Tag: Weekend Curfew

  • ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಚೇತರಿಕೆ ಹಾದಿಯಲ್ಲಿ ಕೊಡಗಿನ ಪ್ರವಾಸೋದ್ಯಮ

    ಮಡಿಕೇರಿ: ಕೋವಿಡ್ ಮೂರನೇ ಅಲೆಯಲ್ಲಿ ನಷ್ಟ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ಈಗ ಚೇತರಿಕೆ ಹಾದಿಗೆ ಮರಳಿದೆ.

    ಡಿಸೆಂಬರ್ ತಿಂಗಳಿನಲ್ಲಿ ಒಂದಷ್ಟು ಆಶಾದಾಯಕ ಬೆಳವಣಿಗೆ ಕಂಡಿದ್ದ ಕೊಡಗಿನ ಪ್ರವಾಸೋದ್ಯಮ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ನಿಂದಾಗಿ ಸಂಪೂರ್ಣ ನೆಲಕಚ್ಚಿತ್ತು. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ತೆರವು ಮಾಡಿದ 2 ವಾರಗಳ ಕಾಲವೂ ಕೊಡಗಿನತ್ತ ಪ್ರವಾಸಿಗರು ಮುಖ ಮಾಡಲೇ ಇಲ್ಲ. ಇದನ್ನೂ ಓದಿ: 2011ರ ವಿಶ್ವಕಪ್ ಫೈನಲ್‍ನಲ್ಲಿ ಯುವಿಗಿಂತ ಧೋನಿ ಕೀರ್ತಿ ಹೆಚ್ಚಿದ್ದು ಹೇಗೆ?

    3ನೇವಾರದಲ್ಲಾದರೂ ಪ್ರವಾಸಿಗರು ಬರಬಹುದೆಂಬ ನಿರೀಕ್ಷೆಯಲ್ಲಿ ಕೊಡಗಿನ ಪ್ರವಾಸೋದ್ಯಮಿಗಳಿದ್ದರು. ಈ ವಾರವೂ ಪ್ರವಾಸಿಗರು ಭಾರೀ ಸಂಖ್ಯೆಯಲ್ಲೇನು ಬಂದಿಲ್ಲ. ಆದರೆ ಕಳೆದ ಎರಡು ವಾರಗಳಿಗೆ ಹೋಲಿಸಿದರೆ ಒಂದಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಆಗಮಿಸಿದ್ದು ಪ್ರವಾಸಿತಾಣಗಳು ಒಂದಷ್ಟು ಕಳೆ ಪಡೆದುಕೊಂಡಿವೆ.

    ಮಡಿಕೇರಿ ಸಮೀಪದ ಅಬ್ಬಿಜಲಪಾತ, ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಒಂದಷ್ಟು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಕೊಡಗಿಗೆ ಬರುತ್ತಿದ್ದ ಪ್ರವಾಸಿಗರಷ್ಟು ಪ್ರಮಾಣದಲ್ಲಿ ಈ ಬಾರಿ ಇಲ್ಲ. ಹೀಗಾಗಿ ವೀಕೆಂಡ್ ಕರ್ಫ್ಯೂ, ನೈಟ್ಕರ್ಫ್ಯೂಗಳಿಂದ ನಷ್ಟ ಅನುಭವಿಸಿದ್ದ ಪ್ರವಾಸಿಗರ ಅವಲಂಬಿತ ವ್ಯಾಪಾರೋದ್ಯಮಿಗಳು ನಿರೀಕ್ಷಿತ ಪ್ರಮಾಣದಲ್ಲಿ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್

    ಮತ್ತೊಂದೆಡೆ 3ನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಅಷ್ಟೊಂದು ಅಪಾಯವಿಲ್ಲ ಎನ್ನುವ ಕಾರಣದಿಂದ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಬಹುತೇಕ ಪ್ರವಾಸಿಗರು, ಕೊಡಗಿನ ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಧರಿಸದೆ ತಮ್ಮ ಪಾಡಿಗೆ ತಾವು ಎಂಜಾಯ್ ಮಾಡುತ್ತಿದ್ದಾರೆ.

    ಇದು ಮಾಸ್ಕ್ ಧರಿಸಿ ಓಡಾಡುವ ಪ್ರವಾಸಿಗರಲ್ಲಿ ಒಂದಷ್ಟು ಆತಂಕಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ತೆರವಾದ 3 ವಾರಗಳ ಬಳಿಕ ಕೊಡಗಿನ ಪ್ರವಾಸೋದ್ಯಮ ಈಗಷ್ಟೇ ಚೇತರಿಕೆ ಕಾಣುತ್ತಿದೆ.

  • ಪಾದಯಾತ್ರೆ ಮೊಟಕುಗೊಳಿಸಲು ಸರ್ಕಾರದಿಂದ ವೀಕೆಂಡ್ ಕರ್ಫ್ಯೂ ಜಾರಿ: ಈಶ್ವರ್ ಖಂಡ್ರೆ

    ಪಾದಯಾತ್ರೆ ಮೊಟಕುಗೊಳಿಸಲು ಸರ್ಕಾರದಿಂದ ವೀಕೆಂಡ್ ಕರ್ಫ್ಯೂ ಜಾರಿ: ಈಶ್ವರ್ ಖಂಡ್ರೆ

    ಬೀದರ್: ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿಕಾರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು. ಇದನ್ನು ನಿನ್ನೆ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ಮೂಲಕ ಬಿಜೆಪಿ ಸರ್ಕಾರವೇ ಸಾಬೀತು ಮಾಡಿದೆ ಎಂದು ಆರೋಪಿಸಿದರು.

    ನಾವು ರಾಜಕೀಯ ಉದ್ದೇಶದಿಂದಲೇ ವೀಕೆಂಡ್ ಕರ್ಫ್ಯೂ ಹಾಕಿದ್ದು ಎಂದು ಜನರ ಮುಂದೆ ಸರ್ಕಾರವೇ ಸಾಬೀತು ಮಾಡಿದ್ದಾರೆ. ಬಿಜೆಪಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ಕಿಡಿಕಾರಿದ ಅವರು, ಸಾವಿರಾರು ಜನರನ್ನು ಸೇರಿಸಿ ಕೇಂದ್ರ ಸಚಿವ ಭಗವಂತ್ ಖೂಬಾ ಜನಾಶೀರ್ವಾದ ಯಾತ್ರೆಯಲ್ಲಿ ಮಾಡಿದ್ದರು. ಅಲ್ಲಿ ಅವರನ್ನು ಅಕ್ರಮ ಬಂದೂಕಿನಿಂದ ಸ್ವಾಗತ ಮಾಡಿದರು. ಈವರೆಗೂ ಪೊಲೀಸರು ಖೂಬಾ ಮೇಲೆ ಎಫ್‌ಐಆರ್ ದಾಖಲೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಯಾತ್ರೆ: ಎಸ್.ಆರ್.ಹಿರೇಮಠ

    Bhagwanth khuba Bidar MP

    ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ನನ್ನ ಮೇಲೆ ಹಾಗೂ ನಮ್ಮ ನಾಯಕರಾದ ಡಿಕೆಶಿ, ಸಿದ್ದರಾಮಯ್ಯ ಮೇಲೆ ಮೂರು ಕೇಸ್‌ಗಳನ್ನು ದಾಖಲಿಸಿದ್ದಾರೆ ಎಂದ ಅವರು, ಕೊರೊನಾ ಕೇಸ್ ಕಡಿಮೆಯಾದ ಮೇಲೆ ಮತ್ತೆ ರಾಮನಗರದಿಂದ ನಮ್ಮ ಪಾದಯಾತ್ರೆ ಮುಂದುವರೆಸುತ್ತೆವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಚಾಮುಂಡೇಶ್ವರಿಯಿಂದ ಓಡಿಸಲಾಗಿದೆ, ಬಾದಾಮಿಯಿಂದ ಓಡಿಸುವುದು ಬಾಕಿ ಇದೆ: ಸಿದ್ದು ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

    ಪಂಚ ರಾಜ್ಯ ಚುನಾವಣೆಯ ಸಮೀಕ್ಷೆಗಳೆಲ್ಲಾ ಸುಳ್ಳಾಗಲಿದ್ದು, ಬಿಜೆಪಿ ಪಂಚರಾಜ್ಯ ಚುನಾವಣೆಯಲ್ಲಿ ಧೂಳಿ ಪಟವಾಗುತ್ತದೆ ಎಂದ ಅವರು ಬಿಜೆಪಿ ನಾಯಕರು ಹಾಗೂ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

  • ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

    ಕೋವಿಡ್‌ ಯಾರನ್ನೂ ಬಿಟ್ಟಿಲ್ಲ, ದೇವೇಗೌಡರಿಗೆ ಕೊರೊನಾ ತೀವ್ರತೆ ಇಲ್ಲ: ಬೊಮ್ಮಾಯಿ

    ಬೆಂಗಳೂರು: ಕೋವಿಡ್‌ ಯಾರನ್ನೂ ಬಿಟ್ಟಿಲ್ಲ. ಹೆಚ್‌.ಡಿ.ದೇವೇಗೌಡರಿಗೆ ಕೊರೊನಾ ತೀವ್ರತೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

    ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಕೊರೊನಾ ದೃಢಪಟ್ಟಿರುವ ಬಗ್ಗೆ ಆರ್.ಟಿ. ನಗರದ ನಿವಾಸದ ಬಳಿ ಪ್ರತಿಕ್ರಿಯಿಸಿದ ಅವರು, ದೇವೇಗೌಡರೊಂದಿಗೆ ಮಾತನಾಡುತ್ತೇನೆ. ಅವರ ಕುಟುಂಬ, ಮಣಿಪಾಲ್ ವೈದ್ಯರ ಜೊತೆಗೂ ಮಾತಾಡುತ್ತೇನೆ. ಈ ವಯಸ್ಸಲ್ಲೂ ಅವರು ಆರೋಗ್ಯವಾಗಿದ್ದಾರೆ. ಆದರೆ ಕೋವಿಡ್‌ ಯಾರನ್ನೂ ಬಿಟ್ಟಿಲ್ಲ. ಹೆಚ್‌.ಡಿ.ದೇವೇಗೌಡರಿಗೆ ಕೊರೊನಾ ತೀವ್ರತೆ ಇರುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ವೀಕೆಂಡ್ ಕರ್ಫ್ಯೂ ರದ್ದುಗೊಳಿಸಿರುವ ವಿಚಾರವಾಗಿ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ ರದ್ದು ನಿರ್ಧಾರ ಒತ್ತಡದಿಂದ ಮಾಡಿದ್ದಲ್ಲ. ಕೇಸ್‍ಗಳು ಜಾಸ್ತಿ ಇದ್ದರೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಗುಣಮುಖರಾಗುವವರ ದರವೂ ಜಾಸ್ತಿ ಇದೆ. ಇಂಥ ಸಂದರ್ಭದಲ್ಲಿ ಹೇಗೆ ನಿರ್ವಹಣೆ ಮಾಡಬೇಕೆಂಬುದರ ಬಗ್ಗೆ ತಜ್ಞರು ವಿಶ್ವಾಸ ಮೂಡಿಸಿದ್ದಾರೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕು. ಜನರಿಗೂ ಸಮಸ್ಯೆ ಆಗಬಾರದು ಅಂತ ನಿರ್ಧರಿಸಲಾಗಿದೆ ಎಂದಿದ್ದಾರೆ.

    ಕೃಷ್ಣಾ ಸೇರಿದಂತೆ ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ರಾಜ್ಯದ ವಾದ ಮಂಡಿಸುವ ತಜ್ಞರೊಂದಿಗೆ ಸಭೆ ಮಾಡುತ್ತಿದ್ದೇವೆ. ನಮ್ಮ ಕಾನೂನು ತಜ್ಞರ ತಂಡ ಕೂಡ ವರ್ಚುವಲ್ ಸಭೆಯಲ್ಲಿ ಭಾಗವಹಿಸುತ್ತಿದೆ. ನಮ್ಮ ಜಜಲವ್ಯಾಜ್ಯಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆ- ಜಗದೀಶ್ ಶೆಟ್ಟರ್ ಪ್ರಚಾರ, ಮತಯಾಚನೆ

    ಹಾಲು, ನೀರು, ವಿದ್ಯುತ್ ದರ ಏರಿಕೆ ಪ್ರಸ್ತಾಪಗಳ ವಿಚಾರವಾಗಿ ಮಾತನಾಡಿದ ಅವರು, ದರ ಏರಿಕೆಗಳ ಬಗ್ಗೆ ಯಾವುದೇ ತೀರ್ಮಾನಗಳು ಆಗಿಲ್ಲ. ಅವಸರದ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಲ್ಲ. ಎಲ್ಲ ಆಯಾಮಗಳಿಂದಲೂ ಚರ್ಚೆ ನಡೆಸುತ್ತೇವೆ. ಆಡಳಿತದಲ್ಲಿ ದರ ಏರಿಕೆ ಪ್ರಸ್ತಾಪಗಳು ಬರುವುದು ಸಹಜ ಎಂದು ಸ್ಪಷ್ಟ ಪಡಿಸಿದ್ದಾರೆ.

  • ವೀಕೆಂಡ್‌ ಕರ್ಫ್ಯೂ ರದ್ದು – ಸಿಎಂ ಸಭೆಯಲ್ಲಿ ಚರ್ಚೆಯಾದ ಪ್ರಮುಖಾಂಶಗಳೇನು?

    ವೀಕೆಂಡ್‌ ಕರ್ಫ್ಯೂ ರದ್ದು – ಸಿಎಂ ಸಭೆಯಲ್ಲಿ ಚರ್ಚೆಯಾದ ಪ್ರಮುಖಾಂಶಗಳೇನು?

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಕೋವಿಡ್‌ ಸ್ಥಿತಿ-ಗತಿ ಕುರಿತು ಇಂದು ಪರಿಶೀಲನಾ ಸಭೆ ನಡೆಸಲಾಯಿತು. ಸಭೆಯಲ್ಲಿ ಚರ್ಚೆಯಾದ ಪ್ರಮುಖಾಂಶಗಳು ಹೀಗಿವೆ.

    * ಜನವರಿ 20ರ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 2,93,231 ಸಕ್ರಿಯ ಪ್ರಕರಣಗಳು ಇವೆ. ಇದಲ್ಲಿ 2.85 ಲಕ್ಷ ಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದಾರೆ.

     

    * ಒಟ್ಟು 5,344 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ 340 ಜನ ಐಸಿಯುನಲ್ಲಿ ಇದ್ದಾರೆ. 127 ಮಂದಿ ವೆಂಟಿಲೇಟರ್‌ನಲ್ಲಿ ಇದ್ದಾರೆ.

    * ಬೆಂಗಳೂರನ್ನು ಹೊರತುಪಡಿಸಿ ಮೈಸೂರು, ತುಮಕೂರು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜ.29 ವರೆಗೂ ಶಾಲೆಗಳು ಕ್ಲೋಸ್ – ಇತರೆಡೆ ಯಥಾಸ್ಥಿತಿ ಮುಂದುವರಿಕೆ

    * ಪಾಸಿಟಿವಿ ದರ ಶೇ.19.94 ರಷ್ಟಿದೆ.

    * ಮಕ್ಕಳ ಪಾಸಿಟಿವಿಟಿ ದರ ಶೇ.8 ರಷ್ಟಿದ್ದು, ವಯಸ್ಕರ ಪಾಸಿಟಿವಿಟಿ ದರ ಶೇ.16.57 ರಷ್ಟಿದೆ.

    * ಅಸ್ಪತ್ರೆಗೆ ದಾಖಲಾಗಿರುವ ಮಕ್ಕಳ ಪ್ರಮಾಣದ ಮೇಲೆ ನಿಗಾ ವಹಿಸಲಾಗುತ್ತಿದೆ.

    * ಕಳೆದ ಎರಡು ಮೂರು ದಿನಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಇದರಲ್ಲಿ 60 ವರ್ಷ ಮೇಲ್ಪಟ್ಟವರು ಹಾಗೂ ಅನ್ಯರೋಗ ಇದ್ದವರ ಸಂಖ್ಯೆ ಹೆಚ್ಚಿದೆ.

    * ರಾಜ್ಯದಲ್ಲಿ ಮಂಜೂರಾಗಿರುವ 243 ಪಿಎಸ್‌ ಪ್ಲಾಂಟ್‌ಗಳ ಪೈಕಿ 225 ಕಾರ್ಯಾರಂಭ ಮಾಡಿವೆ.

    * ಎಲ್ಲ ಜಿಲ್ಲಾ ಆಸ್ಪತ್ರೆಗಳು, 113 ತಾಲ್ಲೂಕು ಆಸ್ಪತ್ರೆಗಳಲ್ಲಿ ಪಿಎಸ್ ಎ ಪ್ಲಾಂಟ್‌ಗಳು ಕಾರ್ಯಾರಂಭ ಮಾಡಿವೆ.

    * ಸರಾಸರಿ ಮೂರು ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಒಬ್ಬ ಸೋಂಕಿತನಿಂದ ಸರಾಸರಿ 2.6 ಜನರಿಗೆ ಹರಡುತ್ತಿದೆ.

    * ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುತ್ತಿದೆ.

    * ಬೆಂಗಳೂರಿನ ಜೊತೆಗೆ ಇತರ ಜಿಲ್ಲೆಗಳಲ್ಲಿಯೂ ಕೋವಿಡ್’ ಪ್ರಕರಣಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

    * ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಕುರಿತು ತಜ್ಞರೊಂದಿಗೆ ಸವಿವರವಾಗಿ ಚರ್ಚಿಸಲಾಯಿತು. ಇದನ್ನೂ ಓದಿ: ಕರ್ನಾಟಕದಲ್ಲಿ ವೀಕೆಂಡ್‌ ಕರ್ಫ್ಯೂ ರದ್ದು – ಎರಡೇ ವಾರಕ್ಕೆ ಅಂತ್ಯ

    * ಯಾವುದೇ ಸ್ಥಳದಲ್ಲಿ ಹೆಚ್ಚಿನ ಜನಸಂದಣಿಯಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದು ತಜ್ಞರು ಅಭಿಪ್ರಾಯಪಟ್ಟರು.

    * ಕೋವಿಡ್ ಪ್ರಕರಣಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಿನ ಏರಿಕೆ ಇಲ್ಲವೆಂಬ ಅಂಶವನ್ನು ಗಮನಿಸಲಾಯಿತು. ರಿಕವರಿ ಪ್ರಮಾಣವೂ ಹೆಚ್ಚಾಗಿದೆ.

    * ಆದರೆ ಮುಂದಿನ ವಾರದಲ್ಲಿ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ (peak) ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    * ಜೊತೆಗೆ ಕೋವಿಡ್-19 ನಿರ್ವಹಣೆಯ ಮುಂಚೂಣಿಯ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಒಳಗಾಗುತ್ತಿದ್ದಾರೆ.

    * ಸಾಮಾಜಿಕ-ಆರ್ಥಿಕ ಪರಿಸ್ಥಿತಿಯ ಕುರಿತು ಸಹ ಚರ್ಚಿಸಲಾಯಿತು.

    ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ರಾತ್ರಿ ಕರ್ಪೂ ಅವಧಿಯನ್ನು ವಾರದ ಏಳೂ ದಿನಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5ರ ವರೆಗೆ ನಿಗದಿಪಡಿಸಲು ನಿರ್ಧರಿಸಲಾಯಿತು.

    ಸಾರ್ವಜನಿಕರ ಬೇಡಿಕೆಯ ಮೇರೆಗೆ ಹಾಗೂ ತಜ್ಞರೊಂದಿಗೆ ಚರ್ಚಿಸಿದ ಅಂಶಗಳನ್ನು ಆಧರಿಸಿ, ಈ ವಾರಾಂತ್ಯದಲ್ಲಿ ವಾರಾಂತ್ಯ ಕರ್ಫ್ಯೂ ಸದ್ಯಕ್ಕೆ ಹಿಂಪಡೆಯಲು ನಿರ್ಧರಿಸಲಾಯಿತು. ಆದರೆ ಮುಂದಿನ ವಾರ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ನೋಡಿಕೊಂಡು ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಸಭೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು. ಆದ್ದರಿಂದ ಸಾರ್ವಜನರಿಕರು ಜವಾಬ್ದಾರಿಯುತವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಅತಿ ಅಗತ್ಯವಾಗಿದೆ. ಇದನ್ನೂ ಓದಿ: ಬಿಸಿಎಂ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್ – ಮಂಡ್ಯ ವಿದ್ಯಾರ್ಥಿಗಳ ವಿರೋಧ

    ಮಾಲ್, ಹೋಟೆಲ್, ಬಾರ್, ಕ್ಲಬ್, ಪಬ್‌ಗಳು ಶೇ.50 ಆಸನ ಸಾಮರ್ಥ್ಯದೊಂದಿಗೆ ತೆರೆಯಲು ತೀರ್ಮಾನಿಸಲಾಯಿತು. ಎರಡೂ ಲಸಿಕೆ ಪಡೆಯುವುದು ಕಡ್ಡಾಯ ಎಂದು ತಿಳಿಸಲಾಗಿದೆ.

    ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್‌, ಕೋವಿಡ್ ನಿಯಂತ್ರಣಕ್ಕೆ ರಾಜ್ಯದಲ್ಲಿ ಜಾರಿಯಲ್ಲಿದ್ದ ವೀಕೆಂಡ್‌ ಕರ್ಫ್ಯೂ ತೆರವುಗೊಳಿಸಲಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದಲ್ಲಿ ಮತ್ತೆ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಸಿಎಂ ತಿಳಿಸಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.

    ವೀಕೆಂಡ್‌ ಕರ್ಫ್ಯೂ ತೆರವುಗೊಳಿಸಬೇಕು ಎಂದು ವಿವಿಧ ಸಂಘಟನೆಗಳು, ವಿಪಕ್ಷ ನಾಯಕರು, ಜನರ ಒತ್ತಾಯ ಇತ್ತು. ಆದರೆ ತಜ್ಞರ ವರದಿ ಆಧರಿಸಿ ವೀಕೆಂಡ್‌ ಕರ್ಫ್ಯೂ ಹಿಂಪಡೆಯಲಾಗಿದೆ. ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

    ನೈಟ್‌ ಕರ್ಫ್ಯೂ ಎಂದಿನಂತೆ ಮುಂದುವರಿಯಲಿದೆ. ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿರಲಿದೆ. ಈಗಾಗಲೇ ಜಾರಿಯಲ್ಲಿದ್ದ ಇತರೆ ನಿಯಮಗಳೂ ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.

  • ಕರ್ನಾಟಕದಲ್ಲಿ ವೀಕೆಂಡ್‌ ಕರ್ಫ್ಯೂ ರದ್ದು – ಎರಡೇ ವಾರಕ್ಕೆ ಅಂತ್ಯ

    ಕರ್ನಾಟಕದಲ್ಲಿ ವೀಕೆಂಡ್‌ ಕರ್ಫ್ಯೂ ರದ್ದು – ಎರಡೇ ವಾರಕ್ಕೆ ಅಂತ್ಯ

    ಬೆಂಗಳೂರು: ಕೋವಿಡ್‌ ನಿಯಂತ್ರಿಸಲು ಹೇರಿದ್ದ ವೀಕೆಂಡ್‌ ಕರ್ಫ್ಯೂ ಅನ್ನು ಕರ್ನಾಟಕ ಸರ್ಕಾರ ತೆರವುಗೊಳಿಸಿದೆ. ಈ ಮೂಲಕ ಎರಡೇ ವಾರಕ್ಕೆ ವೀಕೆಂಡ್‌ ಕರ್ಫ್ಯೂ ಅಂತ್ಯಗೊಂಡಿದೆ.

    ಇಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ತಜ್ಞರ ಜೊತೆಗಿನ ಸಭೆಯ ಬಳಿಕ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ಎರಡು ವಾರದಿಂದ ಜಾರಿಯಾಗಿದ್ದ ವೀಕೆಂಡ್‌ ಕರ್ಫ್ಯೂ ನಾಳೆ ಇರುವುದಿಲ್ಲ. ಆದರೆ ನೈಟ್‌ ಕರ್ಫ್ಯೂ ರಾತ್ರಿ 10 ರಿಂದ  ಮುಂದುವರಿಯಲಿದೆ. ಸಭೆಯ ಬಳಿಕ ಸಚಿವ ಅಶೋಕ್‌ ಸುದ್ದಿಗೋಷ್ಠಿ ನಡೆಸಿ ವೀಕೆಂಡ್‌ ವೀಕೆಂಡ್‌ ಕರ್ಫ್ಯೂ ತೆರವುಗೊಳಿಸಿದ್ದೇವೆ ಎಂದು ತಿಳಿಸಿದರು.

    ಯೂರೋಪ್ ರಾಷ್ಟ್ರಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಕೋವಿಡ್ ಮೂರನೇ ಅಲೆಯ ವ್ಯಾಪಕವಾಗಿ ಹರಡಿದರೂ ತೀವ್ರತೆ ಕಡಿಮೆ ಇದೆ. ಈ ಕಾರಣಕ್ಕೆ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದರೆ ಮತ್ತೆ ಬಿಗಿಕ್ರಮ ಮುಂದುವರಿಸಬಹುದು. ಹೀಗಾಗಿ ವೀಕೆಂಡ್ ಕರ್ಫ್ಯೂ ತೆರವು ಮಾಡುವುದು ಉತ್ತಮ ಎಂದು ಕೆಲ ಸಚಿವರು ಸಲಹೆ ನೀಡಿದ್ದಾರೆ. ಸಚಿವರ ಸಲಹೆ ಸಿಎಂ ಬೊಮ್ಮಾಯಿ ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶೀಘ್ರವೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ ಪುನೀತ್ ನಿರ್ಮಾಣದ 3 ಸಿನಿಮಾಗಳು

    ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಐಸಿಯು, ವೆಂಟಿಲೇಟರ್ ನಲ್ಲಿ ರೋಗಿಗಳು ಇಲ್ಲ. ವೀಕೆಂಡ್ ಕರ್ಫ್ಯೂಗೆ ಜನರ ಆಕ್ರೋಶ ಇದೆ. ಹೀಗಾಗಿ ವೀಕೆಂಡ್ ಕರ್ಫ್ಯೂ ರದ್ದು ಮಾಡುವುದು ಉತ್ತಮ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ವೀಕೆಂಡ್ ಕರ್ಫ್ಯೂ ಬದಲಿಗೆ ಟಫ್ ರೂಲ್ಸ್ ಜಾರಿಗೆ ಸಿಎಂ ಒಲವು ತೋರಿದ್ದಾರೆ. ಇದನ್ನೂ ಓದಿ: ರಾಜಕಾರಣದ ಆಸೆ ಇಟ್ಟುಕೊಂಡಿಲ್ಲ: ನಿವೃತ್ತಿ ಸುಳಿವು ನೀಡಿದ್ರಾ ಅನಂತಕುಮಾರ್ ಹೆಗಡೆ?

    ವೀಕೆಂಡ್‌ ಕರ್ಫ್ಯೂ ಜಾರಿಗೆ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿ, ಶೋಭಾ ಕರಂದ್ಲಾಜೆ ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ಸಿಟಿ ರವಿ ಸೇರಿದಂತೆ ಬಿಜೆಪಿ ನಾಯಕರಿಂದಲೇ ಟೀಕೆ ವ್ಯಕ್ತವಾಗಿತ್ತು.

  • ಸರ್ಕಾರ ಕೂಡಲೇ ಶಾಲೆ, ಕಾಲೇಜುಗಳಿಗೆ 15-20 ದಿನ ರಜೆ ಘೋಷಿಸಬೇಕು: ಹೆಚ್‍ಡಿಕೆ

    ಸರ್ಕಾರ ಕೂಡಲೇ ಶಾಲೆ, ಕಾಲೇಜುಗಳಿಗೆ 15-20 ದಿನ ರಜೆ ಘೋಷಿಸಬೇಕು: ಹೆಚ್‍ಡಿಕೆ

    – ವೀಕೆಂಡ್ ಕರ್ಫ್ಯೂ ಬಗ್ಗೆ ಬಿಜೆಪಿ ನಾಯಕರಲ್ಲಿ ಗೊಂದಲ ನಿಂತಿಲ್ಲ

    ಹಾಸನ: ‘ಶಾಲೆ, ಕಾಲೇಜು ಹಾಗೂ ಹಾಸ್ಟೆಲ್’ಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬರುತ್ತಿದ್ದು, ಸರ್ಕಾರ ಕೂಡಲೇ ಶಾಲಾ-ಕಾಲೇಜುಗಳಿಗೆ ಕೊನೆಪಕ್ಷ 15 ರಿಂದ 20 ದಿನ ರಜೆ ಘೋಷಣೆ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.

    ಚನ್ನಪಟ್ಟಣದ ಹೊಂಗನೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸೋಂಕಿತರಾಗಿದ್ದಾರೆ. ಹೀಗಾಗಿ ಇಂಥ ಶಾಲೆಗಳನ್ನು ತಕ್ಷಣವೇ ಬಂದ್ ಮಾಡಿಸಬೇಕು ಎಂದರು. ಇದನ್ನೂ ಓದಿ:  ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

    ತಜ್ಞರಲ್ಲಿ ಕೆಲವರು ಶಾಲೆಗಳನ್ನು ತೆರೆಯುವಂತೆ ಘೋಷಿಸುವುದಕ್ಕೆ ಪರ-ವಿರೋಧ ಇದೆ ಎಂಬುದರ ಕುರಿತು ಮಾತನಾಡಿದ ಅವರು, ತಜ್ಞರು ಪರ ಅಥವಾ ವಿರೋಧ ಎನ್ನುವ ಮಾತು ಬೇರೆ. ಆದರೆ, ಸರ್ಕಾರದ ಮುಂದೆ ಕೋವಿಡ್ ಸ್ಥಿತಿಗತಿಗಳ ಬಗ್ಗೆ ವಾಸ್ತವಾಂಶಗಳಿವೆ. ಆ ಮಾಹಿತಿಗಳ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಮೊನ್ನೆಯಷ್ಟೇ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ 163 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ತುಮಕೂರಿನಲ್ಲಿ ಒಂದೇ ಕಾಲೇಜಿನ 600 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಈ ಎಲ್ಲ ಅಂಕಿ ಅಂಶಗಳೇ ಎಲ್ಲವನ್ನೂ ಹೇಳುತ್ತಿವೆ ಎಂದು ವಿವರಿಸಿದರು.

    ತಜ್ಞರ ವರದಿಗಿಂತ ಸರ್ಕಾರದ ಜವಾಬ್ದಾರಿ ಹೆಚ್ಚು. ಸರ್ಕಾರವು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೆಲಸ ಮಾಡಲಿ. ಮಕ್ಕಳು, ಪೋಷಕರು ಆತಂಕಕ್ಕೆ ಒಳಗಾಗುವುದಕ್ಕೆ ಅವಕಾಶ ನೀಡಬಾರದು. ಸರ್ಕಾರ ಈ ನಿಟ್ಟಿನಲ್ಲಿ ಚಿಂತಸಲಿ ಎಂದು ಸಲಹೆ ಮಾಡಿದರು.

    ಬಿಜೆಪಿ ನಾಯಕರಲ್ಲೇ ಗೊಂದಲವಿದೆ!
    ವೀಕೆಂಡ್ ಕರ್ಫ್ಯೂ ವಿಚಾರದಲ್ಲಿ ಎಲ್ಲ ಕಡೆ ಗೊಂದಲವಿದೆ. ಅದರಲ್ಲೂ ಬಿಜೆಪಿ ಪಕ್ಷದ ನಾಯಕರಲ್ಲೇ ಗೊಂದಲಗಳಿವೆ. ಮೊದಲು ಇದನ್ನು ಅವರು ಸರಿಪಡಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.

    ಕೂಲಿ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು ಕಷ್ಟದಲ್ಲಿದ್ದಾರೆ. ವೀಕೆಂಡ್ ಕರ್ಫ್ಯೂನಿಂದ ಅವರಿಗೆ ಜೀವನ ನಿರ್ವಹಣೆ ಕಷ್ಟ. ದಿನನಿತ್ಯದ ಆದಾಯದಲ್ಲಿ ಕುಟುಂಬ ನಿರ್ವಹಿಸಬೇಕಿದೆ. ಇಂತಹ ಕುಟುಂಬಗಳ ಬದುಕು ಕಟ್ಟಿ ಕೊಡಬೇಕು. ಬದುಕು ಕಟ್ಟಿ ಕೊಡುವ ಜವಾಬ್ದಾರಿ ಸರ್ಕಾರದ್ದು. ವಿರೋಧ ಪಕ್ಷದವರು ಸುಲಭವಾಗಿ ಹೇಳುತ್ತಾರೆ ಅಂತಾರೆ ಅಂತ ಲಘುವಾಗಿ ಮಾತನಾಡುವುದು ಬೇಡ ಎಂದರು.

    ನಾವು ಸರ್ಕಾರ ನಡೆಸಿದ್ದೇವೆ. ಆ ಕಷ್ಟ ನಷ್ಟ ನನಗೂ ಗೊತ್ತಿದೆ. ಪ್ರತಿಯೊಬ್ಬ ನಾಗರಿಕರ ಹಿತ ಕಾಪಾಡೋದು ಸರ್ಕಾರದ ಜವಾಬ್ದಾರಿ. ಜನರ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸೋದು ಸರ್ಕಾರದ ಕರ್ತವ್ಯ. ನಾನು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಹೀಗೆ ಹೇಳುತ್ತಿಲ್ಲ. ನಾಡಿನ ಜನರು ನೀಡುವ ತೆರಿಗೆ ಹಣವನ್ನೇ ಬಳಸಿ ಬಡ ವರ್ಗದ ಜನರ ನೆರವಿಗೆ ಸರ್ಕಾರ ಧಾವಿಸಲಿ ಎಂದು ಹೇಳಿದರು.

    ರಾಮನಗರದಲ್ಲಿ ಹೆಚ್ಚಿದ ಸೋಂಕು!
    ರಾಮನಗರದಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಇದು ಕಾಂಗ್ರೆಸ್ ಪಾದಯಾತ್ರೆಯಿಂದ ಹೆಚ್ಚಾಯಿತೋ ಅಥವಾ ಬೇರೆ ಯಾವುದೇ ಕಾರಣದಿಂದ ಹೆಚ್ಚಾಯಿತೋ ಎಂದು ನಾನು ಚರ್ಚೆ ಮಾಡಲ್ಲ. ಜಿಲ್ಲೆಯ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ ಎಂದು ತಿಳಿಸಿದರು.

    ಚನ್ನಪಟ್ಟಣದ ಸಮಗ್ರ ಅಭಿವೃದ್ಧಿ
    ಚನ್ನಪಟ್ಟಣ ಸಮಗ್ರ ಅಭಿವೃದ್ಧಿಗೆ ನನ್ನ ಎಲ್ಲ ಶ್ರಮ ಹಾಕುತ್ತಿದ್ದೇನೆ. ಇಲ್ಲಿಯವರೆಗೆ ಕೆರೆ ತುಂಬಿಸುವ ಕೆಲಸ ಆಯಿತು. ಈಗ ಸೇತುವೆ ಬೇಕು ಎಂಬ ಸಮಸ್ಯೆ ಶುರುವಾಗಿದೆ. ನಾನು ಸಿಎಂ ಆಗಿದ್ದಾಗ ಅನೇಕ ಅಭಿವೃದ್ಧಿ ಮಾಡಿದ್ದೇನೆ. ನಾನು ಮೂರುವರೆ ವರ್ಷದಲ್ಲಿ ಏನು ಮಾಡಿದ್ದೇನೆ. 25 ವರ್ಷದಿಂದ ಬೇರೆಯವರು ಏನು ಮಾಡಿದ್ದಾರೆ ಎನ್ನುವುದನ್ನು ಜನ ಗಮನಿಸಬೇಕು ಎಂದು ಕೇಳಿಕೊಂಡರು. ಇದನ್ನೂ ಓದಿ: ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

    ಕಳೆದ ಮೂರೂವರೆ ವರ್ಷದಲ್ಲಿ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಕ್ಷೇತ್ರದ ಜನರಿಗೆ ನನ್ನ ಅಭಿವೃದ್ಧಿ ಕಾರ್ಯ ತಿಳಿದಿದೆ. ಕೆಲವರು ಚಿಲ್ಲರೆ ರಾಜಕಾರಣ ಮಾಡೋದನ್ನ ಬಿಡಬೇಕು. ಜನರನ್ನು ತಪ್ಪು ದಾರಿಗೆಳೆಯಬೇಡಿ. ಇಷ್ಟೆಲ್ಲಾ ಕೆಲಸಗಳು ವ್ಯರ್ಥವಾಗುತ್ತದೆ ಎಂದು ಟಾಂಗ್ ಕೊಟ್ಟರು.

  • ಈ ವಾರ ವೀಕೆಂಡ್‌ ಕರ್ಫ್ಯೂ ಡೌಟ್‌ – ಸರ್ಕಾರದ ಮುಂದಿರುವ ಆಯ್ಕೆಗಳೇನು?

    ಈ ವಾರ ವೀಕೆಂಡ್‌ ಕರ್ಫ್ಯೂ ಡೌಟ್‌ – ಸರ್ಕಾರದ ಮುಂದಿರುವ ಆಯ್ಕೆಗಳೇನು?

    ಬೆಂಗಳೂರು: ಶುಕ್ರವಾರ ರಾತ್ರಿಯಿಂದ ಶುರುವಾಗಬೇಕಿದ್ದ ವಾರಾಂತ್ಯದ ಕರ್ಫ್ಯೂ ಬಹುಷಃ ಇರಲಿಕ್ಕಿಲ್ಲ. ವಿಕೆಂಡ್ ಕರ್ಫ್ಯೂಗೆ ವ್ಯಕ್ತವಾಗ್ತಿರುವ ಜನಾಕ್ರೋಶ ಮತ್ತು ಪಕ್ಷದಲ್ಲಿಯೇ ಕೇಳಿಬರುತ್ತಿರುವ ಅಪಸ್ವರದ ಕಾರಣದಿಂದಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ.

    ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಉನ್ನತಮಟ್ಟದ ಸಭೆ ಕರೆದಿದ್ದು, ಈ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದತಿ ತೀರ್ಮಾನ ತೆಗೆದುಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಬೆಂಗಳೂರು ಪೊಲೀಸ್ ಇಲಾಖೆಗೆ ವೀಕೆಂಡ್ ಕರ್ಫ್ಯೂ ಹಿಂಪಡೆಯುವ ಸುಳಿವನ್ನು ರವಾನಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಅಧಿಕೃತ – ವಿಶ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆರಂಭ

    ಇದೇ ವೇಳೆ, ನೈಟ್ ಕರ್ಫ್ಯೂ ಅವಧಿಯನ್ನು ಕಡಿತ ಮಾಡುವುದು ಸಹ ಹೆಚ್ಚು ಕಡಿಮೆ ಫಿಕ್ಸ್ ಆಗಿದೆ. ರಾತ್ರಿ 11ರಿಂದ ರಾತ್ರಿ ನೈಟ್‌ ಕರ್ಫ್ಯೂ ಶುರುವಾಗಿ ಬೆಳಗಿನ ಜಾವ ಐದಕ್ಕೆಲ್ಲಾ ಅಂತ್ಯವಾಗುವ ನಿರೀಕ್ಷೆಯಿದೆ. ಆದರೆ ಹೋಟೆಲ್ ರೆಸ್ಟೋರೆಂಟ್‍ಗಳಲ್ಲಿ ಈಗಿರುವ 50-50 ನಿಯಮಗಳನ್ನು ಮಾತ್ರ ಮುಂದುವರೆಸುವ ಸಾಧ್ಯತೆ ಇದೆ. ಜೊತೆಗೆ ಮದುವೆ, ಸಭೆ, ಸಮಾರಂಭ ಮತ್ತು ಪಾದಯಾತ್ರೆಗಳ ಮೇಲೆ ಈ ಹಿಂದಿನ ನಿರ್ಬಂಧಗಳೇ ಮುಂದುವರೆಯುವ ಸಂಭವ ಇದೆ.

    ಸಚಿವ ಸುಧಾಕರ್ ಕೂಡ ರೂಲ್ಸ್ ರಿಲೀಫ್ ಸುಳಿವು ನೀಡಿದ್ದು, ಜನರಿಗೆ ತೊಂದರೆ ಕೊಡುವ ಉದ್ದೇಶ ಸರ್ಕಾರಕ್ಕಿಲ್ಲ. ದಿನಕ್ಕೆ 1.25 ಲಕ್ಷ ಕೇಸ್ ಬರಬಹುದು. ಹೀಗಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ವೈಜ್ಞಾನಿಕ ನೆಲೆಗಟ್ಟಿನಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ಏಕರೂಪ ಮಾರ್ಗಸೂಚಿ ಬದಲು ಬೆಂಗಳೂರಿಗೊಂದು, ರಾಜ್ಯಕ್ಕೊಂದು ಮಾರ್ಗಸೂಚಿ ಜಾರಿಗೊಳಿಸುವ ಬಗ್ಗೆ ಸಚಿವರಾದ ಈಶ್ವರಪ್ಪ ಹಾಗೂ ಆರ್. ಅಶೋಕ್ ಸುಳಿವು ನೀಡಿದ್ದಾರೆ. ಜೀವ, ಜೀವನ ಎರಡೂ ಮುಖ್ಯ ಎಂದಿದ್ದಾರೆ. ಡಿಕೆ ಶಿವಕುಮಾರ್ ಮಾತಾಡಿ, ಲಂಡನ್‍ನಲ್ಲೂ ಇಲ್ಲ. ಹೈದರಾಬಾದನಲ್ಲೂ ಇಲ್ಲದ ರೂಲ್ಸ್ ಇಲ್ಯಾಕೆ? ಬದುಕಿದ್ದವನರನ್ನು ಸಾಯಿಸುವ ಕೆಲಸ ಮೊದಲು ನಿಲ್ಲಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಟೆಸ್ಟ್‌ಗೆ ಕಳುಹಿಸಿ 22 ದಿನದ ನಂತರ ಬಂತು ಒಮಿಕ್ರಾನ್ ವರದಿ – ಅಷ್ಟರಲ್ಲಿ ಗುಣಮುಖಳಾಗಿ ಡಿಸ್ಚಾರ್ಜ್‌ ಆಗಿದ್ಲು ಯುವತಿ!

    ಶಾಸಕ ಅಜಯ್ ಸಿಂಗ್, ಕೇಸ್ ಕಮ್ಮಿ ಇದ್ದಾಗ ವೀಕೆಂಡ್ ಲಾಕ್‍ಡೌನ್ ಮಾಡಿದ್ದರು. ಈಗ ಜಾಸ್ತಿಯಾದಾಗ ತೆಗೆಯಲು ನೋಡುತ್ತಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಲೆಂದೇ ಸರ್ಕಾರ ವೀಕೆಂಡ್ ಲಾಕ್‍ಡೌನ್ ಜಾರಿ ಮಾಡಿತ್ತು ಎಂಬುದು ಸ್ಪಷ್ಟವಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.

    ಮುಂದಿರುವ ಆಯ್ಕೆಗಳು ಏನು?
    1. ಇಡೀ ರಾಜ್ಯಕ್ಕೆ ಒಂದೇ ಮಾರ್ಗಸೂಚಿ ತರುವುದು
    2. ಬೆಂಗಳೂರು ಮತ್ತು ಇತರೆಡೆಗೆ ಪ್ರತ್ಯೇಕ ಮಾರ್ಗಸೂಚಿ
    3. ಬೆಂಗಳೂರಲ್ಲಿ ಮಾತ್ರ ವೀಕೆಂಡ್ ಕರ್ಫ್ಯೂ ಮುಂದುವರಿಕೆ
    4. ಬೆಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಇದ್ದರೂ ಕೆಲವಕ್ಕೆ ವಿನಾಯ್ತಿ (ಹೊಟೇಲ್, ಎಂಆರ್‌ಪಿ, ರೆಸ್ಟೋರೆಂಟ್‍ಗಳಿಗೆ ಕೆಲ ವಿನಾಯಿತಿ. ದಿನಸಿ, ತರಕಾರಿ, ಬೀದಿಬದಿ ವ್ಯಾಪಾರ, ಮಾಂಸ ಮಾರಾಟಕ್ಕೆ ಸಮಯ ನಿಗದಿ)
    5. ಸೋಂಕಿಲ್ಲದ ಜಿಲ್ಲೆಗಳಿಗೆ ವೀಕೆಂಡ್ ಕರ್ಫ್ಯೂ ರಿಲೀಫ್ ನೀಡುವುದು
    6. ಜಿಲ್ಲಾಧಿಕಾರಿಗಳಿಗೆ ಇನ್ನಷ್ಟು ಮಾರ್ಗಸೂಚಿ ಜಾರಿ ಅಧಿಕಾರ

  • ವಾರಾಂತ್ಯ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ: ಎಸ್.ಟಿ.ಸೋಮಶೇಖರ್

    ವಾರಾಂತ್ಯ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ: ಎಸ್.ಟಿ.ಸೋಮಶೇಖರ್

    ಮೈಸೂರು: ವಾರಾಂತ್ಯ ಕರ್ಫ್ಯೂ ಮುಖ್ಯಮಂತ್ರಿಯೊಬ್ಬರ ತೀರ್ಮಾನವಲ್ಲ. ತಜ್ಞರು ನೀಡಿದ ಮುನ್ನೆಚ್ಚರಿಕೆ, ಸಂಪುಟ ಸಚಿವರ ತೀರ್ಮಾನದ ಬಳಿಕ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದೆಯೇ ವಿನಃ ಮುಖ್ಯಮಂತ್ರಿಗಳೊಬ್ಬರೇ ಕೈಗೊಂಡ ತೀರ್ಮಾನವಲ್ಲ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

    ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರ ಆರೋಗ್ಯದ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಾರಾಂತ್ಯ ಕರ್ಫ್ಯೂ ಮುಂದುವರಿಸುವ ಸಂಬಂಧ ಮುಖ್ಯಮಂತ್ರಿಗಳು ಶುಕ್ರವಾರ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಕುರಿತು ಸಾರ್ವಜನಿಕರಿಂದ ಅಹವಾಲನ್ನು ಕೂಡ ಸ್ವೀಕರಿಸುತ್ತಿದ್ದಾರೆ ಎಂದರು.

     

    ಪ್ರತಾಪ್ ಸಿಂಹ, ಸಿ.ಟಿ.ರವಿ ಅವರು ಸಾರ್ವಜನಿಕರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ತಜ್ಞರು ನೀಡಿದ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಕೈಗೊಂಡಿದೆ. ಜೊತೆಗೆ ಆಯಾ ಜಿಲ್ಲೆಯ ಪರಿಸ್ಥಿತಿ ನೋಡಿ ಆಯಾ ಜಿಲ್ಲಾಧಿಕಾರಿಗಳಿಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಪೊಲೀಸ್ ಪೇದೆಗಳು

    ಕೋವಿಡ್ ವಿಚಾರವಾಗಿ ಕೆಲವರು ಮಾತ್ರ ಹೇಳಿಕೆ ನೀಡಬೇಕು ಎಂಬ ಸಚಿವ ಸುಧಾಕರ್ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದರೆ ಜನರಿಗೆ ಗೊಂದಲ ಉಂಟಾಗುತ್ತದೆ. ಸಂಪೂರ್ಣ ಜ್ಞಾನ ಹೊಂದಿದವರು ಮಾತನಾಡಿದರೆ ಸೂಕ್ತ ಎಂಬ ದೃಷ್ಟಿಯಿಂದ ಹೇಳಿಕೆ ನೀಡಿದ್ದಾರೆ ಅಷ್ಟೇ ಎಂದರು.

    ಸಂಪುಟ ವಿಸ್ತರಣೆ ಬಗ್ಗೆ ಮಾಹಿತಿ ಇಲ್ಲ. ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳನ್ನು ಮುಖ್ಯಮಂತ್ರಿಗಳು ತಿಂಗಳು, ಎರಡು ತಿಂಗಳಿಗೊಮ್ಮೆ ಭೇಟಿ ಮಾಡಿ ಚರ್ಚಿಸುವುದು ರೂಢಿ. ಇದರಲ್ಲಿ ವಿಶೇಷವೇನೂ ಇಲ್ಲ. ಬಿಬಿಎಂಪಿ ಚುನಾವಣೆ ಬಗ್ಗೆ ಪಕ್ಷ ಉತ್ಸುಕವಾಗಿದೆ. ಸದ್ಯದಲ್ಲೇ ಸುಪ್ರೀಂ ಕೋರ್ಟ್ ಆದೇಶ ಬರಲಿದೆ. ಸರ್ಕಾರ ಕೂಡ ರೆಡಿಯಿದೆ ಎಂದು ಹೇಳಿದರು. ಇದನ್ನೂ ಓದಿ: ಮಹಿಳೆಗೆ ಗುಂಡಿಕ್ಕಿ ಕೊಲೆ ಮಾಡಿದ್ದ ಬಿಜೆಪಿ ಪುರಸಭೆ ಸದಸ್ಯ ಅರೆಸ್ಟ್

  • ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸೋದಾದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು: ಪ್ರತಾಪ್ ಸಿಂಹ

    ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸೋದಾದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು: ಪ್ರತಾಪ್ ಸಿಂಹ

    ಮೈಸೂರು: ವೀಕೆಂಡ್ ಕರ್ಫ್ಯೂ, ಲಾಕ್ ಡೌನ್ ವಿಧಿಸುವದಾದರೆ ವ್ಯಾಕ್ಸಿನ್ ಯಾಕೆ ಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಚಾರ  ರ್‍ಯಾಲಿ ನಡೆಯುತ್ತದೆ ತಾನೇ? ಹೀಗಿರುವಾಗ ಕರ್ನಾಟಕದಲ್ಲಿ ಯಾಕೆ ಕರ್ಫ್ಯೂ , ಲಾಕ್ ಡೌನ್ ಅಂತಾ ಜನರನ್ನು ಮತ್ತೆ ಕಂಗಾಲು ಮಾಡುತ್ತಿದ್ದಿರಿ? ಜನರನ್ನು ಭೀತಿಯಲ್ಲಿ ಇಡುವುದು ಮೊದಲು ಸರ್ಕಾರ ನಿಲ್ಲಿಸಲಿ. ಕರ್ಫ್ಯೂ, ಲಾಕ್ ಡೌನ್ ನಿಂದ ಜನರಿಗೆ ಬಹಳ ತೊಂದರೆಯಾಗಿದೆ ಎಂದರು. ಇದನ್ನೂ ಓದಿ: ಹಿಂದೂ ಮಹಿಳೆ, ಮುಸ್ಲಿಂ ವ್ಯಕ್ತಿ ರೈಲಿನಲ್ಲಿ ಪ್ರಯಾಣ – ಲವ್ ಜಿಹಾದ್ ಅಂತ ಠಾಣೆಗೆ ಎಳೆದೊಯ್ದ ಭಜರಂಗದಳ ಸದಸ್ಯರು

    ಜನರ ಜೀವನ, ಜೀವ ಎರಡು ಮುಖ್ಯವಾಗಿದೆ. ಜೀವ ಉಳಿಸಿ ಕೊಳ್ಳಲು ವ್ಯಾಕ್ಸಿನ್ ಕೊಟ್ಟಿದ್ದೇವೆ. ಈಗ ಜೀವನ ಉಳಿಯ ಬೇಕಾದರೆ ಕಫ್ರ್ಯೂ, ಲಾಕ್ ಡೌನ್ ತೆಗೆಯಿರಿ. ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಶುಕ್ರವಾರದ ಸಭೆಯಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಎಲ್ಲಾ ವರ್ಗದ ಜನರಿಗೂ ಕರ್ಫ್ಯೂ, ಲಾಕ್ ಡೌನ್ ನಿಂದ ತೊಂದರೆ ಆಗಿದೆ ಎಂದು ನುಡಿದರು. ಇದನ್ನೂ ಓದಿ: ತಜ್ಞರು ಗ್ರೀನ್ ಸಿಗ್ನಲ್ ಕೊಟ್ರೆ ಬೆಂಗಳೂರಿನಲ್ಲಿ ಮರು ದಿನವೇ ಶಾಲೆ ಪ್ರಾರಂಭ: ಬಿಸಿ ನಾಗೇಶ್

  • ವೀಕೆಂಡ್ ಕರ್ಫ್ಯೂ ನಡುವೆ ಮದ್ಯ ಪಾರ್ಸೆಲ್‌ಗೆ ಅವಕಾಶ ಕೊಡಿ – ಬೊಮ್ಮಾಯಿಗೆ ಮನವಿ

    ವೀಕೆಂಡ್ ಕರ್ಫ್ಯೂ ನಡುವೆ ಮದ್ಯ ಪಾರ್ಸೆಲ್‌ಗೆ ಅವಕಾಶ ಕೊಡಿ – ಬೊಮ್ಮಾಯಿಗೆ ಮನವಿ

    ಬೆಂಗಳೂರು: ವೀಕೆಂಡ್ ಕರ್ಫ್ಯೂ ಹಿಂತೆಗೆಯಿರಿ, ಹಿಂತೆಗೆತ ಆಗದಿದ್ದಲ್ಲಿ ಮದ್ಯ ಪಾರ್ಸೆಲ್‌ಗೆ ಸಮಯ ನಿಗದಿ ಮಾಡಿ ಎಂದು ಮದ್ಯ ಮಾರಾಟಗಾರರ ಸಂಘ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.

    ವೀಕೆಂಡ್ ಕರ್ಫ್ಯೂ ಸ್ಥಗಿತಗೊಳಿಸಿ, ನೈಟ್ ಕರ್ಫ್ಯೂ ಮುಂದುವರೆಸಿ. ವೀಕೆಂಡ್ ಕರ್ಫ್ಯೂ ಹಿಂತೆಗೆತ ಆಗದಿದ್ದಲ್ಲಿ ಮದ್ಯ ಪಾರ್ಸೆಲ್‌ಗೆ ಸಮಯ ನಿಗದಿ ಮಾಡಿ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಮದ್ಯ ಪಾರ್ಸೆಲ್‌ಗೆ  ಅನುಮತಿ ಕೊಡುವಂತೆ ಪತ್ರದ ಮೂಲಕ ಮದ್ಯ ಮಾರಾಟಗಾರರ ಸಂಘ ಇಂದು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಕೋವಿಡ್-19 ಪ್ರಕರಣ ಏರಿಕೆ – ಮದುವೆ ನೋಂದಣಿ ಸೇವೆ ಸ್ಥಗಿತ!

    ಇಂದು ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟಗಾರರ ಸಂಘ ಅನುಮತಿಸಲು ಮನವಿ ಮಾಡಿಕೊಂಡಿದ್ದು, ಸಿಎಂ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬ ಕುತೂಹಲವಿದೆ. ಇದನ್ನೂ ಓದಿ: ಮಾನ್ಯ ಡಿಕೆಶಿ ಅವರೇ, ನಿಮ್ಮ ಆರೋಗ್ಯ ಹೇಗಿದೆ?: ಬಿಜೆಪಿ

    ಇಂದು ಸಂಜೆ ಕೋವಿಡ್ ಸಂಬಂಧಪಟ್ಟಂತೆ ಬೊಮ್ಮಾಯಿ ನೇತೃತ್ವದಲ್ಲಿ ವರ್ಚುವಲ್ ಸಭೆ ನಡೆಯಲಿದ್ದು, ಸಿಎಂ, ಮಂತ್ರಿಗಳಿಂದ ಮತ್ತು ತಜ್ಞರಿಂದ ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹಾವಳಿ ದಿನೇ ದಿನೇ ಜೋರಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈಗಾಗಲೇ ಪಾಸಿಟಿವಿಟಿ ದರ 20% ರ ಸನಿಹದಲ್ಲಿದ್ದು ಕೇಸ್‍ಗಳ ಪ್ರಮಾಣ ಕೂಡ 40 ಸಾವಿರದ ಸನಿಹದಲ್ಲಿದೆ. ಹಾಗಾಗಿ ಹಾಲಿ ಮಾರ್ಗಸೂಚಿ ಪರಿಷ್ಕರಿಸಿ ಮತ್ತಷ್ಟು ಹೊಸ ನಿರ್ಬಂಧಗಳಿಗೆ ಸರ್ಕಾರ ಮೊರೆಹೋಗುವ ಸಾಧ್ಯತೆ ಹೆಚ್ಚಿದೆ.