Tag: wage

  • ವಾರದೊಳಗೆ ನರೇಗಾ ಕೂಲಿ ಬಾಕಿ ಪಾವತಿ – ಕೆ.ಎಸ್.ಈಶ್ವರಪ್ಪ

    ವಾರದೊಳಗೆ ನರೇಗಾ ಕೂಲಿ ಬಾಕಿ ಪಾವತಿ – ಕೆ.ಎಸ್.ಈಶ್ವರಪ್ಪ

    – ಸಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ ಅಮಾನತು

    ಶಿವಮೊಗ್ಗ: ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಬಾಕಿ ಇರುವ ಎಲ್ಲಾ ಮೊತ್ತವನ್ನು ವಾರದೊಳಗಾಗಿ ಪಾವತಿ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ನದಿ ಪುನಶ್ಚೇತನ ಕಾರ್ಯಕ್ರಮ ಅನುಷ್ಠಾನ ಕುರಿತು ಪಿಡಿಒ, ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಪ್ರತಿನಿಧಿಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಕೇಂದ್ರ ಸರ್ಕಾರ ಬಾಕಿ ಅನುದಾನ ಬಿಡುಗಡೆ ಮಾಡಿದ್ದು, ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಇನ್ನೂ ಒಂದು ಸಾವಿರ ಕೋಟಿ ರೂ. ಮುಂಗಡವಾಗಿ ಜಿಲ್ಲೆಗೆ ಬಿಡುಗಡೆ ಮಾಡಿದೆ. ಕೊರೊನಾ ಹಿನ್ನೆಲೆಯಲ್ಲಿ ಕೂಲಿ ಮೊತ್ತವನ್ನು ರೂ. 249ರಿಂದ 275ಕ್ಕೆ ಹೆಚ್ಚಳ ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಯೋಜನೆಯಡಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ ಮಾಡಬೇಕು. ವಾರದೊಳಗಾಗಿ ಕೂಲಿ ಹಣವನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.

    ಉದ್ಯೋಗ ಖಾತ್ರಿ ಯೋಜನೆಯಡಿ 5 ಜನರ ತಂಡಗಳನ್ನು ರಚಿಸಿ ಕಾಮಗಾರಿ ಅನುಷ್ಠಾನಗೊಳಿಸಬೇಕು. ಗುಂಪಾಗಿ ಕೆಲಸ ಮಾಡದೆ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಬೇಕು. ನದಿ ಪುನಶ್ಚೇತನ ಯೋಜನೆಯಡಿ, ಮಳೆ ನೀರು ಹರಿದು ಪೋಲಾಗಿ ಹೋಗದೆ ಪ್ರತಿ ಹನಿ ನೆಲದ ಒಳಗೆ ಇಂಗುವಂತಹ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಇಂಗು ಗುಂಡಿಗಳ ರಚನೆ, ಮಣ್ಣಿನ ಸವಕಳಿ ತಡೆಯುವುದು, ಗಿಡ ಮರ ಬೆಳೆಸುವುದು ಸೇರಿದಂತೆ ಎಲ್ಲಾ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

    ಸಭೆಯಲ್ಲಿ ಶಾಸಕ ಅಶೋಕ್ ನಾಯ್ಕ, ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.

    ಶಿವಮೊಗ್ಗದ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಈ ಘಟನೆಗೆ ಮೆಗ್ಗಾನ್ ಭೋಧನಾ ಆಸ್ಪತ್ರೆ ನಿರ್ದೇಶಕ ಡಾ.ಲೇಪಾಕ್ಷಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನವೇ ಕಾರಣ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಡಾ.ಲೇಪಾಕ್ಷಿ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

    ಬೆಂಗಳೂರಿನಲ್ಲಿ ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಅಮಾನತು ನಿರ್ಧಾರ ಕೈಗೊಂಡಿದ್ದಾರೆ. ಶೀಘ್ರದಲ್ಲಿಯೇ ಅವರ ಸ್ಥಾನಕ್ಕೆ ಮತ್ತೊಬ್ಬರು ಸಮರ್ಥರನ್ನು ನೇಮಕ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

  • ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    ತೋಟ ಬಿಟ್ಟು ಹೊರಹೋಗುವಂತಿಲ್ಲ – ಹಾಸನದಲ್ಲಿ ಜೀತಕ್ಕಿದ್ದ 52 ಮಂದಿ ಬಿಡುಗಡೆ

    – 17 ಮಂದಿ ಮಹಿಳೆಯರು ಸೇರಿ 52 ಜನರ ರಕ್ಷಣೆ
    – ತೋಟದಿಂದ ಹೊರಕ್ಕೆ ಹೋದರೆ ಬೆತ್ತದಿಂದ ಏಟು

    ಹಾಸನ: ಇದು ನಾಗರೀಕ ಸಮಾಜ ತಲೆತಗ್ಗಿಸುವ ಅನಾಗರೀಕ ರೀತಿಯಲ್ಲಿ 52ಮಂದಿ ಕೂಲಿ ಕಾರ್ಮಿಕರನ್ನು ಜೀತಕ್ಕಾಗಿ ಇಟ್ಟುಕೊಂಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಹಾಸನ ತಾಲೂಕಿನ ಸಾವಂಕನಹಳ್ಳಿಯ ಹೊರವಲಯದಲ್ಲಿರುವ ತೆಂಗಿನ ತೋಟದಲ್ಲಿ ಕೂಲಿ ಕಾರ್ಮಿಕರನ್ನು ಕೂಡಿಹಾಕಿ ದಬ್ಬಾಳಿಕೆ ನಡೆಸಲಾಗುತಿತ್ತು. ನಾಲ್ವರು ಪುಟ್ಟ ಮಕ್ಕಳು, 17 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 52 ಮಂದಿಯನ್ನು ಜೀತ ಬಂಧನದಿಂದ ಮುಕ್ತಗೊಳಿಸಲಾಗಿದೆ.

    ರಾಜ್ಯದ ವಿವಿಧ ಭಾಗದಲ್ಲಿ ಬಿಕ್ಷೆ ಬೇಡುವವರನ್ನು, ಬೀದಿ ಬದಿಯ ವಾಸಿಗಳನ್ನು ಹೆಚ್ಚಿನ ಕೂಲಿ ಕೊಡುವುದಾಗಿ ನಂಬಿಸುವ ತಂಡವೊಂದನ್ನು ರಚಿಸಿಕೊಂಡಿದ್ದ ಪ್ರಮುಖ ಆರೋಪಿ ಮುನೇಶ್ ಈಗ ತಲೆ ಮರೆಸಿಕೊಂಡಿದ್ದಾನೆ. ರಾಜ್ಯದ ಮತ್ತು ಬೇರೆ ರಾಜ್ಯಗಳಿಂದ ಬಂದ ಬಡ ಕೂಲಿ ಕಾರ್ಮಿಕರು ಮತ್ತು ಬಿಕ್ಷುಕರೇ ಇವರ ಟಾರ್ಗೆಟ್ ಆಗಿದ್ದರು. ಜೀವನಕ್ಕಾಗಿ ಊರೂರು ಅಲೆಯುವರನ್ನು ಹೊಂಚು ಹಾಕಿ ಈ ತೋಟಕ್ಕೆ ಕರೆದುಕೊಂಡು ಬರುತ್ತಿದ್ದರು.

    ಟೊಮೆಟೋ ಕೀಳುವ ಕೆಲಸ ತುಂಬಾ ಸುಲಭವಾದ ಕೆಲಸ ಮತ್ತು ಉತ್ತಮ ಸಂಬಳ ಬೇರೆ ಸಿಗುತ್ತೆ ಎನ್ನುವ ಆಸೆಯಿಂದ ಇಲ್ಲಿಗೆ ಬಂದವರು ಮತ್ತೆ ಹೊರಕ್ಕೆ ಹೋಗಲು ಸಾದ್ಯವಾಗುತ್ತಿರಲಿಲ್ಲ. ಪ್ರಾಣಿಗಳಂತೆ ಅವರನ್ನು ಬೇರೆ ತೋಟಗಳಿಗೆ ಕೂಲಿಗೆ ಕರೆದುಕೊಂಡು ಹೋಗಿ ಮತ್ತೆ ಈ ತೋಟಕ್ಕೆ ವಾಪಸ್ ಕರೆದುಕೊಂಡು ಬಂದು ಒಂದು ಕಡೆ ಕೂಡಿಹಾಕಲಾಗುತಿತ್ತು. ಕೆಲವರು ಎರಡು ವರ್ಷಗಳಿಂದ ಇಲ್ಲಿಯೇ ಇದ್ದಾರೆ. ಇನ್ನೂ ಕೆಲವರು ತಮ್ಮ ಪುಟ್ಟ ಮಕ್ಕಳೊಂದಿಗೆ ಇಲ್ಲಿಗೆ ಬಂದು ತಿಂಗಳುಗಳೇ ಕಳೆದಿವೆ. ಸಂಬಳವೂ ಇಲ್ಲ, ಊರಿಗೆ ವಾಪಸ್ ಹೋಗಲು ಸಾಧ್ಯವಾಗದೇ ನರಕಯಾತನೆ ಅನುಭವಿಸುತ್ತಿದ್ದರು.

    ತೆಂಗಿನಮರದ ಸೋಗೆ ನಿರ್ಮಿತ ಒಂದೇ ಕೊಠಡಿಯಲ್ಲಿ ಎಲ್ಲಾ ಕಾರ್ಮಿಕರನ್ನು ಕೂಡಿಹಾಕಿ ರಾತ್ರಿಹೊತ್ತು ಕಾವಲು ಕಾಯುತ್ತಿದ್ದರು. ನಿತ್ಯ ಕರ್ಮಗಳಿಗೆ ಸಹ ಹೊರಕ್ಕೆ ಹೋಗುವಂತಿರಲಿಲ್ಲ. ತೋಟ ಬಿಟ್ಟು ಹೊರಕ್ಕೆ ಹೋಗುವಂತಿರಲಿಲ್ಲ. ಯಾರಾದರೂ ಹೊರಕ್ಕೆ ಹೋಗಲು ಪ್ರಯತ್ನಿಸಿದರೆ ಅವರನ್ನು ಬೆತ್ತದ ಕೋಲುಗಳಿಂದ ಹೊಡೆಯಲಾಗುತಿತ್ತು. ಎಲ್ಲ ಕಾರ್ಮಿಕರನ್ನು ಪ್ರಾಣಿಗಳಂತೆ ನಡೆಸಿಕೊಳ್ಳಲಾಗುತಿತ್ತು. ಮುಂಜಾನೆ 5 ಗಂಟೆಯಿಂದ ಅವರನ್ನು ಬೇರೆ ಕಡೆ ಶುಂಠಿ ಬೆಳೆ ಕೀಳಲು ಕರೆದುಕೊಂಡು ರಾತ್ರಿಯವರೆಗೂ ದುಡಿಸಿಕೊಂಡು ಮತ್ತೆ ಇದೇ ತೋಟಕ್ಕೆ ವಾಪಾಸ್ ಕರೆದುಕೊಂಡು ಬಂದು ಕೂಡಿಹಾಕುತ್ತಿದ್ದರು.

    ಹಲವು ವರ್ಷಗಳಿಂದ ನಡೆಯುತಿದ್ದ ದುಷ್ಕರ್ಮಿಗಳ ತಂಡದ ಕೃತ್ಯ ಇದೀಗ ಬೆಳಕಿಗೆ ಬಂದಿದ್ದು, ಎಲ್ಲ ನಿರಾಶ್ರಿತರನ್ನು ಅಲ್ಲಿಂದ ಬಂಧಮುಕ್ತಗೊಳಿಸಲಾಗಿದೆ. ಪ್ರಮುಖ ಆರೋಪಿ ಮುನೇಶ್ ಮತ್ತು ಆತನ ಸಹಚರರು ತಲೆ ಮರೆಸಿಕೊಂಡಿದ್ದಾರೆ. ಮುನೇಶ್ ಜಿಲ್ಲೆಯ ಅರಸೀಕೆರೆಯ ನಿವಾಸಿಯಾಗಿದ್ದು, ಸಾವಂಕನಹಳ್ಳಿಯ ಈ ತೋಟವನ್ನು ಭೋಗ್ಯ ಮಾಡಿಕೊಂಡಿದ್ದಾನೆ. ಇದೀಗ ಹಾಸನ ಪೊಲೀಸರು ಈತನ ಪಾಪಿಕೃತ್ಯವನ್ನು ಭೇದಿಸಿ 52 ಮಂದಿ ಅಮಾಯಕರನ್ನು ಜೀತದಿಂದ ಬಂಧಮುಕ್ತಗೊಳಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಐಟಿ ಕಂಪೆನಿಗಳಲ್ಲಿ ಭಾರೀ ವೇತನ ಏರಿಕೆ ಬೇಡ: ನಾರಾಯಣ ಮೂರ್ತಿ

    ಮುಂಬೈ: ಸಾಫ್ಟ್ ವೇರ್  ಕಂಪೆನಿಗಳಲ್ಲಿ ಹಿರಿಯ ಅಧಿಕಾರಿಗಳು ತಮಗೆ ತಾವೇ ಭಾರೀ ವೇತನವನ್ನು ಏರಿಕೆ ಮಾಡುವುದು ಸರಿಯಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

    ಬಾಂಬೆ ಐಐಟಿಯಲ್ಲಿ ಮಾತನಾಡಿದ ಅವರು, ಐಟಿ ಕಂಪನಿಗಳಲ್ಲಿ ಕಿರಿಯರು ಮತ್ತು ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ವೇತನ ಏರಿಕೆ ನಿರಾಕರಿಸುತ್ತಿರುವ ಬೆಳವಣಿಗೆ ಕಳವಳಕಾರಿಯಾಗಿದೆ. ಹಿರಿಯ ಅಧಿಕಾರಿಗಳು ಕಿರಿಯರಿಗಾಗಿ ಸಂಬಳ  ಏರಿಕೆಯನ್ನು ತ್ಯಾಗ ಮಾಡಬೇಕು ಎಂದು ತಿಳಿಸಿದರು.

    ದೊಡ್ಡ ಹುದ್ದೆಯಲ್ಲಿ ಇರುವವರು ಭಾರೀ ವೇತನ ಏರಿಕೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಹೆಚ್ಚಿನ ಜನರು ಬಡತನ ಅನುಭವಿಸುತ್ತಿರುವಾಗ ಈ ರೀತಿ ವೇತನ ಏರಿಕೆಯನ್ನು ಬಂಡವಾಳ ಶಾಹಿ ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ನಾರಾಯಣ ಮೂರ್ತಿ ಅವರು ಹಿರಿಯ ಅಧಿಕಾರಿಗಳ ಸಂಬಳ ಕುರಿತಾಗಿ ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ಹೊಸದಾಗಿ ಸೇರ್ಪಡೆಯಾಗಿರುವ ಯುವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಇದರ ಬದಲಾಗಿ ಹಿರಿಯ ಮ್ಯಾನೇಜ್‍ಮೆಂಟ್ ಹಂತದಲ್ಲಿರುವ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸುವುದು ಉತ್ತಮ ಎಂದು ಸಲಹೆ ನೀಡಿದ್ದರು. ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    ನಮ್ಮ ಇನ್ಫೋಸಿಸ್ ಉದಾಹರಣೆ ತೆಗೆದುಕೊಳ್ಳಿ. 2011ರ ವೇಳೆ ಸಾಫ್ಟ್ ವೇರ್ ಉದ್ಯಮಕ್ಕೆ ಸಂಕಷ್ಟ ಎದುರಾಗಿತ್ತು. ಈ ವೇಳೆ ಹಿರಿಯ ಹಂತದ ಮ್ಯಾನೇಜ್‍ಮೆಂಟ್ ನಲ್ಲಿರುವ ವ್ಯಕ್ತಿಗಳೆಲ್ಲ ಸಭೆ ನಡೆಸಿದೆವು. ಸಭೆಯಲ್ಲಿ ಸಂಬಳವನ್ನು ಕಡಿತಗೊಳಿಸುವ ತೀರ್ಮಾನವನ್ನು ಮಾಡಿದೆವು. ಯುವ ಟೆಕ್ಕಿಗಳಿಗೆ ಜಾಬ್ ನೀಡಲು ಮತ್ತು ಅವರನ್ನು ರಕ್ಷಿಸಲು ಹಿರಿಯ ಸಿಬ್ಬಂದಿ ಈ ತ್ಯಾಗದ ನಿರ್ಧಾರವನ್ನು ಈಗ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

    ಸುಮ್ಮನೆ ಉದ್ಯೋಗಿಯನ್ನು ಮನೆಗೆ ಕಳುಹಿಸುವುದು ಸರಿಯಾದ ನಿರ್ಧಾರ ಅಲ್ಲ. ಯಾಕೆಂದರೆ ಅವರನ್ನು ನಂಬಿಕೊಂಡ ಕುಟುಂಬವು ಇದೆ. 2008, 2011ರಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸಮಸ್ಯೆ ನಮಗೆ ಹೊಸದೆನಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸೃಷ್ಟಿಯಾಗದೇ ಇರಲು ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ನಾರಾಯಣ ಮೂರ್ತಿ ತಿಳಿಸಿದ್ದರು. ಇದನ್ನೂ ಓದಿ: ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ