಿಯಿಂದ ಬಳಲುತ್ತಿದ್ದ 68ರ ವೃದ್ಧೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾ ಅಂದ್ರೆ ಇಲ್ಲಿನ ಜನ ಎಷ್ಟು ಭಯ ಬೀತರಾಗುತ್ತಿದ್ದರೋ ವೆನ್ಲಾಕ್‍ನ ಕೋವಿಡ್-19 ಆಸ್ಪತ್ರೆ ಅಂದ್ರೂ ಕೂಡ ಅಷ್ಟೇ ಭಯ ಬೀಳುತ್ತಿದ್ದರು. ಯಾಕಂದ್ರೆ ವೆನ್ಲಾಕ್‍ನ ಕೋವಿಡ್ ಐಸಿಯು ಒಳಗೆ ಹೋದ್ರೆ ಸಾಕು ಯಮಲೋಕಕ್ಕೆ ಹೋಗುತ್ತಾರೆ ಎನ್ನುವ ಮಾತುಗಳನ್ನಾಡುತ್ತಿದ್ದರು. ಆದರೆ ಈಗ ಅದೇ ಐಸಿಯುನಲ್ಲಿ ಒಂದು ಅಚ್ಚರಿ ನಡೆದಿದೆ. ಇನ್ನೇನು ಸತ್ತೆ ಹೋದರು ಎನ್ನುವ ವೃದ್ಧೆಯೊಬ್ಬರು ಫಿನಿಕ್ಸ್ ನಂತೆ ಎದ್ದು ಬಂದಿದ್ದಾರೆ.

    ಕರಾವಳಿಗೆ ಯಾವಾಗ ಕೊರೊನಾ ಆಗಮಿಸಿ ಟಕ್ಕರ್ ಕೊಟ್ಟಿತ್ತೊ ಆಗಲೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ ಮಾಡಲಾಗಿತ್ತು. ಇಡೀ ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಬಳಿಕ ಐಸಿಯುಗಳನ್ನು ಕೋವಿಡ್ ಐಸಿಯುಗಳಾಗಿ ಮಾರ್ಪಾಡು ಮಾಡಲಾಗಿತ್ತು. ಮೊದಲು ಐಸಿಯುಗೆ ಸೇರಿದ ಐದು ಮಹಿಳೆಯರು ಮತ್ತು ವೃದ್ಧೆಯರು ಅಲ್ಲೇ ಸಾವನ್ನಪ್ಪಿದ್ದರು. ಈ ಐಸಿಯು ಸೇರಿದ್ರೆ ಸೀದ ಯಮಲೋಕಕ್ಕೆ ಟಿಕೇಟ್ ಅಂತ ಜನರು ಮಾತನಾಡಿಕೊಳ್ಳಲು ಆರಂಭಿಸಿದ್ದರು. ಆದ್ದರಿಂದ ಕೊರೊನಾ ಬಂದವರು ಈ ಆಸ್ಪತ್ರೆ ಸೇರಲು ಹೆದರುತ್ತಿದ್ದರು. ಸದ್ಯ ಈ ಐಸಿಯುನಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ.

    ಮಂಗಳೂರು ಹೊರವಲಯದ ಸುರತ್ಕಲ್‍ನ 68 ವರ್ಷದ ವೃದ್ಧೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ತೋರಿಸಿದ್ದಾಗ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಮೇ 15ರಂದು ಬಂದ ರಿಪೋರ್ಟ್ ನಲ್ಲಿ ಕೊರೊನಾ ತಗುಲಿರುವುದು ದೃಢಪಟ್ಟಿತ್ತು. ವೃದ್ಧೆಗೆ ಅಸ್ತಮಾ, ಬಿಪಿ, ಶುಗರ್ ಸೇರಿದಂತೆ ವಿವಿಧ ಕಾಯಿಲೆ ಬಳಲುತ್ತಿದ್ದ ಅವರನ್ನು ವೆನ್ಲಾಕ್‍ನ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಅವರ ಆರೋಗ್ಯ ಯಾವ ಪರಿ ಹಾಳಾಗಿತ್ತೆಂದರೆ ಅವರು ಸಾವನ್ನಪ್ಪೇ ಬಿಟ್ಟರು ಅಂತ ಜನರು ಮಾತನಾಡಿಕೊಂಡಿದ್ದರು. ಆದರೆ ವೃದ್ಧೆ ಸುಮಾರು 14 ದಿನಗಳ ಕಾಲ ಕೊರೊನಾದ ವಿರುದ್ಧ ಹೋರಾಡಿ ಗೆದ್ದಿದ್ದಾರೆ.

    ವೆನ್ಲಾಕ್‍ನ ಐಸಿಯುನಲ್ಲಿ ಎಲ್ಲಾ ಬಗೆಯ ಅನುಕೂಲಗಳಿವೆ. ಆಲ್ಟ್ರಾ ಸೌಂಡ್ ಸ್ಕಾನ್‍ನಿಂದ ಹಿಡಿದು ಎಲ್ಲಾ ಬಗೆಯ ಟೆಸ್ಟ್ ಗಳನ್ನು ಇಲ್ಲೇ ಮಾಡುವಂತೆ ಸೆಟ್ ಮಾಡಲಾಗಿದೆ. ಅವರಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಡಲು ಪೂರಕ ವಾತರವರಣ ನಿರ್ಮಿಸಿಕೊಡಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ಪ್ರತಿ ವಿಭಾಗಕ್ಕೂ ಸ್ಪೆಷಲಿಸ್ಟ್ ವೈದ್ಯರು ಇದ್ದು ಅವರಿಂದ ಚಿಕಿತ್ಸೆ ಕೊಡಿಸಲಾಗುತ್ತೆ. ವೈದ್ಯಕೀಯ ಸಿಬ್ಬಂದಿ ಕೂಡ ಇಲ್ಲಿದ್ದಾರೆ.

    68 ವರ್ಷದ ವೃದ್ಧೆಯ ಶ್ವಾಸಕೋಶಕ್ಕೂ ಕೂಡ ಕೊರೊನಾ ಸೋಂಕು ಹಾನಿ ಮಾಡಿದ್ದನ್ನು ಕೂಡ ಇಲ್ಲಿ ಗುಣಪಡಿಸಿದ್ದಾರೆ. ವೃದ್ಧೆಯ ಜೊತೆ ಮತ್ತೊರ್ವ ಪಾಶ್ರ್ವವಾಯುವಿನಿಂದ ಬಳಲುತ್ತಿದ್ದ ಕೊರೊನಾ ಸೋಂಕಿ ರೋಗಿ ಕೂಡ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜನರಲ್ ವಾರ್ಡ್ ನಲ್ಲಿದ್ದ 10 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಐಸಿಯುನಲ್ಲಿ ಇನ್ನೆರಡು ಜನ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ 48 ಗಂಟೆಗಳಲ್ಲಿ ಡಿಸ್ಚಾರ್ಜ್ ಆಗುವ ಭರವಸೆ ಇದೆ. ವೈದ್ಯರು ಕೋವಿಡ್ ವಾರಿಯರ್ಸ್ ಗಳಾಗಿ ಕೆಲಸ ಮಾಡುತ್ತಿದ್ದಾರೆ.

    ವೈದ್ಯರ ಚಿಕಿತ್ಸೆಗೆ ರೋಗಿಗಳು ಕೂಡ ಅಷ್ಟೇ ಸ್ಪಂದಿಸುತ್ತಿದ್ದಾರೆ. ಸಾಲು ಸಾಲು ಕೊರೊನಾ ಸಾವನ್ನು ಕಂಡಿದ್ದ ಕೋವಿಡ್ ಐಸಿಯು ವೆನ್ಲಾಕ್ ಈಗ ಆ ಕಳಂಕದಿಂದ ಹೊರಬಂದಿದೆ.

  • ಮಂಗ್ಳೂರು ಆಸ್ಪತ್ರೆಯಿಂದ ಪರಾರಿಯಾಗಿ ಹೈಡ್ರಾಮಾ – ಕೊರೊನಾ ಶಂಕಿತ ಕೊನೆಗೂ ವಿಟ್ಲದಲ್ಲಿ ಪತ್ತೆ

    ಮಂಗ್ಳೂರು ಆಸ್ಪತ್ರೆಯಿಂದ ಪರಾರಿಯಾಗಿ ಹೈಡ್ರಾಮಾ – ಕೊರೊನಾ ಶಂಕಿತ ಕೊನೆಗೂ ವಿಟ್ಲದಲ್ಲಿ ಪತ್ತೆ

    ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಿಂದ ನಾಪತ್ತೆಯಾಗಿ ಹೈಡ್ರಾಮಾ ಸೃಷ್ಟಿಸಿದ್ದ ಕೊರೊನಾ ಶಂಕಿತನನ್ನು ಕೊನೆಗೂ ಪತ್ತೆ ಮಾಡಲಾಗಿದೆ.

    ಮಂಗಳೂರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ ವ್ಯಕ್ತಿ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ರಂಗರಮಜಲು ಗ್ರಾಮದ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ. ಬಂಟ್ವಾಳ ಪೊಲೀಸರು, ವೈದ್ಯಾಧಿಕಾರಿಗಳಿಂದ ಶಂಕಿತನನ್ನು ಮನವೊಲಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

    ಭಾನುವಾರ ತಡರಾತ್ರಿ ದುಬೈನಿಂದ ಮಂಗಳೂರಿಗೆ ಬಂದಿಳಿದ ವ್ಯಕ್ತಿಯಲ್ಲಿ ಜ್ವರ ಕಂಡುಬಂದಿತ್ತು. ಕೂಡಲೇ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಐಸೋಲೇಷನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಬೆಳಗಿನ ಜಾವ ಆ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿದ್ದ.

    ನಡೆದಿದ್ದು ಏನು?
    ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮೂಲಕ ಪ್ರಯಾಣಿಕರ ಟೆಂಪರೇಚರ್ ಚಕ್ ಮಾಡಲಾಗುತ್ತಿತ್ತು. ಅದೇ ರೀತಿ ನಿನ್ನೆ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ ಓರ್ವ ಪ್ರಯಾಣಿಕನ ಉಷ್ಣಾಂಶ ಹೆಚ್ಚು ಕಂಡುಬಂದಿದೆ. ತಕ್ಷಣ ಆತನನ್ನು ವೈದ್ಯರು ತಪಾಸಣೆ ಮಾಡಿದಾಗ ಆತನಿಗೆ ಜ್ವರ ಇರೋದು ಕಂಡು ಬಂದಿದೆ. ಅಲ್ಲಿಂದ ಅಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಗೆ ಆತನನ್ನು ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆತನ ರಕ್ತದ ಮಾದರಿಯನ್ನು ಸಂಗ್ರಹಿಸಲು ಮುಂದಾಗಿದ್ದರು. ಆದ್ರೆ ಆತ ರಕ್ತ ಕೊಡಲು ಒಪ್ಪಿರಲಿಲ್ಲ. ಬೆಳಗ್ಗೆ ಆತನ ರಕ್ತದ ಮಾದರಿಯನ್ನು ಸಂಗ್ರಹಿಸಿದರೆ ಸಾಕು ಅಂತಾ ಇದ್ದರು. ಆದ್ರೆ ಇಂದು ಮುಂಜಾನೆ ಐಸೋಲೇಶನ್ ವಾರ್ಡ್ ನಿಂದ ಆತ ಪರಾರಿಯಾಗಿದ್ದ.

    ಮಂಗಳೂರು ಹೊರವಲಯದ ನಿವಾಸಿಯಾಗಿದ್ದ ಆತನ ಮನೆಗೆ ಆರೋಗ್ಯಧಿಕಾರಿಗಳು ಹೋಗಿದ್ದಾರೆ. ಆದ್ರೆ ಅವರ ಮನೆಯವರು ಮತ್ತು ಸ್ಥಳೀಯರು ಆರೋಗ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರೊಂದಿಗೆ ಆತನ ಮನೆ ಬಳಿ ಹೋದಾಗ ಮನೆಗೆ ಬೀಗ ಹಾಕಿಕೊಂಡು ಮನೆಯವರೆಲ್ಲಾ ಎಲ್ಲೋ ಹೋಗಿದ್ದರು. ನಂತರ ಪೊಲೀಸರು ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಆತ ಬಂಟ್ವಾಳದ ವಿಟ್ಲ ಬಳಿಯ ಸಂಬಂಧಿಕರ ಮನೆಯಲ್ಲಿರುವುದು ತಿಳಿದು ಬಂತು. ಬಳಿಕ ಪೊಲೀಸರು ಆರೋಗ್ಯಾಧಿಕಾರಿಗಳು ಆತನ ಮನವೊಲಿಸಿ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಪರೀಕ್ಷೆಯ ವರದಿಗಳು ಬರುವವರೆಗೂ ಆಸ್ಪತ್ರೆಯಲ್ಲಿ ಇರುವಂತೆ ವಿನಂತಿಸಿಕೊಂಡಿದ್ದಾರೆ.

  • ಕೊರೊನಾ ಶಂಕಿತನ ಕುಟುಂಬಸ್ಥರಿಂದ ತರಾಟೆ- ಪೊಲೀಸ್ರ ಮೊರೆ ಹೋದ ಅಧಿಕಾರಿಗಳು

    ಕೊರೊನಾ ಶಂಕಿತನ ಕುಟುಂಬಸ್ಥರಿಂದ ತರಾಟೆ- ಪೊಲೀಸ್ರ ಮೊರೆ ಹೋದ ಅಧಿಕಾರಿಗಳು

    ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಶಂಕಿತ ಕೊರೊನಾ ವ್ಯಕ್ತಿಯ ಮನೆಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

    ಶಂಕಿತ ವ್ಯಕ್ತಿ ಮನೆಯಲ್ಲಿರುವ ಶಂಕೆ ವ್ಯಕ್ತಪಡಿಸಿ ಆರೋಗ್ಯ ಅಧಿಕಾರಿಗಳು ಆತನ ಮನೆಗೆ ಇಂದು ಭೇಟಿ ಕೊಟ್ಟಿದ್ದಾರೆ. ಈ ವೇಳೆ ಶಂಕಿತನ ಕುಟುಂಬಸ್ಥರು ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

    ಅವನು ಮನೆಯಲ್ಲಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಸುತ್ತಮುತ್ತಲಿನ ಜನರು ಜಮಾಯಿಸಿ ಇಲಾಖೆ ಸಿಬ್ಬಂದಿಯನ್ನು ವಾಪಸ್ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸತ್ತ ಆರೋಗ್ಯಾಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದಾರೆ.

    ನಗರದ ಅಂತರಾಷ್ಟ್ರೀಯ ಏರ್ ಪೋರ್ಟಿನಲ್ಲಿ ಶಂಕಿತ ಕೊರೊನಾ ಪ್ರಯಾಣಿಕನೊಬ್ಬ ಪತ್ತೆಯಾಗಿದ್ದನು. ಪ್ರಯಾಣಿಕ ಭಾನುವಾರ ತಡ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದನು. ಹಾಗೆಯೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸ್ಕ್ರೀನಿಂಗ್ ವೇಳೆ ಟೆಂಪರೇಚರ್ ನಲ್ಲಿ ಬಯಲಾಗಿತ್ತು. ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಯಾಣಿಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಈ ವೇಳೆ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ತೆಗೆದು ಲ್ಯಾಬ್‍ಗೆ ರವಾನಿಸಿದ್ದು, ಕೊರೊನಾ ಇರೋ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಆತನನ್ನು ಐಸೋಲೇಶನ್ ವಾರ್ಡ್‍ಗೆ ಸಿಬ್ಬಂದಿ ರವಾನಿಸಿದ್ದರು. ಆದರೆ ಆತ ರಾತ್ರೋರಾತ್ರಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು, ಕರಾವಳಿ ಮಂದಿಯಲ್ಲಿ ಆತಂಕ ಹುಟ್ಟಿಸಿದೆ. ಈ ಸಂಬಂಧ ಆರೋಗ್ಯಾಧಿಕಾರಿ ಕೂಡಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಮಂಗಳೂರು ಆಸ್ಪತ್ರೆಯಿಂದ ಎಸ್ಕೇಪ್ ಆದ ವ್ಯಕ್ತಿಯನ್ನು ಹುಡುಕಾಡಿದ್ದಾರೆ.

  • ಮಂಗ್ಳೂರಲ್ಲಿ ಕೊರೊನಾ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಎಸ್ಕೇಪ್

    ಮಂಗ್ಳೂರಲ್ಲಿ ಕೊರೊನಾ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಎಸ್ಕೇಪ್

    ಮಂಗಳೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದಾನೆ.

    ನಗರದ ಅಂತರಾಷ್ಟ್ರೀಯ ಏರ್ ಪೋರ್ಟಿನಲ್ಲಿ ಶಂಕಿತ ಕೊರೊನಾ ಪ್ರಯಾಣಿಕನೊಬ್ಬ ಪತ್ತೆಯಾಗಿದ್ದನು. ಪ್ರಯಾಣಿಕ ಭಾನುವಾರ ತಡ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದನು. ಹಾಗೆಯೇ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಸ್ಕ್ರೀನಿಂಗ್ ವೇಳೆ ಟೆಂಪರೇಚರ್ ನಲ್ಲಿ ಬಯಲಾಗಿತ್ತು.

    ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಯಾಣಿಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆರೋಗ್ಯಾಧಿಕಾರಿಗಳು ಸ್ಯಾಂಪಲ್ ತೆಗೆದು ಲ್ಯಾಬ್‍ಗೆ ರವಾನಿಸಿದ್ದು, ಕೊರೊನಾ ಇರೋ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಆತನನ್ನು ಐಸೋಲೇಶನ್ ವಾರ್ಡ್‍ಗೆ ಸಿಬ್ಬಂದಿ ರವಾನಿಸಿದ್ದರು. ಆದರೆ ಆತ ರಾತ್ರೋರಾತ್ರಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದು, ಕರಾವಳಿ ಮಂದಿಯಲ್ಲಿ ಆತಂಕ ಹುಟ್ಟಿಸಿದೆ.

    ಈ ಸಂಬಂಧ ಆರೋಗ್ಯಾಧಿಕಾರಿ ಕೂಡಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಮಂಗಳೂರು ಆಸ್ಪತ್ರೆಯಿಂದ ಎಸ್ಕೇಪ್ ಆದ ವ್ಯಕ್ತಿಯನ್ನು ಹುಡುಕಾಡಿದ್ದಾರೆ. ಖಾಕಿ ಭದ್ರತೆಯಲ್ಲಿ ಮನೆಯಲ್ಲಿಯೇ ಆ ವ್ಯಕ್ತಿಗೆ ತೀವ್ರಾ ನಿಗಾ ವಹಿಸಲಾಗಿದ್ದು, ಆತನನ್ನು ಮತ್ತೆ ಆಸ್ಪತ್ರೆಗೆ ಕರೆ ತಂದು ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.