Tag: waiver

  • ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

    ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

    – ನನಗೆ ಕೊಡೋ ಶಕ್ತಿಯನ್ನು ಧಾರೆಯೆರೆಯುತ್ತೇನೆ

    ಬಾಗಲಕೋಟೆ: ರೈತರ ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದಾರೆ.

    ನಗರದಲ್ಲಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಣೆ ವೇಳೆ ಮಾತನಾಡಿದ ಸಿಎಂ, ನನಗೆ ಇರುವುದು ಒಬ್ಬ ಮಗ. ಅವನ ಮೇಲೆ ಆಣೆ ಮಾಡ್ತೇನೆ. ನಾನು ರೈತರ ಸಾಲಮನ್ನಾ ಮಾಡ್ತೇನೆ. ನಾನು ಎಲ್ಲೂ ಹೋಗಲ್ಲ, ಸರ್ಕಾರ ಬೀಳಲ್ಲ, ನಿಮ್ಮ ಸಾಲಮನ್ನಾ ಮಾಡಿಯೇ ತೀರುತ್ತೇನೆ. ಸಾಲಮನ್ನಾ ವಿಚಾರದಲ್ಲಿ ನಿಮಗೆ ಮೋಸ ಮಾಡೋದಿಲ್ಲ ಅಂತ ಅಭಯ ಕೊಟ್ಟರು. ಅಲ್ಲದೇ ಸರ್ಕಾರ ನಡೆಸುವ ಶಕ್ತಿ ನೀವು ಕೊಟ್ಟಿದ್ದೀರಿ. ಫೆಬ್ರವರಿಯಲ್ಲಿ ಬಜೆಟ್ ಮಂಡಣೆ ಮಾಡಲಾಗುವುದು ಎಂದು ತಿಳಿಸಿದರು.

    ಮುಂದಿನ ವರ್ಷದಿಂದ ನಿಮ್ಮ ಬೆಳೆಗೆ ನಿಖರವಾದ ಬೆಲೆ ಸಿಗಬೇಕು. ಮಹಾರಾಷ್ಟ್ರ ಮಾದರಿ ಮಾಡಿ ಅಂತ ಕಬ್ಬು ಬೆಳೆಗಾರರು ಹೇಳ್ತಾರೆ. ನೀವೇ ಹೋಗಿ ನೋಡಿ ಮಹಾರಾಷ್ಟ್ರಕ್ಕೆ ಏನಾಗಿದೆ ಅಂತಾ ಗೊತ್ತಾಗುತ್ತೆ. ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಅವರು ಇನ್ನು ಮೇಲೆ ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಡಬೇಡಿ ಅಂತಾ ತಿಳಿಸಿದ್ರು. ನೀವು ನಮಗೆ ಶಕ್ತಿ ಕೊಡಿ. ಅದೇ ಶಕ್ತಿಯನ್ನು ವಾಪಸ್ ಧಾರೆ ಎರೆಯುತ್ತೇನೆ ಅಂತಾ ಸಿಎಂ ಭರವಸೆ ಕೊಟ್ಟರು.

    ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಾಗಲಕೋಟೆ-96, ಬದಾಮಿ-422, ಹುನಗುಂದ-274, ಜಮಖಂಡಿ-1198, ಮುಧೋಳ-450, ಬೀಳಗಿ-356 ಒಟ್ಟು 2796 ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

    ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

    ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನದಂದು ಸಮ್ಮಿಶ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ. ಸಾಲಮನ್ನಾಕ್ಕೆ ಕ್ಯಾಬಿನೆಟ್ ಸಮ್ಮತಿಸಿದೆ.

    ಶುಕ್ರವಾರ ಕ್ಯಾಬಿನೆಟ್ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಜೆಟ್‍ನಲ್ಲಿ ಘೋಷಿಸಿದಂತೆ ರಾಷ್ಟ್ರೀಕೃತ ಬ್ಯಾಂಕುಗಳ 2 ಲಕ್ಷ ರೂ.ವರೆಗಿನ ರೈತರ ಸಾಲ ಹಾಗೂ ಈಗಾಗಲೇ ಸಾಲ ಪಾವತಿ ಮಾಡಿರುವ ರೈತರಿಗೆ 25 ಸಾವಿರ ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಾಲಮನ್ನಾದ ಸಂಪೂರ್ಣ ಜವಾಬ್ದಾರಿ ನಿರ್ವಾಹಣೆಗೆ ಇಬ್ಬರು ಐಎಎಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

    ಸಾಲಮನ್ನಾದಿಂದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರ್ಕಾರವು ಒಟ್ಟು 30,163 ಕೋಟಿ ರೂ. ಪಾವತಿಸಬೇಕಾಗಿದೆ. ಆದರೆ ಒಂದೇ ಬಾರಿ ಸಾಲ ಮನ್ನಾಕ್ಕೆ ಬ್ಯಾಂಕುಗಳು ಒಪ್ಪುತ್ತಿಲ್ಲ. ಹೀಗಾಗಿ ಬಡ್ಡಿ ಸೇರಿಸಿ ಆಗುವ ಒಟ್ಟು ಮೊತ್ತವನ್ನು 4 ಕಂತುಗಳಲ್ಲಿ ಕಟ್ಟಲು ನಿರ್ಧರಿಸಲಾಗಿದೆ. ಇದರಿಂದಾಗಿ 2018-19ರಲ್ಲಿ 6,500 ಕೋಟಿ ರೂ., 2019-20ರಲ್ಲಿ 6,656 ಕೋಟಿ ರೂ., 2020-21ರಲ್ಲಿ 7,876 ಕೋಟಿ ರೂ. ಹಾಗೂ 2021-22ರಂದು 7,131 ಕೋಟಿ ರೂ, ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.

    ಈ ನಿರ್ಧಾರದಿಂದ ರಾಷ್ಟ್ರೀಕೃತ ಬ್ಯಾಂಕುಗಳ 16,94,000 ಸುಸ್ತಿ ಹಾಗೂ 6,27,000 ಚಾಲ್ತಿ ಸೇರಿ ಒಟ್ಟು 22 ಲಕ್ಷ ರೈತರಿಗೆ ಸಹಾಯವಾಗಲಿದೆ. ಬ್ಯಾಂಕುಗಳಿಗೆ ಹಣ ಪಾವತಿಸಲು ನಾಲ್ಕು ಕಂತುಗಳವರೆಗೆ ಸರ್ಕಾರ ಕಾಯುವುದಿಲ್ಲ. ಅದಕ್ಕೂ ಮುನ್ನವೇ ಪಾವತಿಸುವ ಸಾಮರ್ಥ್ಯವು ಸರ್ಕಾರಕ್ಕೆ ಇದೆ ಎಂದರು.

    ಋಣಮುಕ್ತ ಕಾಯ್ದೆ ಜಾರಿ
    ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು 1976ರಲ್ಲಿ ಋಣಮುಕ್ತ ಅಧಿನಿಯಮವನ್ನು ಜಾರಿಗೆ ತಂದಿದ್ದರು. ಈಗ ನಮ್ಮ ಸರ್ಕಾರವು ಈ ಕಾಯ್ದೆಯನ್ನು ಜಾರಿಗೆ ತರಲು ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದೆ. ಋಣಮುಕ್ತ ಕಾಯ್ದೆ ಜಾರಿ ಅನ್ವಯ ಖಾಸಗಿ ಲೇವಾದೇವಿದಾರರಿಂದ ಪಡೆದಿರುವ 1.25 ಲಕ್ಷದ ಒಳಗಿನ ಸಾಲವೂ ಮನ್ನಾ ಆಗಲಿದೆ. ಹೀಗಾಗಿ ಸುಗ್ರೀವಾಜ್ಞೆ ಹೊರಡಿಸಿ ರಾಷ್ಟ್ರಪತಿಗಳ ಸಹಿಗೆ ಕಳುಹಿಸಲು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಸಿಎಂ ವಿವರಿಸಿದರು. ಬಲವಂತವಾಗಿ ಸಾಲ ವಸೂಲಿ ಮಾಡಲು ಮುಂದಾದರೆ, ಅವರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.

    ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೇರಿದ ಹಣ ಎಷ್ಟು?

    ಇದುವರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 25,16,89,808 (25.16 ಕೋಟಿ ರೂ.) ಡಿಡಿ ರೂಪದಲ್ಲಿ ಬಂದಿದೆ. ಇನ್ನು ಸರ್ಕಾರಿ ನೌಕರರ ವೇತನದಲ್ಲಿ ಒಂದು ದಿನ ಮೊತ್ತವನ್ನು ನೆರೆ ಸಂತ್ರಸ್ತರಿಗೆ ನೀಡಲು ನಿರ್ಧರಿದ್ದಾರೆ. ಇದರಿಂದ 102 ಕೋಟಿ ರೂ. ಪರಿಹಾರ ನಿಧಿಗೆ ಸೇರಿದೆ ಎಂದು ತಿಳಿಸಿದ ಕುಮಾರಸ್ವಾಮಿ, ಮಹಾಮಳೆಗೆ ಕೊಡಗಿನಲ್ಲಿ 3 ಸಾವಿರ ಕೋಟಿ ರೂ. ನಷ್ಟವಾಗಿದ್ದು, ತುರ್ತಾಗಿ 2 ಸಾವಿರ ಕೋಟಿ ರೂ. ನೆರವು ನೀಡುವಂತೆ ಪತ್ರದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv