Tag: Water Disputes

  • ತಮಿಳುನಾಡು ಕರ್ನಾಟಕ ಜಲವಿವಾದ ತಡೆಗೆ ನಿತಿನ್ ಗಡ್ಕರಿ ಪ್ಲಾನ್

    ತಮಿಳುನಾಡು ಕರ್ನಾಟಕ ಜಲವಿವಾದ ತಡೆಗೆ ನಿತಿನ್ ಗಡ್ಕರಿ ಪ್ಲಾನ್

    ಹಾಸನ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಜಲವಿವಾದ ಮುಗಿಸೋಕೆ ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಇದರ ಮುನ್ಸೂಚನೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ.

    ನಗರದ ಎಸ್‍ಆರ್ ಟಿಸಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಸಚಿವರು, ಗೋದಾವರಿಯ 11,000 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಆದರೆ ದುರದೃಷ್ಟದ ಸಂಗತಿ ಎಂದರೆ ಕರ್ನಾಟಕ ಹಾಗೂ ತಮಿಳುನಾಡು ಕೇವಲ 60 ರಿಂದ 70 ಟಿಎಂಸಿ ನೀರಿಗಾಗಿ ಪ್ರತಿ ವರ್ಷವೂ ಹೋರಾಟ ಮಾಡುತ್ತಿವೆ. ಪೋಲಾವರಂ ಬಳಿ ಡ್ಯಾಂ ಕಟ್ಟಿದರೆ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ಬಗ್ಗೆ ಡಿಪಿಆರ್ ತಯಾರಿಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.

    ಸಚಿವರ ಪ್ಲಾನ್ ಏನು?:
    ಗೋದಾವರಿ 11,000 ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಆಂಧ್ರ ಪ್ರದೇಶದ ಪೋಲಾವರಂನಲ್ಲಿ ಡ್ಯಾಂ ನಿರ್ಮಾಣ ಮಾಡಿ, ಹಿನ್ನೀರನ್ನು ಕೃಷ್ಣಾಗೆ ಹರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಡ್ಯಾಂ ನಿರ್ಮಾಣಕ್ಕೆ 60 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವು ಹಣ ನೀಡಲು ಒಪ್ಪಿಗೆ ಸೂಚಿಸಿದೆ ಎಂದರು.

    ಕೃಷ್ಣಾಗೆ ಹರಿಬಿಟ್ಟ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೆನ್ನಾ ನದಿಗೆ ಸೇರಿಸಲಾಗುತ್ತದೆ. ಪೆನ್ನಾ ನದಿಯಿಂದ ಕಾವೇರಿಗೆ ನೀರನ್ನು ಹರಿಬಿಡಲಾಗುತ್ತದೆ. ಮಹತ್ವದ ಯೋಜನೆಯಿಂದಾಗಿ ಕರ್ನಾಟಕ ಹಾಗೂ ತಮಿಳುನಾಡಿಗೆ 450 ಟಿಎಂಸಿ ನೀರು ಸಿಗಲಿದ್ದು, ಜಲ ವಿವಾದಕ್ಕೆ ತೆರೆ ಬೀಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಈ ಯೋಜನೆ ಜಾರಿ ತಮಗೂ ಕೂಡ ಖುಷಿಯ ವಿಚಾರವಾಗಿದೆ. ನಾನು ರೈತರ ಪರವಾಗಿ ಕೆಲಸ ಮಾಡುತ್ತಿರುವೆ ಎಂದರು.

    ಯಾವ ರಸ್ತೆಗಳಿಗೆ ಶಂಕು ಸ್ಥಾಪನೆ?:
    ಬಾಣಾವರ-ಹುಳಿಯಾರ್ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ದ್ವಿಪಥ ಮತ್ತು ಪೇವ್ಡ್ ಶೋಲ್ಡರ್ ಅಗಲೀಕರಣ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನೆರವೇರಿಸಿದರು. ಈ ರಸ್ತೆಯು 48.2 ಕಿ.ಮೀ. ಉದ್ದವಿದ್ದು ಕಾಮಗಾರಿಗೆ 191.6 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದೇ ವೇಳೆ ಬೇಲೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ 373ರ ದ್ವಿಪಥ ಮತ್ತು ಪೇವ್ಡ್ ಶೋಲ್ಡರ್ ಅಗಲೀಕರಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು. ಈ ರಸ್ತೆಯು ಒಟ್ಟು 128.35 ಕಿ.ಮೀ. ಉದ್ದವಿದ್ದು, ಕಾಮಗಾರಿಗೆ 849.39 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

    ಚನ್ನರಾಯಪಟ್ಟಣ ಹಾಗೂ ಹಾಸನ ಬೈಪಾಸ್‍ಗಳಲ್ಲಿ ದ್ವಿಪಥದಿಂದ ಚತುಷ್ಪಥಕ್ಕೆ ಉನ್ನತೀಕರಣ ಯೋಜನೆಗೆ ಶಂಕು ಸ್ಥಾಪನೆ ನೆರವೇರಿತು. ಈ ರಸ್ತೆಯು 20.71 ಕಿ.ಮೀ. ಉದ್ದವಿದ್ದು, ಕಾಮಗಾರಿಗೆ 823.4 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv