Tag: wedding

  • ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಚಂದನ್, ನಿವೇದಿತಾ

    ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಚಂದನ್, ನಿವೇದಿತಾ

    ಮೈಸೂರು: ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ಬುಧವಾರ ಮೈಸೂರಿನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ನಡೆಸಲಾಗುತ್ತಿದೆ.

    ಮೈಸೂರಿನ ದಟ್ಟಗಹಳ್ಳಿಯ ನಿವೇದಿತಾ ಗೌಡ ಮನೆಯಲ್ಲಿ ಮದುವೆ ಕಾರ್ಯಗಳು ಜೋರಾಗಿ ನಡೆದಿದ್ದು, ಫೆ.25 ಮತ್ತು 26ರಂದು ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿರುವ ವಿವಾಹಕ್ಕೆ ಗಣ್ಯರ ದಂಡೇ ಹರಿದು ಬರುತ್ತಿದೆ. ಈ ಮದುವೆ ಸಮಾರಂಭಕ್ಕೆ ಸ್ಯಾಂಡಲ್‍ವುಡ್‍ನ ಕಲಾವಿದರು, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಸಾಕ್ಷಿ ಯಾಗುವ ನಿರೀಕ್ಷೆ ಇದೆ.

    ಚಂದನ್ ಹಾಗೂ ನಿವೇದಿತಾ ಮದುವೆ ಆಮಂತ್ರಣ ನೀಡುವಲ್ಲಿ ಇಷ್ಟು ದಿನ ಬ್ಯುಸಿಯಾಗಿದ್ದರು. ಇತ್ತೀಚೆಗೆಷ್ಟೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವು ಗಣ್ಯರಿಗೆ ಲಗ್ನ ಪತ್ರಿಕೆ ನೀಡಿದ್ದರು. ದರ್ಶನ್ ಅವರನ್ನು ಭೇಟಿಯಾಗಿದ್ದ ಸಂತಸವನ್ನು ಚಂದನ್ ಮತ್ತು ನಿವೇದಿತಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಹೀಗೆ ಸಿನಿಮಾರಂಗದವರಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ.

    ಯುವ ದಸರಾದ ಸರ್ಕಾರಿ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಬಳಿಕ ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

  • ಗದಗನಲ್ಲಿ ಹಿರಿಯ ಹಾಸ್ಯನಟ ದೊಡ್ಡಣ್ಣನ ಪುತ್ರನ ಮದುವೆ ಸಂಭ್ರಮ

    ಗದಗನಲ್ಲಿ ಹಿರಿಯ ಹಾಸ್ಯನಟ ದೊಡ್ಡಣ್ಣನ ಪುತ್ರನ ಮದುವೆ ಸಂಭ್ರಮ

    ಗದಗ: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಹಾಸ್ಯ ನಟ ದೊಡ್ಡಣ್ಣ ಅವರು ಗದಗ ನಗರದಲ್ಲಿ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.

    ಗದಗನಲ್ಲಿ ವ್ಯಾಪಾರಸ್ಥರಾಗಿರುವ ಅಂದಾನಪ್ಪ ಗುಗ್ಗರಿ ಅವರ ಪುತ್ರಿ ಜ್ಯೋತಿ ಅವರೊಂದಿಗೆ, ದೊಡ್ಡಣ್ಣ ಅವರ ಪುತ್ರ ಸೂಗುರೇಶ್ ಅವರ ವಿವಾಹವು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೆರವೇರಿತು. ಜ್ಯೋತಿ ಇಂದು ದೊಡ್ಡಣ್ಣ ಅವರ ಮನೆ ಬೆಳಗೋಕೆ ಅವರ ಕುಟುಂಬದೊಡನೆ ಒಂದಾದರು. ಬೆಳಗ್ಗೆಯಿಂದಲೇ ಕಲ್ಯಾಣ ಮಂಟಪದಲ್ಲಿ ಜನಜಾತ್ರೆ ನೆರೆದಿತ್ತು.

    ಚಿತ್ರರಂಗದವರ ಮದುವೆಯೆಂದರೆ ಸಾಕು ಅಲ್ಲಿ ಒಂದು ಆಡಂಬರ ಹೆಚ್ಚಾಗಿರುತ್ತದೆ. ಆದರೆ ದೊಡ್ಡಣ್ಣ ಅವರು ತಮ್ಮ ಮಗನ ಮದುವೆಯನ್ನು ಬಹಳ ಸಿಂಪಲ್ ಆಗಿ ಮಾಡಿದರು. ವಿಶೇಷವಾಗಿ ಉತ್ತರ ಕರ್ನಾಟಕದ ಜನರು ಹೃದಯವಂತರು, ಅವರ ಮಾತು ಸಿಹಿ. ಹೀಗಾಗಿ ಇಲ್ಲಿಯೇ ಮದುವೆ ಮಾಡಲಾಗಿದೆ. ಈ ಭಾಗದ ಹೆಣ್ಮಗಳು ನಮ್ಮ ಮನೆ ಬೆಳಗೋಕೆ ಬಂದಿರುವದು ನನಗೆ ಸಂತಸ ತಂದಿದೆ ಎಂದು ದೊಡ್ಡಣ್ಣ ಹೇಳಿದರು.

    ಕಲ್ಯಾಣ ಮಂಟಪಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ ಮತ್ತು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರು ವಧುವರರನ್ನು ಆಶೀರ್ವಾದಿಸಿದರು. ಈ ಭಾಗದಿಂದ ಸಿನಿಮಾ ಕ್ಷೇತ್ರದ ಹಿರಿಯ ಕಲಾವಿದರೊಬ್ಬರ ಮನೆಗೆ ಹೆಣ್ಣು ಕೊಟ್ಟಿದ್ದು ನಮಗೂ ಸಂತಸ ತಂದೆ ಎಂದು ಅಂದಾನಪ್ಪ ಗುಗ್ಗರಿ ಕುಟುಂಬಸ್ಥರು ಹೇಳಿದ್ದಾರೆ.

  • ಕೊಡಗಿನ ವರನಿಗೆ ರಷ್ಯಾದ ‘ಮಿಲನ’

    ಕೊಡಗಿನ ವರನಿಗೆ ರಷ್ಯಾದ ‘ಮಿಲನ’

    ಮಡಿಕೇರಿ: ಕೊಡಗಿನ ಯುವಕ ಹಾಗೂ ರಷ್ಯಾದ ಯುವತಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದು ಸತಿ-ಪತಿಯಾದ ವಿಶೇಷ ಪ್ರಸಂಗ ನಡೆದಿದೆ.

    ಸೋಮವಾರಪೇಟೆಯ ಜಾನಕಿ ಕನ್‍ವೆನ್ಷನ್ ಹಾಲ್ ಈ ಅಪರೂಪದ ಮಂಗಳ ಕಾರ್ಯಕ್ಕೆ ಸಾಕ್ಷಿಯಾಗಿದೆ. ಸೊಮವಾರಪೇಟೆ ಸಮೀಪದ ನಂದಿಗುಂದ ಗ್ರಾಮದ ಚಿನ್ನಪ್ಪ ಮತ್ತು ಪುಷ್ಪ ದಂಪತಿಯ ಪುತ್ರ ಜಯಚಂದನ್ ರಷ್ಯಾದ ಮಾಸ್ಕೊ ವಿಶ್ವವಿದ್ಯಾನಿಲಯದಲ್ಲಿ ಯೋಗ ತರಬೇತುದಾರರಾಗಿದ್ದಾರೆ. ಇವರೊಂದಿಗೆ ಮಾಸ್ಕೊ ರಾಜ್ಯದ ಯುವತಿ ಮಿಲನಾ ಅವರು ಯೋಗ ತರಬೇತಿ ನೀಡುತ್ತಿದ್ದು, ಪರಸ್ಪರ ಪ್ರೀತಿಸಿ ಹಸೆಮಣೆಯೇರುವ ತೀರ್ಮಾನಕ್ಕೆ ಬಂದಿದ್ದರು.

    ಗುರು, ಹಿರಿಯರು, ನೆಂಟರಿಷ್ಟರು ಮತ್ತು ಆಪ್ತರ ಸಮ್ಮುಖದಲ್ಲಿ ಭಾನುವಾರ ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಷ್ಯಾದ ಯುವತಿಗೆ ಭಾರತೀಯ ಸಂಸ್ಕೃತಿಯ ಅಚಾರ ವಿಚಾರದ ಬಗ್ಗೆ ಹೆಚ್ಚಿನ ಒಲವು ಇದ್ದು, ಭಾರತದ ಹುಡುಗನನ್ನು ಮದುವೆ ಮಾಡಿಕೊಳ್ಳುವ ಆಸೆ ಇತ್ತು. ಈ ಕುರಿತು ಹುಡುಗನ ಮನೆಯವರೊಂದಿಗೆ ಹೇಳಿಕೊಂಡಿದ್ದರು. ನಂತರ ಇಬ್ಬರ ಮನೆಯಲ್ಲೂ ಒಪ್ಪಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  • ರಜೆಗೆಂದು ಊರಿಗೆ ಬಂದಿದ್ದ ಸೈನಿಕ ನೇಣಿಗೆ ಶರಣು

    ರಜೆಗೆಂದು ಊರಿಗೆ ಬಂದಿದ್ದ ಸೈನಿಕ ನೇಣಿಗೆ ಶರಣು

    ಗದಗ: 2 ತಿಂಗಳು ರಜೆಗೆಂದು ಊರಿಗೆ ಬಂದಿದ್ದ ಸೈನಿಕರೊಬ್ಬರು ಇನ್ನೊಂದು ವಾರದಲ್ಲಿ ಕರ್ತವ್ಯಕ್ಕೆ ವಾಪಾಸ್ ಹೋಗುವ ಮುನ್ನವೇ ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಬೆಳ್ಳೆರಿನಲ್ಲಿ ನಡೆದಿದೆ.

    ಮಹಾಂತೇಶ್ ಮೇಟಿ(25) ಆತ್ಮಹತ್ಯೆಗೆ ಶರಣಾದ ಸೈನಿಕ. ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಾಂತೇಶ್ ಅವರು 2005ರಲ್ಲಿ ಭಾರತೀಯ ಸೇನೆಗೆ ಭರ್ತಿಯಾಗಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸಿಕ್ಕಿಂನ 228 ಬಟಾಲಿಯನ್‍ನಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಬಾರಿ ಮದುವೆ ಮಾಡಿಕೊಳ್ಳೋದಕ್ಕೆ ಎರಡು ತಿಂಗಳು ರಜೆ ಹಾಕಿಕೊಂಡು ಮಹಾಂತೇಶ್ ಊರಿಗೆ ಬಂದಿದ್ದರು. ಆದರೆ ಬುಧವಾರ ಜಮೀನಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಳೆದ 15 ದಿನಗಳ ಹಿಂದೆಯಷ್ಟೇ ಇವರ ಮದುವೆ ನಿಶ್ಚಿತಾರ್ಥ ಕೂಡಾ ಮಾಡಲಾಗಿತ್ತು. ಮುಂದಿನ ರಜೆಗೆ ಬಂದಾಗ ಮದುವೆ ಆದರಾಯಿತು ಅಂತ ಇನ್ನೊಂದು ವಾರದ ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾಗುವುದಾಗಿ ಮಹಾಂತೇಶ್ ಎಲ್ಲರ ಬಳಿ ಹೇಳಿದ್ದರು. ಊರಿಗೆ ಬಂದರೆ ಸಾಕು ರೈತನಾಗಿ ತಂದೆ-ತಾಯಿ ಜೊತೆಗೂಡಿ ಕೆಲಸ ಮಾಡ್ತಿದ್ದರು. ಊರಲ್ಲಿ ಎಲ್ಲರಿಗೂ ಇವರೆಂದರೆ ಅಚ್ಚು ಮೆಚ್ಚು.

    ಆದರೆ ಏಕಾಏಕಿ ಜಮೀನಿನಲ್ಲಿ ಮಹಾಂತೇಶ್ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ. ಇತ್ತ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ವರ ತಡವಾಗಿ ಮದುವೆಗೆ ಬಂದ ಎಂದು ಬೇರೆಯವನನ್ನು ಮದುವೆಯಾದ ವಧು

    ವರ ತಡವಾಗಿ ಮದುವೆಗೆ ಬಂದ ಎಂದು ಬೇರೆಯವನನ್ನು ಮದುವೆಯಾದ ವಧು

    ಲಕ್ನೋ: ವರ ಮದುವೆ ಮನೆಗೆ ತಡವಾಗಿ ಬಂದ ಎಂದು ವಧು ಬೇರೆ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ನಂಗಲ್ಜತ್ ಎಂಬ ಹಳ್ಳಿಯಲ್ಲಿ ನಡೆದಿದೆ.

    ಈ ಘಟನೆ ಒಂದು ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ ಈ ಜೋಡಿಯು ಅಕ್ಟೋಬರ್ ನಲ್ಲಿ ಸಾಮೂಹಿಕ ವಿವಾಹವೊಂದರಲ್ಲಿ ಮದುವೆಯಾಗಿದೆ. ಆದರೆ ಸಂಪ್ರಾದಯಿಕವಾಗಿ ಮತ್ತೊಮ್ಮೆ ಮದುವೆಯಾಗಲು ಡಿಸೆಂಬರ್ 4ರಂದು ಮದುವೆ ನಿಶ್ಚಯ ಮಾಡಿದ್ದಾರೆ.

    ಈ ಮದುವೆಗೆ ವಧುವಿನ ಮನೆಗೆ ಮಧ್ಯಾಹ್ನ 2 ಗಂಟೆಗೆ ಬರಬೇಕಾದ ವರನ ಕಡೆಯವರು ರಾತ್ರಿಯ ವೇಳೆಗೆ ಮದುವೆ ಮನೆಗೆ ಬಂದಿದ್ದಾರೆ. ಇದರಿಂದ ಕೋಪಗೊಂಡ ವಧುವಿನ ಕಡೆಯವರು ಗಲಾಟೆ ಮಾಡಿದ್ದಾರೆ. ಇದಕ್ಕೂ ಮುಂಚೆಯೇ ವರದಕ್ಷಿಣೆ ವಿಚಾರವಾಗಿ ವಧು ವರನ ಕುಟುಂಬದ ನಡುವೆ ಜಗಳ ಆಗಿತ್ತು. ಆ ಕಾರಣದಿಂದಲ್ಲೇ ಗಲಾಟೆಯಾಗಿ ಮದುವೆ ಮರಿದು ಬಿದ್ದಿದೆ.

    ತಡವಾಗಿ ಮದುವೆ ಮನೆಗೆ ಬಂದ ವರದ ಕಡೆಯವರನ್ನು ವಧುವಿನ ಕುಟುಂಬದವರು ಒಂದು ಮನೆಯಲ್ಲಿ ಕೂಡಿಹಾಕಿ ಥಳಿಸಿ ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡಿದ್ದಾರೆ ಎಂದು ವರನ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಎರಡು ಕುಟುಂಬದವರು ರಾಜಿ ಮಾಡಿಕೊಳ್ಳಲು ಬಂದಿದ್ದರು. ಆದರೆ ವಧು ವರನೊಂದಿಗೆ ಹೋಗಲು ಇಷ್ಟವಿಲ್ಲ ಎಂದರು. ಹೀಗಾಗಿ ಎರಡೂ ಕಡೆಯಿಂದ ಯಾವುದೇ ಲಿಖಿತ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.

    ಈ ಘಟನೆ ರಾಜಿ ಪಂಚಾಯಿತಿ ಮೂಲಕ ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ. ಇದಾದ ನಂತರ ವರ ತನ್ನ ಸಂಬಂಧಿಕರ ಜೊತೆ ತನ್ನ ಊರಿಗೆ ಹಿಂದುರಿಗಿದ್ದಾನೆ. ನಂತರ ವಧು ಗ್ರಾಮದ ಹಿರಿಯ ಸಮ್ಮುಖದಲ್ಲಿ ಅದೇ ಹಳ್ಳಿಯ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ.

  • ನನ್ನ ತಂಗಿಯ ಜೊತೆ ಮಲಗಿದ್ದಕ್ಕೆ ಆತನನ್ನು ತಂಡದಿಂದ ಹೊರಗಿಟ್ಟೆ: ಫಾಫ್ ಡುಪ್ಲೆಸಿಸ್

    ನನ್ನ ತಂಗಿಯ ಜೊತೆ ಮಲಗಿದ್ದಕ್ಕೆ ಆತನನ್ನು ತಂಡದಿಂದ ಹೊರಗಿಟ್ಟೆ: ಫಾಫ್ ಡುಪ್ಲೆಸಿಸ್

    ಕೇಪ್‍ಟೌನ್: ನನ್ನ ತಂಗಿಯ ಜೊತೆ ಮಲಗಿದ್ದಕ್ಕೆ ಆತನನ್ನು ತಂಡದಿಂದ ಹೊರಗಿಟ್ಟೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.

    ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂಝಾಂಸಿ ಸೂಪರ್ ಲೀಗ್ (ಎಂಎಸ್‍ಎಲ್)ನಲ್ಲಿ ಪಾರ್ಲ್ ರಾಕ್ಸ್ ತಂಡದ ನಾಯಕನಗಿರುವ ಫಾಫ್ ಡುಪ್ಲೆಸಿಸ್ ಅವರು, ರಾಕ್ಸ್ ತಂಡದ ಆಟಗಾರ ಹರ್ಡಸ್ ವಿಲ್ಜೋಯೆನ್ ಅವರನ್ನು ಆಡವ 11ರ ಬಳಗದಿಂದ ಕೈ ಬಿಟ್ಟದ್ದು ಯಾಕೆ ಎಂದು ಕೇಳಿದಾಗ ಆತ ನನ್ನ ತಂಗಿಯ ಜೊತೆ ಮಲಗಿದ್ದ ಅದಕ್ಕೆ ತಂಡದಿಂದ ಕೈಬಿಟ್ಟೆ ಎಂದು ಹೇಳಿದ್ದಾರೆ.

    ಪಾರ್ಲ್ ರಾಕ್ಸ್ ಮತ್ತು ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ ನಡುವೆ ಭಾನುವಾರ ನಡೆದ ಪಂದ್ಯದ ಟಾಸ್ ವೇಳೆ, ಟಾಸ್ ಸೋತ ನಂತರ ಮಾತನಾಡಿದ್ದ ಫಾಫ್ ಡುಪ್ಲೆಸಿಸ್ ಅವರು ಅಡುವ 11ರ ಬಳಗದಲ್ಲಿ ಹರ್ಡಸ್ ವಿಲ್ಜೋಯೆನ್ ಯಾಕೆ ಕೈಬಿಟ್ಟಿದ್ದೀರ ಎಂದು ಕೇಳಿದಾಗ, ಆತ ನಿನ್ನೆ ನನ್ನ ತಂಗಿಯ ಜೊತೆ ಬೆಡ್ ಮೇಲೆ ಮಲಗಿದ್ದ ಅದಕ್ಕೆ ನಾನು ಅವನನ್ನು ಆಡುವ 11ರ ಬಳಗದಿಂದ ಕೈಬಿಟ್ಟೆ ಎಂದು ತಿಳಿಸಿದ್ದಾರೆ.

    ಅಸಲಿಗೆ ಫಾಫ್ ಡು ಪ್ಲೆಸ್ಸಿಸ್ ಅವರು ಈ ರೀತಿ ಹೇಳಲು ಒಂದು ಕಾರಣ ಕೂಡ ಇದೆ. ಯಾಕೆಂದರೆ ಹರ್ಡಸ್ ವಿಲ್ಜೋಯೆನ್ ಅವರು 2019ರ ಏಪ್ರಿಲ್‍ನಲ್ಲಿ ಡುಪ್ಲೆಸಿಸ್ ಅವರ ತಂಗಿ ರೆಮಿ ರೈನ್ನರ್ಸ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿಗೆ ಕಳೆದ ಶನಿವಾರ ವಿವಾಹವಾಗಿದೆ. ಈ ಕಾರಣದಿಂದ ಫಾಫ್ ಡುಪ್ಲೆಸ್ಸಿಸ್ ಅವರು ವ್ಯಂಗ್ಯವಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

    ಹರ್ಡಸ್ ವಿಲ್ಜೋಯೆನ್ ಅವರು ಬಲಗೈ ವೇಗಿ ಆಗಿದ್ದು, ಇಂಡಿಯಾನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲೂ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರವಾಗಿ ಆಡುತ್ತಾರೆ. ಸೌತ್ ಆಫ್ರಿಕಾ ಪರ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಅವರು ಆಡಿದ್ದಾರೆ. ಇದನ್ನು ಬಿಟ್ಟರೆ ಪಾಕಿಸ್ತಾನ ಸೂಪರ್ ಲೀಗ್‍ನಲ್ಲೂ ಹರ್ಡಸ್ ವಿಲ್ಜೋಯೆನ್ ಅವರು ಮಿಂಚಿದ್ದರು.

    ಹರ್ಡಸ್ ವಿಲ್ಜೋಯೆನ್ ಅವರ ವಿವಾಹಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಶುಭಕೋರಿದ್ದು, ಜೀವನದಲ್ಲಿ ಹೊಸ ಇನ್ನಿಂಗ್ಸ್ ಅನ್ನು ಆರಂಭಿಸಿದ ಹರ್ಡಸ್ ವಿಲ್ಜೋಯೆನ್ ರೆಮಿ ರೈನ್ನರ್ಸ್ ಅವರಿಗೆ ಶುಭಾಶಯಗಳು ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.

  • ಸರ್ಕಾರದಿಂದ ವಧುವಿಗೆ 10 ಗ್ರಾಂ ಚಿನ್ನ – ಷರತ್ತುಗಳು ಅನ್ವಯ

    ಸರ್ಕಾರದಿಂದ ವಧುವಿಗೆ 10 ಗ್ರಾಂ ಚಿನ್ನ – ಷರತ್ತುಗಳು ಅನ್ವಯ

    – ವಾರ್ಷಿಕ ಆದಾಯ 5 ಲಕ್ಷ ರೂ.ಒಳಗಿರಬೇಕು
    – ಬಾಲ್ಯ ವಿವಾಹ ಆಗಿರಬಾರದು

    ದಿಸ್ಪುರ್: ಮದುವೆ ನೋಂದಣಿ ಉತ್ತೇಜಿಸುವುದು ಹಾಗೂ ಬಾಲ್ಯವಿವಾಹವನ್ನು ತಡೆಗಟ್ಟುವ ಉದ್ದೇಶದಿಂದ ಅಸ್ಸಾಂ ಸರ್ಕಾರ ‘ಅರುಂಧತಿ ಚಿನ್ನದ ಯೋಜನೆ’ಯನ್ನು ಜಾರಿಗೆ ತಂದಿದ್ದು, ಮುಂದಿನ ವರ್ಷದಿಂದ ಇದು ಕಾರ್ಯರೂಪಕ್ಕೆ ಬರಲಿದೆ.

    ಈ ಯೋಜನೆಯಡಿ ಎಲ್ಲ ವಧುಗಳಿಗೆ 10 ಗ್ರಾಂ ಚಿನ್ನಕ್ಕೆ ತಗಲುವ ಮೊತ್ತವನ್ನು ಸರ್ಕಾರ ನೀಡಲಿದೆ. ಆದರೆ ಮದುವೆ ನೋಂದಣಿ ಸಮಯದಲ್ಲಿ ಚಿನ್ನ ಖರೀದಿಯ ರಶೀದಿಯನ್ನು ಫಲಾನುಭವಿಗಳು ನೀಡಬೇಕಾಗುತ್ತದೆ.

    ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ಮಾಹಿತಿ ನೀಡಿ, ಈ ಯೋಜನೆಯು ವಿವಾಹ ನೋಂದಣಿ ಉತ್ತೇಜಿಸುವುದು ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳನ್ನು ತಡೆಯುವ ಗುರಿಯನ್ನು ಹೊಂದಿದೆ. ಯೋಜನೆಯ ಲಾಭ ಪಡೆಯಲು ವಧು ಹಾಗೂ ಆಕೆಯ ತಂದೆಯ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರಬೇಕು ಎಂದು ವಿವರಿಸಿದರು.

    ಅಲ್ಲದೆ ಫಲಾನುಭವಿ ವಧು-ವರರ ವಯಸ್ಸು ಕ್ರಮವಾಗಿ 18 ಹಾಗೂ 21 ವರ್ಷಗಳನ್ನು ಮೀರಿರಬೇಕು. 1954ರ ವಿಶೇಷ ವಿವಾಹ(ಅಸ್ಸಾಂ) ಕಾಯ್ದೆಯಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮದುವೆಯನ್ನು ಔಪಚಾರಿಕವಾಗಿ ನೋಂದಾಯಿಸಿಕೊಂಡ ನಂತರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮದುವೆ ಸಮಯದಲ್ಲೇ ಚಿನ್ನ ಕೊಳ್ಳಲು ಹಣ ನೀಡಲಾಗುವುದು ಎಂದು ಶರ್ಮಾ ತಿಳಿಸಿದರು.

  • ಶವಪೆಟ್ಟಿಗೆಯಲ್ಲಿ ಮದುವೆ ಹಾಲ್‍ಗೆ ಬಂದ ವಧು: ವಿಡಿಯೋ

    ಶವಪೆಟ್ಟಿಗೆಯಲ್ಲಿ ಮದುವೆ ಹಾಲ್‍ಗೆ ಬಂದ ವಧು: ವಿಡಿಯೋ

    ಜೀವನದಲ್ಲಿ ಮದುವೆಯ ದಿನವು ಅತ್ಯಂತ ವಿಶೇಷವಾದ ದಿನಗಳಲ್ಲಿ ಒಂದಾಗಿರುತ್ತದೆ. ಮದುವೆಯನ್ನು ಹೆಚ್ಚು ವಿಶೇಷವಾಗಿಸಲು ಅನೇಕರು ಉತ್ಸುಕರಾಗಿರುತ್ತಾರೆ. ಆದರೆ ವಧು ಒಬ್ಬಳು ಶವಪೆಟ್ಟಿಯಲ್ಲಿ ಮದುವೆ ಹಾಲ್‍ಗೆ ಬಂದ ಅಚ್ಚರಿ ಮೂಡಿಸಿದ್ದಾಳೆ.

    ಈ ವಿಚಿತ್ರ ಪ್ರಸಂಗ ಎಲ್ಲಿ ಹಾಗೂ ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಟ್ವಿಟರ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲ ನೆಟ್ಟಿಗರು ದಿಗ್ಭ್ರಮೆಗೊಂಡರೆ, ಇತರರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

    ಮದುವೆ ಹಾಲ್‍ನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಶವಪೆಟ್ಟಿಗೆ ಮೇಲೆ ಹೊದಿಸಿದ್ದ ಕಪ್ಪು ಬಟ್ಟೆ ತೆಗೆಯುತ್ತಾನೆ. ಬಳಿಕ ಶವಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಗೋಲ್ಡನ್ ಗೌನ್ ಧರಿಸಿ ಮಲಗಿದ್ದ ವಧು ಡ್ಯಾನ್ಸ್ ಮಾಡುತ್ತಾ ಮೇಲೆಳುತ್ತಾಳೆ. ಈ ವೇಳೆ ಹಾಲ್ ನಲ್ಲಿ ಸೇರಿದ್ದ ಜನರು ವಧುವನ್ನ ಹುರಿದುಂಬಿಸುತ್ತಾರೆ. ನಗುತ್ತಲೇ ಶವಪೆಟ್ಟಿಗೆಯಿಂದ ವಧು ಹೊರ ಬಂದ ದೃಶ್ಯವನ್ನು ಕೆಲವರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ಇದು ಅವಳ ಮದುವೆಯೋ? ಅಂತ್ಯಸಂಸ್ಕಾರವೋ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಮತ್ತೊಬ್ಬರು ವಿಡಿಯೋ ರಿಟ್ವೀಟ್ ಮಾಡಿ, ಒಂದು ವೇಳೆ ನಾನು ಮದುವೆ ಹಾಲ್‍ನಲ್ಲಿ ಇದ್ದಿದ್ದರೆ ಅಥವಾ ನಾನೇ ವರನಾಗಿದ್ದರೆ ಅಲ್ಲಿಂದ ಓಡಿ ಹೋಗುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ.

  • ‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

    ‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ಹಾಗೂ ಹಾಲಿ ಶ್ರೀನಿವಾಪುರ ಶಾಸಕ ರಮೇಶ್ ಕುಮಾರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

    ಅಂದಹಾಗೆ 1977 ರ ಮೇ 22 ರಂದು ರಮೇಶ್ ಕುಮಾರ್ ಇದೇ ದೇವಾಲಯದಲ್ಲಿ ವಿವಾಹವಾಗಿದ್ದರು. ದೇವರ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಇತ್ತೀಚಿನ ರಾಜ್ಯದ ರಾಜಕೀಯ ಘಟನಾವಳಿಗಳಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೆ. ಹೀಗಾಗಿ ದೇವರ ದರ್ಶನ ಪಡೆದು ಮನಸ್ಸು ನಿರಾಳ ಮಾಡಿಕೊಳ್ಳಲು ದೇವಾಲಯಕ್ಕೆ ಆಗಮಿಸಿದ್ದೇನೆ. ಇದು ಖಾಸಗಿ ಭೇಟಿ ಆಗಿದ್ದು ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು.

    ಇದೇ ವೇಳೆ ಅನರ್ಹ ಶಾಸಕರ ವಿಚಾರಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಏನು ತೀರ್ಮಾನ ಆಗುತ್ತೋ ನೋಡಬೇಕು. ಅಮೇಲೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಬೇಕು ಎಂದು ಹೇಳಿದರು.

    ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಕೆ ವಿಚಾರ ಸಂಬಂಧ ಮಾತನಾಡಿ, ಉಪಚುನಾವಣೆಯೇ ಬಂದಿಲ್ಲ ಮಗು ಹುಟ್ಟಿದರೆ ತಾನೇ ಮಗುವಿಗೆ ಸೋಮಲಿಂಗನೋ ಭೀಮಲಿಂಗನೋ ಎಂದು ಹೆಸರಿಡೋದು. ಮದುವೆಯೇ ಆಗಿಲ್ಲ ಮಗುನೇ ಹುಟ್ಟಿಲ್ಲ ಮಗು ಗಂಡಾ ಹೆಣ್ಣಾ ಎಂದು ಕೇಳಿದರೆ ಹೇಗೆ ಎಂದು ಹಾಸ್ಯ ಮಾಡಿದರು.

    ರಾಜ್ಯದಲ್ಲಿ ಸಿದ್ದರಾಮಯ್ಯ ಬಹಳ ಪ್ರಭಾವಯುತ ನಾಯಕರಾಗಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಕಟ್ಟುವ ಕೆಲಸ ನಾವು ಮಾಡುತ್ತೇವೆ. ಶಾಸಕರ ಅನರ್ಹತೆಯನ್ನು ಸ್ಪೀಕರ್ ಸ್ಥಾನದಿಂದ ನಾನು ಮಾಡಿದ್ದೇನೆ. ಆದರೆ ಈಗ ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಗೌರವ ಅಲ್ಲ. ಈಗ ಪಕ್ಷದ ಕಾರ್ಯಕರ್ತನಾಗಿ ಸವಾಲು ಇದೆ. ಪಕ್ಷವನ್ನು ಪ್ರಾಮಾಣಿಕವಾಗಿ ಕಟ್ಟುವ ಕೆಲಸ ನಾವೆಲ್ಲರೂ ಮಾಡುತ್ತೇವೆ. ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಹಂತಕ್ಕೆ ನಾವು ಹೋಗಿಯೇ ಇಲ್ಲ ಎಂದು ತಿಳಿಸಿದರು.

  • ವರದಕ್ಷಿಣೆ ಬೇಡವೆಂದ ವರನಿಗೆ ಸಿಕ್ತು 1 ಲಕ್ಷ ಮೌಲ್ಯದ ಸಾವಿರ ಪುಸ್ತಕ!

    ವರದಕ್ಷಿಣೆ ಬೇಡವೆಂದ ವರನಿಗೆ ಸಿಕ್ತು 1 ಲಕ್ಷ ಮೌಲ್ಯದ ಸಾವಿರ ಪುಸ್ತಕ!

    ಕೋಲ್ಕತ್ತಾ: ವರದಕ್ಷಿಣೆಯೇ ಬೇಡ ಎಂದಿದ್ದ ವರನಿಗೆ 1 ಲಕ್ಷ ರೂಪಾಯಿ ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಉಡುಗೊರೆಯಾಗಿ ನೀಡಿ ಮಗಳನ್ನು ಧಾರೆಯೆರೆದು ಕೊಟ್ಟ ವಿಶೇಷ ಮದುವೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ.

    ಕೋಲ್ಕತ್ತಾದ ಶಿಕ್ಷಕ ಸೂರ್ಯಕಾಂತ್ ಬರಿಕ್ ಅವರ ಮದುವೆಯು ಅದೇ ಊರಿನ ಪ್ರಿಯಾಂಕಾ ಬೇಜ್ ಅವರ ಜೊತೆ ಖೇಜುರಿಯ ಕಲ್ಯಾಣ ಮಂಟಪವೊಂದರಲ್ಲಿ ನೆರವೇರಬೇಕಿತ್ತು. ಈ ವೇಳೆ ಕಲ್ಯಾಣಮಂಟಪಕ್ಕೆ ಬಂದ ಅವರಿಗೆ ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 1 ಸಾವಿರ ಪುಸ್ತಕಗಳನ್ನು ಮಾವ ಗಿಫ್ಟ್ ಮಾಡಿದ್ದಾರೆ. ವರದಕ್ಷಿಣೆ ನಿರಾಕರಿಸಿ ಎಲ್ಲರಿಗೂ ಮಾದರಿಯಾದ ವರನಿಗೆ ಈ ಉಡುಗೊರೆ ನೋಡಿ ಸಿಕ್ಕಪಟ್ಟೆ ಖುಷಿಯಾಗಿದೆ. ಈ ವಿಶೇಷ ಉಡುಗೊರೆ ವಿಚಾರ ಸದ್ಯ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ.

    ನಾನು ಯಾವುದೇ ವರದಕ್ಷಿಣೆ ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಆದರೆ ನಾನು ಕಲ್ಯಾಣ ಮಂಟಪಕ್ಕೆ ಬಂದಾಗ, ಪುಸ್ತಕಗಳ ಬೃಹತ್ ರಾಶಿಯನ್ನು ಉಡುಗೊರೆಯಾಗಿ ಕಂಡು ತುಂಬಾ ಆಶ್ಚರ್ಯವಾಯಿತು ಎಂದು ಬರಿಕ್ ಹೇಳಿದ್ದಾರೆ. ಹಾಗೆಯೇ ನನ್ನ ಪತಿಗೆ ಓದುವ ಹಂಬಲ ಹೆಚ್ಚು. ನನಗೂ ಓದುವ ಹವ್ಯಾಸವಿದೆ. ಇದನ್ನು ತಿಳಿದ ನನ್ನ ತಂದೆ ಈ ಗಿಫ್ಟ್ ಕೊಟ್ಟಿದ್ದಾರೆ ಎಂದು ವಧು ತಿಳಿಸಿದ್ದಾರೆ.

    ಈ ಬಗ್ಗೆ ವಧುವಿನ ಕುಟುಂಬದವರು ಮಾತನಾಡಿ, ಈ ಪುಸ್ತಕಗಳನ್ನು ಕೊಲ್ಕತ್ತಾ ಕಾಲೇಜು ರಸ್ತೆ, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಪ್ರಕಾಶನವಾದ ಉದ್ಧೋಧನ್ ಪಬ್ಲಿಷ್ ಹೌಸ್‍ನಿಂದ ಖರೀದಿಸಿದ್ದೇವೆ. ಈ ಪುಸ್ತಕ ಸಂಗ್ರಹಣೆಯಲ್ಲಿ ರವೀಂದ್ರನಾಥ ಟ್ಯಾಗೋರ್, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಮತ್ತು ಶರತ್ ಚಂದ್ರ ಚಟ್ಟೋಪಾಧ್ಯಾಯವರ ಸಂಪೂರ್ಣ ಕೃತಿಗಳು ಇವೆ ಎಂದರು.

    ವರದಕ್ಷಿಣೆ ಪಡೆಯುವುದು ಹಾಗೂ ಕೊಡುವುದು ಅಪರಾಧ ಎಂದು ತಿಳಿದಿದ್ದರೂ ಅನೇಕರು ವರದಕ್ಷಿಣೆಯಿಲ್ಲದೆ ಮದುವೆ ಆಗುವುದಿಲ್ಲ. ಇಂತಹ ಜನರ ನಡುವೆಯೂ ಸೂರ್ಯಕಾಂತ್ ಅವರ ತರಹ ವರದಕ್ಷಿಣೆ ನಿರಾಕರಿಸುವವರ ಸಂಖ್ಯೆ ಕಡಿಮೆ. ಸೂರ್ಯಕಾಂತ್ ಅವರು ಇತರರಿಗೆ ಮಾದರಿ ಎಂದು ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದೆ.