Tag: water tank

  • ಶಾಲಾ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ದುಷ್ಕರ್ಮಿಗಳು – 11 ಮಕ್ಕಳು ಅಸ್ವಸ್ಥ

    ಶಾಲಾ ನೀರಿನ ಟ್ಯಾಂಕಿಗೆ ವಿಷ ಬೆರೆಸಿದ ದುಷ್ಕರ್ಮಿಗಳು – 11 ಮಕ್ಕಳು ಅಸ್ವಸ್ಥ

    ಮಂಡ್ಯ: ಶಾಲೆಯೊಂದರ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದು, ವಿಷ ಮಿಶ್ರಿತ ನೀರು ಕುಡಿದು 11 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಮಂಡ್ಯ ತಾಲ್ಲೂಕಿನ ಎ.ಹುಲ್ಕೆರೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೀರಿನ ಟ್ಯಾಂಕಿಗೆ ದುಷ್ಕರ್ಮಿಗಳು ವಿಷ ಬೆರೆಸಿದ್ದಾರೆ. ಈ ಬಗ್ಗೆ ಅರಿವಿಲ್ಲದ ವಿದ್ಯಾರ್ಥಿಗಳು ಟ್ಯಾಂಕ್ ನೀರನ್ನು ಸೇವಿಸಿ ಅಸ್ವಸ್ಥ ಗೊಂಡಿದ್ದಾರೆ. ಈ ವೇಳೆ ತಕ್ಷಣ ಅಸ್ವಸ್ಥ ಮಕ್ಕಳನ್ನು ಕೊತ್ತತ್ತಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸದ್ಯ ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಮಕ್ಕಳು ಚಿಕಿತ್ಸೆ ಬಳಿಕ ಸುಧಾರಿಸಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗುತ್ತಿಗೆದಾರನ ನಿರ್ಲಕ್ಷ್ಯ- ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವು

    ಗುತ್ತಿಗೆದಾರನ ನಿರ್ಲಕ್ಷ್ಯ- ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವು

    ಯಾದಗಿರಿ: ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಬೃಹತ್ ಟ್ಯಾಂಕ್ ಕುಸಿದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರಿನಲ್ಲಿ ಇಂದು ನಡೆದಿದೆ.

    ಪಶ್ಚಿಮ ಬಂಗಾಳ ಮೂಲದ ಮಹಮದ್ ಕಬೀರ್ (30) ಸಾವನ್ನಪ್ಪಿದ ಕಾರ್ಮಿಕ. ಇಂದು ಕಬೀರ್ ಮತ್ತು ಆತನ ಸ್ನೇಹಿತ ಟ್ಯಾಂಕ್‍ನನ್ನು ಡೆಮಾಲಿಶ್ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಟ್ಯಾಂಕ್ ಈ ಇಬ್ಬರೂ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ.

    ಘಟನೆಯಲ್ಲಿ ಓರ್ವ ಕಾರ್ಮಿಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹತ್ತಾರು ವರ್ಷದ ಹಳೆಯ ಟ್ಯಾಂಕ್ ಇದಾಗಿದ್ದು, ತಾಳಿಕೋಟಿ ಮೂಲದ ಅಶ್ಪಾಕ್ ಎಂಬವರಿಗೆ ಜಿಲ್ಲಾಡಳಿತ, ಟ್ಯಾಂಕರ್ ಕೆಡವಲು ಟೆಂಡರ್ ನೀಡಿತ್ತು. ಮುಂಜಾಗ್ರತೆಯ ಇಲ್ಲದೆ ಬೃಹತ್ ಟ್ಯಾಂಕ್ ಕೆಡುವಲು ಗುತ್ತಿಗೆದಾರ ಮುಂದಾಗಿರುವುದೆ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತದೆ.

    ಸದ್ಯ ಘಟನಾ ಸ್ಥಳಕ್ಕೆ ಕೊಡೆಕಲ್ ಪೊಲೀಸರು ಭೇಟಿ ನೀಡಿದ್ದು, ಟ್ಯಾಂಕ್ ಅಡಿಯಲ್ಲಿ ಸಿಲುಕಿದ ಕಾರ್ಮಿಕನ ಮೃತ ದೇಹ ಹೊರ ತೆಗೆಯುವ ಕಾರ್ಯ ನಡೆಯುತ್ತಿದೆ.

  • ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿತ – ಮೂವರ ದುರ್ಮರಣ

    ನಿರ್ಮಾಣ ಹಂತದ ವಾಟರ್ ಟ್ಯಾಂಕ್ ಕುಸಿತ – ಮೂವರ ದುರ್ಮರಣ

    – ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

    ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ವಾಟರ್ ಟ್ಯಾಂಕ್ ಕುಸಿತ ಸಂಭವಿಸಿ ಮೂರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ರಕ್ಷಣೆ ಮಾಡಿರುವ ಘಟನೆ ನಗರದ ಲುಂಬಿನಿ ಗಾರ್ಡನ್ ಬಳಿಯ ಜೋಗಪ್ಪ ಲೇಔಟ್‍ನಲ್ಲಿ ಘಟನೆ.

    ನೀರು ಶುದ್ಧೀಕರಣ ಘಟಕ ನಿರ್ಮಿಸಲು ಸುಮಾರು 8 ವಾಟರ್ ಟ್ಯಾಂಕ್ ಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿತ್ತು. ಇಂದು ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡದ ಸೆಂಟ್ರಿಂಗ್ ಕಾರ್ಯದಲ್ಲಿ ತೊಡಗಿದ್ದರು. ಆದರೆ ಈ ವೇಳೆ ಏಕಾಏಕಿ ಕಟ್ಟದ ಸೆಂಟ್ರಿಂಗ್ ಕುಸಿತ ಆಗಿದೆ. ಪರಿಣಾಮ ಸುಮಾರು 80 ಅಡಿ ಅಳಕ್ಕೆ ಉರುಳಿ ಬಿದ್ದಿದ್ದಾರೆ.

    ಘಟನೆ ನಡೆಯುತ್ತಿದಂತೆ ಮಾಹಿತಿ ಪಡೆದ ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯ ಪೋಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯವನ್ನು ನಡೆಸಿದ್ದಾರೆ. ಘಟನೆಯಲ್ಲಿ 20 ಜನರನ್ನು ರಕ್ಷಣೆ ಮಾಡಿದ್ದು, ಇನ್ನು ಹಲವು ಮಂದಿ ಸೆಂಟ್ರಿಂಗ್ ಕೆಳಗೆ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯ ಮುಂದುವರಿದಿದ್ದು, ಈಗಾಗಲೇ ರಕ್ಷಣೆ ಮಾಡಿರುವ ಮಂದಿಯಲ್ಲಿ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ.

    ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಬಹುತೇಕ ಮಂದಿ ಉತ್ತರ ಕರ್ನಾಟಕ ಮೂಲದವರು ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಕೆಲ ಉತ್ತರ ಭಾರತದ ಕಾರ್ಮಿಕರು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಘಟನೆಯಲ್ಲಿ ಜೀವ ಉಳಿಸಿಕೊಂಡ ಕೆಲ ಕಾರ್ಮಿಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಕಾರ್ಮಿಕರನ್ನು ಕೊಲಂಬಿಯ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ನಿರ್ಮಾಣ ಹಂತದಲ್ಲಿದ್ದ ವಾಟರ್ ಟ್ಯಾಂಕ್ ಬಿಡಬ್ಲೂಎಸ್‍ಎಸ್‍ಬಿ ಕಚೇರಿಗೆ ಸೇರಿದೆ ಎಂಬ ಮಾಹಿತಿ ಲಭಿಸಿದೆ. ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲು ಬೃಹತ್ 8 ವಾಟರ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿತ್ತು. ಸುಮಾರು 30 ಎಕರೆ ಪ್ರದೇಶದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

  • ನೀರು ಕುಡಿಯಲು ಹೋಗಿ ಟ್ಯಾಂಕಿನಲ್ಲಿ ಬಿದ್ದು 4 ಕೋತಿಗಳು ಸಾವು!

    ನೀರು ಕುಡಿಯಲು ಹೋಗಿ ಟ್ಯಾಂಕಿನಲ್ಲಿ ಬಿದ್ದು 4 ಕೋತಿಗಳು ಸಾವು!

    ರಾಯಚೂರು: ಸಾರ್ವಜನಿಕರ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೋತಿಗಳು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಜೆ. ಮಲ್ಲಾಪುರದಲ್ಲಿ ನಡೆದಿದೆ.

    ಬೀಸಿಲಿನ ಝಳಕ್ಕೆ ಬಾಯಾರಿಕೆಯಾಗಿ ಜೆ ಮಲ್ಲಾಪುರ ಗ್ರಾಮದಲ್ಲಿ ಇದ್ದ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೋತಿಗಳು ಇಳಿದಿವೆ. ನೀರು ಕುಡಿಯಲು ಒಟ್ಟು 10 ಕೋತಿಗಳು ಟ್ಯಾಂಕಿನಲ್ಲಿ ಇಳಿದಿದ್ದವು, ಆದರೆ ಅದರಲ್ಲಿ ನಾಲ್ಕು ಕೋತಿಗಳು ಸಾವನ್ನಪ್ಪಿವೆ. ಈ ವಿಷಯ ಊರಿನ ಜನಕ್ಕೆ ತಿಳಿದಿರಲಿಲ್ಲ. ಇದನ್ನೂ ಓದಿ: ನೀರು ಅರಸಿ ಖಾಲಿ ಟ್ಯಾಂಕ್‍ಗೆ ಇಳಿದ ವಾನರ ಸೇನೆ, ಮೇಲೆ ಬರಲಾರದೆ 15 ದಿನ ಆಹಾರವಿಲ್ಲದೇ ನರಳಾಡಿ ಪ್ರಾಣಬಿಟ್ಟ ಮಂಗಗಳು-ಗ್ರಾಮಸ್ಥರಿಂದ ಅಂತ್ಯ ಸಂಸ್ಕಾರ

    ಗ್ರಾಮಸ್ಥರು ಕುಡಿಯಲು ಈ ಟ್ಯಾಂಕಿನ ನೀರನ್ನೇ ಉಪಯೋಗಿಸುತ್ತಾರೆ. ಆದರೆ ಕಳೆದ ಎರಡು ದಿನಗಳಿಂದ ಈ ನೀರು ಬಳಸಿದ ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಆದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ನೀರಿನ ಟ್ಯಾಂಕಿನಲ್ಲಿ ಇಣುಕಿದಾಗ ಸತ್ಯಾಂಶ ತಿಳಿದಿದೆ.

    ಟ್ಯಾಂಕಿನಲ್ಲಿ ಕೆಲವು ಕೋತಿಗಳು ಸಾವನ್ನಪ್ಪಿದ್ದವು, ಇನ್ನೂ ಕೆಲವು ಟ್ಯಾಂಕಿನಿಂದ ಮೇಲೆ ಬರಲಾಗದೆ ಒದ್ದಾಡುತ್ತಿದ್ದವು. ಇದನ್ನು ಕಂಡ ಗ್ರಾಮಸ್ಥರು ತಾವೇ ಖುದ್ದಾಗಿ ಟ್ಯಾಂಕಿನಲ್ಲಿ ಇಳಿದು ಬದುಕುಳಿದಿದ್ದ ಕೋತಿಗಳನ್ನು ರಕ್ಷಿಸಿದ್ದಾರೆ. ಹಾಗೆಯೇ ಸಾವನ್ನಪ್ಪಿದ್ದ ಕೋತಿಗಳ ಮೃತದೇಹಗಳನ್ನು ಹೊರ ತೆಗೆದು ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾರೆ.

  • ಧರೆಗುರುಳಿತು 34 ವರ್ಷಗಳ ಹಿಂದಿನ ಬೃಹತ್ ವಾಟರ್ ಟ್ಯಾಂಕ್

    ಧರೆಗುರುಳಿತು 34 ವರ್ಷಗಳ ಹಿಂದಿನ ಬೃಹತ್ ವಾಟರ್ ಟ್ಯಾಂಕ್

    ತುಮಕೂರು: ಹತ್ತಾರು ವರ್ಷಗಳಿಂದ ಶಿಥಿಲಗೊಂಡು ಬೀಳುವ ಸ್ಥಿತಿಯಲಿದ್ದ ನೀರಿನ ಟ್ಯಾಂಕ್‍ವೊಂದು ಕೊನೆಗೂ ಧರೆಗುರುಳಿದಿದೆ.

    ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಆತಂಕ ಸೃಷ್ಟಿ ಮಾಡಿದ್ದ ಓವರ್ ಹೆಡ್ ಟ್ಯಾಂಕ್ ಕೊನೆಗೂ ಧರೆಗುರುಳಿದೆ. ಬೃಹದಾರಾಕಾರದ ಈ ಟ್ಯಾಂಕ್ ಉರುಳಿಸಿವ ದೃಶ್ಯ ಮೈಜುಂ ಎನ್ನುವಂತಿದೆ.

    34 ವರ್ಷಗಳ ಹಿಂದೆ ಕಟ್ಟಿದ ಈ ಟ್ಯಾಂಕ್ ಹತ್ತಾರು ವರ್ಷಗಳ ಹಿಂದೆಯೇ ಶಿಥಿಲಗೊಂಡಿತ್ತು. ಪರಿಣಾಮ ಗಾಳಿ ಮಳೆ ಬಂದಾಗ ಅಕ್ಕ ಪಕ್ಕದ ಮನೆಯವರು ಜೀವ ಕೈಯಲ್ಲಿಡಿದು ಬದುಕುತ್ತಿದ್ದರು. ಗ್ರಾಮ ಪಂಚಾಯತಿಯವರಿಗೆ ಎಷ್ಟೇ ಮನವಿ ಮಾಡಿಕೊಂಡಿದ್ದರೂ ಟ್ಯಾಂಕ್ ತೆರವುಗೊಳಿಸುವ ಪ್ರಯತ್ನ ಮಾಡಿರಲಿಲ್ಲ.

    ಕೊನೆಗೆ ಹೋರಾಟದ ಎಚ್ಚರಿಕೆ ಕೊಟ್ಟಾಗ ದಾವಣಗೆರೆ ಮೂಲದ ಉಜ್ಜಾನ್ ಅವರು ನಾಲ್ಕು ಜನರ ನೇತೃತ್ವದ ತಂಡ ಕರೆತಂದು ಟ್ಯಾಂಕ್ ಉರುಳಿಸಿದ್ದಾರೆ. ಟ್ಯಾಂಕ್‍ನ ಶಿಥಿಲಗೊಂಡ ಭಾಗದ ಕಂಬಕ್ಕೆ ಬಲವಾಗಿ ಹೊಡೆದು ಟ್ಯಾಂಕ್ ಉರುಳಿಸಲಾಗಿದೆ. ಟ್ಯಾಂಕ್ ಬೀಳುತ್ತಿರುವ ದೃಶ್ಯ ನಿಜಕ್ಕೂ ಎದೆ ಝಲ್ ಎನ್ನಿಸುವಂತಿದೆ.

  • ಆಯಸ್ಸು ಕಳೆದುಕೊಂಡ ನೀರಿನ ಟ್ಯಾಂಕ್ – ಭಯದಲ್ಲೇ ಬದುಕುತ್ತಿರುವ ಗ್ರಾಮಸ್ಥರು

    ಆಯಸ್ಸು ಕಳೆದುಕೊಂಡ ನೀರಿನ ಟ್ಯಾಂಕ್ – ಭಯದಲ್ಲೇ ಬದುಕುತ್ತಿರುವ ಗ್ರಾಮಸ್ಥರು

    ಗದಗ: ಸರ್ಕಾರಿ ಶಾಲಾ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿ ನಿಂತಿರೋ ಯಮರೂಪಿ ನೀರಿನ ಟ್ಯಾಂಕ್‍ನಿಂದಾಗಿ ಗ್ರಾಮಸ್ಥರು ಭಯದಿಂದಲೇ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ.

    ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ತನ್ನ ಆಯಸ್ಸು ಕಳೆದುಕೊಂಡಿದ್ದು ಕಬ್ಬಿಣ, ಸಿಮೆಂಟ್ ಉದುರಿ ಬೀಳುತ್ತಿದೆ. ನೀರಿನ ಟ್ಯಾಂಕ್ ಇಂದು ಬೀಳುತ್ತೋ ನಾಳೆ ಬೀಳುತ್ತೋ ಅನ್ನೊ ಭಯದಲ್ಲಿ ಈ ಶಾಲೆಯ ಮಕ್ಕಳು ಶಿಕ್ಷಣ ಪಡೆಯುವಂತಾಗಿದೆ. ಶಾಲಾ ಬಿಸಿಯೂಟದ ಕೋಣೆ ಸಹ ಟ್ಯಾಂಕ್‍ನ ಕೆಳಗಡೆ ಇರುವುದರಿಂದ ಅಲ್ಲಿ ಭಯದಿಂದಲೇ ಭೋಜನ ಸಿದ್ಧಗೊಳ್ಳುತ್ತಿದೆ.

        

    2001ರ ವೇಳೆ ನಿರ್ಮಾಣವಾದ ಈ ಟ್ಯಾಂಕ್, 1 ಲಕ್ಷ ಲೀಟರ್ ನೀರಿನ ಸಂಗ್ರಹ ಸಾಮಥ್ರ್ಯ ಹೊಂದಿದೆ. ಸದ್ಯ ಇದು ಶಿಥಿಲಾವಸ್ಥೆಯಲ್ಲಿದ್ದು, ಕೇವಲ ಶಾಲೆಗೆ ಮಾತ್ರ ಭಯ ಹುಟ್ಟಿಸದೇ ಇಡೀ ಊರಿನ ಜನರನ್ನೂ ಸಹ ಆತಂಕಕ್ಕೀಡು ಮಾಡಿದೆ.

    ತುಂಗಾಭದ್ರಾ ನದಿಯಿಂದ ಇಂದಿಗೂ ಈ ಟ್ಯಾಂಕ್‍ಗೆ ನೀರು ಸರಬರಾಜು ಮಾಡಲಾಗುತ್ತಿದೆ. ನಂತರ ತಿಮ್ಮಾಪೂರ ಗ್ರಾಮದ ಜನರು ಕುಡಿಯೋದಕ್ಕೆ ಈ ನೀರನ್ನೇ ಬಳಸುತ್ತಾರೆ. ವಿಪರ್ಯಾಸ ಅಂದ್ರೆ ಟ್ಯಾಂಕ್ ಮೇಲೆ ಹತ್ತಲು ಇರುವ ಮೆಟ್ಟಿಲು ತುಕ್ಕು ಹಿಡಿದು ಹಾಳಾಗಿವೆ ಆದರಿಂದ ಟ್ಯಾಂಕ್ ಕ್ಲೀನ್ ಮಾಡೋಕೆ ಸಾಧ್ಯವಾಗದೇ ಕಲುಷಿತ ನೀರನ್ನೇ ಆ ಊರಿನ ಜನರು ಕುಡಿಯುವ ಪರಸ್ಥಿತಿ ಎದುರಾಗಿದೆ. ನೀರಿನ ಟ್ಯಾಂಕ್ ದುರಸ್ಥಿ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದಕ್ಕೆ ಪರ್ಯಾವಾಗಿ ಇನ್ನೊಂದು ಟ್ಯಾಂಕ್ ನಿರ್ಮಾಣ ಮಾಡುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

    ಒಟ್ಟಾರೆಯಾಗಿ ಜೀವಜಲಕ್ಕಾಗಿ ಕೋಟಿ ಕೋಟಿ ಹಣವನ್ನ ಸರ್ಕಾರ ಖರ್ಚು ಮಾಡ್ತಿವೆ. ಆದರೆ ದೇವರು ಕೊಟ್ರು ಪೂಜಾರಿ ಕೊಡೊಲ್ಲ ಅನ್ನೋ ಹಾಗೆ, ಜಿಲ್ಲಾಧಿಕಾರಿಗಳು ಈ ಹಿಂದೆ ಗ್ರಾಮಪಂಚಾಯಿತಿ ಹಾಗೂ ನೀರು ಸರಬರಾಜು ಇಲಾಖೆಗೆ ಸೂಚಿಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಕಾರಣ ಜನ ಮತ್ತು ಮಕ್ಕಳು ಭಯದಿಂದಲೇ ಬದುಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೀರಿನ ಸಂಪ್‍ಗೆ ಬಿದ್ದು ಮಗು ಸಾವು

    ನೀರಿನ ಸಂಪ್‍ಗೆ ಬಿದ್ದು ಮಗು ಸಾವು

    ಬೆಂಗಳೂರು: ಮಗುವೊಂದು ಆಟವಾಡುತ್ತಾ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದು ಮೃತಪಟ್ಟ ಘಟನೆ ನಾಗವಾರದ ಮಂಜುನಾಥ ಲೇಔಟ್‍ನಲ್ಲಿ ನಡೆದಿದೆ.

    ಎರಡೂವರೆ ವರ್ಷದ ಅರ್ಹಾನ್ ಮೃತಪಟ್ಟ ಮಗು. ಇಂದು ಮನೆಯ ಹತ್ತಿರ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದೆ. ಮಗುವಿನ ಸಾವಿನಿಂದ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.

    ನೀರಿನ ಸಂಪ್ ಮಾಲೀಕರ ನಿರ್ಲಕ್ಷದಿಂದಾಗಿ ಮಗು ಮೃತಪಟ್ಟಿದ್ದು. ಕಳೆದ ಮೂರು ವರ್ಷಗಳ ಹಿಂದೆ ಅರೆಬರೆ ಕಾಮಗಾರಿ ನಡೆಸಿ, ಸಂಪ್ ಅನ್ನು ಮುಚ್ಚದೇ ಕೈ ಬಿಟ್ಟಿದ್ದಾರೆ. ಅಲ್ಲದೇ ಸಂಪ್ ಅನ್ನು ಸಂಪೂರ್ಣವಾಗಿ ತೆರೆದು ಬಿಟ್ಟಿದ್ದರು. ಈ ಹಿಂದೆಯೂ ಸಂಪ್ ನಿಂದಾಗಿ ಹಲವು ಅವಘಡಗಳು ಸಂಭವಿಸಿದ್ದವು.

    ಈ ಕುರಿತು ಸ್ಥಳೀಯರು ಮನೆ ಮಾಲೀಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲ್ಲಿಲ್ಲ. ಮಾಲೀಕನ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಮುಟ್ಟಿದ್ರೆ, ತಟ್ಟಿದ್ರೆ ಬೀಳುತ್ತೆ ನೀರಿನ ಟ್ಯಾಂಕರ್- ಬೀದರ್ ನಲ್ಲಿ ಅನಾಹುತಕ್ಕಾಗಿ ಕಾಯ್ತಿದ್ಯಾ ಸರ್ಕಾರ..?

    ಮುಟ್ಟಿದ್ರೆ, ತಟ್ಟಿದ್ರೆ ಬೀಳುತ್ತೆ ನೀರಿನ ಟ್ಯಾಂಕರ್- ಬೀದರ್ ನಲ್ಲಿ ಅನಾಹುತಕ್ಕಾಗಿ ಕಾಯ್ತಿದ್ಯಾ ಸರ್ಕಾರ..?

    ಬೀದರ್: ಭಾಲ್ಕಿ ತಾಲೂಕಿನ ಭಾತಾಂಬ್ರಾ ಗ್ರಾಮದ ನೀರಿನ ಟ್ಯಾಂಕ್ ನಿರ್ಮಾಣದಲ್ಲಿ ಮಾಡಿದ ಕಳಪೆ ಕಾಮಗಾರಿಯಿಂದಾಗಿ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

    20 ಲಕ್ಷ ರೂ.ಗೂ ಹೆಚ್ಚು ಅನುದಾನದಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದು, ಅದು ಇಂದು ಅಥವಾ ನಾಳೆ ಬೀಳುವ ಹಂತದಲ್ಲಿದೆ. ಈ ಕುರಿತು ಮೂರು ವರ್ಷಗಳ ಹಿಂದೆ ಪಬ್ಲಿಕ್ ಟಿವಿ ಸುದ್ದಿ ಮಾಡಿದ್ದರೂ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾತ್ರ ಇದಕ್ಕೂ ತಮಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

    ಸರ್ಕಾರ ಗ್ರಾಮೀಣ ನೀರು ಸರಬರಾಜು ಯೋಜನೆಯ ಅಡಿಯಲ್ಲಿ 20 ಲಕ್ಷ ರೂ. ಖರ್ಚು ಮಾಡಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಿತ್ತು. ಈ ಟ್ಯಾಂಕ್ ನಿರ್ಮಾಣವಾಗಿ 20 ವರ್ಷಗಳು ಕಳೆದಿದ್ದು ಈಗಾಗಲೇ ಸಂಪೂರ್ಣವಾಗಿ ಬೀಳುವ ಹಂತಕ್ಕೆ ತಲುಪಿದೆ. ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಈ ಟ್ಯಾಂಕ್ ಪಕ್ಕದಿಂದ ಶಾಲೆಗೆ ಹೋಗಬೇಕಾದ ಅನಿರ್ವಾತೆ ಇದ್ದು, ಸ್ಥಳೀಯರು ಸೇರಿದಂತೆ ಮಕ್ಕಳೂ ಸಹ ಭಯದ ವಾತವರಣದಲ್ಲಿ ತಿರುಗಾಡಬೇಕಾದ ಪರಿಸ್ಥಿತಿ ಎದುರಾಗಿದೆ.

     

    ಈ ಕುರಿತಂತೆ ಪಬ್ಲಿಕ್ ಟಿವಿ ಸಾರ್ವಜನಿಕರ ಹಿತದೃಷ್ಟಿಯಿಂದ ಮೂರು ವರ್ಷಗಳ ಹಿಂದೆಯೇ ಈ ಕುರಿತು ಸುದ್ದಿ ಪ್ರಸಾರ ಮಾಡಿತ್ತು. ಆದರೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕರು ಹಾಗೂ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

    ಈಗಾಗಲೇ ಹಲವು ಜಿಲ್ಲೆಗಳಲ್ಲಿ ನೀರಿನ ಟ್ಯಾಂಕ್‍ಗಳು ಕುಸಿದು ಹಲವು ಜೀವಗಳನ್ನು ಬಲಿ ತೆಗೆದುಕೊಂಡಿರುವ ಘಟನೆಗಳು ನಮ್ಮ ಮುಂದಿವೆ. ಆದರೆ ನಮ್ಮ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆಯುವ ಮೊದಲೇ ಅಧಿಕಾರಿಗಳು ಎಚ್ಚರಗೊಳ್ಳಬೇಕಿದೆ. ಸರ್ಕಾರ ಈ ಕಳಪೆ ಕಾಮಗಾರಿಯ ಬಗ್ಗೆ ಸರಿಯಾದ ತನಿಖೆ ನಡೆಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಅಂತಾ ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • 10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

    10 ಅಡಿ ಆಳದ ನೀರಿನ ಟ್ಯಾಂಕೊಳಗೆ ಬಿದ್ದ 1 ತಿಂಗ್ಳ ಆನೆಮರಿಯ ರಕ್ಷಣೆ

    ಕೊಯಂಬತ್ತೂರು: ನೀರಿನ ಟ್ಯಾಂಕಿನೊಳಗೆ ಬಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಟ್ಟ ಘಟನೆ ನಡೆದಿದೆ.

    ಪೆರಿಯ ತಡಾಗಂನಲ್ಲಿರೋ ಶ್ರೀ ಲಲಿತಾಂಬಿಕ ದೇವಸ್ಥಾನದ ನೀರಿನ ಟ್ಯಾಂಕಿಗೆ ಮರಿಯಾನೆ ಗುರುವಾರ ಸಂಜೆ 4.30ರ ಸುಮಾರಿಗೆ ಬಿದ್ದು, ಒದ್ದಾಡಿದೆ. ಕೂಡಲೇ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ರಕ್ಷಿಸಿದ್ದಾರೆ.

    ನೀರು ಕುಡಿಯಲೆಂದು ಆನೆಗಳ ಹಿಂಡು ದೇವಸ್ಥಾನದ ಪಕ್ಕದಲ್ಲಿರುವ 10 ಅಡಿ ಆಳದ ಟ್ಯಾಂಕ್ ಬಳಿ ಬಂದಿವೆ. ಈ ವೇಳೆ ಹಿಂಡಿನಲ್ಲಿದ್ದ 1 ತಿಂಗಳ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದಿದೆ. ಕೂಡಲೇ ಇದನ್ನು ಗಮನಿಸಿದ ಉಳಿದ ಆನೆಗಳು ಮರಿಯನ್ನು ರಕ್ಷಿಸಲು ಪ್ರಯತ್ನಿಸಿ ವಿಫಲವಾಗಿವೆ.

    ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಗಸ್ತು ತಿರುಗುತ್ತಿದ್ದ ವೇಳೆ ಆನೆಗಳ ಹಿಂಡು ನೀರಿನ ಟ್ಯಾಂಕಿನ ಬಳಿ ಇರುವುದನ್ನು ಗಮನಿಸಿದ್ದಾರೆ. ಅಲ್ಲದೇ ಮರಿಯಾನೆಯೊಂದು ಟ್ಯಾಂಕೊಳಗೆ ಬಿದ್ದು, ಒದ್ದಾಡುತ್ತಿರುವುದು ತಿಳಿಯುತ್ತದೆ.

    ಕೂಡಲೇ ಎಚ್ಚೆತ್ತಕೊಂಡ ಅರಣ್ಯ ಇಲಾಖೆ, ಮರಿಯಾನೆಯನ್ನು ಕಾಪಾಡುವ ಸಲುವಾಗಿ ಆನೆಗಳ ಹಿಂಡನ್ನು ಅಲ್ಲಿಂದ ಓಡಿಸಲು ಪಟಾಕಿ ಹಚ್ಚಿದ್ದಾರೆ. ಭಯದಿಂದ ಆನೆಗಳು ಅಲ್ಲಿಂದ ತೆರಳಿದ ಬಳಿಕ ಅರ್ಥ್‍ಮೂವರ್ ಬಳಸಿ ಮರಿಯಾನೆಯನ್ನು ಮೇಲಕ್ಕೆತ್ತಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ರಕ್ಷಿಸಿ ಆನೆಗಳ ಹಿಂಡಿನ ಜೊತೆ ಬಿಡಲಾಯಿತು ಎಂಬುದಾಗಿ ವರದಿಯಾಗಿದೆ.

  • ಕೋಳಿಫಾರಂನ ಕಲುಷಿತ ನೀರಿನ ಟ್ಯಾಂಕ್ ಶುಚಿಗೊಳಿಸಲು ಹೋಗಿ 7 ಕಾರ್ಮಿಕರು ಬಲಿ!

    ಕೋಳಿಫಾರಂನ ಕಲುಷಿತ ನೀರಿನ ಟ್ಯಾಂಕ್ ಶುಚಿಗೊಳಿಸಲು ಹೋಗಿ 7 ಕಾರ್ಮಿಕರು ಬಲಿ!

    ಕೋಲಾರ: ಕೋಳಿಫಾರಂನ ಕಲುಷಿತ ನೀರಿನ ಟ್ಯಾಂಕ್ ಶುಚಿ ಮಾಡಲು ಇಳಿದ 7 ಜನ ಕೂಲಿ ಕಾರ್ಮಿಕರು ವಿಷಕಾರಿ ಅನಿಲ ಸೇವನೆಯಿಂದಾಗಿ ಉಸಿರುಗಟ್ಟಿ ಧಾರುಣವಾಗಿ ಸಾವನ್ನಪ್ಪಿ ಒರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಗಡಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಸಮೀಪದ ಮುರಂಪಲ್ಲಿ ಬಳಿ ಇಂದು ಬೆಳಗ್ಗೆ 10.30ಕ್ಕೆ ಈ ಘಟನೆ ನಡೆದಿದೆ. ವೆಂಕಟೇಶ್ವರ ಶೀತಲ ಘಟಕದಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರು ಸ್ವಚ್ಛ ಮಾಡಲು ಟ್ಯಾಂಕ್ ಗೆ ಇಳಿದಿದ್ದ ವೇಳೆ ಉಸಿರುಗಟ್ಟಿ ಕಾರ್ಮಿಕರು ಮೃತಪಟ್ಟಿದ್ದಾರೆ.

    ಶುದ್ಧಿ ಮಾಡಲು ಇಳಿದಿದ್ದ 7 ಜನ ಅಸ್ವಸ್ಥರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದ್ದರೂ ಚಿಕಿತ್ಸೆ ಫಲಕಾರಿಯಾಗದೆ 7 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಒರ್ವನ ಸ್ಥಿತಿ ಗಂಭೀರವಾಗಿದ್ದು, ಮೃತರನ್ನ ರಮೇಶ್, ರಾಮಚಂದ್ರ, ರೆಡ್ಡಪ್ಪ, ಕೇಶವ, ಗೋವಿಂದಸ್ವಾಮಿ, ಬಾಬು ಹಾಗೂ ಶಿವ ಎಂದು ಗುರುತಿಸಲಾಗಿದ್ದು, ಮೃತರು ಪಲಮನೇರು ಮೂಲದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ.

    ಟ್ಯಾಂಕ್‍ನಲ್ಲಿ ಪ್ರತಿನಿತ್ಯ ಕೋಳಿಫಾರಂನ ತ್ಯಾಜ್ಯವನ್ನ ಶೇಖರಣೆ ಮಾಡಲಾಗುತ್ತಿತ್ತು. ಶೇಖರಣೆಯಾಗಿದ್ದ ತ್ಯಾಜ್ಯ ವಿಷಾನಿಲವಾಗಿ ಪರಿವರ್ತನೆಗೊಂಡಿದ್ದು, ಟ್ಯಾಂಕಿಗೆ ಇಳಿದ ಕಾರ್ಮಿಕರು ಎಲ್ಲರೂ ವಿಷಾನಿಲ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೈಪ್‍ಗಳನ್ನು ಅಳವಡಿಸಲು ಕಾರ್ಮಿಕರು ಟ್ಯಾಂಕಿನೊಳಗೆ ಹೋದಾಗ ಉಸಿರಾಡಲು ತೊಂದರೆಯಾಗಿ ಅಲ್ಲಿಯೇ ಪ್ರಜ್ಞೆಯಿಲ್ಲದೆ ಬಿದ್ದಿದ್ದರು. ಆಗ ತಕ್ಷಣ ಸಹ-ಕಾರ್ಮಿಕರು ಅವರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳಕ್ಕೆ ಪಲಮನೇರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.