Tag: water sharing

  • ಮತ್ತೊಂದು ಶಾಕ್: ಉಗ್ರರನ್ನು ಛೂ ಬಿಡೋ ಪಾಕಿಗೆ ನದಿ ನೀರು ಕೊಡಲ್ಲ!

    ಮತ್ತೊಂದು ಶಾಕ್: ಉಗ್ರರನ್ನು ಛೂ ಬಿಡೋ ಪಾಕಿಗೆ ನದಿ ನೀರು ಕೊಡಲ್ಲ!

    ನವದೆಹಲಿ: ಈಗಾಗಲೇ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಕಿತ್ತೆಸೆದು ಅಲ್ಲಿಂದ ದೇಶಕ್ಕೆ ರಫ್ತಾಗುತ್ತಿದ್ದ ಉತ್ಪನ್ನಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಏರಿಸಿದ್ದ ಭಾರತ ಈಗ ನದಿ ನೀರಿನ ಹರಿವನ್ನು ನಿಲ್ಲಿಸುವ ಮೂಲಕ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.

    ಹೌದು. ಭಾರತದ ಮೇಲೆ ಉಗ್ರರನ್ನು ಛೂ ಬಿಟ್ಟು ಪರೋಕ್ಷವಾಗಿ ಯುದ್ಧ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕೆಂಬ ಜನಾಗ್ರಹ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ನದಿ ನೀರನ್ನು ಬಿಡದಿರುವ ಕಠಿಣ ತೀರ್ಮಾನವನ್ನು ತೆಗೆದುಕೊಂಡಿದೆ. ಇದನ್ನು ಓದಿ:  ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಈ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಭಾರತದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಹರಿಯುತ್ತಿರುವ ಮೂರು ನದಿಗಳ ನೀರನ್ನು ಯಮುನಾ ನದಿಗೆ ತಿರುಗಿಸಲು ಸಿದ್ಧತೆ ನಡೆದಿದೆ ಎಂದು ಹೇಳಿದ್ದಾರೆ.

    ಈಗಾಗಲೇ ಯಮುನಾ ನದಿಯ ಪುನಶ್ಚೇತನಕ್ಕೆ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಮೂರು ನದಿಗಳು ಭಾರತಕ್ಕೆ, ಮೂರು ನದಿಗಳನ್ನು ಪಾಕಿಸ್ತಾನಕ್ಕೆ ನೀಡಲಾಯಿತು. ಆದರೆ ಭಾರತ ಉದಾರ ಮನಸ್ಸಿನಿಂದ ನಿರಂತರವಾಗಿ ಪಾಕಿಸ್ತಾನಕ್ಕೆ ನೀರನ್ನು ನೀಡುತ್ತಲೇ ಇದೆ. ಆದರೆ ಈಗ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಸಂಗ್ರಹಿಸಿ ನೀರಾವರಿ ಯೋಜನೆಯ ಮೂಲಕ ಜಮ್ಮು ಕಾಶ್ಮೀರ ಮತ್ತು ಪಂಜಾಬ್‍ಗೆ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಪಂಜಾಬಿನ ಪಠಾಣ್‍ಕೋಟ್ ಜಿಲ್ಲೆಯ ಶಾಪಕುರ್ಕಿಂಡಿಯಲ್ಲಿ ರವಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣವಾಗುತ್ತಿದೆ. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಈ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು. ರವಿ ನದಿ ವ್ಯಾಪ್ತಿಯ ರಾಜ್ಯಗಳಿಗೆ ಈ ನೀರನ್ನು ಹರಿಸಲಾಗುತ್ತದೆ. ಈ ಯೋಜನೆಗಳು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸಲ್ಪಟ್ಟಿವೆ ಎಂದು ಗಡ್ಕರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

    2016ರಲ್ಲಿ ಉರಿ ಸೇನಾ ನೆಲೆಯ ಮೇಲೆ ದಾಳಿ ನಡೆದ ಬಳಿಕ ಸರ್ಕಾರ ಪಾಕಿಸ್ತಾನಕ್ಕೆ ಹರಿಯುತ್ತಿರುವ ನೀರನ್ನು ಭಾರತದತ್ತ ತಿರುಗಿಸಲು ಯೋಜನೆ ರೂಪಿಸಿತ್ತು. ಇಂಡಸ್ ನದಿ ನೀರಿನ ಒಪ್ಪಂದದ ಪ್ರಕಾರ ರಾವಿ, ಸಟ್ಲೇಜ್, ಬೀಯಾಸ್ ನದಿ ನೀರಿನ ಬಳಕೆ ಭಾರತಕ್ಕೆ ಮೀಸಲಾಗಿದ್ದರೆ, ಜೇಲಂ, ಚೀನಾಬ್ ಮತ್ತು ಇಂಡಸ್ ನದಿ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv