Tag: Weibo

  • ಚೀನಾದ ಸಾಮಾಜಿಕ ಜಾಲತಾಣಕ್ಕೆ ಮೋದಿ ಗುಡ್‌ಬೈ – 2 ಪೋಸ್ಟ್‌ ಬಿಟ್ಟು ಎಲ್ಲ ಪೋಸ್ಟ್‌ ಡಿಲೀಟ್‌

    ಚೀನಾದ ಸಾಮಾಜಿಕ ಜಾಲತಾಣಕ್ಕೆ ಮೋದಿ ಗುಡ್‌ಬೈ – 2 ಪೋಸ್ಟ್‌ ಬಿಟ್ಟು ಎಲ್ಲ ಪೋಸ್ಟ್‌ ಡಿಲೀಟ್‌

    ನವದೆಹಲಿ: 59 ಚೈನಾದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಚೀನಾದಲ್ಲಿ ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣ ಖಾತೆಗೆ ಗುಡ್‌ಬೈ ಹೇಳಿದ್ದಾರೆ.

    ಚೀನಾದ ಸಾಮಾಜಿಕ ಜಾಲತಾಣ ವೈಬೋದಲ್ಲಿ ಮೋದಿ ಖಾತೆ ತೆರೆದಿದ್ದರು. ಆದರೆ ಈಗ ಈ ಖಾತೆಯಲ್ಲಿರುವ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.

    ಮೋದಿ 2015ರಲ್ಲಿ ವೈಬೋದಲ್ಲಿ ಖಾತೆ ತೆರೆದಿದ್ದು ಇಲ್ಲಿಯವರೆಗೆ ಒಟ್ಟು 115 ಪೋಸ್ಟ್‌ ಮಾಡಿದ್ದಾರೆ. ಈ ಪೈಕಿ 2 ಪೋಸ್ಟ್‌ ಬಿಟ್ಟು ಉಳಿದ ಎಲ್ಲ ಪೋಸ್ಟ್‌ಗಳನ್ನು ಮೋದಿ ಡಿಲೀಟ್‌ ಮಾಡಿದ್ದಾರೆ. ಈ ಎರಡು ಪೋಸ್ಟ್‌ಗಳಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಫೋಟೋಗಳನ್ನು ಹಾಕಿರುವ ಕಾರಣ ಡಿಲೀಟ್‌ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: 59 ಆ್ಯಪ್ ಆಯ್ತು, ಈಗ ರಾಷ್ಟ್ರೀಯ ಹೆದ್ದಾರಿಯಲ್ಲೂ ಚೀನಾ ಬ್ಯಾನ್‌

    ಪ್ರಧಾನಿ ನರೇಂದ್ರ ಮೋದಿಯವರು ಖಾತೆಗೆ ಗುಡ್‌ಬೈ ಹೇಳಿದ್ದರೂ ಖಾತೆ ಸಂಪೂರ್ಣವಾಗಿ ನಿಷ್ಕ್ರಿಯವಾಗಿಲ್ಲ. ಗಣ್ಯವ್ಯಕ್ತಿಗಳಿಗೆ ನೀಡುವ ಅಧಿಕೃತ ಖಾತೆಗಳನ್ನು ಸುಲಭವಾಗಿ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಮಟ್ಟದಲ್ಲಿ ಕೆಲವೊಂದು ಪ್ರಕ್ರಿಯೆಗಳು ನಡೆಯಬೇಕಾಗಿರುವ ಕಾರಣ ಮೋದಿ ಖಾತೆ ಈಗಲೂ ವೈಬೋದಲ್ಲಿದೆ.

    ಟ್ವಿಟ್ಟರ್‌ನಂತೆ ಕಾರ್ಯನಿರ್ವಹಿಸುವ ವೈಬೋದಲ್ಲಿ 2015ರ ಮೇ 4 ರಂದು ಪ್ರಧಾನಿ ನರೇಂದ್ರ ಮೋದಿ ಖಾತೆ ತೆರೆದಿದ್ದರು. ಚೀನಾ ಪ್ರವಾಸಕ್ಕೆ ತೆರಳುವ ಒಂದು ತಿಂಗಳ ಮೊದಲು ಈ ಖಾತೆಯನ್ನು ತೆರೆಯಲಾಗಿತ್ತು. 2.4 ಲಕ್ಷ ಮಂದಿ ಮೋದಿಯವರನ್ನು ಫಾಲೋ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಬ್ಯಾನ್ ಬಳಿಕ ಟಿಕ್ ಟಾಕ್‌ಗೆ ಮತ್ತೊಂದು ಶಾಕ್

    ಜೂನ್‌ 18 ರಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ಆರಂಭದಲ್ಲಿ ಗಲ್ವಾನ್‌ ಘರ್ಷಣೆಯನ್ನು ಪ್ರಸ್ತಾಪಿಸಿ ಭಾರತೀಯ ಯೋಧರ ಬಲಿದಾನವನ್ನು ವ್ಯರ್ಥ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಭಾರತದ ವಿದೇಶಾಂಗ ಸಚಿವ ಜೈ ಶಂಕರ್‌ ಸಹ ಈ ವಿಚಾರದ ಬಗ್ಗೆ ಮಾತನಾಡಿದ್ದ ವಿಡಿಯೋ ಚೀನಾದ ಎರಡು ವೈಬೋ ಖಾತೆಯಲ್ಲಿ ಅಪ್ಲೋಡ್‌ ಆಗಿತ್ತು. ಆದರೆ ಈ ಎರಡು ಖಾತೆಯನ್ನು ನಂತರ ಡಿಲೀಟ್‌ ಮಾಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಸರ್ಕಾರದ ಗಮನಕ್ಕೆ ತಂದಿತ್ತು. ಇದನ್ನೂ ಓದಿ : ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

    ಚೀನಾದಲ್ಲಿರುವ ಎಲ್ಲ ದೇಶಗಳ ರಾಯಭಾರ ಕಚೇರಿಗಳು ವೈಬೋದಲ್ಲಿ ಖಾತೆ ತೆರೆದು ಅಲ್ಲಿನ ಪ್ರಜೆಗಳ ಜೊತೆ ಸಂವಹನ ನಡೆಸುತ್ತದೆ. ವಿಶ್ವದ ಹಲವು ಗಣ್ಯರು ವೈಬೋದಲ್ಲಿ ಖಾತೆ ತೆರೆದಿದ್ದಾರೆ.