Tag: Weavers

  • ಜವಳಿ ಸಚಿವ ಪಾಟೀಲ್ ತವರಿನಲ್ಲೇ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ

    ಜವಳಿ ಸಚಿವ ಪಾಟೀಲ್ ತವರಿನಲ್ಲೇ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ

    ಬೆಳಗಾವಿ: ಜವಳಿ ಸಚಿವ ಶ್ರೀಮಂತ ಪಾಟೀಲ್ ತವರು ಜಿಲ್ಲೆಯಲ್ಲೇ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಬಾಧೆ ತಡೆಯಲಾರದೆ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಜಿಲ್ಲೆಯ ಬೆಳಗಾವಿ ನಗರದ ವಡಗಾಂವ ನಿವಾಸಿ ಸುಜಿತ್ ಉಪರಿ (38), ಹುಕ್ಕೇರಿ ತಾಲೂಕಿನ ಆನಂದಪುರ ನಿವಾಸಿ ಶಂಕರ (60), ವಡಗಾಂವ ನಿವಾಸಿ ಸುವರ್ಣ ಕಾಮ್ಕರ್ (47) ಆತ್ಮಹತ್ಯೆಗೆ ಶರಣಾದ ನೇಕಾರರು. ಕೊರೊನಾ ನಡುವೆ ಕೆಲಸವಿಲ್ಲದೇ ಕುಟುಂಬ ಸಾಗಿಸಲಾಗದೆ, ಸಾಲದ ಕಿರುಕುಳಕ್ಕೆ ಬೇಸತ್ತು ನೇಕಾರರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ.

    ಅದರಲ್ಲೂ ಜವಳಿ ಸಚಿವ ಶ್ರೀಮಂತ ಪಾಟೀಲ್ ತರವರಲ್ಲೇ ಈ ರೀತಿಯಾದರೂ ಸಾಂತ್ವನ ಹೇಳಬೇಕಿದ್ದ ಸಚಿವರೇ ನಾಪತ್ತೆಯಾಗಿದ್ದಾರೆ. ಜವಳಿ ಸಚಿವರಾಗಿ ಆಯ್ಕೆಯಾದ ಬಳಿಕ ಜಿಲ್ಲೆಯಲ್ಲಿ ಶ್ರೀಮಂತ ಪಾಟೀಲ್ ಒಂದೇ ಒಂದು ಸಭೆ ಕೂಡ ಮಾಡಿಲ್ಲ. ಜೊತೆಗೆ ಒಂದೇ ವಾರದಲ್ಲಿ ಮೂರು ಜನ ಆತ್ಮಹತ್ಯೆ ಮಾಡಿಕೊಂಡರೂ ಜಿಲ್ಲೆಗೆ ಶ್ರೀಮಂತ ಪಾಟೀಲ್ ಬಂದಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ವಿರುದ್ಧ ನೇಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಗ್ಗಗಳು ಮುಳುಗಿ ಮೂರಾಬಟ್ಟೆಯಾಯ್ತು ನೇಕಾರರ ಬದುಕು

    ಮಗ್ಗಗಳು ಮುಳುಗಿ ಮೂರಾಬಟ್ಟೆಯಾಯ್ತು ನೇಕಾರರ ಬದುಕು

    – 25 ಸಾವಿರ ಘೋಷಿಸಿ ಕೈತೊಳೆದುಕೊಂಡ ಸರ್ಕಾರ

    ಬಾಗಲಕೋಟೆ: ನೇಕಾರರು, ರೈತರು ದೇಶದ ಎರಡು ಕಣ್ಣುಗಳು ಎನ್ನುತ್ತಾರೆ. ಕರ್ನಾಟಕದಲ್ಲಿ ಉಂಟಾದ ಪ್ರವಾಹಕ್ಕೆ ಸಿಲುಕಿ ಈ ಎರಡು ವರ್ಗ ಸಾಕಷ್ಟು ಹಾನಿ ಅನುಭವಿಸಿದೆ. ಸರ್ಕಾರ ಈಗಾಗಲೇ ಪ್ರವಾಹ ಪೀಡಿತರಿಗೆ ಪರಿಹಾರ ನೀಡಲು ಒಂದು ಹಂತದಲ್ಲಿ ಕ್ರಮ ಕೈಗೊಳ್ಳುತ್ತಿದೆ. ಆದರೆ ನೇಕಾರರ ಮಗ್ಗಗಳ ಹಾನಿಗೆ ಪರಿಹಾರ ಕಲ್ಪಿಸುವಲ್ಲಿ ಜನಪ್ರತಿನಿಧಿಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಸಿಎಂ ಹಾಗೂ ಸಚಿವರ ದ್ವಂದ್ವ ಹೇಳಿಕೆಗಳು ನೇಕಾರರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿವೆ.

    ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ಮಲಪ್ರಭಾ, ಕೃಷ್ಣಾ ನದಿಗಳ ಆರ್ಭಟಕ್ಕೆ ಮಗ್ಗಗಳು ಜಲಾವೃತವಾಗಿ ಸರ್ವನಾಶವಾಗಿವೆ. ರಬಕವಿ ಬನಹಟ್ಟಿ, ತೇರದಾಳ, ಗುಳೇದಗುಡ್ಡ, ಹುನಗುಂದ, ಇಳಕಲ್ ಭಾಗದಲ್ಲಿ ನೇಕಾರರ ಕುಟುಂಬಗಳ ಬದುಕು ಮೂರಾಬಟ್ಟೆಯಾಗಿವೆ. ಸಾಲಸೋಲ ಮಾಡಿ ನಿರ್ಮಿಸಿಕೊಂಡಿದ್ದ ಮಗ್ಗಗಳು ರಾತ್ರೋ ರಾತ್ರಿ ನೀರಿನಲ್ಲಿ ಮುಳುಗಿ ನೇಕಾರರು ಬೀದಿಗೆ ಬಿದ್ದಿದ್ದಾರೆ. ಇದನ್ನೂ ಓದಿ:ಸಿಎಂ ಆದೇಶವನ್ನೇ ತಿದ್ದುಪಡಿ ಮಾಡಿದ ಕಂದಾಯ ಇಲಾಖೆ- ನೇಕಾರರು ಗರಂ

    ಬಾಗಲಕೋಟೆ ಜಿಲ್ಲೆಯ 270 ಮಗ್ಗಗಳು ಹಾನಿಗೊಳಗಾಗಿವೆ. ಆದ್ರೆ 240 ಮಗ್ಗಗಳನ್ನು ಮಾತ್ರ ಫಲಾನುಭವಕ್ಕೆ ಸರ್ಕಾರ ಆಯ್ಕೆ ಮಾಡಿದೆ. ಉಳಿದ 30 ಮಗ್ಗಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಹಾಗೆಯೇ ಸರ್ಕಾರ ಪ್ರತಿ ಕುಟುಂಬಕ್ಕೆ 25 ಸಾವಿರ ಪರಿಹಾರ ಘೋಷಿಸಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಗ್ಗಗಳನ್ನು ಕಳೆದುಕೊಂಡ ನೇಕಾರರು ಅಸಮಾಧಾನ ಹೊರಹಾಕಿದ್ದಾರೆ. ಒಂದು ಕುಟುಂಬದಲ್ಲಿ 2-3 ಮಗ್ಗಗಳಿರುವ ವಿಚಾರವನ್ನೂ ನಿರ್ಲಕ್ಷಿಸಲಾಗಿದೆ. ಪ್ರತಿ ಕುಟುಂಬದ ಬದಲು ಪ್ರತಿ ಮಗ್ಗ ಎಂದು ಪರಿಗಣಿಸಿ ಸರ್ಕಾರ ಪರಿಹಾರಧನ ಆದೇಶ ಮರುಪರಿಶೀಲನೆ ಮಾಡಬೇಕು ಎಂದು ನೇಕಾರರು ಆಗ್ರಹಿಸಿದ್ದಾರೆ.

    ಬಾಗಲಕೋಟೆ ನೇಕಾರರ ಕುಟುಂಬ ಹೆಚ್ಚು ಇರುವ ಜಿಲ್ಲೆಯಾಗಿದೆ. ಇದೇ ನೇಕಾರರಿಂದ ಪ್ರಸಿದ್ಧ ಇಳಕಲ್ ಸೀರೆ ತಯಾರಾಗುತ್ತದೆ. ಆದರೆ ಭೀಕರ ಪ್ರವಾಹ ನೇಕಾರರ ಜೀವನಕ್ಕೆ ಕಲ್ಲು ಹಾಕಿದೆ. ಈ ಬಗ್ಗೆ ಡಿಸಿಎಂ ಹಾಗೂ ಬಾಗಲಕೋಟೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನು ಕೇಳಿದರೆ, ಮರುಪರಿಶೀಲನೆ ಮಾಡ್ತೇವೆ ಎಂದಿದ್ದಾರೆ.

  • ಸಿಎಂ ಆದೇಶವನ್ನೇ ತಿದ್ದುಪಡಿ ಮಾಡಿದ ಕಂದಾಯ ಇಲಾಖೆ- ನೇಕಾರರು ಗರಂ

    ಸಿಎಂ ಆದೇಶವನ್ನೇ ತಿದ್ದುಪಡಿ ಮಾಡಿದ ಕಂದಾಯ ಇಲಾಖೆ- ನೇಕಾರರು ಗರಂ

    ಬೆಳಗಾವಿ: ಸಿಎಂ ಯಡಿಯೂರಪ್ಪ ಅವರ ಆದೇಶಕ್ಕೆ ಕಂದಾಯ ಇಲಾಖೆ ಬೆಲೆ ಕೊಡದೆ, ಪ್ರವಾಹ ಹಿನ್ನೆಲೆಯಲ್ಲಿ ವಿದ್ಯುತ್ ಮಗ್ಗಗಳ ಹಾನಿಗೆ ಹೊರಡಿಸಿದ ಪರಿಹಾರದ ಆದೇಶವನ್ನೇ ತಿದ್ದುಪಡಿ ಮಾಡಿ ನೇಕಾರರಿಗೆ ಮೋಸ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಜಿಲ್ಲೆಯಲ್ಲಿ ಭಾರೀ ಪ್ರವಾಹದಿಂದ 1763 ವಿದ್ಯುತ್ ಮಗ್ಗಗಳಿಗೆ ಹಾನಿಯುಂಟಾಗಿತ್ತು. ಅದರಲ್ಲಿ ರಾಮದುರ್ಗದಲ್ಲಿ ಹಾನಿಗೊಳಗಾದ ಮಗ್ಗಗಳ ಸಂಖ್ಯೆಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಹಾನಿಯಾಗಿದ್ದ ವಿದ್ಯುತ್ ಮಗ್ಗಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ್ದರು. ಪ್ರತಿ ಮಗ್ಗಕ್ಕೆ 25 ಸಾವಿರ ರೂ. ಪರಿಹಾರ ಹಣ ನೀಡುವಂತೆ ಅ. 18ಕ್ಕೆ ಸಿಎಂ ಆದೇಶ ಹೊರಡಿಸಿದ್ದರು. ಆದರೆ ಅ.24ಕ್ಕೆ ಸಿಎಂ ಆದೇಶವನ್ನೇ ಕಂದಾಯ ಇಲಾಖೆ ಮಾರ್ಪಾಡು ಮಾಡಿದೆ ಎಂದು ಆರೋಪಿಸಲಾಗುತ್ತಿದೆ.

    ಸಿಎಂ ಆದೇಶದಲ್ಲಿ ‘ಹಾನಿಗೊಳಗಾದ ಪ್ರತಿ ಮಗ್ಗಕ್ಕೆ ನಿಗದಿಪಡಿಸಿದ ಮೊತ್ತ’ ಎಂದಿತ್ತು. ಆದರೆ ಇದನ್ನು ಪ್ರತಿ ಮಗ್ಗದ ಬದಲಾಗಿ ‘ಹಾನಿಯಾದ ಮಗ್ಗದ ಪ್ರತಿ ಫಲಾನುಭವಿಯಾದ ಮಗ್ಗದ ಮಾಲೀಕರಿಗೆ’ ಎಂದು ಕಂದಾಯ ಇಲಾಖೆ ತಿದ್ದುಪಡಿ ಮಾಡಿದೆ. ಇದರಿಂದ ನೇಕಾರರಿಗೆ ಮೋಸವಾಗಿದೆ ಎಂದು ಸಿಎಂ ಹಾಗೂ ಕಂದಾಯ ಸಚಿವರ ವಿರುದ್ಧ ನೇಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ರೈತರ ಖಾತೆಗೆ 4 ಸಾವಿರ, ನೇಕಾರರ ಸಾಲ ಸಂಪೂರ್ಣ ಮನ್ನಾ – ಬಿಎಸ್‍ವೈ ಕೊಡುಗೆ

    ರೈತರ ಖಾತೆಗೆ 4 ಸಾವಿರ, ನೇಕಾರರ ಸಾಲ ಸಂಪೂರ್ಣ ಮನ್ನಾ – ಬಿಎಸ್‍ವೈ ಕೊಡುಗೆ

    ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಬಿ.ಎಸ್.ಯಡಿಯೂರಪ್ಪಮವರು ರೈತರು ಹಾಗೂ ನೇಕಾರರಿಗೆ ಕೊಡುಗೆ ಕೊಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 14 ತಿಂಗಳ ಮೈತ್ರಿ ಸರ್ಕಾರ ಮಾಡಿದ ಸಾಧನೆ ಏನು? ಮುಂದೆ ನಾವು ಮಾಡಲಿರುವ ಅಭಿವೃದ್ಧಿ ಕೆಲಸಗಳು ಏನು ಎನ್ನುವುದನ್ನು ರಾಜ್ಯದ ಜನತೆಗೆ ತೋರಿಸಬೇಕಿದೆ. ಆದರೆ ರಾಜ್ಯದಲ್ಲಿ ಆಡಳಿತ ಮಟ್ಟ ಕುಸಿದಿದೆ. ಅದನ್ನು ಮೊದಲು ಸರಿ ಮಾಡುತ್ತೇವೆ ಎಂದು ತಿಳಿಸಿದರು.

    ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ರಾಜ್ಯದ ಜನತೆಗೆ ಹಾಗೂ ಪ್ರತಿಪಕ್ಷದ ನಾಯಕರಿಗೆ ಭರವಸೆ ನೀಡುತ್ತೇನೆ. ನನ್ನನ್ನು ಯಾರೇ ದ್ವೇಷ ಮಾಡಿದರೂ ಅವರನ್ನು ಪ್ರೀತಿಯಿಂದ ಕಾಣುತ್ತೇನೆ. ಮುಖ್ಯಮಂತ್ರಿಯಾಗಲು ರಾಜ್ಯದ ಜನತೆಯ ಆಶೀರ್ವಾದ ನೀಡಿದ್ದಾರೆ ಹಾಗೂ ಲಕ್ಷಾಂತರ ಕಾರ್ಯಕರ್ತರು ಶ್ರಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಧ್ಯಕ್ಷ ಅಧ್ಯಕ್ಷ ಅಮಿತ್ ಶಾ ಅವರ ಅನುಗ್ರಹದಿಂದ ಈ ಹಂತಕ್ಕೆ ಬಂದಿದ್ದೇನೆ ಎಂದು ನೆನೆದರು.

    ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು, ನೇಕಾರರು, ಮೀನುಗಾರರ ಸಂಕಷ್ಟವನ್ನು ಪರಿಹರಿಸಲು ವಿಶೇಷ ಗಮನ ಹರಿಸುತ್ತೇನೆ. ಈ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ಎರಡು ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಪ್ರಧಾನ ಮಂತ್ರಿ ಸಮ್ಮಾನ್ ಯೋಜನೆಗೆ ಈಗಾಗಲೇ ಆಯ್ಕೆ ಮಾಡಲಾದ ರೈತರಿಗೆ ರಾಜ್ಯ ಸರ್ಕಾರದಿಂದಲೂ 4 ಸಾವಿರ ರೂ.ವನ್ನು ಎರಡು ಕಂತುಗಳಲ್ಲಿ ನೀಡಲು ನಿರ್ಧರಿಸಿದ್ದೇವೆ. ನೇಕಾರರ 100 ಕೋಟಿ ರೂ. ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಎಂದು ತಿಳಿಸಿದರು.

    ವಿಧಾನಸಭೆ ಹಾಗೂ ಪರಿಷತ್ ಕಲಾಪದಲ್ಲಿ ಜುಲೈ 29ರಂದು ಅಂದ್ರೆ ಸೋಮವಾರ ಬೆಳಗ್ಗೆ 10 ಗಂಟೆಗೆ ಅಧಿವೇಶನ ನಡೆಯಲಿದೆ. ಅಂದು ಬಹುಮತ ಸಾಬೀತು ಹಾಗೂ ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಪಡೆಯಲು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.

    ಇದೇ ವೇಳೆ ಮಾಧ್ಯಮಗಳು ರೈತರ ಸಾಲಮನ್ನಾ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಬಿಎಸ್ ಯಡಿಯೂರಪ್ಪ ಅವರು, ಈ ಕುರಿತು ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದಕ್ಕೂ ಮುನ್ನ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.