Tag: VR Glass

  • ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

    ವಿಶ್ವದಲ್ಲೇ ಮೊದಲು – ಹೆಚ್ಚು ಹಾಲು ಸಿಗಲು ಹಸುವಿನ ಕಣ್ಣಿಗೆ ವಿಆರ್ ಗ್ಲಾಸ್ ಅಳವಡಿಕೆ

    – ವಿಆರ್ ಗ್ಲಾಸ್ ಮೂಲಕ ಬೇಸಿಗೆ ವಾತಾವರಣ ನಿರ್ಮಾಣ
    – ಪ್ರಯೋಗಕ್ಕೆ ಮಿಶ್ರ ಪ್ರತಿಕ್ರಿಯೆ

    ಮಾಸ್ಕೋ: ಬೇಸಿಗೆಯಲ್ಲಿ ದನದ ಆರೋಗ್ಯ ಉತ್ತಮವಾಗಿರಲು ಕೊಟ್ಟಿಗೆಯಲ್ಲಿ ರೈತರು ಫ್ಯಾನ್ ಅಳವಡಿಸಿರುವುದನ್ನು ನೀವು ಓದಿರಬಹುದು. ಆದರೆ ರಷ್ಯಾದ ರೈತರು ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಾಲಿನ ಉತ್ಪಾದನೆ ಹೆಚ್ಚಿಸಲು ಹಸುವಿಗೆ ವಿಆರ್(ವರ್ಚುಯಲ್ ರಿಯಾಲಿಟಿ) ಕನ್ನಡಕ ಹಾಕಿ ಸುದ್ದಿಯಾಗಿದ್ದಾರೆ.

    ಹೌದು. ಈ ರೀತಿಯ ಪ್ರಯತ್ನ ವಿಶ್ವದಲ್ಲೇ ಮೊದಲಾಗಿದ್ದು, ರಷ್ಯಾ ರಾಜಧಾನಿ ಮಾಸ್ಕೋ ಬಳಿಯ ರುಸ್ಮೋಲೋಕೊದಲ್ಲಿ ರೈತರು ಹಸುವಿಗೆ ಈ ಪ್ರಯೋಗ ಮಾಡಿದ್ದಾರೆ.

    ಈ ವಿಆರ್ ಹೆಡ್‍ಸೆಟ್ ಹಾಕುವುದರಿಂದ ಹಸುವಿನ ಕಣ್ಣಿಗೆ ಬೇಸಿಗೆ ವಾತಾವರಣ ಇರುವ ರೀತಿ ಕಾಣುತ್ತದೆ. ಅಲ್ಲದೆ ಹಸು ಹೊಲ ಗದ್ದೆಗಳಲ್ಲಿ ನಿಂತ ಅನುಭವವನ್ನು ನೀಡುತ್ತದೆ. ಈ ಮೂಲಕ ಹಸುವಿಗೆ ತಾನು ಮನೆಯಲ್ಲಿದ್ದೇನೆ. ಕೂಡಿ ಹಾಕಿದ್ದಾರೆ ಎಂಬ ಕೊರಗಿನಿಂದ ಹೊರ ಬರಲು ಸಹಕಾರಿಯಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು

    ಮಕ್ಕಳು ವಿಡಿಯೋ ಗೇಮ್ ಆಡುವ ರೀತಿಯಲ್ಲೇ ವಿಆರ್ ಗ್ಲಾಸ್ ತಯಾರಿಸಲಾಗಿದೆ. ಆದರೆ ಹೆಚ್ಚು ಗ್ರಾಫಿಕ್ಸ್‍ಗಳನ್ನು ಬಳಸಿರುವುದಿಲ್ಲ. ಹಸುವಿಗೆ ಪೂರಕ ವಾತಾವರಣ ನಿರ್ಮಾಣವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

    ಈ ಕುರಿತು ಮಾಸ್ಕೋ ಕೃಷಿ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿ, ಪ್ರಾಥಮಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದೇವೆ. ಇದರಿಂದಾಗಿ ಹಸುವಿನ ಆಂತರಿಕ ಕೊರಗು ಕಡಿಮೆಯಾಗಿದೆ. ಅಲ್ಲದೆ ಭಾವನಾತ್ಮಕತೆಯಲ್ಲಿ ಹೆಚ್ಚಳವಾಗಿರುವುದನ್ನು ತಜ್ಞರು ಗಮನಿಸಿದ್ದಾರೆ ಎಂದು ವಿವರಿಸಿದ್ದಾರೆ.

    ವಚ್ರ್ಯುವಲ್ ರಿಯಾಲಿಟಿ ಗ್ಲಾಸ್ ಬೇಸಿಗೆ ಸಮಯದಲ್ಲಿ ಹೊಲ ಗದ್ದೆಗಳು ಹೇಗಿರುತ್ತವೆಯೋ ಅಂತಹ ಚಿತ್ರಣವನ್ನು ಹಸುವಿಗೆ ನೀಡುತ್ತದೆ. ಇದಕ್ಕಾಗಿ ಹಲವು ಅಧ್ಯಯನಗಳನ್ನು ನಡೆಸಲಾಗಿದೆ. ಕನ್ನಡಕದಲ್ಲಿ ಯಾವ ಬಣ್ಣ ಕಾಣಿಸಿದರೆ ದನಗಳಿಗೆ ಇಷ್ಟವಾಗುತ್ತದೆ ಎಂಬುದನ್ನು ಅರಿಯಲಾಗಿದೆ. ಹಸುಗಳಿಗೆ ಹಸಿರು ಹಾಗೂ ನೀಲಿ ಬಣ್ಣಕ್ಕಿಂತ ಕೆಂಪು ಬಣ್ಣ ಇಷ್ಟ ಹೀಗಾಗಿ ಈ ರೀತಿಯ ಬಣ್ಣವನ್ನು ಅಳವಡಿಸಲಾಗಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಹಸುವಿನ ಕೊರಗು ಕಡಿಮೆಯಾಗಿರುವುದು ಹಾಗೂ ಭಾವನಾತ್ಮಕತೆ ಹೆಚ್ಚಿರುವುದನ್ನು ತಜ್ಞರು ಗಮನಿಸಿದ್ದಾರೆ ಎಂದು ವಕ್ತಾರರು ಮಾಹಿತಿ ನೀಡಿದರು.

    ವಿಆರ್ ಗ್ಲಾಸ್ ಹಾಕಿದ್ದರಿಂದಲೇ ಹಸು ಹೆಚ್ಚು ಹಾಲು ಕೊಡುತ್ತಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅಧ್ಯಯನ ಪ್ರಕ್ರಿಯೆ ಪೂರ್ಣಗೊಂಡ ನಂತರ ಈ ಕುರಿತು ಸ್ಪಷ್ಟವಾಗಲಿದೆ ಎಂದು ಅವರು ತಿಳಿಸಿದರು.

    ಜಾನಿ ಟಿಕ್ಕಲ್ ಅವರು ಟ್ವಿಟ್ಟರ್ ನಲ್ಲಿ ಹಸು ವಿಆರ್ ಹೆಡ್‍ಸೆಟ್ ಧರಿಸಿರುವ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, 28 ಸಾವಿರ ಜನ ಲೈಕ್ ಮಾಡಿದ್ದಾರೆ. ಮಾಸ್ಕೋ ಫಾರ್ಮ್ ಹೌಸ್ ವಿಆರ್ ಗ್ಲಾಸ್‍ಗಳನ್ನು ಒಂದು ಉಪಕರಣವಾಗಿ ಬಳಸಲು ಮುಂದಾಗಿದ್ದು, ಹಸುವಿಗೆ ಆಯಾಸ ಕಾಣದಂತೆ, ಸಂತಸದ ವಾತಾವರಣವನ್ನು ನಿರ್ಮಿಸಲು ಸಹಕಾರಿಯಾಗಿದೆ. ಇಂತಹ ಶಾಂತ ವಾತಾವರಣ ಹಸು ಹೆಚ್ಚು ಹಾಲು ಕರೆಯಲು ಸಹಕಾರಿಯಾಗಿದೆ. ಈ ವಿಆರ್ ಹೆಡ್‍ಸೆಟ್ ಹಸುವಿಗೆ ಬೇಸಿಗೆ ವಾತಾವರಣವನ್ನು ತೋರಿಸುತ್ತದೆ ಎಂದು ಜಾನಿ ಟಿಕ್ಕಲ್ ಬರೆದುಕೊಂಡಿದ್ದಾರೆ.

    ವಿಆರ್ ಪ್ರಯೋಗಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಸುವನ್ನು ಚೆನ್ನಾಗಿ ನೋಡಿಕೊಂಡರೆ ಹಾಲಿನ ಉತ್ಪಾದನೆ ತಾನಾಗಿಯೇ ಹೆಚ್ಚಳವಾಗುತ್ತದೆ. ಕೃತಕವಾದ ವಾತಾವರಣ ನಿರ್ಮಿಸಿ ಹಸುವಿಗೆ ಈ ರೀತಿಯಾಗಿ ಮೋಸ ಮಾಡಿ ನಾವು ಲಾಭ ಮಾಡುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

    ಈ ಸುದ್ದಿಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.