Tag: Wayanad Landslides

  • Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ

    Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ

    ನವದೆಹಲಿ: ಸುಮಾರು 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರನ್ (Sukesh Chandrasekhar) ವಯನಾಡಿನಲ್ಲಿ ಭೂಕುಸಿತದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೆರವು ನೀಡಲು ಮುಂದಾಗಿದ್ದಾನೆ. ಸಂತ್ರಸ್ತರಿಗೆ 15 ಕೋಟಿ ರೂ. ದೇಣಿಗೆ ಹಾಗೂ 300 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ (Pinarayi Vijayan) ಪತ್ರ ಬರೆದಿದ್ದಾನೆ.

    Wayanad landslides

    ಸದ್ಯ ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಪತ್ರ ಬರೆದು, ವಯನಾಡಿನ ಭೂಕುಸಿತ (Wayanad landslides) ದುರಂತ ಕಂಡು ತುಂಬಾ ನೋವಾಗಿದೆ. ಆದ್ದರಿಂದ ಪರಿಹಾರ ನಿಧಿಗೆ ನೀಡಬೇಕಂತಿರುವ 15 ಕೋಟಿ ರೂ. ಹಣವನ್ನು ಸ್ವೀಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಇಂತಹ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಲು ಬಯಸುತ್ತೇನೆ. ಆ ಹಣವನ್ನು ಹೊರತುಪಡಿಸಿ ನಾನು ಸಂತ್ರಸ್ತರಿಗೆ ತುರ್ತು ಅಗತ್ಯತೆಯ ನೆಲೆಯಲ್ಲಿ 300 ಮನೆಗಳನ್ನು ನಿರ್ಮಿಸಿಕೊಡಲು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಗರ ಪಂಚಮಿ ವಿಶೇಷ: ಜನಮೇಜಯ ಸರ್ಪಯಾಗಕ್ಕೆ ಮುಂದಾಗಿದ್ದು ಯಾಕೆ?

    ಇದು ಚಂದ್ರಶೇಖರ್ ಬರೆದಿರುವ ಪತ್ರ ಎಂದು ಆತನ ಪರ ವಕೀಲ ಅನಂತ್ ಮಲಿಕ್ ಅವರು ಖಚಿತಪಡಿಸಿದ್ದಾರೆ. ಕಾನೂನುಬದ್ಧ ವ್ಯವಹಾರ ಖಾತೆಗಳಿಂದಲೇ ಈ ಹಣ ನೀಡುವುದಾಗಿ ತಿಳಿಸಿರುವ ಸುಕೇಶ್ ಚಂದ್ರಶೇಖರ್, ರಾಜ್ಯ ಸರ್ಕಾರವು ಈ ಪ್ರಸ್ತಾಪವನ್ನು ಸ್ವೀಕರಿಸಬೇಕು ಮತ್ತು ಭೂಕುಸಿತ ದುರಂತಲ್ಲಿ ಸಂತ್ರಸ್ತರ ಕಲ್ಯಾಣ ಮತ್ತು ಪುನರ್ವಸತಿಗಾಗಿ ಈ ಹಣವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಸುಕೇಶ್ ಚಂದ್ರಶೇಖರ್ ಪತ್ರಕ್ಕೆ ಕೇರಳ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: EXCLUSIVE: ನಿಜವಾಗಿಯೂ ನಮ್ಮ ಬಳಿ ಮೈಸೂರಲ್ಲಿ ಒಂದೇ ಒಂದು ಸೈಟ್‌ ಇದೆಯಷ್ಟೆ: ಸಿದ್ದರಾಮಯ್ಯ

    ಕಳೆದ ಜುಲೈ 30ರ ತಡರಾತ್ರಿ ವಯನಾಡಿನ ಚುರಲ್ಮಲ ಹಾಗೂ ಮುಂಡಕ್ಕೈ ಪ್ರದೇಶಗಳಲ್ಲಿ ಉಂಟಾದ ಭೂಕುಸಿತದಿಂದ ನೂರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ, ಭೂಕುಸಿತ ಪೀಡಿತ ಚೂರಲ್ಮಲ ಮತ್ತು ಮುಂಡಕ್ಕೈ ಪ್ರದೇಶಗಳಲ್ಲಿ ನಾಪತ್ತೆಯಾದವರ ಹುಡುಕಾಟವು ಮುಂದುವರಿದಿದೆ. ಸೇನೆ ಮತ್ತು ನೌಕಾಪಡೆ ಸೇರಿದಂತೆ ವಿವಿಧ ಪಡೆಗಳ 1,026 ಸಿಬ್ಬಂದಿ, 500ಕ್ಕೂ ಹೆಚ್ಚು ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರ ಈಗಾಗಲೇ ವಯನಾಡು ಸಂಸತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಣೆ ಮಾಡಿದೆ.

  • Wayanad Landslides | 7 ದಿನವಾದ್ರೂ ನಿಲ್ಲದ ಶೋಧ – 40 ಕಿಮೀ ಉದ್ದಕ್ಕೂ ಶವಗಳಿಗಾಗಿ ಹುಡುಕಾಟ

    Wayanad Landslides | 7 ದಿನವಾದ್ರೂ ನಿಲ್ಲದ ಶೋಧ – 40 ಕಿಮೀ ಉದ್ದಕ್ಕೂ ಶವಗಳಿಗಾಗಿ ಹುಡುಕಾಟ

    ವಯನಾಡು: ಇಲ್ಲಿ ಭೂಕುಸಿತ (Wayanad Landslides) ದುರಂತ ನಡೆದು ಏಳು ದಿನ ಕಳೆದಿದೆ. ಮೃತರ ಸಂಖ್ಯೆ 400 ದಾಟಿದೆ. ಇನ್ನೂ 250ಕ್ಕೂ ಹೆಚ್ಚು ಜನ ಪತ್ತೆಯಾಗಬೇಕಿದೆ. ಮುಂಡಕ್ಕೈ, ಚುರಲ್ಮಲದಲ್ಲಿ ಸೋಮವಾರವೂ(ಆ.5) ಶೋಧಕಾರ್ಯ ಮುಂದುವರಿದಿದೆ.

    ಚಲಿಯಾರ್ ನದಿ ವ್ಯಾಪ್ತಿಯ 40 ಕಿಲೋಮೀಟರ್ ಉದ್ದಕ್ಕೂ ಶವಗಳಿಗಾಗಿ ಹುಡುಕಾಟ ನಡೆದಿದೆ. ಕಾಂತನ್‌ಪಾರಾ ಬಳಿ ಅಪಾಯಕ್ಕೆ ಸಿಲುಕಿದ್ದ 18 ರಕ್ಷಣಾ ಸಿಬ್ಬಂದಿಯನ್ನ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ.

    ಮಧ್ಯರಾತ್ರಿ ಗುಡ್ಡ ಕುಸಿತ ಸಂಭವಿಸುತ್ತಲೇ ಚುರುಲ್ಮಲದ (chooralmala) ನೀತು ಜೋಜೋ ಎಂಬಾಕೆ ಫೋನ್ ಮಾಡಿ ಸಹಾಯಕ್ಕೆ ಮೊರೆ ಇಟ್ಟಿದ್ರು. ಕೆಲವೇ ನಿಮಿಷ ನಿಮ್ಮನ್ನು ತಲುಪ್ತೀವಿ ಎಂದು ರಕ್ಷಣಾ ಪಡೆಗಳು ಭರವಸೆ ನೀಡಿದ್ವು. ಆದ್ರೆ, ಜಲಸ್ಫೋಟದ ತೀವ್ರತೆಯಿಂದ ಅವರನ್ನು ತಲುಪಲಾಗಲಿಲ್ಲ. ನಿನ್ನೆ ರಾತ್ರಿ ನೀತು ಅವರ ಶವ ಸಾವಿನ ದಿಬ್ಬದಲ್ಲಿ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೇಶ ತೊರೆದ ಶೇಖ್ ಹಸೀನಾಗೆ ಭಾರತ ಆಶ್ರಯ – ʻಮಹಾ ಪಲಾಯನʼ ಬೆನ್ನಲ್ಲೇ ಉದ್ರಿಕ್ತರಿಂದ ಸಂಭ್ರಮಾಚರಣೆ

    ಇನ್ನು, ಚುರಲ್ಮಲದಲ್ಲಿ 16 ಮಂದಿಯ ಕೂಡು ಕುಟುಂಬದಲ್ಲಿ ಈಗ ಒಬ್ಬರಷ್ಟೇ ಉಳಿದಿದ್ದಾರೆ. ಅದು ಅವರು ಬೇರೆ ಕಡೆ ಹೋಗಿದ್ದರಿಂದ ಜೀವಂತವಾಗಿದ್ದಾರೆ. ಅಂದಿನಿಂದ ತಮ್ಮವರಿಗಾಗಿ ಹುಡುಕಾಟ ನಡೆಸಿದ್ದಾರೆ. ಈವರೆಗೂ ನಾಲ್ವರ ಶವಗಳಷ್ಟೇ ಸಿಕ್ಕಿವೆ. ಉಳಿದವರಿಗಾಗಿ ರಸೂಲ್ ಶೋಧ ಕಾರ್ಯ ಮಾಡ್ತಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ದುರಂತದಲ್ಲಿ ಬಚಾವ್ ಆದವರು ಬಿಕ್ಕಿ ಅಳುತ್ತಿದ್ದಾರೆ. ಮುಂದೆನು? ಎಲ್ಲಿಗ್ ಹೋಗೋದು? ನಮಗ್ಯಾರು ಗತಿ? ಅಂತ ದಿಕ್ಕು ತೋಚದಂತೆ ಕುಳಿತಿದ್ದಾರೆ. ಇದನ್ನೂ ಓದಿ: ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಡೆಗಣನೆ – ಹೆಚ್‌ಡಿಡಿ ಬೇಸರ

  • ವಯನಾಡು ಭೂಕುಸಿತ ದುರಂತ: 1 ಕೋಟಿ ದೇಣಿಗೆ ನೀಡಿದ ಚಿರಂಜೀವಿ, ರಾಮ್ ಚರಣ್

    ವಯನಾಡು ಭೂಕುಸಿತ ದುರಂತ: 1 ಕೋಟಿ ದೇಣಿಗೆ ನೀಡಿದ ಚಿರಂಜೀವಿ, ರಾಮ್ ಚರಣ್

    ಕೇರಳದ ವಯನಾಡಿನಲ್ಲಿ ಸಂಭವಿಸಿದ (Wayanad Landslide) ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 300 ದಾಟಿದೆ. ಈ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸಂತ್ರಸ್ತರ ಸಹಾಯಕ್ಕೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮತ್ತು ರಾಮ್ ಚರಣ್ (Ram Charan) ಮುಂದಾಗಿದ್ದಾರೆ.

    ವಯನಾಡು ಭೂಕುಸಿತ ನಿಮಿತ್ತ ಸಂಕಷ್ಟದಲ್ಲಿರುವವರಿಗೆ ಚಿರಂಜೀವಿ ಮತ್ತು ರಾಮ್ ಚರಣ್ ಕೇರಳದ ಸಿಎಂ ಫಂಡ್‌ಗೆ 1 ಕೋಟಿ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:ಜಾನ್ವಿ ಕಪೂರ್‌ಗೆ ಮತ್ತೆ ಸೋಲು- ಬಾಕ್ಸಾಫೀಸ್‌ನಲ್ಲಿ ‘ಉಲಾಜ್’ ಕಳಪೆ ಕಲೆಕ್ಷನ್

    ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಪ್ರಕೃತಿಯ ವಿಕೋಪಕ್ಕೆ ನೂರಾರು ಜನರು ಪ್ರಾಣ ಕಳೆದುಕೊಂಡಿದಕ್ಕೆ ತೀವ್ರ ನೋವಾಗಿದೆ. ವಯನಾಡು ದುರಂತದ ಸಂತ್ರಸ್ತರಿಗಾಗಿ ನನ್ನ ಮನ ಮಿಡಿಯುತ್ತಿದೆ. ಚರಣ್ ಮತ್ತು ನಾನು ಕೇರಳದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡುವ ಮೂಲಕ ಸಂಕಷ್ಟದಲ್ಲಿರುವವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರೆಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೆಗಾಸ್ಟಾರ್ ಚಿರಂಜೀವಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಚಿರಂಜೀವಿ, ರಾಮ್ ಚರಣ್ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

    ಅಂದಹಾಗೆ, ವಯನಾಡು ಭೂಕುಸಿತ ದುರಂತ ಹಿನ್ನೆಲೆ ಈಗಾಗಲೇ ರಶ್ಮಿಕಾ ಮಂದಣ್ಣ (Rashmika Mandanna), ಸೂರ್ಯ ದಂಪತಿ, ಮಮ್ಮುಟ್ಟಿ, ಚಿಯಾನ್ ವಿಕ್ರಮ್, ದುಲ್ಕರ್ ಸಲ್ಮಾನ್, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ಕೇರಳದ ಸಿಎಂ ಫಂಡ್‌ಗೆ ಲಕ್ಷ ಲಕ್ಷ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದಾರೆ.

  • ವಯನಾಡು ಭೂಕುಸಿತ: ಕೊಡಗು ಮೂಲದ ಮಹಿಳೆ ಸೇರಿ ಕುಟುಂಬದ 7 ಮಂದಿಯ ಮೃತದೇಹ ಪತ್ತೆ

    ವಯನಾಡು ಭೂಕುಸಿತ: ಕೊಡಗು ಮೂಲದ ಮಹಿಳೆ ಸೇರಿ ಕುಟುಂಬದ 7 ಮಂದಿಯ ಮೃತದೇಹ ಪತ್ತೆ

    ಮಡಿಕೇರಿ: ವಯನಾಡು ಭೂಕುಸಿತ (Wayanad landslides) ದುರಂತದಲ್ಲಿ ನಾಪತ್ತೆಯಾಗಿದ್ದ ಕೊಡಗಿನ (Kodagu), ನೆಲ್ಯಹುದಿಕೇರಿ ಮೂಲದ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಮೃತದೇಹಗಳು ಪತ್ತೆಯಾಗಿವೆ.

    ಕುಶಾಲನಗರ ತಾಲ್ಲೂಕಿನ ನಲ್ವತ್ತೇಕರೆ ನಿವಾಸಿ ಪೊನ್ನಮ್ಮ ಎಂಬವರ ಮಗಳು ದಿವ್ಯಾ (35) ಅವರನ್ನು ಚೂರಲ್ ಮಲೈಗೆ ಮದುವೆ ಮಾಡಿ ಕೊಡಲಾಗಿತ್ತು. ಭೂಕುಸಿತದ ಬಳಿಕ ದಿವ್ಯಾ ಸೇರಿದಂತೆ ಕುಟುಂಬದ 9 ಮಂದಿ ನಾಪತ್ತೆಯಾಗಿದ್ದರು. ಮಗಳು ಹಾಗೂ ಕುಟುಂಬಸ್ಥರನ್ನು ಹುಡುಕಿಕೊಡುವಂತೆ ಪೊನ್ನಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದರು.

    ಕುಟುಂಬದ 9 ಮಂದಿಯ ಪೈಕಿ 8 ಮಂದಿಯ ಮೃತದೇಹ ಪತ್ತೆಯಾಗಿದೆ. ದಿವ್ಯಾ ಹಾಗೂ ಮಗ ಲಕ್ಷಿತ್ ಮೃತದೇಹ ಒಟ್ಟಿಗೆ ಪತ್ತೆಯಾಗಿವೆ. ದಿವ್ಯಾ ವಯನಾಡುವಿನ ಮಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

  • Wayanad Landslides | ಸೂಚಿಪ್ಪಾರ ಫಾಲ್ಸ್‌ನಲ್ಲಿ 11 ಶವ ಪತ್ತೆ – ಕಣ್ಣಿಗೆ ರಾಚುತ್ತಿದೆ ಹೃದಯವಿದ್ರಾವಕ ದೃಶ್ಯ

    Wayanad Landslides | ಸೂಚಿಪ್ಪಾರ ಫಾಲ್ಸ್‌ನಲ್ಲಿ 11 ಶವ ಪತ್ತೆ – ಕಣ್ಣಿಗೆ ರಾಚುತ್ತಿದೆ ಹೃದಯವಿದ್ರಾವಕ ದೃಶ್ಯ

    ವಯನಾಡು: ಭೀಕರ ಭೂಕುಸಿತಕ್ಕೆ (Wayanad Landslides) ವಯನಾಡು ನಲುಗಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಒಟ್ಟು ಮೃತರ ಸಂಖ್ಯೆ 350ರ ಗಡಿ ದಾಟಿದೆ. ಸೇನಾ ಕಾರ್ಯಾಚರಣೆ 6ನೇ ದಿನವಾದ ಭಾನುವಾರಕ್ಕೆ ಕಾಲಿಟ್ಟಿದ್ದು, ಘಟನಾ ಸ್ಥಳಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ.

    ಸೂಚಿಪ್ಪಾರ ಫಾಲ್ಸ್‌ನಲ್ಲಿ 11 ಶವ ಪತ್ತೆ:
    ದುರಂತ ಸ್ಥಳದಲ್ಲಿ ಸೇನಾ ಕಾರ್ಯಾಚರಣೆ ವೇಳೆ ಕೇರಳದ ಸೂಚಿಪ್ಪಾರ ಫಾಲ್ಸ್‌ನಲ್ಲಿ (Soochipara Falls) 11 ಮೃತದೇಹಗಳು ಪತ್ತೆಯಾಗಿವೆ. ಮುಂಡಕ್ಕೈ ಹಾಗೂ ಚೂರುಲ್ಮಲದಿಂದ 5 ಕಿಮೀ ದೂರದಲ್ಲಿ ಫಾಲ್ಸ್ ಇದ್ದು, ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ ಗ್ರಾಮದಲ್ಲಿದ್ದ ಕಾರು, ಸಿಲಿಂಡರ್, ಕುಕ್ಕರ್ ಸೇರಿ ಅನೇಕ ಗೃಹೋಪಯೋಗಿ ವಸ್ತುಗಳು ಕೂಡ ಕೊಚ್ಚಿಕೊಂಡು ಬಂದಿವೆ. ಅಷ್ಟರ ಮಟ್ಟಿಗೆ ಅಂದು ರಾತ್ರಿ ನೀರು ಹರಿದಿದೆ. ಈ ಹಿನ್ನಲೆಯಲ್ಲಿ ಫಾಲ್ಸ್ ಅಕ್ಕಪಕ್ಕದಲ್ಲಿಯೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಶಿರಾಡಿಘಾಟ್‌ ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ – ಕೇಂದ್ರಕ್ಕೆ ಮನವರಿಕೆ ಮಾಡುತ್ತೇವೆಂದ ಸಿಎಂ

    30 ಶವ ಪತ್ತೆ ಹಚ್ಚಿರುವ `ಡಿಕ್ಸಿʼ
    ಇನ್ನು ದುರಂತ ಸ್ಥಳ ಚೂರಲ್‌ಮಲ ಭಾಗದಲ್ಲಿ ಉತ್ತರ ಪ್ರದೇಶದ ಮೇರಠ್‌ನಿಂದ ಬಂದಿರುವ ಶ್ವಾನಗಳು ಮೃತದೇಹಗಳ ಹುಡುಕಾಟದಲ್ಲಿ ತೊಡಗಿವೆ. ಈಗಾಗಲೇ 30 ಶವಗಳನ್ನು ಪತ್ತೆ ಹಚ್ಚಿದ್ದು, ಡಿಕ್ಸಿ ಹೆಸರಿನ ಶ್ವಾನ ಇದಕ್ಕೆ ಎಕ್ಸ್‌ಪರ್ಟ್‌ ಆಗಿದೆ. ಈ ಮಧ್ಯೆ ಮುಂಡಕೈ ಗ್ರಾಮಕ್ಕೆ ನಟ ಹಾಗೂ ಸೇನಾಧಿಕಾರಿ ಮೋಹನ್ ಲಾಲ್ ಭೇಟಿ ನೀಡಿ ದುರಂತ ಸ್ಥಳ ವೀಕ್ಷಿಸಿದ್ದಾರೆ. ಇದನ್ನೂ ಓದಿ: ವಯನಾಡಿನಲ್ಲಿ ಸಾವಿನ ಸುರಿ`ಮಳೆ’ – ಗುರುತು ಸಿಗದಷ್ಟು ಛಿದ್ರಗೊಂಡಿರುವ ದೇಹಗಳು; ಶವಗಳ ಶೋಧಕ್ಕೆ ಶ್ವಾನಪಡೆ! 

  • ವಯನಾಡು ಭೂಕುಸಿತಕ್ಕೆ ಗೋ ಹತ್ಯೆ ಕಾರಣ – ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ

    ವಯನಾಡು ಭೂಕುಸಿತಕ್ಕೆ ಗೋ ಹತ್ಯೆ ಕಾರಣ – ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ

    ವಯನಾಡು/ಜೈಪುರ: ಭೀಕರ ಭೂಕುಸಿತಕ್ಕೆ (Wayanad Landslides) ದೇವರನಾಡೇ ನಲುಗಿ ಹೋಗಿದೆ. ಸಾವಿನ ಸುರಿʻಮಳೆʼಗೆ ವಯನಾಡಲ್ಲಿ ಮೃತರ ಸಂಖ್ಯೆ 350ರ ಗಡಿ ದಾಟಿದ್ದು, 6ನೇ ದಿನಕ್ಕೆ ಸೇನಾ ಕಾರ್ಯಾಚರಣೆ ಕಾಲಿಟ್ಟಿದೆ. ಘಟನಾ ಸ್ಥಳಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ. ಇಡೀ ದೇಶವನ್ನೇ ಈ ದೃಶ್ಯ ಕಂಡು ಕಂಬನಿ ಮಿಡಿದಿದೆ. ಆದ್ರೆ ರಾಜಸ್ಥಾನದ ಬಿಜೆಪಿ ನಾಯಕರೊಬ್ಬರು (Rajasthan BJP Leader) ನೀಡಿರುವ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

    ವಿವಾದಿತ ಹೇಳಿಕೆಗಳಿಂದಲೇ ಸುದ್ದಿಯಾಗಿರುವ ಬಿಜೆಪಿ ಮಾಜಿ ಸಂಸದರೂ ಆಗಿರುವ ನಾಯಕ ಜ್ಞಾನದೇವ್ ಅಹುಜಾ (Gyandev Ahuja), ವಯನಾಡು ದುರಂತಕ್ಕೆ ಕೇರಳದಲ್ಲಿನ ಗೋ ಹತ್ಯೆ ಚಟುವಟಿಕೆಗಳು ಕಾರಣ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಎಲ್ಲೆಲ್ಲಿ ಗೋಹತ್ಯೆಗಳು ನಡೆಯುತ್ತವೆಯೋ, ಅಂತಹ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಮುಂದುವರಿಯುತ್ತದೆ ಎಂದು ಭವಿಷ್ಯವನ್ನೂ ನುಡಿದಿದ್ದಾರೆ.

    ಮುಂದುವರಿದು ಮಾತನಾಡಿರುವ ಅವರು, ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತ ದುರಂತಗಳು ಗೋಹತ್ಯೆಯ ನೇರ ಪರಿಣಾಮವಾಗಿದೆ. ಕೇರಳದಲ್ಲಿ ಗೋಹತ್ಯೆಯ ಚಟುವಟಿಕೆಗಳನ್ನು ನಿಲ್ಲಿಸದೇ ಹೋದಲ್ಲಿ ಇದೇ ರೀತಿಯ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶಗಳಂತಹ ಭಾಗಗಳಲ್ಲಿ ಕೂಡ ಮೇಘ ಸ್ಫೋಟ ಹಾಗೂ ಭೂ ಕುಸಿತದಂತಹ ನೈಸರ್ಗಿಕ ವಿಕೋಪಗಳು ಪದೇ ಪದೇ ಸಂಭವಿಸುತ್ತಲೇ ಇರುತ್ತವೆ. ಆದರೆ ಕೇರಳದಲ್ಲಿ ಸಂಭವಿಸಿದ ಘಟನೆಯಷ್ಟು ವಿನಾಶಕಾರಿ ಪರಿಣಾಮ ಅವು ಉಂಟುಮಾಡುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    2018ರಿಂದಲೂ, ಗೋ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವ ಪ್ರದೇಶಗಳಲ್ಲಿ ಅಂತಹ ದುರಂತ ಘಟನೆಗಳು ನಡೆಯುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಗೋ ಹತ್ಯೆ ತಡೆ ನಡೆಯದೇ ಹೋದರೆ, ಕೇರಳದಲ್ಲಿ ಇದೇ ರೀತಿಯ ಘಟನೆಗಳು ಮುಂದೆಯೂ ನಡೆಯುತ್ತಲೇ ಇರುತ್ತವೆ ಎಂದು ಅಹುಜಾ ಎಚ್ಚರಿಕೆ ನೀಡಿದ್ದಾರೆ.

  • 104 ಸಂಭವನೀಯ ಭೂಕುಸಿತ, ಪ್ರವಾಹ ಪ್ರದೇಶಗಳ ಗುರುತು – 2,995 ಕುಟುಂಬಗಳ ಸ್ಥಳಾಂತರಕ್ಕೆ ಪ್ಲ್ಯಾನ್‌

    104 ಸಂಭವನೀಯ ಭೂಕುಸಿತ, ಪ್ರವಾಹ ಪ್ರದೇಶಗಳ ಗುರುತು – 2,995 ಕುಟುಂಬಗಳ ಸ್ಥಳಾಂತರಕ್ಕೆ ಪ್ಲ್ಯಾನ್‌

    ಮಡಿಕೇರಿ: ದೇವರನಾಡು ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಜಲಸ್ಫೋಟ-ಗುಡ್ಡ ಕುಸಿತದ (Wayanad Landslides) ನಂತರ ಕೊಡಗು (Kodagu) ಜಿಲ್ಲೆಯಲ್ಲೂ ಆತಂಕದ ಕರಿಛಾಯೆ ಆವರಿಸಿದೆ. 2018ರಲ್ಲಿ ಸಂಭವಿಸಿದ ದುರಂತಗಳು ಕಣ್ಣ ಮುಂದೆ ಬರುತ್ತಿವೆ. ‘ಗುಡ್ಡದ ಭೂತ’ದ ಭಯವೂ ಮೂಡಿದೆ. ಮುಂಗಾರು ಅಬ್ಬರಿಸಿ ಬೊಬ್ಬಿರಿಯುತ್ತಿರುವುದರಿಂದ ಮುಂಜಾಗ್ರತ ಕ್ರಮವಾಗಿ ಬೆಟ್ಟ-ಗುಡ್ಡ, ನದಿ ಅಂಚಿನಲ್ಲಿ ಸೇರಿದಂತೆ ಅಪಾಯದ ಸ್ಥಳದಲ್ಲಿ ನೆಲೆನಿಂತಿರುವವರ ಸ್ಥಳಾಂತರ ಒಂದೇ ಪರಿಹಾರ ಎಂಬ ಚರ್ಚೆಯೂ ಎದ್ದಿದೆ.

    ಕಳೆದ ಜು.31 ರಂದು ಕಂದಾಯ ಸಚಿವ ಕೃಷ್ಣಬೈರೇಗೌಡ (krishna byre gowda) ಅವರು ನೀಡಿರುವ ನಿರ್ದೇಶನವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ. ವಿಜ್ಞಾನಿಗಳ ವರದಿ, ಈ ಹಿಂದೆ ಅಪಾಯ ಸಂಭವಿಸಿದ ಪ್ರದೇಶಗಳ ಆಧಾರದಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ‘ಮ್ಯಾಪಿಂಗ್’ ಮಾಡಲಾಗಿದ್ದು, ಅಪಾಯದ ಸ್ಥಳದಲ್ಲಿರುವ 2,995 ಕುಟುಂಬಗಳು ಸ್ಥಳಾಂತರಕ್ಕೆಂದು ಗುರುತು ಮಾಡಲಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಹೆಮ್ಮೆ – ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ ಹೊಸ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ

    ಈಗಾಗಲೇ ಸುಮಾರು 313 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದ್ದು, ಸದ್ಯ 10 ಪರಿಹಾರ ಕೇಂದ್ರಗಳನ್ನು ಜಿಲ್ಲೆಯಲ್ಲಿ ತೆರೆಯಲಾಗಿದೆ. ಅಪಾಯದಲ್ಲಿರುವ ಕೆಲವರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಹಲವರು ತಮ್ಮ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಇದನ್ನೂ ಓದಿ: Karnataka Rain Alert: ಮಳೆ ಕಡಿಮೆಯಾದ್ರೂ ನಿಲ್ಲದ ಅವಾಂತರ; ಕರಾವಳಿಯಲ್ಲಿ ಅಪಾಯದ ಮಟ್ಟ ಮೀರಿದ ನದಿಗಳು

    ʻಆಗಸ್ಟ್ ಆಂತಕʼ
    ಜಿಲ್ಲೆಯಲ್ಲಿ ವಾಡಿಕೆಗಿಂತ 24% ಹೆಚ್ಚಿನ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ‘ಆಗಸ್ಟ್ ಆತಂಕ’ವೂ ಹುಟ್ಟಿಕೊಂಡಿದೆ. ಆಗಸ್ಟ್ ಬಂತೆಂದರೆ ಜಿಲ್ಲೆಯ ಜನರಲ್ಲಿ ಆತಂಕ, ದುಗುಡ ಹೆಚ್ಚಾಗುತ್ತದೆ. ಬಿರುಸಿನ ಮಳೆ, ಮೈಕೊರೆಯುವ ಚಳಿಯಲ್ಲಿಯೂ ಬೆವರುವಂತಹ ಭಯ ಸೃಷ್ಟಿಯಾಗುತ್ತದೆ. 2018 ಆಗಸ್ಟ್ 16 ರಂದು ಜಿಲ್ಲೆಯಲ್ಲಿ ಹಿಂದೆಂದು ಕಾಣದಂತೆ ಸುರಿದ ಮಹಾಮಳೆ, ಸಂಭವಿಸಿದ ಪ್ರಾಕೃತಿಕ ವಿಕೋಪ ಇವೆಕ್ಕಲ್ಲ ಕಾರಣವಾಗಿವೆ. ಈ ವರ್ಷವೂ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಅಪಾಯದಂಚಿನಲ್ಲಿರುವವರು ಮುಂದೇನು? ಎಂಬ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ.

    ವಯನಾಡಿನಲ್ಲಿ ನಡೆದ ದುರ್ಘಟನೆಯ ನಂತರ ಗುಡ್ಡ, ನದಿಯಂಚಿನಲ್ಲಿ ವಾಸಿಸುತ್ತಿರುವವರನ್ನು ಮಳೆಗಾಲದ ಸಂದರ್ಭದಲ್ಲಿ ಸ್ಥಳಾಂತರಿಸಬೇಕೆಂಬ ಚರ್ಚೆ ಮುನ್ನಲೆಗೆ ಬಂದಿದೆ. ‘ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ’ ವಿಪತ್ತು ಸಂಭವನೀಯ ಪ್ರದೇಶಗಳ ಪಟ್ಟಿ ನೀಡಿದೆ. ಇದರೊಂದಿಗೆ ಈ ಹಿಂದೆ ಪ್ರಕೃತಿ ದುರಂತ ಸಂಭವಿಸಿದ ಪ್ರದೇಶಗಳನ್ನು ಸೇರಿಸಿ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿ ಅಂತಿಮಗೊಳಿಸಿರುವ ಜಿಲ್ಲಾಡಳಿತ ಸ್ಥಳಾಂತರ ಮಾಡಬೇಕಾದ ಕುಟುಂಬಗಳನ್ನು ಪಟ್ಟಿ ಮಾಡಿಕೊಂಡಿದೆ.

    2,995 ಕುಟುಂಬಗಳ ಗುರುತು
    104 ಸಂಭವನೀಯ ವಿಪತ್ತು ಪ್ರದೇಶಗಳ 2,995 ಕುಟುಂಬಗಳನ್ನು ಗುರುತಿಸಲಾಗಿದೆ. ಇವರೆಲ್ಲ ಸ್ಥಳಾಂತರ ಪಟ್ಟಿಯಲ್ಲಿದ್ದು, ಯಾವ ಕ್ಷಣದಲ್ಲಾದರೂ ಸ್ಥಳಾಂತರ ಮಾಡುವ ಸಾಧ್ಯತೆ ಇದೆ. ಅಪಾಯದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನೋಟಿಸ್ ನೀಡಿ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಕೆಲವರು ಸಂಬಂಧಿಕರ ಮನೆಗಳಲ್ಲಿ ನೆಲೆನಿಂತಿದ್ದಾರೆ. ಹಲವರು ಅಪಾಯದ ನಡುವೆಯೇ ಜೀವನ ಮುಂದುವರಿಸಿದ್ದಾರೆ ಸ್ಥಳಾಂತರವಾಗಿ ಎಂದರೆ ಎಲ್ಲಿಗೆ ಹೋಗುವುದು? ಎಂಬ ಪ್ರಶ್ನೆಯನ್ನು ನಿವಾಸಿಗಳು ಮಾಡುತ್ತಿದ್ದಾರೆ.

    ಹೆಚ್ಚುವರಿ 95 ಕಾಳಜಿ ಕೇಂದ್ರ:
    ಸಂಭವನೀಯ ವಿಪತ್ತು ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರ ತೆರೆಯುವ ಸಂಬಂಧವೂ ಸ್ಥಳವನ್ನು ಜಿಲ್ಲಾಡಳಿತ ಗುರುತು ಮಾಡಿಟ್ಟುಕೊಂಡಿದೆ. ಸದ್ಯ 10 ಕಾಳಜಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 95 ಕಡೆಗಳಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆಯಾಗಿದೆ. ಆದರೆ, ಜಾನುವಾರುಗಳಿಗೆ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂಬ ದೂರಿದೆ. ಈ ಬಗ್ಗೆಯೂ ಜಿಲ್ಲಾಡಳಿತ ಕ್ರಮವಹಿಸಬೇಕಾಗಿದೆ. ಒಟ್ಟಾರೆಯಾಗಿ ಪ್ರತಿ ಮಳೆಗಾಲದಲ್ಲಿಯೂ ಗ್ರಾಮೀಣ ಪ್ರದೇಶಗಳ ಜನತೆ ಭೂಕುಸಿತ, ಪ್ರವಾಹದ ಭಯದಲ್ಲಿ ದಿನದೂಡಬೇಕಾದ ಪರಿಸ್ಥಿತಿ ಬಂದಿದ್ದು, ಪ್ರಕೃತಿ ಮುನಿಯದಿರಲಿ ಎಂಬ ಪ್ರಾರ್ಥನೆ ಮೊಳಗುತ್ತಿದೆ.

  • ವಯನಾಡಿನಲ್ಲಿ ಸಾವಿನ ಸುರಿ`ಮಳೆ’ – ಗುರುತು ಸಿಗದಷ್ಟು ಛಿದ್ರಗೊಂಡಿರುವ ದೇಹಗಳು; ಶವಗಳ ಶೋಧಕ್ಕೆ ಶ್ವಾನಪಡೆ!

    ವಯನಾಡಿನಲ್ಲಿ ಸಾವಿನ ಸುರಿ`ಮಳೆ’ – ಗುರುತು ಸಿಗದಷ್ಟು ಛಿದ್ರಗೊಂಡಿರುವ ದೇಹಗಳು; ಶವಗಳ ಶೋಧಕ್ಕೆ ಶ್ವಾನಪಡೆ!

    – 20 ಅಡಿ ಆಳದಲ್ಲಿ ಹೂತುಹೋಗಿರುವ ಗ್ರಾಮ, 340ರ ಗಡಿ ದಾಟಿದ ಸಾವಿನ ಸಂಖ್ಯೆ

    ವಯನಾಡು: ಭೀಕರ ಭೂಕುಸಿತಕ್ಕೆ (Wayanad Landslides) ದೇವರನಾಡೇ ನಲುಗಿ ಹೋಗಿದೆ. ಸಾವಿನ ಸುರಿʻಮಳೆʼಗೆ ವಯನಾಡಲ್ಲಿ ಮೃತರ ಸಂಖ್ಯೆ 340ರ ಗಟಿ ದಾಟಿದ್ದು, 5ನೇ ದಿನಕ್ಕೆ ಸೇನಾ ಕಾರ್ಯಾಚರಣೆ ಕಾಲಿಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ ವೈದ್ಯರೇ (Doctors) ಸುಸ್ತಾಗಿದ್ದಾರೆ. ಘಟನಾ ಸ್ಥಳಗಳಲ್ಲಿ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ.

    ಭೂಕುಸಿತ, ಪ್ರವಾಹಕ್ಕೆ ಛಿದ್ರಗೊಂಡಿರುವ ದೇಹಗಳು ಘಟನೆಯ ಭೀಕರತೆ ಬಿಚ್ಚಿಡುತ್ತಿವೆ. ಚಲಿಯಾರ್ ನದಿಯಲ್ಲೇ 135ಕ್ಕೂ ಹೆಚ್ಚು ದೇಹಗಳ ಅಂಗಾಂಗಳು ಪತ್ತೆಯಾಗಿವೆ. ಯಾರ ದೇಹ ಯಾರದ್ದು ಅನ್ನೋದೇ ತಿಳಿಯದಂತಹ ಪರಿಸ್ಥಿತಿ. ಪ್ರವಾಹದ (Flood) ರಭಸಕ್ಕೆ ದೇಹಗಳು ನಜ್ಜುಗುಜ್ಜಾಗಿ ಹೋಗಿವೆ. ದುರಂತ ಸ್ಥಳದ ಒಂದೊಂದು ದೃಶ್ಯಗಳು ಕಣ್ಣೀರು ತರಿಸುತ್ತೆ.

    ಮುಂಡಕ್ಕೈ, ಚೂರಲ್‌ಮಲದಲ್ಲಿ (Chooralmala) ಸೇನಾ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ (ಆ.3ರಂದು) ಸಹ 3 ಸಾವಿರ ಜನರು ಶವಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಬಂಡೆಗಳ ಕೆಳಗೆ, ಕೆಸರು, ಕಾಡಿನ ಅಂಚಿನಲ್ಲಿ ಶೋಧ ನಡೆಸ್ತಿದ್ದು, 50ಕ್ಕೂ ಹೆಚ್ಚು ಜೆಸಿಬಿಗಳು ಕಾರ್ಯಾಚರಣೆಗಿಳಿದಿವೆ. ಕೆಲ ಗ್ರಾಮಗಳು 20 ಅಡಿ ಆಳದಲ್ಲಿ ಹೂತು ಹೋಗಿರುವ ಕಾರಣ ಅಲ್ಲಿಂದ ಶವಗಳ ಹೊರ ತೆಗೆಯಲು ಭಾರೀ ಸಂಖ್ಯೆಯಲ್ಲಿ ಜೆಸಿಬಿಗಳ ಬಳಸಲಾಗುತ್ತಿದೆ. ನಾಪತ್ತೆಯಾಗಿರುವ 250ಕ್ಕೂ ಹೆಚ್ಚು ಜನರಿಗಾಗಿ ಶೋಧ ಕಾರ್ಯ ಭರದಿಂದ ಸಾಗುತ್ತಿದೆ.

    Wayanad landslides

    30 ಶವ ಪತ್ತೆ ಹಚ್ಚಿರುವ `ಡಿಕ್ಸಿʼ:
    ಇನ್ನು ದುರಂತ ಸ್ಥಳ ಚೂರಲ್‌ಮಲ ಭಾಗದಲ್ಲಿ ಉತ್ತರ ಪ್ರದೇಶದ ಮೇರಠ್‌ನಿಂದ ಬಂದಿರುವ ಶ್ವಾನಗಳು ಮೃತದೇಹಗಳ ಹುಡುಕಾಟದಲ್ಲಿ ತೊಡಗಿವೆ. ಈಗಾಗಲೇ 30 ಶವಗಳನ್ನು ಪತ್ತೆ ಹಚ್ಚಿದ್ದು, ಡಿಕ್ಸಿ ಹೆಸರಿನ ಶ್ವಾನ ಇದಕ್ಕೆ ಎಕ್ಸ್‌ಪರ್ಟ್‌ ಆಗಿದೆ. ಈ ಮಧ್ಯೆ ಮುಂಡಕೈ ಗ್ರಾಮಕ್ಕೆ ನಟ ಹಾಗೂ ಸೇನಾಧಿಕಾರಿ ಮೋಹನ್ ಲಾಲ್ ಭೇಟಿ ನೀಡಿ ದುರಂತ ಸ್ಥಳ ವೀಕ್ಷಿಸಿದ್ದಾರೆ.

    ಕೇರಳದ (Kerala) ವಯನಾಡಿನಲ್ಲಿ ಭಯಾನಕ ಭುಕುಸಿತ ಸಂಭವಿಸಿ 5 ದಿನವಾದರೂ ಸಾವಿನ ಕೇಕೆ, ಸಂತ್ರಸ್ತರ ಆಕ್ರಂದನ ನಿಂತಿಲ್ಲ. ಈ ನಡುವೆ ಗುಡ್ಡ ಕುಸಿತವಾದ ಮೊದಲ ಸ್ಥಳದ ದೃಶ್ಯಗಳು ಡ್ರೋನ್ ಕಣ್ಣಲ್ಲಿ ಸೆರೆಯಾಗಿವೆ. ಬೆಟ್ಟದ ಮೇಲಿನಿಂದ ಭೂಕುಸಿತ ಆರಂಭವಾಗಿತ್ತು. ಬೆಟ್ಟದ ಸಾಲುಗಳಿಂದ ನೀರು ಹರೀತಿದೆ. ಅಕ್ಕ-ಪಕ್ಕ ಹಸಿರಿನ ರಾಶಿಯನ್ನೇ ಆವರಿಸಿರುವ ಬೆಟ್ಟ ಸಾವಿನ ಗುಡ್ಡವಾಗಿ ಪರಿಣಮಿಸಿದ ಆರಂಭದ ದೃಶ್ಯಗಳು ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಇನ್ನೂ ವಯನಾಡಿನಲ್ಲಿ ಮತ್ತೆ ಭಾರೀ ಮಳೆಯ ಆತಂಕ ಎದುರಾಗಿದ್ದು, ವಯನಾಡು, ಕೋಝಿಕ್ಕೋಡ್, ಕಣ್ಣೂರು ಕಾಸರಗೋಡು ಜಿಲ್ಲೆಗಳಲ್ಲಿ ಆಗಸ್ಟ್ 7ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿರುಗಾಳಿ ಸಹಿತ 65 ಮಿಲಿಮೀಟರ್‌ನಿಂದ 115 ಮಿಲಿಮೀಟರ್‌ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

  • Wayanad Landslides | ಪ್ರತಿ ವರ್ಷ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು

    Wayanad Landslides | ಪ್ರತಿ ವರ್ಷ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು

    ತಿರುವನಂತಪುರಂ: ವಯನಾಡು ಜಲ ಪ್ರಳಯಕ್ಕೆ (Wayanad Landslides) ಅರಣ್ಯ ನಾಶ, ಅಕ್ರಮ ರೆಸಾರ್ಟ್‌ಗಳು ಕಾರಣ ಎಂದು ವಿಜ್ಞಾನಿಗಳು ತಿಳಿಸುತ್ತಿದ್ದರೂ ಈ ಅಂಶಗಳಿಗೆ ಪುಷ್ಟಿ ನೀಡುವ ಹಲವಾರು ವಿಚಾರಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ.

    ಭೂಕುಸಿತ ಸಂಭವಿಸಿದ ಮೆಪ್ಪಾಡಿ (Meppadi) ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಅಂದಾಜು 380 ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಸ್ಥಳೀಯ ಸಂಸ್ಥೆಯಿಂದ ನೋಂದಾಯಿಸಲ್ಪಟ್ಟ ವಸತಿ ಮತ್ತು ವಸತಿಯೇತರ ಕಟ್ಟಡಗಳು ಸೇರಿದಂತೆ 380 ಕ್ಕೂ ಹೆಚ್ಚು ಕಟ್ಟಡಗಳು ಪ್ರತಿ ವರ್ಷ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿವೆ. ಇದನ್ನೂ ಓದಿ:ಮಹಿಳೆಗೆ ಮಳೆ ನೀರು ಎರಚಿ ಕಿರುಕುಳ; ಯುಪಿಯಲ್ಲಿ ಪೊಲೀಸ್‌ ಠಾಣೆಯ ಎಲ್ಲಾ ಸಿಬ್ಬಂದಿ ಅಮಾನತು

    ಯಾವ ವರ್ಷ ಎಷ್ಟು?
    ಮೆಪ್ಪಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ 2016-17 ರಲ್ಲಿ 385 ಹೊಸ ಕಟ್ಟಡಗಳು ತಲೆ ಎತ್ತಿದ್ದರೆ 2017-18ರ ಅವಧಿಯಲ್ಲಿ  ಈ ಸಂಖ್ಯೆ 406ಕ್ಕೆ ಏರಿಕೆಯಾಗಿತ್ತು. 2018-19 ರ ಅವಧಿಯಲ್ಲಿ 338 ಆಗಿದ್ದರೆ 2019-20 ರಲ್ಲಿ 366 ಕಟ್ಟಡ ನಿರ್ಮಾಣವಾಗಿತ್ತು. ಕೋವಿಡ್‌ನಿಂದಾಗಿ 2020-21 ರಲ್ಲಿ ಈ ಸಂಖ್ಯೆ 225ಕ್ಕೆ ಇಳಿಕೆಯಾಗಿದ್ದರೆ 2021-22 ರಲ್ಲಿ ಇದು 431ಕ್ಕೆ ಏರಿಕೆಯಾಗಿತ್ತು.

    ವಯನಾಡು ಜಿಲ್ಲೆಯಲ್ಲಿ 2016-17 ರಲ್ಲಿ10,471 ಹೊಸ ಕಟ್ಟಡಗಳು ನಿರ್ಮಾಣವಾಗಿದ್ದರೆ 2021-22 ರಲ್ಲಿ ಇದು 12,171ಕ್ಕೆ ಏರಿತ್ತು. ಈಗ ಸಿಕ್ಕಿರುವ ಮಾಹಿತಿ 2021-22 ವರೆಗೆ ಮಾತ್ರ. ಕಳೆದ ವರ್ಷ ಮತ್ತು ಈ ವರ್ಷದ ಮಾಹಿತಿ ಲಭ್ಯವಾಗಿಲ್ಲ. ಇದನ್ನೂ ಓದಿ:ಕ್ಷಿಪ್ರಗತಿಯ ಸೇತುವೆ ನಿರ್ಮಾಣ ಕಾರ್ಯಾಚರಣೆಯಲ್ಲಿ ಮಹಿಳಾ ಸೇನಾಧಿಕಾರಿಯ ಸಾಹಸಗಾಥೆ!

    ವಯನಾಡು ಪ್ರಕೃತಿ ಸೌಂದರ್ಯದ ಬೀಡಾಗಿರುವ ಕಾರಣ ಪ್ರವಾಸೋದ್ಯಮ (Tourism) ದೊಡ್ಡ ಅದಾಯದ ಮೂಲ. ಮೆಪ್ಪಾಡಿ ಪಂಚಾಯತ್‌ ವ್ಯಾಪ್ತಿಯಲ್ಲಿ 44 ಅಕ್ರಮ ರೆಸಾರ್ಟ್‌ಗಳು (Illegal Resorts) ತಲೆ ಎತ್ತಿವೆ ಎಂದು ವರದಿ ತಿಳಿಸಿದೆ.

    ಸೋಮವಾರವೂ ಮುಂಡಕ್ಕೈಗೆ (Mundakai) ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಹಿಂಬಾಲಿಸಿದ್ದ ಪಂಚಾಯತ್ ಅಧಿಕಾರಿಗಳು ಭಾರೀ ಮಳೆಯ ಕಾರಣ ನೀಡಿ ಬಲವಂತವಾಗಿ ವಾಪಸ್ ಕಳುಹಿಸಿದ್ದರು.

     

    ಮುಂಡಕ್ಕೈನಲ್ಲಿ ಮೊದಲು ಕಾಡಾನೆಗಳು ಮತ್ತು ಇತರ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದವು. ಆದರೆ ರೆಸಾರ್ಟ್‌ ನಡೆಸುವ ವ್ಯಕ್ತಿಗಳು ಪಟಾಕಿ ಸಿಡಿಸುವ ಮೂಲಕ ಮತ್ತು ರಬ್ಬರ್ ಗುಂಡುಗಳನ್ನು ಹಾರಿಸುವ ಮೂಲಕ ಓಡಿಸುತ್ತಿದ್ದಾರೆ.

    ಅಧ್ಯಯನಗಳ ಪ್ರಕಾರ 1950 ರವರೆಗೆ ವಯನಾಡು ಜಿಲ್ಲೆಯ 85% ಭಾಗ ಅರಣ್ಯ ವಾಪ್ತಿಯಲ್ಲಿತ್ತು. 2018ರ ವೇಳೆಗೆ 62% ಅರಣ್ಯ ನಾಶವಾಗಿದೆ. ಪ್ರವಾಸೋದ್ಯಮಕ್ಕೆ ಆದ್ಯತೆ ಮತ್ತು ಟೀ ತೋಟ ನಿರ್ಮಿಸಲು ಕಾಡಿನಲ್ಲಿದ್ದ ಮರಗಳನ್ನು ಕಡಿಯಲಾಗಿದೆ. ಪ್ರಶ್ನೆ ಮಾಡಿದರೆ ರೆಸಾರ್ಟ್‌ ಮಾಲೀಕರು ಬೆದರಿಕೆ ಒಡ್ಡುತ್ತಾರೆ ಎಂದು ವರದಿಯಾಗಿದೆ.

  • ವಯನಾಡು ಭೂಕುಸಿತ; ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬೆಟ್ಟದಲ್ಲಿ ಕಾವಲಾಗಿ ನಿಂತ ಗಜರಾಜ

    ವಯನಾಡು ಭೂಕುಸಿತ; ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಬೆಟ್ಟದಲ್ಲಿ ಕಾವಲಾಗಿ ನಿಂತ ಗಜರಾಜ

    ಕೇರಳ/ವಯನಾಡು: ವಯನಾಡು ಭೀಕರ ಭೂಕುಸಿತದಿಂದ (Wayanad Landslides) ಇಡೀ ಊರಿಗೆ ಊರೇ ಸ್ಮಶಾನವಾಗಿತ್ತು. ಇತ್ತ ಸಾಗಬೇಕಾದ ದಿಕ್ಕು ಗೊತ್ತಿಲ್ಲ. ಸಾವು ಕಣ್ಮುಂದೆ ಕೈಚಾಚಿ ನಿಂತಾಗ ಮನಕಲಕುವ ಸನ್ನಿವೇಶವೊಂದು ನಡೆದಿದೆ. ದೇವರ ರೂಪದಲ್ಲಿ ಬಂದ ಗಜರಾಜ ಮುಂಡಕೈ ನಿವಾಸಿ ಸುಜಾತ ಹಾಗೂ ಕುಟುಂಬಕ್ಕೆ ಇಡೀ ರಾತ್ರಿ ಕಾವಲಾಗಿತ್ತು. ಇದು ಆಶ್ಚರ್ಯ ಎನಿಸಿದರು ಸತ್ಯ. ಈ ಕುರಿತು ಖುದ್ದು ಸುಜಾತ ಅವರೇ ಸ್ಥಳೀಯರೊಬ್ಬರಿಗೆ ಮಾಹಿತಿ ನೀಡಿದ್ದಾರೆ.

    ವಯನಾಡು ಭೂಕುಸಿತದಲ್ಲಿ ಇಡೀ ಊರಿಗೆ ಊರೇ ಮಣ್ಣು ಪಾಲಾದರೂ ಈ ಕುಟುಂಬ ಬದುಕಿದ್ದು ಮಾತ್ರ ರೋಚಕ. ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಆ ಕರಾಳ ರಾತ್ರಿ ಬೆಟ್ಟದಲ್ಲಿ ಗಜರಾಜ ಕಾವಲಾಗಿ ನಿಂತಿದ್ದಾನೆ. ಸಾವಿನ ದವಡೆಯಿಂದ ಪಾರಾಗಿ ಬಂದ ವೃದ್ಧೆ ಸುಜಾತ ಈ ಕುರಿತು ಸ್ಥಳೀಯರೊಬ್ಬರಿಗೆ ಮಾಹಿತಿ ಕೊಟ್ಟಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಆಡಿಯೋದಲ್ಲಿ ಏನಿದೆ?
    ರಾತ್ರಿ 4 ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದರಿಂದ, ಮಧ್ಯರಾತ್ರಿ 1:15ಕ್ಕೆ ಎಚ್ಚರವಾಯಿತು. ದೊಡ್ಡ ಶಬ್ದ ಕೇಳಿಸಿದ ಬೆನ್ನಲ್ಲೇ ನಮ್ಮ ಮನೆಗೆ ನೀರು ನುಗ್ಗಿತು. ನಾವೆಲ್ಲರೂ ಹಾಸಿಗೆಯ ಮೇಲೆ ಕುಳಿತೆವು. ಆಗ ನಮ್ಮ ನೆರೆಹೊರೆಯವರ ಮನೆಗಳ ಅವಶೇಷಗಳ ಜೊತೆಗೆ ದೊಡ್ಡ ಮರದ ದಿಮ್ಮಿಗಳು ಮನೆಯ ಮೇಲೆ ಬಡಿಯುತ್ತಿದ್ದವು. ನಮ್ಮ ಮನೆಯ ಮೇಲ್ಛಾವಣಿ ನಮ್ಮ ಮೇಲೆ ಕುಸಿದು ಬಿದ್ದಿದ್ದು, ನನ್ನ ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ. ಗುಡ್ಡ ಜರಿದು ಮನೆ ಉರುಳಿ ಬಿದ್ದಾಗ ಮನೆಯ ಚಿಮಿಣಿಯಲ್ಲಿ ಸ್ವಲ್ಪ ಜಾಗ ಕಾಣಿಸಿತು. ನಾನು ಇಟ್ಟಿಗೆ ರಾಶಿಯನ್ನು ಸರಿಸಿ ಜಾಗ ಮಾಡಿಕೊಂಡು ಮಗಳು, ಮೊಮ್ಮಗಳು, ಅಳಿಯ ಎಲ್ಲರೂ ಹೊರ ಬಂದು ಬೆಟ್ಟದ ಬಳಿ ಓಡಿದೆವು.

    ಹೇಗೋ ಒದ್ದಾಡಿ ಬೆಟ್ಟದ ಬಳಿಗೆ ಬಂದಾಗ ಅಲ್ಲಿ ದೊಡ್ಡ ಕಾಡಾನೆ ನಿಂತಿತ್ತು. ಆಗ ಆನೆ ಬಳಿ ನಿಂತು ಪ್ರಾರ್ಥನೆ ಮಾಡಿದೆವು. ಒಂದು ದೊಡ್ಡ ದುರಂತದಿಂದ ತಪ್ಪಿಸಿಕೊಂಡು ಬಂದಿದ್ದೇವೆ. ನೀನು ನಮಗೇನೂ ಮಾಡಬೇಡಪ್ಪಾ ಎಂದು ನಾನು ಆನೆಯ ಮುಂದೆ ನಿಂತು ಕಣ್ಣೀರು ಹಾಕಿದೆ. ಆನೆಯ ಕಣ್ಣಿನಿಂದಲೂ ನೀರು ಬಂತು. ರಾತ್ರಿ ಬೆಳಗಾಗುವವರೆಗೆ ನಾವು ಆನೆಯ ಕಾಲಿನ ಹತ್ತಿರವೇ ಸಮಯ ಕಳೆದೆವು. ರಾತ್ರಿ ಪೂರ್ತಿ ಮಳೆ, ಸರಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಯಾದಾಗ ಎಲ್ಲಿಂದಲೋ ಜನರು ಬಂದರು. ನಮ್ಮನ್ನು ಕಾಪಾಡಲು ನಮ್ಮ ಊರಿನವರು ಯಾರೂ ಬದುಕುಳಿದಿರಲಿಲ್ಲ. ಆಮೇಲೆ ದೂರದೂರಿನಿಂದ ಬಂದ ಜನರು ನಮ್ಮನ್ನು ಕಾಪಾಡಿ ಸುರಕ್ಷಿತ ಜಾಗಕ್ಕೆ ತಲುಪಿಸಿದರು ಎಂದು ಸುಜಾತ ತಿಳಿಸಿದ್ದಾರೆ.