Tag: vrutha

  • ವೃತ್ರ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಹೊಗಳಿಕೆ!

    ವೃತ್ರ ಚಿತ್ರದ ಬಗ್ಗೆ ಕಿಚ್ಚ ಸುದೀಪ್ ಹೊಗಳಿಕೆ!

    ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಅಗಾಧ ಯಶಸ್ಸಿನ ಬೆನ್ನಲ್ಲಿಯೇ ರಶ್ಮಿಕಾ ಮಂದಣ್ಣ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆಂಬ ಕೌತುಕ ಎಲ್ಲರನ್ನೂ ಕಾಡಲು ಶುರುವಿಟ್ಟಿತ್ತು. ಬಹು ದಿನಗಳ ನಂತರ ಅದಕ್ಕೆ ಉತ್ತರವೆಂಬಂತೆ ಚಾಲ್ತಿಗೆ ಬಂದಿದ್ದ ಚಿತ್ರ ವೃತ್ರ. ಈ ವಿಭಿನ್ನ ಶೀರ್ಷಿಕೆಯೇ ಒಂದಷ್ಟು ಸುದ್ದಿಗೆ ಗ್ರಾಸವಾಗಿತ್ತು. ಆ ನಂತರದ ಬೆಳವಣಿಗೆಗಳಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಸ್ಥಾನದಿಂದ ಎದ್ದು ಹೋದದ್ದರ ಹಿನ್ನೆಲೆಯಲ್ಲಿಯೂ ಸುದ್ದಿಯಾಗಿದ್ದ ಈ ಚಿತ್ರವೀಗ ಬಿಡುಗಡೆಯಾಗಿದೆ. ಆರಂಭದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಈಗ ಮೆಲ್ಲಗೆ ಟೇಕಾಫ್ ಆಗುತ್ತಿರೋ ಈ ಚಿತ್ರವನ್ನೀಗ ಕಿಚ್ಚ ಸುದೀಪ್ ಕೂಡ ಹೊಗಳಿ ಟ್ವೀಟ್ ಮಾಡಿದ್ದಾರೆ.

    ವೃತ್ರ ಚಿತ್ರದ ಬಗ್ಗೆ ಎಲ್ಲ ಕಡೆಗಳಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿದೆ. ಇಂತಹ ಒಳ್ಳೆಯ ಚಿತ್ರವನ್ನು ನೀವೆಲ್ಲರೂ ಪ್ರೋತ್ಸಾಹಿಸಿ. ಈ ಚಿತ್ರತಂಡಕ್ಕೆ ಶುಭ ಹಾರೈಕೆ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮೆಲ್ಲಗೆ ಟೇಕಾಫ್ ಆಗುತ್ತಿರೋ ವೃತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಯಾವುದೇ ಹೊಸ ಅಲೆಯ ಚಿತ್ರಗಳು ಬಂದಾಗಲೂ ಅದರತ್ತ ಗಮನ ಹರಿಸಿ ಪ್ರೋತ್ಸಾಹಿಸೋದು ಕಿಚ್ಚನ ವ್ಯಕ್ತಿತ್ವ. ಅದರಂತೆಯೇ ಅವರು ವೃತ್ರ ಚಿತ್ರವನ್ನೂ ಹೊಗಳಿ ಟ್ವೀಟ್ ಮಾಡೋ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಒಂದು ಪ್ರಕರಣದ ಸುತ್ತ ನಡೆಯೋ ರೋಚಕ ಕಥೆಯನ್ನೊಳಗೊಂಡಿರೋ ಚಿತ್ರ ವೃತ್ರ. ಶುರುವಿನಿಂದ ಕಡೆಯವರೆಗೂ ಬಿಗುವು ಕಳೆದುಕೊಳ್ಳದೇ ಮುಂದುವರಿಯೋ ಕಥೆಯ ಈ ಚಿತ್ರಕ್ಕೆ ನಿಧಾನಕ್ಕೆ ಪ್ರೇಕ್ಷಕರ ಕಡೆಯಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಆರಂಭದಲ್ಲಿ ರಶ್ಮಿಕಾ ನಿರ್ವಹಿಸೋದಾಗಿ ಹೇಳಿದ್ದ ಪಾತ್ರವನ್ನು ನಿತ್ಯಶ್ರೀ ನಿಭಾಯಿಸಿದ್ದಾರೆ. ಅವರ ನಟನೆಯೂ ಸಹ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಇದೀಗ ಸುದೀಪ್ ಅವರೇ ಒಳ್ಳೆ ಮಾತುಗಳನ್ನಾಡುತ್ತಿರೋದರಿಂದ ವೃತ್ರಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.