Tag: Waves

  • ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿಗಳು ಪಲ್ಟಿ- ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿಗಳು ಪಲ್ಟಿ- ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದ ಹತ್ತಕ್ಕೂ ಹೆಚ್ಚು ಮೀನುಗಾರರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಂದರು ಬಳಿಯ ಅಳಿವೆ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.

    ಅಬ್ಬರದ ಮಳೆಯಿಂದಾಗಿ ಸಮುದ್ರದಲ್ಲಿ ಮೀನುಗಾರಿಕೆಗೆ ನಿರ್ಬಂಧವಿದ್ದರೂ, ಪಾತಿದೋಣಿ ಮೂಲಕ ಮೀನುಗಾರಿಕೆಗೆ ಐದಕ್ಕೂ ಹೆಚ್ಚು ದೋಣಿಗಳು ತೆರಳಿದ್ದವು. ಭಟ್ಕಳದಲ್ಲಿ ಭಾರೀ ಗಾಳಿ ಸಹಿತ ಅಬ್ಬರದ ಮಳೆಯಾಗಿದ್ದರಿಂದ ಮೀನುಗಾರರು ಅಲೆಯ ರಭಸಕ್ಕೆ ವಾಪಾಸ್ ಬರಲಾಗದೆ ತೊಂದರೆ ಗೊಳಗಾಗಿದ್ದರು. ಇನ್ನು ಹಲವು ಪಾತಿ ದೋಣಿಗಳು ಅಲೆಯ ಹೊಡೆತಕ್ಕೆ ಪಲ್ಟಿಯಾಗಿವೆ. ತಕ್ಷಣ ದಡದಲ್ಲಿದ್ದ ಸ್ಥಳೀಯ ಮೀನುಗಾರರು ಇದನ್ನು ಗಮನಿಸಿ ಗಿಲ್ನೆಟ್ ದೋಣಿ ಮೂಲಕ ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

    ರಕ್ಷಣೆಗೊಳಗಾದ ಮೀನುಗಾರರು ಭಟ್ಕಳದ ಮುಂಡಳ್ಳಿ, ಬೆಳ್ನಿ ಭಾಗದವರಾಗಿದ್ದಾರೆ.

    ರಕ್ಷಣೆಗೆ ಬಾರದ ಕರಾವಳಿ ಕಾವಲು ಪಡೆ!
    ಭಟ್ಕಳದಲ್ಲಿ ಕರಾವಳಿ ಕಾವಲು ಪಡೆ ಪೊಲಿಸರು ಇದ್ದಾರೆ. ಮೀನುಗಾರರಿಗೆ ತೊಂದರೆಯಾದಾಗ ಇವರನ್ನು ರಕ್ಷಣೆ ಮಾಡುವುದು ಕರಾವಳಿ ಕಾವಲುಪಡೆಯ ಕತ್ರ್ಯವ್ಯ. ಆದರೆ ಈ ವರೆಗೆ ಕಡಲಲ್ಲಿ ಏನಾದರು ತೊಂದರೆಗಳಾದಾಗ ರಕ್ಷಣೆ ಕೋರಿದರೂ ತಕ್ಷಣ ಸ್ಪಂದಿಸುವುದಿಲ್ಲ ಎಂಬುದು ಸ್ಥಳೀಯ ಮೀನುಗಾರರ ಆಕ್ರೋಶವಾಗಿದೆ. ಮೀನುಗಾರರಿಗೆ ಸಮುದ್ರದಲ್ಲಿ ಏನೇ ಆದರೂ ಮೀನುಗಾರರೇ ರಕ್ಷಣೆ ಮಾಡಿಕೊಳ್ಳಬೇಕಾದ ದೌರ್ಭಾಗ್ಯ ಇಲ್ಲಿನವರದ್ದಾಗಿದೆ.

    ಮೀನುಗಾರಿಕೆಗೆ ಇಲಾಖೆ ನಿರ್ಬಂಧ ವಿಧಿಸಿದೆ. ಆದರೂ ಸಂಪ್ರದಾಯಿಕ ಮೀನುಗಾರರು ಸಮುದ್ರ ಅಬ್ಬರದ ನಡುವೆ ದೋಣಿಗಳನ್ನು ಸಮುದ್ರದಲ್ಲಿ ಮೀನುಗಾರಿಕೆಗೆ ಉಪಯೋಗಿಸುತಿದ್ದಾರೆ. ಇಂತಹ ಸಂದರ್ಭದಲ್ಲಿ ಕರಾವಳಿ ಕಾವಲುಪಡೆ ಎಚ್ಚರಿಕೆ ನೀಡುವ ಅಥವಾ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಮೀನುಗಾರರು ದುರಂತಕ್ಕೊಳಗಾಗುತಿದ್ದಾರೆ.

  • ಮಳೆ ಅಬ್ಬರ ಕಡಿಮೆಯಾದರೂ ಸಮುದ್ರದಲ್ಲಿ ರಕ್ಕಸ ಅಲೆಗಳ ಹೊಡೆತ ನಿಂತಿಲ್ಲ

    ಮಳೆ ಅಬ್ಬರ ಕಡಿಮೆಯಾದರೂ ಸಮುದ್ರದಲ್ಲಿ ರಕ್ಕಸ ಅಲೆಗಳ ಹೊಡೆತ ನಿಂತಿಲ್ಲ

    – ಭಾರೀ ಪ್ರಮಾಣದ ಅಲೆಗಳ ಹೊಡೆತಕ್ಕೆ ಜನ ತತ್ತರ

    ಕಾರವಾರ: ಕರಾವಳಿಯಲ್ಲಿ ಮಳೆ ಅಬ್ಬರ ಕಡಿಮೆಯಾದರೂ ರಕ್ಕಸ ಅಲೆಗಳ ಹೊಡೆತಕ್ಕೆ ಕರಾವಳಿ ತೀರದ ಜನ ತತ್ತರಿಸಿದ್ದು, ಭಯಭೀತರಾಗಿದ್ದಾರೆ.

    ಕಡಲ ಅಬ್ಬರಕ್ಕೆ ಕಡಲ ತೀರ ಪ್ರದೇಶ ಭಾಗದ ರಾಜ್ಯದ ಪ್ರಸಿದ್ಧ ಇಕೋ ಬೀಚ್ ನ ಹಲವು ಭಾಗಗಳಿಗೆ ಹಾನಿಯಾಗಿದ್ದು, ಸಮುದ್ರದ ಅಲೆಗಳಿಗೆ ಮರಗಿಡಗಳು ಕೊಚ್ಚಿಹೋಗುತ್ತಿವೆ. ಕಾರವಾರ, ಹೊನ್ನಾವರದ ಕಡಲತೀರದಲ್ಲಿ ಕಡಲಕೊರತದಿಂದಾಗಿ ಭಾರೀ ಹಾನಿ ಸಂಭವಿಸಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಕಡಲ ಅಬ್ಬರದಿಂದಾಗಿ ಕಡಲ ಕೊರೆತ ಹೆಚ್ಚಾಗಿದ್ದು, ಜಿಲ್ಲೆಯ ಕಾರವಾರ, ಭಟ್ಕಳ, ಹೊನ್ನಾವರ ಭಾಗದ ಕಡಲ ತೀರ ಪ್ರದೇಶದಲ್ಲಿ ಗಜ ಗಾತ್ರದ ಅಲೆಗಳು ತೀರ ಪ್ರದೇಶಕ್ಕೆ ಅಪ್ಪಳಿಸುತ್ತಿವೆ. ಈ ಭಾಗದ ಪ್ರದೇಶಗಳಲ್ಲಿ ಕಡಲ ಕೊರೆತ ಪ್ರಾರಂಭವಾಗಿದ್ದು, ರಾಜ್ಯದ ಪ್ರಸಿದ್ಧ ಇಕೋ ಬೀಚ್ ಸೇರಿದಂತೆ ಹಲವು ಭಾಗಗಳಿಗೆ ಹಾನಿಯಾಗಿದೆ.

    ಸುಮಾರು 4-5 ಅಡಿಯ ಅಲೆಗಳು ಸಮುದ್ರದ ದಂಡೆಗೆ ಬಂದು ಹೊಡೆಯುತ್ತಿವೆ. ಇದರಿಂದಾಗಿ ದಡದಲ್ಲಿರುವ ಬೀಚ್‍ನ ಹಟ್‍ಗಳಿಗೆ ಹಾನಿಯಾಗಿದ್ದು, ಭೂ ಭಾಗ ಕೊಚ್ಚಿ ಹೋಗುತ್ತಿದೆ. ಇದರಿಂದಾಗಿ ಸ್ಥಳೀಯ ಜನರಲ್ಲಿ ಭಾರೀ ಆತಂಕ ಮನೆ ಮಾಡಿದೆ.

  • ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ- ಉಡುಪಿ, ಕಾಪು ಮೀನುಗಾರಿಕಾ ರಸ್ತೆಗೆ ಹಾನಿ

    ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ- ಉಡುಪಿ, ಕಾಪು ಮೀನುಗಾರಿಕಾ ರಸ್ತೆಗೆ ಹಾನಿ

    ಉಡುಪಿ: ಜಿಲ್ಲೆಯಲ್ಲಿ ಇಂದು ಮಳೆಯ ಅಬ್ಬರ ಕಮ್ಮಿ ಇದ್ದರೂ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ವಿಪರೀತವಾಗಿದೆ. ಇದರಿಂದ ಉಡುಪಿ- ಕಾಪು ಮೀನುಗಾರಿಕಾ ರಸ್ತೆಗೆ ಸಮುದ್ರದ ನೀರು ನುಗ್ಗಿದೆ.

    ಇಂದು ಮಧ್ಯಾಹ್ನದಿಂದ ಕಡಲು ಆರ್ಭಟ ಹೆಚ್ಚುತ್ತಿದ್ದು, ಇಂದು ಕೂಡ ಕಾಪು ತಾಲೂಕಿನ ಕಡೆಕಾರು ವ್ಯಾಪ್ತಿಯಲ್ಲಿ ಅರಬ್ಬಿ ಸಮುದ್ರದ ಅಲೆಗಳ ಅಬ್ಬರ ವಿಪರೀತವಾಗಿದೆ. ಹರಿದ ನೀರು ಮೀನುಗಾರಿಕಾ ರಸ್ತೆಯನ್ನು ದಾಟಿ ನದಿ ಸೇರಿದೆ. ಒಂದು ವಾರದಿಂದ ಜಿಲ್ಲೆಯಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿದೆ.

    ಪಶ್ಚಿಮಘಟ್ಟದ ತಪ್ಪಲಿನಲ್ಲಿ ಭಾರೀ ಮಳೆಯಾಗಿರುವುದರಿಂದ ನೀರು ಕರಾವಳಿ ಕಡೆ ಹರಿದುಬರುತ್ತಿದೆ. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಂತೆ, ಅರಬ್ಬಿ ಸಮುದ್ರದಲ್ಲಿ ಮೂರರಿಂದ ಐದು ಅಡಿ ಎತ್ತರದ ಅಲೆಗಳು ಮೇಲೇಳುವ ಸೂಚನೆಯಿದೆ. ಸ್ಥಳೀಯ ಮೀನುಗಾರರು ಮತ್ತು ಯುವಕರು ರಸ್ತೆಗೆ ಬಿದ್ದ ಕಲ್ಲು ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಸುಗಮ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

    ಪಡುಕೆರೆ ವ್ಯಾಪ್ತಿಯಲ್ಲಿ ಆಧುನಿಕ ಶೈಲಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದು, ಇದೇ ನಿರಂತರ ಕಡಲ್ಕೊರೆತಕ್ಕೆ ಕಾರಣ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರವನ್ನು ಅದರಷ್ಟಕ್ಕೆ ಬಿಡಬೇಕು. ಸಮುದ್ರಕ್ಕೆ ತಡೆಗೋಡೆ ಕಟ್ಟಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಸ್ಥಳೀಯ ಸೂರಜ್ ಸಾಲಿಯಾನ್ ಹೇಳಿದ್ದಾರೆ. ಮನೆಗಳಿರುವ ಪ್ರದೇಶದಲ್ಲಿ ಹೆಚ್ಚುವರಿ ಕಲ್ಲು ತಂದು ಹಾಕುವ ಪ್ರಕ್ರಿಯೆ ನಾಳೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.