Tag: Waqf Amendment Act

  • ʻವಕ್ಫ್ ತಿದ್ದುಪಡಿ ಕಾಯ್ದೆʼಯ ಕೆಲ ಅಂಶಗಳಿಗೆ ಸುಪ್ರೀಂ ತಡೆ; ಒಟ್ಟಾರೆ ಕಾಯ್ದೆ ಕಾನೂನು ಬದ್ಧವಾಗಿದೆ ಎಂದು ಆದೇಶ

    ʻವಕ್ಫ್ ತಿದ್ದುಪಡಿ ಕಾಯ್ದೆʼಯ ಕೆಲ ಅಂಶಗಳಿಗೆ ಸುಪ್ರೀಂ ತಡೆ; ಒಟ್ಟಾರೆ ಕಾಯ್ದೆ ಕಾನೂನು ಬದ್ಧವಾಗಿದೆ ಎಂದು ಆದೇಶ

    – ವಕ್ಫ್​ ಸದಸ್ಯರಾಗಲು 5 ವರ್ಷ ಇಸ್ಲಾಂ ಧರ್ಮ ಪಾಲಿಸಿರಬೇಕೆಂಬ ಷರತ್ತಿಗೆ ತಡೆ
    – ವಕ್ಫ್‌ ಮಂಡಳಿಯಲ್ಲಿ ಮುಸ್ಲಿಂ ಸಮುದಾಯದವರೇ ಬಹುಸಂಖ್ಯಾತರಿರಬೇಕು

    ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಕೆಲವೊಂದು ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ (Supreme Court) ಇಂದು ತಡೆ ನೀಡಿದೆ. ಕೆಲ ಅಂಶಗಳ ಬದಲಾವಣೆಗೆ ಸೂಚಿಸಿರುವ ಕೋರ್ಟ್‌, ಸಂಪೂರ್ಣವಾಗಿ ಕಾಯ್ದೆಗೆ ತಡೆ ನೀಡಲು ಸಾರಾಸಗಟಾಗಿ ನಿರಾಕರಿಸಿದೆ.

    ವಕ್ಫ್ ಕಾಯ್ದೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ಆ ಅರ್ಜಿಗಳಲ್ಲಿ, ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Amendment Act) ಕೇಂದ್ರ ಸರ್ಕಾರ ತೀವ್ರ ವಿರೋಧದ ನಡುವೆಯೂ ಜಾರಿಗೊಳಿಸಿದೆ. ಹಾಗಾಗಿ, ತಿದ್ದುಪಡಿ ಕಾಯ್ದೆಗೆ ತಡೆಯಾಜ್ಞೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಸಂಪೂರ್ಣ ಕಾಯ್ದೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ, ಕಾನೂನಿನ ಕೆಲವು ನಿಬಂಧನೆಗಳಿಗೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ ಮಸಿಹ್ ಇದ್ದ ಪೀಠವು ಮಧ್ಯಂತರ ಆದೇಶ ಹೊರಡಿಸಿದೆ.

    ವಕ್ಫ್‌ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸಾಲಿಸಿಟ‌ರ್ ಜನರಲ್‌ ತುಷಾರ್ ಮೆಹ್ತಾ ವಾದ ಮಂಡಿಸಿದ್ರೆ, ಮೂರು ವಿಚಾರಗಳಿಗೆ ಅರ್ಜಿದಾರರು ತಡೆಕೋರಿ ಸಲ್ಲಿಸಿದ್ದ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಇದನ್ನೂ ಓದಿ: ವಕ್ಫ್ ಫೈಟ್: ಏನಿದು ವಿವಾದ?- ಹೊಸ ತಿದ್ದುಪಡಿ ಮಸೂದೆಯಿಂದ ಆಗುವ ಬದಲಾವಣೆ ಏನು?

    ಯಾವುದೇ ಒಬ್ಬ ವ್ಯಕ್ತಿ ವಕ್ಫ್‌ ಮಂಡಳಿಯ (Waqf Board) ಸದಸ್ಯರಾಗಲು ಅಥವಾ ವಕ್ಫ್ ಮಂಡಳಿಗಳಿಗೆ ಭೂಮಿ ದಾನ ಕೊಡಲು ಕನಿಷ್ಠ 5 ವರ್ಷ‌ ಇಸ್ಲಾಂ ಧರ್ಮ ಅನುಸರಿಸಬೇಕೆಂಬ ಷರತ್ತು ವಿಧಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ. ಈ ಅಂಶದ ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ತಡೆ ನೀಡಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

    ಮಧ್ಯಂತರ ಆದೇಶದಲ್ಲಿ ಯಾವುದಕ್ಕೆ ತಡೆ!?

    ತಕರಾರು-1
    ಜಿಲ್ಲಾಧಿಕಾರಿಗೆ ಅಥವಾ ಸರ್ಕಾರ ನಿಯೋಜಿಸಿದ ಅಧಿಕಾರಿಗೆ ಆಸ್ತಿಯನ್ನು ವಕ್ಫ್ ಆಗಿ ಗುರುತಿಸುವ ಅಧಿಕಾರ ನೀಡುವ ನಿಬಂಧನೆ

    ಕೋರ್ಟ್ ಸಲಹೆ; ಕಾರ್ಯನಿರ್ವಾಹಕ ಅಧಿಕಾರಿಯು ವೈಯಕ್ತಿಕ ನಾಗರಿಕರ ಹಕ್ಕುಗಳನ್ನು ನಿರ್ಣಯಿಸಲು ಅನುಮತಿಸಲಾಗುವುದಿಲ್ಲ. ಇದು ಅಧಿಕಾರಗಳ ಪ್ರತ್ಯೇಕತೆ ಉಲ್ಲಂಘಿಸುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ವಕ್ಫ್ ಆಸ್ತಿಯು ಸರ್ಕಾರಿ ಆಸ್ತಿಯನ್ನು ಅತಿಕ್ರಮಣ ಮಾಡಿದೆಯೇ ಎಂಬ ವಿವಾದ ನಿರ್ಧರಿಸಲು ಸರ್ಕಾರದ ನಿಯೋಜಿತ ಅಧಿಕಾರಿಗೆ ಅವಕಾಶ ನೀಡುವ ನಿಬಂಧನೆ ತಡೆಹಿಡಿಯಲಾಗಿದೆ. ನ್ಯಾಯಾಧೀಕರಣ ಒಂದು ವಿಷಯದ ಬಗ್ಗೆ ಅಂತಿಮ ತೀರ್ಪು ಅಥವಾ ನಿರ್ಧಾರ ನೀಡುವವರೆಗೆ, ಆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ 3ನೇ ವ್ಯಕ್ತಿ ಯಾವುದೇ ಹಕ್ಕುಗಳನ್ನು ಸ್ಥಾಪಿಸಲು ಅಥವಾ ದಾವೆ ಹೂಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ತಕರಾರು-2
    ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ, ಯಾವ ವ್ಯಕ್ತಿಯು ಕನಿಷ್ಟ 5 ವರ್ಷದಿಂದ ಇಸ್ಲಾಂ ಧರ್ಮ ಪಾಲಿಸುತ್ತಿದ್ದಾನೋ ಆ ವ್ಯಕ್ತಿ ಮಾತ್ರ ವಕ್ಫ್ ಮಂಡಳಿಗಳಿಗೆ ಭೂಮಿ ದಾನ ಕೊಡಲು ಅರ್ಹ ಎಂಬ ಷರತ್ತು

    ಕೋರ್ಟ್ ಸಲಹೆ: ಈ ಷರತ್ತಿಗೆ ಸದ್ಯಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಒಪ್ಪಿದೆ. ಈ ಷರತ್ತು ಬಗ್ಗೆ ರಾಜ್ಯ ಸರ್ಕಾರಗಳು ಹೊಸ ನಿಯಮಗಳನ್ನು ರೂಪಿಸುವವರೆಗೂ ತಡೆ ನೀಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

    ತಕರಾರು-3
    ವಕ್ಫ್ ಮಂಡಳಿಗಳಿಗೆ ಮುಸ್ಲಿಮೇತರ ಸದಸ್ಯರ ನಾಮನಿರ್ದೇಶನಕ್ಕೆ ಅವಕಾಶ ನೀಡುವ ನಿಬಂಧನೆಗೆ ತಕರಾರು

    ಕೋರ್ಟ್ ಸಲಹೆ: ಕೋರ್ಟ್ ಈ ನಿಬಂಧನೆಗೆ ತಡೆ ನೀಡಿಲ್ಲ. ಆದರೂ, ಸಾಧ್ಯವಾದಷ್ಟು ಮಟ್ಟಿಗೆ, ಮಂಡಳಿಯ ಪದನಿಮಿತ್ತ ಸದಸ್ಯರು ಮುಸ್ಲಿಂ ವ್ಯಕ್ತಿಯಾಗಿರಬೇಕು ಎಂದು ಕೋರ್ಟ್ ಹೇಳಿದೆ. ಕೇಂದ್ರ ವಕ್ಫ್ ಮಂಡಳಿಯಲ್ಲಿ 4 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರು ಇರಬಾರದು, ರಾಜ್ಯ ವಕ್ಫ್ ಮಂಡಳಿ 3 ಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಒಳಗೊಂಡಿರಬಾರದು. ಸಾಧ್ಯವಾದಷ್ಟು ಮಟ್ಟಿಗೆ ಮಂಡಳಿಯ ಸಿಇಒ ಮುಸ್ಲಿಮರಾಗಿರಬೇಕು ಎಂದು ಅಭಿಪ್ರಾಯಪಟ್ಟಿದೆಯಲ್ಲದೇ ವಕ್ಫ್ ಕಾಯ್ದೆಯ ಸಿಂಧುತ್ವದ ಬಗ್ಗೆ ತನ್ನ ಆದೇಶವು ಅಂತಿಮ ಅಭಿಪ್ರಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ತಕರಾರು-4
    ಎಲ್ಲ ವಕ್ಫ್ ಆಸ್ತಿಗಳನ್ನು ಕಾಯ್ದೆಯಡಿ ನೋಂದಣಿ ಕಡ್ಡಾಯ ನಿಬಂಧನೆ

    ಕೋರ್ಟ್ ಸಲಹೆ: ಈ ನಿಬಂಧನೆಯಲ್ಲಿ ಕೋರ್ಟ್ ಹಸ್ತಕ್ಷೇಪ ಮಾಡಿಲ್ಲ. ಇದು ಹೊಸ ನಿಯಮ ಅಲ್ಲ ಎಂದು ಕೋರ್ಟ್ ಹೇಳಿದೆ. ಏಕೆಂದರೆ, ಈ ಷರತ್ತು 1995 ಮತ್ತು 2013ರ ಹಿಂದಿನ ಕಾಯ್ದೆಗಳಲ್ಲಿಯೂ ಇತ್ತು. ಆದರೂ, ಕೋರ್ಟ್ ನೋಂದಣಿಗೆ ಸಮಯ ಮಿತಿಯನ್ನು ವಿಸ್ತರಿಸಿದೆ.

    ಅರ್ಜಿದಾರರು ಯಾರು?
    ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ದೆಹಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್, ನಾಗರಿಕ ಹಕ್ಕುಗಳ ರಕ್ಷಣಾ ಸಂಘ, ಜಮಾತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಅರ್ಷದ್ ಮದನಿ, ಸಮಸ್ತ ಕೇರಳ ಜಮಿಯತ್ ಉಲೇಮಾ, ಅಂಜುಮ್ ಕದರಿ, ತೈಯಬ್ ಖಾನ್ ಸಲ್ಮಾನಿ, ಮೊಹಮ್ಮದ್ ಶಫಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ, ಎಸ್‌ಪಿ ಸಂಸದ ಜಿಯಾ ಉರ್ ರೆಹಮಾನ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಡಿಎಂಕೆ ಇತರರು.

    ಕಾಯ್ದೆ ಬೆಂಬಲಿಸಿ ಸುಪ್ರೀಂಕೋರ್ಟ್‌ಗೆ ಹೋದವರು ಯಾರು?
    ಬಿಜೆಪಿ ಸರ್ಕಾರಗಳಿರುವ ಅಸ್ಸಾಂ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರಾಖಂಡ, ಹರಿಯಾಣ ಮತ್ತು ಮಹಾರಾಷ್ಟ್ರ ಸರ್ಕಾರಗಳು. ಕೇರಳ ರಾಜ್ಯ ಸರ್ಕಾರ ಕೂಡ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಿತ್ತು.

  • ಪ. ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ – ಕೇಂದ್ರಕ್ಕೆ ನಟ ಮಿಥುನ್ ಚಕ್ರವರ್ತಿ ಆಗ್ರಹ

    ಪ. ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ – ಕೇಂದ್ರಕ್ಕೆ ನಟ ಮಿಥುನ್ ಚಕ್ರವರ್ತಿ ಆಗ್ರಹ

    ಕೋಲ್ಕತ್ತಾ: ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ತೀರಾ ಹದಗೆಟ್ಟಿದ್ದು, ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ನಟ ಹಾಗೂ ಬಿಜೆಪಿ ನಾಯಕ ಮಿಥುನ್‌ ಚಕ್ರವರ್ತಿ (Mithun Chakraborty) ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    ವಕ್ಫ್ ತಿದ್ದುಪಡಿ ಕಾಯ್ದೆ (Waqf (Amendment) Act) ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದ ಒಂದು ವಾರದ ಬಳಿಕ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಭಾರತೀಯ ಪ್ರವಾಸಿಗರ ಕೊಂಡೊಯ್ಯುತ್ತಿದ್ದ ಬಸ್ ಅಪಘಾತ – 25 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ನಾನು ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿದ್ದೇನೆ, ಈಗಲೂ ಗೃಹಸಚಿವರಿಗೆ ಮನವಿ ಮಾಡುತ್ತಿದ್ದೇನೆ. ಕನಿಷ್ಠ ಪಕ್ಷ ಚುನಾವಣೆ ಸಂದರ್ಭದಲ್ಲಿ 2 ತಿಂಗಳ ಕಾಲ ಮಿಲಿಟರಿಯನ್ನಾದರೂ ನಿಯೋಜಿಸಿ, ಆಗ ನ್ಯಾಯಯುತ ಚುನಾವಣೆ ನಡೆಯುತ್ತದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಟೆಂಟ್‌ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್​ನಲ್ಲಿ ಅಗ್ನಿ ದುರಂತ

    ಇದೇ ಏಪ್ರಿಲ್‌ 8 ರಿಂದ 12ರ ವರೆಗೆ ಮುಸ್ಲಿಂ-ಬಹುಸಂಖ್ಯಾತ ಪಟ್ಟಣಗಳಾದ ಶಂಶರ್‌ಗಂಜ್, ಸುತಿ, ಧುಲಿಯನ್ ಮತ್ತು ಜಂಗೀಪುರದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಹಸ್ರಾರು ಸಂಖ್ಯೆಯ ಮುಸ್ಲಿಮರು ಪ್ರತಿಭಟನೆಗಿಳಿದಿದ್ದರು. ಪ್ರತಿಭಟನೆ ಹಿಂಸಾಚಾರಾಕ್ಕೆ ತಿರುಗಿದ ಬಳಿಕ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದರು, ಅಲ್ಲದೇ ಹಿಂಸಾಚಾರದಿಂದಾಗಿ ಜೀವ ಹಾಗೂ ಮಾನ ಭಯದಿಂದ ನೂರಾರು ಹಿಂದೂ ಕುಟುಂಬಗಳು ಮನೆಗಳನ್ನು ತೊರೆದು ಹೋಗಿದ್ದವು, ಪರಿಸ್ಥಿತಿ ಕೊಂಚ ತಣ್ಣಗಾಗುತ್ತಿದ್ದಂತೆ ಕೆಲ ಕುಟುಂಬಗಳು ತಮ್ಮ ಸ್ಥಾನಕ್ಕೆ ಮರಳಿದ್ದವು. ಈ ಬೆನ್ನಲ್ಲೇ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಆಗ್ರಹ ಕೇಳಿಬಂದಿದೆ.

    ಹಿಂಸಾಚಾರ ಪೀಡಿತ ಪ್ರದೇಶಕ್ಕೆ ರಾಜ್ಯಪಾಲರ ಭೇಟಿ:
    ಹಿಂಸಾಚಾರ ಪ್ರತಿಭಟನೆ ತೀವ್ರಸ್ವರೂಪ ಪಡೆಯುತ್ತಿದ್ದಂತೆ ಪಶ್ಚಿಮ ಬಂಗಾಳ ರಾಜ್ಯಪಾಲರು ಮುರ್ಷಿದಾಬಾದ್‌ನ ಶಂಶೇರ್‌ಗಂಜ್, ಧುಲಿಯನ್, ಸುತಿ ಮತ್ತು ಜಂಗೀಪುರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಜೊತೆಗೆ ಮಾಲ್ಡಾದ ಶಾಲೆಯೊಂದರ ಪರಿಹಾರ ಶಿಬಿರಕ್ಕೆ ಸ್ಥಳಾಂತರಗೊಂಡಿದ್ದ ಕುಟುಂಬಗಳನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಮಹಿಳೆಯರು ತಮ್ಮ ಮೇಲೆ ದೈಹಿಕ ಹಲ್ಲೆ, ದೌರ್ನಜ್ಯ ನಡೆಸಿರುವುದಾಗಿ ಹೇಳಿಕೊಂಡಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಈ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ವಿಜಯಾ ರಹತ್ಕರ್ ನೇತೃತ್ವದ ತಂಡವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಸಂತ್ರಸ್ತ ಮಹಿಯರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದೆ. ಇದನ್ನೂ ಓದಿ: ಮೇ 1 ರಿಂದ ಜಿಪಿಎಸ್ ಆಧಾರಿತ ಟೋಲ್ ಇಲ್ಲ – ಹೆದ್ದಾರಿ ಸಚಿವಾಲಯ ಸ್ಪಷ್ಟನೆ

  • ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿಂದು ಬೃಹತ್‌ ಪ್ರತಿಭಟನೆ – ಉಲೇಮಾ ಸಮಿತಿ ಕರೆ

    ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿಂದು ಬೃಹತ್‌ ಪ್ರತಿಭಟನೆ – ಉಲೇಮಾ ಸಮಿತಿ ಕರೆ

    – 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

    ಮಂಗಳೂರು: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ (Waqf Amendment Act) ವಿರುದ್ಧ ಮಂಗಳೂರಿನಲ್ಲಿ (Mangaluru) ಇಂದು ಭಾರೀ ಪ್ರತಿಭಟನೆ ನಡೆಯಲಿದೆ.

    ಕರ್ನಾಟಕದಲ್ಲೇ ಅತೀ ದೊಡ್ಡ ಪ್ರತಿಭಟನೆಗೆ ಉಲೇಮಾ ಸಮನ್ವಯ ಸಮಿತಿ (Ulema Coordination Committee) ಕರೆ ನೀಡಿದೆ. ನಗರದ ಅಡ್ಯಾರ್ ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ಸಂಜೆ 4 ಗಂಟೆಗೆ ಪ್ರತಿಭಟನಾ ಸಭೆ ಆರಂಭಗೊಳ್ಳಲಿದೆ. ಇದನ್ನೂ ಓದಿ: ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ – ಮೋದಿಯನ್ನು ಭೇಟಿಯಾಗಿ ಧನ್ಯವಾದ ಹೇಳಿದ ಮುಸ್ಲಿಮರು

    ಈ ಸಭೆಯಲ್ಲಿ ಇಸ್ಲಾಂ ಧರ್ಮದ ಧರ್ಮಗುರುಗಳು, ಧಾರ್ಮಿಕ ಮುಖಂಡರುಗಳು, ಉಲೇಮಾಗಳು ಭಾಗವಹಿಸಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಎಲ್ಲಾ ಮುಸ್ಮಿಮರನ್ನು ಕಡ್ಡಾಯ ಭಾಗಿಯಾಗಲು ಎಲ್ಲಾ ಮಸೀದಿ ಜಮಾತ್‌ನಲ್ಲೂ ಕರೆ ನೀಡಲಾಗಿದೆ. ಇದನ್ನೂ ಓದಿ: Mangaluru| ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ ಪತ್ತೆ – ಗ್ಯಾಂಗ್ ರೇಪ್ ಯತ್ನ ಶಂಕೆ, ಮೂವರು ಅರೆಸ್ಟ್

    ಒಂದು ಲಕ್ಷಕ್ಕೂ ಅಧಿಕ ಜನ ಸೇರೋ ನಿರೀಕ್ಷೆ ಇದೆ. ಪ್ರತಿಭಟನಾ ಸಭೆ ಹಿನ್ನಲೆಯಲ್ಲಿ ಖಾಕಿ ಸರ್ಪಗಾವಲು ಹಾಕಿದ್ದು ಎರಡು ಸಾವಿರಕ್ಕೂ ಅಧಿಕ ಪೊಲೀಸರು, ಅರೆಸೇನಾ ಪಡೆಯಿಂದ ಭದ್ರತೆ ಕಲ್ಪಿಸಲಾಗಿದೆ.  ಇದನ್ನೂ ಓದಿ: ಜಾತಿಗಣತಿ ವಿಶೇಷ ಕ್ಯಾಬಿನೆಟ್‌- ಲಿಂಗಾಯತ, ಒಕ್ಕಲಿಗ, ದಲಿತ, ಅಲ್ಪಸಂಖ್ಯಾತರು ಹೇಳಿದ್ದೇನು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

  • ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ – ಮೋದಿಯನ್ನು ಭೇಟಿಯಾಗಿ ಧನ್ಯವಾದ ಹೇಳಿದ ಮುಸ್ಲಿಮರು

    ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ – ಮೋದಿಯನ್ನು ಭೇಟಿಯಾಗಿ ಧನ್ಯವಾದ ಹೇಳಿದ ಮುಸ್ಲಿಮರು

    ನವದೆಹಲಿ: ದಾವೂದಿ ಬೊಹ್ರಾ ಸಮುದಾಯದ (Dawoodi Bohra community) ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಭೇಟಿ ಮಾಡಿ, ವಕ್ಫ್ ತಿದ್ದುಪಡಿ ಕಾಯ್ದೆ (Waqf Amendment Act) ಜಾರಿ ಮಾಡಿದ್ದಾಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

    ಇದು ನಮ್ಮ ಸಮುದಾಯದ ಬಹುಕಾಲದ ಬೇಡಿಕೆಯಾಗಿತ್ತು. ಪ್ರಧಾನ ಮೋದಿಯವರ `ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್’ ಎಂಬ ದೃಷ್ಟಿಕೋನದಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಜಡ್ಜ್ ಮನೆಯಲ್ಲಿ ಪತ್ತೆಯಾದ ಕಂತೆ ಕಂತೆ ಹಣದ ಬಗ್ಗೆ ಎಫ್‌ಐಆರ್ ಆಗಿಲ್ಲ ಯಾಕೆ: ಧನಕರ್ ಪ್ರಶ್ನೆ

    ದಾವೂದಿ ಬೊಹ್ರಾಗಳು ಪ್ರಾಥಮಿಕವಾಗಿ ಪಶ್ಚಿಮ ಭಾರತದ ಮುಸ್ಲಿಂ ಸಮುದಾಯವಾಗಿದ್ದು, ಈ ಸಮುದಾಯದ ಜನರು ಪ್ರಪಂಚದಾದ್ಯಂತ 40ಕ್ಕೂ ಹೆಚ್ಚು ದೇಶಗಳಲ್ಲಿ ನೆಲೆಸಿದ್ದಾರೆ. ಇದು ಈಜಿಪ್ಟ್‌ನಲ್ಲಿರುವ ಪ್ರವಾದಿ ಮುಹಮ್ಮದ್ ಅವರ ನೇರ ವಂಶಸ್ಥರಾದ ಫಾತಿಮಿಡ್ ಇಮಾಮ್‌ಗಳ ಪರಂಪರೆಯನ್ನು ಗುರುತಿಸುತ್ತದೆ. ಪ್ರಪಂಚದಾದ್ಯಂತದ ಇರುವ ಈ ಸಮುದಾಯದವರು ಅವರ ನಾಯಕ ಅಲ್-ದೈ ಅಲ್-ಮುತ್ಲಕ್‌ನಿಂದ ಮಾರ್ಗದರ್ಶನ ಪಡೆಯುತ್ತಿದ್ದಾರೆ.

  • ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

    ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

    ಮಡಿಕೇರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Amendment Act) ವಿರೋಧಿಸಿ ಇಂದು ಮಡಿಕೇರಿ (Madikeri) ನಗರದಲ್ಲಿ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.

    ಮಡಿಕೇರಿ ನಗರದ ಕಾರ್ಯಪ್ಪ ಸರ್ಕಲ್ ಬಳಿಯಿಂದ ಗಾಂಧಿಮೈದಾನದವರೆಗೆ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೋರ ಹಾಕಿದರು. ಇನ್ನೂ ಇದೇ ಸಂದರ್ಭದಲ್ಲಿ ಮಾತಾನಾಡಿದ ಸಮಿತಿಯ ಉಪಾಧ್ಯಕ್ಷ ಕೆ.ಎ.ಯಾಕೂಬ್, ಮುಸ್ಲಿಮರ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಒಗ್ಗಟ್ಟಿನ ಹೋರಾಟ ನಡೆಸುವುದಕ್ಕಾಗಿ ಇಬ್ಬರು ಖಾಝಿಗಳ ನೇತೃತ್ವದಲ್ಲಿ ಜಿಲ್ಲಾ ಸುನ್ನಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗಿದೆ. ನಮಗೆ ಕೇಂದ್ರ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುರ್ಷಿದಾಬಾದ್ ಹಿಂಸಾಚಾರ| ಬಿಜೆಪಿ, ಬಿಎಸ್‌ಎಫ್ ಕೈವಾಡವಿದೆ: ಮಮತಾ ಬ್ಯಾನರ್ಜಿ

    ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಮಾತಾನಾಡಿ, ಬಿಜೆಪಿ ಅವರು ಅಧಿಕಾರದ ದಾಹಕ್ಕಾಗಿ ವಕ್ಫ್ ಬಿಲ್ ಕಾಯ್ದೆ ತಂದಿದ್ದಾರೆ. ವಕ್ಫ್ ಪ್ರಾಪರ್ಟಿಗಳು ಸಂಪೂರ್ಣವಾಗಿ ಸರ್ಕಾರದ ಸುಭದ್ರೆತೆಗೆ ಬರಬೇಕು ಎಂದು ಮಾಡಿದ್ದಾರೆ. ಇಡೀ ದೇಶದಲ್ಲಿ 37 ಲಕ್ಷ ಎಕ್ರೆ ಜಾಗ ವಕ್ಫ್ ಜಾಗ ವಕ್ಫ್ ಆಸ್ತಿಗೆ ಸೇರಿದೆ. ಅದನ್ನು ಕಂಟ್ರೋಲ್ ಮಾಡಲು ಮುಂದಾಗಿದೆ. ಬಿಜೆಪಿಯವರು ಈ ಕಾಯ್ದೆ ತಂದಿರುವುದೇ ಒಡೆದು ಅಳುವ ನೀತಿಯನ್ನು ಸಾರುವುದಕ್ಕೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕ್ಯಾಬಿನೆಟ್ ಸಭೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಆಗೋ ಸಮಸ್ಯೆ ಬಗ್ಗೆ ಚರ್ಚೆ: ಎಂ.ಬಿ ಪಾಟೀಲ್

  • ಮುರ್ಷಿದಾಬಾದ್ ಹಿಂಸಾಚಾರದ ಹಿಂದೆ ಬಾಂಗ್ಲಾ ಮೂಲದ ದುಷ್ಕರ್ಮಿಗಳ ಕೈವಾಡ ಶಂಕೆ

    ಮುರ್ಷಿದಾಬಾದ್ ಹಿಂಸಾಚಾರದ ಹಿಂದೆ ಬಾಂಗ್ಲಾ ಮೂಲದ ದುಷ್ಕರ್ಮಿಗಳ ಕೈವಾಡ ಶಂಕೆ

    ಕೋಲ್ಕತ್ತಾ: ವಕ್ಫ್ ತಿದ್ದುಪಡಿ ಕಾಯ್ದೆ (Waqf Amendment Act) ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಈ ಬೆಳವಣಿಗೆ ಹಿಂದೆ ಬಾಂಗ್ಲಾದೇಶ (Bangladesh) ಮೂಲದ ದುಷ್ಕರ್ಮಿಗಳ ಕೈವಾಡ ಇರಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್ ನಾಯಕರಿಂದ ಬೆಂಬಲ ಹೊಂದಿರುವ ದುಷ್ಕರ್ಮಿಗಳು ಹಿಂಸಾಚಾರ ಆರಂಭಿಸಿದ್ದು, ನಂತರ ಅವರು ಪರಿಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

    ಸರಣಿ ಹಿಂಸಾಚಾರದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವಾಲಯ, ಪಶ್ಚಿಮ ಬಂಗಾಳದ (West Bengal) ಮುರ್ಷಿದಾಬಾದ್‌ನ (Murshidabad) 3 ಗಡಿ ಪ್ರದೇಶಗಳಿಗೆ ಹೆಚ್ಚುವರಿ ಅರೆಸೈನಿಕ ಪಡೆಗಳನ್ನು ನಿಯೋಜಿಸಿದೆ. ಈ ನಡುವೆ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲವಾದ ಬಗ್ಗೆ, ರೈಲ್ವೆ ಮೂಲಸೌಕರ್ಯದ ಮೇಲಿನ ದಾಳಿಯ ವರದಿ ಮತ್ತು ಅಶಾಂತಿಯ ಆರಂಭಿಕ ಹಂತದಲ್ಲಿ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಕೇಂದ್ರವು ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರಣೆಯನ್ನು ಕೇಳಿದೆ. ಇದನ್ನೂ ಓದಿ: ಗಲಭೆಕೋರರಿಗೆ ದಂಡವೇ ಒಳ್ಳೆ ಚಿಕಿತ್ಸೆ: ಬಂಗಾಳ ಹಿಂಸಾಚಾರಕ್ಕೆ ಯೋಗಿ ಆದಿತ್ಯನಾಥ್‌ ಕಿಡಿ

    ಕೋಲ್ಕತ್ತಾ ಹೈಕೋರ್ಟ್ (Calcutta Highcourt) ಕೂಡ ಪಶ್ಚಿಮ ಬಂಗಾಳ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ಟೀಕಿಸಿತು. ಈ ಹಿಂದೆ ಕೇಂದ್ರ ಪಡೆಗಳನ್ನು ನಿಯೋಜಿಸಿದ್ದರೇ ಹಿಂಸಾಚಾರವನ್ನು ತಡೆಯಬಹುದಿತ್ತು ಎಂದು ಹೇಳಿದೆ. ನಂತರ ನ್ಯಾಯಾಲಯವು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕೇಂದ್ರ ಪಡೆಗಳನ್ನು ನಿಯೋಜಿಸಲು ಖಚಿತಪಡಿಸಿಕೊಳ್ಳಲು ಆದೇಶಿಸಿದೆ. ಇದನ್ನೂ ಓದಿ: ಮಹಾರಾಷ್ಟ್ರದಿಂದ ಬಂದು ಜಡ್ಜ್ ಮನೆಯಲ್ಲಿ ಕಳ್ಳತನ – 8 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿಗಳು ಅರೆಸ್ಟ್

    ಈ ಹಿಂಸಾಚಾರದಲ್ಲಿ ತಂದೆ-ಮಗ ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಈ ಅಶಾಂತಿಯು ಹಲವಾರು ಹಿಂದೂ ಕುಟುಂಬಗಳನ್ನು ಸ್ಥಳಾಂತರಿಸುವಂತೆ ಮಾಡಿದೆ. ಅವರಲ್ಲಿ ಹಲವರು ಮಾಲ್ಡಾಗೆ ಪಲಾಯನ ಮಾಡಿದ್ದಾರೆ ಎಂದು ವರದಿಯಾಗಿದೆ. ಇದು ಗಡಿಯಲ್ಲಿ ಹೊಸ ಒಳನುಸುಳುವಿಕೆ ಮತ್ತು ಕೋಮು ಅಶಾಂತಿಯ ಭಯವನ್ನು ಹುಟ್ಟುಹಾಕಿದೆ. ಇದನ್ನೂ ಓದಿ: ವರದಿಯೇ ಹೊರಗೆ ಬಾರದೇ ಜಾತಿಗಣತಿ ವಿರೋಧ ಮಾಡೋದು ಸರಿಯಲ್ಲ: ಸಂತೋಷ್ ಲಾಡ್

    ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಅಧಿಕಾರಿಗಳು ಮುರ್ಷಿದಾಬಾದ್‌ನ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ಪೊಲೀಸ್ ದಾಳಿಗಳು ಮುಂದುವರೆದಿದ್ದು, ಇದುವರೆಗೆ ಹಲವಾರು ಸ್ಥಳಗಳಲ್ಲಿ 150ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು

    ಹೆಚ್ಚಿನ ಅಶಾಂತಿಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಪಡೆಗಳು ಸ್ಥಳದಲ್ಲಿವೆ. ಆದರೆ ಪ್ರತಿಭಟನೆಗಳ ಹಿಂದಿನ ಕುಂದು-ಕೊರತೆಗಳನ್ನು ಪರಿಹರಿಸಲು ಆಡಳಿತಾತ್ಮಕ ಮತ್ತು ರಾಜಕೀಯ ಪ್ರಯತ್ನಗಳು ಮುಂದುವರೆದಿವೆ.

  • ಧರ್ಮದ ಹೆಸರಿನಲ್ಲಿ ಅನ್ಯಾಯದ ವರ್ತನೆಯಲ್ಲಿ ತೊಡಗಬೇಡಿ: ಪ್ರತಿಭಟನಾಕಾರರಿಗೆ ಮಮತಾ ಬ್ಯಾನರ್ಜಿ ಮನವಿ

    ಧರ್ಮದ ಹೆಸರಿನಲ್ಲಿ ಅನ್ಯಾಯದ ವರ್ತನೆಯಲ್ಲಿ ತೊಡಗಬೇಡಿ: ಪ್ರತಿಭಟನಾಕಾರರಿಗೆ ಮಮತಾ ಬ್ಯಾನರ್ಜಿ ಮನವಿ

    – ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ.ಬಂಗಾಳದಲ್ಲಿ ಪ್ರತಿಭಟನೆ, ಹಿಂಸಾಚಾರ

    ಕೋಲ್ಕತ್ತಾ: ತಮ್ಮ ಸರ್ಕಾರವು ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು (Waqf Act) ರಾಜ್ಯದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹೇಳಿದ್ದಾರೆ. ಧರ್ಮದ ಹೆಸರಿನಲ್ಲಿ ಯಾವುದೇ ಅನ್ಯಾಯದ ವರ್ತನೆಯಲ್ಲಿ ತೊಡಗಬೇಡಿ ಎಂದು ಅವರು ಸಮುದಾಯಗಳಿಗೆ ಮನವಿ ಮಾಡಿದ್ದಾರೆ.

    ವಕ್ಫ್ ಕಾಯ್ದೆ ವಿರುದ್ಧ ಮುರ್ಷಿದಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರದ ಬಳಿಕ ಅವರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಎಲ್ಲಾ ಧರ್ಮದ ಜನರಿಗೆ ನನ್ನ ಪ್ರಾಮಾಣಿಕ ಮನವಿ. ದಯವಿಟ್ಟು ಶಾಂತವಾಗಿರಿ, ಸಂಯಮದಿಂದಿರಿ. ಧರ್ಮದ ಹೆಸರಿನಲ್ಲಿ ಯಾವುದೇ ಅನ್ಯಾಯದ ನಡವಳಿಕೆಯಲ್ಲಿ ತೊಡಗಬೇಡಿ. ಪ್ರತಿಯೊಬ್ಬ ಮಾನವ ಜೀವವೂ ಅಮೂಲ್ಯ. ರಾಜಕೀಯಕ್ಕಾಗಿ ಗಲಭೆಗಳನ್ನು ಪ್ರಚೋದಿಸಬೇಡಿ. ಗಲಭೆಗಳನ್ನು ಪ್ರಚೋದಿಸುವವರು ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಅವರು X ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳ| ಹಿಂಸಾಚಾರಕ್ಕೆ ತಿರುಗಿದ ವಕ್ಫ್‌ ಪ್ರತಿಭಟನೆ – ವಾಹನಗಳಿಗೆ ಬೆಂಕಿ, ರೈಲುಗಳ ಮೇಲೆ ಕಲ್ಲು

    ಅನೇಕರು ವಿರೋಧಿಸುವ ಕಾನೂನನ್ನು ನಾವು ಜಾರಿ ಮಾಡಿಲ್ಲ ಎನ್ನುವುದು ನೆನಪಿಡಬೇಕು. ಕಾನೂನನ್ನು ಕೇಂದ್ರ ಸರ್ಕಾರ ಮಾಡಿದೆ. ಆದ್ದರಿಂದ ನೀವು ಬಯಸುವ ಉತ್ತರವನ್ನು ಕೇಂದ್ರ ಸರ್ಕಾರದಿಂದ ಪಡೆಯಬೇಕು. ಈ ವಿಷಯದ ಬಗ್ಗೆ ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಾವು ಈ ಕಾನೂನನ್ನು ಬೆಂಬಲಿಸುವುದಿಲ್ಲ. ಈ ಕಾನೂನನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ. ಹೀಗಾಗಿ, ಗಲಭೆ ಯಾವುದಕ್ಕಾಗಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

    ಕೆಲವು ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಜನರು ನನ್ನ ಮನವೊಲಿಕೆಗೆ ಮಣಿಯಬಾರದು ಎಂದು ಒತ್ತಾಯಿಸುತ್ತಿದ್ದಾರೆ. ಗಲಭೆಯನ್ನು ಪ್ರಚೋದಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಮಮತಾ ಎಚ್ಚರಿಸಿದರು. ಇದನ್ನೂ ಓದಿ: Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

    ವಕ್ಫ್ ತಿದ್ದುಪಡಿ ಕಾನೂನಿನ ವಿರುದ್ಧ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣಗಳು ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದು, ಪೊಲೀಸ್ ವ್ಯಾನ್‌ಗಳು ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು, ರಸ್ತೆಗಳನ್ನು ನಿರ್ಬಂಧಿಸಲಾಯಿತು. ಘಟನೆಯಲ್ಲಿ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ವಾಹನ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

    ಶನಿವಾರ ಬೆಳಿಗ್ಗೆಯಿಂದಲೇ ಮುರ್ಷಿದಾಬಾದ್‌ನ ಜಂಗಿಪುರ ಮತ್ತು ಸುಟಿ ಪ್ರದೇಶಗಳಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಘಟನಾ ಸ್ಥಳದಿಂದ ಬಂದ ದೃಶ್ಯಗಳಲ್ಲಿ ಹಲವಾರು ವಾಹನಗಳು ಸುಟ್ಟು ಹಾನಿಗೊಳಗಾಗಿರುವುದು ಕಂಡುಬಂದಿದೆ. ಪೊಲೀಸರ ಪ್ರಕಾರ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ 110 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಬಂಧಿಸಲಾಗಿದೆ. ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದ ಮಾಲ್ಡಾ, ಮುರ್ಷಿದಾಬಾದ್, ದಕ್ಷಿಣ 24 ಪರಗಣ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ. ಇದನ್ನೂ ಓದಿ: ಶಿರೋಮಣಿ ಅಕಾಲಿ ದಳ ಅಧ್ಯಕ್ಷರಾಗಿ ಸುಖಬೀರ್ ಸಿಂಗ್ ಬಾದಲ್ ಮರು ಆಯ್ಕೆ