Tag: Wayanad

  • ನಿಮ್ಮ ಮತದಾನದ ನಿಲುವಿನಿಂದ ವಯನಾಡಿನ ಭವಿಷ್ಯಕ್ಕೆ `ಕೈ’ ಜೋಡಿಸೋಣ – ಪ್ರಿಯಾಂಕಾ ಗಾಂಧಿ

    ನಿಮ್ಮ ಮತದಾನದ ನಿಲುವಿನಿಂದ ವಯನಾಡಿನ ಭವಿಷ್ಯಕ್ಕೆ `ಕೈ’ ಜೋಡಿಸೋಣ – ಪ್ರಿಯಾಂಕಾ ಗಾಂಧಿ

    ವಯನಾಡು: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ (Priyanka Gandhi) ಇಂದು ನಡೆಯುತ್ತಿರುವ ಮತದಾನದಲ್ಲಿ ಮತದಾರರಿಗೆ ಹಕ್ಕನ್ನು ಚಲಾಯಿಸುವಂತೆ ಕರೆನೀಡಿದ್ದಾರೆ.

    ಇಂದು ದೇಶಾದ್ಯಂತ 11 ರಾಜ್ಯಗಳ 32 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಕೇರಳದ (Kerala) ವಯನಾಡ್ ಲೋಕಸಭಾ (Wayanad) ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಮತ ಕೇಂದ್ರಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ನೀಡಿದರು.ಇದನ್ನೂ ಓದಿ: ವಿಶ್ವದಲ್ಲೇ ಮೊದಲು; ಜಪಾನ್‌ನಿಂದ ಬಾಹ್ಯಾಕಾಶಕ್ಕೆ ಮರದ ಉಪಗ್ರಹ ಉಡಾವಣೆ

    ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಪ್ರಿಯಾಂಕಾ ಗಾಂಧಿ ಪ್ರೀತಿಯ ಸಹೋದರ, ಸಹೋದರಿಯರೇ ಎಲ್ಲರೂ ಮತ ಚಲಾಯಿಸಿ, ಇಂದು ಪ್ರಜಾಪ್ರಭುತ್ವದ ತೀರ್ಪಿನ ದಿನ. ಮತಗಟ್ಟೆಗೆ ಭೇಟಿ ನೀಡಿ, ನಿಮ್ಮ ಅಮೂಲ್ಯವಾದ ಹಕ್ಕನ್ನು ಚಲಾಯಿಸಿ. ನಿಮ್ಮ ಮತದಾನದ ನಿಲುವಿನಿಂದ ವಯನಾಡಿನ ಭವಿಷ್ಯಕ್ಕೆ ಕೈ ಜೋಡಿಸೋಣ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ರಾಹುಲ್ ಗಾಂಧಿ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಳಿಕ ಉತ್ತರ ಪ್ರದೇಶದ ರಾಯ್‌ಬರೇಲಿ ಪ್ರದೇಶ ಉಳಿಸಿಕೊಂಡು ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಕಾರಣದಿಂದ ತೆರವುಗೊಂಡ ವಯನಾಡ್ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದೆ.

    ಈ ಉಪುನಾವಣೆಯಲ್ಲಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ, ಎಲ್‌ಡಿಎಫ್‌ನಿಂದ ಸತ್ಯನ್ ಮೋಕರಿ ಕಣದಲ್ಲಿದ್ದಾರೆ. ಎನ್‌ಡಿಎ ಮೈತ್ರಿಕೂಡದ ಅಭ್ಯರ್ಥಿಯಾಗಿ ನವ್ಯಾ ಹರಿದಾಸ್ ಕಣಕ್ಕಿಳಿದಿದ್ದಾರೆ.ಇದನ್ನೂ ಓದಿ: ಜಾರ್ಖಂಡ್ ವಿಧಾನಸಭೆ ಚುನಾವಣೆ – 43 ಕ್ಷೇತ್ರಗಳಿಗೆ ಇಂದು ಮತದಾನ

  • ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಸ್? – ಹೈಕಮಾಂಡ್‌ ಲಾಬಿಗೆ ಮಣಿದ್ರಾ ಡಿಕೆಶಿ?

    ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಸ್? – ಹೈಕಮಾಂಡ್‌ ಲಾಬಿಗೆ ಮಣಿದ್ರಾ ಡಿಕೆಶಿ?

    – ವಯನಾಡು ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಭರವಸೆ

    ಬೆಂಗಳೂರು/ ಚಾಮರಾಜನಗರ: ಕೇರಳ ಸರ್ಕಾರ (Kerala Government), ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಲಾಬಿಗೆ ಮಣಿದು ಬಂಡೀಪುರ (Bandipur) ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ರಾತ್ರಿ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಕಳೆದ ವಯನಾಡು ಲೋಕಸಭಾ ಚುನಾವಣೆಯಲ್ಲಿ (Wayanad By Election ) ರಾಹುಲ್‌ ಗಾಂಧಿ ರಾತ್ರಿ ಸಂಚಾರಕ್ಕೆ ಅನುಮತಿ ನೀಡುವ ಬಗ್ಗೆ ಭರವಸೆ ನೀಡಿದ್ದರು. ಈಗ ಪ್ರಿಯಾಂಕಾ ಗಾಂಧಿ ಈ ಭರವಸೆ ನೀಡಿದ್ದಾರೆ. ಈ ಬೆನ್ನಲ್ಲೇ ಡಿಕೆ ಶಿವಕುಮಾರ್‌ ಅನುಮತಿ ನೀಡುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ಈ ವಿಚಾರದ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಪ್ರತಿನಿಧಿಗಳು ನನ್ನ ಬಳಿ ಬಂದು ಮಾತಾಡಿದ್ದಾರೆ. ಎರಡು‌ ಸರ್ಕಾರಗಳನ್ನ ಕರೆಸಿ ಕುಳಿತುಕೊಂಡು ಮಾತುಕತೆ ಮಾಡುತ್ತೇವೆ. ರಾಜ್ಯದ ಹಿತವನ್ನು ಕಾಪಾಡಿಕೊಂಡು, ಜನರ ಹಿತವನ್ನು ಕಾಪಾಡಿಕೊಂಡು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಯದುವೀರ್‌ ವಿರೋಧ:
    ವಯನಾಡ್ ಉಪಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ನಮ್ಮ ರಾಜ್ಯದ ನೈಸರ್ಗಿಕ ಸಂಪತ್ತಾದ ಬಂಡಿಪುರ ಅಭಯಾರಣ್ಯದ ಮಧ್ಯೆ ಹಾದು ಹೋಗುವ ಎನ್‌ಎಚ್ 766 ರ ರಾತ್ರಿ ಪ್ರಯಾಣ ನಿಷೇಧವನ್ನು ತೆಗೆದುಹಾಕುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಇತ್ತೀಚೆಗೆ ಕೇರಳದಲ್ಲಿ ನೀಡಿರುವ ಹೇಳಿಕೆಯು ಬೇಜವಾಬ್ದಾರಿ ಮತ್ತು ಖಂಡನೀಯವಾಗಿದೆ. ಇದನ್ನೂ ಓದಿ: ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ಕೊಡಿ: ಸರ್ಕಾರಕ್ಕೆ ಮುಸ್ಲಿಂ ಸಮುದಾಯ ಬೇಡಿಕೆ

    ಬಂಡೀಪುರದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ವೈವಿಧ್ಯತೆಯು ಅದರೊಳಗೆ ಅಭಿವೃದ್ಧಿ ಹೊಂದುತ್ತಿರುವ ವಿವಿಧ ಪ್ರಭೇದಗಳ ವನ್ಯಜೀವಿಗಳಿಗೆ ಸೇರಿದ ಸಂಪತ್ತು. ಈ ಅಭಯಾರಣ್ಯದ ಮೂಲಕ ರಾತ್ರಿ ಪ್ರಯಾಣಕ್ಕೆ ಅವಕಾಶ ನೀಡುವುದರಿಂದ ವನ್ಯಜೀವಿಗಳಿಗೆ ಅಪಾಯವಿದೆ ಮತ್ತು ಮಾನವ-ವನ್ಯಜೀವಿ ಸಂಘರ್ಷಕ್ಕೆ ಇದು ಎಡೆ ಮಾಡಿಕೊಡುತ್ತದೆ. ಬೇರೆ ರಾಜ್ಯದಲ್ಲಿನ ಚುನಾವಣಾ ಲಾಭಕ್ಕಾಗಿ ಕರ್ನಾಟಕದ ವನ್ಯಜೀವಿಗಳಿಗೆ ಧಕ್ಕೆ ತರುವುದು ಸಮಂಜಸವಲ್ಲ. ನಮ್ಮ ಸರ್ಕಾರವು ಈ ಪರಿಸರ ವಲಯಗಳ ರಕ್ಷಣೆಯ ನಿಟ್ಟಿನಲ್ಲಿ ಯಾವುದೆ ರಾಜಿ ಮಾಡಿಕೊಳ್ಳದೆ ರಕ್ಷಿಸಬೇಕಾಗಿದೆ ಎಂದು ಮೈಸೂರು ಸಂಸದ ಯದುವೀರ್‌ ಒಡೆಯರ್‌ ಪೋಸ್ಟ್‌ ಮಾಡಿದ್ದಾರೆ.

    ಏನಿದು ಪ್ರಕರಣ?
    ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ 2009ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 69 ರಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಚಾಮಾರಾಜನಗರ ಜಿಲ್ಲಾ ಆಡಳಿತ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿಷೇಧವನ್ನು ರದ್ದುಪಡಿಸದಂತೆ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.

    ಕೇರಳ ಸರ್ಕಾರ ಈ ಹಿಂದೆ ಸಾಕಷ್ಟು ಬಾರಿ ನಿಷೇಧ ತೆರವುಗೊಳಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿತ್ತು. ಕೇರಳದ ಲಾಬಿಗೆ ರಾಜ್ಯ ಸರ್ಕಾರ ಮಣಿದಿರಲಿಲ್ಲ. ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಜೆಡಿಎಸ್‌ ಸರ್ಕಾರ ಇದ್ದಾಗ ಬಂಡೀಪುರದಲ್ಲಿ ಫ್ಲೈ ಓವರ್‌ ನಿರ್ಮಾಣಕ್ಕೆ ಚಿಂತನೆ ನಡೆದಿತ್ತು. ಇದಕ್ಕೆ ಪರಿಸರವಾದಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

    ರಾತ್ರಿ ಸಂಚಾರ ನಿಷೇಧಕ್ಕೂ ಮುನ್ನ ಅಂದ್ರೆ 2004-09ರ ಅವಧಿಯಲ್ಲಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ 86 ಪ್ರಾಣಿಗಳು ಅಪಘಾತಕ್ಕೆ ಬಲಿಯಾಗಿತ್ತು. ರಾತ್ರಿ ಸಂಚಾರ ನಿಷೇಧ ಬಳಿಕ 2010-18ರ ಅವಧಿಯಲ್ಲಿ 17 ಪ್ರಾಣಿ ಮೃತಪಟ್ಟಿದ್ದವು. ಒಟ್ಟಿನಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ ಅಪಘಾತದಲ್ಲಿ ಸತ್ತ ಪ್ರಾಣಿಗಳ ಸಂಖ್ಯೆ ಇಳಿಕೆಯಾಗಿತ್ತು. ಕೇರಳ ಸರ್ಕಾರದ ಬೇಡಿಕೆಯ ಹಿಂದೆ ಟಿಂಬರ್ ಮಾಫಿಯಾದ ಕೈವಾಡವಿದೆ ಎಂಬ ಆರೋಪವೂ ಕೇಳಿ ಬಂದಿದೆ.

     

  • ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರೋ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ಗಳು ಜಪ್ತಿ

    ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರೋ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ಗಳು ಜಪ್ತಿ

    ವಯನಾಡ್: ವಯನಾಡ್‌ನಲ್ಲಿ (Wayanad) ಪ್ರಿಯಾಂಕಾ ಗಾಂಧಿ (Priyanka Gandhi), ರಾಹುಲ್ ಗಾಂಧಿ (Rahul Gandhi), ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾವಚಿತ್ರ ಇರುವ 30 ರೇಶನ್ ಕಿಟ್‌ಗಳನ್ನು ಜಪ್ತಿ ಮಾಡಲಾಗಿದೆ.

    ವಯನಾಡ್ ಲೋಕಸಭೆ ಉಪಚುನಾವಣೆಗೆ 6 ದಿನ ಬಾಕಿ ಇದೆ. ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದಾರೆ. ಅವರ ಚಿತ್ರವಿರುವ ಆಹಾರ ಕಿಟ್‌ಗಳು ಗುರುವಾರ ಪತ್ತೆಯಾಗಿದ್ದು, ಚುನಾವಣಾ ಆಯೋಗವು ವಶಪಡಿಸಿಕೊಂಡಿದೆ.

    ವಯನಾಡಿನ ತೋಲ್ಪೆಟ್ಟಿಯಲ್ಲಿ ಕಾಂಗ್ರೆಸ್‌ಗೆ (Congress) ಸೇರಿದ ಆಹಾರ ಕಿಟ್‌ಗಳು ಸಿಕ್ಕಿದ್ದು, ಇಲ್ಲಿನ ಮನೆಯೊಂದರಲ್ಲಿ ಮತದಾರರಿಗೆ ಹಂಚಲು ಕಿಟ್‌ಗಳ ಸಿದ್ಧ ಮಾಡಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಚುನಾವಣಾ ನಿಯಂತ್ರಣ ತಂಡ ದಾಳಿ ಮಾಡಿದೆ. ತಪಾಸಣೆಯಲ್ಲಿ ಕಾಂಗ್ರೆಸ್ ಮುಖಂಡ ಶಶಿಕುಮಾರ್ ತೋಲ್ಪೆಟ್ಟಿ ಮನೆಯ ಪಕ್ಕದ ಕೊಠಡಿಯಲ್ಲಿ ಈ ಕಿಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 30 ಆಹಾರ ಕಿಟ್‌ಗಳು ಸಿಕ್ಕಿದ್ದು, ಟೀ ಪುಡಿ, ಸಕ್ಕರೆ, ಅಕ್ಕಿ ಮತ್ತು ಇತರ ದಿನಸಿ ಪದಾರ್ಥಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ

    ಕಿಟ್‌ಗಳ ಮೇಲೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕರ್ನಾಟಕ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವರ ಚಿತ್ರಗಳಿವೆ. ಇವನ್ನು ಇತ್ತೀಚೆಗೆ ಭೂಕುಸಿತ ಉಂಟಾದ ಪ್ರದೇಶಗಳಾದ ಮೆಪ್ಪಾಡಿ, ಮುಂಡಕೈ ಮತ್ತು ಚೂರ್ಲಮಾಲ ಸಂತ್ರಸ್ತರಿಗೆ ವಿತರಿಸುವುದಕ್ಕೆ ಯೋಜಿಸಲಾಗಿತ್ತು. ಕಿಟ್ ಮೇಲೆ ಭೂಕುಸಿತ ಸಂತ್ರಸ್ತರಿಗೆ ಎಂದು ಕೂಡ ಬರೆದಿದೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್‌, ಸೋತ ಹ್ಯಾರಿಸ್‌ಗೆ ರಾಹುಲ್‌ ಗಾಂಧಿ ಪತ್ರ

    ಪೊಲೀಸರು ಕಿಟ್‌ಗಳನ್ನು ವಶಪಡಿಸಿಕೊಂಡ ಮೇಲೆ ರಾಜಕೀಯ ಪ್ರತಿಪಕ್ಷಗಳ ಟೀಕೆ ಹೆಚ್ಚಾಗಿದೆ. ಮತಕ್ಕಾಗಿ ಕಾಂಗ್ರೆಸ್ ಕಿಟ್‌ಗಳನ್ನು ವಿತರಿಸುತ್ತಿದೆ ಎಂದು ಆರೋಪಿಸಿವೆ. ಇದು ಭೂಕುಸಿತದ ಸಂತ್ರಸ್ತರಿಗೆ ವಿತರಿಸಲು ಈ ಹಿಂದೆ ತಂದಿದ್ದ ಕಿಟ್‌ಗಳು ಎಂದು ಕಾಂಗ್ರೆಸ್ ಹೇಳಿದೆ. ಇದನ್ನೂ ಓದಿ: ವಕ್ಫ್ ನೋಟಿಸ್‌ನಿಂದ ರೈತ ಆತ್ಮಹತ್ಯೆ ಆರೋಪ – ಪೋಸ್ಟ್‌ ಹಾಕಿದ್ದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್

  • 12 ಕೋಟಿ ರೂ. ಆಸ್ತಿ, ಎರಡು ಎಫ್‌ಐಆರ್‌ – ಪ್ರಿಯಾಂಕಾ ಗಾಂಧಿ ಬಳಿ ಚಿನ್ನ, ಭೂಮಿ ಎಷ್ಟಿದೆ?

    12 ಕೋಟಿ ರೂ. ಆಸ್ತಿ, ಎರಡು ಎಫ್‌ಐಆರ್‌ – ಪ್ರಿಯಾಂಕಾ ಗಾಂಧಿ ಬಳಿ ಚಿನ್ನ, ಭೂಮಿ ಎಷ್ಟಿದೆ?

    ವಯನಾಡು: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi ) ಸುಮಾರು 12 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ, ಅವರ ಪತಿ ರಾಬರ್ಟ್ ವಾದ್ರಾ (Robert Vadra) ಅವರು ಸುಮಾರು 66 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

    ವಯನಾಡು ಲೋಕಸಭಾ ಉಪಚುನಾವಣಾ (Wayanad Bypoll) ಕಣದಲ್ಲಿರುವ ಪ್ರಿಯಾಂಕಾ ಗಾಂಧಿ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದು ಅಫಿಡವಿತ್‌ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ವಾದ್ರಾ ದಂಪತಿಯ ಆಸ್ತಿ ಮೌಲ್ಯ ಬಹಿರಂಗವಾಗಿದೆ.

    ಬಾಡಿಗೆ, ಬ್ಯಾಂಕ್‌ ಬಡ್ಡಿ ದರ, ಇತರ ಹೂಡಿಕೆಯಿಂದ 2023-24ರ ಹಣಕಾಸು ವರ್ಷದಲ್ಲಿ 46.39 ಲಕ್ಷ ರೂ. ಆದಾಯ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಪ್ರಿಯಾಂಕಾ 4.24 ಕೋಟಿ ರೂ. ಚರಾಸ್ತಿ, 7.74 ಕೋಟಿ ರೂ. ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

    ಪ್ರಿಯಾಂಕಾ ಅವರ ಅತ್ಯಮೂಲ್ಯ ಆಸ್ತಿ ಶಿಮ್ಲಾ ಬಳಿಯಿರುವ ಅವರ 12,000 ಚದರ ಅಡಿ ಫಾರ್ಮ್‌ಹೌಸ್ ಆಗಿದೆ. ಅಫಿಡವಿಟ್ ಪ್ರಕಾರ ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ 5.64 ಕೋಟಿ ರೂ. ಆಗಿದೆ. 8 ಲಕ್ಷ ರೂ. ಮೌಲ್ಯದ ಹೋಂಡಾ ಸಿಆರ್‌ವಿ ಕಾರನ್ನು ಹೊಂದಿದ್ದಾರೆ. ಇದನ್ನು ಪತಿ ವಾದ್ರಾ ಉಡುಗೊರೆ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.  ಇದನ್ನೂ ಓದಿ: 5 ವರ್ಷಗಳ ಬಳಿಕ ಮುಖಾಮುಖಿ; ರಷ್ಯಾದಲ್ಲಿ ಮೋದಿ-ಜಿನ್‌ಪಿಂಗ್ ನಡ್ವೆ ದ್ವಿಪಕ್ಷೀಯ ಮಾತುಕತೆ

    ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದು ಪ್ರಸ್ತುತ ಅದರ ಮೌಲ್ಯ 2.24 ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ. 1.16 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಮೆಹ್ರೌಲಿಯಲ್ಲಿ 2.10 ಕೋಟಿ ರೂ. ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. 2012-13 ರಲ್ಲಿ 15.75 ಲಕ್ಷ ರೂ. ತೆರಿಗೆ ಬಾಕಿ ಇರಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

    ಎರಡು ಎಫ್‌ಐಆರ್‌, 1 ನೋಟಿಸ್‌
    ತನ್ನ ಮೇಲೆ ಎರಡು ಎಫ್‌ಐಆರ್‌ ದಾಖಲಾಗಿದೆ ಮತ್ತು ಅರಣ್ಯ ಇಲಾಖೆಯಿಂದ ನೋಟಿಸ್‌ ಬಂದಿದೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. ಕೋವಿಡ್‌ ಸಮಯದಲ್ಲಿ ಅತ್ಯಾಚಾರ ಸಂತ್ರಸ್ತೆಯ ಭೇಟಿಗೆ ತೆರಳಿದಾಗ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ 2020ರಲ್ಲಿ ಇವರ ಮೇಲೆ ಮೊದಲ ಎಫ್‌ಐಆರ್‌ ದಾಖಲಾಗಿದೆ. ತಪ್ಪು ಸಂದೇಶ ಇರುವ ಟ್ವೀಟ್‌ ಮಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರಯ ನೀಡಿದ ದೂರಿನ ಆಧಾರದಲ್ಲಿ 2023 ರಲ್ಲಿ ಮಧ್ಯಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ಪ್ರಿಯಾಂಕಾಗಿಂತ ಪತಿ ವಾದ್ರಾ ಹೆಚ್ಚು ಶ್ರೀಮಂತರಾಗಿದ್ದಾರೆ. ವಾದ್ರಾ ಬಳಿ 53 ಲಕ್ಷ ರೂ. ಮೌಲ್ಯದ ಲ್ಯಾಂಡ್ ಕ್ರೂಸರ್, 1.5 ಲಕ್ಷ ರೂ.ಮೌಲ್ಯದ ಮಿನಿ ಕೂಪರ್ ಮತ್ತು 4.22 ಲಕ್ಷ ರೂಪಾಯಿ ಮೌಲ್ಯದ ಸುಜುಕಿ ಮೋಟಾರ್ ಸೈಕಲ್ ಇದೆ. ವಾದ್ರಾ ಅವರು ವಿವಿಧ ಕಂಪನಿಗಳಲ್ಲಿ ಪಾಲುದಾರರಾಗಿ ಸುಮಾರು 35.5 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

    ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪ್ರಕಾರ 27.64 ಕೋಟಿ ಮೌಲ್ಯದ ಗುರುಗ್ರಾಮ್‌ನಲ್ಲಿ ವಾದ್ರಾ ವಿವಿಧ ಆಸ್ತಿಗಳನ್ನು ಹೊಂದಿದ್ದಾರೆ. ಈ ಆಸ್ತಿಗಳನ್ನು 2.78 ಕೋಟಿ ರೂ, ನೀಡಿ ಖರೀದಿಸಿದ್ದು ಅಭಿವೃದ್ಧಿಯ ಮೂಲಕ 3.62 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ.

    ಪ್ರಿಯಾಂಕಾ ಗಾಂಧಿ ಅವರು ಸಲ್ಲಿಸಿದ ಚುನಾವಣಾ ಅಫಿಡವಿಟ್ ಪ್ರಕಾರ ವಾದ್ರಾ ಅವರು ಸುಮಾರು 10 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.

  • ವಿಪತ್ತು ತಡೆಯಲು ವಯನಾಡಿನಲ್ಲಿ X ಬ್ಯಾಂಡ್‌ ರೇಡಾರ್‌ ಅಳವಡಿಕೆ – ರೇಡಾರ್‌ ವಿಶೇಷತೆಯೇನು?

    ವಿಪತ್ತು ತಡೆಯಲು ವಯನಾಡಿನಲ್ಲಿ X ಬ್ಯಾಂಡ್‌ ರೇಡಾರ್‌ ಅಳವಡಿಕೆ – ರೇಡಾರ್‌ ವಿಶೇಷತೆಯೇನು?

    2024ರ ಜುಲೈನಲ್ಲಿ ನಡೆದ ಪ್ರವಾಹ ಮತ್ತು ಭೂಕುಸಿತದ ನಂತರ ವಯನಾಡು (Wayanad) ಅಕ್ಷರಶಃ ತತ್ತರಿಸಿ ಹೋಗಿದೆ. ಏಕಾಏಕಿ ಪ್ರವಾಹ ಮತ್ತು ಭೂಕುಸಿತದಿಂದಾಗಿ ಸುಮಾರು 200ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ವಯನಾಡಿನಲ್ಲಿ ಮುಂದಾಗುವ ಅನಾಹುತ ಹಾಗೂ ವಿಪತ್ತುಗಳನ್ನು ತಡೆಯುವ ಸಲುವಾಗಿ ಕೇಂದ್ರ ಭೂ ವಿಜ್ಞಾನ ಸಚಿವಾಲಯ (Union Ministry of Earth Sciences) ಜಿಲ್ಲೆಯಲ್ಲಿ ಎಕ್ಸ್-ಬ್ಯಾಂಡ್ ರೇಡಾರ್ (X-Band Radar) ಅನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಹಾಗಿದ್ರೆ ಏನಿದು ಎಕ್ಸ್‌ ಬ್ಯಾಂಡ್‌ ರೇಡಾರ್?‌ ಇದರ ವಿಶೇಷತೆ ಏನು? ರೇಡಾರ್‌ ಅಳವಡಿಕೆಯಿಂದಾಗುವ ಉಪಯೋಗವೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    X ಬ್ಯಾಂಡ್‌ ರೇಡಾರ್‌ ಎಂದರೇನು?
    ಎಕ್ಸ್ -ಬ್ಯಾಂಡ್ ರೇಡಾರ್ ಒಂದು ರೀತಿಯ ರೇಡಾರ್ ಆಗಿದ್ದು, ಅದು ವಿದ್ಯುತ್ಕಾಂತೀಯ ವರ್ಣಪಟಲದ 8-12 GHz ಆವರ್ತನ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 2ರಿಂದ 4 ಸೆಂ.ಮೀ ತರಂಗಾಂತರಗಳನ್ನು ಹೊಂದಿರುತ್ತದೆ .

    ಎಕ್ಸ್-ಬ್ಯಾಂಡ್ ರೇಡಾರ್ ಹೆಚ್ಚು ನಿಖರತೆಯ ಜೊತೆಗೆ ಹೆಚ್ಚಿನ ರೆಸಲ್ಯೂಶನ್ ಅನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. 2-4 ಸೆಂ.ಮೀ ತರಂಗಾಂತರಗಳೊಂದಿಗೆ 8-12 GHz ಆವರ್ತನ ಬ್ಯಾಂಡ್‌ನಲ್ಲಿ ಕೆಲಸ ಮಾಡುವ ರೇಡಾರ್ ಮಳೆ ಹನಿಗಳು ಮತ್ತು ಮಂಜಿನಂತಹ ಸಣ್ಣ ವಸ್ತುಗಳನ್ನು ಗ್ರಹಿಸಲು ಉತ್ತಮವಾಗಿದೆ. ಹವಾಮಾನ/ಭೌಗೋಳಿಕ ವ್ಯವಸ್ಥೆ-ಟ್ರ್ಯಾಕಿಂಗ್ ಮತ್ತು ಸಂಭವನೀಯ ಭೂಕುಸಿತಗಳು ಅಥವಾ ಇತರ ವಿಪತ್ತುಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಮೂಲಕ ನಿಖರವಾದ ಚಿತ್ರಗಳನ್ನು ಒದಗಿಸುತ್ತದೆ. ಸರಿಯಾದ ಸಮಯದಲ್ಲಿ ಡೇಟಾವನ್ನು ತಲುಪಿಸಲು ಅನುವು ಮಾಡಿಕೊಡುವ ಮೂಲಕ ವಿಪತ್ತುಗಳನ್ನು ತಡೆಯುವಲ್ಲಿ ರೇಡಾರ್ ಸಹಕಾರಿಯಾಗಿದೆ.

    ಎಕ್ಸ್‌ ಬ್ಯಾಂಡ್‌ ರೇಡಾರ್‌ನ ಉಪಯೋಗಗಳು:
    ಹವಾಮಾನ ವೀಕ್ಷಣೆ ಮತ್ತು ವಿಶ್ಲೇಷಣೆ, ಹಾಗೆಯೇ ವಿಪತ್ತು ನಿರ್ವಹಣೆಗೆ ಎಕ್ಸ್‌ ಬ್ಯಾಂಡ್‌ ರೇಡಾರ್‌ ಅನ್ನು ಬಳಸಲಾಗುತ್ತದೆ. ಆದರೆ ಇದು ಇತರ ಕ್ಷೇತ್ರಗಳಿಗೂ ಉಪಯುಕ್ತವಾಗಿದೆ. ಅವುಗಳನ್ನು ಪರ್ವತ ಭೂಪ್ರದೇಶ, ವಾಯುಯಾನ ಮತ್ತು ಮಿಲಿಟರಿ ಕಾರ್ಯಾಚರಣೆಗಳಲ್ಲಿ ನಿರ್ದಿಷ್ಟವಾಗಿ ಎಕ್ಸ್-ಬ್ಯಾಂಡ್ ರೇಡಾರ್‌ಗಳನ್ನು ಬಳಸಲಾಗುತ್ತದೆ. ವಾಯುಯಾನದಲ್ಲಿ ಹವಾಮಾನ ಲಕ್ಷಣಗಳು, ಪ್ರಕ್ಷುಬ್ಧತೆಯನ್ನು ಗುರುತಿಸುವಲ್ಲಿ ರೇಡಾರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಹೀಗಾಗಿ ಹಾರಾಟವನ್ನು ಸುರಕ್ಷಿತಗೊಳಿಸುತ್ತದೆ. ಮಿಲಿಟರಿ ಕಾರ್ಯಾಚರಣೆಗಳಲ್ಲಿ, ಯುದ್ಧತಂತ್ರದ ಉದ್ದೇಶಕ್ಕಾಗಿ ವಿವರವಾದ ಛಾಯಾಚಿತ್ರ ಮತ್ತು ಇತರ ಮಾಹಿತಿಯನ್ನು ಪಡೆಯಲು, ಕಣ್ಗಾವಲು ಮತ್ತು ವಿಚಕ್ಷಣದಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ.

    ಎಕ್ಸ್-ಬ್ಯಾಂಡ್ ರೇಡಾರ್ ನೈಸರ್ಗಿಕ ವಿಕೋಪಗಳ ಬಗ್ಗೆ ಮೊದಲೇ ಎಚ್ಚರಿಕೆಯನ್ನು ನೀಡುತ್ತದೆ. ಹವಾಮಾನ ಪರಿಸ್ಥಿತಿಗಳು ಮತ್ತು ಮಣ್ಣಿನ ನಿಯಮಿತ ಚಲನೆಯನ್ನು ರೇಡಾರ್ ಸ್ಕ್ಯಾನ್ ಮಾಡುವ ಮೂಲಕ, ಭೂಕುಸಿತಗಳು ಮತ್ತು ಪ್ರವಾಹಗಳನ್ನು ಮೊದಲೇ ಊಹಿಸಲು ಸಾಧ್ಯವಿದೆ. ವಿಪತ್ತುಗಳು ಅಥವಾ ಅಪಾಯಗಳಿಂದ ಜೀವನ ಮತ್ತು ಆಸ್ತಿಯನ್ನು ರಕ್ಷಿಸಲು ಯಾವ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಪ್ರದೇಶದ ನಿವಾಸಿಗಳಿಗೆ ಸಮಯೋಚಿತ ಎಚ್ಚರಿಕೆಯನ್ನು ಒದಗಿಸುವಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

    ವಿಪತ್ತು ನಿರ್ವಹಣೆಯ ಜೊತೆಗೆ ಎಕ್ಸ್-ಬ್ಯಾಂಡ್ ರೇಡಾರ್ ಪರಿಸರ ಮತ್ತು ಕೃಷಿ ಸಂಶೋಧನೆಯಲ್ಲಿ ವಿಶಿಷ್ಟ ಪಾತ್ರವನ್ನು ಚಿತ್ರಿಸುತ್ತದೆ. ಹವಾಮಾನ ಪರಿಸ್ಥಿತಿಗಳು, ಮಳೆಯ ವಿತರಣೆ ಮತ್ತು ಮಣ್ಣಿನ ನೀರಿನ ಪರಿಸ್ಥಿತಿಗಳನ್ನು ಮ್ಯಾಪಿಂಗ್ ಮತ್ತು ವಿಶ್ಲೇಷಿಸುವಲ್ಲಿ ಹವಾಮಾನ ಮಾಹಿತಿಯು ಮುಖ್ಯವಾಗಿದೆ. ಈ ಮಾಹಿತಿಯಿಂದ ಸುಸ್ಥಿರ ಕೃಷಿ ವಿಧಾನಗಳು, ನೀರಾವರಿ ಕ್ಯಾಲೆಂಡರ್‌ಗಳು ಮತ್ತು ಸುಧಾರಿತ ಬೆಳೆ ಇಳುವರಿಯನ್ನು ಪಡೆಯಬಹುದು.

    ಭಾರತವು ಹವಾಮಾನ ಪತ್ತೆಗಾಗಿ X-ಬ್ಯಾಂಡ್ ಮತ್ತು S-ಬ್ಯಾಂಡ್ ರೇಡಾರ್‌ಗಳನ್ನು ಬಳಸುತ್ತದೆ. S-ಬ್ಯಾಂಡ್ ರೇಡಾರ್ ಅನ್ನು ದೀರ್ಘ-ಶ್ರೇಣಿಯ ಸೈಕ್ಲೋನ್ ಪತ್ತೆಗೆ ಹೆಚ್ಚಾಗಿ ಬಳಸಲಾಗುತ್ತದೆ.

    ಡಾಪ್ಲರ್ ರೇಡಾರ್:‌
    ಡಾಪ್ಲರ್ ರೇಡಾರ್ ಎಂಬುದು ಹವಾಮಾನ ಶಾಸ್ತ್ರದಲ್ಲಿ ಮುಖ್ಯವಾಗಿ ಮೋಡಗಳು ಮತ್ತು ಬಿರುಗಾಳಿಗಳಂತಹ ಹವಾಮಾನ ರಚನೆಗಳ ವೇಗ ಮತ್ತು ಚಲನೆಯನ್ನು ಅಳೆಯಲು ಬಳಸಲಾಗುವ ಒಂದು ರೀತಿಯ ರೇಡಾರ್ ಆಗಿದೆ. ಮಳೆ ಅಥವಾ ಮೋಡ ಎಷ್ಟು ವೇಗವಾಗಿ ಚಲಿಸುತ್ತಿದೆ ಮತ್ತು ಯಾವ ದಿಕ್ಕಿನಲ್ಲಿದೆ ಎಂಬುದನ್ನು ಡಾಪ್ಲರ್‌ ರೇಡಾರ್‌ ಅಳೆಯುತ್ತದೆ.

    ಹವಾಮಾನ ಮಾನಿಟರಿಂಗ್:
    ಡಾಪ್ಲರ್ ರೇಡಾರ್ ಮಳೆಯ ತೀವ್ರತೆಯನ್ನು ಪತ್ತೆಹಚ್ಚಲು, ಗಾಳಿಯ ಮಾದರಿಗಳನ್ನು ಪತ್ತೆಹಚ್ಚಲು ಮತ್ತು ಬಿರುಗಾಳಿಗಳು ಅಥವಾ ಸುಂಟರಗಾಳಿಗಳ ರಚನೆಯನ್ನು ಊಹಿಸಲು ಸಹಾಯ ಮಾಡುತ್ತದೆ.

    ಡಾಪ್ಲರ್ ರೇಡಾರ್ ಗಾಳಿಯ ಚಲನೆ, ಗಾಳಿ, ಗಾಳಿಯ ವೇಗ, ಮಳೆ, ತಾಪಮಾನ, ಗುಡುಗು, ಆಲಿಕಲ್ಲು, ಮಿಂಚು, ಚಂಡಮಾರುತಗಳು ಮತ್ತು ಮೋಡದ ಚಲನೆಗಳು ಮತ್ತು ಮೋಡ ಮತ್ತು ಪ್ರತಿಫಲಿತ ಸೂಚ್ಯಂಕದ ಪರಿಮಾಣದ ವಿಶ್ಲೇಷಣೆಯನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಡಾಪ್ಲರ್‌ ರೇಡಾರ್‌ ಸಾಧನಕ್ಕೆ ಸುಮಾರು 10-20 ಕೋಟಿ ರೂ. ಇದೆ.

    ಭಾರತದ ರೇಡಾರ್ ನೆಟ್‌ವರ್ಕ್:
    ಭಾರತೀಯ ಹವಾಮಾನ ಇಲಾಖೆ (IMD) 1950ರ ದಶಕದಲ್ಲಿ ಹವಾಮಾನ ಅನ್ವಯಗಳಲ್ಲಿ ರೇಡಾರ್‌ಗಳನ್ನು ಬಳಸಲು ಪ್ರಾರಂಭಿಸಿತು.

    ಮೊದಲ ಸ್ವದೇಶಿ ವಿನ್ಯಾಸದ ಎಕ್ಸ್-ಬ್ಯಾಂಡ್ ರೇಡಾರ್‌ ಅನ್ನು 1970 ರಲ್ಲಿ ಚಂಡಮಾರುತ ಪತ್ತೆಗಾಗಿ ನವದೆಹಲಿಯಲ್ಲಿ ಸ್ಥಾಪಿಸಲಾಯಿತು .1996 ರಲ್ಲಿ IMD 10 ಹಳೆಯ X-ಬ್ಯಾಂಡ್ ರೇಡಾರ್‌ಗಳನ್ನು ಡಿಜಿಟಲ್ X-ಬ್ಯಾಂಡ್ ರೇಡಾರ್‌ಗಳೊಂದಿಗೆ ಬದಲಾಯಿಸಿತು.

    ಭಾರತದ ರೇಡಾರ್‌ ಜಾಲವು ಗಾಳಿ-ಶೋಧನೆ ಮತ್ತು ಚಂಡಮಾರುತ-ಪತ್ತೆಹಚ್ಚುವ ಎಕ್ಸ್-ಬ್ಯಾಂಡ್ ರೇಡಾರ್‌ಗಳನ್ನು ಒಳಗೊಂಡಿದೆ. ದೀರ್ಘ-ಶ್ರೇಣಿಯ ಪತ್ತೆಗಾಗಿ ದೇಶವು S-ಬ್ಯಾಂಡ್ ರೇಡಾರ್‌ಗಳನ್ನು (2-4 GHz) ಬಳಸುತ್ತದೆ. ಮೊದಲ S-ಬ್ಯಾಂಡ್ ಸೈಕ್ಲೋನ್ ಡಿಟೆಕ್ಷನ್ ರೇಡಾರ್‌ ಅನ್ನು 1970 ರಲ್ಲಿ ವಿಶಾಖಪಟ್ಟಣದಲ್ಲಿ ಸ್ಥಾಪಿಸಲಾಯಿತು.

    ಸೆಪ್ಟೆಂಬರ್ 2024 ರಲ್ಲಿ , ಭೂ ವಿಜ್ಞಾನ ಸಚಿವಾಲಯವು ಮುಂದಿನ ಕೆಲವು ವರ್ಷಗಳಲ್ಲಿ ಭಾರತವು 56 ಹೆಚ್ಚುವರಿ ಡಾಪ್ಲರ್ ರೇಡಾರ್‌ಗಳನ್ನು ಸ್ಥಾಪಿಸಲಿದೆ ಎಂದು ಘೋಷಿಸಿತು. ಸೆಪ್ಟೆಂಬರ್ 11, 2024 ರಂದು ಕೇಂದ್ರ ಸಚಿವ ಸಂಪುಟವು 2,000-ಕೋಟಿ ವೆಚ್ಚದ ‘ಮಿಷನ್‌ ಮೌಸಮ್‌ʼ ಅನ್ನು ಅನುಮೋದಿಸಿತು. ಇದು 2026 ರ ವೇಳೆಗೆ 60 ರೇಡಾರ್‌ಗಳನ್ನು ಸ್ಥಾಪಿಸುವುದು ಸೇರಿದಂತೆ ಹವಾಮಾನ ಮೂಲಸೌಕರ್ಯವನ್ನು ನವೀಕರಿಸುವ ಗುರಿಯನ್ನು ಹೊಂದಿದೆ.

  • Wayanad By Eelections| ಪ್ರಿಯಾಂಕಾ ವಿರುದ್ಧ ಸ್ಪರ್ಧಿಸುತ್ತಿರುವ ನವ್ಯಾ ಹರಿದಾಸ್‌ ಯಾರು?

    Wayanad By Eelections| ಪ್ರಿಯಾಂಕಾ ವಿರುದ್ಧ ಸ್ಪರ್ಧಿಸುತ್ತಿರುವ ನವ್ಯಾ ಹರಿದಾಸ್‌ ಯಾರು?

    ನವದೆಹಲಿ: ಕೇರಳದ ವಯನಾಡ್‌ (Wayanad) ಲೋಕಸಭಾ ಉಪಚುನಾವಣೆಗೆ (Lok Sabha Election) ಕಾಂಗ್ರೆಸ್‌ನ ಪ್ರಿಯಾಂಕಾ ವಾದ್ರಾ (Priyanka Gandhi Vadra) ವಿರುದ್ಧ ಬಿಜೆಪಿ ನವ್ಯಾ ಹರಿದಾಸ್‌ (Navya Haridas) ಅವರನ್ನು ಕಣಕ್ಕೆ ಇಳಿಸಿದೆ.

    36 ವರ್ಷದ ನವ್ಯಾ ಹರಿದಾಸ್ ಅವರು ಮೆಕ್ಯಾನಿಕಲ್ ಇಂಜಿನಿಯರ್ ಪದವಿ ಓದಿದ್ದು ,ಕ್ಯಾಲಿಕಟ್ ವಿಶ್ವವಿದ್ಯಾಲಯದ ಕೆಎಂಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಸದ್ಯ ಅವರು ಕೋಝಿಕ್ಕೋಡ್ ಕಾರ್ಪೊರೇಷನ್‌ನಲ್ಲಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಟ್ವಿಟ್ಟರ್ ಪ್ರೊಫೈಲ್ ಪ್ರಕಾರ ಅವರು ಬಿಜೆಪಿಯಲ್ಲಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದಾರೆ.

    ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಾರ ನವ್ಯಾ ಅವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿಲ್ಲ ಮತ್ತು 1,29,56,264 ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದನ್ನೂ ಓದಿ: ಶಿಗ್ಗಾವಿ ಉಪಚುನಾವಣೆ| ಭರತ್‌ ಬೊಮ್ಮಾಯಿಗೆ ಬಿಜೆಪಿ ಟಿಕೆಟ್‌ ನೀಡಿದ್ದು ಯಾಕೆ?

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ (Rahul Gandhi) ವಯನಾಡ್‌ ಮತ್ತು ಉತ್ತರ ಪ್ರದೇಶದ ರಾಯ್‌ಬರೇಲಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಈ ಹಿನ್ನೆಲೆಯಲ್ಲಿ ವಯನಾಡ್‌ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿಯೇ ಅಂತಿಮ: ಸುರೇಶ್ ಬಾಬು

    ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಹಿರಿಯ ನಾಯಕ ಸತ್ಯನ್ ಮೊಕೇರಿ ಅವರನ್ನು ವಯನಾಡ್ ಲೋಕಸಭಾ ಉಪಚುನಾವಣೆಗೆ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಅಭ್ಯರ್ಥಿಯಾಗಿ ಹೆಸರಿಸಿದೆ.

    2009 ರಿಂದ ನಡೆದ ಸತತ 4 ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಜಯಗಳಿಸಿದ್ದಾರೆ. ಇದನ್ನೂ ಓದಿ: ಸಂಡೂರು ಉಪಚುನಾವಣೆ| ಬಿಜೆಪಿ ಟೆಕೆಟ್‌ ಪಡೆದ ಬಂಗಾರು ಹನುಮಂತು ಯಾರು?

    2019ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿ 7,06,367 ಮತಗಳನ್ನು ಪಡೆದು 4,31,770 ಮತಗಳಿಂದ ಜಯಗಳಿಸಿದ್ದರು. ಸಮೀಪದ ಸಿಪಿಐ ಅಭ್ಯರ್ಥಿ 2,74,597 ಮತಗಳನ್ನು ಪಡೆದಿದ್ದರು.

    2024ರ ಚುನಾವಣೆಯಲ್ಲಿ ರಾಹುಲ್‌ ಗಾಂಧಿ 6,47,445 ಮತಗಳನ್ನು ಪಡೆದು 3,64,445 ಮತಗಳ ಅಂತರದಿಂದ ಜಯಗಳಿಸಿದ್ದರು. ಸಮೀಪದ ಸಿಪಿಐ ಅಭ್ಯರ್ಥಿ ಅನ್ನಿ ರಾಜಾ 2,83,023 ಮತಗಳನ್ನು ಪಡೆದರೆ ಬಿಜೆಪಿಯ ಸುರೇಂದ್ರನ್‌ 1,41,045 ಮತಗಳನ್ನು ಗಳಿಸಿದ್ದರು.

     

  • ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು

    ಬೈಕ್ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಧಿಪತಿ – 25 ಕೋಟಿ ಬಹುಮಾನ ಗೆದ್ದ ಮಂಡ್ಯದ ಗಂಡು

    ಮಂಡ್ಯ: ಅದೃಷ್ಟ ಅನ್ನೋದು ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಖುಲಾಯಿಸುತ್ತದೆಯೋ ಗೊತ್ತಿಲ್ಲ. ಅದೇ ರೀತಿ ಮಂಡ್ಯದ ಮೆಕಾನಿಕ್‌ಗೆ ಅದೃಷ್ಟ ಖುಲಾಯಿಸಿದ್ದು, ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.

    ಮಂಡ್ಯದ (Mandya) ಅಲ್ತಾಫ್ ಪಾಷಾ ಎಂಬವರು ಲಾಟರಿಯಲ್ಲಿ‌ 25 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ. ಅಲ್ತಾಫ್‌ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ಎರಡು ದಿನಗಳ ಹಿಂದೆಯಷ್ಟೇ ವಯನಾಡಿನಲ್ಲಿರುವ (Wayanad)  ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.

    ಈ ವೇಳೆ ‌ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ (Thiruvonam Bumper Lottery) ಟಿಕೆಟ್‌ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ‌ಗೆದ್ದಿದ್ದಾರೆ. ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಹಣ ತರಲು ಕೇರಳಕ್ಕೆ ದೌಡು ಕಿತ್ತಿದ್ದಾರೆ. ಇದನ್ನೂ ಓದಿ: ದಸರಾ ಜಂಬೂಸವಾರಿ ಮೆರವಣಿಗೆಗೆ ಪೊಲೀಸ್ ಇಲಾಖೆ ಬಿಗಿ ಭದ್ರತೆ: ಕಮಿಷನರ್ ಸೀಮಾ ಲಾಟ್ಕರ್

    ಬುಧವಾರ (ಅ.9) ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು. 360 ಕೋಟಿ ಮೌಲ್ಯದ 71 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಹಾಗಾಗಿ ವಿವಿಧ ಹಂತದ ಬಹುಮಾನಕ್ಕೆ 50 ಕೋಟಿ ರೂ. ನಿಗದಿಪಡಿಸಲಾಗಿತ್ತು. ಓಣಂ ಬಂಪರ್‌ನಲ್ಲಿ 25 ಕೋಟಿ ರೂ. ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂಬ ಪ್ರಶ್ನೆಗೆ ಮಲಯಾಳಿಗಳು ಉತ್ತರ ಹುಡುಕುತ್ತಿದ್ದರು. ಕೊನೆಗೆ ಕಾದು ನೋಡುತ್ತಿದ್ದವರಿಗೆ ಶಾಕ್‌ ನೀಡಿದಂತೆ ಕರ್ನಾಟಕ ಮಂಡ್ಯ ಜಿಲ್ಲೆಯ ಪಾಂಡವಪುರ ಮೂಲದ ಅಲ್ತಾಫ್ ಎಂಬುದು ಗೊತ್ತಾಗಿದೆ. ಇದನ್ನೂ ಓದಿ: ದಸರಾ ವಿಶೇಷ| ಅರಸೀಕೆರೆ-ಮೈಸೂರು ನಡುವೆ ಮೂರು ದಿನ ಸಂಚರಿಸಲಿದೆ ಡೆಮು ರೈಲು

  • ವಯನಾಡು ದುರಂತ ಹೇಗಾಯ್ತು? – ಭಯಾನಕ ಜಲಪ್ರಳಯದ ಸಿಸಿಟಿವಿ ದೃಶ್ಯ ನೋಡಿ

    ವಯನಾಡು ದುರಂತ ಹೇಗಾಯ್ತು? – ಭಯಾನಕ ಜಲಪ್ರಳಯದ ಸಿಸಿಟಿವಿ ದೃಶ್ಯ ನೋಡಿ

    ಚೂರಲ್ಮಾಲಾ:  ವಯನಾಡು ಜಲ ಪ್ರಳಯ (Wayanad Land Slide) ಮಾಡಿದ ಹಾನಿ ಏನು ಎನ್ನುವುದು ಎಲ್ಲರಿಗೂ ಈಗಾಗಲೇ ತಿಳಿದಿದೆ. ಆದರೆ ಈ ಮಧ್ಯರಾತ್ರಿ ದುರಂತ ಹೇಗೆ ನಡೆಯಿತು? ಆದರ ತೀವ್ರತೆ ಹೇಗಿತ್ತು ಎನ್ನುವುದು ಈಗ ಸಿಸಿಟಿವಿ ದೃಶ್ಯದಿಂದ ಗೊತ್ತಾಗಿದೆ.

    ಮುಂಡಕ್ಕೈ ಚರ್ಚ್ ಮತ್ತು ಚೂರಲ್ಮಾಲಾದ ಅಂಗಡಿಯೊಂದರ ಸಿಸಿಟಿವಿ ದೃಶ್ಯಾವಳಿಗಳು (CCTV Visuals) ಜುಲೈ 30 ರಂದು ನಡೆದ ಘೋರ ದುರಂತವನ್ನು ವಿವರಿಸುತ್ತದೆ. ಇದನ್ನೂ ಓದಿ:ಭಾರತೀಯರು ಜನಸಂಖ್ಯೆ ನಿಯಂತ್ರಣಕ್ಕೆ ಹೆಚ್ಚು ಗಮನ ಹರಿಸುತ್ತಿಲ್ಲ: ನಾರಾಯಣ ಮೂರ್ತಿ

     

    ಭೂಕುಸಿತದಿಂದ ಭಾಗಶಃ ನಾಶವಾದ ಮುಂಡಕ್ಕೈ ಚರ್ಚ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಅಂದು ಮಳೆ ಹೇಗಿತ್ತು ಎನ್ನುವುದನ್ನು ತೋರಿಸುತ್ತದೆ. ರಭಸವಾಗಿ ಬಂದ ನೀರಿನಲ್ಲಿ ವಸ್ತುಗಳು ಹೇಗೆ ಕೊಚ್ಚಿಕೊಂಡು ಹೋಯ್ತು? ಅಂಗಡಿಯನ್ನು ಹೇಗೆ ನಾಶ ಮಾಡಿತು ಎನ್ನುವುದು ಅಂಗಡಿಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ನೋಡಬಹುದು.

    ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದ ಸುಮಾರು ಮೂರು ವಾರಗಳ ನಂತರ ರಾಜ್ಯ ಸರ್ಕಾರ ನಾಪತ್ತೆಯಾದವರ ಸಂಖ್ಯೆಯನ್ನು 119 ಕ್ಕೆ ಇಳಿಸಿದೆ. ಆರಂಭದಲ್ಲಿ 128 ಜನರು ಕಾಣೆಯಾಗಿದ್ದಾರೆ ಎಂದು ಪಟ್ಟಿ ಮಾಡಲಾಗಿದ್ದರೂ, ಡಿಎನ್‌ಎ ಪರೀಕ್ಷೆಗಳು ಪೂರ್ಣಗೊಂಡ ನಂತರ ಸಂಖ್ಯೆಗಳನ್ನು ನವೀಕರಿಸಲಾಗಿದೆ.

    ಆಗಸ್ಟ್ 14 ರವರೆಗೆ 401 ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗಿದೆ. ಕೊಳೆತ ದೇಹದ ಭಾಗಗಳನ್ನು ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ಸಮಸ್ಯೆ ಇರುವುದರಿಂದ ಈ  ಪ್ರಕ್ರಿಯೆ ವಿಳಂಬವಾಗುತ್ತಿದೆ.

     

  • Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ

    Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ

    ವಯನಾಡು: ಇತ್ತೀಚೆಗೆ ಕೇರಳದ ವಯನಾಡಿನಲ್ಲಿ (Wayanad) ಭೂಕುಸಿತ ಸಂಭವಿಸಿದ್ದ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಭೇಟಿ ನೀಡಿದ್ದಾರೆ. ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಧಾನಿ, ಸರ್ಕಾರ ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಕುರಿತು ಪರಿಶೀಲಿಸಿದ್ದಾರೆ.

    ಇದಕ್ಕೂ ಮುನ್ನ ಬೆಳಗ್ಗೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು, ಕೇರಳ ಸಿಎಂ ಪಿಣರಾಯಿ ವಿಜಯನ್‌ (Pinarayi Vijayan) ಸರಳ, ಸಾಂಪ್ರದಾಯಿಕವಾಗಿ ಕೈಮುಗಿದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಉಪಸ್ಥಿತರಿದ್ದರು. ಸ್ವಾಗತ ಸ್ವೀಕರಿಸಿ ಬಳಿಕ ಮೋದಿ, ಸಿಎಂ ಜೊತೆಗೂಡಿ ವೈಮಾನಿಕ ಸಮೀಕ್ಷೆ (Aerial Survey) ನಡೆಸಿದರು. ಇದನ್ನೂ ಓದಿ: ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್‌ ನ್ಯೂಸ್‌ ಕೊಟ್ಟ ಹಿಂಡನ್‌ಬರ್ಗ್‌

    Wayanad landslides

    ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಧ್ವಂಸಗೊಂಡ ಚೂರಲ್ಮಲಾ (Chooralmala), ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಕುಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಸಮೀಕ್ಷೆ ಮುಗಿದ ಬಳಿಕ ಇಲ್ಲಿನ ಕಲ್ಪೆಟ್ಟಾದ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ಬಂದಿಳಿಯಲಿದ್ದು, ಅಲ್ಲಿಂದ ರಸ್ತೆ ಮೂಲಕ ಭೂಕುಸಿತ ಪೀಡಿತ ಪ್ರದೇಶಗಳಿಗೆ ಮೋದಿ ತೆರಳಲಿದ್ದಾರೆ. ಇದನ್ನೂ ಓದಿ: 530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್‌ ಸಿಸೋಡಿಯಾ

    ಕಳೆದ ಜು.30 ರಂದು ವಯನಾಡಲ್ಲಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 226 ಜನರು ಸಾವನ್ನಪ್ಪಿದ್ದರು. ಅನೇಕರು ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಇದು ಕೇರಳಕ್ಕೆ ಅಪ್ಪಳಿಸಿದ ಅತಿದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ವಿಪತ್ತು ಪೀಡಿತ ಪ್ರದೇಶಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸಿಕೊಡಲು ಕೇರಳ ಸರ್ಕಾರ, ಕೇಂದ್ರದ ಬಳಿ 2,000 ಕೋಟಿ ರೂ. ನೆರವು ನೀಡುವಂತೆ ಮನವಿ ಮಾಡಿತ್ತು. ಈ ಬೆನ್ನಲ್ಲೇ ಖುದ್ದು ಪ್ರಧಾನಿ ಅವರೇ ಭೇಟಿ ನೀಡಿ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಇದನ್ನೂ ಓದಿ: ಎಸ್ಸಿ-ಎಸ್ಟಿ: ಕೆನೆಪದರ ಮೀಸಲಾತಿಗೆ ನೂರಾರು ಸಂಸದರ ವಿರೋಧ

  • ವಯನಾಡು ಭೂಕುಸಿತ ಪ್ರದೇಶಕ್ಕೆ ನಾಳೆ ಮೋದಿ ಭೇಟಿ

    ವಯನಾಡು ಭೂಕುಸಿತ ಪ್ರದೇಶಕ್ಕೆ ನಾಳೆ ಮೋದಿ ಭೇಟಿ

    ನವದೆಹಲಿ: ವಯನಾಡಿನ (Wayanad) ಭೂಕುಸಿತಗೊಂಡ (Landslides) ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಶನಿವಾರ ಭೇಟಿ ನೀಡಲಿದ್ದು, ಪರಿಹಾರ ಮತ್ತು ಪುನರ್ವಸತಿ ಪರಿಶೀಲಿಸಲಿದ್ದಾರೆ.

    ಅವರು ಬೆಳಗ್ಗೆ 11 ಗಂಟೆ ಸುಮಾರಿಗೆ ಕಣ್ಣೂರು ತಲುಪಲಿದ್ದಾರೆ. ನಂತರ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಬಳಿಕ ದುರಂತದಲ್ಲಿ ಬದುಕುಳಿದವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳ ಪ್ರಯತ್ನ ಹಾಗೂ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಅವರಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

    ನಂತರ ಪ್ರಧಾನಿ ಮೋದಿಯವರು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಘಟನೆ ಮತ್ತು ನಡೆಯುತ್ತಿರುವ ಪರಿಹಾರ ಪ್ರಯತ್ನಗಳ ಬಗ್ಗೆ ವಿವರವಾಗಿ ಚರ್ಚಿಸಲಿದ್ದಾರೆ.

    ಜು.30 ರಂದು ವಯನಾಡಲ್ಲಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 226 ಜನರು ಸಾವನ್ನಪ್ಪಿದ್ದರು. ಅನೇಕರು ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಇದು ಕೇರಳಕ್ಕೆ ಅಪ್ಪಳಿಸಿದ ಅತಿದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ.