Tag: Waterfall

  • ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು

    ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು

    ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಧುಮ್ಮುಕಿ ಹರಿಯುತ್ತಿದೆ.

    ಕೊಡಗು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುತ್ತಿರುವ ಮಂಜು, ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು. ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು, ಗಿರಿಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ, ನೈಜ ಸೌಂದರ್ಯದ ಕೊಡಗಿನಲ್ಲಿಗ ಜಲಸುಂದರಿಯರದ್ದೇ ದರ್ಬಾರ್ ಆಗಿದೆ.

    ಕೊಡಗಿನಲ್ಲಿ ಕಳೆದ ಎರಡು, ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗಿನ ಜಲಪಾತಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಡಿಕೇರಿಯ ಚೆಟ್ಟಳ್ಳಿ ರಸ್ತೆ ಬದಿಯಲ್ಲಿ ಎತ್ತರದಿಂದ ದುಮ್ಮಿಕ್ಕುತ್ತಿರುವ ಅಭ್ಯಾಲ ಜಲಪಾತ ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ಮಾರ್ಗವಾಗಿ ತೆರಳುತ್ತಿರುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದು ಮುಂದೆ ಸಾಗುತ್ತಿದ್ದಾರೆ.

    ಜಿಲ್ಲೆಯ ಇತರ ಭಾಗಗಳ ಜಲಪಾತಗಳು ಕೂಡ ಜಲರಾಶಿಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಮಾನ್ಸೂನ್ ಕಾಲದ ಪ್ರವಾಸಿಗರಿಗೆ ಇವುಗಳೇ ಆಕರ್ಷಣೀಯ ಕೇಂದ್ರಗಳಾಗಿವೆ. ಪ್ರವಾಸಿಗರು ಸ್ಥಳೀಯರು ಇದೀಗ ಜಲಪಾತದತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ:ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು

  • ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು – ಯುವತಿ ಸೇರಿ ಮೂವರ ದುರ್ಮರಣ

    ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಕಾರು – ಯುವತಿ ಸೇರಿ ಮೂವರ ದುರ್ಮರಣ

    ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೊಳೆಗೆ ಬಿದ್ದು, ಮೂವರು ಮೃತಪಟ್ಟಿರುವ ಘಟನ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕೊಡ್ನಮನೆಯಲ್ಲಿ ನಡೆದಿದೆ.

    ಕಾರಿನ ನಿಯಂತ್ರಣ ತಪ್ಪಿ ಉಂಚಳ್ಳಿ ಜಲತಾಪಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸೇರಿ ಒಟ್ಟು ಮೂವರು ಕಾರಿನ ಸಮೇತ ಹೊಳೆಗೆ ಬಿದ್ದು ಮೃತಪಟ್ಟಿದ್ದಾರೆ. ಬುಧವಾರ ಸಂಜೆಯ ವೇಳೆಗೆ ಘಟನೆ ಜರುಗಿದ್ದು, ಕಾರು ಹೊಳೆಗೆ ಬಿದ್ದ ಸಮಯದಲ್ಲಿ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾರೂ ಕಾರನ್ನು ಗಮನಿಸಿಲ್ಲ. ಇದರಿಂದ ಇಂದು ಸಂಜೆ ಈ ಘಟನೆ ಬೆಳಕಿಗೆ ಬಂದಿದೆ.

    ಕಾರು ಧಾರವಾಡದ ನೋಂದಣಿ ಸಂಖ್ಯೆಯಿದ್ದು, ಹುಬ್ಬಳ್ಳಿಯವರು ಎನ್ನಲಾಗಿದೆ. ಮೂವರೂ 25 ವರ್ಷದ ಒಳಗಿನವರಾಗಿದ್ದು, ಸಿದ್ದಾಪುರದ ಉಂಚಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಿಂದ ಹಿಂತಿರುಗಿ ಬರುವಾಗ ಕೋಡ್ನಗದ್ದೆ ಸಮೀಪದ ತಿರುವಿನಲ್ಲಿ ಆಯತಪ್ಪಿ ಕೋಡ್ನಗದ್ದೆ ಹೊಳೆಗೆ ಕಾರು ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  • ವಾಟ್ಸಪ್‍ನಲ್ಲಿ ಪತಿ ಬ್ಯುಸಿ – ಸೆಲ್ಫಿ ಕ್ಲಿಕ್ಕಿಸ್ತಿರೋವಾಗ್ಲೇ ನೀರಿಗೆ ಬಿದ್ದ ಮಹಿಳೆ

    ವಾಟ್ಸಪ್‍ನಲ್ಲಿ ಪತಿ ಬ್ಯುಸಿ – ಸೆಲ್ಫಿ ಕ್ಲಿಕ್ಕಿಸ್ತಿರೋವಾಗ್ಲೇ ನೀರಿಗೆ ಬಿದ್ದ ಮಹಿಳೆ

    – ಗಂಡನೊಂದಿಗೆ ಟ್ರಿಪ್ ಹೋಗಿದ್ದವಳು ವಾಪಸ್ ಬರಲೇ ಇಲ್ಲ

    ಭೋಪಾಲ್: ಮಹಿಳೆಯೊಬ್ಬಳು ಸೆಲ್ಫಿ ಕ್ಲಿಕ್ಕಿಸುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಹಲಾಲಿ ಡ್ಯಾಂನಲ್ಲಿ ನಡೆದಿದೆ.

    ಹಿಮಾನಿ ಮಿಶ್ರಾ (33) ಮೃತ ಮಹಿಳೆ. ಈಕೆ ತನ್ನ ಪತಿ ಡಾ.ಉತ್ಕರ್ಶ್ ಮಿಶ್ರಾ ಜೊತೆ ಭಾನುವಾರ ಹಲಾಲಿ  ಡ್ಯಾಂಗೆ ಹೋಗಿದ್ದರು. ಈ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಈ ದುರಂತ ನಡೆದಿದೆ.

    ಮಧ್ಯಪ್ರದೇಶದ ನಿವಾಸಿ ಡಾ.ಉತ್ಕರ್ಶ್ ಮಿಶ್ರಾ 9 ವರ್ಷಗಳ ಹಿಂದೆ ಹಿಮಾನಿ ಅವರನ್ನು ವಿವಾಹವಾಗಿದ್ದರು. ಮಿಶ್ರಾ ಭೋಪಾಲ್‍ನ ವೀಣಾವಾದಿನಿ ಕಾಲೇಜಿನಲ್ಲಿ ಆಯುರ್ವೇದ ವೈದ್ಯರಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಭಾನುವಾರ ದಂಪತಿ ಹಲಾಲಿ ಡ್ಯಾಂಗೆ ಹೋಗಿದ್ದಾರೆ. ತುಂಬಾ ಸಮಯದವರೆಗೂ ಇಬ್ಬರೂ ಸುತ್ತಾಡಿದ್ದಾರೆ. ಜೊತೆಗೆ ಎಲ್ಲಾ ಕಡೆ ಅನೇಕ ಫೋಟೋಗಳನ್ನು ತೆಗೆದುಕೊಂಡಿದ್ದಾರೆ.

    ದಂಪತಿ ಹಲಾಲಿ ಡ್ಯಾಂ ಕೆಳಭಾಗದಿಂದ ಮೇಲೆ ಹೋಗಲು ಪ್ರಾರಂಭಿಸಿದ್ದರು. ಪತಿ ತಮ್ಮ ಮೊಬೈಲಿನಲ್ಲಿ ವಾಟ್ಸಪ್ ನೋಡುತ್ತಿದ್ದರು. ಇತ್ತ ಹಿಮಾನಿ ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಮೇಲೆ ಹತ್ತುವಾಗ ಹಿಮಾನಿ ಕಾಲು ಜಾರಿ ಡ್ಯಾಂಗೆ ಬಿದ್ದಿದ್ದಾಳೆ. ಹೆಚ್ಚಾಗಿ ನೀರು ಇದ್ದುದ್ದರಿಂದ ಹಿಮಾನಿ ಕೊಚ್ಚಿಕೊಂಡು ಮುಂದೆ ಹೋಗಿದ್ದು, ಸ್ವಲ್ಪ ದೂರದವರೆಗೂ ಕಾಣಿಸಿಕೊಂಡಿದ್ದಾಳೆ. ನಂತರ ಹಿಮಾನಿ ಕಣ್ಮರೆಯಾಗಿದ್ದಾಳೆ.

    ತಕ್ಷಣ ಪತಿ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅವರು ಪೊಲೀಸರಿಗೆ ಫೋನ್ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಾತ್ರಿಯವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಎಲ್ಲೂ ಹಿಮಾನಿ ಪತ್ತೆಯಾಗಿರಲಿಲ್ಲ. ಸತತ 16 ಗಂಟೆಗಳ ನಂತರ ಹಿಮಾನಿಯ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹಲಾಲಿ ಡ್ಯಾಮ್ ನೋಡಲು ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಆದರೆ ಇಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ. ಹೀಗಾಗಿ ಇಲ್ಲಿಗೆ ಬರುವ ಜನರು ತಮಗೆ ಇಷ್ಟ ಬಂದ ಸ್ಥಳಕ್ಕೆ ಹೋಗಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಒಂದು ವೇಳೆ ನೀರು ತುಂಬಾ ಹೆಚ್ಚಾಗಿದ್ದರೆ ಈ ರೀತಿಯ ಅವಘಡ ಸಂಭವಿಸುತ್ತವೆ. ಕಳೆದ ವರ್ಷ ನಾಲ್ವರು ಸಾವನ್ನಪ್ಪಿದ್ದಾರೆ  ಎಂದು ಸ್ಥಳೀಯರು ಹೇಳಿದ್ದಾರೆ.

  • ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದ ಯುವಕ ಸಾವು

    ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದ ಯುವಕ ಸಾವು

    ಹಾಸನ: ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

    ಸಕಲೇಶಪುರ ತಾಲೂಕಿನ ಕಾಡುಮನೆ ಸಮೀಪ ಗುಡಾಣಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರತನ್ (26) ಮೃತಪಟ್ಟ ದುರ್ದೈವಿ. ರತನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನು. ಗುರುವಾರ ರಾತ್ರಿಯಷ್ಟೇ ಬೆಂಗಳೂರಿನಿಂದ ಮಹಾಲಯ ಅಮಾವಾಸ್ಯೆ ಅಂಗವಾಗಿ ಊರಿಗೆ ಬಂದಿದ್ದ ಎಂದು ತಿಳಿದುಬಂದಿದೆ.

    ತನ್ನ ಕುಟುಂಬದ ಇತರ ನಾಲ್ಕು ಜನ ಸಂಬಂಧಿಕರ ಜೊತೆ ಗುಡಾಣಕೆರೆ ಸಮೀಪವಿರುವ ಅಬ್ಬಿಗುಂಡಿ ಜಲಪಾತಕ್ಕೆ ಹೋಗಿದ್ದನು. ಈ ವೇಳೆ ಜೊತೆಯಲ್ಲಿದ್ದ ಒಬ್ಬರಿಗೆ ಮೊಬೈಲ್ ಕೊಟ್ಟು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಮೇಲಿಂದ ಬಿದ್ದಿದ್ದಾನೆ. ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟಾಗಿ ನೀರಿನಲ್ಲಿ ಮುಳುಗಿ ರತನ್ ಸಾವನ್ನಪ್ಪಿದ್ದಾನೆ.

    ಮಾಹಿತಿ ಪೊಲೀಸರು ಮುಳುಗು ತಜ್ಞರ ಸಹಾಯದಿಂದ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಭಾವಿ ಪತಿಯೊಂದಿಗೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಟೆಕ್ಕಿ ಸಾವು

    ಭಾವಿ ಪತಿಯೊಂದಿಗೆ ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಟೆಕ್ಕಿ ಸಾವು

    – ಎಂಜಿನಿಯರಿಂಗ್ ಮುಗಿಸಿ, ಅಮೆರಿಕದಲ್ಲಿ ಕೆಲಸ
    – ಸಂಬಂಧಿಕರನ್ನ ಭೇಟಿ ಮಾಡಿ ಬರುವಾಗ ದುರಂತ

    ಹೈದರಾಬಾದ್: ಸೆಲ್ಫಿ ಕ್ಕಿಕ್ಕಿಸಿಕೊಳ್ಳುವಾಗ ಆಕಸ್ಮಿಕವಾಗಿ ಅಮೆರಿಕದ ಜಲಪಾತದಲ್ಲಿ ಬಿದ್ದು ಆಂಧ್ರ ಪ್ರದೇಶದ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ನಡೆದಿದೆ.

    ಕಮಲಾ ಮೃತ ಯುವತಿ. ಕಮಲಾ ತನಗೆ ನಿಶ್ಚಿಯವಾಗಿದ್ದ ಹುಡುಗನೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಇಬ್ಬರೂ ಕಾಲು ಜಾರಿಬಿದ್ದಿದ್ದಾರೆ ಎಂದು ವರದಿಯಾಗಿದೆ. ಕಮಲಾ ಅಟ್ಲಾಂಟಾದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಳು. ಅವರನ್ನು ಭೇಟಿ ಮಾಡಿದ ನಂತರ ತನ್ನ ಮನೆಗೆ ಹಿಂದಿರುಗುವಾಗ ಭಾವಿ ಪತಿಯ ಜೊತೆ ಬಾಲ್ಡ್ ರಿವರ್ ಫಾಲ್ಸ್‌ಗೆ ಹೋಗಿದ್ದಳು.

    ಈ ವೇಳೆ ಇಬ್ಬರು ಫಾಲ್ಸ್ ಮುಂದೆ ಸೆಲ್ಫಿ ಕ್ಲಿಕ್ಕಿಸುವಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದಿದ್ದಾರೆ. ತಕ್ಷಣ ಸ್ಥಳದಲ್ಲಿದ್ದವರು ಕಮಲಾಳ ಭಾವಿ ಪತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಮಲಾ ಎಲ್ಲೂ ಪತ್ತೆಯಾಗಿಲ್ಲ. ಸ್ವಲ್ಪ ಸಮಯದ ನಂತರ ಕಮಲಾ ಜಲಪಾತದಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ನಂತರ ಸಿಪಿಆರ್ ಸಿಬ್ಬಂದಿ ಆಕೆಯನ್ನು ಮೇಲಕ್ಕೆ ಎತ್ತಿಕೊಂಡು ಬಂದಿದ್ದಾರೆ. ಆದರೆ ಕಮಲಾ ಅಷ್ಟರಲ್ಲಿಯೇ ಮೃತಪಟ್ಟಿದಳು.

    ಸದ್ಯಕ್ಕೆ ಕಮಲಾ ಮೃತದೇಹವನ್ನು ಭಾರತಕ್ಕೆ ತೆಗೆದುಕೊಂಡು ಬರುವ  ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ ಮಗಳ ಸಾವಿನ ಸುದ್ದಿ ತಿಳಿದು ಕಮಲಾ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ನನ್ನ ಮಗಳು ಎಂಜಿನಿಯರಿಂಗ್ ಪದವಿ ಪಡೆದಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ಹೋಗಿದ್ದಳು. ಅಲ್ಲಿಯೇ ಅವಳಿಗೆ ಉದ್ಯೋಗ ಕೂಡ ಸಿಕ್ಕಿತ್ತು ಎಂದು ತಾಯಿ ಕಣ್ಣೀರು ಹಾಕಿದರು.

    ಕಮಲಾ ಸಹೋದರಿ ಮದುವೆಯಾಗಿ ಚೆನ್ನೈನಲ್ಲಿ ನೆಲೆಸಿದ್ದಾರೆ. ಕಮಲಾ ಕುಟುಂಬವು ಕೃಷ್ಣ ಜಿಲ್ಲೆಯ ಗುಡ್ಲವಲ್ಲೇರು ಎಂಬಲ್ಲಿ ವಾಸ ಮಾಡುತ್ತಿದ್ದು, ಪದವಿ ಮುಗಿದ ನಂತರ ಕಮಲಾ ಅಮೆರಿಕಾಗೆ ಹೋಗಿ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.

  • ‘ಅಣಶಿ’ಯ ರುದ್ರ ರಮಣೀಯ ದೃಶ್ಯ- ನೃತ್ಯದಾಕಾರದ ಜಲಪಾತದಲ್ಲಿ ಮಿಂದೇಳಲು ಪ್ರವಾಸಿಗರ ದಂಡು

    ‘ಅಣಶಿ’ಯ ರುದ್ರ ರಮಣೀಯ ದೃಶ್ಯ- ನೃತ್ಯದಾಕಾರದ ಜಲಪಾತದಲ್ಲಿ ಮಿಂದೇಳಲು ಪ್ರವಾಸಿಗರ ದಂಡು

    – ರಸ್ತೆಯಲ್ಲೇ ಇರುವುದರಿಂದ ಪ್ರವಾಸಿಗರಿಗೆ ಹಬ್ಬ

    ಕಾರವಾರ: ಮಳೆಗಾಲ ಮುಗಿಯುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಹಸಿರು ಕಾನನಗಳ ಮಧ್ಯೆ ಜಲಪಾತಗಳಿಗೇನೂ ಕಮ್ಮಿ ಇಲ್ಲ. ಅದೇ ರೀತಿ ಇದೀಗ ಬಂಡೆಗಳನ್ನು ಸೀಳಿಕೊಂಡು ಹಾಲಿನಂತೆ ಧುಮ್ಮಕ್ಕುವ ಅಣಶಿ ಜಲಪಾದದ ನರ್ತನ ನೋಡಿ ಪ್ರವಾಸಿಗರು ಮಾರು ಹೋಗದಿದ್ದಾರೆ. ರಸ್ತೆ ಪಕ್ಕದಲ್ಲೇ ಇರುವುದರಿಂದ ಪ್ರವಾಸಿಗರಿಗೆ ಎಂಜಾಯ್ ಮಾಡಲು ಇನ್ನೂ ಅನುಕೂಲವಾಗಿದೆ.

    ಜಿಲ್ಲೆಯ ಕಾರವಾರ-ಜೋಯಿಡಾ ಘಟ್ಟ ಪ್ರದೇಶದ ಅಣಶಿ ಬಳಿ ಮಳೆ ನಿಲ್ಲುತಿದ್ದಂತೆ ಜಲಪಾತ ದುಮ್ಮಿಕ್ಕಿ ಹರಿಯುತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕಾರವಾರದಿಂದ 40 ಕಿಲೊಮೀಟರ್ ನಷ್ಟು ದೂರದ ಅಣಶಿಯ ಅಭಯಾರಣ್ಯದಲ್ಲಿ ದುಮ್ಮಿಕ್ಕಿ ಹರಿಯುವ ಈ ಜಲಪಾತ ಮಳೆಗಾಲದಿಂದ ಪ್ರಾರಂಭವಾಗಿ ಬೇಸಿಗೆಯ ಒಂದು ತಿಂಗಳ ಕಾಲ ದಟ್ಟ ಕಾಡಿನ ನಡುವಿನ ಬಂಡೆಕಲ್ಲುಗಳ ಮಧ್ಯದಲ್ಲಿ ಹಾಲಿನಂತೆ ಭೋರ್ಗರೆದು ಹರಿಯುತ್ತದೆ.

    ರಸ್ತೆ ಪಕ್ಕದಲ್ಲೇ ಇರುವುದರಿಂದ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ, ಜಲಪಾತ ವೀಕ್ಷಿಸಿ ಮುಂದೆ ಸಾಗುತ್ತಾರೆ. ಹೆಚ್ಚು ಸಮಯವಿದ್ದರೆ ಜಲಪಾತದಲ್ಲೇ ಮಿಂದೇಳುತ್ತಾರೆ. ಇದನ್ನು ಗಮನಿಸಿದ ಅರಣ್ಯ ಇಲಾಖೆ ಅಗತ್ಯ ಸೌಲಭ್ಯ ನೀಡುವ ಮೂಲಕ ಪ್ರವಾಸಿಗರ ವೀಕ್ಷಣೆಗಾಗಿ ವ್ಯವಸ್ಥೆ ಕಲ್ಪಿಸಿದೆ. ರಸ್ತೆಯ ಪಕ್ಕದಲ್ಲೇ ಹರಿಯುವುದರಿಂದ ಪ್ರವಾಸಿಗರ ದಂಡೇ ಹರಿದುಬರುತಿದ್ದು, ಈ ಚಿಕ್ಕ ಫಾಲ್ಸ್ ನೋಡಿ ಜನ ಎಂಜಾಯ್ ಮಾಡುತಿದ್ದಾರೆ.

  • ಮಲೆನಾಡಿನಲ್ಲಿ ಉತ್ತಮ ಮಳೆ- ಬಂಡೆಗಳ ಮಧ್ಯದಿಂದ ಹರಿಯುತ್ತಿರೋ ಜಲಧಾರೆ

    ಮಲೆನಾಡಿನಲ್ಲಿ ಉತ್ತಮ ಮಳೆ- ಬಂಡೆಗಳ ಮಧ್ಯದಿಂದ ಹರಿಯುತ್ತಿರೋ ಜಲಧಾರೆ

    ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ಕಳೆದ ನಾಲ್ಕೈದು ದಿನಗಳಿಂದ ಮಳೆಯಾಗುತ್ತಿದೆ.

    ಜಿಲ್ಲೆಯ ಸಂಪೂರ್ಣ ಮಲೆನಾಡಿನ ಭಾಗವಾದ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ಭಾಗಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಅತಿಯಾದ ಮಳೆಯ ಕಾರಣ ಹೊಸನಗರ ತಾಲೂಕಿನ ಹುಲಿಕಲ್ ಬಳಿ ರಸ್ತೆಯ ಅಕ್ಕಪಕ್ಕದ ಕಲ್ಲು ಬಂಡೆಗಳ ಮಧ್ಯದಿಂದಲೂ ನೀರು ಹರಿಯುತ್ತಿದ್ದು, ಜಲಪಾತ ಎಂಬಂತೆ ನೋಡುಗರಿಗೆ ಭಾಸವಾಗುತ್ತಿದೆ.

    ಈ ಮಾರ್ಗದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕೆಲಕಾಲ ತಮ್ಮ ವಾಹನವನ್ನು ನಿಲ್ಲಿಸಿ, ಈ ಜರಿ ರೂಪದ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಮಾತ್ರ ಕಾಣಸಿಗುವ ಈ ದೃಶ್ಯವನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

    ಕೊಡಗು ಜಿಲ್ಲೆಯಲ್ಲೂ ಮುಂಗಾರು ಪ್ರಾರಂಭವಾಗಿದ್ದು, ರಾತ್ರಿಯಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗುತ್ತಿದೆ. ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು. ಇದೀಗ ಧಾರಾಕಾರವಾಗಿ ಮಡಿಕೇರಿ ನಗರದಲ್ಲಿ ಮಳೆಯಾಗುತ್ತಿದೆ. ಬಿಡುವು ಕೊಟ್ಟು ಸುರಿಯುತ್ತಿರುವ ಗಾಳಿ-ಮಳೆಗೆ ಕೊಡಗು ಅಕ್ಷರಶಃ ಕೆಲವು ಭಾಗದಲ್ಲಿ ಮಂಜು ಮುಸುಕಿದ ವಾತಾವರಣವಿದೆ.

    ಬ್ರಹ್ಮಗಿರಿ ತಪ್ಪಲು, ಪುಷ್ಪಗಿರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ಹಾಗೂ ವಿರಾಜಪೇಟೆ ಭಾಗದಲ್ಲಿ ಮಳೆ ತುಸು ಬಿರುಸು ಪಡೆದುಕೊಂಡಿದೆ. ಉತ್ತಮ ಮಳೆ ಆಗುತ್ತಿರುವುದರಿಂದ ಕಾವೇರಿಯಲ್ಲೂ ನೀರಿನ ಹರಿವು ಹೆಚ್ಚಾಗುತ್ತಿದೆ. ಅಲ್ಲದೆ ಜಿಲ್ಲೆಯ ಪ್ರಮುಖ ಹಾರಂಗಿ ಜಲಾಶಯದಲ್ಲೂ ನೀರಿನ ಒಳ ಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ಹಾಗೆಯೇ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರಲ್ಲೂ ಉತ್ಸಾಹ ಮನ ಮಾಡಿದೆ.

  • ಫೋಟೋ ಕ್ಲಿಕ್ಕಿಸೋ ವೇಳೆ ಕಾಲು ಜಾರಿ ಜಲಪಾತದಲ್ಲಿ ಬಿದ್ದ ಯುವಕ: ವಿಡಿಯೋ

    ಫೋಟೋ ಕ್ಲಿಕ್ಕಿಸೋ ವೇಳೆ ಕಾಲು ಜಾರಿ ಜಲಪಾತದಲ್ಲಿ ಬಿದ್ದ ಯುವಕ: ವಿಡಿಯೋ

    ಭುವನೇಶ್ವರ್: ಫೋಟೋ ತೆಗೆಸಿಕೊಳ್ಳುವಾಗ ಯುವಕನೊಬ್ಬ ಕಾಲು ಜಾರಿ ಜಲಪಾತಕ್ಕೆ ಬಿದ್ದ ಘಟನೆ ಒಡಿಶಾದ ಕೋರಾಪುತ್‍ನ ಗಲಿಗಬಾದರ್ ಜಲಪಾತದಲ್ಲಿ ನಡೆದಿದೆ.

    ಸುಬ್ರತ್ ನಾಗ್(24) ಜಲಪಾತದಲ್ಲಿ ಬಿದ್ದು ಗಾಯಗೊಂಡ ಯುವಕ. ಸುಬ್ರತ್ ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಜಲಪಾತಕ್ಕೆ ಹೋಗಿದ್ದನು. ಆಗ ತನ್ನ ಸ್ನೇಹಿತನಿಗೆ ಹೇಳಿ ಅಲ್ಲಿ ಫೋಟೋ ತೆಗೆಸಿಕೊಳ್ಳುವಾಗ ಈ ಘಟನೆ ನಡೆದಿದೆ.

    ಜಲಪಾತದ ನೀರು ಸಾಮಾನ್ಯವಾಗಿ ಹರಿಯುತ್ತಿದ್ದು, ಸುಬ್ರತ್ ಅಲ್ಲಿ ಫೋಟೋ ತೆಗೆಸಿಕೊಳ್ಳಲೆಂದು ಹೋಗಿದ್ದನು. ಆದರೆ ಫೋಟೋಗೆ ಪೋಸ್ ಕೊಡಬೇಕಾದರೆ ಸುಬ್ರತ್ ಕಾಲು ಜಾರಿ ಕೆಳಗೆ ಬಿದಿದ್ದಾನೆ.

    ಸುಬ್ರತ್ ನಾಗ್‍ನನ್ನು ಪೋಟಂಗಿ ಕಮ್ಯೂನಿಟಿ ಹೆಲ್ತ್ ಕೇರ್ ಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅಲ್ಲಿಂದ ಕೋರಾಪುತ್ ಆಸ್ಪತ್ರೆಯಲ್ಲಿ ಸುಬ್ರತ್‍ನನ್ನು ದಾಖಲಿಸಿದ್ದರು. ಸದ್ಯ ಸುಬ್ರತ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ ಎಂದು ವರದಿಯಾಗಿದೆ.

  • ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಶಿವಮೊಗ್ಗ: ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಇಂದು ಪತ್ತೆಯಾಗಿದ್ದಾರೆ.

    ಇಂದು 8 ಗಂಟೆಯಿಂದ ಜ್ಯೋತಿರಾಜ್ ಗಾಗಿ ಪತ್ತೆ ಕಾರ್ಯಾಚರಣೆ ಆರಂಭವಾಗಿತ್ತು. ಜಲಪಾತದ ಕೆಳಗೆ ಅಗ್ನಿಶಾಮಕ ದಳ ಮತ್ತು ಸಾಗರ, ಸಿದ್ದಾಪುರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದರು. ಕೋತಿರಾಜ್ ಪತ್ತೆಗೆ ಡ್ರೋನ್ ಕ್ಯಾಮೆರಾ ಕೂಡ ಬಳಸಿದ್ದರು.

    ಜ್ಯೋತಿರಾಜ್ ಪೆಟ್ಟು ಬಿದ್ದು ಜಲಪಾತದ ನಡುವಿನ ಬಂಡೆಗಳ ನಡುವೆ ಸಿಲುಕಿಕೊಂಡಿದ್ದರು. ಕೈಗೆ ಗಾಯವಾಗಿ ಬಂಡೆ ಬಳಿಯ ಪೊಟರೆಯಲ್ಲಿ ಕುಳಿತಿದ್ದರು. ಡ್ರೋನ್ ಕ್ಯಾಮೆರಾ ಮೂಲಕ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ. ಅಗ್ನಿಶಾಮಕ ದಳ, ಸಾಗರ ಮತ್ತು ಸಿದ್ದಾಪುರ ಪೊಲೀಸರು, ಕೋತಿ ರಾಜ್ ತಂಡದವರು ಮತ್ತು ಸ್ಥಳೀಯರು ಸೇರಿ ಐವತ್ತಕ್ಕೂ ಹೆಚ್ಚು ಜನ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ: ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು. ಇದನ್ನು ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

     

     

  • ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

    ಕಾಲು ಜಾರಿ ಗಗನಚುಕ್ಕಿ ಜಲಪಾತದೊಳಗೆ ಬಿದ್ದು 2 ದಿನ ಬಂಡೆ ಮೇಲೆ ಕಾಲ ಕಳೆದ ವ್ಯಕ್ತಿಯ ರಕ್ಷಣೆ

    ಮಂಡ್ಯ: ಪ್ರವಾಸಕ್ಕೆ ಬಂದಿದ್ದ ವೇಳೆ ಕಾಲು ಜಾರಿ ಜಲಪಾತದೊಳಗೆ ಬಿದ್ದ ವ್ಯಕ್ತಿಯೊಬ್ಬರು ಎರಡು ದಿನ ಬಂಡೆಯ ಮೇಲೆ ಕಾಲಕಳೆದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

     

    ಜಿಲ್ಲೆಯ ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ 37 ವರ್ಷದ ಖಾದರ್ ಕಳೆದ ಶನಿವಾರ ಗಗನಚುಕ್ಕಿಗೆ ಬಂದಿದ್ರು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದಿದ್ದಾರೆ.

    ಮೇಲಿಂದ ಬಿದ್ದ ರಭಸಕ್ಕೆ ಇವರ ಎಡಗೈ, ಕಾಲು ಮುರಿದು ಮೂರ್ಛೆ ತಪ್ಪಿದ್ದಾರೆ. ನಂತರ ಕಣ್ಣು ಬಿಟ್ಟು ನೋಡಿದಾಗ ಕತ್ತಲಾಗಿತ್ತು. ಎರಡು ದಿನ ಕೂಗಿಕೊಂಡರೂ, ಯಾರೊಬ್ಬರಿಗೂ ಇವರ ಚೀರಾಟ ಕೇಳಿಸಿಲ್ಲ.

    ಖಾದರ್ ನೀರನ್ನೇ ಕುಡಿದು ಎರಡು ದಿನ ಕಾಲ ಕಳೆದಿದ್ದಾರೆ. ಇಂದು ಪ್ರವಾಸಿಗರು ಬಂದಿರೋದನ್ನ ಗಮನಿಸಿದ ಖಾದರ್, ತಾನು ಹಾಕಿಕೊಂಡಿದ್ದ ಕೆಂಪು ಬಟ್ಟೆಯನ್ನ ತೋರಿಸಿ ಕೂಗಿಕೊಂಡಿದ್ದಾರೆ.

    ಇದನ್ನ ಗಮನಿಸಿದ ಸಾರ್ವಜನಿಕರು ಈ ಮಾಹಿತಿಯನ್ನ ಬೆಳಕವಾಡಿ ಪೊಲೀಸರಿಗೆ ನೀಡಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು, ನುರಿತರನ್ನು ಜಲಪಾತದ ಕೆಳಕ್ಕೆ ಇಳಿಸಿ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಖಾದರ್ ಅವರನ್ನ ರಕ್ಷಣೆ ಮಾಡಿದ್ದಾರೆ.