Tag: water tank

  • ಕುಡಿಯುವ ನೀರಿನ ಟ್ಯಾಂಕಿಯಲ್ಲಿ ಕೊಳೆತ ಶವ ಪತ್ತೆ

    ಕುಡಿಯುವ ನೀರಿನ ಟ್ಯಾಂಕಿಯಲ್ಲಿ ಕೊಳೆತ ಶವ ಪತ್ತೆ

    ಹೈದರಾಬಾದ್: ತೆಲಂಗಾಣದ ಮುಶೀರಾಬಾದ್ ವಾಟರ್ ಟ್ಯಾಂಕ್‌ನಲ್ಲಿ ಪೇಂಟರ್ ಕಿಶೋರ್ ಎಂಬಾತನ ಶವ ಗುರುವಾರ ಪತ್ತೆಯಾಗಿದೆ.

    ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ 19 ದಿನಗಳ ನಂತರ ಪ್ರದೇಶದ ಸಾರ್ವಜನಿಕರು ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈತ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ಕೆಲಕಾಲ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದರು. ಗಾಂಜಾ ಮತ್ತು ಕುಡಿತದ ಚಟ ಹೊಂದಿದ್ದ ಈತ, ಹಣದ ವಿಚಾರವಾಗಿ ಕುಟುಂಬದವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎಂದು ಅಕ್ಕ-ಪಕ್ಕದ ಮನೆಯವರು ಹೇಳಿದರು.

    ತನಿಖೆಯ ಸಂದರ್ಭದಲ್ಲಿ ಟ್ಯಾಂಕ್ ನ ಹೊರಗೆ ಪಾದರಕ್ಷೆಗಳು ಬಿದ್ದಿರುವುದು ಕಂಡು ಬಂದಿದೆ. ಈ ಆಧಾರದ ಮೇಲೆ ಮೃತನನ್ನು ಕಿಶೋರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಡಿಸೆಂಬರ್ 9ರಂದು ಕುಡಿದು ಮನೆಗೆ ಬಂದ ಕಾರಣ ಮನೆಯವರು ಛೀಮಾರಿ ಹಾಕಿದ್ದರು. ಬಳಿಕ ಅದೇ ತಿಂಗಳು 23 ರಂದು ಮನೆಯವರು ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಅಂದಿನಿಂದ ನಾಪತ್ತೆಯಾಗಿದ್ದ ಕಿಶೋರ್, ಮನೆ ಸಮೀಪದ ನೀರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆ-ಬೊಮ್ಮಾಯಿ

    ಕೆಲ ದಿನಗಳಿಂದ ವಿಚಿತ್ರ ವಾಸನೆ ಹಾಗೂ ನೀರಿನ ರುಚಿಯಲ್ಲಿ ಬದಲಾವಣೆಯಾಗುತ್ತಿದೆ ಎಂದು ಕೆಲವರು ದೂರಿದ್ದಾರೆ. ಮೃತದೇಹ ಹೊರತೆಗೆದ ಬಳಿಕ ಸ್ಥಳೀಯ ಅಧಿಕಾರಿಗಳು ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ಟ್ಯಾಂಕ್ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಮದುವೆಗೆ ಬರುವ ಅತಿಥಿಗಳಿಗೆ ಕತ್ರಿನಾ-ವಿಕ್ಕಿ ವೆಲ್​ಕಮ್ ನೋಟ್

    ಮುಶೀರಾಬಾದ್ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ನಡೆಸುತ್ತಿದ್ದಾರೆ. ಕುಟುಂಬಸ್ಥರು ನೀಡಿದ ಮಾಹಿತಿ ಮೇರೆಗೆ ಕಿಶೋರ್ ಸ್ನೇಹಿತನಾದ ಮಧು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲೂ ಪ್ರಸಾದ್ ಪುತ್ರ

  • ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವು

    ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವು

    ಹಾವೇರಿ: ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ನೀರಿನ ಟ್ಯಾಂಕಿಗೆ ಬಿದ್ದು ಎರಡು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ಪಟ್ಟಣದ ನವನಗರ ಬಡಾವಣೆಯಲ್ಲಿ ನಡೆದಿದೆ.

    ಮೃತ ಬಾಲಕನ್ನು ಚರಣ್ ವಿಭೂತಿ(2) ಎಂದು ಗುರುತಿಸಲಾಗಿದೆ. ಚರಣ್ ಮತ್ತು ಕೆಲ ಪುಟ್ಟ ಮಕ್ಕಳು ಪ್ರತಿನಿತ್ಯ ಆಟವಾಡುವಂತೆ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಅಲ್ಲೇ ಪಕ್ಕದಲ್ಲಿದ್ದ ತೆರೆದ ನೀರಿನ ಟ್ಯಾಂಕಿಗೆ ಬಿದ್ದು ಬಾಲಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಲಾಂಗ್‍ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಯುವಕ ಅರೆಸ್ಟ್

    ಈ ದುರ್ಘಟನೆಯಿಂದ ಬಾಲಕ ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಾನಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ನೀರಿನ ಟ್ಯಾಂಕ್‍ಗೆ ವಿಷ ಮಾತ್ರೆಯ ಬಾಟೆಲ್ ಹಾಕಿದ ಕಿರಾತಕರು

    ನೀರಿನ ಟ್ಯಾಂಕ್‍ಗೆ ವಿಷ ಮಾತ್ರೆಯ ಬಾಟೆಲ್ ಹಾಕಿದ ಕಿರಾತಕರು

    ವಿಜಯನಗರ: ಕುಡಿಯುವ ನೀರಿನ ಟ್ಯಾಂಕ್ ವಿಷದ ಮಾತ್ರೆಗಳು ತುಂಬಿದ ಬಾಟೆಲ್ ಹಾಕಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

    ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಮಾತ್ರೆಗಳುಳ್ಳ ಬಾಟೆಲ್ ಇದಾಗಿದೆ. ಇಂದು ಬೆಳಗ್ಗೆ ನೀರು ಸರಬರಾಜು ಮಾಡುವ ಸಿಬ್ಬಂದಿ ಟ್ಯಾಂಕ್ ಮೇಲೇರಿ ಪರಿಶೀಲಿಸಿದಾಗ ನೀರಿನಲ್ಲಿ ವಿಷದ ಬಾಟೆಲ್ ಬಿದ್ದಿರೋದು ಕಂಡು ಬಂದಿದೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಸದ್ಯ ನೀರಿನಲ್ಲಿದ್ದ ವಿಷದ ಬಾಟೆಲ್ ಮೇಲೆಕ್ಕೆತ್ತಲಾಗಿದ್ದು, ಟ್ಯಾಂಕ್ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ.

    ಸದ್ಯ ಗ್ರಾಮಕ್ಕೆ ಡಿವೈಎಸ್‍ಪಿ ಹಾಲಮೂರ್ತಿರಾವ್ ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕತ್ತಿದ್ದಾರೆ. ಇನ್ನು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಸಕ ಕರುಣಾಕರ್ ರೆಡ್ಡಿ ಸೂಚನೆ ನೀಡಿದ್ದಾರೆ.

  • ಮುರಿದು ಬಿದ್ದ ನಿಶ್ಚಿತಾರ್ಥ – ನೀರಿನ ಟ್ಯಾಂಕ್ ಏರಿ ಕುಳಿತ ಯುವಕ

    ಮುರಿದು ಬಿದ್ದ ನಿಶ್ಚಿತಾರ್ಥ – ನೀರಿನ ಟ್ಯಾಂಕ್ ಏರಿ ಕುಳಿತ ಯುವಕ

    -ಅದೇ ಹುಡ್ಗಿ ಜೊತೆ ನಿಶ್ಚಿತಾರ್ಥಕ್ಕಾಗಿ ಪಟ್ಟು

    ಜೈಪುರ: ನಿಶ್ಚಿತಾರ್ಥ ಮುರಿದು ಬಿದ್ದಿದ್ದಕ್ಕೆ ಕೋಪಗೊಂಡ ಯುವಕ ನೀರಿನ ಟ್ಯಾಂಕರ್ ಏರಿದ ಘಟನೆ ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಅನೂಪಗಢ ವ್ಯಾಪ್ತಿಯ ಪತರೋಡದಲ್ಲಿ ನಡೆದಿದೆ.

    ಕೆಲ ಕಾರಣಗಳಿಂದ ಯುವಕ ನಿಶ್ಚಿತಾರ್ಥವನ್ನು ಕುಟುಂಬದವರು ಕ್ಯಾನ್ಸಲ್ ಮಾಡಿಕೊಂಡಿದ್ದರು. ಇದರಿಂದ ಕೋಪಗೊಂಡ ಯುವಕ ಗ್ರಾಮದಲ್ಲಿರುವ ನೀರಿನ ಟ್ಯಾಕ್ ಏರಿದ್ದಾನೆ. ಯುವಕ ಟ್ಯಾಂಕ್ ಏರಿರುವ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರೆಲ್ಲ ಸೇರಿ ಆತನ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಯುವಕ ಕೆಳಗೆ ಬರಲು ಒಪ್ಪದಿದ್ದಾಗ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಟ್ಯಾಂಕ್ ಮೇಲೇರಿದ್ದ ಯುವಕ ಮತ್ತೊಮ್ಮೆ ಅದೇ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಸಬೇಕೆಂದು ಹಠ ಹಿಡಿದಿದ್ದನು. ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರಿಂದ ಕೆಳಗೆ ಬಂದಿದ್ದಾನೆ. ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

  • ಕುಸಿದು ಬಿತ್ತು ನೀರಿನ ಬೃಹತ್ ಟ್ಯಾಂಕ್- ತಪ್ಪಿತು ಭಾರೀ ಅನಾಹುತ

    ಕುಸಿದು ಬಿತ್ತು ನೀರಿನ ಬೃಹತ್ ಟ್ಯಾಂಕ್- ತಪ್ಪಿತು ಭಾರೀ ಅನಾಹುತ

    ಚಾಮರಾಜನಗರ: ನೀರಿನ ಬೃಹತ್ ಟ್ಯಾಂಕ್ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದಂತಾಗಿದೆ.

    ಚಾಮರಾಜನಗರದ ತಾಲೂಕು ಕಚೇರಿ ಹಿಂಭಾಗದಲ್ಲಿ ಘಟನೆ ನಡೆದಿದ್ದು, ತಾಲೂಕು ಕಚೇರಿ ಹಿಂಭಾಗದಲ್ಲಿರುವ ಚನ್ನಿಪುರಮೋಳೆ ಹೊಸಬಡಾವಣೆಯಲ್ಲಿದ್ದ ನೀರಿನ ಬೃಹತ್ ಟ್ಯಾಂಕ್ ಕುಸಿದಿದೆ. ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ಪಕ್ಕದ ಮನೆಗಳ ಮೇಲೆ ಕುಸಿದುಬಿದ್ದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಆದರೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

    ಇದು ತುಂಬಾ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಆಗಿದ್ದು, 50 ಸಾವಿರ ಲೀ. ಸಾಮಥ್ರ್ಯದ ಟ್ಯಾಂಕ್ ಆಗಿದೆ. ಟ್ಯಾಂಕ್ ಶಿಥಿಲಗೊಂಡಿದ್ದರೂ ನಗರಸಭೆ ನೀರು ತುಂಬಿಸಿ ಸರಬರಾಜು ಮಾಡುತ್ತಿತ್ತು. ಟ್ಯಾಂಕ್ ತೆರವುಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೂ ತೆರವುಗೊಳಿಸದೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಇಂದು ಟ್ಯಾಂಕ್ ಕುಸಿದಿದೆ. ನಗರದ ಮಧ್ಯದಲ್ಲೇ ಇರುವ ಟ್ಯಾಂಕ್ ಕುರಿತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಕ್ಕೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕುಡಿದು ವಾಟರ್ ಟ್ಯಾಂಕ್ ಏರಿದ ಭೂಪ- ಪತ್ನಿ ಬಂದು ಕಾಪಾಡುವಂತೆ ಬೇಡಿಕೆ

    ಕುಡಿದು ವಾಟರ್ ಟ್ಯಾಂಕ್ ಏರಿದ ಭೂಪ- ಪತ್ನಿ ಬಂದು ಕಾಪಾಡುವಂತೆ ಬೇಡಿಕೆ

    – ಶೋಲೆ ಸಿನಿಮಾದಿಂದ ಪ್ರೇರಣೆ

    ಲಕ್ನೋ: ಕಂಠಪೂರ್ತಿ ಮದ್ಯ ಕುಡಿದು ವಾಟರ್ ಟ್ಯಾಂಕ್ ಮೇಲೆ ಹೋಗಿ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ಕುಡುಕನೋರ್ವ ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶ ಅಲಿಗರ್ ಪ್ರದೇಶದಲ್ಲಿ ನಡೆದಿದೆ.

    ಸುಮಾರು 40 ದಿನಗಳ ನಂತರ ಮದ್ಯದಂಗಡಿಗಳು ಓಪನ್ ಆಗಿರುವುದು ಮದ್ಯಪ್ರಿಯರಿಗೆ ಬಿಡುಗಡೆ ಸಿಕ್ಕಿದಂತೆ ಆಗಿದೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಮದ್ಯಪಾನ ಮಾಡಿದ ಕುಡುಕನೋರ್ವ ಶೋಲೆ ಸಿನಿಮಾದಿಂದ ಪ್ರೇರಣೆ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದಾನೆ. ಕುಡುಕನನ್ನು ಶಶಿ ಎಂದು ಗುರುತಿಸಲಾಗಿದೆ.

    ಮದ್ಯಪಾನ ಮಾಡಿ ಬಂದ ಶಶಿ, ನಗರದ ದೊಡ್ಡ ವಾಟರ್ ಟ್ಯಾಂಕ್ ಮೇಲೆ ಹೋಗಿ ನಾನು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಸ್ಥಳೀಯರು ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಪೊಲೀಸರು ಮತ್ತು ಮಾಜಿ ಬಿಜೆಪಿ ಮೇಯರ್ ಆದ ಶಕುಂತಲ ಭಾರತಿ ಬಂದು ಆತನ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಮಾಜಿ ಮೇಯರ್ ಮತ್ತು ಪೊಲೀಸರು ಎಷ್ಟೇ ಕೇಳಿಕೊಂಡರೂ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಶಿ ಬೆದರಿಕೆ ಹಾಕಿದ್ದಾನೆ.

    ಪೊಲೀಸರು ಮೈಕ್ ಹಿಡಿದು ಆತನನ್ನು ಮನವೊಲಿಸಿದ್ದಾರೆ. ಆತನನ್ನು ಕರೆತರಲು ಮೇಲೆ ಹೋದರೆ ಅದೇ ಭಯದಲ್ಲಿ ಅವನು ಮೇಲಿಂದ ಜಿಗಿದು ಬೀಡುತ್ತಾನೆ ಎಂಬ ಭಯದಿಂದ ಪೊಲೀಸರು ಮೇಲೆ ಹೋಗದೆ ಕೆಳಗೆ ನಿಂತು ಆತನ ಮನವೊಲಿಸಲು ಪ್ರಯತ್ನ ಮಾಡಿದ್ದಾರೆ. ಜೊತೆಗೆ ನಿನ್ನ ಪ್ರೀತಿಯಿಂದ ಕಾಣುವ ಪತ್ನಿ ನಿನಗಾಗಿ ಕಾಯುತ್ತಿದ್ದಾರೆ. ನೀನು ಆತ್ಮಹತ್ಯೆ ಮಾಡಿಕೊಂಡರೆ ಅವರು ಸಾಯುತ್ತಾರೆ ಎಂದು ಹೇಳಿ ಮನವರಿಕೆ ಮಾಡಿ ಕೊನೆಗೆ ಕೆಳಗೆ ಇಳಿಸಿದ್ದಾರೆ.

    ಕೆಳಗೆ ಬಂದ ಶಶಿಯನ್ನು ಪೊಲೀಸರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಣ್ಣೆ ಕಿಕ್ ಇಳಿದ ಬಳಿಕ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಆತ ನಾನು ಮದ್ಯಪಾನ ಮಾಡಿದ ನಂತರ ನಾನು ಶೋಲೆ ಸಿನಿಮಾದ ಧರ್ಮೇಂದ್ರನಂತೆ ಭಾಸವಾಗಿತು. ನಾನು ಸೂಸೈಡ್ ಮಾಡಿಕೊಳ್ಳಲು ಹೋದಾಗ ನನ್ನ ಹೆಂಡತಿ ಬಂದು ಕಾಪಾಡುತ್ತಾಳೆ ಎಂದು ನಾನು ಹಾಗೆ ಮಾಡಿದೆ ಎಂದು ಒಪ್ಪಿಕೊಂಡಿದ್ದಾನೆ.

  • ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗು ಸಾವು

    ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗು ಸಾವು

    ತುಮಕೂರು: ಮನೆಯ ನೀರಿನ ತೊಟ್ಟಿಯಲ್ಲಿ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ನಗರದ ಹನುಮಂತಪುರದಲ್ಲಿರುವ ರಾಘವೇಂದ್ರ ಮಠದ ಬಳಿ ನಡೆದಿದೆ.

    ವಿಜಯೇಂದ್ರ ಕಾವ್ಯ ದಂಪತಿಯ ಮಗು ಆಘನಾ ಮೃತ ಬಾಲಕಿ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯ ಹೊರಗೆ ಆಟವಾಡುತ್ತಿದ್ದ ಆಘನಾ ಮನೆಯ ಮುಂಭಾಗದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದಿದೆ. ಮನೆಯ ಒಳಗೆ ಕೆಲಸ ಮಾಡುತ್ತಿದ್ದ ತಾಯಿ ಕಾವ್ಯ ಹೊರಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಮಗು ನೀರಿನ ತೊಟ್ಟಿಯೊಳಗೆ ಬಿದ್ದಿರುವುದನ್ನು ನೋಡಿ ಗಾಬರಿಗೊಂಡ ತಾಯಿ ಅಕ್ಕಪಕ್ಕದವರನ್ನು ಕರೆದಿದ್ದಾರೆ.

    ತಕ್ಷಣ ಸಹಾಯಕ್ಕೆ ಬಂದ ಸ್ಥಳೀಯರು ಮಗುವನ್ನು ನೀರಿನ ತೊಟ್ಟಿಯಿಂದ ತೆಗೆದು ದೇಹದಲ್ಲಿ ಸೇರಿದ್ದ ನೀರನ್ನು ಹೊರಗೆ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಸಮಯ ಮೀರಿದ್ದರಿಂದ ಮಗು ಕೊನೆಯುಸಿರೆಳೆದಿತ್ತು.

  • ಮಹಿಳೆಯರ ಮೇಲೆ ವಾಟರ್ ಮೆನ್ ಪೌರುಷ

    ಮಹಿಳೆಯರ ಮೇಲೆ ವಾಟರ್ ಮೆನ್ ಪೌರುಷ

    ತುಮಕೂರು: ನೀರಿನ ಟ್ಯಾಂಕ್ ಶುಚಿಗೊಳಿಸಿ ಎಂದಿದ್ದಕ್ಕೆ ವಾಟರ್ ಮೆನ್ ಒಬ್ಬ ಮಹಿಳೆಯರ ಮೇಲೆ ಪೌರುಷ ತೋರಿಸಿದ್ದಾನೆ. ಏಕಾಏಕಿ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಏಡೆಯೂರು ಗ್ರಾಮದ ತಟ್ಟೆಕೆರೆಯಲ್ಲಿ ಈ ಘಟನೆ ನಡೆದಿದೆ.

    ತಟ್ಟೆಕೆರೆಯಲ್ಲಿರುವ ವಾಟರ್ ಟ್ಯಾಂಕ್ ಕಲುಷಿತವಾಗಿದ್ದು ಅದನ್ನು ಶುಚಿಗೊಳಿಸಿ ನೀರು ಬಿಡಿ ಎಂದು ಏಡೆಯೂರು ಗ್ರಾಮ ಪಂಚಾಯ್ತಿ ವಾಟರ್ ಮೆನ್ ಹರೀಶ್ ಗೆ ಗ್ರಾಮಸ್ಥರು ತಾಕೀತು ಮಾಡಿದ್ದಾರೆ. ಈ ದ್ವೇಷವನ್ನೇ ಮನಸ್ಸಿನಲಿಟ್ಟುಕೊಂಡ ಹರೀಶ್, ಮಗದೊಂದು ದಿನ ಬಂದು ಮಹಿಳೆಯರ ಮೇಲೆ ಪರಾಕ್ರಮ ತೋರಿದ್ದಾನೆ. ಪರಿಣಾಮ ಘಟನೆಯಲ್ಲಿ ಕಲಾವತಿ ಮತ್ತು ಸವಿತಾ ಸೇರಿದಂತೆ ಹಲವು ಮಹಿಳೆಯರಿಗೆ ಗಾಯವಾಗಿದೆ. ಈ ಸಂಬಂಧ ಅಮೃತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹರೀಶ್ ವಾಟರ್ ಮೆನ್ ಆಗಿದ್ದರೂ ಗ್ರಾಮಸ್ಥರನ್ನ ಹೆದರಿಸಿ ದೌರ್ಜನ್ಯ ಮಾಡುತಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಈ ಕೂಡಲೇ ಹರೀಶ್ ನನ್ನ ಗ್ರಾಮ ಪಂಚಾಯ್ತಿ ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯ – ನೀರಿನ ಟ್ಯಾಂಕಿಗೆ ಬಿದ್ದು ಮಗು ಸಾವು

    ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯ – ನೀರಿನ ಟ್ಯಾಂಕಿಗೆ ಬಿದ್ದು ಮಗು ಸಾವು

    ಗದಗ: ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ನೀರಿನ ಟ್ಯಾಂಕ್‍ಗೆ 4 ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕುರುಡಗಿ ಗ್ರಾಮದಲ್ಲಿ ನಡೆದಿದೆ.

    ಮೃತ ಮಗುವನ್ನು ದುರಗಪ್ಪ ಮಾದರ (4) ಎಂದು ಗುರುತಿಸಲಾಗಿದೆ. ದುರಗಪ್ಪ ಮಾದರ ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ವೇಳೆ ಅಂಗನವಾಡಿ ಅವರಣದಲ್ಲಿರುವ ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದಾನೆ. ಆದರೆ ಇದನ್ನು ಅಂಗನವಾಡಿ ಸಿಬ್ಬಂದಿ ಗಮನಿಸಿಲ್ಲದ ಕಾರಣ ಮೃತಪಟ್ಟಿದ್ದಾನೆ.

    ಕುರುಡಗಿ ಗ್ರಾಮದ ವಾರ್ಡ್ ನಂಬರ್ 2 ರಲ್ಲಿರುವ ಅಂಗನವಾಡಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಗದಗ ಜಿಲ್ಲೆ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಶವ ನೀರಿನ ಟ್ಯಾಂಕ್‍ನಲ್ಲಿ ಪತ್ತೆ

    ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನ ಶವ ನೀರಿನ ಟ್ಯಾಂಕ್‍ನಲ್ಲಿ ಪತ್ತೆ

    ಬಾಗಲಕೋಟೆ: ಎರಡು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕನೊಬ್ಬ ತೆರೆದ ನೀರು ಸರಬರಾಜು ಟ್ಯಾಂಕ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಜಮಖಂಡಿಯ ಚೌಡಯ್ಯನಗರದಲ್ಲಿ ಘಟನೆ ಬೆಳಕಿಗೆ ಬಂದಿದೆ. ವೆಂಕಟೇಶ ಲಕ್ಷ್ಮಯ್ಯಾ ವಿಭೂತಿ(12) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬಾಲಕ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದನು. ಕಳೆದ ಎರಡು ದಿನಗಳ ಹಿಂದೆ ಶಾಲೆಗೆ ಹೋಗಿದ್ದ ಬಾಲಕ ಮರಳಿ ಮನೆಗೆ ಬಂದಿರಲಿಲ್ಲ. ಆತನಿಗಾಗಿ ಎಷ್ಟೇ ಹುಡುಕಾಟ ನಡೆಸಿದರೂ ಕೂಡ ಆತನ ಸುಳಿವು ಸಿಕ್ಕಿರಲಿಲ್ಲ.

    ಆದರೆ ಇಂದು ಬಾಲಕನ ಮೃತದೇಹ ನೀರಿನ ಟ್ಯಾಂಕ್‍ನಲ್ಲಿ ಪತ್ತೆಯಾಗಿದೆ. ಚೌಡಯ್ಯನಗರದಲ್ಲಿದ್ದ ನೀರು ಸರಬರಾಜು ಟ್ಯಾಂಕ್ ತೆರೆದ ಸ್ಥಿತಿಯಲ್ಲಿತ್ತು. ಇದನ್ನು ನೋಡಿದ ಸ್ಥಳೀಯರು ಟ್ಯಾಂಕಿನ ಬಳಿ ಹೋದಾಗ ಬಾಲಕನ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಸಾವಿಗೆ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಅವರು ಟ್ಯಾಂಕ್ ಬಾಗಿಲು ತೆರೆದಿಟ್ಟಿದ್ದಕ್ಕೆ ಬಾಲಕ ಅದರಲ್ಲಿ ಬಿದ್ದು, ಮುಳುಗಿ ಜೀವ ಕಳೆದುಕೊಂಡಿದ್ದಾನೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

    ಜಮಖಂಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.