Tag: Ward Councilor

  • ರೇಪ್ ಖಂಡಿಸಿ ಪ್ರತಿಭಟಿಸಿದ್ದಕ್ಕೆ ಮಹಿಳೆಯರ ತಲೆ ಬೋಳಿಸಿ ಮೆರವಣಿಗೆ

    ರೇಪ್ ಖಂಡಿಸಿ ಪ್ರತಿಭಟಿಸಿದ್ದಕ್ಕೆ ಮಹಿಳೆಯರ ತಲೆ ಬೋಳಿಸಿ ಮೆರವಣಿಗೆ

    ಪಾಟ್ನಾ: ವಾರ್ಡ್ ಕೌನ್ಸಿಲರ್ ಅತ್ಯಾಚಾರಕ್ಕೆ ಯತ್ನಿಸಿ, ದೈಹಿಕ ಹಲ್ಲೆ ಮಾಡಿದ್ದಾನೆ. ಇದನ್ನು ಖಂಡಿಸಿ ಪ್ರತಿಭಟಿಸಿದ್ದಕ್ಕೆ ಇಬ್ಬರು ಮಹಿಳೆಯರ ತಲೆ ಬೋಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಘಟನೆ ಬಿಹಾರದ ವೈಶಾಲಿ ಗ್ರಾಮದಲ್ಲಿ ನಡೆದಿದ್ದು, ವಾರ್ಡ್ ಕೌನ್ಸಿಲರ್ ಮೊಹಮ್ಮದ್ ಖುರ್ಷಿದ್ ಅತ್ಯಾಚಾರ ಎಸಗಿರುವುದನ್ನು ಖಂಡಿಸಿ, 48 ವರ್ಷದ ಮಹಿಳೆ ಹಾಗೂ ಹೊಸದಾಗಿ ಮದುವೆಯಾಗಿದ್ದ 19 ವರ್ಷದ ಮಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಮೊಹಮ್ಮದ್ ಹಾಗೂ ಆತನ ಸಹಚರರು ಇಬ್ಬರೂ ಮಹಿಳೆಯ ತಲೆ ಬೋಳಿಸಿ ಊರು ತುಂಬಾ ಮೆರವಣಿಗೆ ಮಾಡಿ ಅವಮಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಾರ್ಡ್ ಕೌನ್ಸಿಲರ್, ಕ್ಷೌರಿಕ ಹಾಗೂ ಇತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಗವಾನ್‍ಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸಂಜಯ್ ಕುಮಾರ್ ಅವರು ಘಟನೆ ಕುರಿತು ಖಚಿತ ಪಡಿಸಿದ್ದು, ತನಿಖೆ ಕೈಗೊಳ್ಳಲಾಗಿದೆ. ಆರು ಜನ ಸಂತ್ರಸ್ತರ ಮನೆಗೆ ನುಗ್ಗಿ ಮಗಳನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ. ಈ ವೇಳೆ ತಾಯಿ ಮಗಳನ್ನು ರಕ್ಷಿಸಲು ಯತ್ನಿಸಿದ್ದು, ಆರೋಪಿಗಳು ತಾಯಿ, ಮಗಳು ಇಬ್ಬರ ಮೇಲೂ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

    ಆರೋಪಿಗಳಲ್ಲಿ ಒಬ್ಬ ಕೋಲಿನಿಂದ ಇಬ್ಬರು ಮಹಿಳೆಯರಿಗೆ ಹೊಡೆದು, ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು ಪಂಚಾಯಿತಿಗೆ ಕರೆ ತಂದಿದ್ದಾನೆ. ನಂತರ ವಾರ್ಡ್ ಕೌನ್ಸಿಲರ್ ಖುರ್ಷಿದ್ ಕ್ಷೌರಿಕನನ್ನು ಕರೆದು ಮಹಿಳೆಯರ ತಲೆ ಬೋಳಿಸಿ, ಹಳ್ಳಿಯ ತುಂಬ ಮೆರವಣಿಗೆ ಮಾಡಿಸುವಂತೆ ಆದೇಶಿಸಿದ್ದು, ಮಹಿಳೆಯರನ್ನು ಹಳ್ಳಿ ಪೂರ್ತಿ ಮೆರವಣಿಗೆ ಮಾಡಿಸಲಾಗಿದೆ. ಸಂಜೆ 6.30ರ ವೇಳೆಗೆ ಸುಮಾರು ಆರು ಜನ ಶಸ್ತ್ರ ಸಜ್ಜಿತರು ನಮ್ಮ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದರು. ನನ್ನ ತಾಯಿ ನನ್ನ ಕಾಪಾಡಲು ಯತ್ನಿಸಿದಾಗ ಇಬ್ಬರನ್ನೂ ಹೊಡೆಯಲು ಪ್ರಾರಂಭಿಸಿದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

    ಇವರಿಬ್ಬರು ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಖುರ್ಷಿದ್ ಆರೋಪಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸೆಕ್ಷನ್ 376(ಅತ್ಯಾಚಾರ), 511(ಅತ್ಯಾಚಾರಕ್ಕೆ ಯತ್ನ) ಅಡಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.