Tag: water tank

  • ನೀರಿನ ಹೊಂಡದಲ್ಲಿ ಸಿಲುಕಿದ್ದ ಶ್ವಾನವನ್ನು ಕಾಪಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

    ನೀರಿನ ಹೊಂಡದಲ್ಲಿ ಸಿಲುಕಿದ್ದ ಶ್ವಾನವನ್ನು ಕಾಪಾಡಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ

    ಮೈಸೂರು: ನಗರದ ಅರಮನೆ ಮೈದಾನದ ಆವರಣದಲ್ಲಿರುವ ನೀರಿನ ಹೊಂಡಕ್ಕೆ ಬಿದ್ದು, ಪರದಾಡುತ್ತಿದ್ದ ಶ್ವಾನವೊಂದನ್ನು ರಕ್ಷಿಸಲಾಗಿದೆ.

    ಪೊಲೀಸ್ ಇಲಾಖೆಯ ಶ್ವಾನದಳದ ಎಎಸ್‍ಐ ಶಿವಾಜಿ ರಾವ್ ಅವರು ಹೊಂಡದಲ್ಲಿ ಬಿದ್ದು ಸಿಲುಕಿದ್ದ ಶ್ವಾನವನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ನೀರು ಕುಡಿಯಲೆಂದು ಹೊಂಡಕ್ಕೆ ಇಳಿದಿದ್ದ ಶ್ವಾನ ಬಳಿಕ ಮೇಲೆ ಬರಲಾಗದೆ ಪರದಾಡುತ್ತಿತ್ತು. ಇದನ್ನ ಗಮನಿಸಿದ ಪೊಲೀಸ್ ಅಧಿಕಾರಿ ಸ್ಥಳಕ್ಕೆ ತೆರಳಿ ಶ್ವಾನವನ್ನು ಹೊಂಡದಿಂದ ಮೇಲಕ್ಕೆತ್ತಿದ್ದಾರೆ. ಹೊಂಡದಿಂದ ಪಾರಾದ ಶ್ವಾನ ಅಲ್ಲಿಂದ ಕಾಲ್ಕಿತ್ತಿದೆ.

  • ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

    ನವದೆಹಲಿ: ಮನೆಯ ಹೊರಗಡೆ ಆಟವಾಡುತ್ತಿದ್ದ 2 ವರ್ಷದ ಕಂದಮ್ಮ ಏಕಾಏಕಿ ಕಾಣೆಯಾಗಿ, ಬಳಿಕ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿರೋ ಘಟನೆ ಚರೋಲಿಯ ದಿಘಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ಸುಭಾಷ್ ಗೌರವ್ ತಿವಾರಿ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಂದೆ ಗೌರವ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆಯಷ್ಟೇ ಉತ್ತರಪ್ರದೇಶದಿಂದ ಪುಣೆಗೆ ಬಂದಿದ್ದರು. ಮಗನಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಹಾಗೂ ಆತನ ಭವಿಷ್ಯದ ದೃಷ್ಟಿಯಿಂದ ನಾವು ಇಲ್ಲಿಗೆ ಬಂದಿದ್ದೆವು ಅಂತ ಗೌರವ್ ದುಃಖ ತೋಡಿಕೊಂಡರು.

    ಕಳೆದ ಭಾನುವಾರ ಮಧ್ಯಾಹ್ನ ತಾಯಿ ಮಗುವಿಗೆ ಊಟ ಮಾಡಿಸುತ್ತಿದ್ದರು. ಈ ಮಧ್ಯೆ ಗ್ಯಾಸ್ ಆಫ್ ಮಾಡಲೆಂದು ಮನೆಯೊಳಗೆ ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮಗ ಅಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ಪೋಷಕರು ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿದರು. ಮಗ ಎಲ್ಲೂ ಕಾಣಿಸದಿದ್ದಾಗ ಕಿಡ್ನಾಪ್ ಆಗಿರಬಹುದೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪೋಷಕರ ದೂರಿನಂತೆ ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಮುಚ್ಚಳ ತೆಗೆದು ನೋಡಿದ್ದಾರೆ. ಈ ವೇಳೆ ಕಂದಮ್ಮನ ಶವ ನೀರಿನಲ್ಲಿ ತೇಲುತ್ತಿರುವುದು ಬೆಳಕಿಗೆ ಬಂದಿದೆ. ಮಗುವಿನ ತಲೆಯ ಮೇಲೆ ಗಾಯಗಳಿದ್ದಿದ್ದರಿಂದ ಆತ ಟ್ಯಾಂಕಿನೊಳಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಈ ಕುರಿತು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾಲು, ಸೊಂಟಕ್ಕೆ ಸ್ವಾಧೀನ ಇಲ್ಲದಿದ್ರೂ ಬದುಕುವ ಛಲ-ಬಡವರು, ನಿರ್ಗತಿಕರ ಪಾಲಿನ ಸೇವಕ

    ಕಾಲು, ಸೊಂಟಕ್ಕೆ ಸ್ವಾಧೀನ ಇಲ್ಲದಿದ್ರೂ ಬದುಕುವ ಛಲ-ಬಡವರು, ನಿರ್ಗತಿಕರ ಪಾಲಿನ ಸೇವಕ

    ನೆಲಮಂಗಲ: ಇವರು ಹುಟ್ಟು ವಿಕಲಚೇತನ. ಎರಡೂ ಕಾಲು ಹಾಗೂ ಸೊಂಟದ ಸ್ವಾಧೀನ ಇಲ್ಲ. ಆದರೆ ಅಂಗವಿಕಲತೆ ಸಮಾಜ ಸೇವೆ ಮಾಡೋದಕ್ಕೆ ಯಾವತ್ತೂ ಅಡ್ಡಿಯಾಗಿಲ್ಲ. ತೆವಳಿಕೊಂಡೇ ಓಡಾಡುತ್ತಾ ಸಮಾಜಸೇವೆ ಮಾಡೋ ನೆಲಮಂಗಲದ ಗಂಗಾಧರ್ ನಮ್ಮ ಪಬ್ಲಿಕ್ ಹೀರೋ.

    ಹೀಗೆ ರಸ್ತೆಯಲ್ಲಿ ತೆವಳಿಕೊಂಡು ತನ್ನ ದಿನನಿತ್ಯದ ಕೆಲಸದಲ್ಲಿ ತೊಡಗಿರುವ ಈ ಯುವಕನ ಹೆಸರು ಗಂಗಾಧರ. 7ನೇ ತರಗತಿಯವರೆಗೆ ಓದಿದ್ದಾರೆ. ಆದರೆ ಪೊಲಿಯೋ ಅಟ್ಯಾಕ್ ಆಗಿ ಕಾಲು, ಹಾಗೂ ಸೊಂಟದ ಸ್ವಾಧೀನ ಇಲ್ಲ. ಮೂಲತಃ ಆಂಧ್ರ್ರದವರು ಆದರೆ ಅಪ್ಪಟ ಕನ್ನಡಿಗ. ಬೆಂಗಳೂರು ಹೊರವಲಯ ನೆಲಮಂಗಲದ ಚನ್ನಪ್ಪ ಕಲ್ಯಾಣಿಯ ನಿವಾಸಿ. ಯಾರು ಯಾವುದೇ ಕೆಲಸ ಹೇಳಿದ್ದರು ಚಾಚುತಪ್ಪದೇ ಮಾಡುತ್ತಾರೆ.

    ಜೀವನೋಪಾಯಕ್ಕಾಗಿ ವಾಟರ್ ಟ್ಯಾಂಕ್ ಹಾಗೂ ನೀರಿನ ಸಂಪ್ ಕ್ಲೀನ್ ಮಾಡಿಸುತ್ತಾರೆ. ಇವರ ಜೊತೆ 8 ಮಂದಿ ಯುವಕರ ತಂಡವಿದೆ. ಗಂಗಾಧರ್ ಅವರಿಗೆ ಬಡವರಿಗೆ, ಅಸಹಾಯಕರಿಗೆ, ಅವಿದ್ಯಾವಂತರಿಗೆ ಏನಾದರೂ ಸಹಾಯ ಮಾಡೋ ದೊಡ್ಡ ಮನಸ್ಸಿದೆ. ಹೀಗಾಗಿ ತಾಲೂಕು ಕಚೇರಿಯಲ್ಲಿ ಜನರಿಗೆ ಸಿಗಬೇಕಾದ ಪಾಣಿ, ಮುಟೇಷನ್‍ಗಳನ್ನು ಕೊಡಿಸುತ್ತಾರೆ. ವಿಧವಾ ವೇತನ, ವಿಕಲಚೇತನರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಕೊಡಿಸಲು ಸಹಾಯ ಮಾಡುತ್ತಾರೆ.

    ಒಟ್ಟಾರೆ ದುಡಿದು ಜೀವನ ನಡೆಸುವ ಹಂಬಲದಲ್ಲಿರುವ ಗಂಗಾಧರ್ ಯಾರ ಮುಂದೆನೂ ಕೈ ಚಾಚಿಲ್ಲ. ಇವರ ಸ್ವಾಭಿಮಾನ, ಛಲ ಬದುಕು ಕಟ್ಟಿಕೊಂಡ ಪರಿ ಇತರೆ ವಿಕಲಚೇತನರಿಗೆ ಮಾದರಿಯಾಗಿದೆ.

  • ನೀರಿನ ಸಂಪು ಕ್ಲೀನ್ ಮಾಡಲು ಹೋಗಿ ಮೂವರ ದಾರುಣ ಸಾವು

    ನೀರಿನ ಸಂಪು ಕ್ಲೀನ್ ಮಾಡಲು ಹೋಗಿ ಮೂವರ ದಾರುಣ ಸಾವು

    ಚಿಕ್ಕಬಳ್ಳಾಪುರ: ನೀರಿನ ಸಂಪು ಕ್ಲೀನಿಂಗ್ ಮಾಡಲು ಹೋಗಿ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ದಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತೇಕಲಹಳ್ಳಿ ಗ್ರಾಮದ ಪೆದ್ದನ್ನ, ನಾರಾಯಣಪ್ಪ ಸ್ವಾಮಿ ಹಾಗೂ ದಿನ್ನೇನಹಳ್ಳಿ ಗ್ರಾಮದ ರೆಡ್ಡಪ್ಪ ಮೃತಪಟ್ಟಿರುವ ದುರ್ದೈವಿಗಳು. ಜನಾರ್ದನ ಎಂಬವರ ಸ್ಥಿತಿ ಗಂಭೀರವಾಗಿದ್ದು, ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರ ತೋಟದ ಮನೆಯ ಬಳಿ ಇರುವ ನೀರಿನ ಸಂಪು ಕ್ಲೀನಿಂಗ್ ಮಾಡಲು ಈ ನಾಲ್ವರು ಒಳಗಿಳಿದಿದ್ದಾರೆ. ಆದರೆ ಸಂಪ್‍ನೊಳಗೆ ಮೂವರು ಸಾವನ್ನಪ್ಪಿದ್ದು, ಜನಾರ್ದನ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಸಂಪ್ ಮೇಲ್ಛಾವಣಿ ಕಿತ್ತು ಹಾಕಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಉಸಿರುಗಟ್ಟಿ ಅಥವಾ ವಿದ್ಯುತ್ ಶಾಕ್ ನಿಂದ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತವಾಗಿ ತಿಳಿದಿಲ್ಲ. ಮರಣೋತ್ತರ ವರದಿ ಬಂದ ಮೇಲೆ ಖಚಿತವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಇನ್ನೂ ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕ ರಾಮಕೃಷ್ಣಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.