Tag: wage laborers

  • ಊರು ಸೇರಲು ಊಟವಿಲ್ಲದೇ 135 ಕಿ.ಮೀ ನಡೆದ ಕೂಲಿ ಕಾರ್ಮಿಕ

    ಊರು ಸೇರಲು ಊಟವಿಲ್ಲದೇ 135 ಕಿ.ಮೀ ನಡೆದ ಕೂಲಿ ಕಾರ್ಮಿಕ

    – ಕಾರ್ಮಿಕನಿಗಾಗಿ ಮನೆಯಿಂದ ಊಟ ತರಿಸಿಕೊಟ್ಟ ಪೊಲೀಸ್

    ಮುಂಬೈ: ಕೊರೊನಾ ವೈರಸ್ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಕೂಲಿ ಕಾರ್ಮಿಕನೋರ್ವ ಊಟವಿಲ್ಲದೇ 135 ಕೀ.ಮೀ ನಡೆದು ತನ್ನ ಊರು ಸೇರಿದ್ದಾನೆ.

    ಕೊರೊನಾ ವೈರಸ್ ಭೀತಿಯಿಂದ ಊರು ಬಿಟ್ಟು ಬೇರೆ ಕಡೆ ಕೂಲಿ ಮಾಡುತ್ತಿದ್ದವರೆಲ್ಲ, ತಮ್ಮ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಿದ್ದಾರೆ. ಪ್ರಧಾನಿ ಅವರ ಆದೇಶದ ಮೇರೆಗೆ ಪೂರ್ತಿ ಇಂಡಿಯಾ ಲಾಕ್‍ಡೌನ್ ಆಗಿದೆ. ಆದರೂ ಕೆಲವರು ನಡೆದುಕೊಂಡು ಸಿಕ್ಕ ಸಿಕ್ಕ ವಾಹನ ಏರಿ ತಮ್ಮ ಊರಿಗೆ ಬರುತ್ತಿದ್ದಾರೆ. ಹಾಗೇಯೆ 26 ವರ್ಷದ ದಿನಗೂಲಿ ಕೆಸಲಗಾರ ನರೇಂದ್ರ ಶೆಲ್ಕೆ ಮಹಾರಾಷ್ಟ್ರದ ನಾಗ್ಪುರದಿಂದ ಆಹಾರವಿಲ್ಲದೆ 135 ಕಿ.ಮೀ.ಗೆ ನಡೆದು ಚಂದ್ರಪುರದ ತನ್ನ ಮನೆ ಸೇರಿದ್ದಾನೆ.

    ಕೊರೊನಾ ವೈರಸ್ ನಿಂದ ಎಲ್ಲರೂ ಸಿಟಿ ಬಿಟ್ಟು ತಮ್ಮ ಹಳ್ಳಿ ಸೇರುತ್ತಿದ್ದಾರೆ. ಆದ್ದರಿಂದ ಪುಣೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನರೇಂದ್ರ ಶೆಲ್ಕೆ ಕೂಡ ಚಂದ್ರಪುರ ಜಿಲ್ಲೆಯ ಸಾಲಿ ತಹಸಿಲ್‍ನಲ್ಲಿರುವ ತಮ್ಮ ಜಂಭ ಗ್ರಾಮಕ್ಕೆ ಹಿಂತಿರುಗಲು ನಿರ್ಧರಿಸಿದ್ದ. ಆದರೆ ಅಷ್ಟೊತ್ತಿಗೆ ದೇಶ ಲಾಕ್‍ಡೌನ್ ಆದ ಕಾರಣ ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದಾನೆ.

    ಎಷ್ಟೇ ಕಾದರು ಊರಿಗೆ ಹೋಗಲು ಯಾವುದೇ ವಾಹನ ಸಿಗದ ಕಾರಣ ನಡೆದುಕೊಂಡು ಊರಿಗೆ ಹೋಗಲು ನಿರ್ಧರಮಾಡಿದ್ದಾನೆ. ಹಾಗಾಗಿ ಮಂಗಳವಾರ ನಾಗ್ಪುರ-ನಾಗ್‍ಬಿದ್ ರಸ್ತೆಯಲ್ಲಿ ನಡೆದುಕೊಂಡು ಬಂದಿದ್ದಾನೆ. ಲಾಕ್‍ಡೌನ್ ಆದ ಕಾರಣ ಮಧ್ಯದಲ್ಲಿ ಯಾವುದೇ ಹೋಟೆಲ್ ಅಥವಾ ಊಟ ಸಿಗದ ಕಾರಣ ಕೇವಲ ನೀರನ್ನು ಕುಡಿದುಕೊಂಡು ಎರಡು ದಿನಗಳ ಕಾಲ ನಡೆದುಕೊಂಡು ಬಂದಿದ್ದಾನೆ.

    ಈ ವೇಳೆ ಬುಧವಾರ ರಾತ್ರಿ ನಾಗ್ಪುರದಿಂದ 135 ಕಿ.ಮೀ ದೂರದಲ್ಲಿರುವ ಸಿಂಡೆವಾಹಿ ತಹಸಿಲ್ನ ಶಿವಾಜಿ ಚೌಕದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಫ್ರ್ಯೂ ವೇಳೆಯಲ್ಲಿ ಯಾಕೆ ಹೊರಗೆ ಬಂದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ಶೆಲ್ಕೆ ನಡೆದ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಊಟವಿಲ್ಲದೇ ಎರಡು ದಿನಗಳಿಂದ ಊರಿಗೆ ಹೋಗಲು ನಡೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ.

    ಶೆಲ್ಕೆ ಕಥೆ ಕೇಳಿ ಮರುಗಿದ ಪೊಲೀಸರು, ಆತನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ, ಅಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ನಂತರ ಊಟವಿಲ್ಲದೇ ಬಳಲುತ್ತಿದ್ದ ಆತನಿಗೆ ಸಿಂಡೆವಾಹಿ ಪೊಲೀಸ್ ಠಾಣೆಯ ಸಬ್ ಇನ್‍ಸ್ಪೆಕ್ಟರ್ ತಮ್ಮ ಮನೆಯಿಂದ ಊಟ ತರಿಸಿ ತಿನ್ನಲು ನೀಡಿದ್ದಾರೆ. ಬಳಿಕ ಆತನ ಊರಿಗೆ ಹೋಗಲು ವಾಹನವನ್ನು ವ್ಯವಸ್ಥೆ ಮಾಡಿ 14 ದಿನ ಮನೆಯಲ್ಲೇ ಪ್ರತ್ಯೇಕವಾಗಿ ಇರಲು ತಿಳಿಸಿ ಕಳುಹಿಸಿಕೊಟ್ಟಿದ್ದಾರೆ.

  • ಕಳ್ಳನೆಂದು ಭಾವಿಸಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

    ಕಳ್ಳನೆಂದು ಭಾವಿಸಿ ಕೂಲಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು

    ಹೈದರಾಬಾದ್: ಕೂಲಿ ಕಾರ್ಮಿಕನೊಬ್ಬನನ್ನು ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಖದೀಮ ಎಂದು ಭಾವಿಸಿ ಗ್ರಾಮಸ್ಥರು ಮನಬಂದಂತೆ ಹೊಡೆದು ಜೀವ ತೆಗೆದ ಅಮಾನವೀಯ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಧರ್ಮರಾಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೂಲಿ ಕಾರ್ಮಿಕ ಗಂಗಾಧರ್(25) ಮೃತ ದುರ್ದೈವಿ. ಅರ್ಸಪಲ್ಲಿ ಮೂಲದ ಗಂಗಾಧರ್ ಕಟ್ಟಡ ನಿರ್ಮಾಣ ಮಾಡುವ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಹೀಗಾಗಿ ಧರ್ಮರಾಮ್ ಗ್ರಾಮದಲ್ಲಿ ಕಟ್ಟುತ್ತಿದ್ದ ಕಟ್ಟಡವೊಂದರಲ್ಲಿ ಕೂಲಿ ಮಾಡುತ್ತ ಆ ಗ್ರಾಮದಲ್ಲಿಯೇ ಕುಟುಂಬ ಸಮೇತ ವಾಸವಾಗಿದ್ದನು. ಮಂಗಳವಾರ ಬೆಳಗ್ಗೆ ಗಂಗಾಧರ್ ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರಟ್ಟಿದ್ದನು. ಆದರೆ ಮಾರ್ಗ ಮಧ್ಯೆ ಆತನನ್ನು ಧರ್ಮರಾಮ್ ಗ್ರಾಮಸ್ಥರು ತಡೆದು, ಸ್ಥಳೀಯ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ನೀನೇ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದೀಯ ಎಂದು ಗಂಗಾಧರ್ ನನ್ನು ಮನಬಂದಂತೆ ಬೈದು, ಹೊಡೆಯಲು ಆರಂಭಿಸಿದ್ದಾರೆ.

    ಗ್ರಾಮಸ್ಥರ ಥಳಿತಕ್ಕೆ ಗಂಭೀರ ಗಾಯಗೊಂಡಿದ್ದ ಆತನನ್ನು ಕೆಲವರು ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಗಂಗಾಧರ್ ಸಾವನ್ನಪ್ಪಿದ್ದನು. ಬಳಿಕ ಮರಣೋತ್ತರ ಪರೀಕ್ಷೆಗೆಂದು ಆತನ ಮೃತದೇಹವನ್ನು ಪೊಲೀಸರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

    ಈ ಸಂಬಂಧ ಮೃತ ಕೂಲಿ ಕಾರ್ಮಿಕನ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನಾಮಧೇಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 202ನೇ ವಿಧಿ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ರಾತ್ರೋರಾತ್ರಿ ಕೂಲಿ ಕಾರ್ಮಿಕರ ಮನೆಗೆ ನುಗ್ಗಿ ಲಾಂಗ್ ಮಚ್ಚಿನಿಂದ ಹಲ್ಲೆ

    ರಾತ್ರೋರಾತ್ರಿ ಕೂಲಿ ಕಾರ್ಮಿಕರ ಮನೆಗೆ ನುಗ್ಗಿ ಲಾಂಗ್ ಮಚ್ಚಿನಿಂದ ಹಲ್ಲೆ

    ಬೆಂಗಳೂರು: ಐವರು ಕೂಲಿ ಕಾರ್ಮಿಕರ ಮನೆಗೆ ವ್ಯಕ್ತಿಗಳು ನುಗ್ಗಿ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಬಾಗಲಗುಂಟೆಯ ಮಂಜುನಾಥ ನಗರದಲ್ಲಿ ನಡೆದಿದೆ.

    ಜಗದೀಶ್ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದೆ. ಕೂಲಿಕಾರ್ಮಿಕರಾದ ಗಂಗಾಧರ್, ಸಂತೋಷ್, ಚಂದ್ರು, ರಾಮು ಮತ್ತು ರಂಗಸ್ವಾಮಿ ಹಲ್ಲೆಗೊಳಗಾಗಿದ್ದಾರೆ. ಜಗದೀಶ್ ಮತ್ತು ಗಂಗಾಧರ್ ನಡುವೆ ಇದ್ದ ಹಳೆ ವೈಷಮ್ಯವೇ ಹಲ್ಲೆಗೆ ಕಾರಣ ಎಂದು ಹೇಳಲಾಗುತ್ತದೆ.

    ಹಲ್ಲೆಯಲ್ಲಿ ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿ ಸಂತೋಷ್ ಎಂಬ ಕಾರ್ಮಿಕನ ಕೈ ತುಂಡಾಗಿದೆ. ಗಾಯಾಳುಗಳಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೈ ತುಂಡಾಗಿರುವ ಸಂತೋಷ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೌಸ್ ಮ್ಯಾಟ್ ಆಸ್ಪತ್ರೆಗೆ ರವಾನಿಸಲಾಗಿದೆ. ಐವರು ಕೂಲಿ ಕಾರ್ಮಿಕರು ಬೇರೆ ಬೇರೆ ಜಿಲ್ಲೆಯವರಾಗಿದ್ದು, ದುಡಿಯಲಿಕ್ಕೆ ಅಂತ ಬೆಂಗಳೂರಿಗೆ ಬಂದು ಬಾಗಲಗುಂಟೆ ಮಂಜುನಾಥ ನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು.

    ಹದಿನೈದು ದಿನಗಳ ಹಿಂದೆ ಹಲ್ಲೆ ಮಾಡಿರುವ ಜಗದೀಶ್ ಮತ್ತು ಗಂಗಾಧರ್ ಗೆ ಬಾರ್ ವೊಂದರಲ್ಲಿ ಗಲಾಟೆ ಆಗಿತ್ತು. ಆ ಗಲಾಟೆಯ ಪ್ರತೀಕಾರವಾಗಿ ಜಗದೀಶ್ ಗ್ಯಾಂಗ್ ಕಟ್ಟಿಕೊಂಡು ಇಂದು ಮಧ್ಯರಾತ್ರಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

    ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ಬಾಗಲಗುಂಟೆ ಪೊಲೀಸರಿಗೆ ಕೇಸ್ ದಾಖಲು ಮಾಡಲು ಸೂಚನೆ ನೀಡಿದ್ದು, ಕೇಸ್ ದಾಖಲು ಮಾಡಿಕೊಂಡಿರುವ ಬಾಗಲಗುಂಟೆ ಪೊಲೀಸರು ಹಲ್ಲೆ ಮಾಡಿ ಪರಾರಿಯಾಗಿರುವ ಜಗದೀಶ್ ಅಂಡ್ ಗ್ಯಾಂಗ್ ಗೆ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    – 17 ಮಂದಿ ಮಹಿಳೆಯರು ಸೇರಿ 52 ಜನರ ರಕ್ಷಣೆ
    – ತೋಟದಿಂದ ಹೊರಕ್ಕೆ ಹೋದರೆ ಬೆತ್ತದಿಂದ ಏಟು

    ಹಾಸನ: ಇದು ನಾಗರೀಕ ಸಮಾಜ ತಲೆತಗ್ಗಿಸುವ ಅನಾಗರೀಕ ರೀತಿಯಲ್ಲಿ 52ಮಂದಿ ಕೂಲಿ ಕಾರ್ಮಿಕರನ್ನು ಜೀತಕ್ಕಾಗಿ ಇಟ್ಟುಕೊಂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹಾಸನ ತಾಲೂಕಿನ ಸಾವಂಕನಹಳ್ಳಿಯ ಹೊರವಲಯದಲ್ಲಿರುವ ತೆಂಗಿನ ತೋಟದಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ದಬ್ಬಾಳಿಕೆ ನಡೆಸಲಾಗುತಿತ್ತು. ನಾಲ್ವರು ಪುಟ್ಟ ಮಕ್ಕಳು, 17 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 52 ಮಂದಿಯನ್ನು ಜೀತ ಬಂಧನದಿಂದ ಮುಕ್ತಗೊಳಿಸಲಾಗಿದೆ.

    ರಾಜ್ಯದ ವಿವಿಧ ಭಾಗದಲ್ಲಿ ಬಿಕ್ಷೆ ಬೇಡುವವರನ್ನು, ಬೀದಿ ಬದಿಯ ವಾಸಿಗಳನ್ನು ಹೆಚ್ಚಿನ ಕೂಲಿ ಕೊಡುವುದಾಗಿ ನಂಬಿಸುವ ತಂಡವೊಂದನ್ನು ರಚಿಸಿಕೊಂಡಿದ್ದ ಪ್ರಮುಖ ಆರೋಪಿ ಮುನೇಶ್ ಈಗ ತಲೆ ಮರೆಸಿಕೊಂಡಿದ್ದಾನೆ. ರಾಜ್ಯದ ಮತ್ತು ಬೇರೆ ರಾಜ್ಯಗಳಿಂದ ಬಂದ ಬಡ ಕೂಲಿ ಕಾರ್ಮಿಕರು ಮತ್ತು ಬಿಕ್ಷುಕರೇ ಇವರ ಟಾರ್ಗೆಟ್ ಆಗಿದ್ದರು. ಜೀವನಕ್ಕಾಗಿ ಊರೂರು ಅಲೆಯುವರನ್ನು ಹೊಂಚು ಹಾಕಿ ಈ ತೋಟಕ್ಕೆ ಕರೆದುಕೊಂಡು ಬರುತ್ತಿದ್ದರು.

    ಟೊಮೆಟೋ ಕೀಳುವ ಕೆಲಸ ತುಂಬಾ ಸುಲಭವಾದ ಕೆಲಸ ಮತ್ತು ಉತ್ತಮ ಸಂಬಳ ಬೇರೆ ಸಿಗುತ್ತೆ ಎನ್ನುವ ಆಸೆಯಿಂದ ಇಲ್ಲಿಗೆ ಬಂದವರು ಮತ್ತೆ ಹೊರಕ್ಕೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಪ್ರಾಣಿಗಳಂತೆ ಅವರನ್ನು ಬೇರೆ ತೋಟಗಳಿಗೆ ಕೂಲಿಗೆ ಕರೆದುಕೊಂಡು ಹೋಗಿ ಮತ್ತೆ ಈ ತೋಟಕ್ಕೆ ವಾಪಸ್ ಕರೆದುಕೊಂಡು ಬಂದು ಒಂದು ಕಡೆ ಕೂಡಿಹಾಕಲಾಗುತಿತ್ತು. ಕೆಲವರು ಎರಡು ವರ್ಷಗಳಿಂದ ಇಲ್ಲಿಯೇ ಇದ್ದಾರೆ. ಇನ್ನೂ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಇಲ್ಲಿಗೆ ಬಂದು ತಿಂಗಳುಗಳೇ ಕಳೆದಿವೆ. ಸಂಬಳವೂ ಇಲ್ಲ, ಊರಿಗೆ ವಾಪಸ್ ಹೋಗಲು ಸಾಧ್ಯವಾಗದೇ ನರಕಯಾತನೆ ಅನುಭವಿಸುತ್ತಿದ್ದರು.

    ತೆಂಗಿನಮರದ ಸೋಗೆ ನಿರ್ಮಿತ ಒಂದೇ ಕೊಠಡಿಯಲ್ಲಿ ಎಲ್ಲಾ ಕಾರ್ಮಿಕರನ್ನು ಕೂಡಿಹಾಕಿ ರಾತ್ರಿಹೊತ್ತು ಕಾವಲು ಕಾಯುತ್ತಿದ್ದರು. ನಿತ್ಯ ಕರ್ಮಗಳಿಗೆ ಸಹ ಹೊರಕ್ಕೆ ಹೋಗುವಂತಿರಲಿಲ್ಲ. ತೋಟ ಬಿಟ್ಟು ಹೊರಕ್ಕೆ ಹೋಗುವಂತಿರಲಿಲ್ಲ. ಯಾರಾದರೂ ಹೊರಕ್ಕೆ ಹೋಗಲು ಪ್ರಯತ್ನಿಸಿದರೆ ಅವರನ್ನು ಬೆತ್ತದ ಕೋಲುಗಳಿಂದ ಹೊಡೆಯಲಾಗುತಿತ್ತು. ಎಲ್ಲ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಮುಂಜಾನೆ 5 ಗಂಟೆಯಿಂದ ಅವರನ್ನು ಬೇರೆ ಕಡೆ ಶುಂಠಿ ಬೆಳೆ ಕೀಳಲು ಕರೆದುಕೊಂಡು ರಾತ್ರಿಯವರೆಗೂ ದುಡಿಸಿಕೊಂಡು ಮತ್ತೆ ಇದೇ ತೋಟಕ್ಕೆ ವಾಪಾಸ್ ಕರೆದುಕೊಂಡು ಬಂದು ಕೂಡಿಹಾಕುತ್ತಿದ್ದರು.

    ಹಲವು ವರ್ಷಗಳಿಂದ ನಡೆಯುತಿದ್ದ ದುಷ್ಕರ್ಮಿಗಳ ತಂಡದ ಕೃತ್ಯ ಇದೀಗ ಬೆಳಕಿಗೆ ಬಂದಿದ್ದು, ಎಲ್ಲ ನಿರಾಶ್ರಿತರನ್ನು ಅಲ್ಲಿಂದ ಬಂಧಮುಕ್ತಗೊಳಿಸಲಾಗಿದೆ. ಪ್ರಮುಖ ಆರೋಪಿ ಮುನೇಶ್ ಮತ್ತು ಆತನ ಸಹಚರರು ತಲೆ ಮರೆಸಿಕೊಂಡಿದ್ದಾರೆ. ಮುನೇಶ್ ಜಿಲ್ಲೆಯ ಅರಸೀಕೆರೆಯ ನಿವಾಸಿಯಾಗಿದ್ದು, ಸಾವಂಕನಹಳ್ಳಿಯ ಈ ತೋಟವನ್ನು ಭೋಗ್ಯ ಮಾಡಿಕೊಂಡಿದ್ದಾನೆ. ಇದೀಗ ಹಾಸನ ಪೊಲೀಸರು ಈತನ ಪಾಪಿಕೃತ್ಯವನ್ನು ಭೇದಿಸಿ 52 ಮಂದಿ ಅಮಾಯಕರನ್ನು ಜೀತದಿಂದ ಬಂಧಮುಕ್ತಗೊಳಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv