Tag: Waived

  • ರೈತರಿಗೆ ಗುಡ್ ನ್ಯೂಸ್ ಕೊಟ್ಟ ಉದ್ಧವ್ ಠಾಕ್ರೆ- 2 ಲಕ್ಷ ರೂ.ವರೆಗಿನ ಕೃಷಿ ಸಾಲಮನ್ನಾ

    ರೈತರಿಗೆ ಗುಡ್ ನ್ಯೂಸ್ ಕೊಟ್ಟ ಉದ್ಧವ್ ಠಾಕ್ರೆ- 2 ಲಕ್ಷ ರೂ.ವರೆಗಿನ ಕೃಷಿ ಸಾಲಮನ್ನಾ

    ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರವು ಆರಂಭದಲ್ಲೇ ರೈತರಿಗೆ ಗುಡ್ ನ್ಯೂಸ್ ಕೊಟ್ಟಿದೆ.

    ಮಹಾರಾಷ್ಟ್ರದ ರೈತರು ಈ ವರ್ಷ ಸೆಪ್ಟೆಂಬರ್ 30ರೊಳಗೆ ತೆಗೆದುಕೊಂಡ 2 ಲಕ್ಷ ರೂಪಾಯಿವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು. ಸಾಲದ ಮೊತ್ತವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ಉದ್ಧವ್ ಠಾಕ್ರೆ ಇಂದು ಘೋಷಣೆ ಮಾಡಿದ್ದಾರೆ.

    ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವು ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಅಧಿವೇಶದಲ್ಲಿ ಸಾಲಮನ್ನಾ ವಿಚಾರವಾಗಿ ವಿರೋಧ ಪಕ್ಷ ಬಿಜೆಪಿಯೊಂದಿಗಿನ ಸುದೀರ್ಘ ಚರ್ಚೆ ನಡೆಯಿತು. ಈ ಚರ್ಚೆಯ ಉದ್ಧವ್ ಠಾಕ್ರೆ ಅವರು, ‘ಮಹಾತ್ಮ ಜ್ಯೋತಿರಾವ್ ಫುಲೆ ಸಾಲಮನ್ನಾ ಯೋಜನೆ’ಯನ್ನು ಘೋಷಿಸಿದರು. ಈ ಮೂಲಕ ಮೊದಲ ಅಧಿವೇಶನದ ಕೊನೆಯ ದಿನದಂದು ಸಾಲಮನ್ನಾ ಯೋಜೆನೆ ಘೋಷಣೆಯಾಗಿದೆ.

    ಸೆಪ್ಟೆಂಬರ್ 30, 2019 ರವರೆಗೆ ಬಾಕಿ ಇರುವ ಬೆಳೆ ಸಾಲವನ್ನು ತಮ್ಮ ಸರ್ಕಾರವು ಮನ್ನಾ ಮಾಡಲಿದೆ. ಸಾಲ ಮನ್ನಾ ಮೊತ್ತದ ಮಿತಿ ಗರಿಷ್ಠ 2 ಲಕ್ಷ ರೂ. ಆಗಿದೆ ಎಂದು ಠಾಕ್ರೆ ಹೇಳಿದ್ದಾರೆ. ಜನರಿಂದ ದೂರುಗಳನ್ನು ಪಡೆಯಲು ಮತ್ತು ಪ್ರತಿ ಸಣ್ಣ ಕೆಲಸಗಳಿಗಾಗಿ ಮುಂಬೈಗೆ ಜನರು ಬರುವುದನ್ನು ತಪ್ಪಿಸಲು ಪ್ರತಿ ಜಿಲ್ಲೆಯಲ್ಲೂ ಮುಖ್ಯಮಂತ್ರಿ ಕಚೇರಿಯ ಸಣ್ಣ ಘಟಕವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

    ರೈತರು ಎಲ್ಲಿಯೂ ಹೋಗಬೇಕಾಗಿಲ್ಲ. ಅವರು ಸಾಲಿನಲ್ಲಿ ನಿಲ್ಲಬೇಕಾಗಿಲ್ಲ, ಅರ್ಜಿ ಸಲ್ಲಿಸಬೇಕಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕೆಲ ಮಾಡಲಿದೆ ಎಂದು ಶಿವಸೇನೆ ಮುಖಂಡ ಸುನಿಲ್ ಪ್ರಭು ಹೇಳಿದ್ದಾರೆ.

    ಉದ್ಧವ್ ಠಾಕ್ರೆ ಅವರ ಸರ್ಕಾರವು ರೈತರ ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡಿಲ್ಲ ಎಂದು ಟೀಕಿಸಿದ ಬಿಜೆಪಿ ನಾಯಕರು ಇಂದು ವಿಧಾನಸಭೆ ಕಲಾಪರಿಂದ ಹೊರನಡೆದರು. ಈ ಸರ್ಕಾರವು ಜನರ ಆದೇಶಕ್ಕೆ ದ್ರೋಹ ಬಗೆದಿದೆ. ಈಗ ಅವರು ರೈತರಿಗೆ ದ್ರೋಹ ಮಾಡಿದ್ದಾರೆ. ಇದು ಸಂಪೂರ್ಣ ಸಾಲ ಮನ್ನಾ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

  • ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ – ಯೂಟರ್ನ್ ಹೊಡೆದ ಸಿಎಂ ಕುಮಾರಸ್ವಾಮಿ

    ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ – ಯೂಟರ್ನ್ ಹೊಡೆದ ಸಿಎಂ ಕುಮಾರಸ್ವಾಮಿ

    ಬೆಳಗಾವಿ: ಮುಂದಿನ ವರ್ಷ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ಅಧಿವೇಶನದ ಕಲಾಪಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಸಾಲಮನ್ನಾ ಮಾಡುವುದಕ್ಕೆ ಮುಂದಿನ ವರ್ಷದ ಬಜೆಟ್‍ನಲ್ಲಿ ಹಣವನ್ನು ಮೀಸಲಿಡಲಾಗಿದೆ. ಬಿಜೆಪಿಯವರು ಆರು ತಿಂಗಳು ಕಾದು ನೋಡಲಿ. ನಾನು ಎಲ್ಲಿಯೂ ಹೋಗುವುದಿಲ್ಲ. ಈಗಲೇ ಎಲ್ಲ ಹಣವನ್ನು ಪಾವತಿ ಮಾಡಲು ಸಿದ್ಧನಿರುವೆ. ಒಂದು ವೇಳೆ ನಾಲ್ಕು ಹಂತದಲ್ಲಿ ಹಣ ಪಾವತಿಸುವ ಪರಿಸ್ಥಿತಿ ಬಂದಾಗ ಎದುರಿಸಬೇಕಾಗುತ್ತದೆ ಎಂದು ದ್ವಂದ್ವ ಹೇಳಿಕೆ ನೀಡಿದ್ದಾರೆ.

    ರೈತರ ಸಾಲಮನ್ನಾಗೆ ನಾನು ಬದ್ಧನಿರುವೆ. ರೈತರ ಕೃಷಿ ಸಾಲಮನ್ನಾ ಹಣವನ್ನು ಬ್ಯಾಂಕ್‍ಗಳಿಗೆ ನಾಲ್ಕು ವರ್ಷದಲ್ಲಿ ಪಾವತಿಸಲಾಗುತ್ತದೆ. ಈ ಕುರಿತು ಮುಂದಿನ ವರ್ಷದ ಬಜೆಟ್‍ನಲ್ಲಿ ಸಂಪೂರ್ಣ ಮಾಹಿತಿ ನೀಡತ್ತೇನೆ. ಯಾವ ವರ್ಷ ಎಷ್ಟು ಹಣವನ್ನು ಬ್ಯಾಂಕಿಗೆ ನೀಡಬೇಕು ಎನ್ನುವ ವಿಚಾರವಾಗಿ ಆರ್ಥಿಕ ಇಲಾಖೆಯ ಜೊತೆಗೆ ಚರ್ಚೆ ಮಾಡಿದ್ದೇನೆ. ಈಗಾಗಲೇ ದೊಡ್ಡಬಳ್ಳಾಪುರ ರೈತರ ಸಾಲಮನ್ನಾ ಮಾಡಲಾಗಿದೆ ಎಂದರು.

    ನೀರಾವರಿ ನಿಗಮಗಳ ಯೋಜನೆಗಳಿಗೆ ಬ್ರೇಕ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಾಲಮನ್ನಾಕ್ಕೆ ಹಣ ಹೊಂದಿಸಲು ಯಾವುದೇ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿದಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಸ್ಥಗಿತ ಮಾಡಿಲ್ಲ. ಇದಕ್ಕೂ ಸಾಲಮನ್ನಾಕ್ಕೂ ಯಾವುದೇ ಸಂಬಂಧವಿಲ್ಲ. ಸಾಲಮನ್ನಾ ಮಾಡಲು ಪ್ರತ್ಯೇಕ ಹಣ ಮೀಸಲಿರಿಸಿದ್ದೇವೆ. ನೀರಾವರಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

    ಕಲಾಪ ಕದನ:
    ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ನಾನು ನಿನ್ನೆ ಹಗುರವಾಗಿ ಮಾತಾಡಿದ್ದೇನೆ ಎನ್ನುವುದು ಬಿಜೆಪಿಯವರ ಆರೋಪ. ಆದರೆ ಸರ್ಕಾರದ ಬಗ್ಗೆ ಇಷ್ಟು ದಿನ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹಗುರವಾಗಿ ಮಾತಾಡಿದ್ದಾರೆ. ಈ ವರ್ತನೆಯಿಂದ ಬೇಸತ್ತ ನಾವು ಬಿಜೆಪಿ ವಿರುದ್ಧ ಧರಣಿ ಮಾಡಬೇಕಿತ್ತು. ಕಲಾಪದಲ್ಲಿ ನಿನ್ನೆ ಮಧ್ಯಾಹ್ನ ಸಾಲಮನ್ನಾ ಕುರಿತು ಮಾಹಿತಿ ನೀಡುತ್ತಿದ್ದೆ. ಅದನ್ನು ಕೇಳುವ ಮನಸ್ಥಿತಿ ಬಿಜೆಪಿಯವರಿಗೆ ಇರಲಿಲ್ಲ ಎಂದರು.

    ಈ ಹಿಂದೆ ಸಿಎಂ ಹೇಳಿದ್ದೇನು?:
    ವಿಧಾನಸೌಧದಲ್ಲಿ ಇದೇ ತಿಂಗಳ 4ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಸಾಲವನ್ನು 50 ಸಾವಿರ ರೂ. ಮನ್ನಾ ಮಾಡಲಾಗುವುದು. ಸಾಲಮನ್ನಾಕ್ಕಾಗಿ 6,500 ಕೋಟಿ ರೂ. ಮೀಸಲಿಟ್ಟಿದ್ದೇವೆ. ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ 17 ಲಕ್ಷ ರೈತರ ಸಾಲ ಪಡೆದಿದ್ದು, ಪ್ರತಿಯೊಬ್ಬರ ಖಾತೆಯ 50 ಸಾವಿರ ರೂ. ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದ್ದರು.

    ಅಕ್ಟೋಬರ್ 24 ರಂದು ಸಿಎಂ, ಸಹಕಾರಿ ಬ್ಯಾಂಕ್‍ಗಳಿಗೆ ಕಳೆದ ತಿಂಗಳು 1,300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೀಗಾಗಿ ಸಾಲಮನ್ನಾ ಪ್ರಕ್ರಿಯೆ ಡಿಸೆಂಬರ್ 8ರಿಂದ ಆರಂಭವಾಗಲಿದ್ದು, ಉಳಿದ 1,200 ಕೋಟಿ ರೂ.ವನ್ನು ಇದೇ ತಿಂಗಳು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನು ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದಿಂದ ರೈತರಿಗೆ ಸಾಲಮನ್ನಾ ಗಿಫ್ಟ್!

    ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ 2ಲಕ್ಷ ರೂ.ವರೆಗಿನ ಎನ್‍ಪಿಎ ಸಾಲ, ಸುಸ್ತಿ ಸಾಲ ಮತ್ತು ಮರು ಹೊಂದಾಣಿಕೆ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡುವ ಕುರಿತು ಸಂಪುಟ ತೀರ್ಮಾನ ಕೈಗೊಂಡು ಈ ಆದೇಶ ಹೊರಡಿಸಿತ್ತು. ಇದನ್ನು ಓದಿ: ಸಾಲಮನ್ನಾ ನಂತರವೂ ರಾಜ್ಯ ಸರ್ಕಾರದ ಖಾತೆಯಲ್ಲಿ 10 ಸಾವಿರ ಕೋಟಿ ರೂಪಾಯಿ ಇದೆ: ಸಿಎಂ

    ಸಾಲಮನ್ನಾ ಯೋಜನೆಯ ಪ್ರಕ್ರಿಯೆಗಳನ್ನು ಮುಂದುವರಿಸಲು ಇಬ್ಬರು ಐಎಎಸ್ ಅಧಿಕಾರಿಗಳನ್ನೊಳಗೊಂಡ ನೋಡಲ್ ಸಮಿತಿಯನ್ನೂ ಸರ್ಕಾರ ರಚಿಸಿದೆ. ಈ ಸಮಿತಿ ಬ್ಯಾಂಕ್‍ಗಳೊಂದಿಗೆ ಸಂಪರ್ಕ ಹೊಂದಿ ಸಾಲಮನ್ನಾದ ಅನುಕೂಲ ನೇರವಾಗಿ ರೈತರಿಗೆ ತಲುಪುವಂತೆ ಮಾಡಲಿದೆ. ಇದರ ಜತೆಗೆ ಚಾಲ್ತಿ ಸಾಲದ ಪೈಕಿ 25 ಸಾವಿರ ರೂ. ಮನ್ನಾ ಮಾಡಲಾಗುತ್ತದೆ. ಈ ಮೊತ್ತವನ್ನು ರೈತರ ಸಾಲದ ಖಾತೆಗೆ ಸರ್ಕಾರ ಜಮಾ ಮಾಡಲಿದೆ ಎಂದು ಕುಮಾರಸ್ವಾಮಿ ಹಿಂದೆ ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv