Tag: Wedding Photoshoot

  • ವೆಡ್ಡಿಂಗ್ ಫೋಟೋಶೂಟ್ – ವರನ ಕೈಯಿಂದ ಜಾರಿದ ವಧು ಫೋಟೋಗೆ ಟ್ವಿಸ್ಟ್

    ವೆಡ್ಡಿಂಗ್ ಫೋಟೋಶೂಟ್ – ವರನ ಕೈಯಿಂದ ಜಾರಿದ ವಧು ಫೋಟೋಗೆ ಟ್ವಿಸ್ಟ್

    – 1,900 ಅಡಿ ಎತ್ತರದ ಬಂಡೆಯ ತುತ್ತ ತುದಿಯಲ್ಲಿ ಫೋಟೋ ಕ್ಲಿಕ್

    ವಾಷಿಂಗ್ಟನ್: ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಟ್ರೆಂಡ್ ಆಗಿದೆ. ವಧು-ವರ ಇಬ್ಬರೂ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಇದೀಗ ವಧುಯೊಬ್ಬಳು ಸುಮಾರು 1,900 ಅಡಿ ಎತ್ತರದ ಬಂಡೆಯ ಅಂಚಿನಲ್ಲಿ ತೂಗಾಡುವ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಅಮೆರಿಕದ ಅರ್ಕಾನ್ಸಾಸ್ ಮೂಲದ ರಿಯಾನ್ ಮೈಯರ್ಸ್ (30) ಮತ್ತು ಪತ್ನಿ ಸ್ಕೈ (28) ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಲು ಪ್ಲಾನ್ ಮಾಡಿದ್ದರು. ಆದರೆ ಕೊರೊನಾ ಹಿನ್ನೆಲೆ ಲಾಕ್‍ಡೌನ್ ನಿರ್ಬಂಧಗಳಿಂದಾಗಿ ಅದು ಸಾಧ್ಯವಾಗಿಲ್ಲ. ಕೊನೆಗೆ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

    ಅದ್ಧೂರಿಯಾಗಿ ಮದುವೆಯಾಗದಿದ್ದರೂ ಸಾಹಸಮಯವಾಗಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಅದರಂತೆಯೇ ದಂಪತಿ ಅರ್ಕಾನ್ಸಾಸ್‍ನ ಅತ್ಯಂತ ಜನಪ್ರಿಯ ಟ್ರಕ್ಕಿಂಗ್ ಸ್ಥಳವಾದ ವಿಟೇಕರ್ ಪಾಯಿಂಟ್‍ನಲ್ಲಿರುವ ಹಾಕ್ಸ್ ಬಿಲ್ ಕ್ರಾಗ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳಲು ನಿರ್ಧರಿಸಿದರು. ಛಾಯಾಗ್ರಾಹಕ ಮಾಸನ್ ಗಾರ್ಡನರ್ ಎಂಬುವರು ರೋಮಾಂಚನಕಾರಿ ಫೋಟೋಗಳನ್ನು ಕ್ಲಿಕ್ಕಿಸಿದ್ದು, ಅದರಲ್ಲಿ ಬಂಡೆಯ ತುದಿಯಲ್ಲಿ ನವವಿವಾಹಿತರು ಕೈ ಹಿಡಿದು ನಿಂತಿರುವುದನ್ನು ನೋಡಬಹುದಾಗಿದೆ.

    ಪರ್ವತದ ತುತ್ತ ತುದಿಯಲ್ಲಿ ವಧುವಿನ ಕೈಯನ್ನು ವರ ಹಿಡಿದಿದ್ದಾನೆ. ವಧು ತೂಗಾಡುವಂತಿದ್ದು, ವರನ ಕೈಯಿಂದ ಜಾರಿ ವಧು ಪ್ರಪಾತಕ್ಕೆ ಬೀಳುವಂತೆ ಕಾಣಿಸುತ್ತದೆ. ಆದರೆ ವಧುವಿನ ಸುರಕ್ಷತೆಗಾಗಿ ರೋಪ್ ಬಳಸಿರುವುದನ್ನು ಮತ್ತೊಂದು ಫೋಟೋದಲ್ಲಿ ಕಾಣಿಸುತ್ತಿದೆ. ಛಾಯಾಗ್ರಾಹಕರು ಸಾಕಷ್ಟು ಸಾಹಸಮಯ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ.

    ಈ ದಂಪತಿಗೆ ಕೇವಲ 12 ಅತಿಥಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾದ ನಂತರ ಈ ದಂಪತಿ ಸಾಹಸಮಯ ಫೋಟೋಶೂಟ್ ಮಾಡಿಸಿದ್ದಾರೆ.

    ನಾವು ಅದ್ಧೂರಿಯಾಗಿ ಮದುವೆಯಾಗಬೇಕೆಂದು ಬಯಸಿದ್ದೆವು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ವಿಭಿನ್ನವಾಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದೇವೆ. ನಮಗೆ ಪ್ರಕೃತಿಯ ಮಧ್ಯೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ತುಂಬಾ ಇಷ್ಟ. ಆದ್ದರಿಂದ ಫೋಟೋಶೂಟ್ ವೇಳೆ ಎಲ್ಲಾ ಸುರಕ್ಷತಾ ಸಾಧನಗಳನ್ನು ತಜ್ಞರು ಪರಿಶೀಲಿಸಿದ ನಂತರ ಫೋಟೋಶೂಟ್ ಮಾಡಿಸಿದ್ದೇವೆ. ಇದರ ಅನುಭವ ಅದ್ಭುತವಾಗಿತ್ತು ಎಂದು ದಂಪತಿ ಸಂತಸದಿಂದ ಹೇಳಿದ್ದಾರೆ.

  • ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ತಿರುವನಂತಪುರಂ: ಇತ್ತೀಚೆಗೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿದೆ. ಪ್ರತಿಯೊಂದು ಜೋಡಿಯೂ ತಮ್ಮ ಫೋಟೋಶೂಟ್ ಇಂತಹ ಸ್ಥಳದಲ್ಲಿ, ಹೀಗೆಯೇ ಆಗಬೇಕೆಂಬ ಕನಸು ಕಂಡಿರುತ್ತಾರೆ. ಅದರಲ್ಲೂ ಸುಂದರವಾದ ಸ್ಥಳಗಳಲ್ಲಿ, ನದಿಯ ಮಧ್ಯೆ, ವಿಧವಿಧವಾದ ಕಾಸ್ಟ್ಯೂಮ್ಸ್ ಧರಿಸಿಕೊಂಡು ವಿಭಿನ್ನವಾಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸುತ್ತಾರೆ. ಆದರೆ ಇಲ್ಲೊಂದು ಜೋಡಿ ಯಾವುದೇ ಮೇಕಪ್ ಇಲ್ಲದೇ ಪ್ರಕೃತಿಯ ನಡುವೆ, ಕೆಸರಿನ ಮಣ್ಣಿನ ಮಧ್ಯೆ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.

    ಇದೀಗ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೇರಳ ಮೂಲದ ಜೋಸ್ ಮತ್ತು ಅನಿಷಾ ಜೋಡಿ ಈ ರೀತಿಯ ಕೆಸರಿನ ಮಣ್ಣಿನಲ್ಲಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಟ್ವಿಟ್ಟರ್ ಮತ್ತು ಫೇಸ್‍ಬುಕ್ ಪೇಜಿನಲ್ಲಿ ಹರಿದಾಡುತ್ತಿವೆ.

    ಈ ಜೋಡಿ ಪ್ರಕೃತಿಯ ಮಧ್ಯೆ ಒಂದು ಕೆಸರಿನ ಗದ್ದೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸರಳವಾದ ಉಡುಪು ಧರಿಸಿಕೊಂಡು ಕೆಸರಿನಲ್ಲಿ ಉರುಳಾಡಿ ಫೋಟೋಶೂಟ್ ಮಾಡಿಸಿದ್ದಾರೆ. ಅದರಲ್ಲೂ ಮುಖಕ್ಕೂ ಕೆಸರು ಹಾಕಿಕೊಂಡು ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಡಿಫರೆಂಟ್ ಆಗಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ.

    ಈ ಜೋಡಿಯ ವೆಡ್ಡಿಂಗ್ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಮೇಕಪ್, ಆಡಂಬರವಿಲ್ಲದೇ ಸರಳವಾಗಿ ಫೋಟೋಶೂಟ್ ಮಾಡಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ವೆಡ್ಡಿಂಗ್ ಫೋಟೋಶೂಟ್ ವೇಳೆ ಬೋಟ್ ಪಲ್ಟಿ – ವೀಡಿಯೋ ವೈರಲಾಯ್ತು!

    ವೆಡ್ಡಿಂಗ್ ಫೋಟೋಶೂಟ್ ವೇಳೆ ಬೋಟ್ ಪಲ್ಟಿ – ವೀಡಿಯೋ ವೈರಲಾಯ್ತು!

    ಕುಟ್ಟನಾಡು (ಕೇರಳ): ವೆಡ್ಡಿಂಗ್ ಫೋಟೋಶೂಟ್ ಅನ್ನೋದು ಇತ್ತೀಚಿನ ಕೆಲ ವರ್ಷಗಳಿಂದ ಟ್ರೆಂಡ್ ಆಗಿ ಬಿಟ್ಟಿದೆ. ಇದೇ ಫೋಟೋಶೂಟ್ ಮಾಡಿಸಿಕೊಳ್ಳಲು ಹೊರಟ ಕೇರಳದ ದಂಪತಿ ಬೋಟ್‍ನಿಂದ ನೀರಿಗೆ ಬಿದ್ದಿರೋ ವೀಡಿಯೋ ಈಗ ವೈರಲ್ ಆಗಿದೆ. ಆಲೆಪ್ಪಿಯ ಎಡತ್ವಾ ನಿವಾಸಿ ಡೆನ್ನಿ ಹಾಗೂ ತ್ರಿಶೂರ್ ಒಲ್ಲೂರ್ ನಿವಾಸಿ ಪ್ರಿಯಾ ರೋಸ್ ಕೆಲದಿನಗಳ ಹಿಂದಷ್ಟೇ ವಿವಾಹಿತರಾಗಿದ್ದರು.

    ಸರೋವರಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೇರಳದ ಕುಟ್ಟನಾಡಿಗೆ ಪೋಸ್ಟ್ ವೆಡ್ಡಿಂಗ್ ಶೂಟ್‍ಗೆಂದು ದಂಪತಿ ಬಂದಿದ್ದಾರೆ. ಕೇರಳದಲ್ಲಿ ಬೋಟ್‍ಗಳೆಂದರೆ ಭಾರೀ ಫೇಮಸ್. ಅದರಲ್ಲಿ ಸವಾರಿ ಮಾಡೋದೇ ಒಂದು ಖುಷಿ. ಅಂತಹ ಒಂದು ಪುಟ್ಟ ದೋಣಿಯಲ್ಲಿ ಪತಿ ಪತ್ನಿಯರಿಬ್ಬರು ಜಾಲಿ ರೈಡ್ ಹೊರಟಿದ್ದಾರೆ. ಜೊತೆಯಲ್ಲಿದ್ದ ಕ್ಯಾಮರಾಮೆನ್‍ಗಳು ಫೋಟೋಶೂಟ್ ಶುರು ಮಾಡಿದ್ದಾರೆ.

    ಫೋಟೋಗ್ರಾಫರ್ ಎಂದರೆ ಕೇಳಬೇಕಾ… ತನಗೆ ಇಷ್ಟವಾದ ಫೋಟೋ ಸಿಗಲು ‘ಏನೂ ಆಗಲ್ಲ, ಸ್ಮೈಲ್ ಮಾಡಿ, ಬ್ಯೂಟಿಫುಲ್, ಕೂಲ್ ಕೂಲ್, ನೈಸ್.. ನೈಸ್… ಮೇಲೆ ನೋಡಿ… ಚೆನ್ನಾಗಿದೆ’ ಎಂದೆಲ್ಲಾ ಹೇಳಿದ್ದಾರೆ.

    ಬಳಿಕ ಕ್ಯಾಮರಾಮೆನ್ ದಂಪತಿಗೆ ಬ್ಯೂಟಿಫುಲ್ ಪೋಸ್ ಎಂದು ಹೇಳಿದ್ದಾರೆ. ಕೈಯಲ್ಲಿದ್ದ ತಾವರೆ ಹೂವನ್ನು ನೀರಲ್ಲಿ ಮುಳುಗಿಸಿ ನೀರನ್ನು ಚಿಮ್ಮಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಪ್ರಿಯಾ ರೋಸ್ ಹೂವನ್ನು ನೀರಿನಲ್ಲಿ ಮುಳುಗಿಸುತ್ತಾರೆ. ಅಷ್ಟರಲ್ಲಾಗಲೇ ಬೋಟ್ ಸಮತೋಲನ ತಪ್ಪಿದೆ. ಪ್ರಿಯಾ ರೋಸ್ ಭಯದಿಂದ ಓ ದೇವರೇ…. ಎಂದು ಕೂಗುತ್ತಾರೆ. ಇದಾದ ಕ್ಷಣ ಮಾತ್ರದಲ್ಲಿ ಬೋಟ್ ಬಲಕ್ಕೆ ಮಗುಚಿ ಬೀಳುತ್ತದೆ. ದಂಪತಿಯಿಬ್ಬರೂ ನೀರಲ್ಲಿ ಮುಳುಗುತ್ತಾರೆ. ತಕ್ಷಣ ಪಕ್ಕಕ್ಕೆ ಬಂದ ಡೆನ್ನಿ ಪ್ರಿಯಾರನ್ನು ಎತ್ತಿ ದಡ ಹತ್ತಿಸುತ್ತಾರೆ. ಈ ದೃಶ್ಯಗಳೆಲ್ಲಾ ಕ್ಯಾಮರಾಮೆನ್ ಜಿಬಿನ್ ದೇವ್ ಅವರ ಕ್ಯಾಮರಾದಲ್ಲಿ ದೃಶ್ಯರೂಪದಲ್ಲಿ ಸೆರೆಯಾಗಿವೆ. ಅದನ್ನೀಗ ಅವರು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿದ್ದಾರೆ

    ನದಿಯ ದಂಡೆಯಲ್ಲೇ ಬೋಟ್ ಮಗುಚಿದ್ದರಿಂದ ಇಬ್ಬರೂ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಫೋಟೋ ಶೂಟ್‍ಗೆ ಹೋಗಿ ನೀರಿನಲ್ಲಿ ಮುಳುಗಿದ್ದ ದಂಪತಿ ಘಟನೆ ನಡೆದ ಬಳಿಕ ನಗುತ್ತಾ ನಿಂತಿರೋ ಫೋಟೋವೂ ಇದೆ. ಒಟ್ಟಾರೆ ಫೋಟೋಶೂಟ್ ಅವಾಂತರ ಈ ದಂಪತಿಯ ಪಾಲಿಗೆ ಪ್ರಾಣಭಯ ತಂದಿದ್ದಂತೂ ಸುಳ್ಳಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv