Tag: VVPAT

  • ಲೋಕಸಭಾ ಚುನಾವಣೆ – 3 ಗಂಟೆ ತಡವಾಗಿ ಪ್ರಕಟವಾಗಲಿದೆ ಫಲಿತಾಂಶ

    ಲೋಕಸಭಾ ಚುನಾವಣೆ – 3 ಗಂಟೆ ತಡವಾಗಿ ಪ್ರಕಟವಾಗಲಿದೆ ಫಲಿತಾಂಶ

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ 3 ಗಂಟೆ ತಡವಾಗಿ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು, ಸುಪ್ರೀಂ ಕೋರ್ಟ್ ಒಂದು ವಿಧಾನಸಭಾ ವ್ಯಾಪ್ತಿಯ 5 ಮತಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳಲ್ಲಿ ಬಿದ್ದ ಮತಗಳನ್ನು ತಾಳೆ ಮಾಡಬೇಕು ಎಂದು ಆದೇಶಿಸಿದೆ. ಹೀಗಾಗಿ ಫಲಿತಾಂಶ ಪ್ರಕಟ ಮೂರು ಗಂಟೆ ತಡವಾಗಬಹುದು ಎಂದು ಅವರು ಹೇಳಿದರು.

    ಚುನಾವಣಾ ಆಯೋಗ ಒಂದು ವಿಧಾನಸಭಾ ಕ್ಷೇತ್ರ ಒಂದು ಮತಗಟ್ಟೆಯ ವಿವಿಪ್ಯಾಟ್ ಮತ್ತು ಇವಿಎಂಗಳನ್ನು ತಾಳೆ ಮಾಡಲಾಗುವುದು ಎಂದು ಹೇಳಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಇವಿಎಂ ಬಳಕೆಯ ಕುರಿತು ಸುಪ್ರೀಂ ಕೋರ್ಟಿಗೆ ದೇಶದ 21 ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಿದ್ದವು. ಈ ವೇಳೆ ಪ್ರತಿ ಚುನಾವಣಾ ಕ್ಷೇತ್ರದ ಶೇ.50 ರಷ್ಟು ಇವಿಎಂ ಗಳನ್ನು ವಿವಿಪ್ಯಾಟ್ ನೊಂದಿಗೆ ಹೋಲಿಕೆ ಮಾಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿತ್ತು. ಈ ಮನವಿ ಆಯೋಗ ಶೇ.50 ರಷ್ಟು ಮತ ಎಣಿಕೆ ನಡೆಸಿದರೆ ಫಲಿತಾಂಶ ಪ್ರಕಟಿಸಲು 5-6 ದಿನ ಬೇಕಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿತ್ತು.

    ಇಲ್ಲಿಯವರೆಗೆ ಒಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಚಲಾವಣೆಯಾದ ಇವಿಎಂ ಮತಗಳನ್ನು ವಿವಿಪ್ಯಾಟ್ ನಲ್ಲಿ ಬಿದ್ದ ಮತಗಳ ಜೊತೆ ತಾಳೆ ಮಾಡಲಾಗುತಿತ್ತು. ಆದರೆ ಈಗ ಒಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯ ಬದಲಾಗಿ 5 ಮತಗಟ್ಟೆಯ ವಿವಿ ಪ್ಯಾಟ್ ಮತ್ತು ಇವಿಎಂ ತಾಳೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಆದೇಶ ಪ್ರಕಟಿಸಿತ್ತು.

  • ಮತಯಂತ್ರಗಳನ್ನು ಖಾಸಗಿ ಕಂಪೆನಿಯಿಂದ ಖರೀದಿಸಲ್ಲ: ಕೇಂದ್ರ ಚುನಾವಣಾ ಆಯೋಗ

    ಮತಯಂತ್ರಗಳನ್ನು ಖಾಸಗಿ ಕಂಪೆನಿಯಿಂದ ಖರೀದಿಸಲ್ಲ: ಕೇಂದ್ರ ಚುನಾವಣಾ ಆಯೋಗ

    ನವದೆಹಲಿ: ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪ್ಯಾಟ್) ಯಂತ್ರವನ್ನು ಖಾಸಗಿ ಕಂಪೆನಿಗಳಿಂದ ಖರೀದಿಸುವ ಸರ್ಕಾರದ ಪ್ರಸ್ತಾಪವನ್ನು ಕೇಂದ್ರ ಚುನಾವಣಾ ಆಯೋಗ ನಿರಾಕರಿಸಿದೆ.

    ಖಾಸಗಿ ಕಂಪೆನಿಗಳಿಂದ ಖರೀದಿಸಿದರೆ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮೇಲೆ ಪ್ರಶ್ನೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆಯೋಗ ಆರ್ ಟಿ ಐ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ.

    ಖಾಸಗಿ ಕಂಪೆನಿಗಳು ವಿವಿಪ್ಯಾಟ್ ನ ಸುರಕ್ಷತಾ ಕ್ರಮಗಳನ್ನು ಹೇಗೆ ಅಳವಡಿಸುತ್ತವೆ ಅನ್ನುವುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಇದರಿಂದ ಮತದಾರರ ನಂಬಿಕೆ ತಗ್ಗಲಿದೆ ಎಂದು ಆಯೋಗದ ತಾಂತ್ರಿಕ ತಜ್ಞ ಸಮಿತಿ (ಟಿಇಸಿ) ವಾದಿಸಿದೆ.

    ಸುಪ್ರಿಂ ಕೋರ್ಟ್ ಚುನಾವಣಾ ಆಯೋಗದ ನಿರ್ಧಾರವನ್ನು ಸಮ್ಮತಿಸಿದೆ. ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕಂಪೆನಿಗಳು ಸದ್ಯಕ್ಕೆ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ತಯಾರಿಸುತ್ತಿವೆ.

    ಇತ್ತೀಚೆಗಷ್ಟೆ ಮತಯಂತ್ರಗಳ ಮೇಲೆ ಎಎಪಿ ಮತ್ತು ಬಿಎಸ್‍ಪಿ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇದಾದ ನಂತರ ಕೇಂದ್ರ ಚುನಾವಣಾ ಆಯೋಗವು ಮತಯಂತ್ರಗಳನ್ನು ಪರೀಕ್ಷೆಗೆ ಒಳಪಡಿಸಿ ಎಲ್ಲಾ ಪಕ್ಷಗಳಿಗೆ ಅಕ್ರಮ ಸಾಬೀತು ಮಾಡಲು ಅವಕಾಶ ಕಲ್ಪಿಸಿತ್ತು. ಯಾವ ಪಕ್ಷದವರು ಕೂಡ ಸಾಬೀತು ಮಾಡಿಲ್ಲ.

    ವಿವಿಪಿಎಟಿ ಅಂದ್ರೇನು?: ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ವ್ಯವಸ್ಥೆಯಲ್ಲಿ ಯಾರಿಗೆ ವೋಟ್ ಬಿದ್ದಿದೆ ಎನ್ನುವುದನ್ನು ತಿಳಿದುಕೊಳ್ಳಲು ವೋಟ್ ಹಾಕಿದ ಬಳಿಕ ಅಭ್ಯರ್ಥಿಯ ಚಿಹ್ನೆ 7 ಸೆಕೆಂಡ್ ಕಾಲ ಪರದೆಯಲ್ಲಿ ಕಾಣುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನಾವಣಾ ಆಯೋಗಕ್ಕೆ 2016ರಲ್ಲಿ ಸಲಹೆ ನೀಡಿತ್ತು. ಪ್ರಸ್ತುತ ಈ ಬಾರಿ ಎಲ್ಲ ಮತದಾನ ಕೇಂದ್ರಗಳಲ್ಲಿ ವಿವಿಪ್ಯಾಟ್ ಇರಲಿದೆ.

  • ಇವಿಎಂ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್- ಚುನಾವಣಾ ಆಯೋಗ ಎಚ್ಚರಿಕೆ

    ಇವಿಎಂ ಬಗ್ಗೆ ಅಪಪ್ರಚಾರ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್- ಚುನಾವಣಾ ಆಯೋಗ ಎಚ್ಚರಿಕೆ

    ಬೆಂಗಳೂರು: ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

    ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್, ಐದು ರಾಜ್ಯಗಳಿಂದ ಕರ್ನಾಟಕಕ್ಕೆ ಇವಿಎಂ ಯಂತ್ರಗಳು ಬಂದಿವೆ. ಗುಜರಾತ್, ಉತ್ತರಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ ದಿಂದ ಸುಮಾರು 85,600 ಇವಿಎಂಗಳು ಬಂದಿವೆ. ಅಲ್ಲಿ ಬಳಸಲಾಗಿರುವ ಇವಿಎಂ ಯಂತ್ರಗಳೇ ಇಲ್ಲಿಗೆ ಬಂದಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಬಳಸಿರುವ ಇವಿಎಂ ಗಳು ಕರ್ನಾಟಕಕ್ಕೆ ಬಂದಿವೆ ಎಂಬ ಅನುಮಾನದ ಗ್ರಹಿಕೆ ಬೇಡ. ಇದರ ಬಗ್ಗೆ ತಪ್ಪು ಮಾಹಿತಿ ಹರಡಿದ್ರೆ ಕ್ರಿಮಿನಲ್ ಸ್ವರೂಪದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಹೇಳಿದ್ರು.

    ಕರ್ನಾಟಕಕ್ಕೆ ಯಾವುದೋ ಒಂದು ರಾಜ್ಯದಿಂದ ಇವಿಎಂ ಯಂತ್ರ ಬಂದಿಲ್ಲ. ಐದು ರಾಜ್ಯಗಳಿಂದ ಇವಿಎಂ ಯಂತ್ರ ಗಳು ಬಂದಿವೆ. ಈ ರೀತಿ ಬಿಂಬಿಸುವುದು ಬೇಡ ಅಂತಾ ಚುನಾವಣಾ ಆಯೋಗ ಮನವಿ ಮಾಡಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಹೊಸ ಇವಿಎಂ ಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಜೀವ್ ಕುಮಾರ್ ತಿಳಿಸಿದ್ದಾರೆ.

    ರಾಜ್ಯ ಚುನಾವಣೆಗಾಗಿ ಈ ಬಾರಿ ಒಟ್ಟು 73,850 ವಿವಿಪ್ಯಾಟ್ ಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ 56,290 ಹೊಸ ವಿವಿಪ್ಯಾಟ್ ಗಳನ್ನ ಬಿಇಎಲ್ ನಿಂದ ಈಗಾಗಲೇ ತರಲಾಗಿದೆ. ಇನ್ನುಳಿದ 17,560 ವಿವಿಪ್ಯಾಟ್ ಗಳನ್ನ ಬಿಇಎಲ್ ಮತ್ತು ಗುಜರಾತ್ ನಿಂದ ತರಿಸಲಾಗುತ್ತದೆ. 13,000 ಗುಜರಾತ್ ನಿಂದ ಮತ್ತು 4 ಸಾವಿರ ಬಿಇಎಲ್ ನಿಂದ ತರಲಾಗುತ್ತದೆ. ಚುನಾವಣೆಗೆ 85,170 ಬಿಯು(ಬ್ಯಾಲೆಟ್ ಯುನಿಟ್) ಬೇಕಿದ್ದು, 70,190 ಬಿಯು ರಾಜ್ಯಕ್ಕೆ ಬಂದಿದೆ. ಸಿಯು(ಕಂಟ್ರೋಲ್ ಯುನಿಟ್) 70990 ಬೇಕಿದ್ದು, ಅದರಲ್ಲಿ 52110 ಸಿಯು ರಾಜ್ಯಕ್ಕೆ ಬಂದಿದೆ. ಒಟ್ಟು 5 ರಾಜ್ಯದಿಂದ ಮೆಷೀನ್ ಗಳು ಬರುತ್ತಿವೆ ಎಂದು ತಿಳಿಸಿದ್ರು.

    ಮಾಧ್ಯಮದಲ್ಲಿ ಸುಮ್ಮನೆ ಇವಿಎಮ್ ಮತ್ತು ವಿವಿಪ್ಯಾಟ್ ಬಗ್ಗೆ ಅಪಪ್ರಚಾರ ಮತ್ತು ಸುಖಾ ಸುಮ್ಮನೆ ಚರ್ಚೆ ಮಾಡಲಾಗುತ್ತಿದೆ. ಈ ರೀತಿಯಾಗಿ ಮಾಧ್ಯಮದಲ್ಲಿ ಚರ್ಚೆ ಮಾಡಿದ್ರೆ, ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ರು.

    ಈವರೆಗೆ 30 ಕೋಟಿ ರೂ. ಹಣ ಖರ್ಚು: ಈ ಬಾರಿ ವಿವಿಪ್ಯಾಟ್ ಗಳನ್ನ ಬಳಕೆ ಮಾಡುತ್ತಿರುವುದರಿಂದ ಮ್ಯಾನ್ ಪವರ್ ಹೆಚ್ಚು ಬೇಕು. 25% ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಕಳೆದ ಬಾರಿ ಪೋಲಿಸರನ್ನ ಹೊರತುಪಡಿಸಿ 2.75 ಲಕ್ಷ ಸಿಬ್ಬಂದಿಯನ್ನ ಬಳಸಲಾಗಿತ್ತು. ಆದ್ರೆ ಈ ಬಾರಿ 3.25 ಲಕ್ಷ ಸಿಬ್ಬಂದಿಯನ್ನ ಬಳಸಲಾಗುತ್ತದೆ. ಇಲ್ಲಿಯವರೆಗೆ 30 ಕೋಟಿ ಹಣವನ್ನ ಖರ್ಚು ಮಾಡಲಾಗಿದೆ. ಒಂದು ಕ್ಷೇತ್ರಕ್ಕೆ 1.14 ಕೋಟಿ ಹಣದಂತೆ 224 ಕ್ಷೇತ್ರಕ್ಕೆ ಖರ್ಚಾಗಬಹುದು ಎಂದು ಸಂಜೀವ್ ಕುಮಾರ್ ಹೇಳಿದ್ರು.

    ತಪ್ಪು ಆಕ್ಷೇಪಣೆ ಸಲ್ಲಿಸಿದ್ರೆ ಕ್ರಮ: ಮತ ಚಲಾಯಿಸುವುದರ ಬಗ್ಗೆ ಅನುಮಾನ ವಿಚಾರವಾಗಿ ಮಾತನಾಡಿದ ಅವರು, ಮತ ಚಲಾಯಿಸಿದ ಮೇಲೆ ಮತ ಬೇರೆಯವರಿಗೆ ಹೋಗಿದೆ ಎಂದು ಅನುಮಾನ ಬಂದ್ರೆ ಆ ಮತದಾರ ಆಕ್ಷೇಪಣೆ ಸಲ್ಲಿಸಬಹುದು. ಆಕ್ಷೇಪಣೆಯಲ್ಲಿ ಯಾವುದೇ ಲೋಪದೋಷಗಳು ಕಂಡುಬಂದಿಲ್ಲ ಅಂದ್ರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮತದಾನ ಮಾಡಿದ ನಂತರ ಮತದಾರ ಪರಿಶೀಲನೆ ಮಾಡಬಹುದು. ಯಾರಿಗೆ ಮತ ಚಲಾಯಿಸಿದ್ದೇವೆಂದು 7 ಸೆಕೆಂಡ್‍ಗಳ ಕಾಲ ವೀಕ್ಷಿಸಬಹುದು ಎಂದು ಹೇಳಿದ್ರು.

    ರಾಜ್ಯದಲ್ಲಿ ಒಟ್ಟು 4,96,56,059 ಮತದಾರರಿದ್ದಾರೆ. 4,552 ತೃತೀಯಲಿಂಗಿಗಳು, 2,51,79,219 ಪುರುಷರು ಹಾಗೂ 2,44,72,288 ಮಹಿಳಾ ಮತದಾರರಿದ್ದಾರೆ. 15.42 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಿದೆ. ಶೃಂಗೇರಿ ಅತ್ಯಂತ ಕಡಿಮೆ ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 1,62,108 ಮತದಾರರು ಇದ್ದಾರೆ. ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮತದಾರರು ಹೊಂದಿರುವ ವಿಧಾನಸಭಾ ಕ್ಷೇತ್ರವಾಗಿದ್ದು, 5,81,408 ಮತದಾರರಿದ್ದಾರೆ. ಹಾಗೂ ಬೆಂಗಳೂರು ದಕ್ಷಿಣ ಅತೀ ಹೆಚ್ಚು ಮಹಿಳಾ ಮತದಾರರು ಹೊಂದಿರುವ ಕ್ಷೇತ್ರವಾಗಿದ್ದು, 2,69,878 ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಫೆಬ್ರವರಿ 28ರಿಂದ ಪುನಃ ಮತದಾರರ ತಿದ್ದುಪಡಿ/ಸೇರ್ಪಡೆ ಮತ್ತು ತೆಗೆದುಹಾಕುವಿಕೆಗೆ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ರು.

  • ಇವಿಎಂ ಸರಿ ಇಲ್ಲ ಅನ್ನೋರಿಗೆ ರಾಜ್ಯ ಚುನಾವಣಾ ಆಯೋಗ ಸವಾಲ್- 224 ಕ್ಷೇತ್ರಗಳಲ್ಲೂ ವಿವಿಪಿಎಟಿ ಅಳವಡಿಕೆ

    ಇವಿಎಂ ಸರಿ ಇಲ್ಲ ಅನ್ನೋರಿಗೆ ರಾಜ್ಯ ಚುನಾವಣಾ ಆಯೋಗ ಸವಾಲ್- 224 ಕ್ಷೇತ್ರಗಳಲ್ಲೂ ವಿವಿಪಿಎಟಿ ಅಳವಡಿಕೆ

    ಬೆಂಗಳೂರು: ಗುಜರಾತ್, ಹಿಮಾಚಲಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಂತರ ಇವಿಎಂ ಮಷೀನ್ ಬಗ್ಗೆ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ರಾಜ್ಯ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಆಗೋಕೆ ಸಾಧ್ಯವೇ ಇಲ್ಲ ಅಂತಿದೆ. ಅಷ್ಟೇ ಅಲ್ಲ ಎಲ್ಲಾ ಇವಿಎಂಗಳಿಗೂ ವಿವಿಪಿಎಟಿ (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ಅಳವಡಿಕೆ ಮಾಡ್ತಿದೆ.

    ಭಾರೀ ಚರ್ಚೆಗೆ ಗ್ರಾಸವಾಗಿರೋ ಇವಿಎಂ ಹ್ಯಾಕ್ ವಿಚಾರ ರಾಜ್ಯ ಚುನಾವಣೆಗೂ ತಟ್ಟಿದೆ. ವಿಪಕ್ಷಗಳು ಇವಿಎಂ ಸರಿ ಇಲ್ಲ ಅಂತ ಸುದ್ದಿ ಮಾಡ್ತಿವೆ. ಇಂತಹ ಆಪಾದನೆಯಿಂದ ಮುಕ್ತಿ ಹೊಂದಲು ಮುಂದಾಗಿರೋ ರಾಜ್ಯ ಚುನಾವಣಾ ಆಯೋಗ, ವಿಧಾನಸಭೆ ಚುನಾವಣೆಯನ್ನ ಸೂಕ್ಷ್ಮ ಭದ್ರತೆಯಲ್ಲಿ ಮಾಡಲು ನಿರ್ಧರಿಸಿದೆ. ಇವಿಎಂ ಹ್ಯಾಕ್ ಆರೋಪ ಮುಕ್ತ ಮಾಡಲು ಎಲ್ಲಾ 224 ಕ್ಷೇತ್ರಗಳಲ್ಲಿ ವಿವಿಪಿಎಟಿ ಅಳವಡಿಕೆಗೆ ನಿರ್ಧಾರ ಮಾಡಿದೆ.

    ಸುಪ್ರೀಂ, ಹೈಕೋರ್ಟ್ ಗಳಲ್ಲೂ ಇವಿಎಂಗೆ ಜಯ: ಸಿಕ್ಕ ಸಿಕ್ಕ ಕಡೆ ವಿಪಕ್ಷಗಳು ಇವಿಎಂ ಸರಿ ಇಲ್ಲ ಅಂತಿದ್ದಾರೆ. ಆದ್ರೆ ರಾಜ್ಯ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಮಾಡೋಕೆ ಸಾಧ್ಯವಿಲ್ಲ ಅಂತಿದೆ. ಈಗಾಗಲೇ ಇವಿಎಂ ವಿರುದ್ಧ ಸವಾಲ್ ಹಾಕಿರೋರು ಸೋತಿದ್ದು, ನಮ್ಮ ಟೆಕ್ನಾಲಜಿ ಸೂಪರ್ ಅಂತಿದೆ ಆಯೋಗ. ಇಷ್ಟು ಮಾತ್ರವಲ್ಲ ಹೀಗೆ ಇವಿಎಂ ಸರಿ ಇಲ್ಲ ಅಂತ ನಡೆದ ಅನೇಕ ಕಾನೂನು ಸಮರಗಳಲ್ಲೂ ಇವಿಎಂಗಳಿಗೇ ಜಯ ಸಿಕ್ಕಿವೆ.

    ಇವಿಎಂ ಪರವಾದ ತೀರ್ಪುಗಳು:
    > 1982 ಕೇರಳ ಹೈಕೋರ್ಟ್- ಎ.ಸಿ.ಜೋಷಿ ವರ್ಸಸ್ ಸಿವನ್ ಪಿಳ್ಳೈ.
    > 2001 ಮದ್ರಾಸ್ ಹೈಕೋರ್ಟ್- ಎಐಡಿಎಂಕೆ ವರ್ಸಸ್ ಚುನಾವಣಾ ಆಯೋಗ.
    > 2004- ದೆಹಲಿ ಹೈಕೋರ್ಟ್- ವಿಪುಲ್ವಾ ಶರ್ಮ ವರ್ಸಸ್ ಕೇಂದ್ರ ಸರ್ಕಾರ.
    > 1999- ಕರ್ನಾಟಕ ಹೈಕೋರ್ಟ್- ಮೈಕಲ್ ಫರ್ನಾಂಡಿಸ್ ವರ್ಸಸ್ ಜಾಫರ್ ಶರೀಫ್.

    ಈ ಎಲ್ಲಾ ಕೇಸ್‍ಗಳಲ್ಲಿ ಘನ ನ್ಯಾಯಾಲಯಗಳು ಇವಿಎಂ ವಿಶ್ವಾಸಾರ್ಹತೆಯನ್ನ ಎತ್ತಿ ಹಿಡಿದಿವೆ.

    ವಿವಿಪಿಎಟಿ ಎಂದರೇನು?: ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

  • ವಿವಿಪಿಎಟಿ ಇಲ್ಲದೆ ಇವಿಎಂ ಬಳಕೆ – ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

    ವಿವಿಪಿಎಟಿ ಇಲ್ಲದೆ ಇವಿಎಂ ಬಳಕೆ – ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

    ನವದೆಹಲಿ: ಎಲೆಕ್ರ್ಟಾನಿಕ್ ವೋಟಿಂಗ್ ಮಷೀನ್ ಜೊತೆಗೆ ವಿವಿಪಿಎಟಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಹಾಗೂ ಕೇಂದ್ರಕ್ಕೆ ನೋಟಿಸ್ ನೀಡಿದೆ.

    ಚುನಾವಣೆಗಳಲ್ಲಿ ವಿವಿಪಿಎಟಿ ಇಲ್ಲದೆ ಇವಿಎಂ ಬಳಕೆ ಮಾಡಲಾಗುತ್ತಿರುವುದನ್ನು ಪ್ರಶ್ನಿಸಿ ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿಯ ಬಹುಜನ ಸಮಾಜ ವಾದಿ ಪಕ್ಷ ಅರ್ಜಿ ಸಲ್ಲಿಸಿತ್ತು. ಇದರ ಜೊತೆಗೆ ಇನ್ನೂ ಕೆಲವರು ವೈಯಕ್ತಿಕವಾಗಿ ಅರ್ಜಿಗಳನ್ನು ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿವಿಪಿಎಟಿ ಇಲ್ಲದೆ ಇವಿಎಂ ಬಳಸಲಾಗುತ್ತಿರುವ ಬಗ್ಗೆ ಮೇ 8 ರೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗ ಹಾಗೂ ಕೇಂದ್ರಕ್ಕೆ ಆದೇಶಿಸಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ಹಿರಿಯ ವಕೀಲರಾದ ಪಿ ಚಿದಂಬರಂ, ಚುನಾವಣೆಗಳಲ್ಲಿ ಇವಿಎಂ ಜೊತೆ ವಿವಿಪಿಎಟಿ ಬಳಸುವುದು ಕಡ್ಡಾಯ. ಆದ್ರೆ ಬಹುತೇಕ ಸಂದರ್ಭಗಳಲ್ಲಿ ಅದನ್ನು ಮಾಡಲಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದರು.

    ನ್ಯಾ. ಚೆಲಮೇಶ್ವರ್ ನೇತೃತ್ವದ ಪೀಠವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಕಪಿಲ್ ಸಿಬಿಲ್, ಭಾರತವನ್ನು ಹೊರತುಪಡಿಸಿ ವಿಶ್ವದಲ್ಲಿ ಎಲ್ಲೂ ಇವಿಎಂ ಬಳಕೆ ಮಾಡುತ್ತಿಲ್ಲ ಎಂದು ಹೇಳಿದ್ರು.

    ಇತ್ತೀಚೆಗೆ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನ ರದ್ದುಗೊಳಿಸಲು ಒತ್ತಾಯಿಸುವಂತಿಲ್ಲ ಎಂದು ಪ್ರಮುಖ ಅರ್ಜಿದಾರರಾದ ಬಿಎಸ್‍ಪಿಗೆ ಸುಪ್ರೀಂ ಸ್ಪಷ್ಟವಾಗಿ ಹೇಳಿದೆ. ಇದಕ್ಕೆ ಒಪ್ಪಿಕೊಂಡಿರೋ ಬಿಎಸ್‍ಪಿ, ಮೊದಲು ಚುನಾವಣಾ ಆಯೋಗ ಹಾಗೂ ಕೇಂದ್ರದಿಂದ ಉತ್ತರ ಬರುವವರೆಗೂ ಕಾಯುವುದಾಗಿ ಹೇಳಿದೆ.

    ಈ ಪ್ರಕರಣದ ಮುಂದಿನ ವಿಚಾರಣೆ ಮೇ 8ರಂದು ನಡೆಯಲಿದೆ.

    ಇದನ್ನೂ ಓದಿ: ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ವಿವಿಪಿಎಟಿ ಅಂದ್ರೇನು?: ಈ ಬಾರಿ ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರ್ ಅನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.