Tag: watermelon

  • ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್ನ

    ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್ನ

    – ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿ ಸಹಾಯ

    ಯಾದಗಿರಿ: ಕೊರೊನಾದಿಂದಾಗಿ ದೇಶವೇ ಲಾಕ್‍ಡೌನ್ ಆಗಿದ್ದು, ಬೆಳೆದ ಹಣ್ಣುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ರೈತರಿಗೂ ಸಂಕಷ್ಟ ಎದುರಗಿದ್ದು, ಪಬ್ಲಿಕ್ ಟಿವಿ ಮನವಿ ಮೇರೆಗೆ ಜಿಲ್ಲೆಯ ಖಾಸಗಿ ವೈದ್ಯ ಮತ್ತು ಗುತ್ತಿಗೆದಾರ ಸ್ಪಂದಿಸುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

    ಸಂಕಷ್ಟದಲ್ಲಿರುವ ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ನೆರವಾಗಲು ರಾಜ್ಯದಲ್ಲಿಯೇ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಗೆ ಸಿಲುಕಿ, ಸಾರಿಗೆ ಮತ್ತು ಸರಿಯಾದ ಮಾರುಕಟ್ಟೆ ಇಲ್ಲದೆ ಬೆಳೆದ ಬೆಳೆ ಕಳೆದುಕೊಳ್ಳುತ್ತಿರುವ ರೈತರಿಗೆ, ವೈದ್ಯ ವಿರೇಶ್ ಜಾಕಾ ಮತ್ತು ಗುತ್ತಿಗೆದಾರ ಬಸವರಾಜ್ ಸಹಾಯ ಹಸ್ತಚಾಚಿದ್ದಾರೆ. ರೈತರರಿಂದ ಹಣ್ಣುಗಳನ್ನು ಖರೀದಿಸಿ ಬಡ ಮತ್ತು ನಿರ್ಗತಿಕರಿಗೆ ಉಚಿತ ಊಟದ ಜೊತೆ ಹಣ್ಣು ವಿತರಣೆ ಮಾಡಲು ಮುಂದಾಗಿದ್ದಾರೆ. ಇದರಿಂದ ಸಂಕಷ್ಟದಲ್ಲಿರುವ ರೈತರಿಗೆ ವ್ಯಾಪಾರ ಮತ್ತು ನಿರ್ಗತಿಕರಿಗೆ ಆರೋಗ್ಯ ಲಭ್ಯವಾಗುತ್ತಿದೆ.

    ಜಿಲ್ಲೆಯ ಖಾನಾಪುರ ಗ್ರಾಮದ ರೈತ ನಾಗಪ್ಪ 6 ಎಕರೆ ಹೊಲದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಲಾಕ್ ಡೌನ್ ಹಿನ್ನೆಲೆ ಬೆಳೆ ಸಾಗಿಸಲು ಸಕಾಲಕ್ಕೆ ಸಾರಿಗೆ ಮತ್ತು ಮಾರುಕಟ್ಟೆ ವ್ಯವಸ್ಥೆ ಇರಲಿಲ್ಲ. ಇದರಿಂದ ನಾಗಪ್ಪ ಅವರ 4 ಎಕರೆ ಕಲ್ಲಂಗಡಿ ಮಣ್ಣು ಪಾಲಾಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಈಗ ಉಳಿದಿರುವ 2 ಎಕರೆ ಕಲ್ಲಂಗಡಿ ಖರೀದಿಗೆ ಮುಂದಾದ ವೈದ್ಯ ಮತ್ತು ಗುತ್ತಿಗೆದಾರ, ಸುಮಾರು 10 ಕ್ವಿಂಟಲ್ ಕಲ್ಲಂಗಡಿ ಖರೀದಿ ಮಾಡಿ ನಿರ್ಗತಿಕರಿಗೆ ಹಂಚಿಕೆ ಮಾಡುತ್ತಿದ್ದಾರೆ. ಈ ಇಬ್ಬರು ಕಳೆದ 15 ದಿನಗಳಿಂದ ಉಚಿತ ಊಟ ನೀಡುತ್ತಿದ್ದು, ಈಗ ಇಂತಹ ವಿನೂತನ ಪ್ರಯತ್ನದ ಮೂಲಕ ಜಿಲ್ಲೆಯ ರೈತರ ಸಂಕಷ್ಟಕ್ಕೆ ನೇರವಾಗುತ್ತಿದ್ದಾರೆ. ವೈದ್ಯ ಮತ್ತು ಗುತ್ತಿಗೆದಾರನ ಕಾರ್ಯಕ್ಕೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.

  • ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    – ಆನ್‍ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ
    – ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ

    ವಿಜಯಪುರ: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಈ ಚಟುವಟಿಕೆಗಳು ಜೂನ್ ನಂತರ ಪ್ರಾರಂಭವಾಗಲಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆನ್‍ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. ರೈತರು, ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರಿಂದ ಅಗತ್ಯ ಮಾಹಿತಿ ಪಡೆದ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು.

    ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಈ ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ಕಡಲೇ ಖರೀದಿಗೆ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದರು.

    ದ್ರಾಕ್ಷಿ ಬೆಳೆಗಾರರು ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ದ್ರಾಕ್ಷಿ ಆನ್‍ಲೈನ್ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಡಕುಗಳಿದ್ದರೂ ನಿವಾರಿಸಲು ಜಿಲ್ಲಾಧಿಕಾರಿಗೆ ಕೃಷಿ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕಿಡಿಗೇಡಿಗಳು ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸುಳ್ಳು, ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.

    ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಅವರಿಂದ ಮಾಹಿತಿಗಳನ್ನು ಪಡೆಯಲಾಗಿದೆ. ಆದ್ದರಿಂದ ಭೀತಿಯಿಲ್ಲದೇ ಈ ಹಣ್ಣುಗಳ ಸೇವನೆ ಮಾಡುವಂತೆ ಸಚವರು ಸಲಹೆ ನೀಡಿದರು. ಕಲ್ಲಂಗಡಿ ತಿಂದರೆ ಕೊರೊನಾ ಬರುತ್ತೆ ಅಂತ ಅಪಪ್ರಚಾರ ಮಾಡಲಾಗಿದೆ. ಹಾಗಾಗಿ ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಒಂದು ಮೂಲದ ಪ್ರಕಾರ, ಕಲ್ಲಂಗಡಿ ಹಾಗೂ ಸವತೆಕಾಯಿ ತಿಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಯಾರೂ ಭಯಪಡಬಾರದು. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ಹಿಂದುಮುಂದು ನೋಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ಹಾಪ್ ಕಾಮ್ಸ್ ನಲ್ಲಿ ತರಕಾರಿ, ಹಣ್ಣು, ಮೊಟ್ಟೆ ಮಾರಾಟಕ್ಕೆ ಸೂಚಿಸಲಾಗಿದೆ. ರೈತರೆಲ್ಲ ಹೆದರಬಾರದು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

    ಹಾಗೆಯೇ ಯಾರಾದರೂ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವುದಾಗಲೀ, ಪಡೆದುಕೊಂಡಿದ್ದಾಗಲಿ ತಮ್ಮ ಗಮನಕ್ಕೆ ಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮಜರುಗಿಸ ಬೇಕಾಗುತ್ತದೆ ಎಂದು ಕೃಷಿ ಸಚಿವರು ಖಡಕ್ ಎಚ್ಚರಿಕೆ ನೀಡಿದರು.

    ತಾವು ಹಾಗೂ ಸರ್ಕಾರ ರೈತರ ಜೊತೆಗೆ ಇದ್ದೇವೆ. ರೈತರು ಹತಾಶರಾಗಬಾರದು. ಕೊರೊನಾ ಹಾವಳಿ ಆದಷ್ಟು ಬೇಗ ಕಡಿಮೆಯಾಗಲಿದೆ, ನಾವೆಲ್ಲರೂ ಇದರಿಂದ ಪಾರಾಗುತ್ತೇವೆ. ಕೊರೊನಾ ಎಂಬ ಸಾಮಾಜಿಕ ಕುತ್ತು ಆದಷ್ಟು ಬೇಗ ನಿವಾರಣೆಯಾಗಲಿದೆ. ಕೊರೊನಾ ಕಂಟಕದಿಂದ ಪಾರಾಗಿ ಜನರನ್ನು ಬದುಕಿಸಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು. ಹಾಗೆಯೇ ರಾಜ್ಯದ ಸಹಕಾರ ಸಚಿವರು 1200 ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂಭಾಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟ ಸೇವೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಶಿವಾನಂದ್ ಪಾಟೀಲ್, ಅರುಣ್ ಶಾಪುರ್, ಬಸನಗೌಡ ಪಾಟೀಲ್ ಯತ್ನಾಳ, ಈಶ್ವಂತ್ ರಾಯ್, ದೇವಾನಂದ್ ಚೌಹಣ್, ಮುರುಗೇಶ್ ನಿರಾಣಿ ಸೇರಿದಂತೆ ಇಲಾಖಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

  • ಕಲ್ಲಂಗಡಿ, ಸೌತೆಕಾಯಿ ತಿಂದರೆ ಕೊರೊನಾ ಬರೋ ಸಾಧ್ಯತೆ ಕಡಿಮೆ: ಬಿ.ಸಿ.ಪಾಟೀಲ್

    ಕಲ್ಲಂಗಡಿ, ಸೌತೆಕಾಯಿ ತಿಂದರೆ ಕೊರೊನಾ ಬರೋ ಸಾಧ್ಯತೆ ಕಡಿಮೆ: ಬಿ.ಸಿ.ಪಾಟೀಲ್

    ಕಲಬುರಗಿ: ಕಲ್ಲಂಗಡಿ ಹಾಗೂ ಸೌತೆಕಾಯಿ ಹಣ್ಣು ತಿಂದರೆ ಲಂಗ್ಸ್ ಕ್ಲಿಯರ್ ಆಗುತ್ತೆ, ಇದರಿಂದ ಕೊರೊನಾ ಬರದಂತೆ ನಾವು ತಡೆ ಹಿಡಿಯಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇಂದು ನಗರದಲ್ಲಿ ನಡೆದ ಕೃಷಿ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಮಾತನಾಡಿದ ಅವರು, ಕಲ್ಲಂಗಡಿ ಹಣ್ಣು ತಿಂದರೆ ಕೊರೊನಾ ಬರುತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ವಿಜ್ಞಾನಿಗಳ ಪ್ರಕಾರ ಕಲ್ಲಂಗಡಿ ಹಾಗೂ ಸೌತೆಹಣ್ಣು ಜಾಸ್ತಿ ತಿನ್ನಬೇಕು. ಈ ಮೂಲಕ ಲಂಗ್ಸ್ ಕ್ಲಿಯರ್ ಇದ್ದರೆ ಕೊರೊನಾ ಸಹ ಬರುವುದಿಲ್ಲ ಎಂದರು.

    ಇದರ ಬಗ್ಗೆ ಜನರಿಗೆ ಮಾಧ್ಯಮದವರು ಹಾಗೂ ಅಧಿಕಾರಿಗಳು ತಿಳುವಳಿಕೆ ನೀಡಬೇಕು ಎಂದು ತಿಳಿಸಿದರು. ಸಭೆಗೂ ಮುನ್ನ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತ ಚಂದ್ರಕಾಂತ ಕುಟುಂಬಕ್ಕೆ, ಸರ್ಕಾರದ 5 ಲಕ್ಷ ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಪರಿಹಾರದ ಚೆಕ್‍ನ್ನು ಬಿ.ಸಿ.ಪಾಟೀಲ್ ವಿತರಿಸಿದರು. ಇದೇ ವೇಳೆ ಮಾತನಾಡಿದ ಸಚಿವರು ಯಾವುದೇ ಕಾರಣಕ್ಕೂ ರೈತರ ಬೆಳೆದ ಸಾಮಗ್ರಿಗಳನ್ನು ಪೊಲೀಸರು ತಡೆಹಿಡಿಯ ಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದರು.

  • ಕೊರೊನಾ ಭೀತಿಗೆ ಜಮೀನಿನಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ- ರೈತನ ಬದುಕು ಬೀದಿಗೆ

    ಕೊರೊನಾ ಭೀತಿಗೆ ಜಮೀನಿನಲ್ಲೇ ಕೊಳೆಯುತ್ತಿದೆ ಕಲ್ಲಂಗಡಿ- ರೈತನ ಬದುಕು ಬೀದಿಗೆ

    ರಾಯಚೂರು: ಮಹಾಮಾರಿ ಕೊರೊನಾ ವೈರಸ್‍ನ ಅಟ್ಟಹಾಸದಿಂದ ರೈತರ ಬದುಕು ಬೀದಿಗೆ ಬಂದಿದೆ. ರಾಯಚೂರಿನಲ್ಲೂ ಬೇಸಿಗೆ ಕಾಲಕ್ಕೆ ಅಂತ ಕಲ್ಲಂಗಡಿ ಬೆಳೆದ ರೈತರಂತೂ ನಯಾ ಪೈಸೆ ಲಾಭದ ನಿರೀಕ್ಷೆಯಲ್ಲಿಲ್ಲ. ಎಕರೆಗೆ 20ರಿಂದ 40 ಸಾವಿರ ರೂ. ಖರ್ಚು ಮಾಡಿದ್ದು ಜಮೀನಿನಲ್ಲೇ ಕಲ್ಲಂಗಡಿ ಕೊಳೆತುಹೋಗುತ್ತಿದೆ.

    ಜಿಲ್ಲೆಯ ಲಿಂಗಸುಗೂರು ಸೇರಿದಂತೆ ನೂರಾರು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಆದರೆ ಕೊಳ್ಳಲು ವ್ಯಾಪಾರಿಗಳು ಮುಂದೆಬರುತ್ತಿಲ್ಲ. ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಕಲ್ಲಂಗಡಿ ತಂಪು ಅಂತ ಕೊಳ್ಳಲು ಮುಂದೆಬರುತ್ತಿಲ್ಲ. ಇಷ್ಟೆಲ್ಲದರ ಮಧ್ಯೆ ಜಮೀನಿನಲ್ಲಿನ ಕಲ್ಲಂಗಡಿ ಬಿಡಿಸಲು ಕೂಲಿಯಾಳುಗಳು ಸಿಗುತ್ತಿಲ್ಲ ಎನ್ನುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಪ್ರತಿವರ್ಷ ಇಷ್ಟೊತ್ತಿಗೆ ವ್ಯಾಪಾರ ಜೋರಾಗಿರುತ್ತಿತ್ತು. ಆದರೆ ಈ ವರ್ಷ ನಮ್ಮ ಬೆಳೆಗೆ ಒಂದು ರೂಪಾಯಿಯೂ ಬಂದಿಲ್ಲ ಎಂದು ಮದಗಲ್ ರೈತ ರಾಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

    ಉತ್ತಮ ಫಸಲು ಬಂದಿದ್ದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದಿರುವುದು ರೈತರನ್ನ ದೊಡ್ಡ ಸಾಲಗಾರರನ್ನಾಗಿ ಮಾಡುತ್ತಿದೆ. ಕೊರೊನಾ ಎಫೆಕ್ಟ್ ನಿಂದ ಕಲ್ಲಂಗಡಿ ಬೆಳೆದ ರೈತನಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ. ಹೀಗಾಗಿ ಕಲ್ಲಂಗಡಿ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ರೈತರು ಮನವಿ ಮಾಡಿದ್ದಾರೆ.

  • ಕಲ್ಲಂಗಡಿ ಹಣ್ಣು ಸರಬರಾಜು ಮಾಡಲಾಗದೆ ರೈತ ಆತ್ಮಹತ್ಯೆ

    ಕಲ್ಲಂಗಡಿ ಹಣ್ಣು ಸರಬರಾಜು ಮಾಡಲಾಗದೆ ರೈತ ಆತ್ಮಹತ್ಯೆ

    ಕಲಬುರಗಿ: ರಾಜ್ಯದಲ್ಲಿ ಮೊದಲ ಕೊರೊನಾ ಪತ್ತೆಯಾದ ಕಲಬುರಗಿಯಲ್ಲಿ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ.

    ಕೊರೊನಾ ಸೋಂಕು ತಡೆಯಲು ಇಡೀ ಭಾರತವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ರೈತ ಕಲ್ಲಂಗಡಿ ಹಣ್ಣು ಸರಬರಾಜು ಮಾಡಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಚಂದ್ರಕಾಂತ ಬಿರಾದಾರ(45) ಸೋಮವಾರ ರಾತ್ರಿ ಜಮೀನಿನಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಚಂದ್ರಕಾಂತ ಅವರು ತಮ್ಮ 3 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಗಾಟ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೊಂದ ರೈತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.