Tag: warrior

  • ಫೋನಿನಲ್ಲಿ IPL ಮ್ಯಾಚ್ ನೋಡುತ್ತಿದ್ದಂತೆ ಛಾವಣಿಯಿಂದ ಬಿದ್ದು ಯೋಧ ಸಾವು

    ಫೋನಿನಲ್ಲಿ IPL ಮ್ಯಾಚ್ ನೋಡುತ್ತಿದ್ದಂತೆ ಛಾವಣಿಯಿಂದ ಬಿದ್ದು ಯೋಧ ಸಾವು

    – 5 ತಿಂಗಳ ಹಿಂದೆಯಷ್ಟೆ ವರ್ಗಾವಣೆಯಾಗಿ ಬಂದಿದ್ರು

    ಭುವನೇಶ್ವರ: ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಮೂರು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯಿಂದ ಬಿದ್ದು ಯೋಧ ಮೃತಪಟ್ಟಿರುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ಈ ಘಟನೆ ನಡೆದಿದ್ದು, ಮೃತ ಯೋಧನನ್ನು ನವರಂಗ್‍ಪುರದ ಯೋಗೇಶ್ವರ್ ದಾಸ್ (27) ಎಂದು ಗುರುತಿಸಲಾಗಿದೆ. ದಾಸ್ ಮಂಗಳವಾರ ಸಂಜೆ ಮನೆಯ ಮೇಲ್ಛಾವಣಿಯ ಮೇಲೆ ಕುಳಿತುಕೊಂಡು ತಮ್ಮ ಮೊಬೈಲ್ ಫೋನಿನಲ್ಲಿ ಐಪಿಎಲ್ ಮ್ಯಾಚ್ ನೋಡುತ್ತಿದ್ದರು. ಆದರೆ ದುರದೃಷ್ಟವಶಾತ್ ಆಕಸ್ಮಿಕವಾಗಿ ದಾಸ್ ಛಾವಣಿಯಿಂದ ಕೆಳಗೆ ಬಿದ್ದಿದ್ದಾರೆ.

    ಪರಿಣಾಮ ಅವರ ತಲೆಗೆ ಗಂಭೀರ ಗಾಯಗಳಾಗಿದೆ. ತಕ್ಷಣ ದಾಸ್‍ರನ್ನು ಸಹೋದ್ಯೋಗಿಗಳು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ತೀವ್ರವಾಗಿ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ದಾಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಮೃತ ಯೋಗೇಶ್ವರ್ ದಾಸ್ 2013ರಲ್ಲಿ ಕೊರಪುಟ್‍ನ ಒಡಿಶಾ ವಿಶೇಷ ಸಶಸ್ತ್ರ ಪೊಲೀಸ್ (ಒಎಸ್‍ಎಪಿ) 3ನೇ ಬೆಟಾಲಿಯನ್‍ಗೆ ಸೇರಿದ್ದರು. ಐದು ತಿಂಗಳ ಹಿಂದೆ ರಾಯಗಡಕ್ಕೆ ವರ್ಗಾವಣೆಯಾಗಿ ಬಂದಿದ್ದರು. ಆದರೆ ಮ್ಯಾಚ್ ನೋಡುತ್ತಿದ್ದಾಗ ಛಾವಣಿ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ.

  • ವಿಧಿಯಾಟಕ್ಕೆ ಸ್ನೇಹಿತನ ಎದುರಲ್ಲೇ ಸಾವಿಗೀಡಾದ ನಿವೃತ್ತ ಯೋಧ

    ವಿಧಿಯಾಟಕ್ಕೆ ಸ್ನೇಹಿತನ ಎದುರಲ್ಲೇ ಸಾವಿಗೀಡಾದ ನಿವೃತ್ತ ಯೋಧ

    ಹಾಸನ: ಸ್ನೇಹಿತನ ಜೊತೆ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದ ನಿವೃತ್ತ ಯೋಧನ ಮೇಲೆ ಮರದ ರೆಂಬೆ ಬಿದ್ದು ಸಾವನ್ನಪ್ಪಿದ ಮನಕಲಕುವ ಘಟನೆ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

    ಮಂಡ್ಯದ ಮೂಲದ ನಿವೃತ್ತ ಯೋಧ ಆರ್.ಎಲ್.ಪಟೇಲ್ (35) ಸಾವನ್ನಪ್ಪಿದ್ದು, ಘಟನೆಯ ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಕಲೇಶಪುರ ಪಟ್ಟಣದ ಬಿ.ಮ್.ರಸ್ತೆಯಲ್ಲಿರುವ ಶ್ರೀ ಗಂಧ ಹೋಟೆಲ್ ಮುಂಭಾಗ ಮರದ ಕೆಳಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.

    ನಿವೃತ್ತ ಯೋಧ ಆರ್.ಎಲ್.ಪಟೇಲ್ ಸ್ನೇಹಿತರೊಡನೆ ಸಕಲೇಶಪುರಕ್ಕೆ ಆಗಮಿಸಿದ್ದರು. ಈ ವೇಳೆ ಸಮೀಪದ ಅಂಗಡಿಯೊಂದರಲ್ಲಿ ಕಾಫಿ ಪುಡಿ ತೆಗೆದುಕೊಂಡು ಹಿಂದಿರುಗುವಾಗ ಮರದ ರೆಂಬೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯರು ಮರದ ಕೊಂಬೆ ಸರಿಸಿ ಅಂಬುಲೆನ್ಸ್ ಮುಖಾಂತರ ಪಟೇಲ್ ಅವರನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಟೇಲ್ ಸಾವನ್ನಪ್ಪಿದ್ದಾರೆ. ಕಣ್ಣೆದುರೇ ಗೆಳೆಯನ ಸಾವು ಕಂಡು ಜೊತೆಯಲ್ಲಿದ್ದ ಸ್ನೇಹಿತ ಕಂಗಾಲಾಗಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿವೃತ್ತರಾಗಿ ಬಂದಿರೋ ಯೋಧ ಶೆಡ್‍ನಲ್ಲಿ ಕ್ವಾರಂಟೈನ್

    ನಿವೃತ್ತರಾಗಿ ಬಂದಿರೋ ಯೋಧ ಶೆಡ್‍ನಲ್ಲಿ ಕ್ವಾರಂಟೈನ್

    ಹಾವೇರಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಬಂದಿರುವ ಸೈನಿಕರೊಬ್ಬರು ಗ್ರಾಮದ ಹೊರವಲಯದಲ್ಲಿರೋ ತಗಡಿನ ಶೆಡ್‍ನಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಇದನ್ನೂ ಓದಿ: ವಿಭಿನ್ನವಾಗಿ ಯೋಧ ಕ್ವಾರಂಟೈನ್- ಹಾಡಿ ಹೊಗಳಿದ ಜನ

    ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದ ಲಿಂಗರಾಜ ಶಿವಸಿಂಪಿಗೇರ ನಿವೃತ್ತ ಸೈನಿಕ. ಇವರು ಸ್ವಯಂ ಪ್ರೇರಿತವಾಗಿ ಹೋಂ ಕ್ವಾರಂಟೈನ್ ಆಗಿದ್ದಾರೆ. ಕೊರೊನಾ ಸೋಂಕು ಮತ್ತು ಕೊರೊನಾ ಲಕ್ಷಣಗಳು ಇರದಿದ್ದರೂ ಮನೆಯವರು ಹಾಗೂ ಗ್ರಾಮದ ಜನರಿಗೆ ತಮ್ಮಿಂದ ತೊಂದರೆ ಆಗದಿರಲಿ ಎಂದು ಹೋಂ ಕ್ವಾರಂಟೈನ್ ಆಗಿದ್ದಾರೆ.

    ಲಿಂಗರಾಜ ಹದಿನೇಳು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಹದಿನಾಲ್ಕು ದಿನಗಳ ಕಾಲ ಹೋಂ ಕ್ವಾರಂಟೈನ್ ಆಗಿದ್ದಾರೆ. ನನ್ನಿಂದ ಗ್ರಾಮದ ಹಿರಿಯರಿಗೆ ಹಾಗೂ ವಯೋವೃದ್ಧರಿಗೆ ತೊಂದರೆ ಆಗಬಾರದು ಅನ್ನೋ ಉದ್ದೇಶದಿಂದ ಗ್ರಾಮದ ಹೊರವಲಯದಲ್ಲಿ ಇರುವ ತಗಡಿನ ಶೆಡ್‍ನಲ್ಲಿ ಕ್ವಾರಂಟೈನ್ ಆಗಿದ್ದೇನೆ ಎಂದು ಹೇಳಿದ್ದಾರೆ.

  • ಜಮ್ಮು ಕಾಶ್ಮೀರದ ಶಾರ್ಟ್ ಸರ್ಕ್ಯೂಟ್‍ನಲ್ಲಿ ವಿಜಯಪುರದ ಯೋಧ ನಿಧನ

    ಜಮ್ಮು ಕಾಶ್ಮೀರದ ಶಾರ್ಟ್ ಸರ್ಕ್ಯೂಟ್‍ನಲ್ಲಿ ವಿಜಯಪುರದ ಯೋಧ ನಿಧನ

    – ಒಂದೂವರೆ ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಯೋಧ

    ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಕರ್ತವ್ಯ ನಿರತ ಬಿಎಸ್‍ಎಫ್ ಯೋಧ ಸಾವನ್ನಪ್ಪಿದ್ದಾರೆ.

    ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ ಶಿವಾನಂದ ಬಡಿಗೇರ(31) ನಿಧನವಾದ ಯೋಧ. ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರತ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಯೋಧ ಸಾವನ್ನಪ್ಪಿದ್ದು, ಭಾರತೀಯ ಸೇನೆ ದೂರವಾಣಿ ಕರೆ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದೆ.

    ಶಿವಾನಂದ ಒಂದೂವರೆ ವರ್ಷದ ಹಿಂದಷ್ಟೇ ಜಿಲ್ಲೆಯ ತಾಳಿಕೋಟೆ ತಾಲೂಕಿನ ತುಂಬಗಿಯ ಪುಷ್ಪಾ ಅವರನ್ನು ವಿವಾಹವಾಗಿದ್ದ. ಶಿವಾನಂದ 14 ವರ್ಷಗಳ ಹಿಂದೆ ಸೇನೆ ಸೇರಿದ್ದರು. ಬಾಂಗ್ಲಾ, ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿ, ಸದ್ಯ ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜನೆಯಾಗಿದ್ದರು.

    ಶಿವಾನಂದ ಅವರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಬಗ್ಗೆ ಶಿವಾನಂದ ಅವರ ಸಹೋದರ ಕಾಳಪ್ಪ ಬಡಿಗೇರಗೆ ಸೇನೆ ಮಾಹಿತಿ ನೀಡಿದೆ. ಕಾಳಪ್ಪ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮನೆಯವರು ದುಃಖಿತರಾಗಿದ್ದಾರೆ. ಶಿವಾನಂದ ಅವರ ಪಾರ್ಥೀವ ಶರೀರವನ್ನು ಬೇಗನೆ ತರುವಂತೆ ಜಿಲ್ಲಾಡಳಿತಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

  • 18 ತಿಂಗಳ ಹಿಂದೆಯಷ್ಟೇ ಭಾರತೀಯ ಸೇನೆಗೆ ಸೇರಿದ್ದ ಯೋಧ ನಿಧನ

    18 ತಿಂಗಳ ಹಿಂದೆಯಷ್ಟೇ ಭಾರತೀಯ ಸೇನೆಗೆ ಸೇರಿದ್ದ ಯೋಧ ನಿಧನ

    ಬೆಳಗಾವಿ/ಚಿಕ್ಕೋಡಿ: ಸೇನೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿಯ ಗ್ರಾಮದ ಯೋಧರೊಬ್ಬರು ನಿಧನರಾಗಿದ್ದಾರೆ.

    ಕರೋಶಿಯ ಗ್ರಾಮದ ನಿವಾಸಿ ಅನಿಲ ಶಿವಾಜಿ ಶಿಂಗಾಯಿ (23) ಅವರು ದೆಹಲಿಯಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.

    ಅನಿಲ ಶಿವಾಜಿ ಶಿಂಗಾಯಿ 18 ತಿಂಗಳ ಹಿಂದೆಯಷ್ಟೇ ಸೇನೆಗೆ ಸೆರ್ಪಡೆಯಾಗಿದ್ದರು. ಆದರೆ ಲಾಕ್‍ಡೌನ್ ಇದ್ದ ಪರಿಣಾಮ ಯೋಧ ಊರಲ್ಲಿದ್ದರು. ಕಳೆದ ಒಂದು ತಿಂಗಳ ಹಿಂದೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಯೋಧ ಸೇವೆಯಲ್ಲಿ ಇದ್ದಾಗಲೇ ನಿಧನರಾಗಿದ್ದಾರೆ.

    ಸಾವಿನ ಸುದ್ದಿ ತಿಳಿಯುತ್ತಿದಂತೆ ಕುಟುಂಬಸ್ಥರು ದೆಹಲಿಗೆ ದೌಡಾಯಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಕರೋಶಿಯತ್ತ ಯೋಧನ ಪಾರ್ಥಿವ ಶರೀರ ಬರಲಿದೆ ಎಂದು ಹೇಳಲಾಗಿದೆ.

  • ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಮಲ್ಲೇಶ್ ಪಾರ್ಥಿವ ಶರೀರ

    ಸ್ವಗ್ರಾಮಕ್ಕೆ ಆಗಮಿಸಿದ ಯೋಧ ಮಲ್ಲೇಶ್ ಪಾರ್ಥಿವ ಶರೀರ

    – ಸೇನಾ ಅವಧಿ ಮುಗಿದಿದ್ದರೂ ಸೇವೆಯ ಹಂಬಲ
    – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

    ಹಾಸನ: ಅರುಣಾಚಲ ಪ್ರದೇಶದಲ್ಲಿ ಮಿಲಿಟರಿ ಸಾಮಗ್ರಿ ಸಾಗಿಸುವಾಗ ಗುಡ್ಡ ಕುಸಿದು ಸಾವನ್ನಪ್ಪಿದ ಭಾರತೀಯ ಯೋಧ ಮಲ್ಲೇಶ್ ಅವರ ಪಾರ್ಥಿವ ಶರೀರ ಹಾಸನದ ಸ್ವಗ್ರಾಮಕ್ಕೆ ಆಗಮಿಸಿದೆ. ಇದೀಗ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

    ಯೋಧ ಮಲ್ಲೇಶ್ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಅತ್ನಿ ಗ್ರಾಮದವರು. ಇವರು ಅರುಣಾಚಲ ಪ್ರದೇಶದ ಬೆಟಾಲಿಯನ್ 18 ರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಿಲಿಟರಿ ಸಾಮಗ್ರಿಗಳನ್ನು ಗಡಿ ಭಾಗಕ್ಕೆ ಸಾಗಿಸುವಾಗ ಗುಡ್ಡ ಕುಸಿದು ಮಲ್ಲೇಶ್ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಿಲಿಟರಿ ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದರು.

    ಮಲ್ಲೇಗೌಡ ಹಾಗೂ ಪುಟ್ಟಮ್ಮ ಎಂಬವರ ಪುತ್ರರಾಗಿರುವ ಯೋಧ ಮಲ್ಲೇಶ್‍ಗೆ ಪತ್ನಿ ಪೂರ್ಣಿಮಾ ಹಾಗೂ ಋತ್ವಿಕ್, ಸಹನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಮಲ್ಲೇಶ್ ಸೇನೇ ಸೇವಾ ಅವಧಿ ಮುಗಿದಿದ್ದರೂ ದೇಶ ಸೇವೆ ಹಂಬಲದಲ್ಲಿ ಕೆಲಸ ಮುಂದುವರಿಸಿದ್ದರು.

    ಇಂದು ಸ್ವಗ್ರಾಮಕ್ಕೆ ಯೋಧ ಮಲ್ಲೇಶ್ ಪಾರ್ಥಿವ ಶರೀರ ಆಗಮಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

  • ಕರ್ತವ್ಯದ ಅವಧಿ ಮುಗಿದಿದ್ರೂ ಮತ್ತೆ ಸೇನೆಯಲ್ಲಿ ಕೆಲಸ- ಗುಡ್ಡ ಕುಸಿದು ಯೋಧ ನಿಧನ

    ಕರ್ತವ್ಯದ ಅವಧಿ ಮುಗಿದಿದ್ರೂ ಮತ್ತೆ ಸೇನೆಯಲ್ಲಿ ಕೆಲಸ- ಗುಡ್ಡ ಕುಸಿದು ಯೋಧ ನಿಧನ

    ಹಾಸನ: ಅರುಣಾಚಲ ಪ್ರದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಅರಕಲಗೂಡು ತಾಲೂಕಿನ ಯೋಧರೊಬ್ಬರು ಗುಡ್ಡ ಕುಸಿದು ಶನಿವಾರ ಮೃತಪಟ್ಟಿದ್ದಾರೆ.

    ಅತ್ನಿ ಗ್ರಾಮದ 38 ವರ್ಷದ ಮಲ್ಲೇಶ್ ಮೃತ ಯೋಧ. ಮಲ್ಲೇಶ್ ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಲ್ಲೇಶ್ ಅವರ ಕರ್ತವ್ಯದ ಅವಧಿ ಕೊನೆಗೊಂಡಿದ್ದರೂ ದೇಶ ಸೇವೆ ಮಾಡುವ ಹಂಬಲದಿಂದ ಮತ್ತೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಗಡಿ ಭಾಗಕ್ಕೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಪೆಟ್ರೋಲ್ ಬಂಕರ್ ವಾಹನದಲ್ಲಿ ತೆರಳುತ್ತಿದ್ದ ವೇಳೆ ಗುಡ್ಡ ಕುಸಿದು ಯೋಧ ಮಲ್ಲೇಶ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಾಳು ಯೋಧರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೋಧ ಮಲ್ಲೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ವೀರಯೋಧ ಮಲ್ಲೇಶ್ ಅತ್ನಿ ಗ್ರಾಮದ ನಿವಾಸಿ ದಿ. ಮಲ್ಲೇಗೌಡ ಮತ್ತು ಪುಟ್ಟಮ್ಮ ದಂಪತಿಯ ಕೊನೆಯ ಪುತ್ರರಾಗಿದ್ದಾರೆ. ಯೋಧ ಪತ್ನಿ ಪೂರ್ಣಿಮಾ, ಮಕ್ಕಳಾದ ಋತ್ವಿಕ್, ಸಹನ್‍ರನ್ನು ಅಗಲಿದ್ದಾರೆ. ದೇಶಕ್ಕಾಗಿ ಮಡಿದ ಯೋಧನ ಸ್ವಗ್ರಾಮದಲ್ಲಿ ದುಃಖ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಸಂಜೆ ಅಥವಾ ಮಂಗಳವಾರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವುದಾಗಿ ಮೂಲಗಳು ತಿಳಿಸಿವೆ.

  • ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಸುನೀಲ್ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ಯೋಧ ಸುನೀಲ್ ಅಂತ್ಯಕ್ರಿಯೆ

    ಚಿಕ್ಕೋಡಿ: ಹೊಟ್ಟೆನೋವು ತಾಳಲಾರದೆ ಮೃತಪಟ್ಟಿದ್ದ ಕರ್ತವ್ಯ ನಿರತ ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆಯುತು.

    ವೀರಯೋಧ ಸುನೀಲ್ ಖೀಲಾರಿ (35) ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸದ್ಯ ಅಸ್ಸಾಂ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ವೇಳೆ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡಿತ್ತು. ನಂತರ ಅವರನ್ನು ಗುಹವಾಟಿಯ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.

    ಮೃತ ಯೋಧನ ಪಾರ್ಥಿವ ಶರೀರ ಇಂದು ಮಂಗಸೂಳಿ ಗ್ರಾಮಕ್ಕೆ ಆಗಮಿಸಿತ್ತು. ಸುನೀಲ್ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲಾಯಿತು.

  • ಬೀದರ್‌ನಲ್ಲಿ ಇಂದು ಯೋಧ, ಪೊಲೀಸ್ ಸೇರಿ 32 ಜನರಿಗೆ ಕೊರೊನಾ

    ಬೀದರ್‌ನಲ್ಲಿ ಇಂದು ಯೋಧ, ಪೊಲೀಸ್ ಸೇರಿ 32 ಜನರಿಗೆ ಕೊರೊನಾ

    – 647ಕ್ಕೆ ತಲುಪಿದ ಸೋಂಕಿತರ ಸಂಖ್ಯೆ

    ಬೀದರ್: ಜಿಲ್ಲೆಯಲ್ಲಿ ಇಂದು ಯೋಧ, ಮೂವರು ಪೊಲೀಸರು ಸೇರಿದಂತೆ 32 ಜನರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ.

    ಆರೋಗ್ಯ ಸಮಸ್ಯೆಯಿಂದ ದೆಹಲಿಯಿಂದ ಬಸವಕಲ್ಯಾಣಕ್ಕೆ ಬಂದಿದ್ದ 35 ವರ್ಷದ ಯೋಧನಿಗೆ ಸೋಂಕು ವಕ್ಕರಿಸಿದೆ. ಜೊತೆಗೆ ನೌಬಾದ್‍ನ ಮೀಸಲು ಪಡೆಯ ಮೂವರು ಪೊಲೀಸರಿಗೂ ಕೊರೊನಾ ಪಾಸಿಟಿವ್ ಬಂದಿದೆ.

    ಬೀದರ್, ಚಿಟ್ಟಗುಪ್ಪ, ಭಾಲ್ಕಿ, ಬಸವಕಲ್ಯಾಣ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 32 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಮುಂಬೈ, ತೆಲಂಗಾಣ ಕಂಟಕ ಹಾಗೂ ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ಸೋಂಕು ಧೃಡವಾಗಿದೆ.

    ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 647ಕ್ಕೆ ಏರಿಕೆಯಾಗಿದ್ದು, 500 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 126 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ ಕೊರೊನಾಗೆ 21 ಜನ ಬಲಿಯಾಗಿದ್ದಾರೆ. ಬಸವಣ್ಣನ ಕರ್ಮಭೂಮಿಯಲ್ಲಿ ಚೀನಾ ಮಹಾಮಾರಿಯ ಆರ್ಭಟಕ್ಕೆ ಜಿಲ್ಲೆಯ ಜನ ಹೈರಾಣಾಗಿ ಹೋಗಿದ್ದಾರೆ.

  • 22 ವರ್ಷ ದೇಶ ಸೇವೆ, ಮುಂದಿನ ವರ್ಷ ನಿವೃತ್ತಿ- ಕನಸಿನ ಮನೆಗೆ ಬರೋ ಮುನ್ನ ಯೋಧ ಹುತಾತ್ಮ

    22 ವರ್ಷ ದೇಶ ಸೇವೆ, ಮುಂದಿನ ವರ್ಷ ನಿವೃತ್ತಿ- ಕನಸಿನ ಮನೆಗೆ ಬರೋ ಮುನ್ನ ಯೋಧ ಹುತಾತ್ಮ

    – ಕುಟುಂಬಕ್ಕಾಗಿ 18ನೇ ವಯಸ್ಸಿಗೆ ಸೇನೆ ಸೇರಿದ್ರು
    – ಜೂನ್ 3ರಂದು ಕನಸಿನ ಮನೆಯ ಗೃಹಪ್ರವೇಶ

    ಚೆನ್ನೈ: ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಅಟ್ಟಹಾಸಕ್ಕೆ ಹುತಾತ್ಮರಾದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಡುಕಲೂರು ಗ್ರಾಮದ 40 ವರ್ಷದ ಭಾರತೀಯ ಸೇನಾ ಸೈನಿಕ ಕೆ.ಪಳನಿ ಮುಂದಿನ ವರ್ಷ ಸೇನೆಯಿಂದ ನಿವೃತ್ತಿಯಾಗಬೇಕಿತ್ತು.

    ಕೆ.ಪಳನಿ ಅವರು 22 ವರ್ಷಗಳ ಕಾಲ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿದ್ದು, ಮುಂದಿನ ವರ್ಷ ಸೇನೆಯಿಂದ ನಿವೃತ್ತಿ ಹೊಂದಲು ಯೋಜಿಸಿದ್ದರು. ಆದರೆ ಸೋಮವಾರ ರಾತ್ರಿ ಲಡಾಖ್‍ನ ಇಂಡೋ-ಚೀನೀ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಲ್ಲಿ ಇವರು ಒಬ್ಬರಾಗಿದ್ದಾರೆ.

    ಯೋಧ ಪಳನಿ:
    ಕಡುಕಲೂರು ಗ್ರಾಮದಲ್ಲಿ ರೈತ ದಂಪತಿಯಾದ ಕಾಲಿಮುತ್ತು ಮತ್ತು ಲೋಗಂಬಲ್ ಅವರ ಹಿರಿಯ ಪುತ್ರರಾಗಿದ್ದರು. ಇವರು ಪತ್ನಿ ವನತಿ ದೇವಿ (35) ಮತ್ತು 10 ವರ್ಷದ ಮಗ ಮತ್ತು 8 ವರ್ಷದ ಮಗಳನ್ನು ಅಗಲಿದ್ದಾರೆ. ಪಳನಿ ಅವರು ಬಡಕುಟುಂಬದಿಂದ ಬಂದವರಾಗಿದ್ದು, 12ನೇ ತರಗತಿವರೆಗೂ ಹಳ್ಳಿಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ನಂತರ ಪಳನಿ ತಮ್ಮ ಶಾಲಾ ದಿನಗಳಲ್ಲಿ ಕ್ರೀಡಾಪಟುವಾಗಿದ್ದು, 18 ವಯಸ್ಸಿನಲ್ಲೇ ಸಶಸ್ತ್ರ ಪಡೆಗೆ ಸೇರಲು ನಿರ್ಧರಿಸಿದ್ದರು.

    ಪಳನಿ ತನ್ನ ಬಡತನ ಕುಟುಂಬವನ್ನು ಉನ್ನತ ಮಟ್ಟಗೇರಿಸಲು ಸೇನೆಗೆ ಸೇರಲು ತೀರ್ಮಾನಿಸಿದ್ದರು. ಅದರಂತೆಯೇ 18ನೇ ವಯಸ್ಸಿನಲ್ಲಿ ಸೇನೆಗೆ ಸೇರಿದರು. ಪಳನಿ ತಮ್ಮ ಸಹೋದರ ಮತ್ತು ತಂಗಿಗೆ ತಂದೆಯಾಗಿ ಅವರನ್ನು ನೋಡಿಕೊಳ್ಳುತ್ತಿದ್ದರು. ಪಳನಿ ಸಹೋದರನಿಗೆ ಶಿಕ್ಷಣ ಕೊಡಿಸಲು ಮತ್ತು ಸಹೋದರಿಯನ್ನು ಮದುವೆ ಮಾಡಲು ತುಂಬಾ ಕಷ್ಟಪಟ್ಟಿದ್ದಾರೆ. ಅವರ ಸಹೋದರ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ರಾಜಸ್ಥಾನದಲ್ಲಿ ಸೇವೆ ಮಾಡುತ್ತಿದ್ದಾರೆ ಎಂದು ಸಂಬಂಧಿಯೊಬ್ಬರು ಹೇಳಿದರು.

    ದೇಶ ಸೇವೆ ಮಾಡುವ ಬಗ್ಗೆ ಪಳನಿ ತುಂಬಾ ಹೆಮ್ಮೆ ಪಡುತ್ತಿದ್ದರು. ಅವರ ಮಕ್ಕಳು ದೊಡ್ಡವರಾದ ಮೇಲೆ ಸೇನೆಗೆ ಸೇರುವಂತೆ ಮಾಡುವ ಬಗ್ಗೆ ಕನಸು ಕಂಡಿದ್ದರು. ಪಳನಿ ಅವರು ಪಿಯುಸಿ ಮುಗಿಯುತ್ತಿದ್ದಂತೆ ಸೇನೆಗೆ ಸೇರಿದ್ದರು. ಹೀಗಾಗಿ ದೂರ ಶಿಕ್ಷಣದ ಮೂಲಕ ಇತಿಹಾಸದಲ್ಲಿ ಬಿಎ ಪೂರ್ಣಗೊಳಿಸಿದರು. ಮದುವೆಯ ನಂತರ ಅವರ ಪತ್ನಿಗೆ ಬಿ.ಎಡ್ ಕೋರ್ಸ್ ಪೂರ್ಣಗೊಳಿಸಲು ಪ್ರೋತ್ಸಾಹ ನೀಡಿದರು ಎಂದು ಕುಟುಂಬದವರು ತಿಳಿಸಿದ್ದಾರೆ.

    ಪಳನಿ ರಜಾದಿನದಲ್ಲಿ ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದರು. ಅವರೇ ಅಡುಗೆ ಮಾಡಿಕೊಡುತ್ತಿದ್ದರು. ಮಕ್ಕಳೊಂದಿಗೆ ಆಟವಾಡುವ ಮೂಲಕ ತುಂಬಾ ಆನಂದದಿಂದ ಇರುತ್ತಿದ್ದರು. ಭಾರತದ ಗಡಿಯಲ್ಲಿ 22 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಜೂನ್ 3 ರಂದು ಅವರ ಕನಸಿನ ಮನೆಗೆ ಗೃಹ ಪ್ರವೇಶ ಕೂಡ ಮಾಡಿದ್ದರು.

     

    ಪಳನಿ ಜನವರಿ ಬಳಿಕ ಕುಟುಂಬದ ಜೊತೆ ಇರಲು ಬರಲಿದ್ದರು. ಆದರೆ ಹೋರಾಟಗಳಿಂದ ತುಂಬಿದ ಜೀವನವನ್ನು ನಡೆಸಿ, ಸ್ವಂತ ಮನೆಯನ್ನು ನಿರ್ಮಿಸಿಕೊಂಡಿದ್ದರು. ಇನ್ನೂ ಮುಂದೆ ಪಳನಿ ಅವರಿಗೆ ಒಳ್ಳೆಯದಾಗುತ್ತದೆ ಎಂದು ನಾವು ಭಾವಿಸಿದ್ದೇವು. ಮುಂದಿನ ವರ್ಷ ನಿವೃತ್ತಿಯಾಗುತ್ತಿದ್ದರು. ಆದರೆ ಅಷ್ಟರಲ್ಲಿಯೇ ಹುತಾತ್ಮರಾಗಿದ್ದಾರೆ. ಇದರಿಂದ ಕುಟುಂಬಕ್ಕೆ ಶಕ್ತಿ, ಆಧಾರಸ್ತಂಭವಾಗಿದ್ದ ಅವರನ್ನು ಕಳೆದುಕೊಂಡು ಕುಟುಂಬದವರು ದುಃಖ ಪಡುತ್ತಿದ್ದಾರೆ ಎಂದು ಗ್ರಾಮಸ್ಥರು ನೋವಿನಿಂದ ಹೇಳಿದ್ದಾರೆ.