Tag: Waterfalls

  • ಮೊಬೈಲ್ ಜಾಸ್ತಿ ಬಳಸ್ಬೇಡ ಅಂದಿದ್ದಷ್ಟೇ ಹೋಗಿ ಜಲಪಾತಕ್ಕೆ ಜಿಗಿದ ಯುವತಿ!

    ಮೊಬೈಲ್ ಜಾಸ್ತಿ ಬಳಸ್ಬೇಡ ಅಂದಿದ್ದಷ್ಟೇ ಹೋಗಿ ಜಲಪಾತಕ್ಕೆ ಜಿಗಿದ ಯುವತಿ!

    ಛತ್ತೀಸ್‍ಗಢ: ಇತ್ತೀಚೆಗೆ ಮಕಕ್ಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಬಳಕೆಯಾಗುತ್ತಿದೆ. ಈ ಮೊಬೈಲ್ ಬಳಕೆಯನ್ನು ಮಕ್ಕಳು ಅತಿಯಾಗಿ ಮಾಡಿದರೆ ಪೋಷಕರು ಬುದ್ಧಿ ಮಾತು ಹೇಳುವುದು ಸಹಜ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಮಕ್ಕಳು ತಪ್ಪು ನಿರ್ಧಾರ ತೆಗೆದುಕೊಳ್ಳುವ ಘಟನೆ ಈ ಹಿಂದೆಯೂ ನಡೆದಿದೆ. ಇಂಥದ್ದೇ ಘಟನೆಯೊಂದು ಇದೀಗ ಛತ್ತೀಸ್‍ಗಢದಲ್ಲಿಯೂ ನಡೆದಿದೆ.

    ಹೌದು. ಛತ್ತೀಸ್‍ಗಢದ ಬಸ್ತಾರ್‍ನಲ್ಲಿ ಯುವತಿಯೊಬ್ಬಳಿಗೆ ಆಕೆಯ ಪೋಷಕರು ಮೊಬೈಲ್ ಜಾಸ್ತಿ ಬಳಕೆ ಮಾಡದಂತೆ ಬುದ್ಧಿ ಮಾತು ಹೇಳಿದ್ದಾರೆ. ಇಷ್ಟಕ್ಕೆ ಬೇಸರಗೊಂಡ ಆಕೆ 90 ಅಡಿ ಆಳದ ಚಿತ್ರಕೋಟೆ ಜಲಪಾತಕ್ಕೆ ಧುಮುಕಿದ್ದಾಳೆ.

    ಜಲಪಾತದ ಬಳಿಗೆ ಬಂದ ಬಳಿಕ ಯುವತಿ ಸ್ವಲ್ಪ ಹೊತ್ತು ಆ ಕಡೆ ಈ ಕಡೆ ಅಲೆದಾಡುತ್ತಿದ್ದಳು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಆಕೆಯನ್ನು ಅಲ್ಲಿಂದ ರಕ್ಷಣೆ ಮಾಡಲು ಮನವಿ ಮಾಡಿದರು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಆಕೆಗೂ ಒತ್ತಾಯಿಸಿದರು. ಆದರೆ ಅವರ ಮಾತುಗಳನ್ನು ಯುವತಿ ಕೇಳಿಸಿಕೊಳ್ಳದೇ ಒತ್ತಡಕ್ಕೆ ಒಳಗಾದವಳಂತೆ ಓಡಾಡುತ್ತಿದ್ದಳು.

    ಇತ್ತ ಸ್ಥಳದಲ್ಲಿದ್ದ ಕೆಲವು ಯುವಕರು ತಮ್ಮ ಮೊಬೈಲ್ ಫೋನ್‍ಗಳಲ್ಲಿ ಇಡೀ ಘಟನೆಯ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕೂಡಲೇ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಈ ವೀಡಿಯೋ ಸದ್ಯ ವೈರಲ್ ಆಗುತ್ತಿದೆ.

    ವೈರಲ್ ವೀಡಿಯೋದಲ್ಲಿ ಯುವತಿ ಜಲಪಾತದ ತುದಿಯಲ್ಲಿ ಕೆಲವು ಸೆಕೆಂಡುಗಳ ಕಾಲ ನಿಂತಿರುವುದನ್ನು ಕಾಣಬಹುದಾಗಿದೆ. ಕ್ಯಾಮೆರಾ ಚಲಿಸುತ್ತಿದ್ದಂತೆ, ಇಂದ್ರಾವತಿ ನದಿಯ ಬಸ್ತಾರ್‍ನಲ್ಲಿರುವ ಜಗದಲ್‍ಪುರದಿಂದ 38 ಕಿಮೀ ದೂರದಲ್ಲಿರುವ ಚಿತ್ರಕೋಟೆ ಜಲಪಾತದ ಎತ್ತರವನ್ನು ವೀಡಿಯೊ ತೋರಿಸುತ್ತದೆ. ಇದನ್ನು ಸ್ಥಳೀಯರು ‘ಮಿನಿ ನಯಾಗರಾ ಫಾಲ್ಸ್’ ಎಂದು ಕರೆಯುತ್ತಾರೆ. ಯುವತಿ ಜಿಗಿದ ಬಳಿಕ ನೀರಿನಲ್ಲಿ ತೇಲುತ್ತಿದ್ದಳು. ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿದ್ದಾರೆ.

    ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದು, ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಾಲಕಿಯನ್ನು ಆಕೆಯ ಪೋಷಕರು ಗದರಿಸಿದ್ದಾರೆ. ಈ ಕಾರಣಕ್ಕೆ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಯುವತಿಯ ರಕ್ಷಣೆಯ ಬಳಿಕ ಆಕೆಯ ಮನೆಯವರಿಗೆ ಒಪ್ಪಿಸಲಾಯಿತು.

    ಚಿತ್ರಕೋಟೆ ಜಲಪಾತವು ತನ್ನ ಮೋಡಿಮಾಡುವ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಮಳೆಗಾಲದಲ್ಲಿ ಪ್ರತಿದಿನ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದಾಗ್ಯೂ, ಪ್ರವಾಸಿಗರಿಗೆ ಯಾವುದೇ ಗಮನಾರ್ಹ ಸುರಕ್ಷತಾ ಕ್ರಮಗಳಿಲ್ಲ. ದುರದೃಷ್ಟವಶಾತ್, ಈ ಹಿಂದೆ ಹಲವಾರು ಅಪಘಾತಗಳು ಇಲ್ಲಿ ಸಂಭವಿಸಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ – ಸಾವಿನ ದವಡೆಯಲ್ಲಿ ಮೋಜು-ಮಸ್ತಿ

    ಭರಚುಕ್ಕಿಯಲ್ಲಿ ಪ್ರವಾಸಿಗರ ಹುಚ್ಚಾಟ – ಸಾವಿನ ದವಡೆಯಲ್ಲಿ ಮೋಜು-ಮಸ್ತಿ

    ಚಾಮರಾಜನಗರ: ಭರಚುಕ್ಕಿ ಜಲಪಾತದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಜೋರಾಗಿದ್ದು, ಸಾವಿನ ದವಡೆಯಲ್ಲಿ ಮೋಜು-ಮಸ್ತಿ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

    ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರ ಗ್ರಾಮದ ವೆಸ್ಲಿ ಸೇತುವೆ ಕೆಳಗೆ ಹರಿಯುವ ಕಾವೇರಿ ನದಿಗೆ ಇಳಿದು ಪ್ರವಾಸಿಗರು ಜಲಕ್ರೀಡೆ ಆಡುತ್ತಿದ್ದಾರೆ. ಅಪಾಯದ ಮಟ್ಟದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೈಮರೆತ್ತಿದ್ದಾರೆ. ಇದನ್ನೂ ಓದಿ: ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ 

    ವೈನಾಡು ಮತ್ತು ಮಲೆನಾಡಿನ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆ ಕಾವೇರಿ ನದಿಗೆ ಕಳೆದ ಆರು ದಿನಗಳಿಂದಲೂ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯ ಬೀಡುತ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.

    ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ತಿಳಿದ ಪ್ರವಾಸಿಗರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಲೂ ಒಂದು ವಾರದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬೆಳವಣಿಗೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಜು.12 ರಂದು ಭರಚುಕ್ಕಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ನದಿಯ ಬಳಿ ತೆರಳದಂತೆ ಮೇಲಿಂದ ಮೇಲೆ ಆದೇಶದ ಸುತ್ತೊಲೆ ಹೊರಡಿಸುತ್ತಿದೆ.

    ವಿಪರ್ಯಾಸವೆಂದರೆ ಪ್ರವಾಸಿಗರು ಕಾವೇರಿ ನದಿಯಲ್ಲಿ ಇಳಿದು ಮನಬಂದಂತೆ ಆಟವಾಡುವುದು ಮತ್ತು ಈಜುವ ಹುಚ್ಚಾಟವನ್ನು ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ತಂಡೋಪ ತಂಡವಾಗಿ ಬಂದು ನದಿಗಿಳಿಯುತ್ತಿದ್ದಾರೆ. ಭರಚುಕ್ಕಿ ಪ್ರವೇಶಕ್ಕೆ ನಿರ್ಬಂಧವಿರುವುದ್ದರಿಂದ ವೆಸ್ಲಿ ಸೇತುವೆಯಿಂದ ಬಲಗಡೆಗೆ ತೆರಳುವ ಬೂದಗಟ್ಟದೊಡ್ಡಿ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿ ಭರಚುಕ್ಕಿ ಜಲಪಾತ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ.

    ಎಚ್ಚರ ತಪ್ಪಿದ್ರೆ ಶಿವನ ಪಾದ
    ಭರಚುಕ್ಕಿ ವೀಕ್ಷಣೆಗೆ ಜಲಪಾತದ ತುದಿಗೆ ತೆರಳುತ್ತಿರುವ ಯುವಕ, ಯುವತಿಯರ ಗುಂಪು ತುತ್ತತುದಿಯಲ್ಲಿ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸ ಪ್ರಯತ್ನದಲ್ಲಿ ಮುಳುಗಿದ್ದಾರೆ. ಯುವಕ, ಯುವತಿಯರು, ವಯೋವೃದ್ಧರು, ಮಹಿಳೆಯರು, ಸಣ್ಣ-ಸಣ್ಣ ಮಕ್ಕಳು ಸೇರಿ ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ:  ಈ ಚುನಾವಣೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಿರ್ಧರಿಸುತ್ತೆ: ಯಶವಂತ್ ಸಿನ್ಹಾ

    ಇವೆಲ್ಲವನ್ನು ನೋಡಿದ ಪ್ರಜ್ಞಾವಂತರು ಎಲ್ಲಿಂದಲು ಇಲ್ಲಿನ ನದಿ, ಜಲಪಾತ ವೀಕ್ಷಣೆಗೆ ಬಂದು ಸಾವು-ನೋವುಗಳು ಸಂಭವಿಸಲು ಕಾರಣವಾಗುತ್ತಿರುವ ಪ್ರವಾಸಿಗರಿಗೆ ಕಡಿವಾಣ ಹಾಕಬೇಕು. ಅಕ್ರಮವಾಗಿ ತೆರಳಿ ಜಲಪಾತ ವೀಕ್ಷಣೆ ಮಾಡುವ ದಾರಿಯನ್ನು ಬಂದ್ ಮಾಡಿ ಪೊಲೀಸರ ನಿಯೋಜನೆ ಮಾಡಬೇಕು. ನದಿಯ ಬಳಿ ಯಾರು ಸುಳಿಯದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನಲ್ಲಿ ಭಾರೀ ಮಳೆ- ಜಲಧಾರೆಗಳ ವಯ್ಯಾರ

    ಕೊಡಗಿನಲ್ಲಿ ಭಾರೀ ಮಳೆ- ಜಲಧಾರೆಗಳ ವಯ್ಯಾರ

    ಮಡಿಕೇರಿ: ಕೊಡಗು ಎಂದರೆ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುವ ಮಂಜು, ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು. ಅದರಲ್ಲೂ ಮಳೆಗಾಲ ಶುರುವಾದರೆ ಸಾಕು, ಗಿರಿಕಾನನದ ಮಧ್ಯೆ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ. ನೈಜ ಸೌಂದರ್ಯದ ಕೊಡಗಿನಲ್ಲೀಗ ಜಲಸುಂದರಿಯರದ್ದೇ ದರ್ಬಾರ್ ಶುರುವಾಗಿದೆ.

    ಕೊಡಗು ಪ್ರವಾಸಿಗರ ಸ್ವರ್ಗ. ಹಸಿರನಾಡು ಕೊಡಗಿನ ಅಬ್ಬಿ ಜಲಪಾತದ ವೈಭವ ದೃಶ್ಯ ಕಾವ್ಯದ ವಿಹಂಗಮ ನೋಟ ಎಲ್ಲರ ಕಣ್ಮನ ಸೆಳೆಯುತ್ತದೆ. ಕೈಗೆಟುಕುವಷ್ಟು ಹತ್ತಿರದಲ್ಲಿ ಸಾಗುವ ಮೋಡಗಳೊಂದಿಗೆ ಚೆಲ್ಲಾಟವಾಡುತ್ತ, ಚುಮು ಚುಮು ಚಳಿಯನ್ನು ಎಂಜಾಯ್ ಮಾಡುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿಲ್ಲದೇ ಬಣಗುಡುವ ಅಬ್ಬಿ ಫಾಲ್ಸ್ ಮಳೆಗಾಲದಲ್ಲಿ ತನ್ನ ನೈಜ ಸೌಂದರ್ಯವನ್ನು ತೆರೆದುಕೊಂಡು ಪ್ರವಾಸಿಗರ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ. 80 ಅಡಿ ಎತ್ತರದಿಂದ ಹಾಲ್ನೊರೆಯಂತೆ ಹರಿಯುವ ಜಲಪಾತವನ್ನು ನೋಡುತ್ತಾ ನಿಂತರೆ ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತಿದೆ.

    ಜಲಧಾರೆಯ ಮೋಹಕ ಸೆಳೆತ ಒಂದೆಡೆಯಾದರೆ, ಮಂಜಿನ ಸ್ಪರ್ಶ, ಮೈಗೆ ಸೋಕುವ ತಂಗಾಳಿ ಮನಸ್ಸಿಗೆ ಹಿತ ನೀಡುತ್ತದೆ. ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ಮಳೆಗಾಲದಲ್ಲಿ ಹೆಚ್ಚು ಸುಂದರವಾಗಿ ಕಾಣುತ್ತೆ. ಅದಕ್ಕಾಗಿಯೇ ವೀಕೆಂಡ್‍ಗಳಲ್ಲಿ ಜಲಪಾತ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕಪ್ಪು ಕಲ್ಲುಗಳ ನಡುವೆ ಶ್ವೇತಧಾರೆಯಾಗಿ ಧರೆಗಿಳಿಯುವ ಜಲಪಾತದ ದೃಶ್ಯವನ್ನು ಸೆರೆಹಿಡಿಯುವ ಪ್ರವಾಸಿಗರು ತಮ್ಮ ಪ್ರವಾಸದ ನೆನಪುಗಳನ್ನು ಹಸಿರಾಗಿಡಲು ಹಂಬಲಿಸುತ್ತಾರೆ.

    ಮಳೆಗಾಲ ಬಂದರೆ ಸಾಕು ಕೊಡಗಿನ ಪ್ರತೀ ಬೆಟ್ಟಗುಡ್ಡದ ತಪ್ಪಲಿನಲ್ಲೂ ಜಲಕನ್ಯೆಯರು ಮೈದಳೆದು ವೈಯ್ಯಾರ ತೋರುತ್ತಾರೆ. ಜಿಲ್ಲೆಯಲ್ಲಿ ಸುರಿಯುವ ಜಿಟಿಜಿಟಿ ಮಳೆಯಲ್ಲಿ ಹಸಿರನ್ನೇ ಹೊದ್ದು ಮಲಗಿದ ಪರಿದಲ್ಲಿ ಹಾಲ್ನೊರೆಯಂತೆ ಹರಿಯುವ ಜಲಪಾತಗಳನ್ನು ನೋಡಲು ಎರಡು ಕಣ್ಣುಗಳು ಸಾಲದು. ನಿಧಾನವಾಗಿ ಹರಿಯುವ ಸೋಮವಾರಪೇಟೆ ತಾಲೂಕಿನ ಮೇದೂರ ಜಲಪಾತ. ರಭಸವಾಗಿ ಮೇಲಿಂದ ಜಿಗಿದು, ವೇಗವಾಗಿ ಹರಿಯುವ ಅಬ್ಬಿಕೊಲ್ಲಿ ಜಲಪಾತ. ಹಾಲ್ನೊರೆಯಂತೆ ಹರಿಯುವ ನೀರಿನಿಂದ ಮಂಜಿನ ಹನಿಗಳ ರಾಶಿಯನ್ನು ಹೊಮ್ಮಿ ಮುಖಕ್ಕೆ ಸಿಂಚನ ಮಾಡುವ ಮಡಿಕೇರಿ ಸಮೀಪದ ಅಬ್ಬಿ ಜಲಪಾತ. ಅಷ್ಟೇ ಏಕೆ ಅರ್ಧಚಂದ್ರಾಕೃತಿಯಲ್ಲಿ ನಿಮ್ಮನ್ನು ಚಿತ್ತಾಕರ್ಷಕಗೊಳಿಸುವ ಕುಶಾಲನಗರ ತಾಲೂಕಿನ ಮಿನಿ ನಯಾಗರವೆಂದೇ ಪ್ರಸಿದ್ಧಿಯಾಗಿರುವ ಚಿಕ್ಲಿಹೊಳೆ ಜಲಾಶಯ. ಅಬ್ಬಾ ಒಂದಾ ಎರಡ ಇಂತಹ ಹತ್ತಾರು ಜಲಾಶಯಗಳು ನಿಮ್ಮನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

    ಒಟ್ನಲ್ಲಿ ಮಳೆಗಾಲದಲ್ಲಿ ನೋಡುಗರ ಮನಸೂರೆಗೊಳ್ಳುವ ಜಲಪಾತಗಳು, ಕೊಡಗಿನಲ್ಲಿ ಮಳೆ ಬಂದರೆ ಸಾಕು, ಮೇಲಿನಿಂದ ಧುಮ್ಮಿಕ್ಕಿ ತನ್ನ ಸೌಂದರ್ಯವನ್ನು ಬಿಚ್ಚಿಡುತ್ತವೆ. ಮಳೆಯ ರಭಸ ಹೆಚ್ಚಿದಂತೆಲ್ಲ ಹಾಲಿನ ನೊರೆಯಂತೆ ಬಂಡೆಗಳ ನಡುವೆ ರಭಸದಿಂದ ಹರಿದು ಪ್ರವಾಸಿಗರ ಗಮನ ಸೆಳೆಯುತ್ತಿವೆ.

  • ಮಲೆನಾಡಲ್ಲಿ ಮೈದುಂಬಿ ಹರಿಯುತ್ತಿವೆ ಜಲಪಾತಗಳು- ಪ್ರವಾಸಿ ತಾಣಗಳಿಗೆ ಕಾಡ್ತಿದೆ ಅನಾಥ ಪ್ರಜ್ಞೆ

    ಮಲೆನಾಡಲ್ಲಿ ಮೈದುಂಬಿ ಹರಿಯುತ್ತಿವೆ ಜಲಪಾತಗಳು- ಪ್ರವಾಸಿ ತಾಣಗಳಿಗೆ ಕಾಡ್ತಿದೆ ಅನಾಥ ಪ್ರಜ್ಞೆ

    ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸಮೃದ್ಧ ಮಳೆಯಿಂದಾಗಿ ಮಲೆನಾಡ ಜಲಪಾತಗಳಿಗೆ ಜೀವಕಳೆ ಬಂದಿದೆ. ಆದರೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.

    ಜಿಲ್ಲೆಯ ಚಾರ್ಮಾಡಿ ಫಾಲ್ಸ್, ತೀರ್ಥಕೆರೆ ಫಾಲ್ಸ್, ಸಗೀರ್, ಫಾಲ್ಸ್, ಸಿರಿಮನೆ ಫಾಲ್ಸ್, ಕಲ್ಲತ್ತಿಗರಿ ಫಾಲ್ಸ್, ಶಂಕರ್ ಫಾಲ್ಸ್ ಸೇರಿದಂತೆ ಜಿಲ್ಲೆಯ ದಶದಿಕ್ಕುಗಳ ಜಲಪಾತಗಳು ಮೈದುಂಬಿ ಹರಿಯುತ್ತಿದೆ. ಮಳೆಯಿಂದಾಗಿ ಚಾರ್ಮಾಡಿ ಘಾಟಿಯ ಫಾಲ್ಸ್‍ಗಳು ಕಣ್ಣು ಕೊರೈಸುವಂತೆ ಧುಮ್ಮಿಕ್ಕುತ್ತಿವೆ. ಚಾರ್ಮಾಡಿಯ ಹಾವು-ಬಳುಕಿನ ರಸ್ತೆಯಲ್ಲಿ ಹತ್ತಾರು ಜಲಪಾತಗಳಿವೆ.

    ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಮಳೆಯಿಂದಾಗಿ ಜಲಪಾತಗಳಲ್ಲಿ ಪ್ರಕೃತಿ ಸೌಂದರ್ಯ ಮೇಳೈಸಿದೆ. ನೀರಿನ ವೇಗದ ಶಬ್ಧವೇ ಮನಸ್ಸಿಗೆ ಮುದ ನೀಡುತ್ತಿದೆ. ಮೋಡದ ಜೊತೆ ಮಂಜಿನ ಕಣ್ಣಾಮುಚ್ಚಾಲೆ ಆಟ. ಕ್ಷಣಕ್ಕೊಮ್ಮೆ ಬದಲಾಗೋ ವಾತಾವರಣ. ತಣ್ಣನೆಯ ಗಾಳಿ ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿಯ ತೀರ್ಥಕೆರೆ ಫಾಲ್ಸ್ ಪ್ರವಾಸಿಗರನ್ನ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ರಸ್ತೆ ಬದಿಯಲ್ಲೇ ಸಿಗುವ, ಸುಮಾರು 120 ಅಡಿ ಎತ್ತರದಿಂದ ಇಳಿಜಾರಿನಲ್ಲಿ ಜಾರಿ ಬರುವ ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ. ಶೃಂಗೇರಿಗೆ ಭೇಟಿ ನೀಡುವ ಪ್ರವಾಸಿಗರು ಜಯಪುರ ಮಾರ್ಗವಾಗಿ ಹೊರನಾಡಿಗೆ ಹೋಗುವವರಿಗೆ ಈ ಜಲಪಾತದ ದರ್ಶನವಾಗಲಿದೆ. ಇದೊಂದೆ ಅಲ್ಲದೆ ಕಾಫಿನಾಡಿನ ದಶದಿಕ್ಕುಗಳಲ್ಲೂ ಇಂತಹ ನೂರಾರು ಜಲಪಾತದ ವೈಭವ ಮೇಳೈಸಿದೆ. ಜಿಲ್ಲೆಯ ಮಲೆನಾಡು ಭಾಗದ ಬಹುತೇಕ ಜಲಪಾತಗಳು ಮೂರು ದಿನದ ಮಹಾಮಳೆಗೆ ಮೈದುಂಬಿ ಹರಿಯುತ್ತಿವೆ. ಆದರೆ ಕೊರೊನಾ ಲಾಕ್‍ಡೌನ್‍ನಿಂದ ಕಾಫಿನಾಡಿಗೆ ಪ್ರವಾಸಿಗರು ಬರುತ್ತಿಲ್ಲ. ಹೀಗಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಅನಾಥಪ್ರಜ್ಞೆ ಕಾಡುತ್ತಿದೆ.

  • ಸ್ನೇಹಿತರ ಜೊತೆ ಪ್ರವಾಸ – ಆಳದ ಅರಿವಿಲ್ಲದೆ ಜಲಪಾತಕ್ಕಿಳಿದ ಯುವಕ ಸಾವು

    ಸ್ನೇಹಿತರ ಜೊತೆ ಪ್ರವಾಸ – ಆಳದ ಅರಿವಿಲ್ಲದೆ ಜಲಪಾತಕ್ಕಿಳಿದ ಯುವಕ ಸಾವು

    ಚಿಕ್ಕಮಗಳೂರು: ಆಳದ ಅರಿವಿಲ್ಲದೆ ಜಲಪಾತದ ನೀರಿಗಿಳಿದ ಯುವಕ ಸಾವನಪ್ಪಿರು ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಅಬ್ಬುಗುಡಿಗೆ ಗ್ರಾಮದ ಸುರಮನೆ ಜಲಪಾತದಲ್ಲಿ ನಡೆದಿದೆ.

    ಮೃತ ಯುವಕನನ್ನು 16 ವರ್ಷದ ವಂಶಿತ್ ಎಂದು ಗುರುತಿಸಲಾಗಿದೆ. ಮೃತ ವಂಶಿತ್ ಮೂಲತಃ ಕಳಸದ ಸಂಸೆ ಸಮೀಪದ ಗುತ್ಯಡ್ಕ ಗ್ರಾಮದವನು. ವಂಶಿತ್ ಗ್ರಾಮದ ನಾಲ್ಕೈದು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ಈ ವೇಳೆ ಆಳದ ಅರಿವಿರದ ಕಾರಣ ಜಲಪಾತದಲ್ಲಿ ಆಟವಾಡುವಾಗ ನೀರಲ್ಲಿ ಮುಳುಗಿ ವಂಶಿತ್ ಸಾವನ್ನಪ್ಪಿದ್ದಾನೆ.

    ಕಳೆದ ಎರಡ್ಮೂರು ವರ್ಷಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿದಿರೋದ್ರಿಂದ ನೀರಿನ ರಭಸಕ್ಕೆ ಜಲಪಾತದ ಬಳಿ ಆಳವಾದ ನೀರಿನ ಗುಂಡಿ ನಿರ್ಮಾಣವಾಗಿರುವ ಶಂಕೆ ವ್ಯಕ್ತವಾಗಿದೆ. ಮಳೆಗಾಲದಲ್ಲಿ ನಿರ್ಮಾಣವಾಗಿರುವ ಗುಂಡಿಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಯುವಕರು ನೀರಿಗಿಳಿದಾಗ ಈ ದುರ್ಘಟನೆ ಸಂಭವಿಸಿದೆ. ಪ್ರವಾಸಿಗರಿಗೆ ಅಷ್ಟಾಗಿ ಗೊತ್ತಿಲ್ಲದ ಈ ಸುಂದರ ತಾಣ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರಿಗೆ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.

    ಫಾಲ್ಸ್ ಕೆಳಗೆ ಸುಮಾರು ಹತ್ತರಿಂದ ಹನ್ನೆರಡು ಅಡಿ ನೀರಿದ್ದು, ಆಳವನ್ನು ಲೆಕ್ಕಿಸದೇ ನೀರಿನಲ್ಲಿ ಇಳಿದಿದ್ದರಿಂದ ವಂಶಿತ್ ಮುಳುಗಿದ್ದಾನೆ. ಈ ವೇಳೆ ಮೇಲೆ ಬರಲು ಪ್ರಯತ್ನಿಸಿದರು ಪ್ರಯೋಜನವಾಗಿಲ್ಲ. ಸ್ನೇಹಿತರ ಕಣ್ಣೆದುರೇ ಯುವಕ ಸಾವನ್ನಪ್ಪಿದ್ದಾನೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮಲೆನಾಡಲ್ಲಿ ಭಾರೀ ಮಳೆ- ಉಕ್ಕಿ ಹರಿಯುತ್ತಿದೆ ಕಲ್ಲತ್ತಿಗಿರಿ ಜಲಪಾತ

    ಮಲೆನಾಡಲ್ಲಿ ಭಾರೀ ಮಳೆ- ಉಕ್ಕಿ ಹರಿಯುತ್ತಿದೆ ಕಲ್ಲತ್ತಿಗಿರಿ ಜಲಪಾತ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಉಕ್ಕಿ ಹರಿಯುತ್ತಿವೆ. ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ.

    ಕಾಫಿನಾಡಿನ ಗಿರಿ ಭಾಗದಲ್ಲಿ ಸುರಿಯುತ್ತಿರೋ ಧಾರಾಕಾರ ಮಳೆಗೆ ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಜಲಪಾತ ಮೈದುಂಬಿ ಹರಿಯುತ್ತಿದೆ. ಭಾರೀ ನೀರಿನಿಂದ ಉಕ್ಕಿ ಹರಿಯುತ್ತಿರುವ ಜಲಪಾತ ಪ್ರವಾಸಿಹರನ್ನು ತನ್ನತ್ತ ಸೆಳೆಯುತ್ತಿದೆ. ಹೀಗಾಗಿ ಮುಳ್ಳಯ್ಯನಗಿರಿ ಬೆಟ್ಟ ಸೇರಿದಂತೆ ಈ ಭಾಗಕ್ಕೆ ಭೇಟಿ ನೀಡಿದ ಪ್ರವಾಸಿಗರು ಜಲಪಾತದ ಬಳಿ ಆಗಮಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಶನಿವಾರ ಮಧ್ಯಾಹ್ನದಿಂದ ಮುಳ್ಳಯ್ಯನ ಗಿರಿ ಹಾಗೂ ದತ್ತ ಪೀಠ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಕಲ್ಲತ್ತಿಗಿರಿ ಜಲಪಾತಕ್ಕೆ ಅತೀ ಹೆಚ್ಚು ನೀರು ಹರಿದು ಬಂದಿದೆ. ಹೀಗಾಗಿ ಜಲಪಾತಕ್ಕೆ ಜೀವಕಳೆ ಬಂದಿದೆ. ಪ್ರವಾಸಿಗರ ದಂಡು ಮಲೆನಾಡಿಗೆ ಹೆಚ್ಚು ಆಗಮಿಸುತ್ತಿದ್ದು, ಅದರಲ್ಲೂ ಚಿಕ್ಕಮಗಳೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಜಲಪಾತದ ರಮಣೀಯ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದಾರೆ.

    ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮೂಡಿಗೆರೆ, ಕೊಪ್ಪ, ಎನ್‍ಆರ್ ಪುರ, ಶೃಂಗೇರಿಯಲ್ಲಿ ಮಳೆ ಜೋರಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಕಳಸ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ ಎರಡು ಅಡಿಯಷ್ಟು ನೀರಿನ ಹರಿಯುತ್ತಿದೆ. ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಈ ಬಾರಿಯೂ ಮುಳುಗಡೆಯಾಗಿದೆ. ಕಳೆದ ಬಾರಿ ಸಹ ಹೆಬ್ಬಾಳೆ ಸೇತುವೆ ಹಲವು ಬಾರಿ ಮಳುಗಡೆಯಾಗಿತ್ತು. ಭಾರೀ ಮಳೆಯಿಂದಾಗಿ ಭದ್ರಾ ಅಪಾಯ ಮಟ್ಟ ಮೀರಿ ತುಂಬಿ ಹರಿಯುತ್ತಿದೆ.

  • ಮಾಯದಂಥ ಮಳೆ ಬಂದು ಮದಗಾದ ಕೆರೆ ಬಳಿ ಜಲಪಾತ ಉದ್ಭವ

    ಮಾಯದಂಥ ಮಳೆ ಬಂದು ಮದಗಾದ ಕೆರೆ ಬಳಿ ಜಲಪಾತ ಉದ್ಭವ

    – ಹಸಿರ ಹೊದ್ದ ಬೆಟ್ಟ, ಗುಡ್ಡಗಳ ಮಧ್ಯೆ ಜಲಧಾರೆ
    – ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ ಜನ

    ಹಾವೇರಿ: ಸುತ್ತ ಹಸಿರ ರಾಶಿ, ಗುಡ್ಡ ಬೆಟ್ಟಗಳ ಸಾಲು, ಹಸಿರು ಬೆಟ್ಟದ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆ. ಆ ಸೌಂದರ್ಯವನ್ನ ಕಣ್ತುಂಬಿಕೊಳ್ಳೋದೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಆನಂದ. ಇಲ್ಲಿನ ಸೌಂದರ್ಯಕ್ಕೆ ಮನಸೋತ ಜನ, ಧುಮ್ಮಿಕ್ಕುವ ಜಲಪಾತ ನೋಡಲು ಸಾಲುಗಟ್ಟಿ ಆಗಮಿಸುತ್ತಿದ್ದಾರೆ.

    ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಕೆರೆಯ ಬಳಿ ಜಲಪಾತ ಉಂಟಾಗಿದ್ದು, ಕಣ್ತುಂಬಿಕೊಳ್ಳಲು ಸಚಿವರು ಸೇರಿದಂತೆ ಜನರು ಮುಗಿಬೀಳುತ್ತಿದ್ದಾರೆ. ಮದಗಮಾಸೂರು ಕೆರೆ ಐತಿಹಾಸಿಕವಾಗಿ ಸಾಕಷ್ಟು ಮಹತ್ವ ಪಡೆದಿದೆ. ಕೆರೆಯ ಕುರಿತು ಜಾನಪದೀಯರು ಮಾಯದಂಥಾ ಮಳೆ ಬಂತಣ್ಣ, ಮದಗದ ಕೆರೆಗೆ ಎಂದು ಹಾಡು ಕಟ್ಟಿದ್ದಾರೆ. ಅಂಥ ಮದಗಮಾಸೂರು ಕೆರೆಗೆ ಈಗ ಮಾಯದಂಥಾ ಮಳೆ ಬಂದಿದೆ. ಮಳೆಯ ಪರಿಣಾಮ ಕೆರೆ ಭರಪೂರ ತುಂಬಿಕೊಂಡಿದೆ.

    ಸಾವಿರಾರು ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರೋ ಮದಗಮಾಸೂರು ಕೆರೆ ತುಂಬಿ, ಕೆರೆಗೆ ಕೋಡಿ ಬಿದ್ದು ನೀರು ಹರಿತಿದೆ. ಬೆಟ್ಟ ಗುಡ್ಡಗಳ ಸಾಲಿನ ನಡುವೆ ಹರಿತಿರೋ ಜಲಧಾರೆ ನೋಡಲು ಎರಡು ಕಣ್ಣುಗಳು ಸಾಲದು. ಕೆರೆಯ ನೀರು ಹಸಿರಿನಿಂದ ಕಂಗೊಳಿಸೋ ಬೆಟ್ಟಗಳ ಸಾಲಿನ ನಡುವೆ ಧುಮ್ಮಿಕ್ಕಿ ಹರಿತಿದೆ. ಈ ಭಾಗದಲ್ಲಿ ಮದಗಮಾಸೂರು ಫಾಲ್ಸ್ ಮಿನಿ ಜೋಗ ಪಾಲ್ಸ್ ಎಂದೇ ಫೇಮಸ್ ಆಗಿದೆ. ಕೊರೊನಾ ಭೀತಿ ಇರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ಜನರ ದಂಡು ಆಗಮಿಸುತ್ತಿಲ್ಲ. ಆದರೂ ಕೆಲವರು ಮಾತ್ರ ಸ್ನೇಹಿತರ ಜೊತೆ, ಕುಟುಂಬದ ಜೊತೆಗೂಡಿ ಬಂದು ಇಲ್ಲಿನ ಹಸಿರ ಸೌಂದರ್ಯ, ಜಲಧಾರೆಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.

    ಇಲ್ಲಿನ ಜಲಧಾರೆ, ಹಸಿರ ಸೌಂದರ್ಯಕ್ಕೆ ಮನಸೋತು ಹಲವರು ಫೋಟೋ ಶೂಟ್ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಕೆಲವರು ಕುಟುಂಬ ಸಮೇತ, ಕೆಲವರು ಸ್ನೇಹಿತರೊಂದಿಗೆ ಇಲ್ಲಿಗೆ ಬಂದು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮಳೆಗಾಲದ ಇಲ್ಲಿನ ಸೌಂದರ್ಯಕ್ಕೆ ಫುಲ್ ಫಿದಾ ಆಗಿದ್ದಾರೆ.

  • ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಪ್ರವಾಸಿಗರ ಹಾಟ್‍ಸ್ಪಾಟ್ ಆದ ಕಾಮೇನಹಳ್ಳಿ ಜಲಪಾತ

    ಚಿಕ್ಕಮಗಳೂರು: ಮಳೆನಾಡು ಮಲೆನಾಡಲ್ಲಿ ಮಳೆ ಬಹುತೇಕ ಕಡಿಮೆಯಾಗಿದ್ದು, ನಿಂತಲ್ಲೇ ದೇಹವನ್ನ ನಡುಗಿಸುವ ರಣಚಳಿ ಆರಂಭವಾಗಿದೆ. ಆದರೆ ವರ್ಷಪೂರ್ತಿ ನೀರನ್ನು ಹಿಡಿದಿಟ್ಟು ಹರಿಸುವ ಅರಣ್ಯದ ಶಕ್ತಿ ಶೋಲಾ ಕಾಡುಗಳಲ್ಲಿ ನೀರಿನ ಪ್ರಮಾಣ ಹಾಗೆ ಇದ್ದು ಜಲಪಾತಗಳಿಗೆ ನವ ಚೈತನ್ಯ ಬಂದಿದೆ. ಚಂದ್ರದ್ರೋಣ ಪರ್ವತಗಳ ಸೆರಗಲ್ಲಿರುವ ಕಲ್ಲತ್ತಿಗರಿ, ಡೈಮಂಡ್, ಶಬರಿ ಹಾಗೂ ಹೆಬ್ಬೆ ಜಲಪಾತಗಳ ವೈಭೋಗವನ್ನು ನೋಡಲೆರಡು ಕಣ್ಣುಗಳು ಸಾಲದಂತಾಗಿದೆ. ಅದರಲ್ಲೂ, ಚಿಕ್ಕಮಗಳೂರಿನಿಂದ ಅನತಿ ದೂರದಲ್ಲಿರುವ ಕಾಮೇನಹಳ್ಳಿ ಜಲಪಾತ ಬಂಡೆಗಳ ಹಾಲು ಸುರಿಯುತ್ತಿರುವಂತೆ ಭಾಸವಾಗುತ್ತಿದೆ.

    ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಜಲಪಾತದಲ್ಲೀಗ ದೃಶ್ಯ ಕಾವ್ಯವೇ ಮನೆ ಮಾಡಿದೆ. ಪಶ್ಚಿಮ ಘಟ್ಟಗಳ ಸಾಲಿನಿಂದ ಹರಿದು ಬರುವ ಗಂಗಾ ಮಾತೆ ಕಾಮೇನಹಳ್ಳಿಯಲ್ಲಿ ಸುಮಾರು 70-90 ಅಡಿ ಎತ್ತರದಿಂದ ಧುಮ್ಮಿಕ್ಕುತ್ತಿದ್ದಾಳೆ. ಮೇಲಿಂದ ಶಾಂತವಾಗಿ ಹರಿದು ಬಂದು ಒಮ್ಮೆಲೇ ಎತ್ತರದಿಂದ ಧುಮ್ಮಿಕ್ತಿದ್ದು, ನೀರಿನ ಶಬ್ಧದೊಂದಿಗೆ ಹಕ್ಕಿ-ಪಕ್ಷಿಗಳ ಕಲರವ ಹೊಸದೊಂದು ಲೋಕವನ್ನೇ ಸೃಷ್ಟಿಸಿದೆ. ಇಲ್ಲಿಗೆ ಬರುತ್ತಿರುವ ಪ್ರವಾಸಿಗರು ಇಲ್ಲಿನ ರಮಣೀಯ ದೃಶ್ಯವನ್ನು ಕಂಡು ಒಬ್ಬೊಬ್ಬರು ಒಂದೊಂದು ಹೆಸರಿನಿಂದ ನಾಮಕರಣ ಮಾಡುತ್ತಿದ್ದಾರೆ. ಕೆಲವರು ಡೈಮಂಡ್ ಫಾಲ್ಸ್ ಎಂದರೆ, ಮತ್ತೆ ಕೆಲವರು ಕುಮಾರಗಿರಿ ಫಾಲ್ಸ್ ಅಂತಾರೆ. ಆದರೆ ಈ ಜಲಪಾತ ವಾಟರ್ ಫಾಲ್ಸ್ ಎಂದೇ ಖ್ಯಾತಿ. ಇದನ್ನೂ ಓದಿ: ಪ್ರವಾಸಿಗರ ಸ್ವರ್ಗ ಕಾಫಿನಾಡಿನ 9 ಗುಡ್ಡಗಳ ನಡುವಿನ ‘ಎತ್ತಿನಭುಜ’

    ಗಿರಿಶ್ರೇಣಿಗಳಲ್ಲಿ ಮಳೆ ನಿಂತರು ನಿರಂತರವಾಗಿ ಹರಿಯುತ್ತಿರುವ ನೀರಿನಿಂದ ಜಲಪಾತವೀಗ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಹಾಟ್‍ಸ್ಪಾಟ್ ಆಗಿ ಬದಲಾಗಿದೆ. ಗಿರಿ ಮಧ್ಯೆಯಿಂದ ಮಣ್ಣಿನ ಬಣ್ಣದಲ್ಲಿ ಹರಿದು ಬರುವ ನೀರು ಜಲಪಾತದಿಂದ ಧುಮ್ಮಿಕ್ಕುವಾಗ ಹಾಲ್ನೋರೆಯಂತೆ ಭಾಸವಾಗುತ್ತಿರುವುದು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಚಿಕ್ಕಮಗಳೂರಿನಿಂದ 30 ಕಿಮೀ ದೂರದಲ್ಲಿರುವ ಈ ಜಲಪಾತಕ್ಕೆ ಸರಿಯಾದ ದಾರಿ ಇಲ್ಲ.

    ಸಖರಾಯಪಟ್ಟಣದ ಸಮೀಪ ಬರುವ ಈ ಜಲಪಾತಕ್ಕೆ ಹೋಗುವುದು ಕೂಡ ಸವಾಲೇ. ಚಿಕ್ಕಮಗಳೂರಿನಿಂದ ಮಲ್ಲೆನಹಳ್ಳಿ ಮಾರ್ಗವಾಗಿ 30 ಕಿ.ಮೀ. ಸಾಗಿ ಕಾಮೇಹಳ್ಳಿಗೆ ಎಂಟ್ರಿಯಾದರೆ ನೀರಿನ ಶಬ್ಧವೇ ನೋಡುಗರಿಗೆ ದಾರಿ ತೋರಿಸುತ್ತೆ. ಬೈಕ್ ಅಥವಾ ಕಾರು ಯಾವುದನ್ನಾದರು ನಿಲ್ಲಿಸಿ ಸುಮಾರು ಒಂದೂವರೆ ಕಿ.ಮೀ. ನಡೆದರೆ ಈ ಪ್ರಕೃತಿಯ ನೈಜ ಸೊಬಗು ಅನಾವರಣಗೊಳ್ಳುತ್ತೆ. ಇದನ್ನೂ ಓದಿ: ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಇಲ್ಲಿನ ನೈಸರ್ಗಿಕ ಸೌಂದರ್ಯಕ್ಕೆ ಮನಸೋಲುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದೆದ್ದು, ತಮ್ಮದೇ ಲೋಕದಲ್ಲಿ ಸ್ವಚ್ಚಂದವಾಗಿ ಮೈ ಮರೆಯುತ್ತಾರೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳುವ ಪ್ರವಾಸಿಗರು ಇಲ್ಲಿನ ಸೌಂದರ್ಯ ಫಿದಾ ಆಗುತ್ತಿದ್ದಾರೆ. ಇಲ್ಲಿನ ಹತ್ತಾರು ಬಂಡೆಗಳು ಡೈಮಂಡ್ ಆಕೃತಿಯಲ್ಲಿರುವುದರಿಂದ ಈ ಜಲಪಾತವನ್ನು ಡೈಮಂಡ್ ಜಲಪಾತ ಎಂದು ಹೇಳುತ್ತಾರೆ. ಅಲ್ಲದೆ ಕಲ್ಲಿನ ಮೇಲೆ ನಿರಂತರವಾಗಿ ಹರಿಯುವ ನೀರು ನಾನಾ ಆಕಾರದಲ್ಲಿ ಕಲ್ಲನ್ನು ಕೊರೆದಿದೆ. ಇದು ನೋಡುಗರಿಗೆ ಮತ್ತಷ್ಟು ಮುದ ನೀಡ್ತಿದೆ.

    ಈ ಸುಂದರ ತಾಣ ಸ್ಥಳಿಯರನ್ನು ಬಿಟ್ಟರೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಈ ಜಾಗದ ಬಗ್ಗೆ ಗೊತ್ತಿರುವವರುವೀಕೆಂಡ್‌ನಲ್ಲಿ ಬಂದು ಕೊರೆಯುವ ನೀರಿನಲ್ಲಿ ಮಿಂದೆದ್ದು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಇಲ್ಲಿಗೆ ಹೋಗುವುದಕ್ಕೆ ಸೂಕ್ತ ಮಾರ್ಗವಿಲ್ಲ. ಸರ್ಕಾರ ಈ ತಾಣವನ್ನು ಪ್ರವಾಸೋಧ್ಯಮ ತಾಣವನ್ನಾಗಿಸಿದ್ರೆ ಪ್ರವಾಸಿಗರು ಕಾಫಿನಾಡಿನ ಸೌಂದರ್ಯವನ್ನು ಸವಿಯಬಹುದು, ಸರ್ಕಾರಕ್ಕೂ ಆದಾಯ ಬರಲಿದೆ.

  • ಬಿಸಿಲನಾಡಲ್ಲಿ ಧುಮ್ಮಿಕ್ಕುವ ಗವಿ ಸಿದ್ಧಲಿಂಗೇಶ್ವರ ಜಲಪಾತಕ್ಕೆ ಬನ್ನಿ

    ಬಿಸಿಲನಾಡಲ್ಲಿ ಧುಮ್ಮಿಕ್ಕುವ ಗವಿ ಸಿದ್ಧಲಿಂಗೇಶ್ವರ ಜಲಪಾತಕ್ಕೆ ಬನ್ನಿ

    ಯಾದಗಿರಿ: ಪ್ರಕೃತಿ ತನ್ನಲ್ಲಿರುವ ವೈಶಿಷ್ಟ್ಯತೆಯ ಗುಟ್ಟನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎನ್ನುವುದಕ್ಕೆ ಯಾದಗಿರಿ ಜಿಲ್ಲೆಯೇ ಸಾಕ್ಷಿ. ಸುಡುಬಿಸಿಲಿಗೆ ಮೈ ಒಡ್ಡಿ ನಿಂತ ಬೃಹತ್ ಕಲ್ಲುಬಂಡೆಗಳು ಒಂದು ಕಡೆಯಾದರೆ, ಮಲೆನಾಡಿನ ಚೆಂದಕ್ಕೆ ಸ್ಪರ್ಧೆಯೊಡ್ಡುವ ನಿಸರ್ಗದ ಐಸಿರಿ ಮತ್ತೊಂದೆಡೆ. ಇಲ್ಲಿರುವ ಹಚ್ಚ ಹಸಿರು ನಿಸರ್ಗ ಪ್ರೇಮಿಗಳನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದ್ದರೆ, ಎಲ್ಲಾ ಋತುವಿನಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತದ ಕುತೂಹಲ ಮತ್ತೊಂದು ಕಡೆಯಾಗಿದೆ.

    ಈ ಜಲಧಾರೆಯನ್ನು ನೋಡಿದರೆ ಇದು ಮಲೆನಾಡು ಇರಬೇಕು ಅಂದುಕೊಂಡಿದ್ದರೆ ಖಂಡಿತ ನಿಮ್ಮ ಊಹೆ ತಪ್ಪು. ಬಿಸಿಲನಾಡು ಎಂದು ಕರೆಯಲ್ಪಡುವ ಯಾದಗಿರಿ ಜಿಲ್ಲೆಯಲ್ಲಿರುವ ಈ ಸೊಬಗ ಸಿರಿ ಮಿನಿಮಲೆನಾಡು ಎಂದೆ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಬಳಿಯ ಪ್ರಕೃತಿ ಮಾತೆಯ ಮಡಿಲಲ್ಲಿ ಗವಿ ಸಿದ್ಧಲಿಂಗೇಶ್ವರ ಜಲಪಾತವಿದೆ. ಇದು ಪ್ರಕೃತಿ ಪ್ರೇಮಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಜಿಲ್ಲಾ ಕೇಂದ್ರದಿಂದ ಕೇವಲ 35 ಕಿಲೋ ಮೀಟರ್ ಕ್ರಮಿಸಿದರೆ ಬೆಟ್ಟ ಗುಡ್ಡಗಳ ನಡುವೆ ತನ್ನದೆ ಐಸಿರಿ ಹೊತ್ತ ಈ ವಿಶೇಷ ಜಲಪಾತ ಸಿಗುತ್ತದೆ.

    ಎಲ್ಲಾ ಋತುವಿನಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತಕ್ಕೆ ಇಲ್ಲಿಯವರೆಗೂ ಬರದ ಛಾಯೆ ಆವರಿಸಿಲ್ಲ. ಇದು ಈ ಜಲಪಾತದ ಮತ್ತೊಂದು ವಿಶೇಷ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸಲೆಂದೇ ಕಲಬುರಗಿ, ರಾಯಚೂರು ಮತ್ತು ಜಿಲ್ಲೆಯ ಗಡಿಭಾಗದಲ್ಲಿರುವ ತೆಲಂಗಾಣ, ಆಂಧ್ರದಿಂದ ಪ್ರತಿದಿನ ನೂರಾರು ಪ್ರವಾಸಿಗರ ದಂಡೆ ಇಲ್ಲಿಗೆ ಬರುತ್ತದೆ. ಹಚ್ಚ ಹಸಿರಿನ ಸೊಬಗಿನ ಮಧ್ಯೆ ವಯ್ಯಾರದಿಂದ ಹರಿಯುತ್ತಿರುವ ಜಲಧಾರೆಯ ನಡುವೆ ನೆನೆದು ಪ್ರವಾಸಿಗರು ಮತ್ತು ಪುಟಾಣಿಗಳು ಗವಿಯೊಳಗೆ ಹೋಗುತ್ತಾರೆ.

    ಈ ಜಲಪಾತದ ಅಡಿಯ ಗುಹೆಯಲ್ಲಿ ಗವಿ ಸಿದ್ಧಲಿಂಗೇಶ್ವರ ದೇವಸ್ಥಾನವಿದೆ. ವಿಶಿಷ್ಟ ಎಂದರೆ ಗವಿ ಸಿದ್ಧಲಿಂಗೇಶ್ವರನ ದರ್ಶನಕ್ಕೆ ಹೋಗಬೇಕೆಂದರೆ ಜಲಪಾತದಿಂದ ಧುಮುಕುವ ನೀರಿನ ಅಡಿಯಲ್ಲೇ ಸಾಗಿ, ನೀರಿನಲ್ಲಿ ಮಿಂದ್ದೆದ್ದು ಸಿದ್ಧಲಿಂಗೇಶ್ವರನ ದರ್ಶನ ಪಡೆಯಬೇಕು.

    ಜಲಪಾತದ ನೀರಿನಿಂದ ಪವಿತ್ರರಾಗಿ ದೇವರ ದರ್ಶನ ಪಡೆದು ಕೃತಾರ್ಥರಾಗುವುದು ಒಂದೆಡೆಯಾದರೆ, ಜಲಧಾರೆಯ ಅಡಿಯಲ್ಲಿ ಮಿಂದೆದ್ದು ಹೊರ ಬರುವುದು ಮತ್ತೊಂದೆಡೆ. ಇದು ಪ್ರವಾಸಿಗರನ್ನು ಪುಳಕಿತರನ್ನಾಗಿಸುತ್ತಿದೆ. ಹೀಗಾಗಿ ಇಲ್ಲಿ ಪ್ರವಾಸಿಗರ ಜೊತೆ ಭಕ್ತರು ಸಹ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ.

    ಆದರೆ ವಿಪರ್ಯಾಸವೆಂದರೆ ಇಂತಹ ವಿಶಿಷ್ಟ ಜಿಲ್ಲೆಯಲ್ಲಿದ್ದರೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಈ ಸ್ಥಳವನ್ನು ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ. ಇದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೊಂಚ ಅಸಮಾಧಾನ ತರುತ್ತಿದೆ. ಯಾದಗಿರಿ ಅಂದರೆ ತುಂಬಾ ಬಿಸಿಲು ಎನ್ನುವವರು ನಿಮ್ಮ ಆತಂಕ ಬಿಟ್ಟು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಬಿಸಿಲು ನಾಡಿನಲ್ಲಿ ಜಲಧಾರೆಯ ಸಿರಿಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಶ್ರೀ ಗವಿ ಸಿದ್ಧಲಿಂಗೇಶ್ವರನ ಆಶೀರ್ವಾದ ಸಹ ಸಿಗಲಿದೆ.

  • ಮಳೆ ಇಲ್ಲದಿದ್ರೂ ವಿಸ್ಮಯ ರೀತಿಯಲ್ಲಿ ಬೆಟ್ಟದಿಂದ ಹರಿಯುತ್ತಿರುವ ಝಳು ಝಳು ನೀರು

    ಮಳೆ ಇಲ್ಲದಿದ್ರೂ ವಿಸ್ಮಯ ರೀತಿಯಲ್ಲಿ ಬೆಟ್ಟದಿಂದ ಹರಿಯುತ್ತಿರುವ ಝಳು ಝಳು ನೀರು

    ಬೆಂಗಳೂರು: ಮಳೆಗಾಲ ಕಳೆದು ಬೇಸಿಗೆ ಕಾಲದ ಆರಂಭದಲ್ಲಿ ನಾನಾ ವಿಸ್ಮಯಕಾರಿ ಘಟನೆಗಳಿಗೆ ಸಾಕ್ಷಿಯಾಗಿರುವ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಬೆಟ್ಟದಲ್ಲಿ ಈ ಬಾರಿ ಮತ್ತೊಂದು ಪವಾಡಕ್ಕೆ ಕಾರಣವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟ, ಸಮುದ್ರ ಮಟ್ಟದಿಂದ ಸರಿಸುಮಾರು 4620 ಅಡಿ ಎತ್ತರವಿದೆ. ಈ ಬೆಟ್ಟದ ಮಧ್ಯದ ಭಾಗದಲ್ಲಿ ಬೆಳ್ಳಿಯ ಹಾಗೂ ಹಾಲಿನ ಲೇಪನ ರೀತಿಯಲ್ಲಿ ಜೋಪು ನೀರು ಹರಿಯುತ್ತಿರುವುದು ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ. ಈ ಶಿವಗಂಗೆ ಬೆಟ್ಟ ಸಂಪೂರ್ಣ ಬೃಹತ್ ಆಕಾರದ ಕಲ್ಲು ಬಂಡೆಗಳಿಂದ ಕೂಡಿದ್ದು, ಈ ಬಂಡೆಗಳ ಮಧ್ಯೆ ಹರಿಯುತ್ತಿರುವ ಜೋಪು ನೀರನ್ನು ನೋಡಲು ಸುಂದರವಾಗಿದೆ.

    ಈ ಶಿವಗಂಗೆ ಬೆಟ್ಟ ಪುರಾತತ್ವ, ಮುಜರಾಯಿ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯಕ್ಕೆ ಕಾರಣವಾಗಿದ್ದು, ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿವೆ. ಹೀಗಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಸಹ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಸುಂದರ ರಮಣೀಯವಾಗಿರುವ ಧಾರ್ಮಿಕ ದತ್ತಿ ಹಾಗೂ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ್ದಾರೆ.

    ರಾಜ ಮಹರಾಜರು ಆಳ್ವಿಕೆಯಲ್ಲಿ ನಾನಾ ಪವಾಡಗಳಿಗೆ ಸಾಕ್ಷಿಯಾಗಿ, ಇಂದಿಗೂ ವಿಸ್ಮಯಗಳಿಗೆ ಸಾಕ್ಷಿಯಾಗಿರುವ, ಈ ಶಿವಗಂಗೆ ಬೆಟ್ಟದ ಸುತ್ತಲೂ ಈ ನೀರಿನ ಝರಿಗಳು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿವೆ.